ತನ್ನಿಮಿತ್ತ ಸಕಾಲಿಕ ಲೇಖನ
ಸೂರ್ಯನನ್ನು ‘ಗ್ರಹ’ ಎಂದೇ ಭಾರತೀಯ ಸಂಸ್ಕೃತಿಯಲ್ಲಿ ಕಾಣಲಾಗಿದೆ. ಒಂಭತ್ತು ಗ್ರಹಗಳಿಗೆ ಅಧಿಪತಿ ಅವನು. ಅವನು ಏಳು ಕುದುರೆಗಳ ರಥದಲ್ಲಿ ಸಂಚರಿಸುವವನು; ಅರುಣ ಅವನ ಸಾರಥಿ. ಸೂರ್ಯನನ್ನು ಆರೋಗ್ಯಕಾರಕನಾಗಿಯೂ ಆರಾಧಿಸಲಾಗುತ್ತದೆ. ಅವನನ್ನು ಹಲವು ಸಂಕೇತಗಳ ಮೂಲಕವೂ ಪೂಜಿಸಲಾಗುತ್ತದೆ. ಅರ್ಕ, ಎಂದರೆ ಎಲ್ಲದ ಗಿಡವನ್ನು ಸೂರ್ಯಸ್ವರೂಪ ಎಂದು ಪೂಜಿಸಲಾಗುತ್ತದೆ. ತಾವರೆ ಅವನಿಗೆ ಪ್ರಿಯವಾದ ಹೂವು. ಅಶ್ವತ್ಥವೃಕ್ಷವೂ ಸೂರ್ಯನ ಸ್ವರೂಪವೇ ಎನ್ನಲಾಗಿದೆ.
ನಮ್ಮ ಸಂಸ್ಕೃತಿಯಲ್ಲಿ ಸೂರ್ಯನಿಗೆ ತುಂಬ ಮಹತ್ವದ ಸ್ಥಾನವಿದೆ. ಆದಿಭೌತಿಕ-ಆದಿದೈವಿಕ-ಆಧ್ತಾತ್ಮಿಕ- ಈ ಮೂರು ನೆಲೆಗಳಲ್ಲೂ ಸೂರ್ಯನಿಗೆ ಮನ್ನಣೆಯಿದೆ. ವೇದದಲ್ಲಿ ಸೂರ್ಯನನ್ನು ಹಲವು ಹೆಸರುಗಳಲ್ಲಿ ನಿರ್ದೇಶಿಸಿ, ಪ್ರಾರ್ಥಿಸಲಾಗಿದೆ. ಹತ್ತಾರು ಸೂಕ್ತಗಳಲ್ಲಿ ಅವನ ಸ್ವರೂಪವನ್ನೂ ಶಕ್ತಿಯನ್ನೂ ವರ್ಣಿಸಲಾಗಿದೆ. ‘ಶ್ರೇಷ್ಠನಾದ ಒಡೆಯ, ಸರ್ವಾಂತರ್ಯಾಮಿ, ಒಳ್ಳೆಯದರ ಪ್ರೇರಕ (ಸುಷ್ಠುಃ ಅರ್ಯಃ, ಸ್ವಾಮೀ ಸರ್ವಾಂರ‍್ಯಾಮಿಯಾ ಸುಷ್ಠು ಪ್ರೇರಕಃ) –ಎಂದು ಸಾಯಣಾಚಾರ್ಯರು ಸೂರ್ಯನನ್ನು ವರ್ಣಿಸಿದ್ದಾರೆ.
ಕಶ್ಯಪಮುನಿಯಿಂದ ಆದಿತಿಯಲ್ಲಿ ಜನಿಸಿದವನೇ ಸೂರ್ಯ. ಸಂಜ್ಞಾದೇವಿಯನ್ನು ಮದುವೆಯಾದ ಸೂರ್ಯ ಅವಳಿಂದ ಯಮ, ಮನು, ಯಮುನೆ ಎಂಬ ಮೂವರು ಮಕ್ಕಳನ್ನು ಪಡೆದ. ಛಾಯಾದೇವಿಯನ್ನು ಮದುವೆಯಾಗಿ ಅವಳಿಂದ ಸಾವರ್ಣ ಮತ್ತು ಶನೈಶ್ಚರ ಎಂಬ ಇಬ್ಬರು ಪುತ್ರರನ್ನು ಪಡೆದ. ಅಶ್ವಿನಿದೇವತೆಗಳು ಕೂಡ ಸೂರ್ಯನ ಮಕ್ಕಳೇ. ಸುಗ್ರೀವನು ಸೂರ್ಯನ ಅಂಶದಿAದಲೇ ಜನಿಸಿದವನು; ಕುಂತಿಯ ಮಗನಾದ ಕರ್ಣನೂ ಕೂಡ ಸೂರ್ಯನಿಂದಲೇ ಜನಿಸಿದವನು.
