ಶ್ರೀರಾಮ ಕಥಾ ಲೇಖನ ಅಭಿಯಾನ-57: ರಾಮಾಯಣದಲ್ಲಿ ಆಧ್ಯಾತ್ಮಿಕತೆ -ಒಂದು ಚಿಂತನೆ

Upayuktha
0


- ಡಾ. ರೂಪಶ್ರೀ ಶಶಿಕಾಂತ್, ದಾವಣಗೆರೆ


ಮ್ಮ ಗ್ರಂಥಗಳಲ್ಲಿ ಕಥೆಯ ರೂಪದಲ್ಲಿ ಮಹರ್ಷಿಗಳು ನಾವು ಅಳವಡಿಸಿಕೊಳ್ಳಬೇಕಾದ ತತ್ವಗಳನ್ನು ತುಂಬಿಟ್ಟಿದ್ದಾರೆ. ಅಂತಹ ಒಂದು ದಿವ್ಯ ಗ್ರಂಥ ರಾಮಾಯಣ. ಮನುಷ್ಯನಿಗೆ ಬರಬಹುದಾದ ತೊಂದರೆಗಳು ಅದನ್ನು ಅವನು ಹೇಗೆ ತಡೆದುಕೊಳ್ಳಬೇಕು ಅದರಿಂದ ಹೇಗೆ ಪಾರಾಗಬೇಕು ಯಾವ ಮನೋಭಾವದಿಂದ ಜೀವಿಸಬೇಕು ಎಲ್ಲದನ್ನು ರಾಮಕಥೆಯ ಮೂಲಕ ತಿಳಿಸಿಕೊಟ್ಟಿದ್ದಾರೆ. ಕ್ರೌಂಚ ಪಕ್ಷಿಗಳ ವಿಯೋಗದಿಂದ ಆದ ದುಃಖದಿಂದ ಹೊರಹೊಮ್ಮಿದ ಈ ಮಹಾಕಾವ್ಯದಲ್ಲಿ ಅನೇಕ ವಿಯೋಗದ ದುಃಖಗಳನ್ನು ನಾವು ಕಾಣಬಹುದು. ಶ್ರವಣ ಕುಮಾರನ ಕಥೆಯಲ್ಲಿ ತಂದೆ ತಾಯಿಯಿಂದ ಸದ್ಗುಣಪೂರ್ಣನಾದ ಮಗನ ವಿಯೋಗ ಅದರಿಂದ ಅವರಿಗಾದ ನೋವು ಮತ್ತು ಶಾಪ. ಮತ್ತೆ ದಶರಥನಿಂದ ರಾಮನ ವಿಯೋಗ ರಾಮನಿಂದ ಸೀತೆಯ ವಿಯೋಗ ಹೀಗೆ ನೋವಿನ ಪ್ರೀತಿಯ ಭಕ್ತಿಯ ತ್ಯಾಗದ ಅನೇಕ ಸನ್ನಿವೇಶಗಳು ಬರುತ್ತವೆ.


ಆಧ್ಯಾತ್ಮಿಕವಾಗಿ ಅಶಾಶ್ವತವಾದ ದೇಹ, ಶಾಶ್ವತವಾದ ಆತ್ಮ. ಪ್ರೀತಿಯ ಬಾಂಧವ್ಯ ಎಷ್ಟಿದ್ದರೂ ಪ್ರೀತಿಪಾತ್ರರು ದೂರವಾದಾಗ ಸಹಿಸಲಾರದಷ್ಟು ದುಃಖ ಬರುತ್ತದೆ. ಕೇವಲ ಆತ್ಮ ಭಾವದಿಂದ, ನಾವು ಈ ನೋವನ್ನು ತಡೆದುಕೊಳ್ಳಲು ಸಾಧ್ಯ. ನಮ್ಮ ಜೀವನದ ಮುಖ್ಯ ಉದ್ದೇಶ ಪರಮಾತ್ಮನನ್ನು ಸೇರುವುದು. ಈ ಜನನ ಮರಣ ಚಕ್ರದಿಂದ ಪಾರಾಗುವುದು. ಅದಕ್ಕಾಗಿ ನಾವು ಹೇಗೆ ಬಾಳಬೇಕು ಯಾವುದರಿಂದ ನಮಗೆ ಶ್ರೇಯಸ್ಸು ಏನು ಮಾಡಬಾರದು ಎಲ್ಲವನ್ನು ರಾಮಾಯಣ ಚಿತ್ರಿಸಿ ಕೊಡುತ್ತದೆ.


