ಜಗನ್ನಾಥನನ್ನು ಜಗತ್ತಿಗೆ ಪರಿಚಯಿಸಿಕೊಟ್ಟವರು ಶ್ರೀ ಮದಾನಂತತಿರ್ಥರು. ಇವರು ಭಗವಂತನ ಪ್ರತಿಬಿಂಬರು, ಸರ್ವಜ್ಞಕಲ್ಪರು, ವೇದಪ್ರತಿಪಾದ್ಯರು. ಜೀವೋತ್ತಮರೆನ್ನಿಸಿದ ವಾಯುದೇವರ ಮೂರನೆಯ ಅವತಾರರಾದ ಇವರು ಸಕಲ ಜೀವರಿಗೆ ತ್ರಾಣರು-ಪ್ರಾಣರು. ಅದಕ್ಕೆ ವೇದಗಳು ಇವರನ್ನು ಅಮೃತವೆಂದು ಸಾರಿವೆ. ಶ್ರೀ ಮಧ್ವಾಚಾರ್ಯರನ್ನು ತಿಳಿಯದೆ ಭಗವಂತನನ್ನು ತಿಳಿಯಲಾಗದು. ದೋಷರಹಿತರಾದ ಇವರು ಮಾತ್ರ ದೋಷದೂರನಾದ ಭಗವಂತನನ್ನು ಗುಣಪೂರ್ಣನೆಂದು ಸಮರ್ಥಿಸಬಲ್ಲರು. ಪೂರ್ಣಪ್ರಜ್ಞರೆಂಬ ಅನ್ವರ್ಥಕ ನಾಮಧೇಯರಾದ ಶ್ರೀ ಮಧ್ವರು ತಿಳಿಯದ್ದು ಇಲ್ಲ, ತಿಳಿಸದ್ದೂ ಇಲ್ಲ. ಅವರ ಸರ್ವಮೂಲ ಗ್ರಂಥಗಳು ಸರ್ವಕ್ಕೂ ಮೂಲವಲ್ಲದೆ ಅವರ ದಿವ್ಯಾಕೃತಿಯೇ ಆಗಿದೆ. ಶ್ರೀ ಮಧ್ವಾಚಾರ್ಯರ ಜೀವನ ಗಾಥೆಯ ಒಂದೊಂದು ಬಿಂದುವೂ ಅವರ ಗ್ರಂಥದ ಪ್ರತ್ಯಕ್ಷರದಷ್ಟೇ ಪೂರ್ಣ, ಪವಿತ್ರ ಅದಕ್ಕೆ ಇವರು ಜಗದ್ಗುರುಗಳೆನಿಸಿದರು. ಆಧ್ಯಾತ್ಮ ಪ್ರಪಂಚಕ್ಕೆ ಅಧ್ಯಕ್ಷರಾದರು. ಸಾರ್ವಭೌಮರಾದರು. ಹೀಗಾಗಿ ಇವರ ಸಿದ್ಧಾಂತ ಅಂತಿಮ ಸಿದ್ಧಾಂತವೆನಿಸಿತು. ಶ್ರೀಹರಿಯ ಪಾರಮ್ಯವನ್ನು ಪ್ರಕಟಿಸಿದ ಪ್ರಥಮ ದಾರ್ಶನಿಕರೆನ್ನಿಸಿದರು.
