ಶ್ರೀರಾಮ ಕಥಾ ಲೇಖನ ಅಭಿಯಾನ-64: ಶ್ರೀ ಸೂರ್ಯ ಭಗವಾನ ಹಾಗೂ ಸೂರ್ಯವಂಶದ ಶ್ರೀರಾಮಚಂದ್ರ ಪ್ರಭು

Upayuktha
0



-ಶ್ರೀಕಾಂತ್ ಶ್ರೀನಿಧಿ

ಭಾರತೀಯ ಪರಂಪರೆಯಲ್ಲಿ ಸೂರ್ಯನಿಗೆ ವಿಶಿಷ್ಟವಾದ ಸ್ಥಾನವಿದೆ.    ಸೂರ್ಯ ಎಂದರೆ  ಶ್ರೇಷ್ಟನಾದ ಒಡೆಯ,  ಸರ್ವಾಂತರ್ಯಾಮಿ, ಸರ್ವಪ್ರೇರಕ ಎಂದು ಸಾಯಣಾಚಾರ್ಯರು  ಅರ್ಥೈಸಿದರೆ;  ಸಂಚರಿಸುವವನು, ಪ್ರೇರೇಪಿಸುವವನು, ಸೃಷ್ಟಿಸುವವನು ಎಂದು ಯಾಸ್ಪರು ವಿವರಿಸಿದ್ದಾರೆ.  ಸೂರ್ಯನ ಬಗ್ಗೆ  ವೇದಗಳಲ್ಲಿ   ವರ್ಣಿಸಿರುವ ಪ್ರಕಾರ ಕಣ್ಣಿಗೆ ಕಾಣುವ ದೇವತೆಯೆಂದರೆ ಅದು ಸೂರ್ಯನೆ.   ಸೂರ್ಯನನ್ನು  ಬ್ರಹ್ಮ ವಿಷ್ಣು ಮತ್ತು ಮಹೇಶ್ವರ  ಎಂದು ವರ್ಣಿಸಲಾಗಿದೆ.  ಸೂರ್ಯ ಅಥವಾ ಪೂಷನ್ ಪ್ರಧಾನ ವೈದಿಕ ದೇವತೆಗಳಲ್ಲಿ ಒಬ್ಬ.  ನಮ್ಮ ಪ್ರಾಚೀನ ಪದ್ಧತಿಯ ಪ್ರಕಾರ ಪಂಚ ದೇವತಾ ಉಪಾಸನೆಯಲ್ಲಿ ಸೂರ್ಯನೂ ಓರ್ವನಾಗಿರುತ್ತಾನೆ. ಹಾಗೆಯೇ, ಪುರಾಣಗಳಲ್ಲಿ, ರಾಮಾಯಣ  ಗ್ರಂಥಗಳಲ್ಲಿ ಸೂರ್ಯನ ಕುರಿತಾದ ವಿಪುಲವಾದ ಮಾಹಿತಿಯಿದೆ.   ರಾಮಾಯಣದಲ್ಲಿ  ಸೂರ್ಯಭಗವಾನನ ಕುರಿತಾಗಿ ಮಾಹಿತಿಯೆಂದರೆ ಸಾಕ್ಷಾತ್ ಶ್ರೀರಾಮ  ಸೂರ್ಯ ವಂಶದಲ್ಲಿ ಹುಟ್ಟಿದವನು.    ಹೇಗೆ  ಸೂರ್ಯನಿಲ್ಲದೆ ಒಂದು ದಿನವೂ  ಬೆಳಗುವುದಿಲ್ಲವೋ ಅಂತೆಯೇ ಶ್ರೀರಾಮನ  ನಾಮ ಜಪವಿಲ್ಲದೆ ಯಾರ ಮನೆಯಲ್ಲಿಯೋ  ದೈನಂದಿನ ಚಟುವಟಿಕೆ ಶುರುವಾಗುವುದೇ ಇಲ್ಲ.   ಸೂರ್ಯದೇವನ  ಮಹಿಮೆ ಹಾಗೂ ವಂಶದ ಕುರಿತಾಗಿ ಕೆಲವು ವಿಷಯಗಳನ್ನು ಪರಾ0ಬರಿಸಿ ಮುಂದಕ್ಕೆ ಸಾಗೋಣ. 