ಈ ಲೇಖನದಲ್ಲಿ ರಾಮಾಯಣದ ಕೆಲವು ಸನ್ನಿವೇಶಗಳಲ್ಲಿ ಆಧ್ಯಾತ್ಮಿಕ ತತ್ವಗಳು ಹೇಗೆ ತೋರ್ಪಡಿಸಲ್ಪಟ್ಟಿವೆ ಎಂಬುದನ್ನು ಯಥಾಮತಿ ಚಿಂತನೆ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ.


ಶ್ರವಣ ಕುಮಾರನು ಪಿತೃ ಭಕ್ತಿಗೆ ಉದಾಹರಣೆಯಾಗಿದ್ದಾನೆ. ತನ್ನ ಎಲ್ಲಾ ಆಸೆಗಳನ್ನು ಬದಿಗೊತ್ತಿ ತನ್ನ ಕುರುಡು ತಂದೆ ತಾಯಿಗೆ ಯಾತ್ರೆ ಮಾಡಿಸಲು ತನ್ನ ಹೆಗಲ ಮೇಲೆ ಬುಟ್ಟಿಗಳಲ್ಲಿ ಕೂಡಿಸಿಕೊಂಡು ಹೊರಡುತ್ತಾನೆ. ಇಂಥವನನ್ನು ಮೋಜಿಗಾಗಿ ಬೇಟೆಯಾಡಲು ಬಂದಂತಹ ದಶರಥ ಪ್ರಾಣಿ ಎಂದುಕೊಂಡು ಕೊಲ್ಲುತ್ತಾನೆ. ಈ ಸನ್ನಿವೇಶ ಶ್ರವಣ ಕುಮಾರನ ತ್ಯಾಗ ಆಧ್ಯಾತ್ಮಿಕತೆ ಮತ್ತು ಅದಕ್ಕೆ ತದ್ ವಿರುದ್ಧವಾಗಿ ದಶರಥನ ಸ್ವಾರ್ಥ ,ಆಸೆ ಕಾಣಿಸುತ್ತದೆ. ಸ್ವಾರ್ಥ ಸಾಧನೆಯಿಂದ ಅನರ್ಥವಾಗುತ್ತದೆ, ಶಾಪವೇ ಪ್ರಾಪ್ತವಾಗುತ್ತದೆ ಎಂಬುದನ್ನು ಈ ಕಥೆಯಿಂದ ಮಹರ್ಷಿಗಳು ತಿಳಿಸುತ್ತಾರೆ. ಪ್ರತಿಯೊಂದು ರಾಮಾಯಣದ ಪಾತ್ರದಲ್ಲೂ ಸದ್ಗುಣ ಅಥವಾ ದುರ್ಗುಣ ತುಂಬಿ ಯಾವುದು ಇರಬೇಕು ಯಾವುದು ಬೇಡ ಎಂಬುದನ್ನು ತೋರಿಸಿದ್ದಾರೆ.


ಮಂಥರೆ ಪ್ರೀತಿ ತುಂಬಿದ ಕೈಕೆಯ ಮನಸ್ಸಿನಲ್ಲಿ ಸವತಿ ಮಾತ್ಸರ್ಯ ಜಾಗೃತವಾಗುವಂತೆ ಮಾಡಿ, ತನ್ನ ಮಗ ರಾಜನಾಗಬೇಕೆಂಬ ಸ್ವಾರ್ಥ ಮೂಡಿಸಿ ಅವಳಿಂದ ರಾಮನಿಗೆ ವನವಾಸ ಭರತನಿಗೆ ಪಟ್ಟ ಎಂಬ ವರವನ್ನು ಬೇಡುವಂತೆ ಮಾಡುತ್ತಾಳೆ. ಈ ವರವನ್ನು ಬೇಡಿದ ಕೈಕೇಯಿಗೆ ಸಿಕ್ಕಿದ್ದು, ವೈಧವ್ಯ, ತನ್ನ ಮಗನಿಂದಲೇ ತಿರಸ್ಕಾರ, ಅತ್ಯಂತ ನೋವು ಸಂಕಟ.


ಸ್ವಾರ್ಥ ಸಾಧನೆಯಿಂದ ಕೇವಲ ನೋವೇ ಸಿಗುತ್ತದೆ. ರಾಜಮಾತೆ ಆಗಬೇಕೆಂಬ ಆಸೆ ಅವಳ ವಿವೇಕವನ್ನು ಶೂನ್ಯ ಮಾಡಿತು." ಆಸೆಯಿಂದ ಕೋಪ, ಕೋಪದಿಂದ ಬುದ್ಧಿನಾಶ" ಎಂದು ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ತಿಳಿಸಿದ್ದಾನೆ. ಕೆಣಕುವ ಆಸೆಗಳನ್ನು ತೋರಿಸಿ ನಮ್ಮ ವಿವೇಕವನ್ನು ಹಾಳು ಮಾಡಲು ಕಾಯುತ್ತಿರುವ ಮಂಥರೆ ಅಂತಹ ದುಷ್ಟ ಜನರಿಂದ ನಾವು ದೂರವಿರಬೇಕು ಎಂಬುದನ್ನು ತೋರಿಸುತ್ತದೆ.


ನಮಗೆ ಶ್ರೇಯಸ್ಕರ ಯಾವುದು, ಎಂದರೆ ಈ ಆತ್ಮದ ಉದ್ಧಾರ ಯಾವುದರಿಂದ ಆಗುತ್ತದೆ? ಯಾವುದರಿಂದ ನಾವು ಅದ: ಪತನಕ್ಕೆ ಬೀಳುತ್ತೇವೆ ಎಂಬುದನ್ನು ನಾವು ಚೆನ್ನಾಗಿ ಅರಿತುಕೊಂಡಿರಬೇಕು. ದೇಹದ ಆಸೆಗಳು ಪಂಚೇಂದ್ರಿಯಗಳಿಂದ ಪ್ರೇರಿತವಾಗಿರುತ್ತವೆ ಅದು ಐದು ದಿಕ್ಕಿಗಳಲ್ಲಿ ನಮ್ಮನ್ನು ಎಳೆಯುತ್ತಿರುತ್ತವೆ. ಅದರಿಂದ ವಿಮುಖವಾಗಿ ನಮ್ಮ ಆತ್ಮದ ಉದ್ಧಾರವಾಗುವ ಮಾರ್ಗವನ್ನು ನಾವು ಹುಡುಕಿಕೊಳ್ಳಬೇಕು ಎಂಬುದನ್ನು ಈ ಕಥೆ ತಿಳಿಸುತ್ತದೆ.


ಇದೇ ರೀತಿ ಮಾಯಾಮೃಗದ ಆಸೆಗೆ ಸೀತೆ ಬಲಿಯಾದದ್ದರಿಂದ, ತನ್ನ ಪ್ರೀತಿಯ ಪತಿಯಿಂದ ಅವಳು ದೂರವಾಗಬೇಕಾಗುತ್ತದೆ. ಇಲ್ಲಿ ಸೀತೆ ನಮ್ಮ ಮನಸ್ಸಿನ ಪ್ರತೀಕ, ರಾಮ ಭಗವಂತನ ಪ್ರತೀಕ, ಜಿಂಕೆ ನಮ್ಮನ್ನು ಸೆಳೆಯುವ ಇಂದ್ರಿಯ ಸುಖಗಳಿಗೆ ಪ್ರತಿಕವಾಗಿರುತ್ತದೆ. ಯಾವಾಗ ನಮ್ಮ ಮನಸ್ಸು ಭಗವಂತನನ್ನು ಬಿಟ್ಟು ಬೇರೆ  ಆಸೆಯಲ್ಲಿ ಬಂದಿತವಾಗುತ್ತದೆಯೋ ಆಗ ಪರಮಾತ್ಮನು ನಮ್ಮಿಂದ ದೂರವಾಗುತ್ತಾನೆ. ನಮ್ಮ ಆಧ್ಯಾತ್ಮಿಕ ಸಾಧನೆ ಆಗುವುದಿಲ್ಲ, ಬದಲಿಗೆ ನೋವು ದುಃಖ ಸಂಕಟಗಳಿಂದ ನಾವು ನರಳ ಬೇಕಾಗುತ್ತದೆ. ಭಗವಂತ ಜೊತೆಗಿದ್ದರೆ ಮಾತ್ರ ಎಲ್ಲ ಕಷ್ಟಗಳನ್ನು ಎದುರಿಸಬಹುದು, ಅವನು ದೂರಾದರೆ ಇಲ್ಲೇ ನರಕವನ್ನು ಅನುಭವಿಸಬೇಕಾಗುತ್ತದೆ. ಸೀತೆಯು ಕೂಡ ರಾವಣನ ಪುರಿಯಲ್ಲಿ ಅಂತಹ ನರಕವನ್ನೇ ಅನುಭವಿಸಿದಳು.