ಆಚಾರ್ಯ ಮಧ್ವರು ತತ್ತ್ವವಾದವನ್ನು ಲೋಕಕ್ಕೆ ಅರುಹಿದವರು. ಅದ್ವೈತಸಿದ್ಧಾಂತವನ್ನು ಸ್ಥಾಪಿಸಿ ಪ್ರಚುರ ಪಡಿಸಿದ್ದು ಇದೀಗ ಲೋಕಶ್ರುತ. ದ್ವೈತ ಎಂಬುದು ಈಚೆಗೆ ಬಳಕೆಗೆ ಬಂದ ಮಾತು. ಈ ಸಿದ್ಧಾಂತವು ‘ತತ್ತ್ವವಾದ’ವೆಂದೇ ಪ್ರಸಿದ್ಧಿಯಾಗಿತ್ತು. ಈ ನಡುವೆ ‘ಭೇದವಾದ’ವೆಂದು ಕರೆದದ್ದೂ ಉಂಟು. ಆದರೆ, ಯತಿತ್ರಯರಲ್ಲಿ ಆಚಾರ್ಯ ಮಧ್ವರ ಗ್ರಂಥಗಳಷ್ಟೇ ಪ್ರಾಮುಖ್ಯತೆಯನ್ನು ಪಡೆದಿವೆ. ಆಚಾರ್ಯ ಮಧ್ವರು ಉಡುಪಿ ಸಮೀಪದ ‘ಪಾಜಕ’ ಕ್ಷೇತ್ರಕ್ಕೆ ಸೇರಿದವರು. ಶ್ರೀಕೃಷ್ಣ ಉಡುಪಿಯ ಅಧಿದೈವವಾಗಿ ಬೆಳಗಿದಂತೆ, ಆಚಾರ್ಯ ಮಧ್ವರು ಉಡುಪಿಗೆ ತತ್ತ್ವವಾದದ ಬೆಳಕನ್ನು ಹರಿಸಿದರು. ಇಂಥ ಯತಿಗಳು ಶ್ರೀಮನ್ನಾರಾಯಣರಲ್ಲಿ ಒಂದಾಗಿ 700 ವರ್ಷಗಳಾದುವು. ಅವರ ವ್ಯಕ್ತಿತ್ವವನ್ನು ಸಮೀಪದಿಂದ ಕೇಳಿದ್ದ, ನಾರಾಯಣ ಪಂಡಿತಾಚಾರ್ಯರು ‘ಶ್ರೀಮಧ್ವಜಯ’ ಎಂಬ ಜೀವನ ಚರಿತ್ರೆಯನ್ನು ಬರೆದು ಆಚಾರ್ಯರ ಚರಿತ್ರೆಯನ್ನು ದಾಖಲುಗೊಳಿಸಿದ್ದಾರೆ. ಇದು ಒಂದು ಕಡೆ ಚರಿತ್ರೆ; ಮತ್ತೊಂದೆಡೆ ಕಾವ್ಯವಾಗಿದೆ. ಸಂಸ್ಕøತ ಸಾಹಿತ್ಯದಲ್ಲಿ ಇದೊಂದು ಅಪೂರ್ವಕೃತಿ ಎನಿಸಿದೆ.
ಆಚಾರ್ಯರು ಮೊದಲಿಗೆ ವೇದಕ್ಕೆ ಮೂರರ್ಥವನ್ನು ಮಹಾಭಾರತಕ್ಕೆ ಹತ್ತು ಅರ್ಥಗಳನ್ನು ವಿಷ್ಣುಸಹಸ್ರನಾಮಕ್ಕೆ ನೂರು ಅರ್ಥಗಳನ್ನು ಹೇಳಿ ಇತಿಹಾಸವನ್ನು ನಿರ್ಮಿಸಿದರು. (ತ್ರ್ಯರ್ಥತಾಂ ಶ್ರುತಿಷು, ವಿತ್ತ ದಶಾರ್ಥಮ್ ಭಾರತಂ, ನನು ಶಾತಾರ್ಥಮಪಿ ಸ್ಯಾದೇತಿ ವೈಷ್ಣವ ಪದ ಸಹಸ್ರಂ ತಯಂ) ಅವರ ಪ್ರವಚನದ ಮೋಡಿ ಕವಿದ ಕತ್ತಲೆಯನ್ನು ಕಳೆಯಿತು. ಶ್ರುತಿ ಇರಲಿ, ಭಾರತವೇ ಇರಲಿ ಓದುವ ಬೆಡಗು ಅನನ್ಯ. ಆಚಾರ್ಯ ಮಧ್ವರು ತತ್ತ್ವವಾದವನ್ನು ಹಾಗೂ ಲೋಕಕ್ಕೆ ಬೇಕಾದ ಎಲ್ಲ ವಿದ್ಯೆಗಳನ್ನು ಸಮಾಗಮಗೊಳಿಸಿದರು. ಇದು ಆನಂದತೀರ್ಥರ ಹಿರಿಮೆ. ನಮ್ಮ ಬದುಕನ್ನು ಗಟ್ಟಿಯಾಗಿ ಬೆಳಗಿಸಿಕೊಳ್ಳಬೇಕು, ಭಗವಂತನ ಉಪಾಸನೆಯಲ್ಲಿ ಅನನ್ಯ ನಿಷ್ಠೆಯನ್ನು ಇಟ್ಟುಕೊಳ್ಳಬೇಕು. ಈ ಸೂತ್ರವನ್ನು ಹೇಳಿ ಬದುಕಿಗೆ ಭರವಸೆಯ ಬೆಳಕನ್ನು ತುಂಬಿದ ಆಚಾರ್ಯರು ನಿಜಾರ್ಥದಲ್ಲೂ ‘ಪೂರ್ಣಪ್ರಜ್ಞ’ರೇ ಸರಿ!