ರಾಮಾಯಣ ಮತ್ತು ಮಹಾಭಾರತಗಳಲ್ಲಿ ಸೂರ್ಯನ ಉಲ್ಲೇಖ ಹಲವು ಬಾರಿ ಬಂದಿದೆ. ಶ್ರೀರಾಮನು ರಾವಣನನ್ನು ಸಂಹರಿಸುವುದಕ್ಕೆ ಮೊದಲು ಸೂರ್ಯನನ್ನು ಸ್ತುತಿಸಿರುವುದು ಪ್ರಸಿದ್ಧವಾಗಿದೆ. ಅದನ್ನೇ ‘ಆದಿತ್ಯಹೃದಯ’ ಎಂದು ಕರೆದಿರುವುದು, ಮಹಾಭಾರತದಲ್ಲಿ ವನವಾಸದಲ್ಲಿದ್ದ ಯುಧಿಷ್ಠಿರನು ಅಕ್ಷಯಪಾತ್ರೆಯನ್ನು ಪಡೆಯುವುದಕ್ಕಾಗಿ ಸೂರ್ಯನನ್ನು ಪ್ರಾರ್ಥಿಸುತ್ತಾನೆ. ಸೂರ್ಯನ ಕುರಿತ ಹಲವು ಸ್ತೋತ್ರಗಳಿವೆ. ಇವುಗಳಲ್ಲಿ ಮಯೂರಕವಿಯ ‘ಸೂರ್ಯಶತಕಮ್’ ಅತ್ಯಂತ ಪ್ರಸಿದ್ಧವಾಗಿದೆ.
ಅನಂತನಾಮಗಳ ದೇವತೆ
ಇಂದು ಗಾಯತ್ರೀಮಂತ್ರ ಎಂದು ಪ್ರಸಿದ್ಧವಾಗಿರುವ ವೇದಮಂತ್ರದಲ್ಲಿ ಸೂರ್ಯನ ಸವಿತೃರೂಪವನ್ನೇ ಪ್ರಾರ್ಥಿಸಲಾಗಿದೆ: ‘ತತ್ಸವಿತುರ್ವರೇಣ್ಯಂ | ಭರ್ಗೋ ದೇವಸ್ಯ ಧಿಮಹಿ| ಧಿಯೋ ಯೋ ನಃ ಪ್ರಚೋದಯಾತ್||’ ಈ ಮಂತ್ರದಲ್ಲಿ ಸವಿತೃವನ್ನು ನಮ್ಮ ಬುದ್ಧಿಯನ್ನು ಬೋಧಗೊಳಿಸುವಂತೆ ಪ್ರಾರ್ಥಿಸಲಾಗಿದೆ. ಯಾವುದೇ ರೀತಿಯ ಲೌಕಿಕ ªಸ್ತುವನ್ನೋ ಸುಖವನ್ನೋ ಪ್ರಾರ್ಥಿಸದೆ, ಅರಿವಿಗಾಗಿಯಷ್ಟೆ ಸೂರ್ಯನನ್ನು ಪ್ರಾರ್ಥಿಸಿರುವುದು ಅತ್ಯಂತ ಮನನೀಯ. ಎಲ್ಲರೂ ಹೇಳಬಹುದಾದ ವೈದಿಕ ಪ್ರಾರ್ಥನೆ ಇದಾಗಿದೆ.
ಸೂರ್ಯನಿಗೆ ದೇವಾಲಯಗಳು ಇಲ್ಲವೆಂದೇ ಹೇಳಬಹುದು. ಆದರೆ ಒರಿಸ್ಸಾ ರಾಜ್ಯದ ಕೋನಾರ್ಕ್ನಲ್ಲಿರುವ ಸೂರ್ಯ ದೇವಾಲಯ ಪ್ರಸಿದ್ಧವಾಗಿದೆ. ಯುನೆಸ್ಕೋದಿಂದ ವಿಶ್ವಪರಂಪರೆಯ ತಾಣ ಎಂಬ ಮಾನ್ಯತೆ ಪಡೆದಿದೆ. ಕೋನಾರ್ಕ್ ದೇವಾಲಯ ಕಲ್ಲಿನ ರಥದ ಆಕಾರದಲ್ಲಿದೆ. ಈ ಇಪ್ಪತ್ನಾಲ್ಕು ಚಕ್ರಗಳ ರಥದೊಳಗೆ ಸೂರ್ಯದೇವನಿದ್ದಾನೆ. ಸೂರ್ಯನು ಕಾಲಸ್ವರೂಪ ಎನ್ನುವುದನ್ನು ಈ ಗುಡಿ ಸಂಕೇತಿಸುತ್ತದೆ. ಈ ದೇವಾಲಯ ಶಿಲ್ಪಕಲೆಯ ಭವ್ಯತೆ ಮತ್ತು ಕಲ್ಲಿನ ಸೂಕ್ಷö್ಮ ಕೆತ್ತನೆಗಳಿಂದಾಗಿ ಲೋಕವಿಖ್ಯಾತವಾಗಿದೆ.
ಸೂರ್ಯನನ್ನು ಹಲವು ಹೆಸರುಗಳಿಂದ ಕರೆಯಲಾಗಿದೆ. ಸೂರ್ಯ, ಅರ್ಯಮಾ, ಆದಿತ್ಯ, ದಿವಾಕರ, ಭಾಸ್ಕರ, ಪ್ರಭಾಕರ, ವಿಭಾಕರ, ಸಪ್ತಾಶ್ವ, ಮಾರ್ತಂಡ, ಮಿಹಿರ, ಅರುಣ, ಪೂಷನ್, ಸವಿತೃ, ಭಾನು, ವಿಭಾವಸು, ಗ್ರಹಪತಿ, ಸಹಸ್ರಾಂಶು, ಸವಿತ, ರವಿ, ಪದ್ಮಾಕ್ಷ, ಕರ್ಮಸಾಕ್ಷಿನ್, ಜಗಚ್ಚಕ್ಷÄ, ಲೋಕಬಂಧು, ದಿನಮಣಿ, ಖದ್ಯೋತ, ಲೋಕಬಾಂಧವ, ಇನ, ಭಗ, ಛಾಯಾಪತಿ, ಅಂಶುಮಾಲಿನ್, ಅರ್ಕ, ಜ್ಯೋತಿ, ಪ್ರಕಾಶನ, ಸಪ್ತವಾಹನ, ಗಭಸ್ತಿನೇಮೀ, ಮಿತ್ರ-ಇವು ಸೂರ್ಯನ ಕೆಲವು ಹೆಸರುಗಳು.
