ಶ್ರೀರಾಮ ಕಥಾ ಲೇಖನ ಅಭಿಯಾನ-30: ಬಾಲರಾಮಾವತಾರ

Upayuktha
0


-ಮತ್ತೂರು ಸುಬ್ಬಣ್ಣ


ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮನ ಬಾಲ್ಯದ ಬಗ್ಗೆ ಹೆಚ್ಚು ವಿವರಗಳಿಲ್ಲ ಎನ್ನುವುದು ನಿಶ್ಚಿತ. ವಾಲ್ಮೀಕಿಗಳು ರಾಮನ ಗುಣಗಳನ್ನು ಕೊಂಡಾಡಿದ್ದಾರೆ. ರಾಮನ ಎಲ್ಲ ಗುಣಾಂಶಗಳೂ ಮುಂದೆ ಅವನು ಬೆಳೆದು ಅವತಾರ ಪುರುಷನಾಗುವ ಸೂಚನೆಗಳನ್ನು ಕೊಡುತ್ತವೆ. ರಾಜಕುಮಾರನಿಗೆ ಇರುವ ಔನ್ಯತ್ಯ, ಜವಾಬ್ದಾರಿತನ, ಸತ್ಯಾಚರಣೆ, ಧರ್ಮಭೀರುತನ, ಸಂಕಷ್ಟದಲ್ಲಿರುವವರನ್ನು ಕಾಪಾಡುವ ಬುದ್ಧಿ, ಅನ್ಯಾಯವನ್ನು ಪ್ರತಿಭಟಿಸುವ ಮನಸ್ಥಿತಿ, ಎಲ್ಲವೂ ಸಮನ್ವಿತವಾಗಿದ್ದವು ಬಾಲರಾಮನಲ್ಲಿ ಎಂದು ಖಂಡಿತವಾಗಿ ಹೇಳಬಹುದು.


ಶ್ರೀರಾಮನ ಹುಟ್ಟಿನ ಹಿನ್ನೆಲೆಯೂ ರೋಚಕವಾಗಿದೆ. ಅಯೋಧ್ಯಾಪತಿ ದಶರಥ ರಾಜನಿಗೆ ಮೂವರು ಅರಸಿಯರಾದರೂ ವಂಶೋದ್ಧಾರಕನಾಗಿ ಬೆಳಗಬಲ್ಲ ಪುತ್ರನಿರಲಿಲ್ಲ. ವಯಸ್ಸಾಗಿದೆ. ಮೈ ಶಕ್ತಿ ಕುಂದಿದೆ. ಮಗನನ್ನು ಕಾಣಲಾರೆನೇನೊ ಎಂದು ಮನಸ್ಸಿಗೆ ಅನಿಸಿ ಭಾರವಾಗಿದೆ. ‘ಮಕ್ಕಳಿಲ್ಲದವಗೆ ಮುಕ್ತಿ ದೊರೆಯದು’ ಎಂಬ ಲೋಕೋಕ್ತಿಯೂ ಬಾಧಿಸಿರಬಹುದು. ಪುತ್ರನನ್ನು ಪಡೆಯುವ ಇಚ್ಛೆಯಿಂದ, ಗುರುಗಳಾದ ವಸಿಷ್ಠರÀಲ್ಲಿ ಸಮಾಲೋಚಿಸಿದ್ದಾನೆ. ಪುತ್ರ ಪ್ರಾಪ್ತಿಗಾಗಿ ಅಶ್ವಮೇಧಯಾಗವನ್ನು ಮಾಡಬೇಕೆಂದು ನಿಶ್ಚಯಿಸುತ್ತಾನೆ. ಅದೇರೀತಿ, ಅನ್ಯಾಸದೃಶವಾಗಿ ದಶರಥ, ಅಶ್ವಮೇಧ ಯಾಗವನ್ನು ನಡೆಸಿದ್ದಾನೆ. ಬೆರಳಣಿಕೆಯಷ್ಟು ರಾಜರು ಮಾತ್ರ ಇಂತಹ ಅಭೂತಪೂರ್ವ ಯಜ್ಞವನ್ನು ಮಾಡಬಲ್ಲರು. ಅಂತಹವರ ಪಂಕ್ತಿಯಲ್ಲಿ ದಶರಥ ಒಬ್ಬನಾಗಿ ಯಶಸ್ವಿನಿಂದ, ಗುರು ವಸಿಷ್ಠರ ಕೃಪಾಶ್ರಯದಲ್ಲಿ ಶಿಷ್ಯಶೃಂಗರ ಆಚಾರ್ಯತ್ವದಲ್ಲಿ ಅಶ್ವಮೇಧ ಯಾಗವನ್ನು ಮಾಡಿದ. ಅದರ ಅಂಗವಾಗಿ ಸಂತಾನಪ್ರಾಪ್ತಿಗಾಗಿ   ಪುತ್ರಕಾಮೇಷ್ಠಿ ಯಜ್ಞವನ್ನು ಮಾಡಲಾಯಿತು. ಶಾಸ್ತ್ರಕ್ಕೆ ಚ್ಯುತಿ ಬರದಂತೆ ನಡೆಸುವ ಯಜ್ಞದ ಫಲವೂ ಅಮಿತವಾಗಿರುತ್ತದೆ. ಯಜ್ಞಾಂತ್ಯದಲ್ಲಿ ಅಗ್ನಿದೇವನೇ ಪ್ರತ್ಯಕ್ಷನಾಗಿ ಪ್ರಸಾದವನ್ನು ಪಾಯಸದ ರೂಪದಲ್ಲಿ ದಶರಥ ರಾಜನಿಗೆ ಇತ್ತಿದ್ದಾನೆ. ಪಾಯಸ ಪ್ರಸಾದವನ್ನು ದಶರಥ ತನ್ನ ರಾಣಿಯರಿಗೆ ಹಂಚಿದ ಕತೆ ಕುತೂಹಲವಾಗಿದೆ.


