ಹನುಮಂತನು ತನ್ನ ದೂತ ಕಾರ್ಯಭಾರದ ನಿರ್ವಹಣೆಯಲ್ಲಿ ಅತ್ಯಂತ ವಿವೇಚನೆಯಿಂದ ಸೀತೆಗೆ ತಾನು ಬಂದ ಕಾರ್ಯಕಾರಣ, ರಾಮನ ಗುರುತು, ರಾಮನ ಅಂದಿನ ಪರಿತಾಪ, ಪತ್ನಿಗಾಗಿ ಹುಡುಕಾಟ ಹೀಗೆ ಸಕಲ ವಿವರಗಳನ್ನೂ ಸಮಾಧಾನದಿಂದ ಹೇಳುತ್ತಾ ಹೋಗುತ್ತಾನೆ. ಶ್ರೀರಾಮನಿಂದ ತಂದ ಅಭಿಜ್ಞಾನವನ್ನು ಆಕೆಯ ಕೈಗಿತ್ತು ವಿಶ್ವಾಸ ಮೂಡಿಸುತ್ತಾನೆ. ಆತನಿಗೆ ತಾನು ಈಗ ನಿಂತಿರುವ ಸುವರ್ಣ ಲಂಕೆಯ ರಾಜೇಶ್ವರ ರಾವಣ ಹಾಗೂ ವಲ್ಕಲಧಾರಿ ಶ್ರೀರಾಮ, ಇಬ್ಬರಿಬ್ಬರದ್ದೂ ವ್ಯಕ್ತಿತ್ವ, ಆಲೋಚನೆಗಳು, ಶಕ್ತಿ, ಪರಾಕ್ರಮ, ಆಕರಗಳ ಪರಿಚಯವಿದೆ. ಸೀತೆ ಒಪ್ಪಿದರೆ ಒಂದೇ ನೆಗೆತಕ್ಕೆ ಅಶೋಕ ವಾಟಿಕೆಯ ಈ ಉಸಿರುಗಟ್ಟುವ ಬಂಧನದಿಂದ ಮುಕ್ತಗೊಳಿಸಿ ಶ್ರೀರಾಮನ ಬಳಿ ಕ್ಷೇಮವಾಗಿ ತಲುಪಿಸುವ ದಾರಿಯೂ ಗೊತ್ತು. ಇದೆಲ್ಲದರ ಚಿತ್ರಣಗಳು, ನಿಖರತೆ, ಯೋಜನೆ ಸೀತೆಗೂ ತಿಳಿಯದ ವಿಷಯವೇನಲ್ಲ. ಆದರೆ ಆಕೆ ಹನುಮಂತನನ್ನು ಹಿಂದಿರುಗಲು ಹೇಳುತ್ತಾಳೆ. ಆತನೊಡನೆ ಆಕೆ ಹೊರಡುವುದಿಲ್ಲ. ಲಂಕೇಶ್ವರನಾದ ಮಹಾರಥಿ ರಾವಣನಂಥ ರಾವಣನೇ ಆಕೆಯನ್ನು ಅಪಹರಿಸಿ ಒತ್ತಾಯಪೂರ್ವಕವಾಗಿ ಬಂದಿಯಾಗಿರಿಸಿ ಪತ್ನಿಯಾಗಲು ಪೀಡಿಸುತ್ತಿರುತ್ತಾನೆ. ದಾಸಿ ರಾಕ್ಷಸಿಯರೆಲ್ಲರದ್ದು 24 x 7 ಕಿರುಕುಳ ನೀಡುವ ಹೊಸ ಹೊಸ ಯೋಜನೆಗಳು, ಬೆದರಿಸುವ ಮಾತು, ಮಾತು, ಮಾತು ಹಾಗೂ ಪ್ರಲೋಭನೆಗೆಳೆವ ತಂತ್ರಗಳು. ಸೀತೆಯೊಡನೆ ಪಾಳಿಗಳಲ್ಲಿ ವಾಸ ಅವರದ್ದು. ಆದರೂ ಸೀತಾ ತನಗೆ ಸಿಕ್ಕ ಅವಕಾಶ ಬಳಸಿ ಅಲ್ಲಿಂದ ಹಾರಿ ಹೊರಡಲು ಬಯಸುವುದಿಲ್ಲ. ಹಾಗೆ ಹೊರಟರೆ, ಅಪಹರಿಸಿದ ರಾವಣನಿಗೂ ಮತ್ತು ಅದಕ್ಕೆ ಪ್ರತಿಯಾಗಿ ಸದ್ದಿಲ್ಲದೆ ಹಾರಿ ಆಕೆಯನ್ನು ಹೊತ್ತೊಯ್ಯುವ ರಾಮದೂತ ಹನುಮಂತನಿಗೂ ವ್ಯತ್ಯಾಸವೇನು? ಇಚ್ಛಾ ರೂಪ ಧರಿಸುವ ಶಕ್ತಿಯನ್ನು ಬಳಸಿ ಕಪಟ ವೇಷಧಾರಿಯಾಗಿ ಸೀತೆಯನ್ನು ಕದ್ದೊಯ್ದು ಲಂಕೆಯಲ್ಲಿ ಆಕೆಯನ್ನು ಬಂಧಿಸಿಡುವಲ್ಲಿ ರಾವಣನು ತೋರಿದ ರಾಜಪರಾಕ್ರಮಗಳು ನಿಜಕ್ಕೂ ಶ್ರೀರಾಮನ ಸನ್ನಡೆಗೆ ಸಾಟಿಯೇ? ಆಕೆ ಅಲ್ಲಿಂದ ಹೊರಡುವ ಆಲೋಚನೆಗೂ ಬೀಳುವುದಿಲ್ಲ.
ತನ್ನ ಅಭಿಜ್ಞಾನವನ್ನು ಹನುಮಂತನ ಕೈಯಲ್ಲಿತ್ತು ಆಕೆ ಹೇಳುತ್ತಾಳೆ, "ಶ್ರೀರಾಮ ಇಲ್ಲಿಗೆ ಬಂದು ತನ್ನ ಪರಾಕ್ರಮ ಮೆರೆದು, ರಾವಣನನ್ನು ಯುದ್ಧದಲ್ಲಿ ಸೋಲಿಸಿ ತನ್ನನ್ನು ಬಂಧಮುಕ್ತಳಾಗಿಸಿ ವಾಪಸ್ಸು ಕರೆದೊಯ್ಯಲಿ". ಇದನ್ನು ಸೀತೆಯ ದೃಢಚಿತ್ತದ ಒಂದು ಮುಖವಾಗಿ ಒಪ್ಪಿದ್ದೇವೆ. ವಾಲ್ಮೀಕಿ ರಾಮಾಯಣದ, ಸುಂದರಕಾಂಡ ಭಾಗದ ಅತೀ ಪ್ರಮುಖ ಸನ್ನಿವೇಶವಿದು. ಸೀತೆ ಮತ್ತು ಹನುಮಂತರ ವ್ಯಕ್ತಿತ್ವದ ಪರಿಚಯ ನೀಡುವ ಪ್ರಮುಖ ಘಟ್ಟವೂ ಕೂಡಾ.
************
ಇದೇ ಸೀತೆಯ, ಸ್ವಯಂವರದ ಮೊದಲಿದ್ದ ಚಿತ್ತದ ಹೇಳಿಕೆಯು ಈ ಕೆಳಗಿನಂತಿದೆ.
"ಹರ ಶರಾಸನವಂತೆ! ತೆಗೆ,
ಪರೀಕ್ಷೆಯದೇಕೆ ತಾನೊಲಿದ ನಲ್ಲಂಗೆ?
ಜಗದೇಕ ವೀರಂಗೆ ಪದ್ಧತಿಯ ಪಾಳ್ ತೊಡರುಮೆಡರೇಕೆ?