ಆದರೆ ಅಷ್ಟು ಕಷ್ಟದಲ್ಲೂ ಭಗವಂತನ ನಾಮಸ್ಮರಣೆಯನ್ನು ನಿರಂತರ ಮಾಡುತ್ತಿದ್ದರಿಂದ ಅವಳನ್ನು ಯಾರು ಮುಟ್ಟಲು ಕೂಡ ಸಾಧ್ಯವಾಗಲಿಲ್ಲ ಅವಳ ಪವಿತ್ರತೆಗೆ ಕಳಂಕ ಬರಲಿಲ್ಲ. ಎಷ್ಟೇ ಕಷ್ಟ ಬಂದರೂ ಪರಮಾತ್ಮನ ಪಾದಸ್ಮರಣೆಯನ್ನು ಮರೆಯಬೇಡಿ ಎಂದು ಈ ಕಥೆಯ ಮೂಲಕ ತಿಳಿಸುತ್ತಾರೆ. ಕಷ್ಟಗಳೆಲ್ಲ ನಮ್ಮ ನಿಷ್ಠೆಯ ಪರೀಕ್ಷೆಗಳು ಎಂಬುದನ್ನು ನಾವು ಯಾವಾಗಲೂ ಜ್ಞಾಪಕ ಇಟ್ಟುಕೊಳ್ಳಬೇಕಾಗುತ್ತದೆ. ಕ್ಷಣಿಕ ಸುಖಗಳು ಆ ಕ್ಷಣದ ಬಳಿಕ ಇರುವುದಿಲ್ಲ. ಆದರೆ ಪರಮಾತ್ಮನ ಸನ್ನಿಧಾನದ ಶಾಶ್ವತ ಸುಖ ಪಡೆಯಬೇಕಾದರೆ ನಾವು ಸದಾ ಅವನಲ್ಲೇ ಚಂಚಲ ಮನಸ್ಸನ್ನು ನಿಲ್ಲಿಸಬೇಕಾಗುತ್ತದೆ.


ಉಸಿರುಸಿರಲ್ಲೂ ಪ್ರತಿಕ್ಷಣವೂ ನಾಮಸ್ಮರಣೆಯನ್ನು ಮಾಡುವಂತಹ ಆಂಜನೇಯ, ಎಲ್ಲ ಭಕ್ತರಿಗೂ ಗುರುವಾಗಿದ್ದಾನೆ. "ದಾಸೋಹಂ ಕೋಸಲೆಂದ್ರಸ್ಯ" ಎಂದು ಹೇಳಿಕೊಳ್ಳುವ ಅವನು, ರಾಮನ ಸೇವೆಯನ್ನು ಬಿಟ್ಟು ಬೇರೆ ಏನನ್ನು ಅಪೇಕ್ಷಿಸುವುದಿಲ್ಲ. ಇಂತಹ ಭಕ್ತಿ ಯಾರಲ್ಲಿ ಮೂಡುತ್ತದೆಯೋ ಅಂತವನ ಹೃದಯದಲ್ಲಿ ಸ್ವತಹ ರಾಮನೆ ವಾಸ ಮಾಡುತ್ತಾನೆ. ರಾಮ ಪಟ್ಟಾಭಿಷೇಕದ ನಂತರ ನಿನಗೆ ಏನು ಬೇಕು ಎಂದು ಹನುಮಂತನನ್ನು ಕೇಳಿದಾಗ, ನಿರಂತರ ಭಕ್ತಿಯೊಂದನ್ನೇ ಬೇಡಿದ ಆ ವಾನರನಿಗೆ ಬ್ರಹ್ಮ ಪದವಿಯನ್ನು ಕೊಡುತ್ತಾನೆ. ರಾಮ ಭಕ್ತಿ ಕಪಿಯನ್ನು ಬ್ರಹ್ಮನನ್ನಾಗಿ ಮಾಡಿದರೆ ರಾಮನ ದ್ವೇಷ ರಾವಣನನ್ನು ಬ್ರಾಹ್ಮಣತ್ವದಿಂದ ಅಸುರತ್ವಕ್ಕೆ ದೂಡಿತು . ಇದು ಅನನ್ಯ ಭಕ್ತಿಯಿಂದ ಸಿಗುವಂತಹ ಲಾಭಕ್ಕೆ  ಉದಾಹರಣೆಯಾಗಿರುವ ಕಥೆ.


