ಆಳ್ವಾಸ್‍ನಲ್ಲಿ ಪಟ್ಲ ಫೌಂಡೇಶನ್‍ನ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ- 2023-24’

Upayuktha
0

ಶಾಲೆಯಲ್ಲಿ ಯಕ್ಷ ಶಿಕ್ಷಣ ನೀಡಿ: ಶಾಸಕ ಕೋಟ್ಯಾನ್




ವಿದ್ಯಾಗಿರಿ (ಮೂಡುಬಿದಿರೆ): ‘ಮಕ್ಕಳಿಗೆ ಶಾಲೆಯಲ್ಲಿ ಯಕ್ಷ ಶಿಕ್ಷಣವನ್ನೂ ನೀಡಬೇಕು’ ಎಂದು ಶಾಸಕ ಉಮಾನಾಥ್ ಎ. ಕೋಟ್ಯಾನ್ ಹೇಳಿದರು. 



ವಿದ್ಯಾಗಿರಿಯ ಮುಂಡ್ರೆದಗುತ್ತು ಅಮರನಾಥ ಶೆಟ್ಟಿ (ಕೃಷಿ ಸಿರಿ)ಸಭಾಂಗಣದಲ್ಲಿ ಮಂಗಳವಾರ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ಸಹಯೋಗದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ಕಲೆಯಾಧಾರಿತ ರಾಜ್ಯಮಟ್ಟದ ಸ್ಪರ್ಧೆ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ- 2023-24’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 



ಪ್ರತಿಭಾವಂತ ಮತ್ತು ಆಸಕ್ತಿ ಹೊಂದಿದ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣವನ್ನು ನೀಡಬೇಕು. ಈ ಸದುದ್ದೇಶದಿಂದ ಪಟ್ಲ ಫೌಂಡೇಶನ್ ಈ  ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ನಮ್ಮ ಜೀವನಕ್ಕೆ ಬೇಕಾದ ಅಮೂಲ್ಯ ವಿಷಯಗಳನ್ನು ಅರಿತುಕೊಳ್ಳಲು ಯಕ್ಷಗಾನ ಒಳ್ಳೆಯ ಮಾಧ್ಯಮ ಎಂದರು. 



ನಮ್ಮ ಪೂರ್ವಜರು ಅನಕ್ಷರಸ್ಥರಾಗಿದ್ದರೂ, ರಾಮಾಯಣ ಹಾಗೂ ಮಹಾಭಾರತದ ಕಥೆಗಳನ್ನು ತಿಳಿದುಕೊಂಡು ಮಕ್ಕಳಿಗೆ ತಿಳಿಸುತ್ತಿದ್ದರು. ಏಕೆಂದರೆ ಅವರು ಯಕ್ಷಗಾನವನ್ನು ನೋಡಿ ಅದನ್ನು ಅನುಭವಿಸುತ್ತಿದ್ದರು ಎಂದು ವಿವರಿಸಿದರು. ಪೌರಾಣಿಕ ಕಥೆಗಳನ್ನು ಅರ್ಥ ಮಾಡಿಕೊಳ್ಳಲು ಯಕ್ಷಗಾನವು ಸಹಕಾರಿ. ಯಕ್ಷಧ್ರುವ ಪಟ್ಲ ಹಾಗೂ ಆಳ್ವಾಸ್ ಈ ಕಾರ್ಯಕ್ರಮ ಮಾಡಿರುವುದು ಪುಣ್ಯದ ಕಾರ್ಯ ಎಂದು ಶ್ಲಾಘಿಸಿದರು. 



ಕಾರ್ಯಕ್ರಮ ಉದ್ಘಾಟಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, ‘ಯಕ್ಷಗಾನವನ್ನು ಒಂದು ಪರಿಪೂರ್ಣ ಕಲೆಯನ್ನಾಗಿ ಮಾಡುವ ಮಹತ್ಕಾರ್ಯವನ್ನು ಕಲಾವಿದರು, ಭಾಗವತರು, ವೇಷಧಾರಿಗಳು ಮಾಡುತ್ತಿದ್ದಾರೆ. ಇವರ ಕೊಡುಗೆಯಿಂದ ಯಕ್ಷಗಾನ ಅತ್ಯುನ್ನತ ಸ್ಥಾನಕ್ಕೆ ಏರಿದೆ’ ಎಂದು ವಿಶ್ಲೇಷಿಸಿದರು.  



ಸಂಗೀತ, ಭಾಗವತಿಗೆ, ಹಿಮ್ಮೇಳ, ವೇಷಭೂಷಣ, ನೃತ್ಯಗಳನ್ನು ಒಳಗೊಂಡ ಸರ್ವ ಗುಣ ಸಂಪನ್ನವಾದಂತ ಕಲೆ ಯಕ್ಷಗಾನ.  ಪಟ್ಲ ಸತೀಶ್ ಶೆಟ್ಟಿ ಕೇವಲ ಕಲಾವಿದ ಮಾತ್ರವಲ್ಲ. ಪಟ್ಲ ಫೌಂಡೇಶನ್ ಸ್ಥಾಪಿಸಿ ಅನೇಕ ಕಲಾವಿದರಿಗೆ ಬದುಕು  ಕೊಡುತ್ತಿದ್ದಾರೆ’ ಎಂದು ಅಭಿನಂದಿಸಿದರು. 



ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುವುದು ಸರ್ವಶ್ರೇಷ್ಠ ಕೆಲಸ. ವಿದ್ಯಾರ್ಥಿಗಳಿಗೆ ವಿದ್ಯೆ -ಬುದ್ಧಿಯ ಜೊತೆಗೆ ಯಕ್ಷಗಾನದ ಪರಿಚಯ ಮಾಡಿಸುವುದು ನಮ್ಮ ಕರ್ತವ್ಯ. ಪಟ್ಲ ಸತೀಶ್ ಶೆಟ್ಟಿ ಅವರಂತಹ ಭಾಗವತ ಹಾಗೂ ಯಕ್ಷ ಕಲಾವಿದರು, ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವುದರ ಜೊತೆ ಅನೇಕ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣ ನೀಡಿ, ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದರು. 



2015ರಲ್ಲಿ ಪ್ರಾರಂಭವಾದ ಯಕ್ಷ ಧ್ರುವ ಫೌಂಡೇಶನ್ ರಾಜ್ಯದಲ್ಲಿ 39 ಘಟಕಗಳನ್ನು ಒಳಗೊಂಡಿದೆ. ಯಕ್ಷ ಶಿಕ್ಷಣ ನೀಡುವುದರಿಂದ ಮಕ್ಕಳಲ್ಲಿ ಸೌಂದರ್ಯ ಪ್ರಜ್ಞೆಯನ್ನು ಮೂಡಿಸಿದಂತಾಗುತ್ತದೆ. ಯಕ್ಷಗಾನವನ್ನು ಕಲಿತ ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರಬಲ ಹಾಗೂ ಅರ್ಥಪೂರ್ಣವಾಗಿ ಮೂಡಿಬಂದಿರುತ್ತದೆ. ಕನ್ನಡ ಭಾಷೆಯನ್ನು ಕಟ್ಟುವಲ್ಲಿ ಯಕ್ಷಗಾನ  ಮಹತ್ಕಾರ್ಯವನ್ನು ಮಾಡುತ್ತಿದೆ ಎಂದರು. 



ಬುಟ್ಟಿಕೆರೆ ಪುರುಷೋತ್ತಮ ಪೂಂಜಾ ಅವರ ಪತ್ನಿ ಶೋಭಾ ಪುರುಷೋತ್ತಮ ಪೂಂಜ ಅವರನ್ನು ಗೌರವಿಸಲಾಯಿತು.  ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ. ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ್ ಶೆಟ್ಟಿ ವಂದಿಸಿದರು.    



ಮೂಡುಬಿದಿರೆಯ ಉದ್ಯಮಿ ಕೆ. ಶ್ರೀಪತಿ ಭಟ್, ಫೌಂಡೇಷನ್ ಟ್ರಸ್ಟ್ ಪದಾಧಿಕಾರಿಗಳಾದ ಪುರುಷೋತ್ತಮ ಕೆ. ಭಂಡಾರಿ, ದಿವಾಕರ್ ರಾವ್, ಡಾ. ಮನು ರಾವ್,  ಸುದೇಶ್ ಕುಮಾರ್ ರೈ, ಭುಜಬಲಿ ಧರ್ಮಸ್ಥಳ, ಸರಪಾಡಿ ಅಶೋಕ ಶೆಟ್ಟಿ, ದೀವಿತ್ ಕೋಟ್ಯಾನ್, ಪಣಂಬೂರು ವಾಸುದೇವ ಐತಾಳ್, ಪ್ರೋ ಎಮ್ ಎಲ್ ಸಾಮಗ, ಕದ್ರಿ ಪ್ರದೀಪ್ ಆಳ್ವ ಇದ್ದರು. 



ಕಾರ್ಯಕ್ರಮದ ಅಂಗವಾಗಿ ಯಕ್ಷರೂಪಕ ಸ್ಪರ್ಧೆ, ಯಕ್ಷ ಲೇಖನ ಸ್ಪರ್ಧೆ, ಯಕ್ಷಜ್ಞಾನ ಪರೀಕ್ಷಾ ಪಂಥ, ಯಕ್ಷ ರಂಗು ಮುಖವರ್ಣಿಕೆ, ಶ್ಲೋಕ ಕಂಠಪಾಠ, ಯಕ್ಷ ರಸ ಪ್ರಶ್ನೆ, ಯಕ್ಷ ಸ್ವಗತ ಸ್ಪರ್ಧೆಗಳು ವಿವಿಧ ವೇದಿಕೆಗಳಲ್ಲಿ ನಡೆದವು. ಈ ಕಾರ್ಯಕ್ರಮದಲ್ಲಿ ಒಂದೇ ಭಾರಿ 1650ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಯಕ್ಷರೂಪಕದ ಮೂಲಕ ರಂಗ ಪ್ರವೇಶ ಮಾಡಿದ್ದು ಎಲ್ಲರ ಗಮನ ಸೆಳೆಯಿತು.  ಅವಿಭಜಿತ ದ.ಕ, ತುಮಕೂರು ಶಿವಮೊಗ್ಗ ಜಿಲ್ಲೆಗಳಿಂದ ಒಟ್ಟು 2074 ಕ್ಕೂ ಅಧಿಕ ವಿದ್ಯಾರ್ಥಿಗಳು ಏಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

 

 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top