‘ಸೂರ್ಯ ನಮಸ್ಕಾರ’ ಅಂದರೆ ಏನು? ಈ ಕಾರ್ಯದ ಹಿಂದಿರುವ ಮಹತ್ತ÷್ವಗಳೇನು? ಸೂರ್ಯ ನಮಸ್ಕಾರ ಒಂದು ಮತೀಯ ಆಚರಣೆಯೇ? ಅಥವಾ ಇದು ಆರೋಗ್ಯ ಭಾಗ್ಯದ ಹೆಬ್ಬಾಗಿಲೇ? ಮಾನವನ ಇತಿಹಾಸದಲ್ಲಿ ಅಂತರ್‌ಗಂಗೆಯಂತೆ ಹಾಸುಹೊಕ್ಕಾಗಿ ಬೆಳೆದು ಬಂದ ಈ ಪದ್ಧತಿಯ ಮೇಲೆ ಒಂದು ಕ್ಷ-ಕಿರಣ.
ಯೋಗಾಭ್ಯಾಸಕ್ಕೂ ಆರೋಗ್ಯಕ್ಕೂ ಸೂರ್ಯನಿಗೂ ನಂಟಿದೆ. ಹನ್ನೆರಡು ವಿವಿಧ ಭಂಗಿಗಳ ಮೂಲಕ ಮಾಡುವ ‘ಸೂರ್ಯನಮಸ್ಕಾರ’ವು ಆರೋಗ್ಯವೃದ್ಧಿಗಾಗಿಯೇ ಮಾಡುವುದು. ಮಿತ್ರಾಯ ನಮಃ. ರವಯೇ ನಮಃ, ಸೂರ್ಯನು ನಮಃ, ಭಾನವೇ ನಮಃ, ಖಗಾಯ ನಮಃ, ಪೂಷ್ಟೇ ನಮಃ, ಹಿರಣ್ಯಗರ್ಭಾಯ ನಮಃ ಮರೀಚಯೇ ನಮಃ ಆದಿತ್ಯಾಯ ನಮಃ, ಸವಿತ್ರೇ ನಮ, ಅರ್ಕಾಯ ನಮಃ, ಭಾಸ್ಕರಾಯ ನಮಃ –ಎಂಬ ಸೂರ್ಯನ ಹನ್ನೆರಡು ನಾಮಗಳನ್ನು ನಮಸ್ಕರದಲ್ಲಿ ಉಚ್ಚರಿಸಲಾಗುತ್ತದೆ.
ಆರೋಗ್ಯ ಭಾಗ್ಯವನ್ನು ಸಾಧಿಸಬಹುದಾದ ಮಾರ್ಗಗಳಲ್ಲಿ ಸೂರ್ಯ ನಮಸ್ಕಾರವೂ ಒಂದು. ‘ನಮಸ್ಕಾರ’ ಎಂಬ ಪದಕ್ಕೆ ಮತಧರ್ಮದ ಸೋಂಕು ತಗುಲುವುದಿದ್ದರೆ, ಸೂರ್ಯ ನಮಸ್ಕಾರ ಎನ್ನುವ ಬದಲು ಮುಂಬೆಳಗಿನ ಬಿಸಿಲಿನ ವ್ಯಾಯಾಮ ಮಾಡುತ್ತಿದ್ದೇನೆ ಎಂದೆಣಿಸಿದರೆ ಸಾಕು. ದ್ರಾವಿಡರ ಕಾಲದಿಂದ ಬಂದ ಈ ಪದ್ಧತಿಯನ್ನು ನಿಸರ್ಗ ಅಭಿಮಾನಿಗಳಾದ ಆರ್ಯರು ಅನುಸರಿಸಿದುದರಲ್ಲಿ ಆಶ್ಚರ್ಯವೇನಿಲ್ಲ. ಅನೇಕ ಪ್ರಾಚೀನ ಜನಾಂಗಗಳು ಸೂರ್ಯನನ್ನೆ ಸೃಷ್ಟಿಕಾರಣನೆಂದು ಪೂಜಿಸಿದರು.
ಸೂರ್ಯದೇವನಿಲ್ಲದ ಜಗತ್ತು ಕತ್ತಲೆ, ಲೋಕದ ಬೆಳಕಿನ ಕಣ್ಣಾದ ಈ ದೇವತೆ ಎಲ್ಲರಿಂದಲೂ ಪೂಜನೀಯ ಎನಿಸಿದ್ದಾನೆ. ಜೀವರಾಶಿಗಳ ಪ್ರಚೋದಕ ಶಕ್ತಿ ಸೂರ್ಯ. ಈ ನೆಲದ ಮೇಲೆ ನಡೆಯುವ ಎಲ್ಲ ಕರ್ಮಗಳಿಗೂ ಸಾಕ್ಷಿ ಪ್ರತ್ಯಕ್ಷ ದೈವ. ಭಗವಂತನನ್ನು ಯೋಗಿಗಳು ಸೂರ್ಯ ಮಂಡಲದೊಳಗೆ ಆರಾಧಿಸುತ್ತಾರೆ.