ಸೂರ್ಯನ ಪೂರ್ವಾಪರಗಳನ್ನು ಕುರಿತಾಗಿ  ತಿಳಿಯುವ ಮೊದಲು ಸೂರ್ಯ ಮಾಘ ಸಪ್ತಮಿಯ ದಿನದಂದು ರಥವೇರುವ  ವಿಚಾರದ ಮಹಿಮೆಯನ್ನು  ಸಂಕ್ಷಿಪ್ತವಾಗಿ  ಅರಿಯೊಣ.     ಜಗತ್ತಿನ ಅಂಧಕಾರವನ್ನು ಕಳೆದು  ಬೆಳಕನ್ನು ನೀಡಲು ಬಾನಲ್ಲಿ  ಬೆಳಗುತ್ತಿರುವ ಭಾಸ್ಕರನ ಆರಾಧನೆಯ ಪುಣ್ಯ ದಿನವೇ ರಥಸಪ್ತಮಿ.  ಮಕರ ಸಂಕ್ರಮಣ ಮತ್ತು ರಥಸಪ್ತಮಿ ಸೂರ್ಯನನ್ನು ಆರಾಧಿಸುವ ಹಬ್ಬಗಳು.  ಅಂದರೆ  ಮಾಘ ಮಾಸದ ಶುಕ್ಲಪಕ್ಷದ ಏಳನೆಯ ತಿಥಿಯ ದಿವಸ ಅರ್ಥಾತ್ ಸಪ್ತಮಿ ದಿನವೇ ರಥಸಪ್ತಮಿ.  ರಥಸಪ್ತಮಿಗೆ ‘ಮಾಘ ಸಪ್ತಮಿ’ ಎಂದೂ ಕರೆಯುತ್ತಾರೆ.   ಈ ದಿನವನ್ನೇ ಸೂರ್ಯ ಜಯಂತಿ ಎಂದೂ ಆಚರಿಸುತ್ತಾರೆ.  ರಥಸಪ್ತಮಿಯಂದು ಮೊದಲ ಸೂರ್ಯಕಿರಣ ಭೂಸ್ಪರ್ಶವಾದ ಕೂಡಲೇ ಬ್ರಹ್ಮಮಾನಸ ಪುತ್ರರು ಅರುಣ ಸೂಕ್ತವನ್ನು ಹೇಳುತ್ತಾರೆ.  ಸತ್ಯ ಲೋಕದಲ್ಲಿ ಮಹಾತಾಯಿ ಶಾರದೆ ವೀಣೆಯ ಝೇಂಕಾರ ಮಾಡುತ್ತಾಳೆ.  ಅಂತೆಯೇ ಸಾಗರದ ಅಲೆಗಳು ಉಕ್ಕೇರುವುದರ ಮೂಲಕ ಹರ್ಷವನ್ನು ವ್ಯಕ್ತಪಡಿಸುತ್ತವೆ.   ಈ ದಿನವನ್ನು ಸೂರ್ಯಾರಾಧನೆಗೆ ವಿಶೇಷ ಪರ್ವ ದಿನವೆಂದು  ಪರಿಗಣಿಸಿದ್ದಾರೆ.  ಅಂದು ಸೂರ್ಯನು ಸಮಭಾಜಕ ರೇಖೆಯನ್ನು ಉತ್ತರಾಭಿಮುಖವಾಗಿ ಹಾದು ಹೋಗುವ ಸಮಯವಾಗಿರುತ್ತದೆ. ಅಂದರೆ ಅಂದಿನಿಂದ ಹಗಲು ಮತ್ತು ರಾತ್ರಿಗಳೆರಡು ಸಮ ಪ್ರಮಾಣದಲ್ಲಿ ಇರುತ್ತದೆ.  ಇನ್ನು ಸ್ವಲ್ಪ ವಿವರವಾಗಿ ಹೇಳಬೇಕೆಂದರೆ, ರಥಸಪ್ತಮಿ ಎಂದರೆ ಸೂರ್ಯ ಭಗವಾನನು ಚಾಂದ್ರಮಾನ ಸಂವತ್ಸರದ  ಹನ್ನೊಂದನೆಯ ಮಾಸದಲ್ಲಿ  ಅಂದರೆ ಮಾಘ ಉತ್ತರ ದಿಕ್ಕಿನಲ್ಲಿ ಮಾಸದ ಶುಕ್ಲ ಪಕ್ಷದ  ಸಪ್ತಮಿ ತಿಥಿಯ ದಿನದಂದು ಸಪ್ತಾಶ್ವಗಳಿಂದ ಸಜ್ಜಾದ ರಥವನ್ನೆರುವ ದಿವಸಕ್ಕೆ ರಥ ಸಪ್ತಮಿ ಎಂದು ಕರೆಯುತ್ತಾರೆ.


ಹೇಗೆ ಮಹಾವಿಷ್ಣುವಿಗೆ ತುಳಸಿಯು ಪ್ರಿಯವಾದುದಾಗಿದೆಯೋ ಹಾಗೆ  ಸೂರ್ಯ ಭಗವಾನನಿಗೆ  ಎಕ್ಕ (ಅರ್ಕ) ಸಸ್ಯವು ಪ್ರಿಯವಾದುದಾಗಿದೆ.  ರಥಸಪ್ತಮಿ ದಿನದಂದು  ಸೂರ್ಯೋದಯಕ್ಕೆ ಮುನ್ನವೇ ಸ್ನಾನ ಮಾಡುವಾಗ ಏಳು ಬಿಳಿ ಎಕ್ಕದ ಎಲೆಗಳನ್ನು ದೇಹದ ಅಂಗಗಳ ಮೇಲೆ ಇಟ್ಟುಕೊಂಡು ಸೂರ್ಯನನ್ನು ಧ್ಯಾನ ಮಾಡುತ್ತಾ ಸ್ನಾನವನ್ನು ಮಾಡಬೇಕು.   ಸ್ನಾನವನ್ನು ಮಾಡುವಾಗ ಮಂತ್ರವನ್ನು ಹೇಳಿಕೊಳ್ಳಬೇಕು.  ಸೂರ್ಯ ಉದಯಿಸುವುದಕ್ಕೂ ಮುನ್ನವೇ ತಲೆ, ಭುಜ, ಕತ್ತು,  ಕಂಕುಳ, ತೊಡೆ ಪಾದಗಳ ಮೇಲೆ ಬಿಳಿ ಎಕ್ಕದ ಎಲೆಯನ್ನು (ಶ್ವೇತಾರ್ಕ) ಇಟ್ಟುಕೊಂಡು ಅಭ್ಯಂಜನ ಸ್ನಾನವನ್ನು ಮಾಡಬೇಕು.   ರಥಸಪ್ತಮಿಯ ದಿವಸ ಎಕ್ಕದ ಎಲೆಗಳ ಸ್ನಾನ ಸಮಯದಲ್ಲಿ ಹೇಳಿಕೊಳ್ಳಬೇಕಾದ ಶ್ಲೋಕ :   ಸಪ್ತ ಸಪ್ತ ಮಹಾಸಪ್ತ | ಸಪ್ತದ್ವೀಪಾ  ವಸುಂಧರಾ |  ಸಪ್ತಾರ್ಕ ಪರ್ಣಮಾದಾಯ  ಸಪ್ತಮ್ಯಾಂ ಸ್ನಾನಂ ಮಾಚರೇತ್ ||  ಅದೇ ರೀತಿ ಮತ್ತೊಂದು ಮಂತ್ರ:    ಯದ್ಯಜ್ಜನ್ಮಕೃತ0 ಪಾಪಂ ಮಯಾ ಸಪ್ತಸು ಜನ್ಮಸುತನ್ಮೇ  |  ರೋಕ0 ಚ  ಶೋಕ0 ಚ  ಮಾಕರೀ ಹಂತು ಸಪ್ತಮೀ ||  ಈ ರೀತಿ ಮಂತ್ರ ಜಪ ಮಾಡಿ ಸ್ನಾನವನ್ನು ಮಾಡುವುದರಿಂದ ಏಳು ಜನ್ಮದ ಕಾಯಕಾದಿ ಏಳು ವಿಧವಾದ ಆಪ ನಿವೃತ್ತಿಯಾಗುತ್ತದೆ. ಸ್ನಾನ ನಔತರ ಶುದ್ಧ ವಸ್ತ್ರಗಳನ್ನು ಧರಿಸಿ  ಪೂರ್ವಾಭಿಮುಖವಾಗಿ ಪ್ರತ್ಯಕ್ಷ ದೈವವಾದ ಸೂರ್ಯ ದೇವನಿಗೆ ನಮಸ್ಕರಿಸಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.    “ಸಪ್ತಮೀ  ಸಹಿತೋ  ದೇವಾ ಗೃಹಣಾರ್ಘ್ಯಂ  ದಿವಾಕರಃ” ಎನ್ನುವ ಈ ಶ್ಲೋಕವನ್ನು  ಶ್ರದ್ದಾಭಕ್ತಿಯಿಂದ ಜಪಿಸುತ್ತಾ ಶ್ರೀ ಸೂರ್ಯನಾರಾಯಣ ಅರ್ಘ್ಯವನ್ನು ಪ್ರಧಾನಿಸಬೇಕು.   ರಥಸಪ್ತಮಿ ವ್ರತಾಚರಣೆಯ ಸಮಯದಲ್ಲಿ ಶ್ರೀ ಕೃಷ್ಣ ಭಗವಾನ ಯುಧಿಷ್ಟರನಿಗೆ  ಹೇಳಿ ಕೊಟ್ಟ ಸೂಕ್ತಗಳನ್ನು ಭಕ್ತಿಯಿಂದ ಜಪಿಸಬೇಕು.  ಅರ್ಥಾತ್ ಸೂರ್ಯ ಸೂಕ್ತ,  ಪುರುಷ ಸೂಕ್ತ, ಅರುಣ ಸೂಕ್ತ, ಭಾಸ್ಕರ ಶತಪದಿ,  ನಾರಾಯಣ ಸೂಕ್ತ,   ಆದಿತ್ಯ ಹೃದಯ ಪಾರಾಯಣೆ, ಗಾಯತ್ರಿ ಸೂರ್ಯ ಶತಕಮ್,  ಸೂರ್ಯ ಸಹಸ್ರನಾಮ ಜಪವನ್ನು  ಜಪಿಸಿ ಸೂರ್ಯ ಭಗವಾನನ ಉಪಾಸನೆಯನ್ನು ಮಾಡುತ್ತಾರೆ.  


ಸೂರ್ಯದೇವನ ಪೂರ್ವಪರಗಳು:  ನಮ್ಮ ಭಾರತದ ಸೂರ್ಯನ ಜನ್ಮ ಸ್ಥಳ:  ಕಳಿಂಗ ದೇಶ ; ಸೂರ್ಯನ ಜನ್ಮ ದಿನಾಂಕ: ಪ್ರಭವ ಸಂವತ್ಸರ, ಮಾಘ ಮಾಸ, ಶುಕ್ಲ ಪಕ್ಷ , ಸಪ್ತಮಿ ದಿವಸ ; ಸೂರ್ಯನ ನಕ್ಷತ್ರ:  ವಿಶಾಖ ; ಸೂರ್ಯನ ಗೋತ್ರ:  ಕಾಶ್ಯಪಸ  ; ಸೂರ್ಯನ ಪರಂಪರೆ:   ವಿಶ್ವಾಮಿತ್ರ ; ಸೂರ್ಯನ ಶರೀರ ವರ್ಣ: ಪದ್ಮ ವರ್ಣ (ಕೆಂಪು) ; ಮಂಡಲದ ಆಕಾರ :  ವರ್ತುಲಾಕಾರ ಪ್ರತಿಷ್ಟಾಪನ ಸ್ಥಾನ: ಮಧ್ಯ ;  ದಕ್ಷಿಣೆ : ಕಪಿಲಧೇನು (ಕೆಂಪು ಹಸು) ; ಹಸ್ತಗಳು:  ಎರಡು ; ದಿಕ್ಕು:  ಪೂರ್ವ ; ಧಾನ್ಯ: ಗೋಧಿ ;  ಪುಷ್ಪ: ಕೆಂಪು ತಾವರೆ ; ರಥ : ಏಕಚಕ್ರ, ರಕ್ತರಥ ; ಪತ್ನಿಯರು:  ಸಂಜ್ಞಾ,  ಛಾಯ ; ಪ್ರತ್ಯಧಿ ದೇವತೆ: ರುದ್ರ ; ಜಪ ಸಂಖ್ಯೆ :  7,000 (ಪ್ರತಿದಿನ) ; ಹೋಮ ಸಂಖ್ಯೆ: 700 ; ತರ್ಪಣ ಸಂಖ್ಯೆ 70 ; ಸಮಿತ್ತು:  ಅರ್ಕ, (ಬಿಳಿ ಎಕ್ಕ) ;  ಶಕ್ತಿ ದೇವತೆ:  ರೇಣುಕ ; ರವಿಯ ಲೋಹ : ಮಾಣಿಕ್ಯ ; ರವಿಯ ದೇಹ: ಶಿರಸ್ಸು; ರವಿಯ ಶಕ್ತಿ:  ಆತ್ಮಶಕ್ತಿ ;  ಗ್ರಹದ ಲಿಂಗ :  ಪುರುಷ ; ಗ್ರಹ ಶಾಂತಿಗೆ :ರವಿವಾರ, ಹಸ್ತ ನಕ್ಷತ್ರ ; ಗುಣ:  ರಜೋಗುಣ.   ಸೂರ್ಯ ದೇವನ ವಂಶಾವಳಿಯ ಕುರಿತಾಗಿ ಹೇಳುವುದಾದರೆ: ಸೂರ್ಯ ಹಾಗೂ ಸಂಜ್ಞಾ ದೇವಿಗೆ ಹುಟ್ಟಿದ ಮಕ್ಕಳು, ವೈವಸ್ವತ ಮನು, ಯಮ, ಯಮುನಾ, ಅಶ್ವಿನಿ ಕುಮಾರರು ಹಾಗೂ ರೇವಂತ.   ಅಂತೆಯೇ ಸೂರ್ಯ ಹಾಗೂ ಛಾಯಾರಿಗೆ ಹುಟ್ಟಿದ ಮಕ್ಕಳು; ಸಾವರ್ಣಿಕ (ಸಾವರ್ಣಿ) ಮನು, ಶನಿ, ತಪತಿ ಹಾಗೂ ವಿಷ್ಟಿ (ಭದ್ರಾ). 


ಇನ್ನು ಸೂರ್ಯನ ತೇಜಸ್ಸಿನ ಕುರಿತಾಗಿ ಹೇಳುವುದಾದರೆ,  ಪರಮ ದಿವ್ಯ ತೇಜಸ್ಸಿನ ರಾಶಿಯೇ   ಸೂರ್ಯ ಭಗವಾನ. ಅವನ ದೀಪ್ತಿಮಯವಾದ ಪ್ರಭಾವಶಕ್ತಿಯಿಂದ ಸಮಸ್ತ ಲೋಕಗಳೂ ದೀಪ್ತಿಯನ್ನು ಪಡೆದಿವೆ.  ಸೂರ್ಯದೇವನ ಸಂಪೂರ್ಣ ತೇಜೋಮಂಡಲವು ಎರಡು ಭಾಗಗಳಾಗಿ ಬೆಳಗುತ್ತಿದೆ.  ಅದರಲ್ಲಿ ಒಂದು ಭಾಗವು  ಪೃಥ್ವಿಯಿಂದ ಬ್ರಹ್ಮಲೋಕ ಪರ್ಯಂತವಾದ ಭಾಗವನ್ನು ಬೆಳಗುತ್ತಿದೆ. ಮತ್ತೊಂದು ಭಾಗವು ಪಾತಾಳ ಪರ್ಯಂತವಾಗಿ ವ್ಯಾಪಿಸಿಕೊಂಡು ಬೆಳಗುತ್ತಿದೆ. ಈ ರೀತಿಯಾಗಿ ಸೂರ್ಯದೇವನ ಸಮಗ್ರವಾದ ತೇಜೋ ಮಂಡಲದಿಂದ ಹದಿನಾಲ್ಕು ಲೋಕಗಳಲ್ಲಿರುವ ಲೋಕಗಳಲ್ಲಿರುವ ಸಮಸ್ತ ಪ್ರಾಣಿಗಳಲ್ಲಿ ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳು  ಉದ್ದೀಪನಗೊಂದು ಕಾರ್ಯವನ್ನು ನಿರ್ವಹಿಸುತ್ತವೆ.    ಸೂರ್ಯ ಭಗವಾನನಲ್ಲಿ ಎರಡು ವಿಧವಾದ ಅದ್ಭುತ ಶಕ್ತಿಗಳು ತುಂಬಿವೆ.  ಆ ಶಕ್ತಿಗಳನ್ನು ಸೂರ್ಯ ದೇವನ ಈರ್ವರು ಪತ್ನಿಯರನ್ನಾಗಿಸಿ ವರ್ಣಿಸಲಾಗಿದೆ.   ಒಂದು ಸಂಜ್ಞ ಎನ್ನುವ ಶಕ್ತಿ ಮತ್ತೊಂದು ಛಾಯಾ ಎನ್ನುವ ಶಕ್ತಿ.   ಒಂದು ಶಕ್ತಿ  ಸೂರ್ಯನ ವಿದ್ಯಾಮಯವಾದ ಶಕ್ತಿಯಾಗಿದೆ.  ಮತ್ತೊಂದು ಆ ಸೂರ್ಯನ ಕ್ರಿಯಾಮಯ ಶಕ್ತಿಯಾಗಿದೆ.


