ನಾವೆಲ್ಲ ಸೇರಿ ಸಮೃದ್ಧ ಜಿಲ್ಲೆ ಕಟ್ಟೋಣ
ಮುಂಬಯಿ: ದಕ್ಷಿಣ ಕನ್ನಡ ಜಿಲ್ಲೆಯೆಂಬ ಪ್ರತಿಷ್ಠಿತ ಲೋಕಸಭಾ ಕ್ಷೇತ್ರದಿಂದ ತುಳುನಾಡನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿದ್ದು ತುಳುನಾಡಿನ ದೈವ ದೇವರ ಆಶೀರ್ವಾದ. ನಮ್ಮೂರಿನ ಯುವ ಜನಾಂಗ ದೇಶ- ವಿದೇಶಗಳಿಗೆ ಉದ್ಯೋಗಕ್ಕಾಗಿ ಹೋಗುತ್ತಿದ್ದು ಅವರ ಮನೆಯಲ್ಲಿ ಪ್ರಾಯದವರು ಮಾತ್ರ ಇದ್ದಾರೆ. ಇದು ತುಂಬ ಆತಂಕಕಾರಿ ಬೆಳವಣಿಗೆ. ನಮ್ಮಲ್ಲಿ ಎಲ್ಲಾ ಸೌಲಭ್ಯ ಇದ್ದು, ಉದ್ಯೋಗ ಸೃಷ್ಟಿಸುವ ಉದ್ಯಮ ಬೆಳೆಸಿದಲ್ಲಿ ಯುವ ಜನಾಂಗ ಉದ್ಯೋಗಕ್ಕಾಗಿ ಹೊರಗೆ ಹೋಗಬೇಕಾಗಿಲ್ಲ. ನಾವೆಲ್ಲ ಸೇರಿ ಸಂಪದ್ಭರಿತ ಜಿಲ್ಲೆಯನ್ನು ಕಟ್ಟೋಣ ಎಂದು ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟ ಹೇಳಿದರು.
ಪನ್ವೇಲ್ ಮಹಾನಗರ ಪಾಲಿಕೆಯ ನಗರಸೇವಕ ಹಾಗೂ ಶ್ರೀ ಕ್ಷೇತ್ರ ನಂದಾವರ ಇದರ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಸಂತೋಷ್ ಜಿ. ಶೆಟ್ಟಿ ದಲಂದಿಲ ಇವರ ನೇತೃತ್ವದಲ್ಲಿ ನಡೆದ ತುಳು ಕನ್ನಡಿಗ ಅಭಿಮಾನಿಗಳೊಂದಿಗೆ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಪೂರ್ವ ಜನ್ಮದಲ್ಲಿ ಪುಣ್ಯ ಮಾಡಿದವರಿಗೆ ಮಾತ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುನರ್ಜನ್ಮದ ಅವಕಾಶ ಸಿಗುತ್ತದೆ. ದಕ್ಷಿಣ ಕನ್ನಡ ನಿಜವಾಗಿಯೂ ದೇವರ ಭೂಮಿಯಾಗಿದೆ. ಈ ಸಂದರ್ಭದಲ್ಲಿ ನಿಮ್ಮೆಲ್ಲರಿಗೆ ವಿನಮ್ರವಾಗಿ ಒಂದು ಭರವಸೆಯನ್ನು ನೀಡುತ್ತಿದ್ದೇನೆ. ನನಗೆ ಜವಾಬ್ದಾರಿ ಇರುವ ತನಕ ದಕ್ಷಿಣ ಕನ್ನಡ ಜಿಲ್ಲೆಯನ್ನು ರಾಷ್ಟ್ರದ ಒಂದು ಪ್ರಗತಿಶೀಲ ಜಿಲ್ಲೆಯಾಗಿ ಹಾಗೂ ಅಭಿವೃದ್ಧಿ ಶೀಲ ಜಿಲ್ಲೆಯಾಗಿ ಪರಿವರ್ತಿಸಲು ಪಣ ತೊಡುತ್ತೇನೆ ಎಂದು ಹೇಳಿದರು.
ನಗರಸೇವಕ ಸಂತೋಷ್ ಜಿ. ಶೆಟ್ಟಿ ಮಾತನಾಡಿ, ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಭರವಸೆಯ ವ್ಯಕ್ತಿಯೊಬ್ಬರು ಇಂದು ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು ನಮ್ಮೆಲ್ಲರ ಸೌಭಾಗ್ಯ. ಮಿಲಿಟರಿಯಲ್ಲಿ ಸೇವೆಗೈದು ರಾಜಕೀಯದ ಮೂಲಕ ದೇಶ ಸೇವೆಗಿಳಿದಿರುವ ಬ್ರಿಜೇಶ್ ಚೌಟರು, ನಮ್ಮ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಪರಿವರ್ತಿಸುವಲ್ಲಿ ಸಂದೇಹವಿಲ್ಲ. ನಾವು ನಮ್ಮ ದೇಶಕ್ಕಾಗಿ ಒಟ್ಟಾಗಿದ್ದೇವೆ, ನಮಗೆ ಜಾತಿ ಮುಖ್ಯವಲ್ಲ. ನಮ್ಮ ದೇಶ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ವಿವಿಧ ಸಮುದಾಯಗಳ ಅನೇಕ ಗಣ್ಯರು ಉಪಸ್ಥಿತರಿದ್ದರು. ಸ್ಥಳೀಯ ಶಾಸಕ ಪ್ರಶಾಂತ್ ಠಾಕೂರು ಮಾತನಾಡಿ, ಮುಂಬಯಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರೊಂದಿಗೆ ನಾವೆಲ್ಲರಿದ್ದು ಬ್ರಿಜೇಶ್ ಚೌಟರಿಗೆ ಬೆಂಬಲ ನೀಡೋಣ ಎಂದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