ಶ್ರೀರಾಮ ಕಥಾ ಲೇಖನ ಅಭಿಯಾನ- 41: ವೀರ ರಾಮ ನಮೋಸ್ತುತೇ

Upayuktha
0


- ಡಾ. ವಾಣಿಶ್ರೀ ಬಿ. ಎಮ್.


ಮಧ್ವಾರ್ಚಿತ ಮಹಾವೀರಂ, ದರಸ್ಮಿತಂ ದಯಾನಿಧಿಂ

ತನುಮಧ್ಯೇಲಸತ್ಖಡ್ಗಂ ತಂ ನಮಾಮಿ ರಘೂತ್ತಮಂ 


ಗದ್ಗುರು ಶ್ರೀಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನವಾದ ಶ್ರೀಮನ್ಮಾಧವತೀರ್ಥರ ಸಂಸ್ಥಾನವು ತಂಬಿಹಳ್ಳಿ ಎಂಬ ಪುಣ್ಯ ಗ್ರಾಮದಲ್ಲಿದೆ. ಪ್ರಸ್ತುತ ಅಲ್ಲಿನ ಪೀಠಾಧಿಪತಿಗಳು ಶ್ರೀವಿದ್ಯಾಸಾಗರ ಮಾಧವತೀರ್ಥರು. ಮಾತೃ ಹೃದಯಿಗಳಾದ ಶ್ರೀಗಳು ಭಕ್ತ ವತ್ಸಲರು. ಕೇವಲ ಅವರ ದರ್ಶನ ಭಾಗ್ಯ ಮಾತ್ರದಿಂದಲೇ ಸುಜೀವಗಳ ಹೃದಯ ತುಂಬಿ ಬರುತ್ತದೆ. ಎಲ್ಲರನ್ನೂ ಅತ್ಯಂತ ಅತ್ಮೀಯತೆಯಿಂದ ವಾತ್ಸಲ್ಯದಿಂದ ಕಾಣುವ ಮಮತಾಮಯಿ ಅವರು. ಪೂರ್ವಾಶ್ರಮದಲ್ಲಿ ಶ್ರೀಕಂಬಾಲೂರು ವೆಂಕಟೇಶಾಚಾರ್ಯರು ಆಂಧ್ರ ಸರ್ಕಾರಿ ಪದವೀ ಕಲಾಶಾಲೆಗಳಲ್ಲಿ ತೆಲುಗು ಪ್ರಾಧ್ಯಾಪಕರು ನಂತರ ಪ್ರಾಚಾರ್ಯರೂ ಆಗಿದ್ದಂತಹವರು. 1971 ರಲ್ಲಿ ವ್ಯಾಸರ ಭಾರತವನ್ನು ಕನ್ನಡ, ತೆಲುಗು, ತಮಿಳು, ಭಾಷೆಗಳಲ್ಲಿ ಬರೆದ ಕವಿಗಳು ಎಷ್ಟರ ಮಟ್ಟಿಗೆ ಮೂಲಕ್ಕೆ ಬದ್ಧರಾಗಿದ್ದಾರೆ ಎಲ್ಲಿ ತಮ್ಮ ಸ್ವೋಪಜ್ಞತೆ ಮೆರೆದಿದ್ದಾರೆ ಎಂಬ ವಿಷಯ ಕುರಿತು ಇಂಗ್ಲಿಷ್‍ನಲ್ಲಿ ಪ್ರೌಢ ಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿಯನ್ನ್ಲು ಧಾರವಾಡ ವಿವಿಯಿಂದ ಪಡೆದಿದ್ದಾರೆ. ಶ್ರೀವ್ಯಾಸರಾಜ ಮಠದಲ್ಲಿ, ಶ್ರೀರಾಘವೇಂದ್ರ ಗುರುಸಾರ್ವಭೌಮ ವಿದ್ಯಾಪೀಠದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ನಂತರ ಇವರ ಆರಾಧ್ಯ ದೈವ ವೀರರಾಮನ ಪ್ರೇರಣೆಯಂತೆ ಶ್ರೀರಾಯರು ಅವರಿಗೆ ವೇದಾಂತ ಸಾಮ್ರಾಜ್ಯ ಪದವಿ ನೀಡಿ ಅನುಗ್ರಹಿಸಿದ್ದಾರೆ. ಶ್ರೀಪ್ರಸನ್ನ ಶೂರಮಾಧವತೀರ್ಥರಿಂದ ಆಶ್ರಮ ಸ್ವೀಕರಿಸಿ ಶ್ರೀವಿದ್ಯಾಸಾಗರಮಾಧವ ತೀರ್ಥರೆಂಬ ಅಭಿದಾನದಿಂದ ಖ್ಯಾತರಾಗಿದ್ದಾರೆ.


ಶ್ರೀಗಳು ಶ್ರೀಮದಾಚಾರ್ಯರ ಶ್ರೀಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥವನ್ನು ತೆಲುಗಿಗೆÉ ಅನುವಾದ ಮಾಡಿದ್ದಾರೆ. ಉಭಯ ಭಾಷಾ ವಿದ್ವಾಂಸರಾದ ಶ್ರೀಗಳು ಜ್ಞಾನಸಾಗರ ಮಾಧವ ಎಂಬ ಅಂಕಿತದಲ್ಲಿ 2000 ಕ್ಕೂ ಹೆಚ್ಚು ಪದ್ಯಗಳನ್ನು ಬರೆದಿದ್ದಾರೆ. ದಾಸಸಾಹಿತ್ಯಕ್ಕೆ ಹಲವಾರು ಯತಿಗಳು ಅಮೂಲ್ಯ ಕೊಡುಗೆ ನೀಡಿರುವಂತೆ ಅಂತರಂಗದ ತಿಳಿಗೀತೆಗಳು ಎನ್ನುವ ಶೀರ್ಷಿಕೆಯಲ್ಲಿ ಶ್ರೀವಿದ್ಯಾಸಾಗರಮಾಧವÀತೀರ್ಥರು ಹರಿದಾಸ ಸಾಹಿತ್ಯ ರಚಿಸಿದ್ದಾರೆ. ಪ್ರತಿಯೊಬ್ಬ ಹರಿದಾಸರ ಕೃತಿಗಳೂ ಆತ್ಮ ನಿವೇದನೆಯೊಂದಿಗೆ ಆರಂಭವಾಗುತ್ತದೆ. ಅಂತೆಯೇ ನೈಚ್ಯಾನುಸಂಧಾನದಿಂದ ಶ್ರೀಗಳು ಶ್ರೀರಾಮನನ್ನು ಸ್ತುತಿಸಿದ್ದಾರೆ. 


ಧರ್ಮ ಸಂಸ್ಥಾಪನೆಗಾಗಿ ಶ್ರೀಹರಿ ಎತ್ತಿದ 7ನೇ ಅವತಾರ ಶ್ರೀರಾಮ. ರಾಮಾಯಣ ಮಹಾಕಾವ್ಯ ರಾಮನ ಕತೆ.  ಇದೊಂದು ಆದರ್ಶಗಳ ಕಾವ್ಯ, ಇಂದಿಗೂ ಅತ್ಯಂತ ಪ್ರಸ್ತುತ. ಶ್ರೀರಾಮ ಮರ್ಯಾದಾ ಪುರುಷೋತ್ತಮ.  ಶ್ರೀರಾಮನು ಭಾರತೀಯರಿಗೆ ಮನುಜ ಜನ್ಮ, ಮಾನವಪ್ರಜ್ಞೆ, ಮಾನವತೆ ಮಾನವೀಯತೆಗಳ ಘನತೆ, ಗಾಂಭೀರ್ಯ ಸಾರ್ಥಕತೆಗಳ ಪರಿಚಯ ಮಾಡಿಸಿದ ಪರಮ ದೇವೋತ್ತಮ ಪುರುಷ. ಮಾನವನ ಬದುಕು ಹೇಗಿರಬೇಕೆಂಬ ನೀತಿಯನ್ನು ರಾಮ ತನ್ನ ಆಚರಣೆ, ನಡವಳಿಕೆಗಳಿಂದ ತೋರಿಸಿಕೊಟ್ಟು ಭಾರತೀಯರ ಮನದಲ್ಲಿ ಶಾಶ್ವತ ಸ್ಥಾನ ಗಳಿಸಿದ್ದಾನೆ. 


