"ನೀನು ನಿನ್ನ ಸ್ನೇಹಿತರನ್ನು ತೋರಿಸು, ನೀನು ಎಂತಹ ವ್ಯಕ್ತಿತ್ವದವನು ಎಂದು ನಾನು ಹೇಳುತ್ತೇನೆ" ಎಂದು ಹಿರಿಯಾನುಭವಿಗಳು ಆಗಾಗ್ಗೆ ಹೇಳುವುದನ್ನು ನಾವು ಕೇಳಿರುತ್ತೇವೆ. ಈ ಮಾತು ಸ್ನೇಹದ ಕುರಿತು ಸ್ವಲ್ಪ ಆಲೋಚನೆ ಮಾಡುವಂತೆ ಮಾಡುತ್ತದೆ. ಸ್ನೇಹ ಒಂದು ಅನುಭವ ವೇದ್ಯವಾದ ಸಂಗತಿ. ಎರಡು ಮನಸ್ಸುಗಳ ಪರಸ್ಪರ ಹೊಂದಾಣಿಕೆ. ಆಗಾಗ್ಗೆ ನಾವು ಹೇಳುತ್ತಾ ಇರುತ್ತೇವೆ " ಇವನು ನನ್ನ ಆಪ್ತ ಗೆಳೆಯ, ಇವಳು ನನ್ನ ಆಪ್ತ ಗೆಳತಿ " ಅಂತ. ಹೀಗೆಲ್ಲಾ ನಾವು ಭಾವಿಸಿ ಕೊಳ್ಳಬೇಕೆಂದರೆ ಅದು ನಮ್ಮ ಅನುಭವಕ್ಕೆ ಬಂದಿರಬೇಕು. ಇಬ್ಬರು ಗೆಳೆಯ ಅಥವಾ ಗೆಳತಿಯರ ಮನೋಭಾವ ಸಾಮಿಪ್ಯಗಿರಬೇಕು. ಸ್ನೇಹ ಅಥವಾ ಗೆಳೆತನ ಎಂಬುದು ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜನರ ಮಧ್ಯೆ ಕಂಡುಬರುವ ಪರಸ್ಪರ ಅಕ್ಕರೆಯ ಒಂದು ಸಂಬಂಧ, ಸ್ನೇಹವು ಅಂತರ್ವ್ಯಕ್ತೀಯ ಬಂಧದ ಶಕ್ತಿಯುತ ರೂಪ. ಸ್ನೇಹ ನಮಗೆ ಸಂತೋಷ ಕೊಡುತ್ತದೆ. ಸ್ನೇಹದಲ್ಲಿ ಪ್ರೀತಿ, ಸಹಾನುಭೂತಿ, ಅನುಭೂತಿ, ಪ್ರಾಮಾಣಿಕತೆ, ಪರೋಪಕಾರ ಬುದ್ದಿ, ಪರಸ್ಪರ ಸಾಮರಸ್ಯ, ಪರಸ್ಪರರ ಸಂಬಂಧದ ಸಂತೋಷ, ನಂಬಿಕೆ ಇರುತ್ತದೆ. ನಿಜವಾದ ಸ್ನೇಹವು ನಿಸ್ವಾರ್ಥ, ತ್ಯಾಗ ನಿಷ್ಕಳಂಕತನದಿಂದ ಕೂಡಿರಬೇಕು.