ಕನ್ನಡ ನಾಡಿನ ಹೆಮ್ಮೆ – ಆಚಾರ್ಯ ಮಧ್ವರ ತತ್ವವಾದದ ಹಿರಿಮೆ
ಪ್ರಾಚೀನ ಗ್ರಂಥಗಳಲ್ಲಿ ಆಚಾರ್ಯ ಮಧ್ವರ ಸಿದ್ಧಾಂತವನ್ನು ದ್ವೈತವಾದ ಎನ್ನುವ ಬದಲು ತತ್ತ್ವವಾದ ಎಂದೇ ಕರೆದಿದ್ದಾರೆ. ‘ಈ ಜಗತ್ತು ಕನಸಿನ ಮಾಯೆಯಲ್ಲ, ಭಗವಂತನು ಜಾದೂಗಾರನೂ ಅಲ್ಲ, ಅವನು ಸತ್ಯಕರ್ಮ. ಇದು ಭಗವಂತನ ಸತ್ಯಸೃಷ್ಟಿ, ಆದರಿಂದ ಇದೂ ಒಂದು ಸತ್ಯತತ್ವ ಭಗವಂತನ ಮಹಿಮೆಯನ್ನರಿಯುವ ಶಿಕ್ಷಣ ಶಾಲೆ’ ಎನ್ನುವ ವಾದವನ್ನು ಮಂಡಿಸಿದ್ದರಿಂದ ಇದಕ್ಕೆ ತತ್ತ್ವವಾದ ಎಂದು ಹೆಸರಾಯಿತು.
ಭಾರತದ ಆಚಾರ್ಯ ಪುರುಷರ ಮಾಲಿಕೆಯಲ್ಲಿ ಮೂವರು ಹೆಚ್ಚು ಖ್ಯಾತರಾದವರು: ಅದ್ವೈತ ಮತ ಸ್ಥಾಪಕರಾದ ಆಚಾರ್ಯ ಶಂಕರರು, ವಿಶಿಷ್ಟಾದ್ವೈತ ಮತ ಸ್ಥಾಪಕರಾದ ಆಚಾರ್ಯ ರಾಮಾನುಜರು ಮತ್ತು ತತ್ತ್ವವಾದ ಸ್ಥಾಪಕರಾದ ಆಚಾರ್ಯ ಮಧ್ವರು. ‘ಈ ವಿಶ್ವ ಬರಿಯ ಮಾಯೆ; ಭಗವಂತನೊಬ್ಬನೇ ಸತ್ಯ’ ಎಂದರು ಆಚಾರ್ಯ ಶಂಕರರು. ‘ವಿಶ್ವಾತ್ಮನಾದ ಭಗವಂತನಿಗೆ ಈ ವಿಶ್ವವೆ ಶರೀರವಿದ್ದಂತೆ; ಅದರಿಂದ ಇದು ಸತ್ಯ’ ಎಂದರು ಆಚಾರ್ಯ ರಾಮಾನುಜರು. ‘ಈ ಜಗತ್ತು ಭಗವಂತನ ಲೀಲಾಸೃಷ್ಟಿ. ಇದನ್ನು ಅಪಲಾಪ ಮಾಡಿ ಅವನ ಮಹಿಮೆಗೆ ಅಪಚಾರ ಮಾಡಬೇಡಿ’ ಎಂದರು ಅಚಾರ್ಯ ಮಧ್ವರು.