ರಘುವಂಶದ ಅರಸರ ಮಹೋನ್ನತ ಧ್ಯೇಯವಾದ ‘ತ್ಯಾಗ’ ವನ್ನು ರಾಮ ಎತ್ತಿ ಹಿಡಿದು ಅದರ ಹಿರಿಮೆಯನ್ನು ಜಗತ್ತಿಗೆ ತೋರಿಸಿ ಕೊಟ್ಟಿದ್ದಾನೆ. ಸಾಮ್ರಾಜ್ಯ, ಹಕ್ಕು, ಸುಖ, ಎಲ್ಲವನ್ನೂ ತಂದೆಯ ಮಾತಿಗೆ ತ್ಯಾಗ ಮಾಡಿ ವ್ರತ ಜೀವನ ಸ್ವೀಕರಿಸಿದ ಧೀರೋದಾತ್ತ ವ್ಯಕ್ತಿ ಶ್ರೀರಾಮಚಂದ್ರ, ಪರಾಕ್ರಮಿಯೂ, ಮಹಾವೀರನೂ, ತೇಜಸ್ವಿಯೂ, ಉದಾರನೂ, ಸದ್ಗುಣಶೀಲನೂ ಆದ ಶ್ರೀರಾಮ ಜ್ಞಾನಸಾಗರ ಮಾಧವ ಎಂಬ ಅಂಕಿತದ ಕೃತಿಗಳಲ್ಲಿ ಸುಂದರವಾಗಿ ಮೂಡಿ ಬಂದಿದ್ದಾನೆ.

 

ಶ್ರೀವಿದ್ಯಾಸಾಗರ ಮಾಧವತೀರ್ಥರು ವೀರರಾಮನನ್ನು

ರಾಮ ನಿಸ್ಸೀಮ,  ಕಾರುಣ್ಯಧಾಮ, ಶ್ಯಾಮ  

ಭೂಮಿಜಾನಂದ ನಂದನ ರಾಮ ಸೀಮ 

ಕಾಮಿ ರಾವಣ ನಿರ್ಧೂಮ ಭೀಮ ವೀರ  

ಮಾಮನ; ಭವಾಮಯಹರ; ರಮಾಭಿರಾಮ 

ಎಂದು ಸ್ತುತಿಸುತ್ತಾರೆ. ಶ್ರೀ ಹರಿ ಕಡು ಚೆಲುವ ಹರಿದಾಸರು ಅವನನ್ನು ‘ಮದನಕೋಟಿ ಮೋಹನಾಂಗ’ ಎಂದೇ ವರ್ಣಿಸುತ್ತಾರೆ. ಅಂತೆಯೇ ಶ್ರೀಗಳು ರಾಮನ ಮಂದಹಾಸವನ್ನು ಅವನ ಚೆಲುವನ್ನು ವರ್ಣಿಸುತ್ತಾರೆ. ವೀರರಾಮನನ್ನು ಪದೇಪದೇ ನೋಡುವ ಅವರಿಗೆ ಅವನನ್ನು ಎಷ್ಟು ನೋಡಿದರೂ ತೃಪ್ತಿಯಿಲ್ಲ. ಕಣ್ಣುಗಳಲ್ಲಿ ದಣಿವು ಕಾಣದೇ ವೀರರಾಮನನ್ನು ನೋಡುತ್ತಾರೆ. ಅವರು ಹೇಳುವಂತೆ

ಶಾರದೇಂದು ಚಂದ್ರಿಕೆ ಪರಿಚರ್ಯ ಕೆಳಿವ  

ಮಂದಹಾಸ ಸುಂದರ ಮಖದಂದದ ಝರಿ 

ವೀರರಾಮನ ಮಂದಹಾಸ ಮನಮೋಹಕಗೊಳಿಸುವ ಚುಂಬಕದಂತೆ ಇನ್ನು ಅವನ ಚೆಲುವು.

ನಾರಿಯರ ನಾಚಿಸುವ ಚೆಲ್ವ, ಮಾರ ನೋಡಿ 

ಮೋರೆ ತಗ್ಗಿಸಿ ಹೋಗುವ ಧೀರ ಚೆಲುವು 

ಸೀರ ಜಾತೆಗೆ ಮುಡುಪಾಗಿ ಧಾರೆ ಎರೆದ  

ಪಾರಗಾಣದಪಾರ, ದಾಂಪತ್ಯ ಚೆಲುವು. 