ತುಕ್ಕಡರಿ ಮುರಿಯಲಾ ರುದ್ರಚಾಪಂ! -ಎನುತೆ ಸೀತಾ...."
ಎಂದು ರಸಋಷಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ "ಶಿಲಾ ತಪಸ್ವಿನಿ" ಸಂಪುಟದ 460 ನೆಯ ಪದ್ಯವನ್ನು ನಾಟಕೀಯವಾಗಿ ಹೇಳುವ ಹುಸಿ ಮುನಿಸಿನ ಅರ್ಧ ಕಿಶೋರಿ, ಅರ್ಧ ತರುಣಿ, ಪೂರ್ಣ ಪ್ರೇಮಿಯಾದವಳಿಂದ ಬಂದ ಹೇಳಿಕೆಯಾಗಿದ್ದು ಇದನ್ನೂ ಸಾಕ್ಷೀಕರಿಸಿದ್ದೇವೆ.
ತಾನೊಲಿದ, ಮನಮೆಚ್ಚಿದ ಶ್ರೀರಾಮನೆಂಬುವ ರಘುವಂಶದ ಯುವರಾಜನನ್ನು, ಅದಾವ ಪರೀಕ್ಷೆಗಳಿಗೂ ಒಡ್ಡದೆ ಸ್ವೀಕಾರ ಭಾವದಲ್ಲಿ ವರಿಸಲು ತುದಿಗಾಲಲ್ಲಿ ನಿಂತಾಕೆ ಇವಳು.
ಅದೇ ಸೀತೆ, ರಾವಣ ತನ್ನನ್ನು ಅಪಹರಿಸಿ ಕೊಂಡೊಯ್ದು ನಿತ್ಯ ಪೀಡಿಸಿ, ಕಾಡಿಸಿ, ಪರಿ ಪರಿಯಾಗಿ ಬೆದರಿಸಿದರೂ ತನ್ನ ಪತಿ ಶ್ರೀರಾಮನ ಸಹಧರ್ಮಿಣಿ ಆಚಾರದ ಅಮೃತವನ್ನು ಎದೆಯಲ್ಲಿ ಹಿಡಿದು ಸಹನೆಯಿಂದ ಕುಳಿತಾಕೆ.
ಇದನ್ನು ಏನೆನ್ನಬೇಕು? ಸೀತೆಯ ಅಸಹಾಯಕತೆ? ಕಾಲದ ಆಟ? ವಂಚನೆಯ ಜಾಲದ ಬಲಿಪಶು? ಏನೇನು ಹೇಳಬಹುದು ಹೇಳಿ? ನನಗಂತೂ ಎಲ್ಲವನ್ನೂ ಹೇಳಿ, ಹಳಿದು ಮುಗಿಸಿದ ನಂತರ ಎದೆಯಲ್ಲಿ ಉಳಿದದ್ದು ಒಂದೇ ಸ್ಥಿರಭಾವ. ಇದು ಸೀತೆಯ "ಮನೋ ಪರಾಕ್ರಮ". ಆಕೆಯ ಶ್ರೀರಾಮನ ಮೇಲಿನ ವಿಶ್ವಾಸ. ಹೌದು, ಇದು ಕ್ಷತ್ರಾಣಿಯೊಬ್ಬಳ ದೃಢತೆ. ಕ್ಷಾತ್ರ ಮನೋಬಲವನ್ನು, ಆತ್ಮವಿಶ್ವಾಸವನ್ನು ದರ್ಶಿಸುವ ದೃಢನಿರ್ಧಾರ.
ತನ್ನ ಪರಿಸ್ಥಿತಿಗೆ ತಕ್ಕಂತೆ ತನ್ನ ವ್ಯಕ್ತಿತ್ವವನ್ನು ಸಾಬೀತು ಪಡಿಸುವ ನಿಲುವಿನ ಅರಿವು.