ತಮ್ಮ ತತ್ತ್ವವಾದವನ್ನು ಜನರಿಗೆ ತಿಳಿಯಪಡಿಸಲು ಆಚಾರ್ಯರು ಪ್ರಸ್ಥಾನತ್ರಯ (ಗೀತೆ, ದಶೋಪನಿಷತ್ತುಗಳು ಮತ್ತು ಬ್ರಹ್ಮಸೂತ್ರ)ಗಳಿಗೆ ಭಾಷ್ಯ ಬರೆದರು. ಮಹಾಭಾರತ, ಪುರಾಣಗಳ ತಾತ್ತ್ವಿಕ ವಿಮರ್ಶೆಗಾಗಿ ‘ಮಹಾಭಾರತ ತಾತ್ಪರ್ಯ ನಿರ್ಣಯ’ಬರೆದರು. ಭಾಗವತಕ್ಕೆ ತಾತ್ಪರ್ಯ ಬರೆದರು. ಋಗ್ವೇದಕ್ಕೆ ಭಾಷ್ಯ ಬರೆದರು. ಯಮಕ ಕಾವ್ಯವೊಂದನ್ನು ಹಾಡು ಗಬ್ಬಗಳನ್ನೂ ರಚಿಸಿದರು. ಪುರಾಣ ಶ್ಲೋಕಗಳನ್ನು ಸಂಗ್ರಹಿಸಿ ‘ಕೃಷ್ಣಾಮೃತ ಮಹಾರ್ಣವ’ ಬರೆದರು. ವಾಸ್ತುಶಿಲ್ಪ-ಪ್ರತಿಮಾಶಿಲ್ಪದ ಅಪೂರ್ವ ವಿವರಗಳನ್ನೊಳಗೊಂಡ ತಂತ್ರಸಾರಸಂಗ್ರಹ ಬರೆದರು. ಇಷ್ಟೆ ಅಲ್ಲ, ಸಂಗೀತದಲ್ಲೂ ಅವರ ವಿದ್ವತ್ತು ಅಸಾಧಾರಣವಾಗಿತ್ತು. ಶ್ರೇಷ್ಠ ಗೇಯಕಾವ್ಯವಾದ ದ್ವಾದಶ ಸ್ತೋತ್ರಗಳ ರಚನೆ, ಇಷ್ಟೇ ಅಲ್ಲದೆ ಅವರ ಜೀವನದ ಒಂದು ಘಟನೆಯೂ ಇದಕ್ಕೆ ಸಾಕ್ಷಿ ಹೇಳುತ್ತದೆ.
ಗೋವೆಯಿಂದ ಹೊರಟ ಆಚಾರ್ಯರು ಪಶುವೆ ಎಂಬಲ್ಲಿ ತಂಗಿದ್ದರು. ಆಚಾರ್ಯರ ಕಂಠ ಮಾಧುರ್ಯ ಸಂಗೀತ ಪಾಂಡಿತ್ಯಗಳ ಬಗೆಗೆ ತಿಳಿದಿದ್ದ ಜನ ಅವರ ಸಂಗೀತವನ್ನೇ ಕೇಳಬಯಸಿದರು. ಆನರ ಬಯಕೆಯಂತೆ ಅನೇಕ ಹಾಡುಗಬ್ಬಗಳ ರಚಿಸಿ ಆಚಾರ್ಯರು ಹಾಡತೊಡಗಿದರು. ಕೇಳಿದ ಜನ ಮೈಮರೆಯುವಂತಹ ಮಾಧುರ್ಯ. ಕರ್ನಾಟಕ ಸಂಗೀತ ಪರಂಪರೆಗೆ ನಾಂದಿ ಹಾಡಿದರು. ಹೀಗೆ ಆಚಾರ್ಯರು ತಮ್ಮ ಜೀವನದುದ್ದಕ್ಕೂ ಭಗವಂತನ ಗುಣಗಾನವನ್ನು ಮಾಡಿದರು. ಈ ಕಾರ್ಯಕ್ಕೆ ಎದುರಾದ ಅಡ್ಡಿ-ಆತಂಕಗಳನ್ನು ಧೀರತೆಯಿಂಧ ಎದುರಿಸಿದರು. ಚಿಕ್ಕ ಹುಡುಗನಾಗಿದ್ದಾಗಲೆ ತಮ್ಮನ್ನು ಕಡಿಯಲೆಂದು ಬಂದ ಕಾಳಿಂಗ ಸರ್ಪವನ್ನು ಕಾಲಲ್ಲಿ ಹೊಸಕಿ ಹಾಕಿದ ಆಚಾರ್ಯರಿಗೆ ಭಯವೆಂದರೇನೆಂದು ತಿಳಿಯದು. ಅವರು ಯಾವ ಆತಂಕಕ್ಕೂ ಎದೆಗೆಡಲಿಲ್ಲ. ಎಂದೂ ಇನ್ನೊಬ್ಬರಿಗೆ ತಲೆಬಾಗಲಿಲ್ಲ, ತಮ್ಮ ಜೀವನದ ಉದ್ದೇಶ ಅವರಿಗೆ ಸ್ಫುಟವಾಗಿತ್ತು. ಅದನ್ನು ಸಾಧಿಸುವ ಬಗೆಯೂ ತಿಳಿದಿತ್ತು. ತಾವು ಧೀರ ಸಂನ್ಯಾಸಿಯಾಗಿ ಬದುಕಿದರು. ತನ್ನ ಬಳಿ ಬಂದವರಿಗೆಲ್ಲ ಭರವಸೆಯನ್ನು ತುಂಬಿದರು.
