ಶ್ರೀರಾಮ ಕಥಾ ಲೇಖನ ಅಭಿಯಾನ-48: ರಾಮಾಯಣ ಕಲಿಸುವ ಪಾಠಗಳು

Upayuktha
0


-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ


ರಾಮಾಯಣ....  ಇದು ಪುರಾಣವೂ ಹೌದು, ಕಥೆಯೂ ಹೌದು, ಕಾದಂಬರಿಯೂ ಹೌದು, ಪ್ರತಿಯೊಬ್ಬ ಮನುಷ್ಯನ ಮನದೊಳಗೆ ಸುಪ್ತವಾಗಿರುವಂಥ ಚರಿತ್ರೆಯೂ ಹೌದು, ನಂಬಿಕೆಯೂ ಹೌದು, ವಾಸ್ತವವೂ ಹೌದು, ಭಾರತದ ಅಸ್ಮಿತೆಯೂ ಹೌದು, ಆಸ್ತಿಕರಿಗೆ ಧರ್ಮಗ್ರಂಥವೂ ಹೌದು, ನಾಸ್ತಿಕರಿಗೆ ವಾದ ಮಂಡನೆಗೆ ವಿಷಯವೂ ಹೌದು... ಹೀಗೆ ರಾಮಾಯಣ ಎನ್ನುವಂಥದ್ದು ಪ್ರತಿಯೊಬ್ಬ ವ್ಯಕ್ತಿಗೂ ಅವರವರದೇ ದೃಷ್ಟಿಕೋನದಲ್ಲಿ ತೆರೆದುಕೊಳ್ಳುತ್ತದೆ ಎಂದರೆ ಇದು ಸಾರ್ವಕಾಲಿಕ ಶ್ರೇಷ್ಠ ಗ್ರಂಥವೂ ಹೌದು. ಸಣ್ಣ ಮಕ್ಕಳಿಂದ ತೊಡಗಿ ಜಿಜ್ಞಾಸುಗಳಲ್ಲಿವರೆಗೆ ಇದು ತಲುಪುತ್ತದೆ ಎಂದರೆ ಸರ್ವಗುಣಪೂರ್ಣವೂ ಹೌದು.. ಅಂತು ರಾಮಾಯಣದ ಹೊರತಾಗಿ ನಮ್ಮ ಚರಿತ್ರೆ ಅಪೂರ್ಣವೇ ಮಾತ್ರವಲ್ಲ ನಿಸ್ಸಾರವೇ. ಅಂತೆಯೇ ದಶರಥನಿಂದ ತೊಡಗಿ ರಾಮ ನಿರ್ಯಾಣದವರೆಗೆ ಪ್ರತಿಯೊಂದು ಪಾತ್ರವೂ ಪಾಠವೇ ಆಗಿದೆ. 


ರಾಮಾಯಣ ಚರಿತ್ರೆ ಎಂದುಕೊಂಡಾಗ ಅದೂ ಸಾವಿರಾರು ವರ್ಷಗಳ ಹಿಂದಿನ ದಿನಗಳನ್ನು ನೋಡುವಾಗ ಆಗಿನ ನಾಗರಿಕತೆ ಅದೆಷ್ಟು ಮುಂದುವರಿದಿತ್ತು ಎಂದು ತಿಳಿಯುತ್ತದೆ. ಪುರಾಣ ಎಂದುಕೊಂಡರೆ ಎಷ್ಟು ಓದಿದರೂ ಬೇಸರವಾಗದೆ ಇರುವಂತೆ ನಾವೇನೋ ಬಹಳ ದೊಡ್ಡ ಪುಣ್ಯ ಕಾರ್ಯ ಮಾಡುತ್ತಿದ್ದೇವೆ ಎಂಬ ಭಾವವನ್ನೂ ಓದುವವರ ಮನದೊಳಗೆ ಮೂಡಿಸುತ್ತದೆ. ಚಿಕಿತ್ಸಕ ದೃಷ್ಟಿಯಿಂದ ನೋಡಿದರೆ ಅದೆಷ್ಟು ವೈಜ್ಞಾನಿಕವಾದ ವಿಚಾರಗಳಿವೆ ಎಂದೆನಿಸದೆ ಇರಲಾರದು. ಇನ್ನು ತರ್ಕ, ವಾದ, ಜಿಜ್ಞಾಸೆಗೆ ಇದು ಸದಾಕಾಲ ತೆರೆದ ಪುಸ್ತಕವೇ. ಹಾಗಾದರೆ ಇಂದಿನ ನಮ್ಮ ಜೀವನಕ್ಕೆ ಈ ರಾಮಾಯಣ ಎಷ್ಟು ಪ್ರಸ್ತುತ ಎಂದು ವಿಮರ್ಶೆ ಮಾಡಿದಾಗಲೂ ಇಲ್ಲಿ ಅನೇಕ ವಿಷಯಗಳನ್ನು ಕಾಣಬಹುದು. ಹಿಂದಿನ ಯಾವುದೇ ಪುರಾಣಗಳಿರಬಹುದು, ರಾಮಾಯಣ ಮಹಾಭಾರತದಂಥ ಚರಿತ್ರೆಗಳಿರಬಹುದು