ರಾವಣನ ಸೇರೆಯಲ್ಲಿದ್ದ ಸೀತೆಗೆ "ಮನೋ ಪರಾಕ್ರಮ" ಹೇಗೆ ಬಂತು? ಅದೇಕೆ ಆಕೆಗೆ ಶ್ರೀರಾಮನ ಮೇಲೆ ಅಷ್ಟು ನಂಬಿಕೆ? ಆತನ ಬಳಿಯಲ್ಲೀಗ ಯಾವುದೇ ತರಬೇತಾದ ಸೈನ್ಯವಿಲ್ಲ. ಈಗಿರುವ ಪರಿಸ್ಥಿತಿಯಲ್ಲಿ ಶಸ್ತ್ರಾಸ್ತ್ರಗಳ ಭಂಡಾರದ ಬಗ್ಗೆಯಂತೂ ತಮಾಷೆಗೂ ಎಣಿಕೆಗೆ ನಿಲ್ಲುವ ಹಾಗಿಲ್ಲ. ದೂರ ದೂರದವರೆಗೂ ಹರಡಿ ಹಬ್ಬಿರುವ ಕಾಡು. ನಂತರ ಅದಕ್ಕೂ ಕಠಿಣ ತೊಡಕಾದ ಸಮುದ್ರ. ಆದರೂ ಆಕೆಗೆ ಶ್ರೀರಾಮನ ಮೇಲೆ ವಿಶ್ವಾಸವಿದೆ.
ಇಂತಹ ಮನೋಬಲಕ್ಕೆ, ಮನೋ ಪರಾಕ್ರಮಕ್ಕೆ ಕಾರಣ, ಬದುಕಿನ ಏರಿಳಿತಗಳಲ್ಲಿ ಜೊತೆ ಇರುವುದರೊಂದಿಗೆ ಪರಸ್ಪರರಲ್ಲಿ ಕಂಡಿರುವ ಪ್ರೇಮ ಭಾವ. ಬುದ್ಧಿ ಹಾಗೂ ಬಲದ ಸಾಮರ್ಥ್ಯದ ಬಗ್ಗೆ ಪರಸ್ಪರರಿಗಿರುವ ಸ್ಪಷ್ಟ ಪರಿಚಯ. ದಾಂಪತ್ಯದಲ್ಲಿ ಈ ಪರಿಯ ದೃಢತೆ ಬರುವುದೇ ಪೂರ್ಣ ರೂಪದಲ್ಲಿ ಜೊತೆ ಇದ್ದಾಗ. ತಾನೊಲಿದವನನ್ನು ಬೇಶರತ್ ವರಿಸಲು ನಿಂತಾಕೆ, ಮುಂದೆ ಬದುಕಿನ ಕರಾಳ ತಿರುವಲ್ಲಿ ತನ್ನ ಅಪಹರಣವಾದ ನಂತರ ಪತಿಗೆ ಹೇಳಿ ಕಳಿಸುತ್ತಾಳೆ. ನೀನೇ ಬಂದು, ನನ್ನನ್ನು ಅಪಹರಿಸಿದಾತನನ್ನು ಯುದ್ಧದಲ್ಲಿ ಸೋಲಿಸಿ, ಶಿಕ್ಷಿಸಿ ವಾಪಸ್ಸು ಕರೆದುಕೊಂಡು ಹೋಗೆಂದು. ಇದಲ್ಲವೇ ಒಂದು ಹೆಣ್ಣಿನ ಸಂಕಲ್ಪಶಕ್ತಿ, ಸಹಧರ್ಮದರಿವು? ಇದಲ್ಲವೇ ಪರಸ್ಪರರ ಶಕ್ತಿಯ ಅರಿವಿರುವ ಸಾಂಗತ್ಯದ ಪಯಣ?
