- ಶಾರದ ಮಂಜುನಾಥ್
ಮಾನವ ಪ್ರಕೃತಿಯ ಅವಿಭಾಜ್ಯ ಅಂಗ, ರಾಮಾಯಣದ ಕಥಾನಕ್ಕು ಪ್ರಕೃತಿಗೂ ಒಂದು ಅಂತರ್ಗತವಾದ ಸಂಬಂಧವಿದೆ. ಪ್ರಾಣಿ - ಪಕ್ಷಿಗಳು, ಗಿಡ-ಮರಗಳು, ಹೂ-ಬಳ್ಳಿಗಳು, ನದಿ-ವನಗಳು, ಸಮುದ್ರ-ಕೊಳ್ಳಗಳು, ಹಣ್ಣು-ಹಂಪಲುಗಳು, ಪರ್ವತಗಳು ಪಾತ್ರಗಳಾಗಿ ಇಡೀ ರಾಮಾಯಣದ ಕಥೆಯನ್ನು ಆವರಿಸಿಕೊಂಡಿದೆ.
ರಾಮಾಯಣದಲ್ಲಿ ಪ್ರಕೃತಿಯ ವಿವಿಧ ಅಂಶಗಳನ್ನು ಎತ್ತಿ-ಹಿಡಿದಿರುವುದನ್ನು ಕಾಣಬಹುದು. ಕಾಡುಗಳಲ್ಲಿನ ಜೀವನ ಪ್ರಾಣಿ ಪಕ್ಷಿಗಳ ವಿವರಣೆ ಓದುಗನಿಗೆ ಆಹ್ಲಾದ ನೀಡುತ್ತದೆ. ಮಕ್ಕಳನ್ನು ಆಕರ್ಷಿಸುತ್ತದೆ. ನೆನಪಿನಲ್ಲುಳಿಯುವಂತೆ ಮಾಡುತ್ತದೆ.
ರಾಮಾಯಣದ ಕಥೆ ಆರಂಭವಾಗುವುದೇ ಪ್ರಕೃತಿಯ ಒಂದು ಭಾಗವಾದ ಪ್ರಾಣಿ ಪಕ್ಷಿಗಳನ್ನು, ಅವುಗಳ ಸಂಕುಲವನ್ನು ರಕ್ಷಿಸುವ ಪ್ರಯತ್ನದಿಂದ ಮಾ ನಿಷಾದ . . . ಮುಂದೆ ಇದೇ ರಾಮಾಯಣ ಕೃತಿ ರಚನೆಗೆ ಕಾರಣವೂ ಆಯಿತು.
ಒಂದು ಒಳ್ಳೆಯ ಕೆಲಸಕ್ಕೆ ಪ್ರಕೃತಿಯೂ ಸಹ ಹೇಗೆ ಕೈ ಜೋಡಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಮೈನಾಕ ಪರ್ವತ ಸೀತೆಯನ್ನು ಹುಡುಕಲು ಹೊರಟ ಹನುಮಂತನಿಗೆ ವಿಶ್ರಾಂತಿ ಪಡೆಯಬಹುದು ಎಂದು ಹೇಳುತ್ತದೆ. ಸಮುದ್ರರಾಜ ನನ್ನ ಮಗ ವಿಶ್ವಕರ್ಮ ನಿನಗೆ ಸೇತುವೆ ಕಟ್ಟಲು ಸಹಾಯ ಮಾಡುತ್ತಾನೆ ಎಂದು ಹೇಳುತ್ತದೆ. ರಾಮಾಯಣದಲ್ಲಿ ಮನುಷ್ಯರು ಪ್ರಾಣಿಗಳು, ಪಕ್ಷಿಗಳು, ಪರಸ್ಪರ ಮಾತನಾಡುತ್ತವೆ, ಸಹಕರಿಸುತ್ತವೆ, ಸಹಬಾಳ್ವೆ ನಡೆಸುತ್ತವೆ.