ಬಿಸಿಲು ಸ್ನಾನ
ಮಾನವ ವರ್ಗಕ್ಕೆ ಜನ್ಮಾಂತರ ಪೀಡೆಗಳಂತಿರುವ ಅನೇಕ ರೋಗಗಳಿಗೆ ಬಿಸಿಲು ಸ್ನಾನ ಉತ್ತಮ ಔಷಧದಂತಿದೆ. ಎಳೆಮಕ್ಕಳ ಆಸ್ಥಿಕ್ಷಯಕ್ಕೆ (ರಿಕೆಟ್ಸ್) ಬಿಸಿಲು ಸ್ನಾನ ಅತ್ಯುತ್ತಮ ಔಷಧ. ತೊನ್ನು, ಕುಷ್ಠ, ಪಾಂಡು, ಕಾಮಾಲೆ, ಕ್ಷಯ, ಗೂರಲು, ರಕ್ತಹೀನತೆ, ಅಸ್ಥಿಸ್ನಾಯುಗಳ ಕ್ಷೀಣತೆ, ನಿವೀರ್ಯ ಇವುಗಳಿಗೆ ಬಿಸಿಲು ಸ್ನಾನ ಉತ್ತಮವೆಂದು ಹೇಳಿದೆ.
ಬ್ರಹ್ಮಾಂಡದಲ್ಲಿರುವ ಅನಂತ ಕೋಟಿ ನಕ್ಷತ್ರಗಳಲ್ಲಿ ನಮ್ಮ ಒಂದು ಪುಟ್ಟ ನಕ್ಷತ್ರ. ಇವನ ವ್ಯಾಸದ ಅಳತೆ 8,64,000 ಮೈಲಿಗಳು. ನಮ್ಮ ಭೂಮಿಯ ವ್ಯಾಸ ಕೇವಲ 7,900 ಮೈಲಿಗಳು. ಸ್ಥೂಲವಾಗಿ ನಮ್ಮ ಭೂಮಿಯಂಥ ಹದಿಮೂರು ಲಕ್ಷಗೋಳಗಳನ್ನು ಒಟ್ಟುಗೂಡಿಸಿದರೆ ಸೂರ್ಯನಷ್ಟು ಆಗುತ್ತದೆ.
ಸೂರ್ಯನ ಮೈಯಿಂದ ನಿರತಂರವಾಗಿ ಹೊರಡುವ ಶಾಖಸತ್ವದ ಇಪ್ಪತ್ತೆರಡು ಲಕ್ಷದಲ್ಲಿ ಒಂದೇ ಒಂದು ಭಾಗದಷ್ಟು ನಮ್ಮ ಭೂಮಿಯ ಮೇಲೆ ಬೀಳುತ್ತದೆ. ಭೂಮಿಯ ಮೇಲೆ ಬೀಳುವ ಈ ಶಾಖದ ಭಾಗದಲ್ಲಿ ಅರ್ಧದಷ್ಟು ಭೂಮಿಯನ್ನು ಆವರಿಸಿರುವ ವಾತಾವರಣ ಹೀರಿಬಿಡುತ್ತದೆ. ಹೀಗಿದ್ದರೂ ಭೂಮಿಯ ಒಂದು ಚದರ ಮೈಲಿಯ ಪ್ರದೇಶದ ಮೇಲೆ ಸುಮಾರು ಐವತ್ತು ಲಕ್ಷ ಅಶ್ವಶಕ್ತಿಗಳಷ್ಟು ಶಾಖಸತ್ವ ಬೀಳುತ್ತದೆ. ಇದರಿಂದ ಮಾನವನು ಇನ್ನೂ ಹೆಚ್ಚು ಉಪಯೋಗವನ್ನು ಪಡೆಯಲು ಯತ್ನಿಸುತ್ತಿಲ್ಲ.
ಸೂರ್ಯರಶ್ಮಿ ಅನೇಕ ತರ ಕಿರಣಗಳಿಂದ ಕೂಡಿರುತ್ತದೆ. ಕಾಸ್ಮಿಕ್, ಗಾಮ ಮುಂತಾದ ಅತಿಸೂಕ್ಷ್ಮ ಕಿರಣಗಳು ಭೂಮಿಯನ್ನು ಮುಟ್ಟುವುದಿಲ್ಲ. ಅತಿನೇರಳೆ ಕಿರಣ ಭೂಮಿಯನ್ನು ಸ್ವಲ್ಪವಾಗಿ ಮುಟ್ಟುತ್ತದೆ. ಈ ಅತಿನೇರಳೆ ಕಿರಣಗಳು ಭೂಮಿಯ ಮೇಲ್ಭಾಗದ ವಾತಾವರಣದೊಳಗಿನ ಕಣಗಳನ್ನು ಎಲೆಕ್ಟಾçನುಗಳು ಮತ್ತು ಆಯಾನುಗಳು ಎಂದು ಎರಡು ವಿಧವಾಗಿ ಒಡೆಯುತ್ತವೆ. ಈ ಆಯಾನೀಕರಣ ಉಂಟಾಗುವ ಪ್ರದೇಶದಲ್ಲಿ ವಿದ್ಯುತ್ತು ಉತ್ಪನ್ನವಾಗುತ್ತದೆ.
