ಪುತ್ತಿಗೆ ಶ್ರೀ ಕೃಷ್ಣ ಮಠ ಮತ್ತು ಶ್ರೀ ಪೇಜಾವರ ಶ್ರೀಗಳ ಸ್ವಾಗತ ಮತ್ತು ಅಭಿವಂದನ ಸಮಿತಿ ಜಂಟಿ ಆಶ್ರಯದಲ್ಲಿ ರಾಜಾಂಗಣದಲ್ಲಿ ಸಭಾ ಕಾರ್ಯಕ್ರಮ.
ಪುತ್ತಿಗೆ ಉಭಯ ಶ್ರೀಗಳ ಸಾನ್ನಿಧ್ಯ, ಸಂಮಾನ .
ಭವ್ಯ ಸ್ವಾಗತ ಮತ್ತು ಆತ್ಮೀಯ ಸಂಮಾನ ನೀಡಿದ ಭಕ್ತರು ನಾಗರಿಕರು.
ಉಡುಪಿ: ಅಯೋಧ್ಯೆಯಿಂದ ಉಡುಪಿಗೆ ಆಗಮಿಸಿದ ಶ್ರೀ ಪೇಜಾವರ ಶ್ರೀಗಳನ್ನು ಮಂಗಳೂರು ವಿಮಾನ ನಿಲ್ದಾಣದಿಂದ ಉಡುಪಿಯ ವರೆಗೆ ವೈಭವದಿಂದ ಸ್ವಾಗತಿಸಲಾಯಿತು.
ವಿಮಾನ ನಿಲ್ದಾಣದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಯಶ್ಪಾಲ್ ಸುವರ್ಣ, ವಿಹಿಂಪ ರಾಜ್ಯಾಧ್ಯಕ್ಷ ಪ್ರೊ ಎಂ.ಬಿ ಪುರಾಣಿಕ್, ಸುಧಾಕರ ಪೇಜಾವರ, ಮಹಾನಗರಪಾಲಿಕೆಯ ಅನೇಕ ಸದಸ್ಯರು ನೂರಾರು ಮಂದಿ ಸ್ಬಾಗತಿಸಿದರು.
ನಂತರ ಬಜ್ಪೆ ಶ್ರೀರಾಮಮಂದಿರದಲ್ಲಿ ಬಿಜೆಪಿ ದ ಕ ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಭಟ್, ಜಗದೀಶ ದಾಸ್ ಬಜ್ಪೆ, ಶ್ರೇಯಸ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಸ್ವಾಗತಿಸಿದರು.
ಬಳಿಕ ಕಟೀಲು ದುರ್ಗಾಪರಮೇಶ್ವರಿ ದೇವಳಕ್ಕೆ ಶ್ರೀಗಳು ಭೇಟಿ ನೀಡಿದ ಸಂದರ್ಭ ಶ್ರೀಗಳನ್ನು ಸಾಂಪ್ರದಾಯಿಕ ಗೌರವಗಳೊಂದಿಗೆ ಆಡಳಿತ ಮಂಡಳಿ ಪ್ರಮುಖರು, ಅರ್ಚಕವೃಂದದವರು ಸ್ವಾಗತಿಸಿ ಶ್ರೀದೇವಿಯ ಪ್ರಸಾದ ನೀಡಿದರು. ಮುಲ್ಕಿಗೆ ಆಗಮಿಸಿದ ಶ್ರೀಗಳನ್ನು ಮುನ್ನೂರಕ್ಕೂ ಅಧಿಕ ನಾಗರಿಕರು ಭಕ್ತರು ಬರಮಾಡಿಕೊಂಡ ಬಳಿಕ ಬಪ್ಪನಾಡು ಶ್ರೀದುರ್ಗೆಯ ದರ್ಶನ ಪಡೆದರು . ಉಡುಪಿ ಜಿಲ್ಲೆಯ ಗಡಿಭಾಗ ಹೆಜಮಾಡಿ ಟೋಲ್ ಗೇಟ್ ಬಳಿ ಶಾಸಕ ಗುರ್ಮೆ ಸುರೇಶ ಶೆಟ್ಡಿ, ವಿಹಿಂಪ ಜಿಲ್ಲಾಧ್ಯಕ್ಷ ಪಿ ವಿಷ್ಣುಮೂರ್ತಿ ಆಚಾರ್ಯ, ರಮಾಕಾಂತ ದೇವಾಡಿಗ, ಪ್ರಕಾಶ ಶೆಟ್ಟಿ ಪಾದೆಬೆಟ್ಟು ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಪ್ರಮುಖರು ನಾಗರಿಕರು ನೂರಾರು ಮಂದಿ ಹಾರಾರ್ಪಣೆಗೈದು ಸ್ವಾಗತಿಸಿದರು. ಕಾಪು ಹೊಸಮಾರಿಗುಡಿ ಬಳಿ ಪ್ರಮುಖರಾದ ವಾಸುದೇವ ಶೆಟ್ಡಿ, ಲಕ್ಷ್ಮೀಶ ತಂತ್ರಿ, ಡಾ ಕೆ ಎಸ್ ಭಟ್ ಸೇರಿದಂತೆ ಅನೇಕರು, ಜಿಎಸ್‌ಬಿ ಸಮಾಜದ ಬಂಧುಗಳು ಬರಮಾಡಿಕೊಂಡರು, ಕಾಪು ಮಾರಿಗುಡಿಗೆ ಬಂದ ಶ್ರೀಗಳು ದೀಪಬೆಳಗಿದರು.