ಅದರಲ್ಲಿ ಜೀವನಕ್ಕೆ ಬೇಕಾದ ಅನೇಕ ಪಾಠಗಳಿವೆ. ಇವೆಲ್ಲವೂ ಬರಿದೆ ಮನೋರಂಜನೆಗೆ ಇರುವ ವಿಷಯಗಳಲ್ಲ. ಬದಲಾಗಿ ನಮ್ಮ ಉತ್ಕರ್ಷೆಗೆ ದಾರಿ ತೋರುವಂಥ ದಿಕ್ಸೂಚಿಗಳೆಂದರೆ ತಪ್ಪಲ್ಲ. ದಶರಥನ ವ್ಯಕ್ತಿತ್ವದಿಂದ ನಾವು ಪಾಠ ಕಲಿಯುವುದಾದರೆ ಬಹಳವಿದೆ. ಒಬ್ಬ ರಾಜನಾದವ ಯಾವ ರೀತಿ ಆಡಳಿತ ನಡೆಸಬೇಕೆಂಬುದಕ್ಕೆ ಇವನು ಒಳ್ಳೆಯ ಉದಾಹರಣೆ. ಇನ್ನು ಮಕ್ಕಳು ಎಂಬಲ್ಲಿಗೆ ಬಂದಾಗ ಆತನಲ್ಲಿ ಮಕ್ಕಳಾಗದೇ ಇರುವ ದೌರ್ಬಲ್ಯವಿದ್ದಾಗಲೂ ಮೂರು ಮದುವೆಯಾಗಿದ್ದಲ್ಲದೆ ಮುನ್ನೂರ ಅರವತ್ತೈದು ಉಪಪತ್ನಿಯರೂ ಇದ್ದರೆಂದು ಚರಿತ್ರೆ ಹೇಳುತ್ತದೆ. ಅತಿಯಾದರೆ ಹೇಗೆ ಅಮೃತವೂ ವಿಷವೇ ಆಗುತ್ತದೋ ಅದಕ್ಕೆ ಜ್ವಲಂತ ಉದಾಹರಣೆ ದಶರಥ. ಬೀಜ ದೋಷವಿರುವಾಗ ಕ್ಷೇತ್ರ ಬದಲಾಯಿಸಿದಂತೆ ದಥರಥನ ಪಾಡಾಗಿತ್ತು. ಆಗ ಮಾತ್ರವಲ್ಲ ಈಗಲೂ ದಂಪತಿಗಳಿಗೆ ಮಕ್ಕಳಾಗದಿದ್ದರೆ ಅದು ಹೆಣ್ಣಿನ ದೌರ್ಬಲ್ಯವೆಂದೇ ಪ್ರಥಮ ಸಂದೇಹ. ಈಗ ಹಲವಾರು ಪರೀಕ್ಷೆಗಳು ಅಥವಾ ಪುರುಷ ಪ್ರಧಾನವೆಂಬುದಕ್ಕೆ ಹೆಚ್ಚು ಪ್ರಾಶಸ್ತ್ಯ ಇಲ್ಲದಿರುವುದರಿಂದ ಯಾರಲ್ಲಿ ದೋಷವಿದೆ ಎಂದರಿತುಕೊಂಡು ಔಷಧೋಪಚಾರ ಮುಂತಾದ ಪ್ರಕ್ರಿಯೆಗಳಿಗೆ ತೊಡಗಿಸಿಕೊಳ್ಳುತ್ತಾರೆ. ಅದೇರೀತಿ ಹೆಣ್ಣಿನ ಮೇಲೆ ಅತಿಯಾದ ಮೋಹವಿದ್ದಾಗ ಪ್ರಜ್ಞೆ ಕಳಕೊಳ್ಳುವ ಸಾಧ್ಯತೆಯೇ ಜಾಸ್ತಿ ಎನ್ನುವುದಕ್ಕೂ ದಶರಥನ ನಡವಳಿಕೆ ಸಾಕ್ಷಿಯಾಗುತ್ತದೆ. ಈತ ಕೈಕೇಯಿಗೆ ವಿವೇಚನೆ ಇಲ್ಲದೆ ವರ ಕೊಡುವಾಗ ಆಕೆ ಅದನ್ನು ಕೇಳುವಲ್ಲಿ ತನ್ನ ಸ್ವಾರ್ಥಕ್ಕೆ ಬಳಸಿಕೊಂಡಿದ್ದರಿಂದ ಕಷ್ಟಗಳನ್ನು ಅನುಭವಿಸಬೇಕಾಯಿತು. ಸರಿ ತಪ್ಪುಗಳ ವಿಮರ್ಶೆ ಮಾಡುವುದಲ್ಲ. ಆದರೆ ಇದರಿಂದ ನಮಗೆ ಯಾವ ಪಾಠ ಇದೆ ಎಂದಷ್ಟೇ ತಿಳಿದುಕೊಳ್ಳಬಹುದು. ಯಾಕೆಂದರೆ ವಾಲ್ಮೀಕಿ ಬರೆದ ರಾಮಾಯಣಕ್ಕೆ ಅವರೇ ಪ್ರತ್ಯಕ್ಷ ಸಾಕ್ಷಿ ಆಗಿದ್ದರಿಂದ ಹೇಗೆ ನಡೆದಿದೆಯೊ ಹಾಗೇ ಇರುವುದಂತು ಖಂಡಿತ. ನಾವು  ಸಂಪೂರ್ಣವಾಗಿ ಪ್ರಶ್ನಾತೀತವಾಗಿ ವಾಲ್ಮೀಕಿ ರಾಮಾಯಣವನ್ನು ಒಪ್ಪಿಕೊಳ್ಳಲೇಬೇಕು. 