ಶ್ರೀ ಸೂರ್ಯ ಭಗವಾನ ಮತ್ತು ಸೂರ್ಯ ವಂಶದ ಶ್ರೀರಾಮರಲ್ಲಿನ ಹೋಲಿಕೆ:  ಮಹಾವಿಷ್ಣುವು, ಗ್ರಹಗಳಲ್ಲಿನ ಅನೇಕ ಒಳ್ಳೆಯ ಗುಣಗಳನ್ನು ತನ್ನಲ್ಲಿ ಅಳವಡಿಸಿಕೊಂಡು ಲೋಕ ಕಲ್ಯಾಣಾರ್ಥವಾಗಿ  ಅನೇಕ ಜನ್ಮಗಳನ್ನು  ಎತ್ತಿದ್ದಾನೆ.  ಉದಾಹರಣೆಗೆ ಸೂರ್ಯ ವಂಶದಲ್ಲಿ ಶ್ರೀ ರಾಮಚಂದ್ರನಾಗಿ, ಅಂತೆಯೇ ಚಂದ್ರ ವಂಶದಲ್ಲಿ ಶ್ರೀ ಕೃಷ್ಣ ಪರಮಾತ್ಮನಾಗಿ ಜನಿಸಿ ಲೋಕ ಕಲ್ಯಾಣವನ್ನು ಮಾಡಿರುವುದು.    ಪರಾಶರ ಮುನಿಗಳು ತಮ್ಮ “ಬೃಹತ್ ಪರಾಶರ ಹೋರಾಶಾಸ್ತ್ರ”  ಶ್ರೀರಾಮನನ್ನು ಸೂರ್ಯ ಭಗವಾನನಿಗೆ ಅತಿ ಸಾಮಿಪ್ಯದಲ್ಲಿ ಹೋಲಿಸಿದ್ದಾರೆ. ಇಡೀ ವಿಶ್ವಕ್ಕೆ ಸೂರ್ಯನೇ ಒಡೆಯ.   ಶ್ರೀರಾಮನ ಜಾತಕವನ್ನು ಪರಾಮರ್ಶಿಸಿದಾಗ ಸೂರ್ಯನ ಜಾಣ್ಮೆಯ ಗುಣಗಳು ಶ್ರೀರಾಮನ ಜಾತಕದಲ್ಲಿ ಕಂಡು ಬರುತ್ತದೆ.  ಸೂರ್ಯಭಗವಾನನ  ಕರ್ತವ್ಯ ನಿಷ್ಟೆ .  ಅದೇ ರೀತಿ ರಾಮ ಕೂಡ ತನ್ನ ಜೀವನದಲ್ಲಿ ಕರ್ತವ್ಯಕ್ಕೆ ಆದ್ಯತೆ ಕೊಟ್ಟವನು ಹಾಗೂ ಒಂಟಿ ಜೀವನವನ್ನು ಅನುಭವಿಸಿದವನು.  ಶ್ರೀರಾಮ ಹಾಗೂ ಸೂರ್ಯ ಇಬ್ಬರೂ ಕ್ಷತ್ರಿಯ ವರ್ಗಕ್ಕೆ ಸೇರಿದವರು ಹಾಗೂ ಅಗ್ನಿ ತತ್ವವನ್ನು ಪ್ರತಿನಿಧಿಸುತ್ತಾರೆ.  ಪ್ರಜಾ ಪಾಲನೆಯೇ ಕ್ಷತ್ರಿಯ ವರ್ಗದ ಮುಖ್ಯ ಧರ್ಮ.  ಅಂತೆಯೇ ಜಾಣ್ಮೆ, ನಾಯಕತ್ವ, ಧೈರ್ಯ ರಣರಂಗದಲ್ಲಿ ಮುನ್ನುಗ್ಗುವಿಕೆ  ಇವು ಕ್ಷತ್ರಿಯ ವರ್ಗದಲ್ಲಿ ಕಂಡು ಬರುವ ಪ್ರಮುಖ ಗುಣಗಳು.  ಸೂರ್ಯನಂತೆ ರಾಮನು ನಂಬಿ ಬಂದವರಿಗೆ ದಾನಿಯಾಗಿದ್ದ.  ಈ ರೀತಿಯಾಗಿ ಸೂರ್ಯನ ಎಲ್ಲಾ ಗುಣಗಳನ್ನು ರಾಮ ತನ್ನಲ್ಲಿ ಹೊಂದಿದ್ದ.   ಸೂರ್ಯನ ಇನ್ನೊಂದು ನಾಮಧೇಯವೇ ‘ರವಿ’.  ರಾಮ ಮತ್ತು ರವಿ ಈ ಎರಡೂ ಹೆಸರಿನಲ್ಲಿ ‘ರ’ ಕಾರವಿದೆ.  ‘ರ’ ಅಕ್ಷರದ ಶಬ್ದವು   ಅಗ್ನಿಯನ್ನು ಸೃಷ್ಟಿಸುತ್ತದೆ.    ರವಿ ಎಂದರೆ ಬೆಳಕು.  ಆ ಬೆಳಕನ್ನು ನೀಡುವವನು ರಾಮ.    ‘ರ’ ಎನ್ನುವ ಅಕ್ಷರಕ್ಕೆ, ಬೀಜಾಕ್ಷರ ‘ರಂ’ ಆಗಿದೆ.  ‘ರಂ’ ಬೀಜಾಕ್ಷರಿ ಮಂತ್ರವು ರಾಮನಾಗಿದೆ.    ಮಾನವನ ಚಕ್ರದ ಮೂರನೇ ಚಕ್ರವೇ ಮಣಿಪುರ ಚಕ್ರ.   ಇದರ ಶಬ್ದವೇ ‘ರಂ’.   ಮಣಿಪುರ ಚಕ್ರವು ಶಕ್ತಿ, ಸಾಧನೆ, ಆತ್ಮಶಕ್ತಿ, ಅಧಿಕಾರ ಇವುಗಳ ಕೇಂದ್ರ ಬಿಂದುವಾಗಿದೆ.   ಮಣಿಪುರ ಚಕ್ರದಲ್ಲಿರುವ  ಅಗ್ನಿ ತತ್ವ ಜೀವನದಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ   ಅಂತೆಯೇ ಸೂರ್ಯನ ಉಚ್ಚ ಸ್ಥಾನವೇ ಮಣಿಪುರ ಚಕ್ರ.   ರಾಮ, ಸೂರ್ಯ ಹಾಗೂ ಮಣಿಪುರ ಚಕ್ರ, ಈ ಮೂರರಲ್ಲೂ ಅಗ್ನಿ ತತ್ವ ಕಂಡುಬರುತ್ತದೆ.