ಅಲ್ಲಿಂದ ಕಟಪಾಡಿಗೆ ಆಗಮಿಸಿದಾಗಲೂ ಗೀತಾಂಜಲಿ ಸುವರ್ಣ ಮಟ್ಟು ಲಕ್ಷ್ಮೀನಾರಾಯಣ ರಾವ್ ಸತ್ಯೇಂದ್ರ ಪೈ ಮೊದಲಾದವರ ನೇತೃತ್ವದಲ್ಲಿ ನಾಗರಿಕರು ಭಕ್ತರು ಹೂಮಾಲೆ ಫಲ ಪುಷ್ಪ ಸಹಿತ ಸ್ವಾಗತಿಸಿದರು.
ಅಲ್ಲಿಂದ ಉಡುಪಿ ನಗರದ ಜೋಡುಕಟ್ಟೆಗೆ ಶ್ರೀಗಳ ಆಗಮನ. ಶಾಸಕ ಯಶ್ಪಾಲ್ ಸುವರ್ಣರು ಮಾಲಾರ್ಣೆಗೈದು ಸ್ವಾಗತಿಸಿ ಶ್ರೀಗಳನ್ನು ಸಾಲಂಕೃತ ವಾಹನದಲ್ಲಿ ಕುಳ್ಳಿರಿಸಿದರು. ಐವತ್ತಕ್ಕೂ ಅಧಿಕ ಬೈಕ್ ಗಳ ಜಾಥಾ ದೊಂದಿಗೆ ಸಂಸ್ಕೃತ ಕಾಲೇಜಿಗೆ ಆಗಮನ. ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಶ್ರೀಗಳಿಗೆ ಗೌರವಾರ್ಪಣೆ ನಡೆಯಿತು. ಅಲ್ಲಿ ಪರ್ಯಾಯ ಪುತ್ತಿಗೆ ಮಠದ ದಿವಾನರಾದ ಪ್ರಸನ್ನ ಆಚಾರ್ಯರು ಹಾಗೂ ಅನೇಕ ಸಂಘ ಸಂಸ್ಥೆಗಳ ಪ್ರಮುಖರ ನಾಗರಿಕರೊಂದಿಗೆ ಶ್ರೀಮಠದ ಸಾಂಪ್ರದಾಯಿಕ ಬಿರುದಾವಳಿ, ಚಂಡೆ ವಾದ್ಯ ಭಜನೆಯೊಂದಿಗೆ ಕಾಲ್ನಡಿಗೆಯಲ್ಲಿ ರಥಬೀದಿಗೆ ಬಂದು ಶ್ರೀ ಅನಂತೇಶ್ವರ ಶ್ರೀ ಚಂದ್ರಮೌಳೀಶ್ವರ ದೇವರ ದರ್ಶನ ಪಡೆದ ಬಳಿಕ ಶ್ರೀಕೃಷ್ಣಮಠಕ್ಕೆ ಆಗಮಿಸಿದಾಗ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಮಠದ ಒಳಗಣ ಪರ್ಯಾಯ ಪುತ್ತಿಗೆ ಶ್ರೀಗಳು ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಮಾಡಿಸಿ ಚಂದ್ರಶಾಲೆಯಲ್ಲಿ ಮಠದ ಸಾಂಪ್ರದಾಯಿಕ ಗಂಧಾದ್ಯುಪಾಚಾರ ಫಲ ಪುಷ್ಪ ಸಹಿತ ಮಾಲಿಕೆ ಮಂಗಳಾರತಿ ಅರ್ಪಿಸಲಾಯಿತು. ಬಳಿಕ ರಾಜಾಂಗಣಕ್ಕೆ ಆಗಮಿಸಿ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿ ಗಳ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭ, ದಿವಾನರಾದ ಪ್ರಸನ್ನಾಚಾರ್ಯರ ಸ್ವಾಗತ ಭಾಷಣ, ಮಾಜಿ ಶಾಸಕ ಕೆ ರಘುಪತಿ ಭಟ್ಟರಿಂದ ಪ್ರಾಸ್ತಾವಿಕ ಮಾತುಗಳಾದ ನಂತರ ವಿದ್ವಾನ್ ರಾಮನಾಥ ಆಚಾರ್ಯರಿಂದ ಅಭಿನಂದನಾ ನುಡಿ ಸಹಿತ ಶ್ರೀ ಪುತ್ತಿಗೆ ಶ್ರೀ ಕೃಷ್ಣಮಠದಿಂದ ಅರ್ಪಿಸಲಾಗುವ ರಜತ ಫಲಕ ಅಭಿನಂದನ ಪತ್ರವಾಚನಗೈದರು.