ರಾಮಾಯಣದಲ್ಲಿ ಪ್ರಾಣಿಗಳಿಗೆ - ಪಕ್ಷಿಗಳಿಗೆ ತಮ್ಮದೇ ಆದ ಸ್ಥಾನ ಮಾನವಿದೆ, ಪಾತ್ರವಿದೆ ಜಟಾಯು, ಸಂಪಾತಿ, ವಾಲಿ, ಸುಗ್ರೀವ, ಜಾಂಬವಂತ, ಹೀಗೆ ಹಲವಾರು ‘ಅಳಿಲು ಸೇವೆ’ಎಂಬ ನುಡಿಗಟ್ಟಿಗೆ (Phrase) ಕಾರಣವಾದ, ಹುಟ್ಟಿಗೆ ಕಾರಣವಾದ ಅಳಿಲೂ ಸಹ ನಾನೇನು? ಎನ್ನದೆ ಮರಳಲ್ಲಿ ಹೊರಳಾಡಿ ಮಯ್ಯ ಕೊಡವಿ ಮರಳು ತಂದು ಹಾಕಿ ಸೇತು ಬಂಧನಕ್ಕೆ ತನ್ನದೇ ಆದ ಕೊಡುಗೆ ಕೊಡುವ ಮೂಲಕ ಪಾತ್ರಗಳಲ್ಲಿ ಹಿರಿದು-ಕಿರಿದು ಎಂಬ ಬೇಧವಿಲ್ಲ ಎಂಬುದನ್ನು ಸೂಚಿಸುತ್ತದೆ. ಮಾಯಾ ಜಿಂಕೆ ರಾಮಾಯಣದ ಕಥೆಯ ದಿಕ್ಕನ್ನು ಬದಲಿಸುವಷ್ಟು ಪ್ರಭಲವಾದರೆ ಗಾತ್ರದಲ್ಲಿ ಚಿಕ್ಕದಾದ ಒಂದು ಪ್ರಾಣಿ ಸಮೂಹ ಸೀತೆಯನ್ನು ಹುಡುಕುವಲ್ಲಿ ಸಹಾಯಕ್ಕೆ ಬರುತ್ತದೆ.
ಈಗ ಕೆಲವು ವರ್ಣನೆಗಳನ್ನು ರಾಮಾಯಣದ ಕತೃ (ಕವಿ) ಹೇಗೆ ಚಿತ್ರಿಸಿದ್ದಾರೆ ಎಂಬುದನ್ನು ಒಂದೊಂದಾಗೆ ನೋಡೋಣ. ಕವಿ ರಾಮಾಯಣದಲ್ಲಿ ಸಮುದ್ರ ವರ್ಣನೆಯನ್ನು ಮಾಡುವ ರೀತಿ ವಿಭಿನ್ನವಾಗಿ ಬಹಳ ಮನೋಜ್ಞವಾಗಿ ಬಂದಿದೆ. ಸಮುದ್ರರಾಜ ಎಂದು ಸಂಭೋಧಿಸುತ್ತಾರೆ. ರಾವಣ ಮಾರೀಚನನ್ನು ಎರಡನೆಯ ಬಾರಿ ಬೇಟಿ ಮಾಡಲು ಹೋಗುವ ದಾರಿಯಲ್ಲಿ ಪರ್ವತಗಳ ಸನಿಹದಲ್ಲಿದ್ದ ಸಮುದ್ರ ತೀರವನ್ನು ನೋಡುತ್ತಾನೆ.ದಾರಿಯುದ್ದಕ್ಕೂ ಫಲಪುಷ್ಪ ಭರಿತವಾದ ಸಾವಿರಾರು ವೃಕ್ಷಗಳಿಂದ ವ್ಯಾಪಿಸಿದ್ದ, ಶೀತಲವೂ ಮಂಗಳ ಕರವೂ ಆಗಿದ್ದ ಸರೋವರಗಳಿದ್ದವು. ಬಾಳೆ ತೆಂಗಿನ ಗಿಡಗಳಲ್ಲದೆ ದಷ್ಟಪುಷ್ಟವಾಗಿ ಬೆಳೆದಿದ್ದ ಸಾಲ, ತಾಲ ತಮೂಲ ಮುಂತಾದ ವೃಕ್ಷಗಳಿಂದ ಕೂಡಿದ ಅರಣ್ಯ ಪ್ರದೇಶ. ನಾಗ-ಗರುಡ ಗಂಧರ್ವರಿಂದಲೂ, ಹಂಸಕ್ರೌಂಚ ಸಾರಸ ಪಕ್ಷಿಗಳಿಂದ ಆವೃತವಾದ, ವಜ್ರ- ವೈಢೂರ್ಯ ಶಿಲೆಯನ್ನೇ ಸೋಪಾನವಾಗಿಸಿ ಕೊಂಡಿದ್ದ ರಮ್ಯವಾಗಿದ್ದ ಸರೋವರಗಳು, ದಾರಿಯಲ್ಲಿ ಅಂಟಿನ ರಸವಿರುವ ವೃಕ್ಷಗಳಿಂದಲೂ ಚಂದನ ಆಗರು ಮುಂತಾದ ಸುಗಂಧಭರಿತ ವೃಕ್ಷಗಳು ಸಮುದ್ರ ತೀರದಲ್ಲಿ ಒಣಗಿದ ಮುತ್ತಿನರಾಶಿ, ಚಿನ್ನದ ಮತ್ತು ಬೆಳ್ಳಿಯ ಪರ್ವತ, ಚಿಲುಮೆಗಳು, ಕೊಳಗಳು, ಸ್ವರ್ಗಸಮಾನವಾದ ದೃಷ್ಯಗಳನ್ನು ರಾವಣ (ವೀಕ್ಷಿಸುವಂತೆ) ಮಾಡುವುದರ ಮೂಲಕ ಆ ಪ್ರದೇಶದ ಪ್ರಾಕೃತಿಕ ಸಂಪತ್ತನ್ನು ಪರಿಚಯಿಸುತ್ತಾರೆ. ಮನುಷ್ಯ ‘ಪ್ರಕೃತಿಯ ಮುಂದೆ ಎಷ್ಟು ಸಣ್ಣವನು’ ಎಂಬ ಸಂದೇಶದೊಂದಿಗೆ ತಮ್ಮ ಜ್ಞಾನದ ವ್ಯಾಪ್ತಿಯ ಪರಿಚಯ ಮಾಡಿಸುತ್ತಾರೆ. ರಾವಣನ ಸುವರ್ಣ ಲಂಕೆಯನ್ನು ಮೀರಿಸುವ ಸೌಂಧರ್ಯ ಪ್ರಕೃತಿಯದು ಎಂದು ತಿಳಿಯಬಹುದು.
ರಾಮಾಯಣದಲ್ಲಿ ನದಿಗಳ ವರ್ಣನೆಯ ಚಿತ್ರಣ ಓದುಗರ ಮನಸ್ಸನ್ನು ಸೂರೆಗೊಳ್ಳುವುದಲ್ಲದೆ ಆ ಪ್ರದೇಶಗಳ ವೀಕ್ಷಣೆ ಮಾಡಲೇಬೇಕು ಎಂದು ಇಂದಿಗೂ ಪ್ರಚೋದಿಸುತ್ತದೆ. ರಾಮ, ಸೀತಾ, ಲಕ್ಷ್ಮಣರ ಜೊತೆ ವನವಾಸಕ್ಕೆ ಹೋಗುವ ದಾರಿಯಲ್ಲಿ ಪ್ರಕೃತಿಯ ರಮಣೀಯತೆಯನ್ನು ಸವಿಯುತ್ತ ಸಾಗುತ್ತಾನೆ. ಪೈರು-ಪಚ್ಚೆಗಳಿಂದ ಕಂಗೊಳಿಸುವ ಉದ್ಯಾನ-ವನಗಳನ್ನು ನೋಡುತ್ತಾ ಸಾಗುವಾಗ ಮೂರು ಲೋಕಗಳಲ್ಲಿ ಪ್ರವಹಿಸುವ ಮಂಗಳಕರವಾದ ಕಲ್ಮಶವಿಲ್ಲದ ಋಷಿಗಳಿಂದ ಸೇವಿತವಾದ ಗಂಗೆಯನ್ನು ನೋಡುತ್ತಾನೆ. ಕವಿಗೆ ಅದರ ಸೊಬಗನ್ನು ಎಷ್ಟು ಬಣ್ಣಿಸಿದರೂ ಸಾಲದು. ಗಂಗಾ ನದಿಯ ಸುತ್ತಲೂ ಆಶ್ರಮಗಳು. ಅಪ್ಸರೆಯರು ಸ್ನಾನ ಮಾಡುತ್ತಿದ್ದ ನೂರಾರು ಕ್ರೀಡಾಪರ್ವತಗಳು, ನೂರಾರು ದೇವತೆಗಳ ಉದ್ಯಾನವನಗಳು. ಅದರ ಅಲೆಗಳು ತೀರಕ್ಕೆ ಅಪ್ಪಳಿಸುತ್ತ ಒಮ್ಮೆ ಉಗ್ರವಾಗಿ, ಒಮ್ಮೆ ಶಾಂತವಾಗಿ ನೊರೆನೊರೆಯಾಗಿ ಮಂದಹಾಸದಿಂದ ಕೂಡಿ ವಕ್ರವಾದ ದಾರಿಯಲ್ಲಿ ಸ್ತ್ರೀಯರ ಜಡೆಯಂತೆ, ವೇಗವಾಗಿ ಮೃದಂಗದ ಶಬ್ಧದಂತೆ ಲಯಬದ್ಧವಾಗಿ ಹರಿಯುತ್ತಿತ್ತು. ಫಲಭರಿತ ವೃಕ್ಷಗಳಿಂದ ಆವೃತವಾಗಿ ಇಂತಹ ಗಂಗಾ ನದಿಯನ್ನು ರಾಮ ನೋಡಿದ ಎಂದು ಪದೇ ಪದೇ ಹೇಳುವುದರ ಮೂಲಕ ಗಂಗಾ ನದಿಯ ವಿಶೇಷತೆಯನ್ನು ಹೇಳುವುದರ ಜೊತೆಗೆ ಅದರ ಸೊಬಗಿನ ಚಿತ್ರಣವನ್ನು ಓದುಗರು ತಾವು ಪ್ರತ್ಯಕ್ಷದರ್ಶಿಗಳೇನೋ ಎಂಬ ಮೋಡಿಗೆ ಒಳಪಡಿಸುತ್ತಾರೆ ಕವಿ. ಇಂಗಳದ ಮರದ ಔಷದೀಯ ಗುಣಗಳನ್ನು ಹೇಳುತ್ತ ಆಯುರ್ವೇದ ಶಾಸ್ತ್ರಕ್ಕೆ ಬುನಾದಿ ಹಾಕುತ್ತಾರೆ. ಮುಂದೆ ಚಿತ್ರಕೂಟದ ವರ್ಣನೆಯ ಸಮಯದಲ್ಲಿ ಆಲದಮರಕ್ಕೆ ಸೀತೆ ಶ್ಯಾಮಲ ವರ್ಣದಿಂದ ಬೆಳಗುತ್ತಿರುವ ಸಿದ್ಧಚಾರಣರಿಂದ ಸೇವಿಸಲ್ಪಡುತ್ತಿರುವ ವೃಕ್ಷದ ಸಮೀಪ ಹೋಗಿ ಕೈ ಜೋಡಿಸಿ ಶುಭಫಲಗಳನ್ನು ಕರುಣಿಸು ಎಂದು ಪ್ರಾರ್ಥಿಸುತ್ತಾಳೆ. ಇದರಿಂದ ಗಿಡಮರಗಳ ಸಂರಕ್ಷಣೆಯ ಮಾರ್ಗವನ್ನು ಕವಿ ಪರೋಕ್ಷವಾಗಿ ತಿಳಿಸುತ್ತಾರೆ.
ಮುಂದೆ ಸರಯೂ ನದಿಯ ವರ್ಣನೆ ಮಾಡುತ್ತಾ ಹೋಗುವಾಗ ಮಾನಸ ಸರೋವರದ ಒಂದು ಪ್ರವಾಹ ಅಯೋಧ್ಯೆಯನ್ನು ಸುತ್ತುವರೆದು ಗಂಗಾ ನದಿಯಲ್ಲಿ ಸಂಗಮವಾಗುತ್ತದೆ ಎಂದು ಹೇಳುತ್ತಾ, ಸರಯೂ ನದಿ ಅಯೋಧ್ಯೆಯ ಸೊಬಗನ್ನು ಹೆಚ್ಚಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ ಎಂದು ಸೂಚ್ಯವಾಗಿ ಹೇಳುತ್ತಾರೆ. ಅಯೋಧ್ಯೆಯ ಪುರವರ್ಣನೆ ಮಾಡುವಾಗ ಅಯೋಧ್ಯೆ ಸರ್ವಕಾಲದಲ್ಲೂ ಸಾಲುಮರಗಳಿಂದ ಹೂಗಳು ಉದುರಿ ದಾರಿಗಳು ಯಾವಾಗಲೂ ಸುಗಂಧಮಯವಾಗಿರುತ್ತಿತ್ತು ಎಂದು ಹೇಳುವ ಮಾತುಗಳು ಸಾಕ್ಷಿಯಾಗಿವೆ.