ಭಕ್ತಿಯ ಮಾರ್ಗ ಸುಲಭವಲ್ಲ! ಅನೇಕ ವರ್ಷಗಳು ಕಾಯಬೇಕಾಗುತ್ತದೆ! ಆ ಕಾಯುವಿಕೆಗೆ ಸಹನೆಗೆ ಅಲುಗಾಡದ ಶ್ರದ್ದೆಗೆ ಪ್ರತೀಕವೇ ಶಬರಿಯ ಕಥೆ. ತನ್ನ ಗುರು "ರಾಮ ಬರುತ್ತಾನೆ" ಎಂದು ಹೇಳಿದ್ದ ವಾಕ್ಯವನ್ನು ನಂಬಿ "ಇಂದು ಬರುತ್ತಾನೆ ರಾಮ "ಎಂದು ಪ್ರತಿದಿನವೂ ಪ್ರತಿಕ್ಷಣವೂ ತಾನು ಹಣ್ಣು ಹಣ್ಣು ಮುದುಕಿಯಾಗುವವರೆಗೂ ಅವನಿಗಾಗಿ ಕಾಯುತ್ತಾಳೆ!! ಹಣ್ಣುಗಳನ್ನು ಇಟ್ಟುಕೊಂಡು ಕಾದಂತಹ ಶಬರಿಯು ರುಚಿ ನೋಡಿ ಕೊಟ್ಟಂತಹ ಸಿಹಿ ಹಣ್ಣುಗಳನ್ನು ರಾಮ ಸ್ವೀಕರಿಸುತ್ತಾನೆ! ಅವಳಿಗೆ ಮೋಕ್ಷವನ್ನೇ ದಯಪಾಲಿಸುತ್ತಾನೆ.


ಭಕ್ತಿಯ ಮಾರ್ಗ ಕಠಿಣ, ದರ್ಶನಕ್ಕಾಗಿ ಜೀವಮಾನವಿಡೀ ಕಾಯಬೇಕಾಗುತ್ತದೆ. ನಾವು ಹೊತ್ತು ತಂದಿರುವ ಪಾಪದ ಗಂಟೆಲ್ಲ ಪರಮಾತ್ಮನಾಗಮನದಿಂದ ಭಸ್ಮವಾಗುತ್ತವೆ.


ಭರತ ಹೇಗೆ ರಾಮನ ಪಾದುಕೆಯನ್ನು ಇಟ್ಟು ರಾಮನ ಹೆಸರಿನಲ್ಲಿ ತನ್ನ ರಾಜ್ಯಪಾಲನೆಯನ್ನು ಮಾಡಿದನೋ ಹಾಗೆಯೇ ನಾವು ಕೂಡ ನಮ್ಮ ಜೀವನವನ್ನು ಪರಮಾತ್ಮನಿಗಾಗಿ ಮಾಡಬೇಕು ಮಾಡುವ ಕೆಲಸಗಳನ್ನೆಲ್ಲ ಅವನಿಗೆ ಅರ್ಪಣೆ ಮಾಡಬೇಕು. ಅರ್ಪಣೆ ಮಾಡುವ ಕೆಲಸಗಳು ಸತ್ಕಾರ್ಯಗಳಾಗಿರಬೇಕು ಎಂದು ಭರತನ ಕಥೆ ತೋರಿಸುತ್ತದೆ.