ದಶರಥನು ದ್ವಿವ್ಯ ಪಾಯಸ ಪ್ರಸಾದವನ್ನು ತನ್ನ ಮೂವರು ಪತ್ನಿಯರಿಗೂ ವಿಭಾಗ ಮಾಡಿಕೊಟ್ಟನು. ಹಿರಿಯಳಾದ ಕೌಸಲ್ಯೆಗೆ ಪಾಯಸದ ಅರ್ಧಭಾಗವನ್ನು ಮೊದಲು ಕೊಟ್ಟನು. ಉಳಿದ ಅರ್ಧದಲ್ಲಿ ಎರಡು ಭಾಗಮಾಡಿ, ಅದರಲ್ಲಿ ಒಂದು ಭಾಗವನ್ನು ಸುಮಿತ್ರೆಗೆ ಕೊಟ್ಟನು. ಉಳಿದ ಕಾಲು ಭಾಗವನ್ನು ಪುನಃ ಎರಡು ಭಾಗಮಾಡಿ, ಒಂದು ಭಾಗವನ್ನು ಕೈಕೇಯಿಗೆ ಕೊಟ್ಟನು. ಎಂಟನೆಯ ಒಂದು ಭಾಗವು ರಾಜನಲ್ಲಿ ಉಳಿಯಿತು. ಕ್ಷಣಕಾಲ ಯೋಚಿಸಿ, ಉಳಿದ ಭಾಗವನ್ನು ಸುಮಿತ್ರ್ರೆಗೆ ಮತ್ತೆ ಕೊಟ್ಟನು.


ಹೀಗಾಗಿ ಕೌಸಲ್ಯೆಗೆ ಹುಟ್ಟಿದ ರಾಮ, ಪಾಯಸದ ಅರ್ಧಾಂಶದಿಂದ ಹುಟ್ಟಿದನು. ಸುಮಿತ್ರೆಗೆ ಅವಳಿ ಮಕ್ಕಳಾಗಿ, ಮೊದಲು ಸ್ವೀಕರಿಸಿದ ನಾಲ್ಕನೇ ಒಂದು ಭಾಗಾಂಶದಿಂದ ಲಕ್ಷ್ಮಣನೂ, ಎಂಟನೇ ಒಂದಂಶದಿಂದ ಶತ್ರುಘ್ನನೂ ಹುಟ್ಟಿದರು. ಕೈಕೇಯಿಗೆ ಇತ್ತ ಎಂಟನೇ ಒಂದಂಶದಿಂದ ಭರತ ಹುಟ್ಟಿದ.