ಕುಭೇರನ ಸೌಗಂಧಿಕಾ ಸರೋವರದಂತೆ ಶೋಭಾಯಮಾನವಾಗಿಯೂ, ಅಪ್ರತಿಮವಾಗಿತ್ತು ಮಂದಾಕಿನಿ ನದಿ ಎಂದು ಅದರ ಸೊಬಗನ್ನು ಹೇಳುತ್ತಾ ಹೋಗುತ್ತಾರೆ. “ನದಿಯ ನೀರು ಮೃಗಗಳು ನೀರು ಕುಡಿದು ಈಗ ತಾನೆ ಹೋಗಿರಬಹುದು” ಎಂದು ಕಲಕಿರುವ ನೀರಿನ ಸೂಕ್ಷ್ಮವಿವರಣೆಯನ್ನೂ ಕವಿ ಚಿತ್ರಿಸಿದ್ದಾರೆ. ಪ್ರಾಣಿಗಳಿಗೆ ಆನಂದವನ್ನುಂಟು ಮಾಡುವ ಸಲುವಾಗಿಯೇ ಸೃಷ್ಟಿಯಾಗಿದೆಯೋ ಎಂಬಂತಿರುವ, ಪುಷ್ಪಭರಿತವಾದ, ರಮ್ಯವಾದ ಅರಣ್ಯದ ಸೊಬಗನ್ನು ಒಂದು ನೇರ ಪ್ರಸಾರದ ರೀತಿ ಓದುಗರಿಗೆ ಚಿತ್ರಣ ಕಟ್ಟಿಕೊಡುತ್ತಾರೆ. ಆನೆಗಳ”ದಂತದ ತಿವಿತದಿಂದ ವೃಕ್ಷಗಳ ಕಾಂಡಗಳಲ್ಲಿ ರಸ ಸೋರುತ್ತಿರುವ ಚಿತ್ರ, ಜೀರುಂಡೆಗಳು ದೀರ್ಘವಾಗಿ ಧ್ವನಿ ಮಾಡುತ್ತಾ ಅಳುತ್ತಿರುವಂತೆ ಭಾಸವಾಗುವುದು, ಭೃಂಗರಾಜ ಪಕ್ಷಿಯ ಸಂಗೀತ ಈ ಸೊಬಗನ್ನೆಲ್ಲ ನೋಡಿದ ರಾಮನ ಬಾಯಲ್ಲಿ “ದರ್ಶನಂ ಚಿತ್ರಕೂಸ್ಯ ಮಂದಾಕಿನಿನ್ಯಾಶ್ಚ ಶೋಭನೇ, ಅಧಿಕಂ ಪುರವಾಸಾಚ್ಚಮನ್ಯೇತವಚ ದರ್ನಾತ್”.
ಅಯೋಧ್ಯೆಯ ವಾಸಕ್ಕಿಂತ ಚಿತ್ರಕೂಟದ ವಾಸ ಮಿಗಿಲು ಎಂಬ ಮಾತುಗಳನ್ನು ರಾಮನ ಬಾಯಲ್ಲಿ ನುಡಿಯುವಂತೆ ಮಾಡುತ್ತದೆ. ಪರೋಕ್ಷವಾಗಿ ಕೃತಕವಾದ್ದಕ್ಕಿಂತ ಸಹಜವಾದದ್ದು ಪ್ರಕೃತಿ ನಿರ್ಮಿತವಾದದ್ದು ಮೇಲುಗೈ ಸಾಧಿಸುತ್ತದೆ. ಮುಂದುವರೆದು ರಾಮ ಸೀತೆಗೆ “ಚಿತ್ರಕೂಟವನ್ನೇ ಅಯೋಧ್ಯೆ ಎಂದು, ಮಂದಾಕಿನಿಯನ್ನೇ ಸರಯೂ ಎಂದು, ವನಚರರನ್ನೇ ಅಯೋಧ್ಯೆಯ ಪುರಜನರೆಂದು ಭಾವಿಸಿಕೋ” ಎಂದು ಹೇಳುವ ಮಾತುಗಳಲ್ಲಿ ಆ ಸ್ಥಳದ ಸೊಬಗು ಎಷ್ಟು ಎಂದು ಊಹಿಸಿಕೊಳ್ಳಬಹುದು.
ಚಿತ್ರಕೂಟ ಪರ್ವತಕ್ಕೆ ಹೋಗುವ ದಾರಿಯ ಯಮುನಾ ನದಿಯ ಚಿತ್ರಣವನ್ನು ಕವಿ ಹೀಗೆ ಕೊಡುತ್ತಾರೆ. “ಮುತ್ತುಗದ ಮರಗಳು ಕೆಂಪು ಹೂಗಳನ್ನು ತಳೆದು ಬೆಂಕಿ ಹತ್ತಿಕೊಂಡು ಉರಿಯುತ್ತಿದೆಯೋ” ಎಂದು ಭಾಸವಾಗುತ್ತದೆ ಎಂದು ಅದರ ಅಪಾರತೆಯನ್ನು ಪರಿಚಯ ಮಾಡಿಕೊಡುತ್ತಾರೆ. ದಪ್ಪನಾದ ನಾಲ್ಕು ಕೊಡಗಳ ಸುಜೇನನ್ನು ತುಂಬಿರುವ ಕೊಡಗಳು ಮರಗಳ ಪ್ರತಿಯೊಂದು ರೆಂಭೆಯಲ್ಲೂ ಜೋತಾಡುತ್ತಿವೆ. ಜಾತಕ ಪಕ್ಷಿಗಳ ಕೂಗು, ನವಿಲುಗಳ ಕೇಕೆ ಕರ್ಣಾನಂದ ಆನೆಗಳ ಹಿಂಡು ಪಕ್ಷಿಗಳ ಸಮೂಹ ಎತ್ತರವಾದ ಶಿಖರಗಳು ಹಳ್ಳ-ದಿಣ್ಣೆಗಳಿಲ್ಲದ ಭೂ-ಪ್ರದೇಶ ರಾಮ-ಲಕ್ಷ್ಮಣರಿಗೆ ಆನಂದದಿಂದ ವಿಹರಿಸುವಂತೆ ಮಾಡುತ್ತದೆ. ನಾನಾ ವಿಧದ ಪಕ್ಷಿಗಳು ಕಂದ ಮೂಲಗಳು, ಹಣ್ಣು ಹಂಪಲುಗಳು, ಸುಂದರವಾದ ಬಳ್ಳಿಗಳು ರುಚಿಕರವಾದ ನೀರು ಇನ್ನೇನು ಬೇಕು ಜೀವನಕ್ಕೆ ಎಂದು ಪ್ರಶ್ನಿಸುವಂತಿದೆ.