ಇನ್ನು ರಾಮನ ಭಕ್ತರೆಲ್ಲ ರಾಮಾಯಣದಲ್ಲಿ ಬರುವವರು ದೋಣಿ ಸಾಗಿಸುವ ಗುಹ, ಕೀಳು ಜಾತಿಯ ಶಬರಿ, ಕಪಿಯಾದ ಹನುಮಂತ, ಅಸುರನಾದ ವಿಭೀಷಣ. ಇವರ ಜಾತಿ ಕುಲ ಏನೇ ಆಗಿದ್ದರು ಇವರ ಭಕ್ತಿ ಅತ್ಯಂತ ಶ್ರೇಷ್ಠವಾದದ್ದು. ಪರಮಾತ್ಮ ಒಲಿಯಬೇಕಾದರೆ ನಮ್ಮ ಅಂತರಂಗದೊಳಗಿರುವ ಭಕ್ತಿ ಎಷ್ಟಿದೆ ಎಂಬುದನ್ನು ಮಾತ್ರ ನೋಡುತ್ತಾನೆ ಎಂಬುದು ಈ ಕಥೆಗಳಿಂದ ಮಹರ್ಷಿಗಳು ನಮಗೆ ತಿಳಿಸಿಕೊಡುತ್ತಾರೆ.


ವಿಭೀಷಣ ಅಧರ್ಮ ತುಂಬಿದ ತನ್ನ ಅಣ್ಣನನ್ನೇ ತ್ಯಾಗ ಮಾಡಿ, ಅಧರ್ಮ ಮಾರ್ಗವನ್ನು ಬಿಟ್ಟು ಧರ್ಮದ ಮಾರ್ಗದ ಕಡೆ ಬರುತ್ತಾನೆ.ಬೇರೆಯವರು ಅವನನ್ನು ನಂಬಲು ತಯಾರಿರದ ಸಮಯದಲ್ಲಿ ರಾಮ ನಂಬುತ್ತಾನೆ. ಇದು ರಾಮನ ಮನೋವೈಶಾಲ್ಯತೆಯನ್ನು ತೋರಿಸುತ್ತದೆ ಮತ್ತು ಭಕ್ತ ಪರಾಧೀನತೆಯನ್ನು ತೋರಿಸುತ್ತದೆ.

ರಾಮಾಯಣದ ಅನೇಕ ಸನ್ನಿವೇಶಗಳಲ್ಲಿ ಲಕ್ಷ್ಮಣ ಅಚಾತುರ್ಯದ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೊರಟಾಗ ರಾಮ ಅವವನ್ನು ತಡೆಯುತ್ತಾನೆ. ಉದಾಹರಣೆಗೆ ಸೈನ್ಯ ಸಮೇತ ಭರತ ದೂರದಿಂದ ಬರುತ್ತಿದ್ದಾನೆ ಎಂದು ಕಂಡಾಗ ಲಕ್ಷ್ಮಣ ಅವನು ಯುದ್ಧಕ್ಕೆ ಬರುತ್ತಿದ್ದಾನೆ ಎಂದು ನಿರ್ಧರಿಸಿಬಿಡುತ್ತಾನೆ. ಆದರೆ ರಾಮ ಎಂದೂ ಆ ರೀತಿ ಆತುರದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ತನ್ನ ಸಮಾಧಾನವನ್ನು ಎಂದೂ ಕಳೆದುಕೊಳ್ಳುವುದಿಲ್ಲ. ಸಮುದ್ರ ಸೇತುವೆ ಕಟ್ಟಲು ಶಾಂತವಾಗದಿದ್ದಾಗಲು ಮೂರು ದಿನ ಕಾದು ನಂತರ ಕೋದಂಡವನ್ನು ಹಿಡಿದು ತನ್ನ ಶಕ್ತಿಯನ್ನು ತೋರಿಸುತ್ತಾನೆ. ನಾವು ಬೆಳೆಸಿಕೊಳ್ಳಬೇಕಾದ ಮುಖ್ಯ ಗುಣವಾದ ಸಹನಶೀಲತೆ, ನಿರ್ಧಾರಕ್ಕೆ ಬರುವ ಮುನ್ನ ಎಚ್ಚರಿಕೆಯಿಂದ ಎಲ್ಲವನ್ನು ಪರಿಶೀಲಿಸುವುದು. ಎಲ್ಲವನ್ನೂ ನಾವು ರಾಮನಿಂದ ಕಲಿಯಬೇಕಾಗುತ್ತದೆ. ಒಬ್ಬ ಮನುಷ್ಯ ಯಾವ ರೀತಿ ಶ್ರೇಯಸ್ಕರವಾಗಿ ಬದುಕಬೇಕು ಎಂಬುದಕ್ಕೆ ರಾಮನೇ ನಿದರ್ಶನನಾಗಿದ್ದಾನೆ.ಪಿತೃ ಭಕ್ತಿ, ಪಿತೃವಾಕ್ಯ ಪರಿಪಾಲನೆ, ಏಕಪತ್ನಿ ವ್ರತ, ಅಣ್ಣನಾಗಿ ಭ್ರಾತೃ ಪ್ರೀತಿ ವಾತ್ಸಲ್ಯ, ಪತ್ನಿಯ ಬಗ್ಗೆ ಕಾಳಜಿ ಎಲ್ಲವೂ ಅನುಕರಣೀಯ.ಎಲ್ಲ ಸಮಯದಲ್ಲೂ ಅವನ ನಿರ್ಲಿಪ್ತ ಮನೋಭಾವ, ಕರ್ತವ್ಯ ಪರಿಪಾಲನೆ, ತ್ಯಾಗ, ನಿಸ್ವಾರ್ಥ ಕಾಣಿಸುತ್ತದೆ.