ಪುತ್ರಕಾಮೇಷ್ಠ್ಠಿ ಯಜ್ಞವಾಗಿ ಒಂದು ವರ್ಷಕಳೆದಿದೆ. ಚೈತ್ರಮಾಸದ ಶುಕ್ಲ ಪಕ್ಷದ ನವಮಿ ಶುಭ ಪುನರ್ವಸು ನಕ್ಷತ್ರದಂದು, ದಶರಥನ ಪಟ್ಟದರಾಣಿ ಕೌಸಲ್ಯೆ ಸರ್ವಲಕ್ಷಣ ಸಂಪನ್ನನಾದ ರಾಮನನ್ನು ಹಡೆದಳು. ‘ಕವಿಯ ಮನದಿಂ ಮಹಾಕಾವ್ಯಮುದ್ಭವಿಪಂತೆ’ ಎನ್ನುತ್ತಾರೆ ಕವಿ ಋಷಿ ಕುವೆಂಪು. ಸುಮಿತ್ರೆಗೆ ಅವಳಿಮಕ್ಕಳು ಲಕ್ಷ್ಮಣ-ಶತ್ರುಘ್ನರು ಹುಟ್ಟಿದರು. ಕೈಕೇಯಿಗೆ ಭರತ ಹುಟ್ಟಿದ. ಬಹಳ ವರ್ಷಗಳ ನಂತರ ಹುಟ್ಟಿದ ಮಕ್ಕಳೆಂದರೆ ಸಂತಸಕ್ಕೆ ಪಾರವೇ ಇಲ್ಲದಂತಾಯಿತು. ಪ್ರಕೃತಿಯೂ ವಸಂತ ಋತುವಿನಲ್ಲಿ ನವೋಲ್ಲಾಸದಿಂದ ಕುಣಿದಿದ್ದಳು. ಮಂಗಳ ಮುಹೂರ್ತದಲ್ಲಿ ನಾಲ್ವರಿಗೂ ನಾಮಕರಣ ಸಂಸ್ಕಾರವಾಯಿತು. ಎಲ್ಲರನ್ನೂ ನೋಡಿದೊಡನೆಯೇ ಆಕರ್ಷಿಸಿ ಮುದ ನೀಡುತ್ತಿದ್ದ ಹಿರಿಯವನಿಗೆ ‘ರಾಮ’ನೆಂದು ಹೆಸರಿಟ್ಟರು. ಲಕ್ಷಣ ಮೂರ್ತಿಯಾದ ಸುಮಿತ್ರೆಯ ಮೊದಲ ಮಗನನ್ನು ‘ಲಕ್ಷ್ಮಣ’ನೆಂದು ಕರೆದರು. ಎಲ್ಲವನ್ನು ಹೊರಲು ತಾನು ಸಿದ್ಧನೆಂದು ಪುಟ್ಟ ಬಾಲಕ ಭರತನ ಕಂಗಳು ಹೇಳುತ್ತಿದ್ದವು. ಅವನು ‘ಭರತ’ನಾದ. ಶತ್ರುಗಳನ್ನು ಸದೆಬಡಿಯುವ ತೇಜಸ್ಸು ನಾಲ್ಕನೆಯ ಮಗುವಿನಲ್ಲಿತ್ತು. ಅವನು ‘ಶತ್ರುಘ್ನ’ನೆನೆಸಿಕೊಂಡ.


ಶ್ರೀರಾಮನ ಬಾಲ್ಯದ ಬಗ್ಗೆ ವಾಲ್ಮೀಕಿಗಳು ಹೆಚ್ಚಾಗಿ ಹೇಳಿಲ್ಲವಾದರೂ ಒಂದೆರಡು ಪ್ರಸಂಗಗಳು ಜನಮನದಲ್ಲಿ ಹಾಸು ಹೊಕ್ಕಿವೆ. ಹುಣ್ಣಿಮೆಯ ರಾತ್ರಿ, ಪೂರ್ಣಚಂದ್ರ ಬಾನÀಂಗಳದಲ್ಲಿ ಕಂಗೊಳಿಸುತ್ತಿದ್ದಾನೆ. ಅರಮನೆಯ ಉದ್ಯಾನದಲ್ಲಿ ಮೂವರು ರಾಣಿಯರೂ ತಂತಮ್ಮ ಕುವರರೊಂದಿಗೆ ಕಲೆತು ಆಟವಾಡಿಸುತ್ತಿದ್ದಾರೆ. ಪೂರ್ಣಚಂದ್ರನನ್ನು ನೋಡಿ ರಾಮ, ‘ಅದು ಬೇಕೆನಗೆ’ ಅಂದ. ಅಳಲು ಆರಂಭಿಸಿದ. ಏನೇನು ಕೊಟ್ಟರೂ ತಳ್ಳಿ ಹಾಕಿ ಚಂದ್ರನೇ ಬೇಕೆಂದು ಹಟಮಾಡಿದ. ಸಖಿಯರೂ ರಾಮನನ್ನು ಸಂತೈಸಲು ಪ್ರಯತ್ನಿಸಿದರು. ಸಾಧ್ಯವಾಗಲಿಲ್ಲ. ರಾಮನ ಚೀತ್ಕಾರ ಉಲ್ಬಣಿಸಿತು. ಈ ವಾರ್ತೆ ದಶರಥನನ್ನೂ ಮುಟ್ಟಿತು. ವಿಷಯವರಿತು ದಶರಥ ಬಂದ. ರಾಮನನ್ನು ಸಂತೈಸಲು ಪ್ರಯತ್ನಿಸಿದ. ತೋರಿಸಿದ ಆಮಿಷಗಳೆಲ್ಲವೂ ವಿಫಲವಾದವು.