ಶ್ರೀ ಮಧ್ವಾಚಾರ್ಯರ ದಿವ್ಯ ಜೀವನದ ಭವ್ಯ ಸಂದೇಶ ಸಾರುವ ಶ್ರೀಮಧ್ವವಿಜಯ
ಶ್ರೀ ಮಧ್ವಾಚಾರ್ಯರ ಭವ್ಯ ಜೀವನವನ್ನು ಚಿತ್ರಿಸಿದ ಆಕರ ಗ್ರಂಥ ಸುಮಧ್ವ ವಿಜಯ. ಇದರ ಕರ್ತೃವು ಶ್ರೀತ್ರಿವಿಕ್ರಮಪಂಡಿತರ ಪುತ್ರರಾದ ನಾರಾಯಣ ಪಂಡಿತರು. ಇದೊಂದು ಮಹಾಕಾವ್ಯ. ಶಾಸ್ತ್ರಕಾವ್ಯವೂ ಹೌದು. ಪ್ರಾಮಾಣಿಕವಾದ ಅಧ್ಯಯನ ಗ್ರಂಥವೂ ಆಗಿದೆ. ಐತಿಹಾಸಿಕ ಹಿನ್ನೆಲೆಯ ಅಧಿಕೃತವಾದ ಗ್ರಂಥವೆನಿಸಿದೆ. ಸಂಸ್ಕøತ ಸಾಹಿತ್ಯ ಪ್ರಪಂಚದಲ್ಲಿ ವಿಶಿಷ್ಟ ಸ್ಥಾನ ಪಡೆದು ಶ್ರೇಷ್ಠ ಕಾವ್ಯವೆನಿಸಿದೆ, ಇಂತಹ ಸುಮಧ್ವ ವಿಜಯದ ನಾಯಕರು ವಿಶ್ವಕ್ಕೆ ರಕ್ಷಕರಾದ ಮುಖ್ಯಪ್ರಾಣಾವತಾರರಾದ ಶ್ರೀ ಮದಾನಂದತೀರ್ಥರು, ಇವರು ಸರ್ವಜ್ಞರು, ಸರ್ವಗುಣೋಪೇತರು, ಸರ್ವದೇವವಂದಿತರು. ಸರ್ವಲಕ್ಷಣ ಭರಿತರು, ಸರ್ವಶಾಸ್ತ್ರ ವಿಶಾರದರು. ಸರ್ವಕಲಾಸಿದ್ಧಿ ಸಂಪನ್ನರು. ಸರ್ವಜನ ಪೋಷಕರು, ಸಕಲ ದುರ್ಮತದೂಷಕರು, ಸರ್ವಮೂಲಕಾರರು, ಸರ್ವೋತ್ತಮನ ನಿಜದಾಸರು. ಜೀವೋತ್ತಮರಾದ ಇವರು ಭಗವಂತನ ಆಜ್ಞಾನುಸಾರ ಸಜ್ಜನರನ್ನುದ್ಧರಿಸಲೆಂದು ಧರೆಗಿಳಿದು ಬಂದ ಮಹಾಪುರುಷರು. ಇವೆಲ್ಲವುಗಳ ನಿರೂಪಣೆ ಯಥಾರ್ಥವಾಗಿ ಅನೇಕ ಮಹಾತ್ಮೈಗಳೊಂದಿಗೆ ಈ ಸುಮಧ್ವ ವಿಜಯದಲ್ಲಿ ಸುಂದರವಾಗಿ, ಸಮರ್ಪಕವಾಗಿ ಚಿತ್ರಿತಗೊಂಡಿದೆ. ಮಂತ್ರತುಲ್ಯವಾದ, ಸಕಲಾಭೀಷ್ಟಪ್ರದವಾದ ಈ ಕೃತಿಯು ನಿತ್ಯಪಾಠ-ಪಠಣ-ಪಾರಾಯಣ ಗ್ರಂಥವಾಗಿ ಪರಂಪರೆಯಲ್ಲಿ ಮಾನ್ಯವಾಗಿದೆ. ಈ ಕೃತಿಯು ಹದಿನಾರು ಸರ್ಗಗಳನ್ನೊಳಗೊಂಡು 1008 ಶ್ಲೋಕಗಳಿಂದ ಕೂಡಿದೆ. ಶ್ರೀ ಮಧ್ವಾಚಾರ್ಯರ ದಿವ್ಯ ಜೀವನದ ಭವ್ಯತೆಯನ್ನು ನಾನಾ ಮುಖಗಳಿಂದ ಪ್ರತಿಪಾದಿಸಿದ ದ್ವೈತಸಿದ್ಧಾಂತದ ಪ್ರಮೇಯಗಳ ಪ್ರತಿಪಾದನೆಯನ್ನೂ ಒಳಗೊಂಡಿದೆ.
ಇಂತಹ ಪವಿತ್ರತಮವಾದ ಸುಮಧ್ವ ವಿಜಯದ ಅಧ್ಯಯನ- ಅಧ್ಯಾಪನ ಸಕಲ ಮಾಧ್ವರ ನಿಯತಕರ್ಮ. ಮೂಲಗುರುಗಳನ್ನೇ ತಿಳಿಯದವನು ಗುರೂಪದೇಶಕ್ಕೆ, ಗುರುಕೃತ ಗ್ರಂಥ ಅಧ್ಯಯನ, ನಿತ್ಯಕರ್ಮಾನುಷ್ಠಾನಾದಿಗಳಿಗೆ ಎಂದಿಗೂ ಅರ್ಹನಾಗಲಾರ. ಶ್ರೀ ಮಧ್ವರ ಅವತಾರ ಲೀಲೆಗಳು, ತೋರಿದ ಪವಾಡಗಳು, ಪಾಡಿದ ಗೀತೆಗಳು, ಬೋಧಿಸಿದ ತತ್ತ್ವಗಳು, ರಚಿಸಿದ ಗ್ರಂಥರಾಶಿ, ಮಾಡಿದ ಜನೋಪಕಾರ, ಬೆಳೆಸಿದ ಸತ್ಪರಂಪರೆ ಮೊದಲಾದವುಗಳ ಸ್ಮರಣೆ-ಕೀರ್ತನೆಯು ನಮ್ಮ ಜನ್ಮಸಾಫಲ್ಯ. ಇವುಗಳನ್ನು ತಿಳಿಸಿಕೊಟ್ಟ ಸುಮಧ್ವ ವಿಜಯವು ವಿಶೇಷವಾಗಿ ಮಾನ್ಯ . 79 ವರ್ಷಗಳ ಕಾಲ ಸಾರ್ಥಕ ಬದುಕನ್ನು ಬಾಳಿ ಪಿಂಗಲ ಸಂವತ್ಸರದ (ಕ್ರಿ.ಶ. 1317) ಮಾಘ ಶುದ್ಧ ನವಮಿಯಂದು ನಿರ್ಯಾಣ ಹೊಂದಿದ ಸ್ಮರಣೆಗೆ ಮಧ್ವನವಮಿಯಾಗಿ ಆಚರಿಸಲಾಗುತ್ತದೆ.