ರಾಮನೇ ಪರಮಾತ್ಮನಾಗಿ ಸೀತೆಯೇ ಜೀವಾತ್ಮಳಾಗಿ, ಪರಮಾತ್ಮ ಮತ್ತು ಜೀವಾತ್ಮನ ಮಿಲನವೇ ರಾಮಾಯಣದ ಉದ್ದೇಶವಾಗಿದೆ. ಈ ಮಿಲನಕ್ಕೆ ಅಡೆತಡೆಯಾಗಿ ಬರುವ ಅರಿಷಡ್ವರ್ಗಗಳು ಎಂದರೆ ಕಾಮ ಕ್ರೋಧ ಲೋಭ ಮೋಹ ಮದ ಮತ್ತು ಮತ್ಸರ ಎಂಬ ಆರು ಗುಣಗಳ ಪ್ರತೀಕವೇ ಅಸುರರಾಗಿದ್ದರೆ. ಶೂರ್ಪಣಕಿಯೇ ಇರಬಹುದು ರಾವಣ ಕುಂಭಕರ್ಣಾದಿಗಳು ಯಾರನ್ನು ತೆಗೆದುಕೊಂಡರು ಅವರು ತಮ್ಮ ಸ್ವಾರ್ಥಕ್ಕಾಗಿ ಜೀವಿಸುತ್ತಾರೆ. ತಮ್ಮ ಇಂದ್ರಿಯ ತೃಪ್ತಿಗಾಗಿ ಬಾಳುತ್ತಾರೆ. ನಾವು ಈ ರೀತಿ ಬಾಳಿದರೆ ಅಸುರರೇ ಆಗುತ್ತೇವೆ ಎಂದಿಗೂ ಭಗವಂತ ನಮಗೆ ಸಿಗುವುದಿಲ್ಲ.


ಸಹನೆ ತ್ಯಾಗ ಭಕ್ತಿ ನಿಷ್ಠೆ ಶ್ರದ್ಧೆ ನಿರಂತರ ತಪಸ್ಸಿನಿಂದ ಮಾತ್ರ ಅವನು ನಮಗೆ ಸಿಗುತ್ತಾನೆ. ಪಾಪದಿಂದ ಶಪಿತಳಾಗಿ ಕಲ್ಲಾಗಿದ್ದ ಅಹಲ್ಯೆ ಕೇವಲ ರಾಮ ನಾಮದ ನಿರಂತರ ಜಪದಿಂದ ಅವನ ಸ್ಪರ್ಶ ಪಡೆದು ಪಾಪದಿಂದ ಮುಕ್ತಳಾದಳು. ಈ ಕಥೆ ರಾಮ ಜಪದ ಮಹಿಮೆಯ ಜೊತೆಗೆ ರಾಮನಾಮ ಜಪ ಮಾಡುವಾಗ ನಮ್ಮ ಮನಸ್ಸು ಕಲ್ಲಿನಂತಾಗಬೇಕು ಅಲ್ಲಿ ಬೇರೆ ಯಾವ ಚಿಂತೆ ಚಿಂತನೆಗಳು ಮೂಡಬಾರದು ಆಗ ಮಾತ್ರ ಭಗವಂತ ಸ್ಪರ್ಶಿಸುತ್ತಾನೆ ಎಂಬುದನ್ನು ತೋರಿಸುತ್ತದೆ.


