ಮಂಗಳೂರು: ಮುಂಬರುವ 18ನೇ ಲೋಕಸಭಾ ಚುನಾವಣೆಯು ಭಾರತದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಇದು ಪರಿಣಾಮಕಾರಿ ಹೆಜ್ಜೆಯಾಗಲಿದೆ. ಕಳೆದ 10 ವರ್ಷಗಳಲ್ಲಿ ಮಾಡಲಾದ ಅಭಿವೃದ್ಧಿಪರ ಆಡಳಿತದ ಮುಂದುವರಿಕೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮತ್ತೊಮ್ಮೆ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೆ ಬರಬೇಕಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಅವರು ಇಂದು ದಕ್ಷಿಣ ಕನ್ನಡ ಬಿಜೆಪಿ ಲೋಕಸಭಾ ಚುನಾವಣೆ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಪ್ರಧಾನಿ ಮೋದಿಯವರ ಸಮರ್ಥ ಹಾಗೂ ದಕ್ಷ ಆಡಳಿತವು ಕಳೆದ 10 ವರ್ಷಗಳಲ್ಲಿ ಜನಮಾನಸದಲ್ಲಿ ಅಗಾಧ ಪ್ರಭಾವ ಬೀರಿದೆ. ಜತೆಗೆ ದೇಶದಲ್ಲಿ ಅಭಿವೃದ್ಧಿಯ ಹೊಸ ಯುಗವನ್ನೇ ಪ್ರಾರಂಭಿಸಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಎನ್ನುವ ನೀತಿಯೊಂದಿಗೆ ಕಳೆದ ಹಲವು ದಶಕಗಳ ಒಡೆದಾಳುವ ನೀತಿಗೆ ತಡೆ ಹಾಕಿ, ದೇಶದ ಹಿತಾಸಕ್ತಿಯೇ ಪರಮೋಚ್ಚವಾಗಿ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಭಾರತೀಯ ಸಾಂಸ್ಕೃತಿಕ ಮೌಲ್ಯಗಳ ಆಧಾರದಲ್ಲಿ ಭಾರತದ ಅಭಿವೃದ್ಧಿಯನ್ನು ಕಳೆದ 10 ವರ್ಷಗಳಿಂದ ಸಾಧಿಸಿ ತೋರಿಸಿದ್ದಾರೆ. ಈ ಪರಂಪರೆ ಮುಂದುವರಿಯಲು ಈ ಬಾರಿ 400ಕ್ಕೂ ಅಧಿಕ ಸ್ಥಾನಗಳೊಂದಿಗೆ ಮತ್ತೆ ಮೋದಿ ಸರಕಾರ ಬರಬೇಕಾಗಿದೆ ಎಂದು ಕ್ಯಾಪ್ಟನ್ ಕಾರ್ಣಿಕ್ ಪ್ರತಿಪಾದಿಸಿದರು.
ಮೋದಿ ಆಡಳಿತದಲ್ಲಿ ದೇಶಕ್ಕೆ ಹಿಂದೆಂದೂ ಕಂಡಿರದಷ್ಟು ಅಂತಾರಾಷ್ಟ್ರೀಯ ಮನ್ನಣೆ ದೊರೆತಿದ್ದು, ಜಗತ್ತಿನ ಆರ್ಥಿಕ ಹಿನ್ನಡೆಯ ನಡುವೆಯೂ ಆರ್ಥಿಕ ಭದ್ರತೆ, ಗಡಿ ಸುರಕ್ಷತೆ, ಆತ್ಮನಿರ್ಭರತೆಗಳನ್ನು ಸಾಧಿಸುತ್ತ ಬಂದಿದೆ. ಫಲಾನುಭವಿಗಳಿಗೆ ಸರಕಾರದ ಸೌಲಭ್ಯಗಳ ನೇರ ವರ್ಗಾವಣೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದಾರೆ. ಹಿಂದೆಂದೂ ಕಂಡಿರಿಯದಷ್ಟು ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ವೈಜ್ಞಾನಿಕ, ತಾಂತ್ರಿಕ ಸಾಧನೆಗಳ ಮುನ್ನಡೆ ಆಗಿದೆ. ಈ ಕಾರಣಕ್ಕಾಗಿ ಪ್ರಧಾನಿ ಮೋದಿ ಅವರನ್ನು ದೇಶವು ಮತ್ತೊಮ್ಮೆ ಆಯ್ಕೆಮಾಡಬೇಕಾಗಿದೆ ಎಂದು ಕ್ಯಾ. ಕಾರ್ಣಿಕ್ ನುಡಿದರು.