ನಾವು ಕೆಲವೊಮ್ಮೆ ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಹೆಂಡತಿ-ಮಕ್ಕಳು, ಅಣ್ಣ-ತಮ್ಮ ಮುಂತಾದ ಸಂಬಂಧಗಳಲ್ಲಿ ಹಂಚಿಕೊಳ್ಳಲು ಸಾಧ್ಯವಾಗದ ಮನೋಭಾವನೆಗಳನ್ನು ಸ್ನೇಹಿತರಲ್ಲಿ ಬಿಚ್ಚು ಮನಸ್ಸಿನಿಂದ ವ್ಯಕ್ತಪಡಿಸುತ್ತೇವೆ. ಮತ್ತು ಸ್ನೇಹಿತರ ತಪ್ಪುಗಳನ್ನು ಯಾವುದೇ ಭಯವಿಲ್ಲದೆ ತಿದ್ದುವ ಸಾಮರ್ಥ್ಯ ಈ ಸ್ನೇಹಕ್ಕೆ ಇದೆ. ನಿಜವಾದ ಸ್ನೇಹಿತರು ಪರಸ್ಪರರ ಕಷ್ಟ ಸುಖಗಳಲ್ಲಿ ಒಬ್ಬರನ್ನೊಬ್ಬರು ಕೈಬಿಡುವುದಿಲ್ಲ. ಹಾಗೆ ಕಷ್ಟದಲ್ಲಿ ಕೈ ಬಿಡುವವರು ಎಂದೂ ಒಳ್ಳೆಯ ಸ್ನೇಹಿತರಾಗಲಾರರು. ಮಹಾಭಾರತದಲ್ಲಿ ಬರುವ ಕೃಷ್ಣ- ಸುಧಾಮ, ಸುಯೋಧನ- ಕರ್ಣರ ಸ್ನೇಹ ಯುಗಯುಗಗಳಲ್ಲಿಯೂ ಅಜರಾಮರ ವಾಗಿದೆ. ಅದರಂತೆ ಶಾಶ್ವತ ಸ್ನೇಹ ಬದುಕಿನಲ್ಲಿ ಒಂಟಿತನವನ್ನು ನಿವಾರಿಸಿ ಹರ್ಷದಾಯಕ ಉತ್ಸಾಹದ ಚಿಲುಮೆಯನ್ನು ನೀಡುತ್ತದೆ. ಒಳ್ಳೆಯ ಸ್ನೇಹ ಸಾಧನೆ ಮಾರ್ಗ ಅಂತೆಯೇ ಒಳ್ಳೆಯ ಸ್ನೇಹಿತ ನಮ್ಮ ಯಶಸ್ಸಿನ ಹಾದಿಯಲ್ಲಿ ಒಳ್ಳೆಯ ಮಾರ್ಗದರ್ಶಿ. ಒಳ್ಳೆಯ ಸ್ನೇಹಕ್ಕೆ ಉದಾಹರಣೆಯಾಗಿ ಕೃಷ್ಣ ಮತ್ತು ಸುಧಾಮರ ಗೆಳೆತನ ಹೇಗೆ ಈ ಜಗತ್ತಿಗೆ ಮಾದರಿಯಾಗಿತ್ತು ಎಂಬುದನ್ನು ನೋಡೋಣ.
ಕೃಷ್ಣ ಮತ್ತು ಸುಧಾಮ ( ಕುಚೇಲ ) ಇಬ್ಬರೂ ಉಜ್ಜಯಿನಿಯ ಗುರುಕುಲದಲ್ಲಿ ಸಾಂದೀಪನಿ ಮಹರ್ಷಿಗಳ ಹತ್ತಿರ ವಿದ್ಯೆ ಕಲಿಯುತ್ತಿದ್ದರು.
ಒಮ್ಮೆ ಶ್ರೀ ಕೃಷ್ಣ ಹಾಗೂ ಸುಧಾಮ ಕಾಡಿನಲ್ಲಿ ಸಂಚಾರಕ್ಕೆ ತೆರಳಿ ತಮ್ಮ ಕಾಲವನ್ನು ಕಳೆಯಲು ನಿರ್ಧಾರ ಮಾಡಿ ಸಂಚಾರಕ್ಕೆ ಹೊರಟರು. ಕಾಡಿನಲ್ಲಿ ಎಂದಿನಂತೆ ಕಾಲಹರಣ ಮಾಡುತ್ತಾ ಕಾಡಿನ ಒಳಗೆ ಕಳೆದು ಹೋದರು. ಇಬ್ಬರು ದಟ್ಟವಾದ ಅರಣ್ಯದಿಂದ ವಾಪಸ್ಸು ಹೋಗುವ ದಾರಿಯನ್ನು ಮರೆತು ಬಿಟ್ಟರು.ದಾರಿಯನ್ನು ಮರೆತ ಬಳಿಕ ಇಡೀ ಕಾಡಿನಲ್ಲಿ ವಾಪಸ್ಸು ಆಶ್ರಮಕ್ಕೆ ತೆರಳುವ ದಾರಿಗಾಗಿ ಹುಡುಕಿ, ಹುಡುಕಿ ಬಳಲಿದರು. ಬಾಯಾರಿಕೆ ಹಾಗೂ ಹಸಿವಿನಿಂದ ಬಳಲಲು ಆರಂಭಿಸಿದರು, ಇದೇ ಸಂದರ್ಭದಲ್ಲಿ ಇನ್ನು ತಮ್ಮ ಕೈಯಲ್ಲಿ ಸಾಧ್ಯವಿಲ್ಲ ಎಂದು ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಒಂದು ಮರದ ಕೆಳಗೆ ಆಶ್ರಯ ಪಡೆದು ಕೊಂಡರು. ಹೊಟ್ಟೆ ಬಹಳ ಹಸಿದಿರುವ ಸಂದರ್ಭದಲ್ಲಿ ಶ್ರೀ ಕೃಷ್ಣನು ವಿಶ್ರಾಂತಿ ಪಡೆದು ಕೊಳ್ಳುವಾಗ ಅಲ್ಲಿಯ ಮರದ ಮೇಲೆ ನೇತಾಡುತ್ತಿದ್ದ ಒಂದು ಹಣ್ಣನ್ನು ಕಂಡನು. ಕೂಡಲೇ ತಡಮಾಡದೇ ಶ್ರೀ ಕೃಷ್ಣನು ಮರವನ್ನು ಹತ್ತಿ ಕೈಯಿಂದ ಹಣ್ಣುನ್ನು ಕಿತ್ತನು. ನಂತರ ಕೃಷ್ಣನು ಆ ಹಣ್ಣನ್ನು ಆರು ತುಣುಕುಗಳನ್ನಾಗಿ ಮಾಡಿದನು ಮತ್ತು ಮೊದಲಿನಿಂದಲೂ ಸುಧಾಮ ಜೊತೆಯಲ್ಲಿದ್ದ ಸಂದರ್ಭದಲ್ಲಿ ಶ್ರೀ ಕೃಷ್ಣನು ಮೊದಲಿಗೆ ಯಾವುದನ್ನು ಸೇವಿಸುತ್ತಿರಲಿಲ್ಲ ಮೊದಲ ಭಾಗ ಯಾವಾಗಲೂ ಸುಧಾಮನಿಗೆ ನೀಡುತ್ತಿದ್ದನು. ಈ ಬಾರಿಯೂ ಕೂಡ ಆರು ತುಣುಕುಗಳನ್ನಾಗಿ ಮಾಡಿದ ಹಣ್ಣಿನ ಮೊದಲ ತುಣುಕನ್ನು ಸುಧಾಮನಿಗೆ ನೀಡಿದನು. ಸುಧಾಮನು ಹಣ್ಣುನ್ನು ತಿಂದು, ತುಂಬಾ ಸ್ವಾದಿಷ್ಟಕರ! ಇಂತಹ ಹಣ್ಣನ್ನು ಎಂದಿಗೂ ಸೇವಿಸಿಲ್ಲ. ದಯವಿಟ್ಟು ಇನ್ನೂ ಒಂದು ತುಣುಕು ನೀಡು ಎಂದನು.