ಪುತ್ತಿಗೆ ಶ್ರೀಗಳು ಅಭಿನಂದನ ಸಂದೇಶ ನೀಡಿ ಪೇಜಾವರ ಶ್ರೀಗಳು ಅಭಿನವ ಆಂಜನೇಯ ಎಂಬ ಅಂಕಿತವಿತ್ತು ಶ್ರೀಗಳು ಅಯೋಧ್ಯೆಯಲ್ಲಿ ನಡೆಸಿದ ತ್ರಿವಿಕ್ರಮ ಸದೃಶ ಆಚಂದ್ರಾರ್ಕ ಕಾರ್ಯಗಳನ್ನು ಮನಸಾ ಅಭಿನಂದಿಸಿದರು. ಪೇಜಾವರ ಶ್ರೀಗಳು ಈ ಮುಖೇನ ದಕ್ಷಿಣೋತ್ತರ ಭಾರತಗಳ ಸ್ನೇಹ ಸೇತುವೆ ಕಟ್ಟಿದ ಆಂಜನೇಯರಾಗಿದ್ದಾರೆ ಎಂದರು. ಅಯೋಧ್ಯೆ ಮತ್ತು ಕರ್ನಾಟಕ ಉಡುಪಿಗಿರುವ ನಂಟನ್ನು ವಿವರಿಸಿ ಶ್ರೀ ವಿಶ್ವೇಶತೀರ್ಥರ ಅಗಾಧ ಕರ್ತವ್ಯಗಳನ್ನು ಸ್ಮರಿಸಿದರು. ಮಥುರೆಯಲ್ಲೂ ಶ್ರೀಕೃಷ್ಣಮಂದಿರ ಶೀಘ್ರ ಸಾಕಾರದ ಆಶಯ ವ್ಯಕ್ತಪಡಿಸಿದರು.
ಕಿರಿಯ ಶ್ರೀ ಸುಶ್ರೀಂದ್ರ ತೀರ್ಥರನ್ನು ಕೂಡುಕೊಂಡು ಪುತ್ತಿಗೆ ಶ್ರೀ ಕೃಷ್ಣ ಮಠದ ವತಿಯಿಂದ ಪೇಜಾವರ ಶ್ರೀಗಳಿಗೆ ಹಾರ ಶಾಲು, ಫಲಪುಷ್ಪ, ಪುಷ್ಪ ಕಿರೀಟ ಧಾರಣೆ, ಬೃಹತ್ ಕಡಗೋಲು ನೀಡಿ ಪುಷ್ಪಾರ್ಚನೆ ಗೈದು ರಜತಫಲಕ ಅಭಿನಂದನಪತ್ರವಿತ್ತು ಸತ್ಕರಿಸಿದರು. ಶ್ರೀ ಪೇಜಾವರ ಶ್ರೀಗಳ ಸ್ವಾಗತ ಮತ್ತು ಅಭಿನಂದನ ಸಮಿತಿ ವತಿಯಿಂದ ಯಶ್ಪಾಲ್ ಸುವರ್ಣ ಮತ್ತು ರಘುಪತಿ ಭಟ್ಟರು ಮಾಲಾರ್ಪಣೆಗೈದು ಅಯೋಧ್ಯಾ ರಾಮ ಪ್ರಾಣಪ್ರತಿಷ್ಠಾಪನೆಗೈಯುವ ಸಂದರ್ಭದ ಬೃಹತ್ ಛಾಯಾಚಿತ್ರ ಸ್ಮರಣಿಕೆ ನೀಡಿದರು. ಅನೇಕ ಸಂಘ ಸಂಸ್ಥೆಗಳ ಸದಸ್ಯರು ನಾಗರಿಕರು ಶ್ರೀಗಳಿಗೆ ಹಾರ ಫಲ ಪುಷ್ಪ ಸಮರ್ಪಿಸಿದರು.