ಸೂರ್ಯ ಭಗವಾನನ ವಂಶಜನಾದ ಶ್ರೀರಾಮಚಂದ್ರನ ಪೂರ್ವಜರ  ನಾಮಾವಳಿಗಳು : ವಿಷ್ಣುವಿನ ನಾಭಿ ಕಮಲದಿಂದ ಬ್ರಹ್ಮ ; ಬ್ರಹ್ಮನಿಂದ ಮರೀಚಿಯ ಜನನ ; ಮರೀಚಿಯ ಮಗ  ಕಾಶ್ಯಪ ; ಕಾಶ್ಯಪನ ಮಗ ಸೂರ್ಯ ; ಸೂರ್ಯನ ಮಗ ಮನು ; ಮನುವಿನ ಮಗ ಇಕ್ಷ್ವಾಸು (ಕು)  ; ಇಕ್ಷ್ವಾಸುವಿನ ಮಗ ಕುಕ್ಷಿ  ; ಕುಕ್ಷಿಯ ಮಗ ವಿಕುಕ್ಷಿ  ; ವಿಕುಕ್ಷಿಯ ಮಗ ಬಾಣ  ;  ಬಾಣನ ಮಗ ಅನರಣ್ಯ ; ಅನರಣ್ಯನ ಮಗ ಪೃಥು ; ಪೃಥುವಿನ ಮಗ ತ್ರಿಶಂಕು  ; ತ್ರಿಶಂಕುವಿನ ಮಗ (ಯುವನಾಶ್ವ) ದುಂಧುಮಾರ  ; ಧು0ಧುಮಾರುವಿನ ಮಗ ಮಾಂಧಾತೃ ; ಮಾಂಧಾತೃವಿನ ಮಗ ಸುಸಂಧಿ  ;     ಸುಸಂಧಿಯ ಮಗ ಧೃವಸಂಧಿ  ;   ಧೃವಸಂಧಿಯ ಮಗ ಭರತ  ;   ಭರತನ ಮಗ ಅಶೀ(ಸೀ)ತ  ; ಅಶೀತನ ಮಗ ಸಗರ   ; ಸಗರನ  ಮಗ ಅಸಮಂಜ    ; ಅಸಮಂಜನ ಮಗ ಅಂಶುಮಂತ  ;  ಅಂಶುಮಂತನ ಮಗ ದಿಲೀಪ  ;   ದಿಲೀಪನ ಮಗ ಭಗೀರಥ ;   ಭಗೀರಥನ ಮಗ ಕಾಕುತ್ಸು  ;     ಕಾಕುತ್ಸುವಿನ ಮಗ ರಘು   ; ರಘುವಿನ ಮಗ ಪ್ರವುರ್ಧ  ;   ಪ್ರವುರ್ಧನ ಮಗ ಶಂಭಣ  ;   ಶಂಭಣನ  ಮಗ ಸುದರ್ಶನ ;    ಸುದರ್ಶನನ ಮಗ ಅಗ್ನಿವರ್ಣ  ; ಅಗ್ನಿವರ್ಣನ ಮಗ ಶೀಘ್ರವೇದ   ;   ಶೀಘ್ರವೇದನ ಮಗ ಮರು ;    ಮರುವಿನ ಮಗ ಪ್ರಶುಶ್ರಕ             ; ಪ್ರಶುಶ್ರಕನ ಮಗ ಅಂಬರೀಷ  ;   ಅಂಬರೀಷನ ಮಗ ನಹುಷ  ;   ನಹುಷಣ ಮಗ ಯಯಾತಿ ;     ಯಯಾತಿಯ ಮಗ ನಾಭಾಗ  ;  ನಾಭಾಗನ ಮಗ ಅಜ  ; ಅಜನ ಮಗ ದಶರಥ   ;  ದಶರಥನ ಮಕ್ಕಳು ಶ್ರೀರಾಮ, ಲಕ್ಷ್ಮಣ, ಭರತ, ಶತ್ರುಘ್ನ .   


