ಭೂ ತಾಯಿ ಮುಟ್ಟಾಗುವ ದಿನ- ತುಳುನಾಡಿನ ಕೆಡ್ಡಸ ಆಚರಣೆ

Upayuktha
0


ತುಳುನಾಡಿನ ಜನರಿಗೆ ಕೆಡ್ಡಸ ಎಂದರೆ ಭೂಮಿ ತಾಯಿ ಮದುವೆ ಆಗುವ ದಿನ. ಇದು ತುಳು ತಿಂಗಳಾದ  ಪೊನ್ನಿ 27ರ ನಂತರ ಮೂರು ದಿವಸ ಆಚರಿಸುವ ಹಬ್ಬವಾಗಿದೆ. 


ಭೂಮಿ ತಾಯಿ ಮದುವೆ ಆಗಿ ಹೊರ ಹೋಗಿ ಪ್ರಕೃತಿಗೆ ಫಲ ಕೊಡುತ್ತಾಳೆ ಎನ್ನುವುದೇ ಹಿರಿಯರ ನಂಬಿಕೆ. ಆ ನಂಬಿಕೆಯ ಪ್ರಕಾರ ಇಂದಿಗೂ ಆಚರಣೆ ನಡೆಯುತ್ತಿದೆ.


ಈ ಕೆಡ್ಡಸದ ದಿವಸದಂದು ಭೂಮಿಗೆ ಗಾಯವಾಗುವಂತಹ ಹಾರೆ, ಪಿಕಾಸ್ ನಂತಹ ವಸ್ತುಗಳಿಂದ ಕೆಲಸ ಮಾಡಬಾರದು. ಹಿಂದೊಮ್ಮೆ ಯಾರೋ ಈ ದಿವಸ ಭೂಮಿಯಲ್ಲಿ ರಕ್ತವನ್ನು ಕಂಡಿದ್ದರು ಎನ್ನುವ ಮಾತು ಇದೆ. ಆದ್ದರಿಂದ ಇಂದು ಯಾರು ಈ ದಿವಸ ಇಂತಹ ಕೆಲಸ ಮಾಡುವುದಿಲ್ಲ.


ಆಚರಣೆಯ ಕ್ರಮ:

ಕೆಡ್ಡಸದ ಮೂರನೇ ದಿವಸದಂದು ಮುಂಜಾನೆ ಅಂಗಳ ಗುಡಿಸಿ, ತುಳಸಿಕಟ್ಟೆಯ ಮುಂದುಗಡೆ ಸೆಗಣಿ ಸಾರಿಸಿ, ಮಸಿಯತುಂಡನ್ನು ಇಟ್ಟು, ಸರೋಳಿ ಎಲೆ, ಮಾವಿನ ಎಲೆ ಮತ್ತು ಹಲಸಿನ ಎಲೆಯನ್ನು ಮೂರು ಸಾಲಾಗಿ ಇಟ್ಟು, ನಂತರ ಕತ್ತಿ ಹಾಗೂ ಒಂದು ನೀರಿಲ್ಲದ ತಂಬಿಗೆಯನ್ನು ಕವಚಿ ಇಟ್ಟು, ನೊರೆಕಾಯಿ, ಸೀಗೆಕಾಯಿ, ಅರಿಶಿನ ತುಂಡು ಹಾಗೂ  ಐದು ಎಲೆ ಒಂದು ಅಡಿಕೆ ಅನ್ನು ಇಡುವ ಕ್ರಮವಿದೆ. ಇದಾದ ನಂತರ ಮನೆಯ ಹೆಂಗಸು ಉರುಳಿಯಲ್ಲಿ ಎಣ್ಣೆ ತಂದು ಭೂಮಿಗೆ ಬಿಟ್ಟು ಸಂಜೆಯವರೆಗೆ ಅದನ್ನು ಅಲ್ಲೇ ಬಿಡುವ ಕ್ರಮ  ಹಿರಿಯರಿಂದ ಬಂದಿದೆ.