ತನ್ನ ಮಗ ಮನ್ಮಥನನ್ನೇ ನಾಚಿಸುವ ಚೆಲುವ ಶ್ರೀರಾಮ. ಅವನ ಸೌಂದರ್ಯ ಎಂತಹದ್ದೆಂದರೆ ರಾಮಾವತಾರದಲ್ಲಿ ಏಕಪತ್ನೀ ವ್ರತಸ್ಥನಾದ್ದರಿಂದ ನಾಕ ಲೋಕದ ಕಾಮಿನೀಲೋಕ ಕೃಷ್ಣಾವತಾರದ ಸಮಯಕ್ಕೆ ಕಾದು ಅವನನ್ನು ಮೋಹಿಸಿದರೆನ್ನುತ್ತಾರೆ. 

ಇಂತಹ ಚೆಲುವ ಚೆನ್ನಿಗ ರಾಮನನ್ನು 

ನಿರುಪಮಾಗಮ್ಯ ಮಹಿಮನು ನೀನು ದೇವ 

ರೋಮಕೂಪವ ಬ್ರಹ್ಮಾಂಡ ಭಾಂಡವ ಮಾಳ್ಪ

ಸೀಮೆ ಇಲ್ಲದಗಮ್ಯ ಮಹಿಮನು ನೀನು 

ಹೇ ಮಹಾನುಭಾವನೆ  ವೀರನಾರಸಿಂಹ 

ಎಂದು ಕೊಂಡಾಡುತ್ತಾ ಅವನ ಆಜ್ಞೆಯಿಲ್ಲದೆ ಏನೂ ನಡೆಯದು ಎನ್ನುತ್ತಾರೆ. ಅಗಮ್ಯ ಮಹಿಮನಾದ ರಾಮನ ಮಹಿಮೆಯನ್ನು ತಿಳಿಯಲು ಸಾಧ್ಯವೇ ಎನ್ನುವ ಭಾವ ಇಲ್ಲಿ ವ್ಯಕ್ತವಾಗಿದೆ.


ಕಾರುಣ್ಯಮೂರ್ತಿ ಶ್ರೀರಾಮನನ್ನು ಅಜಾಮಿಳನಂತಹ ದುಷ್ಕಾಮಿಯನ್ನು, ಧೃವನಂತಹ ರಾಜ್ಯಕಾಮಿಯನ್ನು, ರಾಕ್ಷಸ ಸುತ ಪ್ರಹ್ಲಾದನಂತಹ ನಿಷ್ಕಾಮಿಯನ್ನು ಪೊರೆದ ಹರಿಯನ್ನು ‘ಕಾರುಣ್ಯ ಕಲ್ಪ’ ಕಾಯಬೇಕು ಎಂಬು ಬೇಡುತ್ತಾರೆ. 

ಎಷ್ಟು ಕರುಣಾಸಮುದ್ರನೋ | ದುಷ್ಟತನದಿ

ಇಷ್ಟು ಶ್ರೇಷ್ಠನ ಬಿಟ್ಟ ಈ ಭ್ರಷ್ಟ ನರನ 

ದುಷ್ಟತನವೆಣಿಸದೆ ಬಲುದೊಡ್ಡ ಮನದಿ 

ಇಷ್ಟು ಮಾಡಿದೆ | ನಿನಗೆ ನಾನೆಷ್ಟು ಋಣಿಯೋ

ಎಂದು ಕೃತಜ್ಞತಾ ಭಾವ ತಾಳುತ್ತಾರೆ. ಕಲಿಯುಗದಲ್ಲಿ ಹರಿನಾಮ ಸ್ಮರಣೆ ಮಾತ್ರದಿಂದ ಉತ್ತಮ ಸಿದ್ಧಿ ದೊರೆಯುವುದು.


ದಾನವಾನುಜನಿಗೆ ರಾಜ್ಯ ನೀನೆ ಕೊಟ್ಟೆ

ವಾನರಾನುಜನಿಗೆ ರಾಜ್ಯ ನೀನೆ ಕೊಟ್ಟೆ

ನನಗೆ ರಾಜ್ಯ ಬೇಡ ಅವಸಾನ ಸಮಯದಲಿ 

ನಿನ್ನ ನಾಮ ಸ್ಮರಣೆ ಕೊಟ್ಟು ಮನ್ನಿಸಯ್ಯ

ಎಂದು ರಾಮ ನಾಮ ಸ್ಮರಣೆಯ ಮಹತ್ವವನ್ನು ತಿಳಿಸುತ್ತಾರೆ. ಮರಣ ಕಾಲದಲ್ಲಿ ಸ್ಮರಣೆ ನೀಡೆಂದು ಬೇಡುತ್ತಾರೆ.


ಶ್ರೀವಿದ್ಯಾಸಾಗರ ಮಾಧವತೀರ್ಥರು. ರಾಮ ನವಮಿಯ ಸಮಯದಲ್ಲಿ ರಾಗಮಾಲಿಕೆಯಲ್ಲಿ ಸಂಗ್ರಹ ರಾಮಾಯಣವನ್ನು ರಚಿಸಿದ್ದಾರೆ. 

ರಾಮ ರಾಮ ನಮೋಸ್ತುತೇ ಪ್ರೇಮಧಾಮ 

ವೀರ ರಾಮ ನಮೋಸ್ತುತೇ ವಿಶ್ವಧಾಮ 

ಎಂದು ಪ್ರಾರಂಭವಾಗಿ ಸಂಪೂರ್ಣ  ರಾಮಾಯಣದ ಕತೆಯನ್ನು 29 ನುಡಿಗಳಲ್ಲಿ ಸಂಗ್ರಹಿಸಿದ್ದಾರೆ. 


ಭೂಭಾರ ಕಳೆಯಲು ರಾಮನಾದೆ, ದಾಶರಿಥಿಯಾಗಿ ಧರ್ಮದ ರಾಶಿಯಾದೆ ಎಂದು ಹೇಳುತ್ತಾ ವಿಶ್ವಾಮಿತ್ರರೊಡನೆ ಹೋದದ್ದು, ಸೀತಾ ಸ್ವಯಂವರ, ಪರಶುರಾಮನೊಡನೆ ಸಂಘರ್ಷ ಮೊದಲಾದ ವಿವರಗಳನ್ನು ಕೇವಲ ಮೂರು ಪದ್ಯಗಳಲ್ಲಿ ಹೇಳಿದ್ದಾರೆ. 


ಅನುಜ ಸೌಮಿತ್ರಿ ಕರುಳಾಗಿ, ಜನಕಜಾತೆ ನೆರಳಾಗಿ ಹಿಂಬÁಲಿಸಿ ವನಚರನಾದ ರಾಮ. ಭರತ ಬಂದು ಬೇಡಿದರೂ ಕೇಳಲಿಲ್ಲ.  ಭಗವಂತನಿಗೆ ಕುಲ ಮುಖ್ಯವಲ್ಲ ಅಂತರಂಗದ ಭಕ್ತಿಯೇ ಮುಖ್ಯ ಎನ್ನುವ ವಿಚಾರವನ್ನು ತಿಳಿಸಲು ಎರಡು ಪ್ರಸಂಗಗಳನ್ನು ಹೇಳುತ್ತಾರೆ. 

ಕುಲವನೆಣಿಸದೆ ಭಕುತನೆಂದೊಲಿದು ಗುಹನ

ಪ್ಲವದಿ ಗಂಗೆ ದಾಟಿದೆ ---------

ಇದರಿಂದ ಗುಹ ಭವ ಸಾಗರವನ್ನೇ ದಾಟಿದನು ಎಂದಿದ್ದಾರೆ. ಬೇಡತಿ ಶಬರಿ ನೀಡಿದ ಫಲಗಳನ್ನು ಭುಂಜಿಸಿ ಆಕೆ ನೀಡಿದ ಭಕ್ತಿ ಫಲಕ್ಕೆ ಪ್ರತಿಯಾಗಿ ಅವಳಿಗೆ ಮುಕ್ತಿ ಫಲ ನೀಡಿದನು ರಾಮ. ರಾಮನ ನೆರಳಿನಂತೆ ಹಿಂಬಾಲಿಸುವವ ಹನುಮ.