ಆದಿತ್ಯ ಹೃದಯದ ವಿಶೇಷತೆಗಳು :  ಶ್ರೀರಾಮ ಹಾಗೂ ಶ್ರೀ ಸೂರ್ಯ ಭಗವಾನನ ಮಹಿಮೆ ತಿಳಿಸುವ ಪ್ರಸಂಗವೇ ಆದಿತ್ಯ ಹೃದಯ ಸ್ತೋತ್ರ.   ಆ ಪ್ರಸಂಗವನ್ನು ಪರಾಂಬರಿಸೋಣ.  ಅಜೇಯತ್ವದ ವರವನ್ನು ಪಡೆದಿರುವ ರಾವಣನನ್ನು ಸೋಲಿಸುವ ಕುರಿತಾಗಿ  ಚಿಂತಾಕ್ರಾಂತನಾಗಿರುವ ಸಮಯದಲ್ಲಿ ಅಗಸ್ತ್ಯ ಮಹರ್ಷಿಗಳು ಶತ್ರುವನ್ನು ಜಯಿಸುವ ದ್ವಂದ್ವವನ್ನು ದಾಟುವ ಸನಾತನ ರಹಸ್ಯವನ್ನು ರಾಮನಿಗೆ ಉಪದೇಶಿಸುತ್ತಾರೆ.  ಅದೇ ಆದಿತ್ಯ ಹೃದಯಮ್.  ಸೂರ್ಯನ  ಆರಾಧನೆಯಿಂದ ಆತ್ಮವಿಶ್ವಾಸ ವೃದ್ಧಿಸುತ್ತದೆ. ಮನಸ್ಸಿನಲ್ಲಿ ಉಂಟಾಗಿಸುವ ಉಹಾಭಾವನೆಗಳನ್ನು  ಸಮತೋಲನೆಗೊಳ್ಳುತ್ತದೆ.  ಆ ಕಾರಣ ಸೂರ್ಯನನ್ನು  ‘ತಮೋ ವೃತ್ತಿ ನಿವಾರಕ’ ಎನ್ನುತ್ತಾರೆ.  ಅದಕ್ಕೆ  ಸೂರ್ಯನ ಕಿರಣಗಳಿಗೆ ಮೈ ಒಡ್ಡುವುದರಿಂದ ತಾಮಸಿಕ ಪ್ರವೃತ್ತಿಗಳಾದ ಆಲಸ್ಯ ಹಾಗೂ ಜಡತ್ವಗಳು ನಿರ್ಮೋಲವಾಗುತ್ತದೆ.  ಈ ಬೋಧನೆಯ ನಂತರ ರಾಮನಲ್ಲಿ ನವ ಚೈತನ್ಯ ಉಂಟಾಗಿ ರಾವಣನನ್ನು ಸೋಲಿಸಲು ಅನುಕೂಲವಾಯಿತು.  ‘ಆದಿತ್ಯ ಹೃದಯ’  ಕೇವಲ ಸೂರ್ಯನ ಗುಣಗಾನಗಳನ್ನಷ್ಟೇ ಮಾಡುವುದಿಲ್ಲ.  ಅದರೊಂದಿಗೆ ಸೂರ್ಯನೊಳಗಿನ ವೈಜ್ಞಾನಿಕ  ತಿಳಿವನ್ನು ನಮ್ಮ ಮುಂದಿಡುತ್ತದೆ.    ಆದಿತ್ಯ ಹೃದಯವನ್ನು ಸ್ತುತಿಸುವುದರಿಂದ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಪ್ರಸನ್ನರಾಗುತ್ತಾರೆ.  ಹೀಗಾಗಿ ಆದಿತ್ಯನು  ಸೃಷ್ಟಿ, ಸಂಹಾರ, ಸ್ಥಿತಿಗಳನ್ನು ನಡೆಸುವ ಜಗದೀಶ್ವರ ಎಂಬ ತಾತ್ವಿಕವು ಅರ್ಥವಾಗುತ್ತದೆ.  ಆದಿತ್ಯ ಎಂದರೆ ‘ಸರ್ವ ದೇವಾತ್ಮಿಕ’,   ‘ಸಮಸ್ತ ದೇವತಾ ಸ್ವರೂಪ’.   ಅವನೇ ಬ್ರಹ್ಮೇಶಾನಾಚ್ಯುತೇಶಾಯ.  ವಾಲ್ಮೀಕಿ ರಾಮಾಯಣದ ಯುದ್ಧಕಾಂಡದಲ್ಲಿ ಬರುವ 31 ಶ್ಲೋಕಗಳ ‘ಆದಿತ್ಯ ಹೃದಯ’ ಸ್ತೋತ್ರ’ ಪಾರಾಯಣ ಆರೋಗ್ಯಕ್ಕೆ ಪೂರಕವಾಗಿದೆ.   ಆದಿತ್ಯ ಹೃದಯದಲ್ಲಿ ಕಂಡು ಬರುವ ಒಟ್ಟು 125 ನಾಮಗಳು ಭಗವತ್ ಪೂಜಾ ರಹಸ್ಯ ನಾಮ ಮಂತ್ರಗಳು. ಹೀಗಾಗಿ ಆದಿತ್ಯ ಹೃದಯದ ಒಂದೊಂದು ಶಬ್ದವೂ ಪರಮ ಪವಿತ್ರ, ಸದಾ ಪಠನೀಯ.  (ಜೈ ಶ್ರೀ ರಾಮ್)

 

-ಶ್ರೀಕಾಂತ್ ಶ್ರೀನಿಧಿ


ವಿಳಾಸ: ಸಂಖ್ಯೆ 584, ಅಪ್ರಮೇಯ, ಮೊದಲನೇ ಮಹಡಿ,   6 ನೇ ತಿರುವು,  ಪಾದುಕ ಮಂದಿರದ ಹತ್ತಿರ

ಲೇಔಟ್, ವಜ್ರಮುನಿ ನಗರ, ಮೊದಲ ಹಂತ, ತುರೆಹಳ್ಳಿ, ಉತ್ತರಹಳ್ಳಿ, ಬೆಂಗಳೂರು -560061. 

ಮೊಬೈಲ್ ಸಂಖ್ಯೆ :  98455 93840; ಮಿಂಚಂಚೆ : dcy@rediffmail.com   



ಲೇಖಕರ  ಕಿರು ಪರಿಚಯ:  ಬೆಂಗಳೂರಿನಲ್ಲಿ  ಜನನ, ತಂದೆ ಕೆ.ಎಸ್ ದ್ವಾರಕಾನಾಥ್, ಕರ್ನಾಟಕ ವಿದ್ಯುಚ್ಹಕ್ತಿ ಇಲಾಖೆಯಲ್ಲಿ ಅಭ್ಯಂತರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.  ತಾಯಿ ಶ್ರೀಮತಿ ಗೀತಾ ದ್ವಾರಕಾನಾಥ ರವರು ಧಾರ್ಮಿಕ ನೆಲೆಗಟ್ಟಿನಲ್ಲಿ ಬೆಳೆದವರು ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದಾರೆ.  ಶ್ರೀಕಾಂತ್ ಶ್ರೀನಿಧಿ ರವರು ತಮ್ಮ ಬಿ.ಇ. ಪದವಿಯನ್ನು ಪಡೆದು ಇಷಾ  ಡಿಸೈನ್ಸ್ ಎನ್ನುವ ವಿದ್ಯುಚ್ಹಕ್ತಿ  ಕ್ಷೇತ್ರಕ್ಕೆ  ಸಂಬಂಧಿಸಿದ  ತಾಂತ್ರಿಕ ಸಲಹಾ ಕೇಂದ್ರವನ್ನು   ನಡೆಸುತ್ತಿದ್ದಾರೆ.    ಬಾಲ್ಯದಿಂದಲೇ ಸನಾತನ ಧರ್ಮ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅಭಿರುಚಿಯನ್ನು ಬೆಳೆಸಿಕೊಂಡಿದ್ದು, ಅನೇಕ ಆನ್ಲೈನ್  ಸಂಪರ್ಕಗಳಿಂದ ತಮ್ಮನ್ನು ತಾವೇ ತೊಡಿಗಿಸಿಕೊಂಡಿದ್ದು ಸಕ್ರಿಯವಾಗಿ ಭಾಗವಹಿಸುತ್ತಿದ್ದು ತಮ್ಮ ಜ್ಞಾನವನ್ನು  ಹಂಚಿಕೊಳ್ಳುತ್ತಿದ್ದಾರೆ.  ಸೂರ್ಯ ಭಗವಾನನ ಆರಾಧಕರಾದ  ಇವರು  ಈಗ ಸೂರ್ಯಭಗವಾನನ ಹಾಗೂ ಶ್ರೀರಾಮಚಂದ್ರನ  ಕುರಿತಾದ ವಿಶ್ಲೇಷಾತ್ಮಕ ವಿಚಾರ ಧಾರೆಯೊಂದಿಗೆ  ರಥ ಸಪ್ತಮಿ ಹಾಗೂ ಆದಿತ್ಯ ಹೃದಯದ ಮಹಿಮೆಯನ್ನು ಸಂಕ್ಷಿಪ್ತವಾಗಿ ವ್ಯಾಖ್ಯಾನಿಸಿದ್ದಾರೆ.     


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top