ರಾಮಾಯಣದ ಬಹುಮಖ್ಯವಾದ, ಬಹುರಮ್ಯವಾದ ಚಿತ್ರಕೂಟಯಾತ್ರೆಯ ವರ್ಣನೆ ಕಾವ್ಯದಲ್ಲಿ ಹೀಗೆ ಮೂಡಿ ಬಂದಿದೆ. ಕರಡಿಗಳು, ಜಿಂಕೆಗಳು ವನಗಳಲ್ಲಿ ಪರ್ವತಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಆನೆಗಳಿಂದ ಧ್ವಂಸವಾದ ಬಕುಲ ಪುಷ್ಪಗಳಿಂದ ಹೂಮಳೆ, ಮೊಸಳೆಗಳಿಂದ ತುಂಬಿ ಮಹಾಸಾಗರದಂತೆ ಕಾಣುತ್ತಿತ್ತು. ತಲೆಯಲ್ಲಿ ಸುವಾಸಿತ ಹೂಗಳನ್ನು ಹೊತ್ತಿರುವ ಮರಗಳಿಂದ ಕೂಡಿ ಸ್ವರ್ಗದಂತೆ ಕಂಗೊಳಿಸುತ್ತಿತ್ತು. ಈ ಸುಂದರ ದೃಶ್ಯ ರಾಮನಿಗೆ ರಾಜ್ಯ ಭ್ರಷ್ಠನಾದೆ ಎಂಬ ದುಃಖವನ್ನಾಗಲಿ ಸಜ್ಜನರನ್ನು ಬಂಧು-ಭಾಂಧವರನ್ನು ಅಗಲಿದ ದಃಖವನ್ನು ದೂರ ಮಾಡುವಷ್ಟು ಸುಂದರವಾಗಿತ್ತು. ನಾನಾ ವಿಧಧ ಪಕ್ಷಿಗಳಿಂದ, ಗಗನ ಚುಂಬಿಯಾದ ಶಿಖರಗಳಿಂದ ಅಲ್ಲಿನ ಕಲ್ಲುಗಳ ಹಳದಿ, ಬೆಳ್ಳಿ, ರಕ್ತ ವರ್ಣ ಇಂದ್ರನೀಲ ಮಣಿಯಂತೆ, ಪುಶ್ಯರಾಗದ ಕಾಂತಿಯಂತೆ, ಸ್ಫಟಿಕದ ಕಾಂತಿಯಂತೆ ಕೇದಿಗೆ ಹೂವಿನಂತೆ, ನಕ್ಷತ್ರದ ಕಾಂತಿಯಂತೆ, ಪಾದರಸದಂತೆ ಹೊಳೆಯುವ ಕಲ್ಲಿನ ಚಿತ್ರಣ ಕೊಡುತ್ತಾರೆ. ಕವಿ, ಬಿಲ್ವ-ಬಿದಿರು, ನೇರಳೆ, ಹೊಂಗೆ ಮಾವು ವೃಕ್ಷಗಳ ವರ್ಣನೆ ರೋಮಾಂಚನಗೊಳಿಸಿದರೆ ಪರ್ವತ ಕೆಲವೆಡೆ ನೀರಿನ ಪ್ರವಾಹದಿಂದ, ಸಣ್ಣ-ಸಣ್ಣ ಝರಿಗಳಿಂದ ನೀರಿನ ಬುಗ್ಗೆಗಳಿಂದ ಕೂಡಿ ಕುಂಭ ಸ್ಥಳದಿಂದ ಮುದೋದಕವನ್ನು ಸುರಿಸುತ್ತಿರುವ ಆನೆಯಂತೆ ಆ ಪರ್ವತ ಕಾಣುತ್ತದೆ ಎಂಬ ವರ್ಣನೆ ಓದುಗನಿಗೆ ತಾನು ಅಲ್ಲೆ ವಿಹರಿಸುತ್ತಿರುವೆÀನೋ ಅನ್ನುವಷ್ಟು ರೋಮಾಂಚನಗೊಳಿಸುತ್ತದೆ. ಇದನ್ನೆಲ್ಲ ಪ್ರತ್ಯಕ್ಷವಾಗಿ ದರ್ಶಿಸಿದ ರಾಮನ ಬಾಯಲ್ಲಿ “ಅಯೋದ್ಯೆಯನ್ನು ಬಿಟ್ಟು ಬಂದಿದ್ದರಿಂದ ಯಾವ ಶೋಕವು ನನಗೆ ಕಾಡುತ್ತಿಲ್ಲ ಎಂಬ ಮಾತು ಉತ್ಪ್ರೇಕ್ಷೆಯಲ್ಲಿ” ಎನಿಸುತ್ತದೆ. ಕವಿಯ ಪ್ರಕೃತಿ ಪ್ರೇಮ ಆಳವಾದ ಅನುಭವ ಎದ್ದು ಕಾಣುತ್ತದೆ.