ಕೈಕೇಯಿ ಪಾತ್ರವೂ ನಮಗೆ ಬಹಳ ಮುಖ್ಯವಾಗುತ್ತದೆ. ಅದ್ಯಾವುದೋ ಕೆಟ್ಟ ಗಳಿಗೆಯಲ್ಲಿ ಅನ್ಯರ ಅಥವಾ ನಮ್ಮ ಹಿತೈಷಿಗಳೆಂದು ನಾವು ನಂಬಿದವರಿಂದ ಕೇಳಬಾರದ ಮಾತುಗಳನ್ನು ಕೇಳಿದಾಗ ಆಗುವ ಅನಾಹುತಗಳು ಏನೆಂಬುದಕ್ಕೆ ಕೈಕೇಯಿಯ ಜೀವನವೇ ಸಾಕ್ಷಿ. ನಮ್ಮಲ್ಲೂ ಅನೇಕ ಮಂಥರೆಗಳಿರುತ್ತಾರೆ. ಸ್ವಾರ್ಥ ಮತ್ತು ಅವಿವೇಕ ಜತೆಯಾದರೆ ಮಂಥರೆಯ ಮಾತು ನಮಗೆ ಹಿತವೆನಿಸುತ್ತದೆ. ತತ್ಪರಿಣಾಮವಾಗಿ ಸರ್ವ ನಾಶಕ್ಕೆ ಕಾರಣವಾಗುತ್ತದೆ. ವಿವೇಕವಿರುತ್ತಿದ್ದರೆ ಅಥವಾ ಆ ಕ್ಷಣದ ನಿರ್ಧಾರ ತಪ್ಪಾಗದೇ ಇರುತ್ತಿದ್ದರೆ...ಹೀಗೆ ರೆ ರೆ ಎಷ್ಟು ಬೇಕಾದರೂ ಹೇಳಬಹುದು. ಆದರೆ ವಾಸ್ತವ ಅದಲ್ಲ. ಆದ್ದರಿಂದ ಕೈಕೇಯಿ ಪಾತ್ರವೂ ನಮ್ಮ ದಾರಿ ತಪ್ಪಿಸುವ ಸಂದರ್ಭಗಳಲ್ಲಿ ನೆನಪಾಗಬೇಕು. ಇನ್ನು ಶ್ರೀರಾಮಚಂದ್ರನ ಸೋದರರರೆಲ್ಲರೂ ಒಂದು ಸಂಸಾರದಲ್ಲಿ ಅಣ್ಣ ತಮ್ಮಂದಿರು ಯಾವ ರೀತಿಯಲ್ಲಿ ಅನ್ಯೋನ್ಯತೆಯಿಂದ ಇರಬೇಕು ಎನ್ನುವುದಕ್ಕೆ ಇದಕ್ಕಿಂತ ಮಾದರಿ ಬೇರೆ ಯಾವುದೂ ಇರಲಾರದು. ಲಕ್ಷ್ಮಣನ ಪ್ರೀತಿ, ಭರತನ ವಾತ್ಸಲ್ಯ, ಶತ್ರುಘ್ನನ ಪ್ರೇಮ ಭಾವ ಇದಕ್ಕಿಂತಲೂ ಶ್ರೀರಾಮಚಂದ್ರನ ನಿಷ್ಕಳಂಕವಾದ ಹೃದಯದಿಂದ ತುಂಬಿ ಬರುವ ಸೋದರ ವಾತ್ಸಲ್ಯ ಇದೆಲ್ಲವೂ ಸಾರ್ವಕಾಲಿಕವಾಗಿ ಸುಂದರ ಸಂಸಾರಗಳು ಹೇಗಿರಬೇಕು ಎಂಬುದಕ್ಕೆ ದಾರಿ ತೋರುವ ದೀಪಗಳೇ ಆಗಿವೆ. ತಾಯಿಯ ತಪ್ಪನ್ನು ಅರಿತ ಭರತ ಮಾತೃ ಪ್ರೇಮವನ್ನೂ ಧಿಕ್ಕರಿಸಿ ಶ್ರೀರಾಮಚಂದ್ರನನ್ನು ಸ್ವೀಕರಿಸುವ ಪರಿ ಅನ್ಯಾಯ ಯಾರೇ ಮಾಡಿದರೂ ಅದನ್ನು ವಿರೋಧಸಬೇಕೆಂಬ ನೀತಿಯನ್ನು ತೋರಿಸುತ್ತದೆ. ಅದೇರೀತಿ ಶ್ರೀರಾಮಚಂದ್ರನ ಪಾದುಕೆಯಾದರೂ ಸರಿ ನಾನು ಸಿಂಹಾಸನಕ್ಕೆ ಯೋಗ್ಯನಲ್ಲವೆಂಬ ಭರತನ ನಿರ್ಧಾರ ಹಿರಿಯರಿಗೆ ಕೊಡುವ ಗೌರವಕ್ಕೆ ನಿದರ್ಶನವಾಗುತ್ತದೆ. 


ಮುಂದೆ ಹನುಮಂತನ ಪಾತ್ರವೂ ಅದ್ಭುತವಾದದ್ದು. ಸ್ವಾಮಿ ನಿಷ್ಠನಾದ ಸೇವಕನು ಸೇವೆಯನ್ನು ಮಾಡಿಯೇ ಎಷ್ಟೊಂದು ಉನ್ನತಿಗೆ ಏರಬಹುದೆಂಬುದಕ್ಕೆ ಹನುಮಂತನಿಗಿಂತ ಅನ್ಯ ಉದಾಹರಣೆ ಸಿಗಲಾರದು. ಶ್ರೀರಾಮಚಂದ್ರನ ಹೆಸರು ಬಂದರೆ ಆಂಜನೇಯ ನೆನಪಾಗಲೇಬೇಕು. ಆಂಜನೇಯನನ್ನು ನೆನಪಿಸಿದರೆ ಶ್ರೀರಾಮಚಂದ್ರ ಕಾಣಲೇಬೇಕು ಇಂಥ ಅನ್ಯೋನ್ಯ ಭಾವ ಬರಿದೆ ಆಂಜನೇಯನ ನಿಷ್ಕಪಟವಾದ, ನಿಸ್ವಾರ್ಥತನದ, ಗುಣದಿಂದಲೇ ಬಂದಿದೆ ಎಂದರೆ ಮಾಡುವ ಕ್ರಿಯೆ ಯಾವುದೇ ಇರಲಿ ಅದರಲ್ಲಿ ಸಮರ್ಪಣಾಭಾವವಿದ್ದಾಗ ಅದು ಅತ್ಯಂತ ಶ್ರೇಷ್ಠವೇ ಆಗುತ್ತದೆ ಎನ್ನುವುದನ್ನು ಆಂಜನೇಯ ತೋರಿಸಿಕೊಟ್ಟಿದ್ದಾನೆ. ಇನ್ನು ವಾಲಿ... ಈ ಪಾತ್ರ ಸೃಷ್ಟಿಸಿದಷ್ಟು ವಾದ ವಿವಾದಗಳು ಬಹುಶಃ ಬೇರೆಲ್ಲೂ ಸಿಗಲಾರದು. ಎಲ್ಲಿವರೆಗೆ ಎಂದರೆ ರಾಮಾಯಣವೇ ನಡೆದಿಲ್ಲ ಅದೊಂದು ಕಟ್ಟುಕಥೆ ಎನ್ನುವವರೂ ಕೂಡಾ ರಾಮನು ವಾಲಿಯನ್ನು ಹಿಂದಿನಿಂದ ಕೊಂದದ್ದು ತಪ್ಪು ಎಂದು ವಾದಿಸುತ್ತಾರೆ. ಮನಸ್ಸಿನ ದ್ವಂದ್ವಗಳು ಈ ರೀತಿಯಾಗಿ ಅಭಿವ್ಯಕ್ತವಾಗುವುದಕ್ಕೆ ಕಾರಣ ರಕ್ತದಲ್ಲಿ ಹರಿಯುವ ರಾಮಪ್ರವಾಹವೇ ಆಗಿದೆ. ವಾದಕ್ಕೆ ರಾಮಾಯಣ ನಡೆದಿಲ್ಲವೆಂದರೂ ಸುಪ್ತವಾಗಿ ರಾಮ ಇವರನ್ನು ಆವರಿಸಿಯೇ ಇರುತ್ತಾನೆ. ಯಾಕೆಂದರೆ ರಾಮನನ್ನು ಧಿಕ್ಕರಿಸುವುದೆಂದರೆ ತನ್ನತನವನ್ನೇ ಧಿಕ್ಕರಿಸಿದಂತೆ. ಏನೇ ಇರಲಿ ಇಲ್ಲಿ ಮಾಡಬಾರದ್ದನ್ನ ಮಾಡಿದರೆ ಆಗಬಾರದ್ದೇ  ಆಗುವುದು ಎಂಬ ಪಾಠವಿದೆ. ಹಾಗೆ ನೋಡಿದರೆ ಮೃತ್ಯು ಎಂಬುವುದು ವಾಲಿಗೆ ಮಾತ್ರವಲ್ಲ ಪ್ರತಿಯೊಂದು ಜೀವಿಗೂ ಮರೆಯಲ್ಲೇ ಬಂದು ಎರಗವುದು. ಯಾರಿಗೂ ಎದುರಾ ಎದುರು ಬಂದು ನಾನು ಬಂದಿದ್ದೇನೆ ಹೊರಡು ಎನ್ನುವುದಿಲ್ಲ. ಮತ್ತೊಂದು ವಿಚಾರವೆಂದರೆ ನಾವು ವಾದ ಮಾಡಬಹುದು. ಆದರೆ ಶ್ರೀರಾಮಚಂದ್ರನ ಮನಸ್ಥಿತಿಯ ಅರಿವು ನಮಗಾಗಲು ಉಂಟೇ? ಆತ ಯಾಕೆ ಮರೆಯಲ್ಲಿ ನಿಂತು ವಾಲಿಯನ್ನು ಕೊಂದ ಎನ್ನವುದಕ್ಕೆ ಶ್ರೀರಾಮಚಂದ್ರನೇ ಉತ್ತರ ಕೊಡಬೇಕು. ಆತ ತಪ್ಪನ್ನೇ ಮಾಡದವನಾದ್ದರಿಂದ ವಾಲಿ ವಧೆಯಲ್ಲೂ ಸರಿಯಾದದ್ದನ್ನೇ ಮಾಡಿದ್ದಾನೆ ಎಂಬ ವಿಶ್ವಾಸ ನಮಗಿರಬೇಕಷ್ಟೆ. ಕೆಲವೊಂದಷ್ಟನ್ನು ನಂಬಿ ಕೆಲವೊಂದಿಷ್ಟನ್ನು ನಂಬದೇ ಇರುವುದು ಸರಿಯಲ್ಲ. ದ್ವಂದ್ವ ಭಾವ ಯಾವತ್ತೂ ಅಪಾಯಕಾರಿ. ವಾಲಿಯ ಕರ್ಮಫಲ ಆತನಿಗೆ ಅಂಥ ಮರಣವನ್ನು ಕೊಟ್ಟಿದೆ ಎಂದೋ ಅಥವಾ ಶ್ರೀರಾಮಚಂದ್ರನ ನಿರ್ಧಾರ ಅದು ಸಂಪೂರ್ಣ ಸರಿಯೇ ಆಗಿರುತ್ತದೆ ಎಂದೋ ನಂಬಿದಾಗ ಒಂದಿನಿತೂ ಗೊಂದಲವಿಲ್ಲ. ವಿಚಾರ ಇಷ್ಟೆ ಅಲ್ಲಿ ಹಲವಾರು ಸಂಗತಿಗಳು ಶ್ರೀರಾಮಚಂದ್ರನಿಂದ ಆಗಿವೆ ಅದರಲ್ಲಿ ವಾಲಿವಧೆಯೂ ಒಂದು. ವಾಲಿಯ ಪ್ರಕರಣಕ್ಕೆ ನಾವು ಹುಲು ಮಾನವರು ಶ್ರೀರಾಮಚಂದ್ರನನ್ನೇ ಪ್ರಶ್ನಿಸುವುದಾದರೆ ನಾವು ಆತನನ್ನು ಪೂರ್ಣ ನಂಬಲಿಲ್ಲವೆಂದೇ ಅರ್ಥ ತಾನೆ. ಆದ್ದರಿಂದ ನಾವು ಯಾರನ್ನು ಆದರ್ಶ ಪುರುಷ ಎಂದುಕೊಳ್ಳುತ್ತೇವೋ ಆತ ಪ್ರಶ್ನಾತೀತನಾಗಿರಬೇಕು. ಹಾಗಾದರೆ ಆತ ಸಾಮಾನ್ಯ ಮನುಷ್ಯನಾಗಿರಲು ಅಸಾಧ್ಯ. ವಿಷ್ಣುವಿನಾಂಶದಿಂದ ಅವತರಿಸಿದ ಶ್ರೀರಾಮಚಂದ್ರನನ್ನು ನಾವು ಆದರ್ಶವೆಂದಿಟ್ಟುಕೊಳ್ಳುವಾಗ ಆತನ ಪ್ರತಿಯೊಂದು ನಡೆಯೂ ನಮಗೆ ಪ್ರಶ್ನಾತೀತವೇ. ಆದ್ದರಿಂದ ವಾಲಿ ಪ್ರಸಂಗ ನಮಗೆ ರಾಮನ ವ್ಯಕ್ತಿತ್ವವನ್ನು ಇನ್ನೂ ಎತ್ತರಿಸಿ ಕೊಡುತ್ತದೆ.  