ಅತಿನೇರಳೆ ಕಿರಣಗಳು ಕಣ್ಣಿಗೆ ಅಪಾಯಕರವಾದರೂ ದೇಹಾರೋಗ್ಯಕ್ಕೆ ಅಗತ್ಯ. ಎಳೆತನದಲ್ಲಿ ಇವುಗಳ ಅಗತ್ಯ ಹೆಚ್ಚಿರುತ್ತದೆ. ಅಸ್ಥಿಗಳ ಬೆಳವಣಿಗೆಗೆ, ಶಕ್ತಿಪುಷ್ಟಿಗೆ, ಪದೇ ಪದೇ ಕಾಡುವ ನೆಗಡಿ-ಕೆಮ್ಮುಗಳಿಗೆ, ಚರ್ಮರೋಗಗಳಿಗೆ, ರಿಕೆಟ್ಸ್ ರೋಗಕ್ಕೆ ಈ ಕಿರಣಗಳು ಪರಮ ಔಷಧ.
ಅಗ್ನಿಬಲ
ಸೂರ್ಯನ ಬೆಳಕು ಯಥೇಚ್ಛವಾಗಿರುವ ದೇಶಗಳಲ್ಲಿ ಈ ಅತಿನೇರಳೆ ಕಿರಣಗಳು ಸಾಕಷ್ಟು ಪ್ರಮಾಣದಲ್ಲಿ ಸಿಗದಿರುವಾಗ ಶೀತ ದೇಶಗಳಲ್ಲಿ ಇದರ ಅಭಾವ ಇನ್ನೂ ಹೆಚ್ಚಿರುತ್ತದೆ. ಪ್ರಾಚೀನ ಗ್ರೀಕರೂ ರೋಮನರೂ ಬಿಸಿಲು ಸ್ನಾನದ ಬೆಲೆಯನ್ನು ಚೆನ್ನಾಗಿ ಅರಿತಿದ್ದರು. ಎಳೆಮಕ್ಕಳಿಗೆ ಬಿಸಿಲು ಅಮೃತ ಸಮಾನ. ವಯೋವೃದ್ಧರಿಗೂ ಅಂತೆಯೇ. ಕಾರಣ ಮಕ್ಕಳಿಗೆ ಅಗ್ನಿಬಲ ಇನ್ನೂ ಸಾಲದಾಗಿರುತ್ತದೆ, ವೃದ್ಧರಿಗೆ ಅದು ಕುಂದುತ್ತಿರುತ್ತದೆ.
ಅತಿನೇರಳೆ ಕಿರಣಗಳು ಚರ್ಮವನ್ನು ಒಳಹೊಕ್ಕು ‘ಡಿ’ ಅನ್ನಸತ್ವವನ್ನು ಉತ್ಪಾದಿಸುತ್ತವೆ. ಕಾಡ್, ಷಾರ್ಕ್ ಹ್ಯಾಲಿಬಟ್ ಈ ಮೂರು ಜಾತಿಯ ಮೀನಿನ ಯಕೃತ್ತುಗಳಲ್ಲಿ ಸಿಗುವ ಎಣ್ಣೆಯಲ್ಲಿ ‘ಎ’ ಅನ್ನಸತ್ವವು ಹೆಚ್ಚಾಗಿ, ‘ಡಿ’ ಅನ್ನಸತ್ವ ಸ್ವಲ್ಪವಾಗಿ ಸಿಗುತ್ತದೆ. ‘ಬಿ’ ಅನ್ನಸತ್ತತ್ವ ಮಕ್ಕಳ ಮೂಳೆಗಳ ಬೆಳವಣಿಗೆಗೆ ಅತಿ ಮುಖ್ಯವಾಗಿ ಬೇಕಾದ ವಸ್ತು. ಬೆಳೆದವರ ನೇತ್ರಪಾಟವಕ್ಕೂ ಚರ್ಮವನ್ನು ‘ಎ’ ಅನ್ನಸತ್ತ÷್ವ ಬಹು ಅಗತ್ಯವಾದುದು. ಅತಿನೇರಳೆ ಕಿರಣಗಳು ಶರೀರದ ಒಳಹೊಕ್ಕು ಮೀನೆಣ್ಣೆ ಮಾಡುವ ಕೆಲಸವನ್ನು ಮಾಡುತ್ತದಲ್ಲದೆ, ನಮ್ಮ ಶರೀರಕ್ಕೆ ಬೇಕಾಗುವ ಕ್ಯಾಲ್ಸಿಯಂ ಪದಾರ್ಥವನ್ನು ಶರೀರ ಹೆಚ್ಚಾಗಿ ಹೀರಿಕೊಳ್ಳುವಂತೆ ಮಾಡುತ್ತದೆ. ಅಗ್ನಿಬಲವಿಲ್ಲದಿದ್ದರೆ, ಶರೀರದಲ್ಲಿ ಹಸಿವಾಗುವುದಿಲ್ಲ. ತಿಂದ ಅನ್ನ ಜೀರ್ಣವಾಗುವುದಿಲ್ಲ. ವೀರ್ಯ ಬಲವಿರುವುದಲ್ಲ. ನೇತ್ರಪಾಟವನ್ನು ಕಡಿಮೆಗೊಳಿಸುತ್ತದೆ. ಬಿಸಿಲಿಗೆ ಆಗಾಗ ಮೈಯೊಡ್ಡುವುದರಿಂದ ದೀಪ್ತಿಯುಂಟಾಗುವುದು. ಅಗ್ನಿ ವೃದ್ಧಿಸುವುದು.