ಎರಡನೇ ತುಣುಕು ಕೂಡ ಸುಧಾಮನಿಗೆ ಸಿಕ್ಕಿತು. ಹೀಗೆ ಸುಧಾಮ ಕೃಷ್ಣನನ್ನು ಕೇಳುತ್ತ ಹೋದ, ಕೃಷ್ಣ ಕೊಡುತ್ತ ಹೋದ. ಅದೇ ರೀತಿ, ಸುಧಾಮ ಐದು ತುಣುಕುಗಳನ್ನು ಕೇಳುವ ಮೂಲಕ ತಿಂದನು. ಸುಧಾಮ " ಕೃಷ್ಣ , ನನಗೆ ಬಹಳ ಹಸಿವಾಗುತ್ತಿದೆ ನಿನ್ನ ಬಳಿ ಇರುವ ಕೊನೆಯ ತುಣುಕನ್ನು ನನಗೆ ಕೊಡುವೆಯಾ? " ಎಂದು ಕೇಳಿದಾಗ, ಕೃಷ್ಣನು " ಸುಧಾಮ, ಇದು ಅತಿಯಾಯಿತು. ನಿನ್ನ ಹಾಗೆ ನಾನು ಕೂಡ ಹಸಿದಿದ್ದೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ, ಆದರೆ ನೀನು ನನ್ನನ್ನು ಪ್ರೀತಿಸುವುದಿಲ್ಲ ಮತ್ತು ನನ್ನ ಹಸಿವಿನ ಬಗ್ಗೆ ನೀನು ತಿಳಿಯುತ್ತಿಲ್ಲ" ಎಂದು ಹೇಳುತ್ತಾ ಕೋಪದಿಂದ ಕೃಷ್ಣನು ಹಣ್ಣಿನ ತುಣುಕನ್ನು ತನ್ನ ಬಾಯಿಗೆ ಹಾಕಿದನು. ಹಣ್ಣು ಅತೀ ಕಹಿಯಾದ ಕಾರಣ ಕೃಷ್ಣನು ಬಾಯಿಯ ಲ್ಲಿದ್ದ ಹಣ್ಣನ್ನು ತಕ್ಷಣ ಉಗುಳಿದನು ಮತ್ತು ಕೃಷ್ಣನು, " ಸುಧಾಮ, ನಿನಗೆ ಹುಚ್ಚು ಹಿಡಿದಿಲ್ಲ ತಾನೇ? ಇಂತಹ ಕಹಿ ಹಣ್ಣುಗಳನ್ನು ನೀನು ಹೇಗೆ ಬಹಳ ಸ್ವಾದಿಷ್ಟಕರ ಎಂದು ತಿಂದೆ? " ಎಂದು ಕೇಳಿದನು. ಅದಕ್ಕಾಗ ಸುಧಾಮನ ಉತ್ತರ ಹೀಗಿತ್ತು. " ಕೃಷ್ಣಾ, ನಿನ್ನ ಅಮೃತ ಹಸ್ತದಿಂದ ಸಾವಿರಾರು ಸಲ ತುಂಬಾ ಸ್ವಾದಿಷ್ಟ ಹಣ್ಣುಗಳನ್ನು ನಾನು ತಿಂದಿದ್ದೇನೆ. ಈಗ ಒಂದು ಸಲ ಕಹಿ ಹಣ್ಣನ್ನು ನೀಡಿದಾಕ್ಷಣ ನಾನು ಹೇಗೆ ತಿರಸ್ಕರಿಸಲಿ? ಇದಕ್ಕಾಗಿ ನಿನ್ನನ್ನು ದೂರುವುದು ನ್ಯಾಯವಾ? ಅದಕ್ಕೆ ನಿನಗೆ ಕಹಿ ಅನುಭವ ಆಗಬಾರದೆಂದು ಎಲ್ಲಾ ತುಣುಕುಗಳನ್ನು ನಾನೇ ತಿನ್ನಲು ಬಯಸಿದೆ." ಎಂದನು. ಮುಂದೆ ಇಬ್ಬರೂ ಬೆಳೆದು ದೊಡ್ಡವರಾದ ಮೇಲೆ, ಶ್ರೀ ಕೃಷ್ಣನು ದ್ವಾರಕೆಯ ಮಹಾರಾಜನಾಗಿ ಸುಧಾಮನ ಕಷ್ಟಗಳನ್ನು ತಾನೇ ಸ್ವತಃ ಅರ್ಥ ಮಾಡಿಕೊಂಡು ಮುಂದಿನ ಅನೇಕ ಜನ್ಮಗಳಲ್ಲಿ ಸುಧಾಮನು ಸಿರಿವಂತನಾಗಿರುವಂತೆ ಹರಸಿದನು, ಆಶಿಸಿದನು.