ಜ್ಞಾನಿ ಹನುಮನೆಂದರೆ ಬಲು ಪ್ರಾಣ ನಿನಗೆ

ಹನುಮನೊಲಿದ ಸುಗ್ರೀವನ ಹಸ್ತ ಪಿಡಿದೆ

ಜ್ಞಾನ ಜನ ಕರುಣಾಮೂರ್ತಿ ನೀನು; ನಿನ್ನ 

ಅಮರ ಗುಣಗಾನ ಹನುಮನಿಗಮೃತಪಾನ 



ಹನುಮನು ಒಪ್ಪಿದ ಎಂಬ ಒಂದೇ ಕಾರಣಕ್ಕೆ ವಿಭೀಷಣನಿಗೆ ಒಲಿದು ರಾಕ್ಷಸ ರಾಜ್ಯಕ್ಕೆ ಅಧಿಪತಿಯನ್ನಾಗಿಸಿದೆ. ಭಕ್ತ ಹನುಮನ ಮೇಲೆ ರಾಮನಿಗೆ ಅಪರಿಮಿತ ಪ್ರೀತಿ ಎನ್ನುತ್ತಾರೆ. ಎಲ್ಲ ವಾನರರೂ ವಾರಿಧಿ ದಾಟಲಾರರು. ನಿನ್ನ ಅನುಗ್ರಹದಿಂದ ವಾಯುಸುತನು ಅದನ್ನು ದಾಟಿದ. ಇನ್ನು ಸಾಗರಕ್ಕೆ ಸೇತುವೆ ಕಟ್ಟಿದ್ದು ಅದ್ಭುತವೇನಲ್ಲ. ಅಬ್ಧಿಶಯನನಾದ, ಈ ಭವಾಬ್ಧಿಯನ್ನು ದಾಟಿಸುವ ರಾಮನಿಗೆ ವಾನರರನ್ನು ಸಮುದ್ರ ದಾಟಿಸಿದ್ದು ಘನವೆ ಎನ್ನುವ ಮೂಲಕ ಈ ಲೀಲೆಗಳೆಲ್ಲವೂ ರಾಮನಿಗೆ ಬಹು ಸುಲಭ ಎನ್ನುತ್ತಾರೆ.


ಅನುಪಮಾನ ಭಕ್ತಿಗೆ ಪವಮಾನ ಸುತಗೆ

ಏನು ಕೊಟ್ಟರೂ ಸಾಲದೆಂದೆನುತ ನೀನು

ಸಾನುರಾಗದಿ ಸ್ವಾತ್ಮ ಪ್ರದಾನಿಯಾದೆ

ಜ್ಞಾನಿ ಜನರೆಂದರೆ ನಿನಗದೇನು ಪ್ರೀತಿ 

ಎಂದು ಹನುಮ ಎಂತಹ ಜ್ಞಾನಿ ಎಂಬ ವಿಚಾರ ಅರುಹುತ್ತಾರೆ.


ಇನ್ನು ರಾಜನಾಗಿ ರಾಮನೇ ಆದರ್ಶ. ಒಬ್ಬ ಶ್ರೇಷ್ಠರಾಜ ಹೇಗಿರಬೇಕೆಂಬುದಕ್ಕೆ ಶ್ರೀರಾಮ ಜ್ವಲಂತ ನಿದರ್ಶನ. 

ಸುತನಾಗಿ, ಪÀಯಾಗಿ, ಸೋದರನಾಗಿ, ಸ್ವಾಮಿಯಾಗಿ ಎಲ್ಲರಿಗೂ ಅದರ್ಶಪ್ರಾಯನಾದ ರಾಮನ ರಾಜ್ಯವೆಂದರೆ   

ರಾಜನೆಂದರೆ ರಾಮನೇ ರಾಜನೆಂದು

ರಾಜ್ಯವೆಂದರೆ ರಾಮನ ರಾಜ್ಯ ಒಂದೆ

ರಾಜ್ಯವೆಂಬಚ್ಚಳಿಯದ ಅಭಾಜ್ಯ ಕೀರ್ತಿ

ರಾಜ್ಯ ವೈಭವದಾ ಸಾವಭೌಮ ನೀನು

ಯಥಾಮತಿ ಇದನ್ನು ಹೇಳಿರುವುದಾಗಿ ವಿನಯ ಮೆರೆಯುವ ಶ್ರೀಗಳು ಸೀತಾಪತಿ ಸತತ ಪೊರೆಯಲಿ ಎಂದು ಬೇಡುತ್ತಾರೆ. 