ಮನುಷ್ಯನ ಆರೋಗ್ಯಕ್ಕೆ ಅಗ್ನಿಬಲವೆ ಪ್ರಧಾನ. ಹಿಂದಿನ ಮಹರ್ಷಿಗಳು ಸೂರ್ಯ ನಮಸ್ಕಾರಗಳಿಂದ, ಅಗ್ನಿಯ ಮುಂದೆ ಕುಳಿತು ಮಾಡುತ್ತಿದ್ದ ಹವನ-ಹೋಮಾದಿಗಳಿಂದ, ರಾಜರು ಮಾಡುತ್ತಿದ್ದ ಯಜ್ಞಯಾಗಾದಿಗಳಿಂದ ಅಗ್ನಿಬಲವನ್ನು ಹೊಂದುತ್ತಿದ್ದರು. ಪಂಚಭೂತಾತ್ಮಕವಾದ ಮಾನವ ಶರೀರಕ್ಕೆ ಅಗ್ನಿಯೇ ಅಧಿಪತಿ. ಪೃಥ್ವಿ, ಅಗ್ನಿ, ವಾಯು, ಪಿತ್ತ, ಕಫಗಳೆಂಬ ತ್ರಿಧಾತುಗಳಿಂದ ಉತ್ಪನ್ನವಾದುವು. ಇವುಗಳ ಸಂವರ್ತನ ಪರಿವರ್ತನೆಗಳೇ ಮಾನವ ಶರೀರಗಳು.
ಪಿತ್ತ ಪ್ರಕೃತಿಯ ಮನುಷ್ಯನನ್ನು ತೆಗೆದುಕೊಳ್ಳೋಣ. ಈ ಮನುಷ್ಯನಿಗೆ ಅಗ್ನಿಬಲ ಚೆನ್ನಾಗಿದೆ. ಅಗ್ನಿಸ್ಥಾನಗಳು ನಾಲ್ಕು: ನೇತ್ರ, ಪಿತ್ತಕೋಶ, ವೀರ್ಯಸ್ಥಾನ, ಕೈ-ಕಾಲುಗಳು. ಮಾನವನ ಅಂತ್ಯ ಸಮೀಪಿಸಿದಾಗ ಈ ಸ್ಥಾನಗಳಲ್ಲಿರುವ ಅಗ್ನಿ ಕಡಿಮೆಯಾಗುತ್ತ ಮಂದವಾಗಿ ಹಸಿವು ತೊಲಗುವುದು. ಅನಂತರ ನೇತ್ರಗಳಲ್ಲಿರುವ ತೇಜಸ್ಸು ನಶಿಸುವುದು. ಕೊಟ್ಟಕೊನೆಯದಾಗಿ ಕೈ-ಕಾಲುಗಳು ತಣ್ಣಗಾಗುವುದು. ಅಗ್ನಿ ಚೆನ್ನಾಗಿರುವವರೆಗೂ ದೇಹದಲ್ಲಿ ಶಕ್ತಿಸಾಮರ್ಥ್ಯ, ಧೈರ್ಯ, ಸ್ಥೆರ್ಯಗಳು ಚೆನ್ನಾಗಿರುವುವು. ಇವುಗಳನ್ನು ಕೊಡುವವನು ಸೂರ್ಯ. ಅದಕ್ಕಾಗಿಯೇ ಹಿಂದಿನ ಯೋಗಿಗಳು, ಋಷಿಗಳು ತಮ್ಮ ನಿತ್ಯಕರ್ಮಗಳಲ್ಲಿ ಸೂರ್ಯ ನಮಸ್ಕಾರಗಳಿಗೆ ಪ್ರಥಮ ಸ್ಥಾನವನ್ನು ಕೊಟ್ಟಿದ್ದರು.
ಚಿಕಿತ್ಸೆ
ಸೂರ್ಯದರ್ಶನವೇ ಕಡಿಮೆ ಇರುವ ಶೀತ ಪ್ರದೇಶಗಳಲ್ಲಿ ಯಾಂತ್ರಿಕ ಸಾಧನಗಳಿಂದ ಅತಿನೇರಳೆ ಕಿರಣಗಳನ್ನು ಉತ್ಪನ್ನ ಮಾಡಿಕೊಂಡು ಬಳಸುತ್ತಾರೆ. ಹಾಗೆ ಮಾಡುವಾಗ ತಮ್ಮ ಕಣ್ಣುಗಳನ್ನು ರಕ್ಷಿಸುವುದಕ್ಕೆ ಬಣ್ಣದ ಗಾಜಿನ ಕನ್ನಡಕಗಳನ್ನು ಧರಿಸುತ್ತಾರೆ. ಬೆಳೆಯುತ್ತಿರುವ ಅಥವಾ ಬೆಳವಣಿಗೆಯಲ್ಲಿ ಕುಂದುಂಟಾಗಿರುವ ಚಿಕ್ಕ ಮಕ್ಕಳನ್ನು ಕಿರಣ ಚಿಕಿತ್ಸೆಗೆ ಒಳಪಡಿಸುತ್ತಾರೆ. ಅನೇಕ ಇತರ ವ್ಯಾಧಿಗಳ ಚಿಕಿತ್ಸೆಗೂ ಈ ಬೆಳಕನ್ನು ಉಪಯೋಗಿಸುತ್ತಾರೆ.