ದಶರಥನಿಗೆ ದಿಕ್ಕುದೋಚದಾಯಿತು. ಕಣ್ಣಲ್ಲಿ ಹನಿಗೂಡಿತು. ‘ಶಿವಶಿವಾ! ತಿರೆಗರಸನಾದರೇನೊಂದು ಕೂಸಿನ ಬಯಕೆ ಬಡತನವನೊಡರಿಸಿತಲಾ! ತನ್ನ ಸಿರಿ ಇನಿತು ಪುಸಿಯಾಯ್ತೆ’? ಎಂದು ಪರಿತಪಿಸಿದ.


ಅರಮನೆಯಲ್ಲೆಲ್ಲ ಅಲ್ಲೋಲ ಕಲ್ಲೋವಾಯಿತು. ರಾಮನ ಕಿರುಚಾಟ ನಿಲ್ಲಲಿಲ್ಲ. ಕೈಕೇಯಿಯನ್ನು ಅನುಸರಿಸಿ ದಾಸಿಯಾಗಿ ಬಂದಿದ್ದ ಮಂಥರೆ, ಅದೇ ಸಮಯದಲ್ಲಿ ಅಲ್ಲಿ ಕಾಣಿಸಿಕೊಂಡಳು. ಅಪಶಕುನವೇ ಮೈವೆತ್ತಂತೆ ಇದ್ದ ಮಂಥರೆಯನ್ನು ಕಂಡು ಕೌಸಲ್ಯೆಗೂ ದಿಗಿಲಾಯಿತು. ತನ್ನಲ್ಲಿದ್ದ ಚಿಕ್ಕ ಕನ್ನಡಿಯನ್ನು ರಾಮನಿಗೆ ಇತ್ತಳು ಮಂಥರೆ. ಕನ್ನಡಿಯ ಬಿಂಬವನ್ನೇ ನಿಜವಾದ ಚಂದ್ರನೆಂದು ಬಗೆದು ರಾಮ ಸಮಾಧಾನ ಹೊಂದಿದ. ರಾಷ್ಟ್ರಕವಿ ಕುವೆಂಪು ಈ ಸನ್ನಿವೇಶವನ್ನು ಬಹಳ ಸ್ವಾರಸ್ಯವಾಗಿ ವಿವರಿಸಿದ್ದಾರೆ. ಈ ಸನ್ನಿವೇಶ ರಾಮನೂ ನಮ್ಮ ಸಾಮಾನ್ಯ ಮಕ್ಕಳಂತಿದ್ದ ಎಂದು ತೋರಿಸುತ್ತದೆ. ಅದೇನು ವಿಧಿ-ವಿಚಿತ್ರವೊ! ರಾಮ-ಲಕ್ಷ್ಮಣರು ಒಂದು, ಭರತ-ಶತ್ರುಘ್ನರು ಒಂದು. ಎರಡು ದೇಹ ಒಂದು ಜೀವದಂತಿದ್ದರು ರಾಮಲಕ್ಷ್ಮಣರು. ಯಾವ ಕೆಲಸವನ್ನೂ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಮಾಡುತ್ತಿರಲಿಲ್ಲ. ಈ ಸೋದರ ಬಾಂಧವ್ಯ ಭಾರತೀಯರಾದ ನಮಗೆ ಇಂದೂ ಆದರ್ಶ. ನಮ್ಮ ಮನೆಗಳಲ್ಲೂ ನಾವು ನಮ್ಮ ಮಕ್ಕಳನ್ನು ರಾಮ-ಲಕ್ಷ್ಮಣರಂತೆ ಬೆಳೆಸಬೇಕು ಎಂದುಕೊಳ್ಳುತ್ತೇವೆ.