ವೀರರಾಮನನ್ನು ಬಗೆಬಗೆಯಾಗಿ ಕೊಂಡಾಡಿ ಅವನ ಮಹಿಮಾತಿಶಯಗಳನ್ನು ಅಕ್ಷರ ರೂಪದಲ್ಲಿ ನೀಡಿರುವ ಶ್ರೀಗಳು ದಶಾವತಾರ ಸ್ತುತಿ, ಮೋಹಿನಿ ವೈಷ್ಣವಿ ಮಾಯೆ, ದತ್ತದೇವನ ಸ್ತೋತ್ರ, ಧನ್ವಂತರಿ ಸ್ತೋತ್ರ, ಗುರುಸ್ತುತಿ ಮೊದಲಾದ ಕೀರ್ತನೆಗಳನ್ನು ರಚಿಸಿ ಜ್ಞಾನಸಾಗರ ಮಾಧವನ ಅಡಿದಾವರೆಗಳಲ್ಲಿ ಅರ್ಪಿಸಿದ್ದಾರೆ. ಅಂತರಂಗದ ತಿಳಿಗೀತೆಗಳು ಎಂದು ಹೇಳಿದರೂ ರಾಮನ (ಶ್ರೀಹರಿಯ) ಸರ್ವೋತ್ತಮತ್ವ, ಅಗಮ್ಯ ಮಹಿಮೆಗಳನ್ನು ಮನಮುಟ್ಟುವಂತೆ ತಿಳಿಸಿದ್ದಾರೆ. ಅವರ ಈ ಗೀತೆಗಳಿಗೆ ಅವರೇ ಆಂಗ್ಲ ಭಾಷೆಯಲ್ಲಿ ಸ್ವಗತ ರೂಪದಲ್ಲಿ ವ್ಯಾಖ್ಯಾನ ನೀಡಿರುವುದೂ ವಿಶೇಷವೆ ಆಗಿದೆ. ಜ್ಞಾನಸಾಗರ ಮಾಧವನ ಜ್ಞಾನ ತೀರ್ಥದಲ್ಲಿ ಮಿಂದೇಳುವ ಸೌಭಾಗ್ಯ ಪಡೆದವರೇ ಧನ್ಯರು.




- ಡಾ. ವಾಣಿಶ್ರೀ ಬಿ ಎಂ.

ಪ್ರಾಧ್ಯಾಪಕರು, ಕನ್ನಡ ವಿಭಾಗ, ಎಂ ಇ. ಎಸ್ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಮಲ್ಲೇಶ್ವರಂ, ಬೆಂಗಳೂರು-560003


ಲೇಖಕರ ಸಂಕ್ಷಿಪ್ತ ಪರಿಚಯ:

ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ʼಕನ್ನಡ ಮಹಿಳಾ ಹರಿದಾಸರು - ಒಂದು ಅಧ್ಯಯನʼವಿಷಯ ಕುರಿತು ಡಾಕ್ಟರೇಟ್ ಪದವಿ.೨೦೧೫. ಹರಿದಾಸ ಭಾವ ದೀಪ್ತಿ (2018), ತುಳಸಿ ಕೀರ್ತನ ಮಂಜರಿ (2010) ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಜಯಾಮೃತ (2018)-  ವಿಜಯದಾಸರ ಸುಳಾದಿಗಳ ಅವಲೋಕನ ಕೃತಿ. ಪಲಿಮಾರು ಮಠ ಉಡುಪಿ ಇವರಿಂದ ಪ್ರಕಟವಾಗಿದೆ. ಈ ಕೃತಿಯ ಸಂಪಾದಕ ಮಂಡಳಿ ಸದಸ್ಯರು. ಸುಮಾರು 100 ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಂಪನ್ಮೂಲ ವ್ಯಕ್ತಿಯಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಹಲವಾರು ಸಂಶೋಧನಾ ಲೇಖನಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top