ತನ್ನ ಪತಿಯ ತನ್ನೆಡೆಗಿನ ಪ್ರೇಮದ ಮೇಲೆ, ಆತನ ಪರಾಕ್ರಮದ ಮೇಲೆ ಆಕೆಗೆ ಅಚಲ ವಿಶ್ವಾಸ. ಆತನ ಬಲಾಬಲಗಳು ಆಕೆಗೆ ತನ್ನ ಅಂಗೈಯಷ್ಟು ಸ್ಪಷ್ಟ. ತಾನು ನೀಡಿದ ಸಖ್ಯ, ಸಾಂಗತ್ಯ, ಪ್ರೇಮ, ಹೆಜ್ಜೆ ಹೆಜ್ಜೆಗೂ ಅನುಸರಿಸಿ ಹೊಸೆದ ಬಂಧದ ಮೇಲಿನ ಅಮಿತ ನಂಬಿಕೆ. ಇದರ ಫಲಿತಾಂಶವೇ, ಶ್ರೀರಾಮನು ನಡೆದು ಬಂದು, ಸೇತು ಕಟ್ಟಿ, ನಂಬಲಸಾಧ್ಯವೆನಿಸುವ ವಾನರ ಮತ್ತು ಇತರ ಮಾನವೇತರ ಸೇನೆಯೊಡನೆ ಬೃಹತ್ ಸಾಗರ ದಾಟಿ, ಲಂಕೆಗೆ ತಲುಪಿ ಯುದ್ಧ ಮಾಡುತ್ತಾನೆ. ರಾವಣನನ್ನು ಆತನ ಇಡಿಯ ಪರಾಕ್ರಮಿ ರಾಕ್ಷಸ ಸೈನ್ಯ ಹಾಗೂ ಕುಟುಂಬದ ಎಲ್ಲ ಪುರುಷ ಯೋಧರನ್ನೊಳಗೊಂಡು ಕೊಲ್ಲುತ್ತಾನೆ.
ಸ್ವಯಂವರದಲ್ಲಿ ಈ ಶಿವಧನಸ್ಸು ಮುರಿವ ಪೋಟಿ ನನ್ನ ಶ್ರೀರಾಮಚಂದ್ರನಿಗೆ ಬೇಡ ಎಂದವಳು, ಮುಂದೆ ನಡೆದು ತನ್ನ ಪತಿ ಶ್ರೀರಾಮನಿಗೆ, ಅಂದು ಭೂಮಿಯ ಮೇಲಿದ್ದ ಅತ್ಯಂತ ಪರಾಕ್ರಮಿ ಹಾಗೂ ಶಿವಭಕ್ತ ರಾವಣನ ಉದ್ಧಟತನ ಮುರಿಯಲು ಪಣ ತೊಡಿಸುತ್ತಾಳೆ.
ಬೆಳಗೆದ್ದು ಇನ್ನೇನು ಶ್ರೀರಾಮನಿಗೆ ರಾಜ್ಯ ಪಟ್ಟಾಭಿಷೇಕ. ಕೈಕೇಯಿಯ ಅಭಿಲಾಷೆ, ಪುತ್ರ ವ್ಯಾಮೋಹ ತಲೆಯೆತ್ತುತ್ತದೆ. ತನ್ನ ಪತಿಗೆ ಆಕೆ ತನ್ನ ಅಭಿಲಾಷೆಯ ಪೂರೈಕೆಗೆ ಕಟ್ಟಿ ಹಾಕುತ್ತಾಳೆ. ಮಂಗಳ ಸ್ನಾನದ ಗುಂಗಿನಲ್ಲಿದ್ದ ಶ್ರೀರಾಮ ಸೀತೆಯರಿಗೆ ಅಮಂಗಳದ ವಾಸ್ತವ ಕಾದಿರುತ್ತದೆ. ಪುಟ ತಿರುವಿದಂತೆ ಅವರ ಬದುಕಿನ ದಿಕ್ಕೇ ಬದಲಾಗುತ್ತದೆ. ಮಂಗಳ ವಾದ್ಯಗಳ, ತಳಿರು-ತೋರಣ ಅಲಂಕಾರಗಳ, ವಸ್ತ್ರ ಆಭೂಷಣ ಕಿರೀಟ ಧಾರಣೆಯ ಚಿತ್ರಣವೂ ಮರೆಯಾಗುತ್ತದೆ. ವಲ್ಕಲ ಧಾರಿಗಳಾಗಿ ವನವಾಸಕ್ಕೆ ತೆರಳುವ ಸನ್ನಿವೇಶ ಎದುರಾಗುತ್ತದೆ. ಪರಿವಾರ ಜನ, ಪುರ ಜನರಿಲ್ಲ. ಜೊತೆಯಲ್ಲಿ ಲಕ್ಷ್ಮಣನೊಬ್ಬನೇ, ಹೆಗಲಿಗೆ ಧನಸ್ಸು. ಇವೆಲ್ಲ ಏಳು ಬೀಳುಗಳಲ್ಲೂ ಸೀತಾ ರಾಮರದು ಬದ್ಧ ಬಾಂಧವ್ಯ. ಜೊತೆ ಬಿಡದ ಜೋಡಿ ಅವರು. ವನವಾಸದಲ್ಲಿ ಸೀತೆಯ ಅಪಹರಣ. ಬಂದಿಯಾಗಿ ಆಕೆಯ ಕಷ್ಟ ಕೋಟಲೆಗಳ ಸರಮಾಲೆ. ಇತ್ತ ಶ್ರೀರಾಮನಿಗೆ ಆಕೆಯನ್ನು ಹುಡುಕುವ ಪರಿತಾಪ. ಬದುಕಿರುವಳೇ ಎಂಬ ಚಿಂತೆ. ಹುಡುಕಲು ಆಕರಗಳಿಲ್ಲದ ಹತಾಶೆ. ಹೇಳಿಕೊಳ್ಳಲು ಲಕ್ಷ್ಮಣನ ವಿನಾ ಮತ್ತಾರಿಲ್ಲ. ಸೀತೆಗಂತೂ ಹೇಳಿಕೊಳ್ಳಲೂ ಸಹಾ ಯಾರಿಲ್ಲ. ಆದರೂ ಅವರಿಬ್ಬರಲ್ಲಿ ಪರಸ್ಪರರ ಬಗ್ಗೆ ವಿಶ್ವಾಸ ಕುಂದಲಿಲ್ಲ. ಸೀತೆಗೆ ಶ್ರೀರಾಮನ ಬರುವಿಕೆಗಾಗಿ ಕಾಯುವ ಕಾಲದ ಮಿತಿಯ ಬಗ್ಗೆ ಆತಂಕಗಳಿವೆ. ಆದರೆ ಬರುವ ಬಗ್ಗೆ ಕೊಂಚವೂ ಶಂಕೆಗಳಿಲ್ಲ. ಸೀತೆಯನ್ನು ಹುಡುಕುವ ಹಾದಿಯಲ್ಲಿ, ಶ್ರೀರಾಮನಿಗೆ ಆಕೆಯ ಜೀವಕ್ಕೆ ಏನಾದರೂ ಅಪಾಯವಾಗಿದ್ದರೆ ಎಂಬ ಆತಂಕಗಳಿವೆ. ಆದರೆ ಆಕೆ ಜೀವಂತವಿದ್ದರೆ ಯಾವ ಅಡೆತಡೆಯೂ ಲೆಕ್ಕವಿಲ್ಲ.