ಕೆಡ್ಡಸದ ವಿಶೇಷ  ಏನೆಂದರೆ ನೆನ್ನೆರಿ ಇದು ಕುಚ್ಚಲಕ್ಕಿಯನ್ನು ಹುರಿದು ಹುಡಿ ಮಾಡಿ ತೆಂಗಿನಕಾಯಿ ತುರಿ, ಬೆಲ್ಲ, ಎಳ್ಳು, ಜೇನು ಹಾಕಿ ಮಿಶ್ರಣ ಮಾಡುವುದೇ ನೆನ್ನೆರಿ. ಇದನ್ನು ಅಂತು ಮಕ್ಕಳು ಬಹಳ ಇಷ್ಟಪಟ್ಟು ತಿನ್ನುತ್ತಾರೆ.


ಕೆಡ್ಡಸದ ಸಮಯ  ಮನುಜರಿಗೆ ಮೈ  ಉಷಾರಿಲ್ಲದೆ ಆಗುತ್ತಿತ್ತು. ತಂಪು ಗಾಳಿ ಬೀಸುತ್ತಿತ್ತು. ಆದ್ದರಿಂದ ಹಿರಿಯರು ಬೇಟೆಗೆ ಹೋಗಿ ಮೃಗಗಳನ್ನು ತಿನ್ನುವುದನ್ನು ರೂಢಿಸಿಕೊಂಡಿದ್ದರು ಎನ್ನುವುದನ್ನು ನಾನು ಕೇಳಿದ್ದೆ.

ಇನ್ನೊಂದು ವಿಷಯ ಮನೆಯಲ್ಲಿ ಬದನೆ, ನುಗ್ಗೆ ಸಾಂಬಾರು ಮಾಡುವ ಪದ್ಧತಿ ಇಂದಿಗೂ ರೂಢಿಯಲ್ಲಿದೆ.


ತುಳುನಾಡಿನಲ್ಲಿ ವಾರ್ಷಿಕಾವರ್ತನದಲ್ಲಿ ಆಚರಣೆಯಾಗುವ ಒಂದು ಹಬ್ಬ. ಕೃಷಿ ಸಂಬಂಧಿಯಾಗಿ ಇದರ ಆಚರಣೆಯಾಗುತ್ತದೆ. ಸಮೃದ್ಧಿ ಮತ್ತು ‍ಫಲಾಪೇಕ್ಷೆಯ ಆಶಯದಿಂದ ಇದು ಆಚರಣೆಯಾಗುತ್ತದೆ. ಕೆಡ್ಡಸ ಆಚರಣೆಯನ್ನು ಭೂಮಿ ತಾಯಿಯ ಮುಟ್ಟಾಗುವ ಹಬ್ಬವೆಂದು ಕರೆದು ಭೂಮಿಯನ್ನು ಸಾಮಾನ್ಯ ಸ್ತ್ರೀಯೆಂಬಂತೆ ಅವರು ಪರಿಭಾವಿಸಿದ್ದಾರೆ. ಹೆಣ್ಣಿನಂತೆ ಭೂಮಿಯು ಮುಟ್ಟಾಗುತ್ತಾಳೆಂದು ಪರಿಭಾವಿಸಿ, ಆ ನಂಬಿಕೆಯ ಪ್ರಕಾರ ಅವಳನ್ನು ಮಡಿಗೊಳಿಸುವ ದಿನವೆಂದು ಈ ಆಚರಣೆಯನ್ನು ನಡೆಸುತ್ತಾರೆ.



-ಅನನ್ಯ ಎಚ್ ಸುಬ್ರಹ್ಮಣ್ಯ

ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ ಪತ್ರಿಕೋದ್ಯಮ ವಿದ್ಯಾರ್ಥಿನಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .




Post a Comment

0 Comments
Post a Comment (0)
To Top