ಭಕ್ತಿ ಸಿದ್ಧಾಂತದ ಮೇರುಪರ್ವ ಮಧ್ವಾಚಾರ್ಯರು
ವ್ಯಾಸಕೂಟ ದಾಸಕೂಟಗಳನ್ನು ಏರ್ಪಡಿಸಿ, ಜಾನಪದ ಸಾಮಾನ್ಯ ಜನರಿಗೂ ವೇದಾಂತಾರ್ಥಗಳನ್ನು ಮನಮುಟ್ಟುವಂತೆ ಪ್ರಾಚೀನ ಹರಿದಾಸ ಪರಂಪರೆಯನ್ನು ಕನ್ನಡನಾಡಿನಲ್ಲೂ, ಆಂಧ್ರ, ಮಹಾರಾಷ್ಟ್ರಗಳಲ್ಲೂ ಬೆಳಸಿದುದು. (ಶ್ರೀಕೂರ್ಮಶಾಸನಾದಿಗಳ ಆಧಾರ)
ಶೈವ-ಶಾಕ್ತ ಆಕ್ರಮಣಗಳಿಂದ ಶಿಥಿಲವಾದ ವೈಷ್ಣವ ದೇವಾಲಯ ವ್ಯವಸ್ಥೆಗಳನ್ನು ಶಿಷ್ಯರಾದ ನರಹರಿ ತೀರ್ಥ ಮುಂತಾದವರಿಂದ ಸರಿಪಡಿಸಿ ಶೈವ-ವೈಷ್ಣವ ಅನ್ಯೋನ್ಯತೆಯ ವ್ಯವಸ್ಥೆಯನ್ನು ಮುಂದುವರೆಸಿದುದು.
ವಿಶ್ವವು ಮಿಥ್ಯೆಯೆಂಬ ವಾದವನ್ನು ಖಂಡಿಸಿ ರಾಷ್ಟ್ರವು ಸತ್ಯವಾದುದರಿಂದಲೇ ಆಧ್ಯಾತ್ಮಿಕರಿಗೆ ಸಮಾಜಸೇವೆ ಮುಖ್ಯವೆಂದು ಪ್ರಾತ್ಯಕ್ಷಿಕವಾಗಿ ಯುಕ್ತಿಗಳಿಂದ ತೋರಿಸಿದುದು.
ತಮ್ಮ ಅಣಿಮಾದಿ ಯೋಗಸಿದ್ಧಿಗಳ ಮೂಲಕ ಅನೇಕ ಸಾಮಾಜಿಕ ಕಾರ್ಯಗಳನ್ನು ಸಾಧಿಸಿದುದು.
ಉಡುಪಿ ಶ್ರೀಕೃಷ್ಣನನ್ನು ಸ್ಥಾಪಿಸಿ ಸರ್ವ ಸುಲಭನಾದವನು ಆಚಾರ್ಯರೂಪದ ಕೃಷ್ಣನೆಂದು ತಿಳಿಸಿ ವ್ಯಾಸಕೂಟದವರ ಎಂಟು ಮಠಗಳನ್ನು ದೇವಾಲಯ ವ್ಯವಸ್ಥೆಗಾಗಿ ಸ್ಥಾಪಿಸಿದುದಲ್ಲದೇ, ದಾಸಕೂಟದ ಹದಿನೆಂಟು ಜಾತಿ ಜನರಿಗೂ ತಕ್ಕ ನಾಮ ಸಂಕೀರ್ತನ, ಪ್ರದಕ್ಷಿಣ, ನಮಸ್ಕಾರ ಮಂದಿರ ಶುದ್ಧೀಕರಣ, ಪುಷ್ಪವನ, ಪುಷ್ಪಮಾಲಾ ಸಮರ್ಪಣ ,ರಥ ಸಂಕರ್ಷಣ ಮುಂತಾದ ಸೇವೆಗಳಿಗೆ ಅವಕಾಶ ಮಾಡಿಕೊಟ್ಟಿರುವುದು.
ಭಾರತದಾದ್ಯಂತ ಸಂಚರಿಸಿ ವೇದಾಂತವನ್ನು ಧರ್ಮವನ್ನು ತರ್ಕದಿಂದ ಸಾಣೆ ಹಿಡಿದು ತೀಕ್ಷ್ಣಗೊಳಿಸಬೇಕೆಂಬ ಮಾನವಮೂಲ ಪುರುಷರಾದ ಮನುವಿನ ಮಾತನ್ನು ದೃಢಪಡಿಸಿ ಸಮಾಜದಲ್ಲಿ ಬೌದ್ಧಿಕಶಕ್ತಿಯ ವಿದ್ಯುತ್‍ಸಂಚಾರ ಮಾಡಿಸಿದುದು.
