ವಿಜ್ಞಾನವು ವಿಶೇಷ ಜ್ಞಾನವಾಗಿದೆ. ಮೌಢ್ಯತೆ, ಕಂದಾಚಾರ, ಅಂಧಕಾರಗಳನ್ನು ಹೋಗಲಾಡಿಸುವ ವಿಶೇಷ ಜ್ಞಾನದ ಬೆಳಕು ವಿಜ್ಞಾನ. ವಿಜ್ಞಾನದ ಅರಿವಿಲ್ಲದೆ ಹೋದರೆ ಜ್ಞಾನವು ಪೂರ್ಣವಾಗುವುದಿಲ್ಲ. ಭಾರತದಲ್ಲಿ ವಿಜ್ಞಾನದ ಹುಟ್ಟು ಇಂದು ನಿನ್ನೆಯದಲ್ಲ. ಯಾವಾಗ ಸಿಂಧೂ ಬಯಲಿನ ಸಂಸ್ಕೃತಿ ಹುಟ್ಟಿಕೊಂಡಿತೋ ಅಂದೇ ವಿಜ್ಞಾನದ ಪ್ರಯೋಗ ಯಶಸ್ವಿಯಾಗಿ ನಡೆದಿತ್ತು. ಪ್ರಪಂಚದಲ್ಲಿ ಬೆಂಕಿ ಮತ್ತು ಚಕ್ರದ ಹುಟ್ಟು ಎಂದು ಮೊದಲಾಯಿತೋ ಅಂದಿನ ದಿನವೇ ವಿಜ್ಞಾನ ಜನ್ಮತಳೆಯಿತು ಎಂದರೆ ತಪ್ಪಾಗಲಾರದು.
ಪ್ರತಿ ವರ್ಷ ಫೆಬ್ರವರಿ 28 ನ್ನು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. 1928 ರ ಫೆಬ್ರವರಿ 28 ರಂದು ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿವಿ ರಾಮನ್ ಅವರು ರಾಮನ್ ಪರಿಣಾಮವನ್ನು ಕಂಡುಹಿಡಿದುದನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ಫೆಬ್ರವರಿ 28 ರಂದು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ.
ಸರ್.ಸಿ.ವಿ.ರಾಮನ್ ರವರು ಒಮ್ಮೆ ಹಡಗಿನಲ್ಲಿ ಪ್ರಯಾಣಿಸುವಾಗ ಅವರಿಗೆ ಸಮುದ್ರ ಏಕೆ ಯಾವಾಗಲೂ ನೀಲಿಯಾಗಿಯೇ ಕಾಣುತ್ತದೆ ? ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿತಂತೆ. ಅದು ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೇನಾದರೂ ಗುಟ್ಟು ಅಡಗಿದೆಯೋ ಎಂದು ಪತ್ತೆಮಾಡಲು ಹೊರಟ ರಾಮನ್ ರವರು ಸೂರ್ಯನ ಬೆಳಕು ನೀರಿನಲ್ಲಿ ಚದುರಿಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯವನ್ನು ಕಂಡುಹಿಡಿದರು. ಇದೇ ಅಂಶ ಮುಂದೆ ಅವರು ತಮ್ಮ ಅಧ್ಯಯನವನ್ನು ಮುಂದುವರೆಸಲು ಸ್ಫೂರ್ತಿಯಾಯಿತು.
" ಯಾವುದೇ ಪಾರದರ್ಶಕ ರಾಸಾಯನಿಕ ವಸ್ತುವಿನ ಮೂಲಕ ಬೆಳಕನ್ನು ಹಾಯಿಸಿದಾಗ ಅದರಿಂದ ಹೊರಬರುವ ಕಿರಣಗಳು ಒಳಬರುವ ಕಿರಣಗಳಿಗಿಂತ ಭಿನ್ನವಾದ ದಿಕ್ಕಿನತ್ತ ಚದುರಿರುವುದನ್ನು ನಾವು ನೋಡಬಹುದು ( ಗಾಜಿನ ಪಟ್ಟಕದ ಮೂಲಕ ಬೆಳಕನ್ನು ಹಾಯಿಸುವ ಉದಾಹರಣೆ ನೆನಪಿಸಿಕೊಳ್ಳೋಣ ). ಹೀಗೆ ಚದುರಿದ ಬಹುಪಾಲು ಕಿರಣಗಳ ಸ್ವರೂಪ ಮೂಲ ಕಿರಣದಂತೆಯೇ ಇರುತ್ತದಾದರೂ ಒಂದಷ್ಟು ಭಾಗದ ಕಿರಣಗಳ ತರಂಗಾಂತರದ ಮೂಲಕ್ಕಿಂತ ಬದಲಾಗಿರುತ್ತದೆ. ಇದನ್ನೇ ರಾಮನ್ ಪರಿಣಾಮವೆಂದು ಕರೆಯುತ್ತಾರೆ."