ಸಂದೇಶ ನೀಡಿದ ಪೇಜಾವರ ಶ್ರೀಗಳು ಈ ಎಲ್ಲ ಸಂಮಾನ ನನಗಲ್ಲದೇ ಸಮಸ್ತ ಸಂತ ಸಮಾಜಕ್ಕೆ ಹಾಗೂ ಮಂದಿರ ನಿರ್ಮಾಣದ ಹಿಂದೆ ಕರ್ತವ್ಯ ನಿರ್ವಹಿಸಿದ ಪ್ರತಿಯೊಬ್ಬರಿಗೂ ಸಲ್ಲುತ್ತದೆ ಎಂದರು. ಎಂದಿನಂತೆ ಮತ್ತೆ ಮಂದಿರ ಮಂದಿರವಾಗಿಯೇ ಉಳಿಯಬೇಕಾದರೆ ಹಿಂದುಗಳು ಹಿಂದಯಗಳಾಗಿಯೇ ಉಳಿದರೆ ಮಾತ್ರ ಸಾಧ್ಯ ಎಂದು ಎಚ್ಚರಿಸಿದರು. ರಾಮಮಂದಿರ ವಾಗಿದೆ ರಾಮರಾಜ್ಯ ನಿರ್ಮಾಣಕ್ಕೆ ಶ್ರಮಿಸೋಣ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಸಮಾಜದ ದೀನ ದಲಿತರು ಅಶಕ್ತರ ನೆರವಿಗೆ ಮುಂದಾಗಬೇಕು. ಸಮಾಜದಲ್ಲಿ ಯಾರೊಬ್ಬರೂ ದುಃಖದಿಂದಿರದಂತೆ ನೋಡಿಕೊಳ್ಳಲು ಪ್ರಯತ್ನಿಸೋಣ ಎಂದರು.
ಶ್ರೀ ಪುತ್ತಿಗೆ ಶ್ರೀಗಳು ತಮ್ಮ ಪರ್ಯಾಯ ಕಾಲದಲ್ಲೂ ಕೆಲವು ಬಡವರಿಗೆ ಮನೆ ಕಟ್ಟಿಸಿಕೊಟ್ಟು ಪೇಜಾವರ ಶ್ರೀಗಳ ರಾಮರಾಜ್ಯ ನಿರ್ಮಾಣದ ಕನಸಿನ ಸಾಕಾರಕ್ಕೆ ಕೈಜೋಡಿಸುವುದಾಗಿ ಘೋಷಿಸಿದರು.
ದಿನಾವರಾದ ಮುರಳೀಧರ ಆಚಾರ್ಯ, ಕಾಪು ವಾಸುದೇವ ಶೆಟ್ಟಿ, ಭುವನೇಂದ್ರ ಕಿದಿಯೂರು, ಗೋವಿಂದರಾಜ ಭಟ್ ಡಾ ಹರಿಶ್ಚಂದ್ರ, ಮುರಳಿ ಕಡೆಕಾರ್, ಪ್ರೊ ಸದಾಶಿವರಾವ್, ಮಹೇಶ ಠಾಕೂರ್, ರಾಘವೇಂದ್ರ ಕಿಣಿ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.
ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರ್ವಹಿಸಿ ವಂದನಾರ್ಪಣೆಗೈದರು. ರಮೇಶ ಭಟ್, ಸಂತೋಷ್ ಶೆಟ್ಟಿ, ಮಹಿತೋಷ ಆಚಾರ್ಯ ಸತೀಶ್ ಕುಮಾರ್, ಶಶಾಂಕ ಶಿವತ್ತಾಯ, ಸುವರ್ಧನ ನಾಯಕ್ ಮೊದಲಾದವರು ಸಹಕರಿಸಿದರು. ಕಾರ್ಯಕ್ರಮದ ಮೊದಲು ಶಿರ್ವದ ಶ್ರೀ ಮಹಾಲಸಾ ನಾರಾಯಣಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ನಡೆಯಿತು.
ಬೈಕ್ ಜಾಥಾ ಮೂಲಕ ಸ್ವಾಗತ: ಬಜ್ಪೆಯಿಂದ ಉಡುಪಿಯ ವರೆಗೂ ಅಲ್ಲಲ್ಲಿ ನೂರಾರು ಹಿಂದು ಸಂಘಟನೆಗಳ ಕಾರ್ಯಕರ್ತರು ಬೈಕ್ ಜಾಥಾ ಮೂಲಕ ಶ್ರೀಗಳನ್ನು ಸ್ವಾಗತಿಸಿದರು. ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಕೆಲವೆಡೆ ದ್ವಿಚಕ್ರ ವಾಹನ ಜಾಥಾ ಮೊಟಕು ಗೊಳಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