ಶುಭ್ರವಾದ ವಾತಾರವಣವಿದ್ದರೆ ಮಾತ್ರ ಅತಿನೇರಳೆ ಕಿರಣಗಳು ಭೂಮಿಯನ್ನು ಸೋಂಕುತ್ತವೆ. ಹೊಗೆ, ಧೂಳು ದಟ್ಟವಾಗಿರುವ ನಗರ ಪ್ರದೇಶಗಳಲ್ಲಿ ಇವು ಭೂಮಿಯನ್ನು ಮುಟ್ಟುವುದೇ ಇಲ್ಲ. ಸಮುದ್ರ ತೀರದಲ್ಲಿ ಎತ್ತರವಾದ ಬೆಟ್ಟ ಅಥವಾ ಪರ್ವತ ಪ್ರದೇಶಗಳಲ್ಲಿ ಹಾಗೂ ಆಕಾಶ ನಿರ್ಮಲವಾಗಿ ಮೋಡಗಳು ಇಲ್ಲದಿದ್ದಾಗ ಈ ಕಿರಣಗಳು ಹೆಚ್ಚಾಗಿ ದೊರೆಯುತ್ತವೆ. ಸಮುದ್ರ ತೀರಗಳಲ್ಲಿ ಓಜೋನ್, ಆಕ್ಷಿಜನ್ ಇವು ಸುಲಭ ಲಭ್ಯ. ಆದ್ದರಿಂದ ಅಂಥ ಸನ್ನಿವೇಶಗಳಲ್ಲಿ ಸೂರ್ಯ ನಮಸ್ಕಾರಗಳೇ ಆಗಲಿ. ಇತರ ವ್ಯಾಯಾಮ ಅಭ್ಯಾಸಗಳನ್ನೇ ಆಗಲಿ ಮೂಡುವುದು ಲಾಭಕರ.
ನಮಸ್ಕಾರ-ವ್ಯಾಯಾಮ
ವೇದೋಕ್ತ ಸೂರ್ಯ ನಮಸ್ಕಾರಗಳಲ್ಲಿ ಬೀಜಾಕ್ಷರಗಳ ಉದಾತ್ತ-ಅನುದಾತ್ತ ಸ್ವರಗಳ ಉಚ್ಚಾರಣೆಗಳಿಂದ ಸಹಜವಾಗಿಯೇ ಏರ್ಪಡುವ ಶ್ವಾಸೋಚ್ಚವಾಸ ಕ್ರಮಗಳು ಸೂರ್ಯ ನಮಸ್ಕಾರಗಳಿಗೆ ಅನುಬದ್ಧವಾಗಿಯೇ ಇರುತ್ತವೆ. ಹಾಗೆ ನೋಡಿದರೆ ಸೂರ್ಯ ನಮಸ್ಕಾರ ಆರೆಂಟು ಯೋಗಾಸನಗಳನ್ನು ಜತೆಗೂಡಿಸಿ ಮಾಡಿದ್ದಾಗಿದೆ. ಎದೆ, ಹೊಟ್ಟೆ, ಕೆಳಹೊಟ್ಟೆ, ತೊಡೆ, ಕಾಲು, ಕೈ, ಬೆನ್ನುಹುರಿ ಈ ಎಲ್ಲ ಅಂಗಗಳಿಗೂ ಇದರಿಂದ ಲಘುವಾದ ವ್ಯಾಯಾಮವಾಗುತ್ತದೆ.
ಸೂರ್ಯ ನಮಸ್ಕಾರಗಳನ್ನು ಅವಸರ ಅವಸರವಾಗಿ ಮಾಡಬಾರದು. ಒಂದು ನಮಸ್ಕಾರ ಪೂರ್ತಿಯಾಗಿ ಮಾಡುವುದಕ್ಕೆ ಕೊನೆಯ ಪಕ್ಷ 12-15 ಸೆಕೆಂಡುಗಳಾದರೂ ಬೇಕು. ಈ ಅಭ್ಯಾಸವನ್ನು ಚೆನ್ನಾಗಿ ತಿಳಿದವರಿಂದಲೇ ಕಲಿಯಬೇಕು. ಸೂರ್ಯ ನಮಸ್ಕಾರಗಳನ್ನು ಮಕ್ಕಳೂ ಹೆಂಗಸರೂ ಗಂಡಸರೂ ವೃದ್ಧರೂ ಎಲ್ಲರೂ ಮಾಡಬಹುದು. ಅವರವರ ಶಕ್ತಿ ಅನುಕೂಲ ಅಗತ್ಯಗಳಿದ್ದಂತೆ. ಇದರಿಂದ ಮಕ್ಕಳು ಸದೃಢರಾಗಿ ಬೆಳೆಯುತ್ತಾರೆ. ಹೆಂಗಸರಿಗೆ ಹೆಚ್ಚಿನ ಫಲ ಪ್ರಾಪ್ತಿಯುಂಟು. ಗರ್ಭಕೋಶದ ನಿಶ್ಮಕ್ತತೆ ಮುಂತಾದ ದೋಷಗಳನ್ನು, ಜನನೇಂದ್ರಿಯಗಳ ಲೋಪದೋಷಗಳನ್ನು ನಿವಾರಿಸುತ್ತದೆ. ಗಂಡಸರಿಗೆ ಒಳ್ಳೆಯ ಪಚನಶಕ್ತಿಯನ್ನೂ ಬೆನ್ನಿನ ಹುರಿಗೆ, ಅದರ ನಡುವೆ ಅಡಗಿ ಕುಳಿತಿರುವ ನಗರಗಳಿಗೆ ಹೊಸ ತೇಜಸ್ಸನ್ನೂ ಕೊಡುತ್ತದೆ. ವೃದ್ಧರಿಗೆ ಕ್ಷೀಣವಾಗುತ್ತಿರುವ ಅಗ್ನಿದೀಪ್ತತೆಯನ್ನು ಪುನಃ ತಂದುಕೊಡುತ್ತದೆ.