ಹೀಗೆ ರಾಮಾಯಣದ ಪ್ರತಿಯೊಂದು ಸನ್ನಿವೇಶವೂ ಗೂಡಾರ್ಥಗಳಿಂದ ತುಂಬಿದ್ದು ಮಾನವನಿಗೆ ಮುಕ್ತಿ ಮಾರ್ಗಕ್ಕೆ ಹೋಗುವ ಸಂದೇಶಗಳಿಂದ ತುಂಬಿದೆ. ಇದನ್ನು ಅರ್ಥ ಮಾಡಿಕೊಂಡು ಕವಿ ವಾಣಿಯ ಒಳಗಿರುವ ಮರ್ಮಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ. ರಾಮಾಯಣದ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಸನ್ಮಾರ್ಗದ ಕಡೆ ಸಾಗೋಣ.




- ಡಾ. ರೂಪಶ್ರೀ ಶಶಿಕಾಂತ್

ದಂತ ವೈದ್ಯರು, ದಾವಣಗೆರೆ 8904126661


ಡಾ. ರೂಪಶ್ರೀ ಶಶಿಕಾಂತ್, ದಂತ ವೈದ್ಯರು, ದಾವಣಗೆರೆ. ಇವರು ಬೆಂಗಳೂರಿನ ಎಂ.ಬಿ. ರಮೇಶ್ ಮತ್ತು ಸಿ.ಎನ್ ರಮಾದೇವಿ ಅವರ ಪುತ್ರಿ. ದಾವಣಗೆರೆಯ ಎಂ.ಜೆ ಚಂದ್ರಶೇಖರ್ ಮತ್ತು  ಶ್ರೀಮತಿ ಜಯಲಕ್ಷ್ಮೀ ಅವರು ಸೊಸೆ.ಪತಿ ಡಾ.ಎಂ.ಸಿ.ಶಶಿಕಾಂತ್ ಅವರು ಜೊತೆ ಎಂ.ಸಿ ದಂತ ಚಿಕಿತ್ಸಾಲಯ ಎಂಬ ಹಲ್ಲಿನ ಆಸ್ಪತ್ರೆಯಲ್ಲಿ ದಂತ ವೈದ್ಯೆಯಾಗಿ 25 ವರುಷಗಳಿಂದ ದಾವಣಗೆರೆಯಲ್ಲಿ ವಾಸಿಸುತ್ತಿದ್ದಾರೆ.


ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್, ದಾಸಸಾಹಿತ್ಯದಲ್ಲಿ ಸೌರಭ ದಾಸಸಾಹಿತ್ಯ ವಿದ್ಯಾಲಯದ ದಾಸ ಶಿರೋಮಣಿ ಪರೀಕ್ಷೆ ಆಗಿದೆ."ಶ್ರೀಕೃಷ್ಣಧ್ಯಾನಾಮೃತ" ಎಂಬ ಕೇವಲ ಕೃಷ್ಣನ ಬಗೆಗಿನ 170 ಕವನಗಳ ಸಂಕಲನ ಪ್ರಕಟವಾಗಿದೆ. ಅನೇಕ ಕವನಗಳು, ಕಥೆಗಳು, ಲೇಖನಗಳು ಜನತಾವಾಣಿ, ಜನಮಿಡಿತ, ಸಂಜೆ ಸಮಯ, ಬೋಧಿವೃಕ್ಷ, ಮುಂತಾದ ದಿನಪತ್ರಿಕೆಗಳಲ್ಲಿ, ಸಂಕ್ರಾಂತಿ ವಿಶೇಷಾಂಕಗಳಲ್ಲಿ ಪ್ರಕಟವಾಗಿದೆ. ಮೂರು ಕವನ ಸಂಕಲನಗಳಲ್ಲಿ ತಲಾ ಹತ್ತು ಕವನಗಳು ಪ್ರಕಟವಾಗಿದೆ. ಮಂಡ್ಯಾದ ವರಾಹಹರಿವಿಠಲ ದಾಸರಿಂದ "ಬಾಲಗೋಪಾಲವಿಠಲ" ಎಂಬ ಅಂಕಿತ ಪ್ರಧಾನವಾಗಿದೆ. ಕವನಗಳಿಗೆ "ಸಿರಿಹರಿ" ಕಾವ್ಯನಾಮ ಆಗಿದೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top