ಹಾಗೆಯೇ ರಾವಣನ ಪಾತ್ರ. ಇದು ಕೂಡ ಅದ್ಭುತವಾದ ವಿಚಾರಗಳನ್ನೊಳಗೊಂಡ ವ್ಯಕ್ತಿತ್ವದ ಅನಾವರಣ. ಸಕಲಗುಣಪೂರ್ಣ ಏಕಗುಣಹೀನ ಎನ್ನುವಂತೆ ಮಹಾಪ್ರಚಂಡನಾದ ರಾವಣನಿಗೂ ಕೆಲವು ದೌರ್ಬಲ್ಯಗಳಿದ್ದವು. ಕೊನೆಗೆ ಆ ದೌರ್ಬಲ್ಯದ ಪ್ರಭಾವವೇ ಹೆಚ್ಚಾಗಿ ಆತನ ಸಕಲ ಪ್ರಾಬಲ್ಯವನ್ನೂ ಮಣ್ಣುಮುಕ್ಕಿಸಿದ್ದು ನಮಗೆ ಕಾಣುತ್ತದೆ. ಇಲ್ಲಿ ಶ್ರೀರಾಮಚಂದ್ರ ರಾವಣನನ್ನು ಕೊಂದದ್ದೇ ಆದರು ಅದು ಸಾಂಕೇತಿಕವಾಗಿ. ಅಂದರೆ ರಾವಣನನ್ನು ಕೊಂದದ್ದು ಆತನೊಳಗೆ ತುಂಬಿದ್ದ ದೌರ್ಬಲ್ಯಗಳು. ಬದುಕುವ ಅಥವಾ ಮಾಡಿದ ತಪ್ಪನ್ನು ತಿದ್ದಿಕೊಳ್ಳುವ ಅವಕಾಶವನ್ನು ಶ್ರೀರಾಮಚಂದ್ರ ಕೊಟ್ಟಿದ್ದನು. ಆದರೆ ಕಾಲನ ಮಹಿಮೆಯೋ, ಮಾಡಿದ ಕರ್ಮಗಳ ಫಲವೋ ಅಂತು ಆತ ಅದೆಲ್ಲವನ್ನೂ ಉಪೇಕ್ಷಿಸಿದ್ದಂತು ಹೌದು. ಹಾಗೆಂದು ರಾಕ್ಷಸನಾದರೂ ರಾವಣನಲ್ಲಿ ಒಂದು ವಿಶೇಷವಾದ ಗುಣವಿತ್ತು. ಅದೇನೆಂದರೆ ಸೀತೆಯನ್ನು ಲಂಕೆಗೆ ತಂದಂಥ ರಾವಣನಿಗೆ ಆಕೆಯನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದಿತ್ತು. ಆದರೆ ಸೀತೆಯ ಒಪ್ಪಿಗೆ ಪಡೆಯದೆ ತಾನು ಮುಂದುವರೆಯಲಾರೆ ಎಂಬ ರಾವಣನ ವ್ಯಕ್ತಿತ್ವವೂ ಮೆಚ್ಚುವಂಥದ್ದೆ. ಹಾಗೆಂದು ಆತ ಮಾಡಿದ ಅನಾಚಾರಗಳೂ ಅನೇಕವಿವೆ. ಅಂದರೆ ರಾಜನಾದವನು ಹೇಗೆ ಇರಬೇಕೋ ಆ ರೀತಿಯಲ್ಲಿಲ್ಲದಿದ್ದರೆ ಆತನ ಪರಾಕ್ರಮಗಳು ಏನೇ ಇರಲಿ ಒಂದಲ್ಲ ಒಂದು ದಿನ ಆತ ಪ್ರಪಾತಕ್ಕೇ ಕುಸಿಯುತ್ತಾನೆ ಎನ್ನುವುದು ಖಚಿತ. ಮಾತ್ರವಲ್ಲ ತನ್ನ ಜತೆಗೆ ರಾಷ್ಟ್ರವನ್ನೇ ಅಧೋಗತಿಗೆ ತಳ್ಳುತ್ತಾನೆ. ಇಂಥ ಪ್ರಸಂಗಗಳು ಅಂದಿನಿಂದ ಇಂದಿನವರೆಗೂ ನಡೆದುಕೊಂಡು ಬಂದಿರುವುದು ಮಾತ್ರ ವಿಪರ್ಯಾಸವೇ. ಹೇಗೆ ಅಯೋಧ್ಯೆಯಲ್ಲಿ ಮಂಥರೆಯಂಥವರೂ ಇರುತ್ತಾರೋ ಅಂತೆಯೇ ಲಂಕೆಯಲ್ಲಿ ವಿಭೀಷಣನಂಥವರೂ ಇರುತ್ತಾರೆ. ವೈಪರೀತ್ಯವೆಂದರೆ ಅತ್ತ ವಿಭೀಷಣ ಅತಿಕಾಯರಂಥ ಸಾತ್ವಿಕರು ಇದ್ದರೂ ಲಂಕೆ ಉಳಿಯಲಿಲ್ಲ. ಅಂತೆಯೇ ಇತ್ತ ಮಂಥರೆಯಿಂದ ಅಯೋಧ್ಯೆಯೂ ಬೆಳೆಯಲಿಲ್ಲ. ಅಂದರೆ ಸಾತ್ವಿಕ ಶಕ್ತಿ ವಿಜ್ರಂಭಿಸುವುದಕ್ಕೆ ಕಾಲಾವಕಾಶ ಬೇಕಾದರೆ ತಾಮಸ ಶಕ್ತಿಯು ವಿಜ್ರಂಭಿಸುವ ಗತಿ ಕ್ಷಿಪ್ರವಾಗಿರುತ್ತದೆ. ಇದು ಅಂದಿನಿಂದ ಇಂದಿನವರೆಗೂ ಪ್ರಚಲಿತದಲ್ಲಿರುವ ವಿಷಯ. ಒಂದು ಒಳ್ಳೆಯ ಸಿದ್ಧಾಂತಕ್ಕಾಗಿ ಲಂಕೆಯಲ್ಲಿ  ಸೋದರನನ್ನು, ದೇಶವನ್ನೂ ತೊರೆದು ಹೇಗೆ ವಿಭೀಷಣ ವಿಶಿಷ್ಟವಾಗಿ ಕಾಣುವನೋ ಅದೇ ರೀತಿ ಅಯೋಧ್ಯೆಯಲ್ಲಿ ತಾಯಿಯನ್ನು ಉಪೇಕ್ಷಿಸಿ, ಅರಸುತನವನ್ನೂ ತೊರೆದು ಭರತ ವಿಶಿಷ್ಟನಾಗುತ್ತಾನೆ. ಒಳ್ಳೆಯತನಕ್ಕಾಗಲಿ ಕ್ರೂರತನಕ್ಕಾಗಲಿ ದೇಶ ಕಾಲವೆಂಬುದಿಲ್ಲ ಎಲ್ಲ ಸ್ವಭಾವದ ಜನರು ಎಲ್ಲೆಡೆಯೂ ಇರುತ್ತಾರೆ. 