ಮುಂದೆ ಪಂಪಾ ಸರೋವರದ ವಿವರಣೆಯನ್ನು ಕೊಡುತ್ತಾ ಕವಿ ವಾಲ್ಮೀಕಿ ನಿಧಿ ಪ್ರಾಯವಾದ ಪಂಪಾ ಸರೋವರ ಎಂದಿದ್ದಾರೆ. ಬಣ್ಣ ಬಣ್ಣದಪುಷ್ಪಗಳಿಂದ ಒಂದು ಕಡೆ ಬಿಳುಪಾಗಿ, ನೀಲ ಕಮಲಗಳಿದ್ದ ಕಡೆ ನೀಲಿಯಂತೆ ಒಂದು ಕಡೆಯಿಂದ ಕೆಂಪಾಗಿ ಕಾಣುತ್ತಿತ್ತು. ಅದು ಒಂದು ಸುಂದರವಾದ ರತ್ನಗಂಬಳಿಯಂತೆ ಕಾಣುತ್ತಿತ್ತು ಎನ್ನುವ ಬಣ್ಣನೆಯ ಮೂಲಕ ಪ್ರಕೃತಿ ಎಂತಹ ಗುರು ಎಂತಹ ಬಣ್ಣಗಳ ಸಂಯೋಜನೆ ಪ್ರಕೃತಿಯಿಂದ ನಾವು ಎಷ್ಟೊಂದು ಕಲಿತಿದ್ದೇವೆ. ಎಂದು ಸೂಚ್ಯವಾಗಿ ಹೇಳುತ್ತಾರೆ. ಮುಂದೆ ಅರಣ್ಯದ ಹುಲ್ಲುಗಾವಲು ಸುಂದರ ವರ್ಣ ಸಂಯೋಜನೆಯಿಂದ ಒಂದು ಸುಂದರ ರತ್ನಗಂಬಳಿಯಂತೆ ಕಾಣುತ್ತದೆ ಎಂದು ಮರು ಚಿತ್ರಣ ಕೊಡುತ್ತಾರೆ. ಕೋಗಿಲೆಯ ಮಧುರ ಧನಿ ರಾಮನಿಗೆ ಸ್ವಾಗತ ಕೋರುತ್ತಿದೆಯೇನೋ ಅನ್ನಿಸುತ್ತದೆ ಎಂದು ಹೇಳುತ್ತಾರೆ. ಆ ಚೆಲುವು ರಾಮನಿಗೆ ಸೀತೆಯ ನೆನಪನ್ನು ಅಗಲಿಕೆಯ ನೋವನ್ನು ಹೆಚ್ಚಿಸುತ್ತದೆ. ವಾಲ್ಮೀಕಿ ಕೊಡುವ ಮರಗಳ ಪಟ್ಟಿಯನ್ನು ನೋಡಿದಾಗ ಅವರ ಆಳವಾದ ಸಸ್ಯಶಾಸ್ತ್ರದ ಜ್ಞಾನ, ಮರಗಳು ಮಾನವನಿಗೆ ಹೇಗೆ ವರವಾಗಿ, ಸಹಕಾರಿಯಾಗಿವೆ ಎಂದು ತಿಳಿಯುತ್ತದೆ. ಕೇದಿಗೆ ಸಿಂಧುವಾರ, ಹಿಪ್ಪೆ ತಿಲಕ ನಾಗಕೇಸರ, ನೇರಳೆ ಹೀಗೆ ಮುಂದುವರಿಯುತ್ತದೆ ನೈದಿಲೆ, ಪುನ್ನಾಗ, ಭೂರ್ಜಪತ್ರದ ಹೂಗಳು ಉದುರಿ ಹಾಸಿಗೆಯಂತೆ ಗೋಚರಿಸುತ್ತವೆ ಎನ್ನುವ ಚಿತ್ರಣ ಓದುಗನ ಮನ ಮುಟ್ಟುವಂತೆ ಚಿತ್ರಿಸಿದ್ದಾರೆ.