ಹುಡುಗಾಟದ ಕಿಶೋರ ವಯಸ್ಸಿನ ಆಕರ್ಷಣೆ, ಮರುಳ ಮನಸ್ಸಿನ ತುಡಿತ, ದೈಹಿಕ ಅವಲಂಬಗಳನ್ನು ಮೀರುತ್ತಾ, ದಾಂಪತ್ಯದಲ್ಲಿ ಜೊತೆಯಾಗಿ ಮುಂದುವರೆದು ಅದ್ಯಾವಾಗಲೋ ಒಬ್ಬರಿಗೊಬ್ಬರು ಶಕ್ತಿಯಾಗಿಬಿಟ್ಟಿರುತ್ತೇವೆ. ಪತಿ-ಪತ್ನಿಯಾಗಿ ಲೋಕಕ್ಕೆ ಕಾಣುವ ಹೊರ ಆವರಣದ ಭೌತಿಕ ಬದುಕಿನಲ್ಲಿ ಬದುಕುವ ಕ್ರಿಯೆಯ ಜೊತೆ ಜೊತೆಯಲ್ಲೇ ಅಂತರಂಗದಲ್ಲಿ ಒಂದೇ ವಿಚಾರ ಪ್ರವಾಹಗಳಿಗೆ ಹರಿವು ನೀಡುವ, ವಿಚಾರ ಪ್ರವಾಹಗಳಿಂದ ಚಿರಬಾಂಧವ್ಯಕ್ಕೆ ಊರ್ಜಾ ಪಡೆವ ಪ್ರಕ್ರಿಯೆಯೂ ಸಾಗುತ್ತಿರಬೇಕು.
ಪತ್ನಿಯಾಗಿ ಹೆಣ್ಣೊಬ್ಬಳು ಸಹನೆಯಿಂದ ಈ ಪರಿಯ ಪ್ರಬುದ್ಧತೆಗೆ ಬೆಳೆಯುವ ಪ್ರಕ್ರಿಯೆಯೇ ಸೀತೆ. ಪತಿಯಾಗಿ ಗಂಡೊಬ್ಬನು ಈ ಪರಿಯ ಪರಾಕ್ರಮದ ಎಲ್ಲೆಗಳ ಮೀರುವ ಅಥರ್ವ ಮನೋಬಲವೇ ಶ್ರೀರಾಮ. ಮೇಲೆ ಹೇಳಿದ ದಾಂಪತ್ಯದ, ಪತಿ-ಪತ್ನಿ ಬಾಂಧವ್ಯದ ಭಾಷ್ಯವು ತ್ರೇತಾಯುಗದ ಸೀತಾ ರಾಮರಿಗೂ, ಕಲಿಯುಗದ ನಮಗೂ ಒಂದೇ. ಕಾಲಾತೀತ ಸತ್ಯವಿದು.
ನಾನು ಶ್ರೀರಾಮ-ಸೀತೆಯನ್ನು ಮಾದರಿ ದಂಪತಿಗಳೆಂದು ಇದೇ ಕಾರಣವೊಂದನ್ನು ಹೇಳಿ ಸಹಸ್ರ ಸಹಸ್ರ ಬಾರಿ ಮೆಚ್ಚಿ ಆರಾಧಿಸಬಲ್ಲೆ.
- ರಾಧಿಕಾ ವಿ ಗುಜ್ಜರ್, ಬೆಂಗಳೂರು.
E mail: radhikamhaladkar@gmail.com
ಲೇಖಕರ ಸಂಕ್ಷಿಪ್ತ ಪರಿಚಯ:
ಶ್ರೀಮತಿ ರಾಧಿಕಾ ವಿ ಗುಜ್ಜರ್, ಹುಟ್ಟೂರು ಹರಿಹರ, ದಾವಣಗೆರೆ ಜಿಲ್ಲೆ. ಬಿ.ಕಾಮ್ ಪದವೀಧರೆ. ಸಹಕಾರಿ ಬ್ಯಾಂಕ್ ಉದ್ಯೋಗಿಯಾಗಿ ಸೇವೆ ಸಲ್ಲಿಸಿ, ಸ್ವಯಂ ಸೇವಾ ನಿವೃತ್ತಿ ಪಡೆದು ಈಗ ಗೃಹಿಣಿ. ಮಂತ್ರಗಳನ್ನು ಬರೆದು ಚಿತ್ರಕಲೆ ರಚಿಸುವ ಹವ್ಯಾಸವಿದೆ. ಕವನ ಹಾಗೂ ಸಣ್ಣ ಕತೆ ಬರೆಯುತ್ತಿದ್ದಾರೆ. ಕನ್ನಡದ ಓದು ಹಾಗೂ ಕಲಿಕೆಯೇ ಮೊದಲ ಒಲವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