ರಾಮ ಲಕ್ಷ್ಮಣರ ಸೋದರತ್ವದ ಆಕರ್ಷಣೆ ತೊಟ್ಟಿಲಿನಲ್ಲಿಯೇ ಆರಂಭವಾಯಿತೆನ್ನಬೇಕು. ಅದಕ್ಕೆಂದು ಸುಂದರವಾದ, ಕಲ್ಪಿತ ಘಟನೆಯೊಂದನ್ನು ಹೇಳಲಾಗುತ್ತದೆ.


ರಾಮಲಕ್ಷ್ಮಣರಿಗೆ ಆಗ ಒಂದು-ಒಂದೂವರೆ ವರ್ಷಗಳಿರಬಹುದು. ಇನ್ನೂ ತಾಯಂದಿರ ಆರೈಕೆಯಲ್ಲಿಯೇ ಬೆಳೆಯುತ್ತಿದ್ದರು. ರಾಮ ತನ್ನ ತಾಯಿಯೊಂದಿಗೆ ಕೌಸಲ್ಯೆಯ ಅಂತಃಪುರದಲ್ಲಿ ಇರುತ್ತಿದ್ದರೆ, ಲಕ್ಷ್ಮಣ ಸುಮಿತ್ರೆಯ ಅಂತಃಪುರದಲ್ಲಿ ಇರುತ್ತಿದ್ದ. ದಿನವೆಲ್ಲ ಒಟ್ಟಿಗೆ ಇರುತ್ತಿದ್ದರಾದರೂ ರಾತ್ರಿ ಮಾತ್ರ ತಮ್ಮ ಮನೆಗಳಲ್ಲಿ, ಅಮ್ಮಂದಿರೊಡನೆ ಮಲಗುತ್ತಿದ್ದರು.


ಒಂದು ನಡುರಾತ್ರಿ ರಾಮ ಅಳಲು ಆರಂಭಿಸಿದ. ಬಿಕ್ಕಿಬಿಕ್ಕಿ ಅಳಲು ಆರಂಭಿಸಿದ. ಎತ್ತಿಕೊಂಡು ಕೌಸಲ್ಯ ಸಮಾಧಾನ ಪಡಿಸಲು ಯತ್ನಿಸಿದಳು. ಆಗಲಿಲ್ಲ. ಜೋಗುಳ ಹಾಡಿದಳು. ಅದೂ ಪ್ರಯೋಜನವಾಗಲಿಲ್ಲ. ಸಖಿಯರು ಎತ್ತಿಕೊಂಡು ಅಡ್ಡಾಡಿದರು. ರಾಮ ಅಳು ನಿಲ್ಲಿಸಲಿಲ್ಲ. ಕ್ಷಣ ಕ್ಷಣಕ್ಕೂ ರೋದನ ಉಲ್ಬಣಿಸಿತು.


ಅದೇ ವೇಳೆಗೆ ಸುಮಿತ್ರೆಯ ಅಂತಃಪುರದಲ್ಲಿ ಲಕ್ಷ್ಮಣನೂ ಅಳಲು ಆರಂಭಿಸಿದ್ದ. ರಾಮನನ್ನು ಉಪಚರಿಸುತ್ತಿದ್ದಂತೆ ಲಕ್ಷ್ಮಣನನ್ನೂ ಸಂತೈಸಲು ಪ್ರಯತ್ನಗಳು ನಡೆದಿದ್ದವು. ಅಲ್ಲೂ ಕೂಡ ಏನೂ ಪ್ರಯೋಜನ ಕಾಣಲಿಲ್ಲ. ಮಕ್ಕಾಳೀರ್ವರ ರೋದನ ಗಗನಕ್ಕೆ ತಲುಪಿ, ದಶರಥನೂ ಎಚ್ಚರಗೊಂಡ. ರಾಮನನ್ನು ಎತ್ತಿ ಹಿಡಿದು ಸಮಾಧಾನ ಪಡಿಸಿದ. ಸಾಧ್ಯವಾಗಲಿಲ್ಲ. ದೃಷ್ಟಿ ತಾಗಿದೆ ಎಂದು ಭಾವಿಸಿ ದೃಷ್ಟಿ ನಿವಾರಣೆಯಾಯಿತು. ಆದರೂ ರಾಮನ ಅಳು ನಿಲ್ಲಲಿಲ್ಲ. ವಸಿಷ್ಠರಿಗೆ ಕರೆ ಹೋಯಿತು. ವಸಿಷ್ಠರು ಬಂದರು. ರಾಜನ ಅಣತಿಯಂತೆ ಮಂತ್ರಿಸಿದರು. ವಿಭೂತಿ ಸವರಿದರು. ಏನೂ ನಿವಾರಣೆಯಾಗಲಿಲ್ಲ.