ಕುಂಭಕರ್ಣನ ವ್ಯಕ್ತಿತ್ವ ಒಂದು ರೀತಿಯಾದರೆ ಇಂದ್ರಜಿತುವಿನ ಶೂರತ್ವ ಒಂದು ರೀತಿ. ಅದೇ ವೇಳೆ ತ್ರಿಜಟೆ ಎಂಬ ರಾಕ್ಷಸಕುಲದ ಸ್ತ್ರೀ ಆದರೂ ಗುಣಕ್ಕೆ ಕುಲ ಮುಖ್ಯವಲ್ಲ ಎಂಬ ತತ್ವವನ್ನು ತೋರಿಸಿಕೊಟ್ಟದ್ದು ಇನ್ನೊಂದು ರೀತಿ. ರಾವಣನ ಹೆಂಡತಿಯಾದರೂ ಮಂಡೋದರಿ ಅತ್ಯಂತ ಸಾತ್ವಿಕ ಮಹಿಳೆ ಎಂದು ತಿಳಿದಾಗ ಇವರೆಲ್ಲರೂ ಒಂದೊಂದು ಭಾವಕ್ಕೆ ಭಾಷ್ಯ ಬರೆದವರಂತೆ ಕಾಣುತ್ತಾರೆ. ಅಂದರೆ ರಾಮಾಯಣದಲ್ಲಿ ಬರುವ ಪ್ರತಿಯೊಂದು ಪಾತ್ರವೂ ಚಿಂತನೆಗೆ ಯೋಗ್ಯವಾಗಿರುವುದರಲ್ಲಿ ಸಂದೇಹವೇ ಇಲ್ಲ. ಇತ್ತ ವಸಿಷ್ಠ, ವಿಶ್ವಾಮಿತ್ರರಂಥ ತಪಸ್ವಿಗಳಂತೆ ಜನಕ, ಗುಹ, ಸುಗ್ರೀವ, ಜಟಾಯು, ಶಬರಿಯಂಥ ಮೇಧಾವಿಗಳಿಂದಲೂ ಅನೇಕ ವಿಚಾರಗಳನ್ನು ನಾವು ಕಲಿಯಬೇಕಿದೆ. ಇನ್ನು ಜಾನಕಿ ಹಾಗೂ ಶ್ರೀರಾಮಚಂದ್ರನ ವ್ಯಕ್ತಿತ್ವವಾದರೋ ಅದು ಸಾರ್ವಕಾಲಿಕವಾಗಿ ನೆನಪಲ್ಲುಳಿಯುವಂಥದ್ದು. ಶ್ರೀರಾಮಚಂದ್ರ ವಿಷ್ಣುವಿನ ಅವತಾರವಾದರೂ ಮಾನವನಾಗಿ ಏನೆಲ್ಲ ಕಷ್ಟ ಪಡಬೇಕಾಗಿ ಬಂತು ಎಂಬುದನ್ನು ಕಂಡಾಗ ಕಣ್ಣಲ್ಲಿ ನೀರು ಬರುತ್ತದೆ. ಅಂತೆಯೇ ಜಾನಕಿಯು ಲಕ್ಷ್ಮಿಯ ಅಂಶದಿಂದ ಜನಿಸಿದರೂ ಆಕೆಯೂ ಕಷ್ಟಗಳ ಪರ್ವತಗಳನ್ನೇ ಹೊತ್ತು ತಿರುಗಿದಂತಿತ್ತು. ಅಂದರೆ ಕಾಲ ಯಾರನ್ನೂ ಬಿಡದು ಎಂಬುದಕ್ಕೆ ಈ ಎರಡು ಪಾತ್ರಗಳು ಸಾಕ್ಷಿಯಾಗುತ್ತವೆ. ಶ್ರೀರಾಮಚಂದ್ರನ ಸ್ಥಿತಃಪ್ರಜ್ಞೆ, ಕರ್ತವ್ಯ ನಿಷ್ಠೆಗಳು ಅದೆಷ್ಟು ಪರಿಪೂರ್ಣವೋ ಅಷ್ಟೇ ಮನಸ್ಥಿತಿಯ ಪ್ರೌಢಿಮಯೂ ಅಪಾರ. ಸುಖದುಃಖ, ಮಾನ ಅಪಮಾನ, ಜಯಾಪಜಯ, ಲಾಭ ನಷ್ಟ, ತನ್ನವರು ಪರರು.. ಮುತಾದ ದ್ವಂದ್ವಗಳನ್ನು ಮೀರಿ ಬೆಳೆದ ಶ್ರೀರಾಮಚಂದ್ರನ ವ್ಯಕ್ತಿತ್ವಕ್ಕೆ ಸಾಟಿಯೇ ಇರದು. ಪರಮಾತ್ಮನ ಅಂಶವೋ ಜೀವಾತ್ಮವೋ ಯಾವ ಶರೀರವನ್ನು ಪ್ರವೇಶಿಸುವುದೋ ಆ ಶರೀರದ ಧರ್ಮಕ್ಕನುಗುಣವಾಗಿ ವ್ಯವಹರಿಸಲೇಬೇಕು. ಆ ನಿಟ್ಟಿನಲ್ಲಿ ಶ್ರೀರಾಮಚಂದ್ರನು ಸಾಮಾನ್ಯ ಮನುಷ್ಯರು ಏನನ್ನೆಲ್ಲ ಅನುಭವಿಸಬೇಕಾಗುತ್ತದೋ ಅದೆಲ್ಲವನ್ನೂ ಅನುಭವಿಸಿದ್ದನು. ಆದರೂ ಪ್ರತಿಯೊಂದು ಹಂತದಲ್ಲೂ ತನ್ನ ಸ್ಥಿತಃಪ್ರಜ್ಞೆಯನ್ನು ಮೀರಿ ವರ್ತಿಸಿದ್ದೇ ಇಲ್ಲ. ಆತನ ಜೀವನವೆಲ್ಲವೂ ತಾನು ಅನುಭವಿಸಿ ಇತರರಿಗೆ ಬೋಧಿಸುವ ಉಪಾಧ್ಯಾಯನಂತೆ ಕಾಣುವುದು. 