ಕೋಲ್ಕತಾದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್‌ನಲ್ಲಿ ರಾಮನ್ ಅವರು ತಮ್ಮ ಸಹೋದ್ಯೋಗಿಗಳೊಡನೆ ನಡೆಸಿದ ಅಧ್ಯಯನಗಳ ಪರಿಣಾಮವೇ ರಾಮನ್ ಪರಿಣಾಮದ ಆವಿಷ್ಕಾರ. ಈ ಮಹೋನ್ನತ ಸಾಧನೆಗಾಗಿ ಅವರಿಗೆ 1930ನೇ ಇಸವಿಯಲ್ಲಿ ನೊಬೆಲ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊತ್ತಮೊದಲ ನೊಬೆಲ್ ಪುರಸ್ಕಾರವೂ ಹೌದು. 1986ರಲ್ಲಿ, ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಮ್ಯುನಿಕೇಷನ್ (NATIONAL COUNCIL FOR SCIENCE AND TECNOLOGY COMMUNICATION ) ಸಂಸ್ಥೆಯು ಫೆಬ್ರವರಿ 28 ಅನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಗೊತ್ತುಪಡಿಸಲು ಭಾರತ ಸರ್ಕಾರವನ್ನು ಮನವಿ ಮಾಡಿತು. ಈ ಹಿನ್ನೆಲೆಯಲ್ಲಿ ಪ್ರತೀ ವರ್ಷ ಈ ಘಟನೆಯನ್ನು ಪ್ರಸ್ತುತ ಭಾರತದಾದ್ಯಂತ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಇತರ ಶೈಕ್ಷಣಿಕ, ವೈಜ್ಞಾನಿಕ, ತಾಂತ್ರಿಕ, ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಆಚರಿಸಲಾಗುತ್ತದೆ. ಈ ಆಚರಣೆಯು ಸಾರ್ವಜನಿಕ ಭಾಷಣಗಳು, ರೇಡಿಯೋ ಪ್ರಸಾರ, ದೂರದರ್ಶನ ಪ್ರಸಾರ, ವಿಜ್ಞಾನ ಚಲನಚಿತ್ರಗಳು, ವಿಷಯಗಳು ಮತ್ತು ಪರಿಕಲ್ಪನೆಗಳನ್ನು ಆಧರಿಸಿದ ವಿಜ್ಞಾನ ಪ್ರದರ್ಶನಗಳು, ಚರ್ಚೆಗಳು, ರಸಪ್ರಶ್ನೆ ಸ್ಪರ್ಧೆಗಳು, ಉಪನ್ಯಾಸಗಳು, ವಿಜ್ಞಾನ ಮಾದರಿ ಪ್ರದರ್ಶನಗಳು ಮತ್ತು ಇನ್ನೂ ಅನೇಕ ಚಟುವಟಿಕೆಗಳನ್ನು ಒಳಗೊಂಡಿದೆ.
'' INDIGENOUS TECHNOLOGIES FOR VIKSIT BHARAT " "ಅಂದರೆ "' ವಿಕಸಿತ ಭಾರತಕ್ಕಾಗಿ ಸ್ಥಳೀಯ ತಂತ್ರಜ್ಞಾನಗಳು." ಎಂದರ್ಥ. ಇದು 2024 ನೇ ವರ್ಷದ ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವಪೂರ್ಣ ಘೋಷವಾಕ್ಯವಾಗಿದೆ. ಈ ಘೋಷಣೆಯ ಮೂಲಕ ನಮ್ಮ ವಿಕಾಸಗೊಳ್ಳುತ್ತಿರುವ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ತಾನು ತೆರೆದುಕೊಂಡಿದೆ. ಏಕೆಂದರೆ ಅನೇಕ ರಾಷ್ಟ್ರಗಳೊಂದಿಗಿನ ಭಾರತದ ಸೌಹಾರ್ದಯುತ ಸಂಬಂಧವು ಜಾಗತಿಕ ಸೌಖ್ಯ ಮತ್ತು ಶಾಂತಿಯನ್ನು ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಬಹು ಮುಖ್ಯವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಯಸುತ್ತದೆ.
ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುವ ಪ್ರಮುಖ ಉದ್ದೇಶಗಳು:
1. ಮಾನವನ ಅಭಿವೃದ್ಧಿಯ ಹಿತಕ್ಕಾಗಿ ವಿಜ್ಞಾನ ಕ್ಷೇತ್ರದಲ್ಲಿನ ಎಲ್ಲಾ ಚಟುವಟಿಕೆಗಳು, ಪ್ರಯತ್ನಗಳು ಮತ್ತು ಸಾಧನೆಗಳನ್ನು ಪ್ರದರ್ಶಿಸಲು.
2. ಜನರನ್ನು ಪ್ರೋತ್ಸಾಹಿಸುವುದರ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಹೆಚ್ಚು ಪ್ರಚುರ ಪಡಿಸುವುದು.
3. ಜನರ ದಿನನಿತ್ಯದ ಜೀವನದಲ್ಲಿ ಉಪಯೋಗಿಸುವ ವಿಜ್ಞಾನದ ಅಂಶಗಳ ಮಹತ್ವದ ಬಗ್ಗೆ ಸಂದೇಶವನ್ನು ಹರಡಲು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ.
4. ವಿಜ್ಞಾನ ಕ್ಷೇತ್ರದ ಅಭಿವೃದ್ಧಿಗಾಗಿ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಲು ಇದನ್ನು ಆಚರಿಸಲಾಗುತ್ತದೆ.
5, ಭಾರತದಲ್ಲಿ ವೈಜ್ಞಾನಿಕ ಮನೋಭಾವದ ನಾಗರಿಕರಿಗೆ ವಿಜ್ಞಾನದ ಅನ್ವಯ ಮತ್ತು ಆವಿಷ್ಕಾರಗಳಿಗೆ ಅವಕಾಶ ಕಲ್ಪಿಸುವುದು.
6. ವಿಜ್ಞಾನ ಮತ್ತು ಸಂವಹನ ಕ್ಷೇತ್ರದಲ್ಲಿನ ಅತ್ಯುತ್ತಮ ಪ್ರಯತ್ನಗಳನ್ನು ಗುರುತಿಸುವುದು ಹಾಗೂ ರಾಷ್ಟ್ರೀಯ ವಿಜ್ಞಾನ ದಿನವನ್ನು ಜನಪ್ರಿಯಗೊಳಿಸುವುದು.
ನಾವು 21ನೇ ಶತಮಾನದ ವೈಜ್ಞಾನಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದೇವೆ. ಈ ಕಾಲಘಟ್ಟದಲ್ಲಿ ಬಹಳಷ್ಟು ಬೆಳವಣಿಗೆಗಳನ್ನು ಕಂಡಿದ್ದೇವೆ. ಎಲ್ಲಾ ರೀತಿಯ ಬೆಳವಣಿಗೆಗಳಲ್ಲಿ ಮುಂಚೂಣಿಯಲ್ಲಿರುವುದು ವಿಜ್ಞಾನ ತಂತ್ರಜ್ಞಾನ. ಋಷಿಮೂಲ ಮತ್ತು ನದಿಮೂಲ ಹುಡುಕಬಾರದು ಎನ್ನುತ್ತಾರೆ ತಿಳಿದವರು. ಆದರೆ ವಿಜ್ಞಾನ- ತಂತ್ರಜ್ಞಾನ ಬೆಳವಣಿಗೆಯ ಹಾದಿಯಲ್ಲಿ ವಿಜ್ಞಾನ-ತಂತ್ರಜ್ಞಾನಗಳ ಮೂಲವನ್ನು ಕೆದಕುತ್ತಾ ಹೊಸ ಹೊಸ ಆವಿಷ್ಕಾರಗಳು ಇಂದು ಮೊದಲಿಟ್ಟಿವೆ. ಬೃಹತ್ ಕೈಗಾರಿಕೆಗಳು, ಭಾರಿ ವಾಹನಗಳು, ಭಾರಿ ಕಟ್ಟಡಗಳು, ರಾಸಾಯನಿಕಗಳು, ಕ್ಷಿಪಣಿಗಳು, ರೇಡಾರ್ಗಳು, ಸ್ಫೋಟಕ ಸಾಮಾಗ್ರಿ ಅಣುಬಾಂಬುಗಳು, ನವೀನ ಮಾದರಿ ಬಂದೂಕುಗಳು, ಸಮೂಹ ಮಾಧ್ಯಮ ಸಾಧನಗಳು, ಜೈವಿಕಾಸ್ತ್ರಗಳು ವಿಜ್ಞಾನ-ತಂತ್ರಜ್ಞಾನದ ಕೊಡುಗೆಯಾಗಿದ್ದು ಇವು ದೇಶಾಭಿವೃದ್ಧಿ ಮತ್ತು ದೇಶರಕ್ಷಣಾ ದೃಷ್ಟಿಯಿಂದ ಅಗತ್ಯವೆನಿಸಿವೆ.
ನಿತ್ಯ ಜೀವನದಲ್ಲಿ ವಿಜ್ಞಾನ :
ನಾವು ಸಮಯ ನೋಡುವ ಗಡಿಯಾರ, ಮನರಂಜನೆಗಾಗಿ ಬಳಸುವ ರೇಡಿಯೋ, ದೂರದರ್ಶನ, ಚಲನಚಿತ್ರಗಳು, ನಾವು ತೊಡುವ ವಿಧವಿಧವಾದ ಉಡುಪುಗಳ ಸಿದ್ಧಪಡಿಸುವಿಕೆಯ ಯಂತ್ರಗಳು, ಸೇವಿಸುವ ಗಾಳಿಯಲ್ಲಿರುವ ಮತ್ತು ಕುಡಿಯುವ ನೀರಿನಲ್ಲಿರುವ ರಾಸಾಯನಿಕ ಮೂಲವಸ್ತುಗಳು, ಪದಾರ್ಥಗಳನ್ನು ತೂಕ ಮಾಡುವ ತಕ್ಕಡಿ, ನಾವು ಓದುವ ಪುಸ್ತಕ , ದಿನ ಪತ್ರಿಕೆಗಳನ್ನು ಮುದ್ರಣಗೊಳಿಸಿದ ಯಂತ್ರಗಳು , ಬಳಸುವ ಪೆನ್ನು , ಕಾಗದ, ಅಡುಗೆಗಾಗಿ ಬಳಸುವ ಸಿಲಿಂಡರ್ ಅನಿಲ, ಕುಡಿಯುವ ನೀರಿನ ಘಟಕದಲ್ಲಿ ಬಳಸುವ ಸಾಧನಗಳು, ವೈಜ್ಞಾನಿಕ ಸಾಧನ ಸಲಕರಣೆಗಳು, ಕಟ್ಟಡ ನಿರ್ಮಾಣದ ಯಂತ್ರಗಳು, ರಸ್ತೆ ನಿರ್ಮಾಣದ ಯಂತ್ರಗಳು, ನಮ್ಮ ಸಾರಿಗೆ ವ್ಯವಸ್ಥೆಯ ವಾಹನಗಳಾದ ಬಸ್ಸು, ಲಾರಿ, ಕಾರು, ಬೈಕು , ಸೈಕಲ್, ರೈಲು, ವಿಮಾನ, ಉಪಗ್ರಹ ಉಡ್ಡಯನದ ವಾಹನಗಳಾದ ರಾಕೆಟ್ ಗಳು, ವೈದ್ಯರು ಬಳಸುವ ಸಿರಿಂಜು, ಸ್ಟೆಥೋಸ್ಕೋಪ್, ಔಷಧಿಗಳು, ವ್ಯವಹಾರಕ್ಕಾಗಿ ಬಳಸುವ ಕ್ಯಾಲಿಕ್ಯುಲೇಟರ್ಸ್, ದಿಕ್ಸೂಚಿಗಳು, ಆಧುನಿಕ ಜನಜೀವನದ ದಿನನಿತ್ಯದ ಅವಿಭಾಜ್ಯ ಅಂಗವೆನಿಸಿದ ಮೊಬೈಲ್ ಫೋನ್ ಗಳು ಮತ್ತು ಚಾರ್ಜ್ ರ್ ಗಳು, ಆಧುನಿಕ ಗಣಕ ಯಂತ್ರಗಳು, ರೋಬೋಟ್ಗಳು, ಆಧುನಿಕ ಉಪಗ್ರಹಗಳು ಎಲ್ಲವೂ ವಿಜ್ಞಾನದ ಅದ್ವಿತೀಯ ಕೊಡುಗೆಗಳಾಗಿವೆ. ವಿಜ್ಞಾನವನ್ನು ಯಾವುದೇ ವಿನಾಶಕ್ಕಾಗಿ ಬಳಸದೇ ಶಾಂತಿ ಸ್ಥಾಪನೆಗಾಗಿ ಬಳಸುತ್ತಾ ಮತ್ತು ಬೆಳೆಸುತ್ತಾ ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆಯನ್ನು ಅರ್ಥಪೂರ್ಣವಾಗಿಸೋಣ.
-ಕೆ. ಎನ್. ಚಿದಾನಂದ . ಹಾಸನ .
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