ಅದೇ ಸಮಯಕ್ಕೆ ಲಕ್ಷ್ಮಣನನ್ನು ರಾಮನಿದ್ದ ಅಂತಃಪುರಕ್ಕೆ ಕರೆದೊಯ್ದರು. ರಾಮ-ಲಕ್ಷ್ಮಣರು ಹತ್ತಿರವಾಗುತ್ತಿದ್ದಂತೆ ಇಬ್ಬರು ಬಾಲಕರಲ್ಲೂ ಅಳು ಕಡಿಮೆಯಾಯಿತು. ವಸಿಷ್ಠರಿಗೆ ಈ ಬಾಲಕರ ರೊದನದ ಗುಟ್ಟು ತಿಳಿಯಿತು. ದೊಡ್ಡದೊಂದು ತೊಟ್ಟಿಲು ತರಿಸಿ ರಾಮ-ಲಕ್ಷ್ಮಣರನ್ನು ಅಕ್ಕ ಪಕ್ಕದಲ್ಲಿ ಮಲಗಿಸುವಂತೆ ಆದೇಶಿಸಿದರು. ಆಶ್ಚರ್ಯ ! ರಾಮ-ಲಕ್ಷ್ಮಣರು ಅಳು ನಿಲ್ಲಿಸಿದ್ದರು! ಆದರೂ ಕ್ಷಣಕ್ಕೊಮ್ಮೆ ಬಿಕ್ಕಳಿಸುತ್ತ ಅಳುತ್ತಿದ್ದರು. ವಸಿಷ್ಠರು ತೊಟ್ಟಿಲಿನಲ್ಲಿ ಬಗ್ಗಿ ನೋಡಿದರು. ರಾಮ-ಲಕ್ಷ್ಮಣರನ್ನು ಪರಸ್ಪರ ವಿಮುಖರನ್ನಾಗಿ ಮಲಗಿಸಿದುದೇ ಅವರ ಅಳುವಿಗೆ ಕಾರಣವಾಗಿತ್ತು ಮುಖಾ-ಮುಖಿಯಾಗಿ ರಾಮ ಲಕ್ಷ್ಮಣರನ್ನು ಮಲಗಿಸಲಾಯಿತು. ಮಕ್ಕಳ ಅಳುವಿನ ಸದ್ದೇ ಇಲ್ಲ! ಆದರೂ ಗಂಟೆಗೊಮ್ಮೆ ಬಿಕ್ಕಿದರು ಮಕ್ಕಳು, ನಿದ್ದೆಯಲ್ಲಿಯೇ. ವಸಿಷ್ಠರು ನಸುನಗುತ್ತ ಈಗ, ರಾಮನ ಕೈಯನ್ನು ಲಕ್ಷ್ಮಣನ ಮೇಲೂ, ಲಕ್ಷ್ಮಣನ ಕೈಯನ್ನು ರಾಮನ ಮೇಲೂ ಇರಿಸಿದರು. ಆಶ್ಚರ್ಯ! ಬಾಲಕರಿಬ್ಬರೂ ಅನ್ಯೋನ್ಯವಾಗಿ ತಬ್ಬಿಕೊಂಡಂತಿತ್ತು !ಬೆಳಗಾಗುವವರೆಗೂ ತುಟಿಕ್-ಪಿಟಿಕ್ ಎನ್ನದೆ ರಾಮ-ಲಕ್ಷ್ಮಣರು ನಿದ್ದೆ ಹೋಗಬೇಕೆ !