ದೇಶ ವಿರೋಧಿ ಶಕ್ತಿಗಳಿಗೆ ಮಣೆ ಹಾಕಬೇಡಿ:
ರಾಜಕೀಯ ಮುಖವಾಡದೊಂದಿಗೆ ದೇಶವಿರೋಧಿ ಶಕ್ತಿಗಳು ಮೇಲುಗೈ ಪಡೆಯಲು ನಾನಾ ರೂಪದಲ್ಲಿ ಹವಣಿಸುತ್ತಿರುವುದು ಎದ್ದು ಕಾಣುವಂತಿದೆ. ಅಧಿಕಾರಕ್ಕಾಗಿ ಮಿತಿಮೀರಿದ ತುಷ್ಟೀಕರಣ ಮತ್ತು ದೇಶ ವಿಭಜನೆಯ ಒಡಕು ಮಾತುಗಳೊಂದಿಗೆ ಹೀನ ರಾಜಕಾರಣ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳ ನಡೆ ಖಂಡನೀಯ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ, ಹನುಮಾನ್ ಚಾಲೀಸ ವಿರೋಧಿಸಿ ಮೂಲಭೂತವಾದಿಗಳು ನಡೆಸಿದ ಹಲ್ಲೆ ಮುಂತಾದ ಘಟನೆಗಳು ಕಾಂಗ್ರೆಸ್‌ನ ಅತಿರೇಕದ ತುಷ್ಟೀಕರಣಕ್ಕೆ ಜ್ವಲಂತ ಸಾಕ್ಷಿ ಎಂದು ಕಾರ್ಣಿಕ್ ವಿವರಿಸಿದರು.
ಕಾಂಗ್ರೆಸ್ ವೈಫಲ್ಯ, ಕೇಂದ್ರದ ಮೇಲೆ ಗೂಬೆ:
ಕರ್ನಾಟಕದ ಕಾಂಗ್ರೆಸ್ ಸರಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ; ಜತೆಗೆ ಸಾಂವಿಧಾನಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ 18ನೇ ಲೋಕಸಭಾ ಚುನಾವಣೆಯು ನಾಡಿನ ಜನತೆಗೆ ಒಡೆದಾಳುವ ಮತ್ತು ತುಷ್ಟೀಕರಣದ ರಾಜಕಾರಣದ ವಿರುದ್ಧ ಜನಾಭಿಪ್ರಾಯ ವ್ಯಕ್ತಪಡಿಸಲು ಒಳ್ಳೆಯ ಅವಕಾಶ ನೀಡಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಭಾರತೀಯ ಜನತಾ ಪಕ್ಷಕ್ಕೆ ದ.ಕ ಜಿಲ್ಲೆಯ ಜನತೆ 1991ರಿಂದಲೂ ನಿರಂತರ ಬೆಂಬಲ ನೀಡುತ್ತ ಬಂದಿದ್ದಾರೆ. ಈ ಬಗ್ಗೆ ಪಕ್ಷವೂ ಜಿಲ್ಲೆಯ ಜನತೆಗೆ ಆಭಾರಿಯಾಗಿದೆ. ಈ ಚುನಾವಣೆಯಲ್ಲಿ ಪಕ್ಷದ ಸಮರ್ಥ ಅಭ್ಯರ್ಥಿಯನ್ನಾಗಿ ಮಾಜಿ ಯೋಧ ಕ್ಯಾಪ್ಟನ್ ಬೃಜೇಶ್ ಚೌಟರನ್ನು ಕಣಕ್ಕೆ ಇಳಿಸಿರುವುದು ಕ್ಷೇತ್ರದಾದ್ಯಂತ ಹೊಸ ಸಂಚಲನ ಸೃಷ್ಟಿಸಿದೆ. ದೇಶದ ಮುಂದಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಪರಿಹಾರ ನೀಡಿ ಭಾರತವು ಜಾಗತಿಕ ನಾಯಕತ್ವ ವಹಿಸಿಕೊಳ್ಳಲು ಮುಂದಾಗಿರುವ ಈ ಸಂದರ್ಭದಲ್ಲಿ ವಿಶ್ವ ಮಿತ್ರ ಭಾರತವನ್ನು ಜಗದ್ವಂದ್ಯ ಭಾರತವನ್ನಾಗಿ ಮಾಡಲು, ಮೋದಿ ಸರಕಾರಕ್ಕೆ ಮತ್ತಷ್ಟು ಬಲ ತುಂಬಲು ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಚೌಟರನ್ನು ಬೃಹತ್ ಅಂತರದಿಂದ ಗೆಲ್ಲಿಸಿ ಲೋಕಸಭೆಗೆ ಕಳುಹಿಸುವುದು ಜನತೆಯ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಬೇಕಾಗಿದೆ ಎಂದು ಕ್ಯಾಪ್ಟನ್ ಕಾರ್ಣಿಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಬಿಜೆಪಿ ಖಜಾಂಚಿ ಸಂಜಯ್ ಪ್ರಭು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಪುತ್ತೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಚುನಾವಣಾ ಉಸ್ತುವಾರಿ ನಿತಿನ್ ಕುಮಾರ್, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ವಸಂತ ಜೆ ಪೂಜಾರಿ ಉಪಸ್ಥಿತರಿದ್ದರು.
ಯುವ ನಾಯಕ ಕ್ಯಾಪ್ಟನ್ ಬೃಜೇಶ್ ಚೌಟ:
ನಿವೃತ್ತ ಸೇನಾಧಿಕಾರಿ, ಮಂಗಳೂರಿನ ಯುವ ನಾಯಕ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬೃಜೇಶ್ ಚೌಟ ಅವರನ್ನು ಬಿಜೆಪಿ ಹೈಕಮಾಂಡ್ ದ.ಕ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಭಾರತೀಯ ಭೂಸೇನೆಯಲ್ಲಿ ಕ್ಯಾಪ್ಟನ್ ಆಗಿ ಸ್ವಯಂ ನಿವೃತ್ತಿ ಪಡೆದು ಸಮಾಜ ಸೇವೆಗೆ ಇಳಿದ ಯುವ ನಾಯಕನನ್ನು ಬಿಜೆಪಿ ಸಂಸತ್ತಿಗೆ ಆಯ್ದುಕೊಂಡಿದೆ. ರಾಜ್ಯದಿಂದ ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯಲ್ಲಿ ದೇಶಕ್ಕಾಗಿ ದುಡಿ ವ್ಯಕ್ತಿಯೊಬ್ಬರಿಗೆ ಸಂಸತ್ ಸ್ಪರ್ಧೆಯ ಟಿಕೆಟ್ ನೀಡಲಾಗಿದೆ.