ಆಧ್ಯಾತ್ಮಿಕ ಸಾಧನೆಯ ಮಾರ್ಗದಲ್ಲಿ ವಸ್ತು ಸ್ಥಿತಿಯನ್ನು ಗಮನಿಸಬೇಕೆಂಬ ಮುಖ್ಯಾಂಶವನ್ನು ತಿಳಿಸಿ ತಲೆಗಳಿಗೆಲ್ಲಾ ಒಂದೇ ಅಳತೆಯ ಟೊಪ್ಪಿಗೆ ಎಂಬ ಅನುಚಿತ ಮಾರ್ಗ ಹಿಡಿಯಬಾರದೆಂದೂ, ಭಗವದ್ಭಕ್ತಿಯೆಂಬ ಟೊಪ್ಪಿಗೆ ಎಲ್ಲರಿಗೂ ಇರಲೆಂದೂ ಭಕ್ತಿಯ ಅಂಗವಾದ ಕರ್ಮಗಳು ಅವರವರ ಹುಟ್ಟು ಪರಿಸರಗಳಿಗೆ ತಕ್ಕಂತೆ ಇರಬೇಕಾದುದು ಲೌಕಿಕವಾಗಿಯೂ ಶಾಸ್ತ್ರೀಯವಾಗಿಯೂ ಸರಿಯಾದುದೆಂದು ತಿಳಿಸಿ, ಭಕ್ತಿಯ ಅಧಿಕಾರದಲ್ಲಿ ಸಕಲ ಜಾತಿಯ ಜನರಿಗೂ ತಮಗೆ ತಕ್ಕಂತಹ ವೃತ್ತಿಗಳು ತಾರತಮ್ಯಗಳಿಂದ ಕೂಡಿದ್ದರೂ ಫಲಿತಾಂಶಕ್ಕೆ ಬಾಧಕವಿಲ್ಲವೆಂಬ ತತ್ವವನ್ನು ದೃಢೀಕರಿಸಿದುದು ಮತ್ತು ಆಚರಣೆಗೆ ತಂದುದು.
ಅದ್ವೈತಕ್ಕೆ ವಿರುದ್ಧವಾಗಿ ದ್ವೈತ ಎಂಬುದು ಮೇಲ್ನೋಟಕ್ಕೆ ಕಂಡುಬಂದರೂ ಕೂಡ, ದೇವರು ಒಬ್ಬನೇ ಒಬ್ಬ ಎಂಬ ಅದ್ವೈತಕ್ಕೆ ರಾಜನೊಬ್ಬನೇ ರಾಷ್ಟ್ರಪತಿ ಎನ್ನುವಂತೆ, ಸಮಸ್ತ ಪ್ರಜೆಗಳ ಸಹಕಾರವೂ ಅವಶ್ಯಕವೆಂಬಂತೆ ಸಕಲ ವಿಧಜನರ ಪುಣ್ಯ ಕರ್ಮಗಳು ನಾನಾ ವಿಧವಾಗಿ ದೇವರಲ್ಲಿ ಮುಖ್ಯ ಭಕ್ತಿಯನ್ನೇ ಪೋಷಿಸುವುದರಿಂದ ವಿಶ್ವದ ಕರ್ಮಗಳೂ ವಿಶ್ವವೂ ಸುಳ್ಳಲ್ಲ ನಿಜ ಎಂಬ ಪ್ರಜ್ಞೆಯನ್ನು ಎಚ್ಚರಗೊಳಿಸಿ ಸಮಾಜದಲ್ಲಿ ಐಕಮತ್ಯದಲ್ಲಿ ನಾನಾ ಪ್ರಕಾರಗಳ ವಾಸ್ತವ ಅನುಸರಣೆಗೆ ಅವಕಾಶ ಮಾಡಿಕೊಟ್ಟುದು.
-ಡಾ.ಗುರುರಾಜ ಪೋಶೆಟ್ಟಿಹಳ್ಳಿ
9035618076
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