ಶ್ರೀರಾಮ-ಲಕ್ಷ್ಮಣರ ಸೋದರ ಪ್ರೇಮದಿಂದ, ಒಬ್ಬರನ್ನೊಬ್ಬರು ಅಯಸ್ಕಾಂತದಂತೆ ಆಕರ್ಷಿಸಿದ್ದರು. ಒಟ್ಟಿಗೆ ಕೂಡಿ ಬೆಳೆದರು. ಇತರರಿಗೂ ಮಾದರಿಯಾದರು. ಇವರ ಭ್ರಾತೃಪ್ರೇಮ ಯುಗದ ಸೀಮೆಗೂ ನಿಲುಕದ್ದು. ಮುಂದೆ ದ್ವಾಪರಯುಗದಲ್ಲಿ ಕೃಷ್ಣನ ಜನ್ಮವಾದಾಗÀ, ಹಿಂದಿನ ಜನ್ಮದ ಶ್ರೀರಾಮನ ವಾಸನೆ ಅವನಲ್ಲಿ ಅಚ್ಚ ಹಸುರಾಗಿತ್ತು. ಲಕ್ಷ್ಮಣನ ನೆನಪು ಕೂಡ. ಅವರ ಮೈತ್ರಿಯನ್ನು ಸ್ವಾರಸ್ಯವಾಗಿ ಒಂದು ಕತೆಯ ಮೂಲಕ ಹೇಳಲಾಗುತ್ತದೆ.


ದ್ವಾಪರ ಯುಗ. ಕೃಷ್ಣನ ಜನನವಾಗಿದೆ. ಯಶೋದೆ ಕೃಷ್ಣನನ್ನು ತೊಟ್ಟಿಲಲ್ಲಿರಿಸಿ ಆಡಿಸುತ್ತಿದ್ದಾಳೆ. ಮಕ್ಕಳು ಇಂಪಾದ ಜೋಗುಳದಿಂದ ಬೇಗನೆ ನಿದ್ದೆ ಹೋಗುತ್ತಾರೆ. ಹಾಗೆಂದೇ ಯಶೋದೆ ಕೂಡ ಸುಂದರವಾದ ಹಾಡೊಂದನ್ನು ಹಾಡುತ್ತಿದ್ದಳು. ಮಕ್ಕಳಿಗೆ ಕತೆ ಕೂಡ ಇಷ್ಟವಲ್ಲವೆ? ಕೃಷ್ಣನಿಗೆ ಆಗ ಮೂರು ವರ್ಷವಿರಬಹುದು. ಯಶೋದೆ ತೊಟ್ಟಿಲನ್ನು ಆಡಿಸುತ್ತ ಹಾಡುತ್ತಿದ್ದಳು. ರಾಮನ ಕಥೆಯನ್ನೇ ಹೇಳುತ್ತಿದ್ದಳು.  ಬಾಲಕೃಷ್ಣ ಒಂದೊಂದು ವಾಕ್ಯವನ್ನೇ ಆಲಿಸಿ ‘ಹೂಂ’ಗುಡುತ್ತಿದ್ದ, `ಮುಂದೇನಾಯಿತು, ಹೇಳು ಬೇಗ’, ಎನ್ನುವ ಹಾಗೆ. ಯಶೋದೆ ಹೇಳಿದಳು.

‘ತ್ರೇತಾಯುಗದಲ್ಲಿ ರಾಮ ಅಂತ ಇದ್ದ’ ‘ಹೂಂ’

‘ಆತನ ಮಡದಿ ಅಬಲೆಯಾದ ಸೀತೆ ಎಂದು’ ‘ಹೂಂ’

‘ಪಿತೃವಾಕ್ಯ ಪರಿಪಾಲನೆಗಾಗಿ ಕಾಡಿಗೆ ತೆರಳಿ ಪಂಚವಟಿಯಲ್ಲಿ ಇಬ್ಬರೂ ವಿಹರಿಸುತ್ತಿದ್ದರು’ ‘ಹೂಂ!’