ಮಂಗಳೂರಿನ ರಥಬೀದಿಯಲ್ಲಿ ನೆಲೆಸಿರುವ ಕ್ಯಾಪ್ಟನ್ ಬೃಜೇಶ್ ಚೌಟರು ಕಾಲೇಜು ದಿನಗಳಲ್ಲಿಯೇ ಎನ್‌ಸಿಸಿಯಲ್ಲಿ ತೊಡಗಿದ್ದು, ಮಂಗಳೂರು ವಿವಿಯಲ್ಲಿ ಅತ್ಯುತ್ತಮ ಕೆಡೆಟ್ ಎಂಬ ಹೆಗ್ಗಳಿಕೆ ಪಡೆದಿದ್ದರು.ಮಂಗಳೂರಿನ ಮಿಲಾಗ್ರಿಸ್ ಸ್ಕೂಲ್‌ನಲ್ಲಿ ಪ್ರಾಥಮಿಕ ಮತ್ತು ಸಂತ ಅಲೋಶಿಯಸ್ ಕಾಲೇಜು ಶಿಕ್ಷಣ ಪೂರೈಸಿದ ಬಳಿಕ ಮಧ್ಯಪ್ರದೇಶದ ಇಂದೋರ್ ಐಐಎಂನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಯುಪಿಎಸ್‌ಸಿ ಮೂಲಕ ಡಿಫೆನ್ಸ್ ಪರೀಕ್ಷೆ ಬರೆದು, ತರಬೇತಿ ಪಡೆದು ಭಾರತೀಯ ಭೂಸೇನೆ ಸೇರಿದ್ದರು. ಪ್ರತಿಷ್ಠಿತ 8ನೇ ಗೂರ್ಖಾ ರೈಫಲ್ಸ್ 7ನೇ ಬೆಟಾಲಿಯನ್‌ನಲ್ಲಿ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ಕ್ಯಾಪ್ಟನ್ ಹುದ್ದೆಗೇರಿದ್ದರು.
ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ ಮುಂದೆ ಭಾರತೀಯ ಸೇನೆ ಸೇರಿದರು. ಬಳಿಕ ಸ್ವಯಂ ನಿವೃತ್ತರಾಗಿ ಮಂಗಳೂರಿಗೆ ಬಂದು ಆರೆಸ್ಸೆಸ್‌ನ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡು 2013ರಲ್ಲಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯ ರಾಜಕೀಯಕ್ಕೆ ಇಳಿದಿದ್ದರು. ವಿವಿಧ ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿಭಾಯಿಸಿದ ಬಳಿಕ ಈಗ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.
ಪಕ್ಷದ ಚಟುವಟಿಕೆಯ ಜೊತೆಗೆ ಸಮರ್ಥನ್ ಫೌಂಡೇಶ್ ಮೂಲಕ ಮಂಗಳೂರಿನಲ್ಲಿ ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಮೆಟ್ರೋ ನಗರಗಳಲ್ಲಿ ಮಾತ್ರ ನಡೆಯುತ್ತಿದ್ದ ಲಿಟ್ ಫೆಸ್ಟ್ ಎನ್ನುವ ರಾಷ್ಟ್ರ ಮಟ್ಟದ ಸಾಹಿತ್ಯ ಕೂಟವನ್ನು ಮಂಗಳೂರಿನಲ್ಲಿ ಸಂಘಟಿಸಿದ್ದರು.
2015ರಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳ ನಿಷೇಧಕ್ಕೊಳಗಾದ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಟ ಸಂಘಘಟಿಸಿದವರಲ್ಲಿ ಕ್ಯಾಪ್‌ಟನ್ ಬೃಜೇಶ್ ಚೌಟ ಒಬ್ಬರು. ಮಂಗಳೂರು ನಗರದಲ್ಲಿಯೇ ಸತತ ಏಳು ವರ್ಷಗಳಿಂದ ಕಂಬಳ ಆಯೋಜಿಸುತ್ತಿದ್ದಾರೆ. ಬಂಟ ಸಮುದಾಯದ ಪ್ರಮುಖ ಗುತ್ತಿನ ಮನೆಗೆ ಸೇರಿದವರಾಗಿದ್ದರೂ ಅವಿವಾಹಿತರಾಗಿಯೇ ರಾಷ್ಟ್ರ ಸೇವೆ, ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