ಸೂರ್ಯನಿಗೆ ಅಭಿಮುಖನಾಗಿ ನಿಂತು, ಗಂಡಸರು ಕೌಪೀನಧಾರಿಗಳಾಗಿ ಅಥವಾ ಲಘು ಶ್ವೇತವಸ್ತçವನ್ನು ಮಾತ್ರ ಸೊಂಟಕ್ಕೆ ಬಿಗಿದುಕೊಂಡು ಸೂರ್ಯನೇ ಜಗದಾಧಾರನೆಂದು ನಂಬಿ ನಮಸ್ಕಾರಗಳನ್ನು ಮಾಡಬೇಕು. ಮಂತ್ರೋಚ್ಛಾರಗಳ ಸಹಿತ ಮಾಡಬಹುದು ಅಥವಾ ಅದನ್ನು ಬಿಟ್ಟು ಬರಿಯ ವ್ಯಾಯಾಮ ದೃಷ್ಟಿಯಿಂದಲೇ ಮಾಡಬಹುದು. ಹೆಂಗಸರು ಶುಭ್ರವಾದ ಲಘು ವಸ್ತು ಅಂದರೆ ಭಾರವಿಲ್ಲದ ಬಿಳಿಯ ಸೀರೆಯನ್ನುಟ್ಟು ಮಾಡಬಹುದು. ಬಣ್ಣ ಬಣ್ಣದ ಬಟ್ಟೆಗಳು ಅತಿ ನೇರಳೆ ಕಿರಣಗಳನ್ನು ತಡೆದುಬಿಡುತ್ತವೆ. ಈ ನಮಸ್ಕಾರಗಳನ್ನು ಮಾಡುವವನು ತೇಜೋವಂತನಾಗಿ, ವೀರ್ಯವಂತನಾಗಿ, ವೀರ್ಯವಂತನಾಗಿ, ನಿರೋಗಿಯಾಗಿ ದೀರ್ಘಾಯುತವಾಗಿ ಬದುಕುವನು.
ಸೂರ್ಯ ನಮಸ್ಕಾರದ ಸಮಯದಲ್ಲಿ ಪಠಿಸುವ ಸೂರ್ಯ ದ್ವಾದಶನಾಮ:
1. ಓಂ ಮಿತ್ರಾಯ ನಮಃ
2. ಓಂ ರವಯೇ ನಮಃ
3. ಓಂ ಸೂರ್ಯಾಯ ನಮಃ
4. ಓಂ ಭಾನವೇ ನಮಃ
5. ಓಂ ಖಗಾಯ ನಮಃ
6. ಓಂ ಪೂಷ್ಣೇ ನಮಃ
7. ಓಂ ಹಿರಣ್ಯಗರ್ಭಾಯ ನಮಃ
8. ಓಂ ಮರೀಚಯೇ ನಮಃ
9. ಓಂ ಆದಿತ್ಯಾಯ ನಮಃ
10. ಓಂ ಸವಿತ್ರೇ ನಮಃ
11. ಓಂ ಅರ್ಕಾಯ ನಮಃ
12. ಓಂ ಭಾಸ್ಕರಾಯ ನಮಃ
ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯ ಇತ್ತು. ಆತನ ಆರಾಧನೆಯಿಂದಲೇ ಸೌರಪಂಥ ಹುಟ್ಟಿಕೊಂಡಿದ್ದು. ಕಾಲಗಣನೆಯಲ್ಲಿ ಇಂದಿಗೂ ಸೌರಮಾನದ ಎಣಿಕೆ ಇದೆ. ಮುಖ್ಯವಾಗಿ ಭಾರತ, ಮಧ್ಯಆಫ್ರಿಕಾ, ಈಜಿಪ್ಟ್, ಗ್ರೀಸ್ ಹಾಗೂ ಮಧ್ಯ ಏಷ್ಯಾಗಳಲ್ಲಿ ಸೂರ್ಯಾರಾಧನೆ ಪ್ರಚಲಿತದಲ್ಲಿದೆ. ಸೂರ್ಯನ ಪ್ರಕಾಶ ಹೆಚ್ಚುತ್ತಿರುವುದರಿಂದ ಚಳಿಯಿಂದ ಮುದುಡಿದ್ದ ಮೈಮನಗಳಲ್ಲಿ ನವಚೇತನ ತುಂಬಿದಂತೆನಿಸುತ್ತದೆ. ಅಂಗಾಂಗಗಳು ಕಾರ್ಯಕ್ಷಮವಾಗುತ್ತವೆ. ರೋಗಾಣುಗಳನ್ನು ನಾಶಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿದೆ. ಬೆಳಗಿನ ಹಾಗೂ ಸಂಜೆಯ ಸೂರ್ಯಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ಯೋಗಾಸನಗಳಲ್ಲಿಯೂ ಸೂರ್ಯ ನಮಸ್ಕಾರಕ್ಕೇ ಮೊದಲ ಪ್ರಾಶಸ್ತ್ಯ ನೀಡಲಾಗಿದೆ.
-ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) ಸಂಸ್ಕೃತಿ ಚಿಂತಕರು