‘ಸೀತೆಯನ್ನು ರಾವಣನೆಂಬ ರಾಕ್ಷಸ ಅಪಹರಿಸಿದ’

ಎಂದು ಯಶೋಧೆ ಕತೆಯ ಮುಂದಿನ ಸಾಲನ್ನು ಹೇಳಿದಳು. ಕೃಷ್ಣ ಎಂದಿನಂತೆ ‘ಹೂಂ’ ಅನ್ನಲಿಲ್ಲ. ಉತ್ತರವಾಗಿ ಬಾಲಕೃಷ್ಣ, ತನ್ನ ತೊಟ್ಟಿಲಿನಲ್ಲಿಯೇ ಎದ್ದು ನಿಂತು ಹೇಳಿದ, ‘ಲಕ್ಷ್ಮಣ, ನನ್ನ ಬಿಲ್ಲೆಲ್ಲಿ? ಬಾಣ-ಬತ್ತಳಿಕೆ ಎಲ್ಲಿ? ತೆಗೆದುಕೋ!’ ಎಂದು. ತಾನು ಕೃಷ್ಣವತಾರಿ ಈಗ ಎನ್ನುವುದನ್ನು ಮರೆತು, ಲಕ್ಷ್ಮಣನ ಭ್ರಾತ್ವತ್ವದ ನೆನಪಾಗಿ ಎದ್ದು ನಿಂತುಬಿಟ್ಟ!


ಸುಖ-ಸಂಭ್ರಮ, ಸಂಪತ್ತು, ಸಂತೃಪ್ತಿಯೇ ಮೈವೆತ್ತಿದ್ದ ಅಯೋದ್ಯೆಯ ದಶರಥನ ಅರಮನೆಯಲ್ಲಿ, ಬಾಲಕರು ನಾಲ್ವರೂ, ಹೂವರಳುವಂತೆ ಅರಳಿದರು. ಘಮ-ಘಮ ಕಂಪು-ತಂಪು ಪಸರಿಸಿದರು. ಅಕ್ಷರಾಭ್ಯಾಸವೇ ಮುಂತಾದ ಸಂಸ್ಕಾರ ಕಾರ್ಯಕ್ರಮಗಳೂ ಜರುಗಿದವು. ಶಾಸ್ತ್ರೋಕ್ತವಾಗಿ, ಗುರುಗಳಾದ ವಸಿಷ್ಠರು ಮಕ್ಕಳಿಗೆ ಸಕಲ ವಿದ್ಯೆಗಳನ್ನೂ ಕಲಿಸಿತರು. ವೇದವಿದ್ಯೆ, ಶಸ್ತ್ರವಿದ್ಯೆ ಎಲ್ಲದರಲ್ಲೂ ಮಕ್ಕಳು ಪಾರಂಗತರಾದರು. ಕಾಲಕ್ರಮದಲ್ಲಿ ಚೌಲಪ್ರಾಶನ, ಉಪನಯನ ಇತ್ಯಾದಿ ಕರ್ಮಗಳೂ ಸಂಭ್ರಮದಿಂದ, ಶಾಸ್ತ್ರೋಕ್ತವಾಗಿ ನಡೆದವು. ಶುಕ್ಲಪಕ್ಷದ ಚಂದ್ರನಂತೆ ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಮಕ್ಕಳು ಬರುತ್ತಿರುವುದನ್ನು ಕಂಡು ದಶರಥ ಆನಂದ ಸಾಗರದಲ್ಲಿ ಮಿಂದು ಮಿಂದು ಎದ್ದ.


- ಮತ್ತೂರು ಸುಬ್ಬಣ್ಣ

94482 05956


ಲೇಖಕರ ಸಂಕ್ಷಿಪ್ತ ಪರಿಚಯ 

ಶಿವಮೊಗ್ಗ ಬಳಿಯ, ಅವಳಿ ಸಾಂಸ್ಕøತಿಕ ಗ್ರಾಮಗಳೆಂದು ಗುರುತಿಸಿಕೊಂಡಿರುವ, ಹೊಸಹಳ್ಳಿ-ಮತ್ತೂರಿನವರಾದ ಬಾಲಸುಬ್ರಹ್ಮಣ್ಯ,`ಮತ್ತೂರು ಸುಬ್ಬಣ್ಣ ಎಂದು ಪರಿಚಿತರಾಗಿ ಮಕ್ಕಳಿಗಾಗಿ ಅನೇಕ ಕಥೆ, ಕವನ, ಕಾದಂಬರಿ, ನಾಟಕಗಳನ್ನು ಕಳೆದ ಸುಮಾರು  ಮೂರೂವರೆ ದಶಕಗಳಿಂದ ರಚಿಸುತ್ತಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಶ್ರೀ ವಿದ್ಯಾಕೇಂದ್ರ, ಪರಿಕ್ರಮ ಶಾಲೆ ಹಾಗೂ ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಪ್ರಾಂಶುