‘ವಿದ್ಯಾರ್ಥಿಗಳ ಭವಿಷ್ಯಕ್ಕೆ ತ್ಯಾಗ ಮಾಡುವುದೇ ಶಿಕ್ಷಕ ವೃತ್ತಿ’ - ವಿವೇಕ್ ಆಳ್ವ

Upayuktha
0

   ಆಳ್ವಾಸ್ ಶಿಕ್ಷಣ ಕಾಲೇಜಿನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ 

ವಿದ್ಯಾಗಿರಿ (ಮೂಡುಬಿದಿರೆ): ‘ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ತಮ್ಮನ್ನು ತ್ಯಾಗ ಮಾಡುವುದೇ ಶಿಕ್ಷಕ ವೃತ್ತಿಯ ಶ್ರೇಷ್ಠತೆ. ಶಿಕ್ಷಕರು ಮಕ್ಕಳ ಬದುಕಿನ  ದಾರಿ ದೀಪಗಳು’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಶಿಕ್ಷಣ ಕಾಲೇಜಿನ ಅಂತಿಮ ವರ್ಷದ ಬಿ.ಇಡಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. 


‘ಜೀವನದಲ್ಲಿ ಹೆಸರು ಅಥವಾ ಇತರರಿಂದ ಗುರುತಿಸಲ್ಪಡಲು ಪೇಚಾಟ ನಡೆಸುವುದು ಮುಖ್ಯವಲ್ಲ. ನಮ್ಮ ನೈಜ ಕೆಲಸ ನಮ್ಮನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡುತ್ತದೆ’ ಎಂದರು. 


‘ಗುರು ಎಂದಾಗ ನಮಗೆಲ್ಲ ನೆನಪಾಗುವುದೇ ನಮ್ಮೆಲ್ಲರ ಮಹಾಗುರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ  ಡಾ. ಎಂ. ಮೋಹನ ಆಳ್ವ. ಅವರು ನಮಗೆಲ್ಲ ಆದರ್ಶ. ಶಿಕ್ಷಕರಾಗಿ ನೀವೂ ವಿದ್ಯಾರ್ಥಿಗಳೊಂದಿಗೆ ಹೊಂದಾಣಿಕೆ ಕಂಡುಕೊಳ್ಳಬೇಕು. ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು. ಪ್ರತಿಯೊಂದು ವೃತ್ತಿಯ ಯಶಸ್ಸಿನ ಹಿಂದೆ  ಶಿಕ್ಷಕರು ಇರುತ್ತಾರೆ ಎಂದರು. 


ವಿದ್ಯಾರ್ಥಿಯೊಬ್ಬ ಜೀವನದಲ್ಲಿ ಸಾಧನೆ ಮಾಡಿ ಬಂದು, ತಮ್ಮ    ಶಿಕ್ಷಕರನ್ನು ಗುರುತಿಸಿದರೆ, ಅದುವೇ ಒಬ್ಬ ಶಿಕ್ಷಕನಿಗೆ ಸಿಗುವ ಅತ್ಯುತ್ತಮ ಪ್ರತಿಸ್ಪಂದನೆ. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರು ಖುಷಿ ಪಡಬೇಕು. ಹೊಸತನ ಅಳವಡಿಸಿಕೊಂಡು ಮಕ್ಕಳಿಗೆ ಕಲಿಸಬೇಕು. ಪೋಷಕರಲ್ಲಿ ಶಿಕ್ಷಣದ ಅರಿವು ಮೂಡಿಸಬೇಕು. ಶಿಕ್ಷಕರು ಸಮಯಕ್ಕೆ ಮಹತ್ವ ನೀಡಿದಾಗ, ವಿದ್ಯಾರ್ಥಿಗಳಲ್ಲಿ ಸಮಯಪ್ರಜ್ಞೆ ಮೂಡಿಸಬಹುದು. ನಿಷ್ಪಕ್ಷಪಾತ ಶಿಕ್ಷಕ ವಿದ್ಯಾರ್ಥಿಗಳ ಬೆಳವಣಿಗೆಗೆ ಮಾರ್ಗದರ್ಶಕ ಎಂದು ಹೇಳಿದರು.


ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಉತ್ತಮ ಸಮಾಜವನ್ನು ನಿರ್ಮಿಸುವ ಸಾಮರ್ಥ್ಯವನ್ನು ಶಿಕ್ಷಕರು ಹೊಂದಿದ್ದಾರೆ. ತರಗತಿಯಲ್ಲಿ ಕಲಿತದ್ದು ಮರೆತ ನಂತರ ಉಳಿಯುವುದೇ ಶಿಕ್ಷಣ. ಪ್ರಶಿಕ್ಷಣಾರ್ಥಿಗಳೆಲ್ಲ ಆತ್ಮ ವಿಶ್ವಾ¸ ಮೂಡಿಸುವ ಶಿಕ್ಷಕರಾಗಿ ಎಂದು ಹಾರೈಸಿದರು. 


ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹುಡುಕಿ ಪ್ರೋತ್ಸಾಹಿಸುವುದು ಶಿಕ್ಷಕರ ಜವಾಬ್ದಾರಿ. ನಮ್ಮ ಆಲೋಚನೆಗಳಿಗೆ ತಕ್ಕಂತೆ ನಮ್ಮ ಜೀವನ ನಡೆಯುತ್ತದೆ. ಒಳ್ಳೆಯ ಮನಸ್ಸು ಎಲ್ಲದಕ್ಕೂ ಕಾರಣವಾಗುತ್ತದೆ ಎಂದರು. 


ಬದುಕನ್ನು ವಿಕಸಿತಗೊಳಿಸಲು ಶಿಕ್ಷಣ. ಸಮಾಜದ ರೂಪಿಸುವುದು ಶಿಕ್ಷಕರ ಜವಾಬ್ದಾರಿ. ನುಡಿದಂತೆ ನಡೆಯುವುದು ಒಳ್ಳೆಯ ಶಿಕ್ಷಕರ ಲಕ್ಷಣ ಈ ವಾಕ್ಯಕ್ಕೆ ಸೂಕ್ತ ನಿದರ್ಶನವೇ ಡಾ.ಎಂ. ಮೋಹನ ಆಳ್ವ ಎಂದರು. 

ಜೀವನದಲ್ಲಿ ಯಶಸ್ಸು ಕಾಣಲು ಒಳ್ಳೆಯ ಯೋಚನೆ ಮತ್ತು ಸಮಯ ಪ್ರಜ್ಞೆ ಮುಖ್ಯವಾಗುತ್ತದೆ ಎಂದರು. 


ಆಳ್ವಾಸ್ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಶಂಕಮೂರ್ತಿ ಮಾತನಾಡಿ,    ಇದು ಆರಂಭ. ಶಿಕ್ಷಕರಾಗಿ ತಮ್ಮನ್ನು ವಿದ್ಯಾರ್ಥಿಗಳ ಬೆಳವಣಿಗೆಗೆ ಅರ್ಪಿಸಿಕೊಳ್ಳಬೇಕು ಎಂದರು. 

ಶಿಕ್ಷಕ ವೃತ್ತಿಯಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ. ಎಲ್ಲವನ್ನೂ ತಾಳ್ಮೆಯಿಂದ ಎದುರಿಸಬೇಕು. ತರಗತಿಯಲ್ಲಿ ಕಲಿತ ವಿಷಯಗಳನ್ನು ಅಳವಡಿಸಿಕೊಳ್ಳಿ. ಆಗ ನಿಮ್ಮ ವೃತ್ತಿ ಕ್ಷೇತ್ರದ ಹಾದಿಯು ಸುಲಭವಾಗುತ್ತದೆ. ಶಿಕ್ಷಕರಾಗಿ ಸಮಾಜದಲ್ಲಿ ಒಂದು ಗೌರವಯುತ ಸ್ಥಾನ ಉಳಿಸಿಕೊಂಡು ಬೆಳೆಸಿಕೊಂಡು ಹೋಗಿ ಎಂದರು.


ವೃತ್ತಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಿ, ಈಗಿನ ಕಾಲದಲ್ಲಿ ತಂತ್ರಜ್ಞಾನವಿಲ್ಲದೆ ಬದುಕು ಕಠಿಣ. ವೃತ್ತಿಯನ್ನು ಪ್ರೀತಿಸಿ ಆಗ ಉತ್ತಮ ವ್ಯಕ್ತಿಗಳನ್ನು ಸಮಾಜಕ್ಕೆ ಕೊಡುಗೆ ನೀಡಬಹುದು ಎಂದರು.

ಬೀಳ್ಕೊಂಡ ವಿದ್ಯಾರ್ಥಿಗಳು ದೀಪ ಬೆಳಗಿಸಿ ಪ್ರಮಾಣ ವಚನ ಸ್ವೀಕರಿಸಿದರು.

ಶಿಲ್ಪ ಮೇಗಳಮನಿ ಸ್ವಾಗತಿಸಿ, ಮುಸ್ತಫಾ ವಂದಿಸಿದರು. ಸಿಸ್ಟರ್ ಜನೆಟ್ ಸಂತುಮಾಯೋರ್ ಕಾರ್ಯಕ್ರಮ ನಿರೂಪಿಸಿದರು. 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top