ಹೀಗೆ ರಾಮಾಯಣದಲ್ಲಿ ಪ್ರಕೃತಿಯ ಚಿತ್ರಣ ಮನೋಹರವಾಗಿಯೂ ಹೃದಯ ವೇದ್ಯವಾಗಿಯೂ ಚಿತ್ರಿತವಾಗಿದೆ ಪ್ರಕೃತಿ ಒಮ್ಮೆ ಗುರುವಾಗಿ, ಒಮ್ಮೆ ಸಖಿಯಾಗಿ, ಒಮ್ಮೆ ಗಿಡಮರ ಪ್ರಾಣಿಪಕ್ಷಗಳ ಆಗರವಾಗಿದೆ. ಒಮ್ಮೊಮ್ಮೆ ಪ್ರಕೃತಿಯ ವರ್ಣನೆ ಓದುಗ ತಾನು ರಾಮಾಯಣವನ್ನು ಓದುತ್ತಿದ್ದೇನೆ ಎಂಬುದನ್ನು ಮರೆವಷ್ಟು ಆಳವಾಗಿದೆ. ಒಟ್ಟಾರೆ ನಮಗೆ ಪ್ರಕೃತಿ ಅನೇಕ ಸಂದೇಶಗಳನ್ನು ಕೊಡುತ್ತದೆ. ಓದು ಸಹ್ಯವಾಗುವಂತೆ ಮಾಡುತ್ತದೆ.
- ಶಾರದ ಮಂಜುನಾಥ್
ನಂ. 3181 ಬಿ, ‘’ಮುನ್ನುಡಿ’,
1 ನೇ ಅಡ್ಡರಸ್ತೆ, ಗಾಯತ್ರಿ ತಪೋವನ,
ಜೆ.ಪಿ. ನಗರ 8ನೇ ಹಂತ, ಬೆಂಗಳೂರು - 560076.
ಮೊ. ನಂ. 8105854056.
ಲೇಖಕರ ಸಂಕ್ಷಿಪ್ತ ಪರಿಚಯ:
ಶಾರದಾ ಮಂಜುನಾಥ್ ಅವರು ಕನ್ನಡ ಸ್ನಾತಕೋತ್ತರ ಪದವೀಧರೆಯಾಗಿದ್ದು, ಓದು ಬರಹದಲ್ಲಿ ಆಸಕ್ತಿ ಹೊಂದಿದವರಾಗಿದ್ದಾರೆ. ಕಾರ್ಯಕ್ರಮಗಳ ನಿರೂಪಣೆ ಇವರಿಗೆ ಅತ್ಯಂತ ಪ್ರಿಯವಾದದ್ದು, ಮಕ್ಕಳಿಗೆ ಹಿರಿಯರಿಗೆ ‘ಕನ್ನಡ’ ಹೇಳಿಕೊಡುವ ಆಸಕ್ತಿಗಳಲ್ಲಿ ಒಂದು ಹಲವಾರು ಸಂಘಸಂಸ್ಥೆಗಳಲ್ಲಿ ಸಕ್ರಿಯವಾಗಿ ನನ್ನನ್ನು ತೊಡಗಿಸಿಕೊಂಡಿದ್ದಾರೆ. ಪ್ರತಿಷ್ಠಿತ ‘ಎಂ.ಪಿ. ಬಿರ್ಲಾ ಪ್ರತಿಷ್ಠಾನ’ ಭಾರತೀಯ ವಿದ್ಯಾಭವನ ಏರ್ಪಡಿಸಿದ್ದ ರಾಮಾಯಣದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿದೆ. ದಾಸಕೀರ್ತನೆಗಳನ್ನು ಅರ್ಥ ವಿವರಿಸಿ ಹೇಳಿಕೊಡುವುದು ಇವರ ಅಚ್ಚುಮೆಚ್ಚಿನ ದಿನಚರಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