ಇದೇ ನೋಡಿ ಸ್ನೇಹ ಅಂದ್ರೆ. ಎಲ್ಲಿ ಸ್ನೇಹ ಇದೆಯೋ ಅಲ್ಲಿ ಯಾವುದೇ ಸಂದೇಹಕ್ಕೆ ಆಸ್ಪದವಿಲ್ಲ. ಸ್ನೇಹ ಒಳ್ಳೆಯದಾಗಿದ್ದಲ್ಲಿ ಅಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ, ಗೌರವ, ಆದರ ಮುಂತಾದ ಎಲ್ಲಾ ಒಳ್ಳೆಯ ಅಂಶಗಳು ಜೊತೆಯಲ್ಲಿ ಇರುತ್ತವೆ. ಸ್ನೇಹವು ಸಂಬಂಧವನ್ನು ಗಟ್ಟಿಗೊಳಿಸಿ ಶಾಶ್ವತವನ್ನಾಗಿಸುತ್ತದೆ. ಬದುಕಿನ ಯಾವುದೇ ಹಂತದಲ್ಲಿ ಗೆಳೆಯರಿಂದ, ಪ್ರೀತಿಪಾತ್ರರಿಂದ ಯಾವುದಾದರೂ ಕಹಿ ಅನುಭವ ಆದರೆ ಆ ಕ್ಷಣವನ್ನು ಮರೆತು ಮುಂದೆ ಸಾಗಿತ್ತಾ ಮತ್ತೆ ಅಂತಹ ಸ್ಥಿತಿ ಮರುಕಳಿಸದಂತೆ ಬಹಳ ಎಚ್ಚರಿಕೆಯಿಂದ ನೋಡಿಕೊಂಡು ಸ್ನೇಹ- ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವತ್ತ ನಿಗಾ ವಹಿಸಬೇಕು. ಹೀಗೆಯೇ ವ್ಯಕ್ತಿಯಿಂದ ಹಿಡಿದು ಮಿತ್ರಗ್ರಾಮಗಳು, ಮಿತ್ರರಾಜ್ಯಗಳು, ಮಿತ್ರರಾಷ್ಟ್ರಗಳು ಪ್ರಗತಿಪರ ಪರಿಕಲ್ಪನೆಗಳನ್ನು ಸಾಕಾರಗೊಳಿಸುತ್ತಾ ಪರಸ್ಪರರ ನೆರವಿನೊಂದಿಗೆ ಶಾಂತಿ ಎಂಬ ಮಹೋನ್ನತ ಭಾವವನ್ನು ಎಲ್ಲರೂ ಹೊಂದಬೇಕಿದೆ. ಮಿತ್ರರಾಷ್ಟ್ರಗಳ ಸೂತ್ರವು ಅಭಿವೃದ್ಧಿಯತ್ತ ಸಾಗಲು ಅನುಕೂಲವಾಗುತ್ತದೆ. ಆಗ ಯಾವುದೇ ಯುದ್ಧಗಳಿಗೆ ಆಸ್ಪದವಿರುವುದಿಲ್ಲ. ನಿಜವಾದ ಸ್ನೇಹ ಒಳ್ಳೆಯದನ್ನು ಮಾತ್ರ ಬಯಸುತ್ತದೆ. ಹಾಗಾದರೆ ಬನ್ನಿ, ನಮ್ಮ ಬದುಕಿನಲ್ಲಿ ಉತ್ತಮ ಸ್ನೇಹಿತರನ್ನು ಹೊಂದಿ ಕಷ್ಟ - ಸುಖಗಳಲ್ಲಿ ಭಾಗಿಯಾಗೋಣ. ಒಳ್ಳೆಯ ಸ್ನೇಹ ಒಳ್ಳೆಯ ವ್ಯಕ್ತಿತ್ವದ ಪ್ರತಿಬಿಂಬ ಎಂಬ ಸಂದೇಶವನ್ನು ಸಾರುತ್ತಾ ಮುನ್ನಡೆಯೋಣ.
-ಕೆ.ಎನ್.ಚಿದಾನಂದ. ಹಾಸನ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