ಒಂದು ಕ್ಷಣ ಯೋಚಿಸೋಣ. ಮನೆಯಲ್ಲಿ ಎಲ್ಲವೂ ಭದ್ರತೆಯಿಂದಿದೆ ಎಂಬ ಭಾವದಿಂದ ನಾವು ಎಲ್ಲೊ ಕೆಲಸದ ಮೇಲೆ ಹೋಗಿರುತ್ತೇವೆ. ವಾಪಸು ಬಂದಾಗ ಮನೆಯೊಡತಿಯನ್ನು ಯಾರೋ ಅಪಹರಿಸಿಕೊಂಡು ಹೋದರೆ ನಮ್ಮ ಪರಿಸ್ಥಿತಿ ಹೇಗಿರಬಹುದು. ಶ್ರೀರಾಮಚಂದ್ರನ ಅಂದಿನ ಸ್ಥಿತಿ ಯಾವನಿಗೂ ಬರಬಾರದು. ಅರಣ್ಯದಲ್ಲಿ ತಮ್ಮ, ಹೆಂಡತಿಯ ಹೊರತು ಎಲ್ಲವೂ ಅಪರಿಚಿತವಾಗಿರುವಾಗ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹೆಂಡತಿಯ ಅಪಹರಣ ಶ್ರೀರಾಮಚಂದ್ರನನ್ನು ಅದೆಷ್ಟು ಹೈರಾಣವಾಗಿಸ ಬಹುದು. ಮರಗಿಡಗಳಲ್ಲಿ, ಮೃಗ ಪಕ್ಷಿಗಳಲ್ಲಿ, ಸಿಕ್ಕಸಿಕ್ಕವರಲ್ಲಿ ತನ್ನ ಅಳಲನ್ನು ತೋಡಿಕೊಂಡು ರಾಮನಂಥ ರಾಮನೇ ಕಣ್ಣೀರು ಸುರಿಸುತ್ತ ಹುಚ್ಚನಂತಾದಾಗ ನಮ್ಮ ಹೃದಯವೂ ಕರಗುತ್ತದೆ, ಕಣ್ಣಂಚೂ ಒದ್ದೆಯಾಗುತ್ತದೆ. ಅದರಲ್ಲೂ ರಾಕ್ಷಸನಾದ ರಾವಣನು ಹೆಂಡತಿಯನ್ನು ಅಪಹರಿಸಿದ ಸುದ್ದಿ ತಿಳಿದಾಗ ಸಾಮಾನ್ಯ ಮನುಷ್ಯನಾದರೆ ಎದೆ ಒಡೆದೇ ಸಾಯಬಹುದು. ಅಂಥ ಪ್ರಸಂಗಗಳಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ಶ್ರೀರಾಮಚಂದ್ರನ ಅಂದಿನ ಜೀವನ ಆದರ್ಶವಾಗುತ್ತದೆ. ಜಟಾಯು ಸಾವಿನ ದವಡೆಯಲ್ಲಿ ಒದ್ದಾಡುತ್ತ ಜಾನಕಿಯ ಆಭರಣಗಳನ್ನು ತೋರಿದಾಗ ತನಗಾಗಿ ಪ್ರಾಣಾರ್ಪಣೆಗೆ ಸಿದ್ಧವಾದ ಜಟಾಯುವನ್ನು ಸಂತೈಸಬೇಕು. ಜತೆಗೆ ಅಗಲಿದ ಸೀತೆಯ ಆಭರಣಗಳನ್ನು ನೋಡಿ  ಸ್ವತಹ ಸೀತೆಯನ್ನೇ ಅದರಲ್ಲಿ ಕಂಡ ಭಾವವನ್ನು ಸಹಿಸಿಕೊಳ್ಳಬೇಕು. ಇಲ್ಲಿ ಶ್ರೀರಾಮಚಂದ್ರನ ಸ್ಥಿತಃಪ್ರಜ್ಞೆಯ ಸಂಪೂರ್ಣ ಪರಿಚಯವಾಗುತ್ತದೆ. ಮುಂದೆ ಆಂಜನೇಯ ಸೀತೆಯನ್ನು ಕಂಡು ಬಂದಾಗ ಆತನಿಂದ ಸಮಾಚಾರವನ್ನು ತಿಳಿದಾಗ ಶ್ರೀರಾಮಚಂದ್ರನ ದುಃಖ ಅದ್ಯಾವ ಮಟ್ಟದಲ್ಲಿರಬಹುದು.. ಛೆ..! ಛೆ..! ಯಾವ ಅರಸನಿಗೂ ಈ ಪರಿಯ ಪ್ರಸಂಗಗಳು ಬಾರದು. ಅಂತು ರಾಮಾಯಣವನ್ನು ನಾವು ಅದರಲ್ಲೂ ವಾಲ್ಮೀಕಿ ಬರೆದ ಮೂಲ ರಾಮಾಯಣವನ್ನು ಓದಿದಾಗ ನಿಜವಾಗಿಯೂ ತ್ರೇತಾಯುಗದಲ್ಲಿ ನಾವಿದ್ದೇವೆ ಎಂದೇ ಅನ್ನಿಸದೆ ಇರಲಾರದು. ಅದೇರೀತಿ ಸೀತಾಮಾತೆಯ ಜೀವನವಂತು ಹೆಜ್ಜೆ ಹೆಜ್ಜೆಗೂ ತಿರುವು ಪಡಕೊಂಡು ಪತ್ತೇದಾರಿ ಕಾದಂಬರಿಯಂತೆ ಕಾಣುತ್ತದೆ. ತಿಂಗಳುಗಟ್ಟಲೆ ರಾಮನನ್ನು ಬಿಟ್ಟು ಕ್ಷಣ ಕ್ಷಣವೂ ರಾಮ ಬರುವನೆಂಬ ಒಂದೇ ನಂಬಿಕೆಯಿಂದ ತಾಳ್ಮೆಯ ಪ್ರತಿರೂಪದಂತೆ ಕಳೆದ ದಿನಗಳು ಸಾಮಾನ್ಯ ಮನುಷ್ಯನಿಗಾದರೆ ನಿಜವಾಗಿಯೂ ಕಲ್ಪನೆಗೂ ಮೀರಿದ್ದೆನ್ನಬಹುದು. ಮುಂದೆ ರಾವಣನೊಡನೆ ನಡೆವ ಯುದ್ಧದಲ್ಲಿ ರಾವಣನ ಮರಣವಾದಾಗ ಶ್ರೀರಾಮಚಂದ್ರನೇ ಎದುರು ನಿಂತು ರಾವಣನ ಉತ್ತರಕ್ರಿಯೆಯನ್ನೂ ಮಾಡಿಸುತ್ತಾನೆ. ಅಲ್ಲಿಗೆ ಶ್ರೀರಾಮಚಂದ್ರನ ಪೂರ್ಣ ವ್ಯಕ್ತಿತ್ವ ಅನಾವರಣವಾಖುತ್ತದೆ. ಎಷ್ಟೇ ದ್ವೇಷವಿದ್ದರೂ ಮರಣದ ನಂತರ ಅದನ್ನು ಬೆಳೆಸಬಾರದು. ಯಾಕೆಂದರೆ ಜೀವ ಹೋದ ಮೇಲೆ ವೈರತ್ವ ಬರಿದೆ ಕಾಯದಲ್ಲಿ ಮಾತ್ರ ಉಳಿಯುವುದು. ಆದರೆ ಕಾಯವೆನ್ನುವುದು ಪಂಚಭೂತಗಳ ಸಂಯೋಗದಿಂದಾಗುವುದರಿಂದ ನಾವು ಪಂಚಭೂತಗಳೊಡನೆ ವೈರತ್ವ ಬೆಳೆಸಿದಂತಾದೀತೇ ಹೊರತು ಬೇರೆ ಯಾವ ಪುರುಷಾರ್ಥವೂ ಇಲ್ಲ. ಹೀಗೆ ರಾಮಾಯಣದ ವಿಚಾರಗಳನ್ನು ಹೇಳಿದಷ್ಟು ವೃದ್ಧಿಯಾಗುವುದೇ ಹೊರತು ಕಡಿಮೆಯಂತು ಆಗದು... ಜೈ ಶ್ರೀರಾಮಚಂದ್ರ.... 


 

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

ಮೊಬೈಲ್: 81053 09403


ಲೇಖಕರ ಸಂಕ್ಷಿಪ್ತ ಪರಿಚಯ:

ಎನ್. ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ ಅವರು ವರ್ತಮಾನದಲ್ಲಿ ಅಡುಗೆ ವೃತ್ತಿಯನ್ನು ಮಾಡುತ್ತಿದ್ದು, ಹಿಂದೆ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಕಾರು ಚಾಲಕರಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದರು. ಉತ್ತಮ ಕೃಷಿಕರೂ ಆಗಿರುವ ಅವರು ಸ್ವಾಧ್ಯಾಯ ಮತ್ತು ಜೀವನಾನುಭವಗಳಿಂದಲೇ ಸಾಕಷ್ಟು ವಿಚಾರಗಳನ್ನು ಮನನ ಮಾಡಿಕೊಂಡವರು.  ಗಣಪತಿ ಸಹಸ್ರಬುದ್ಧೆ ನೆಲ್ಲಿತಡ್ಕ ಮತ್ತು ಶಾರದಾ ಸಹಸ್ರಬುದ್ಧೆ ನೆಲ್ಲಿತಡ್ಕ ದಂಪತಿಗಳ ಪುತ್ರನಾಗಿ 15/3/1961 ಬುಧವಾರ ಜನಿಸಿದ ಅವರು ಬರವಣಿಗೆ, ಸಂಗೀತದಾಸಕ್ತಿ, ಹಾರ್ಮೋನಿಯಂ ನುಡಿಸುವಿಕೆ, ಭಜನೆ ರಚಿಸಿ ಹಾಡುವುದು, ಯಕ್ಷಗಾನ, ನಾಟಕ, ಸಿನೆಮಾಗಳನ್ನು ನೋಡುವುದು ಇತ್ಯಾದಿ ಹವ್ಯಾಸಗಳನ್ನು ಪೋಷಿಸಿಕೊಂಡು ಬಂದಿದ್ದಾರೆ. ಯಾರಲ್ಲೂ ನಿಷ್ಠುರ ಮಾಡದೇ ಇರುವುದು. ವಾಸ್ತವವನ್ನು ಒಪ್ಪುವುದು ಇವರ ಸ್ವಭಾವ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top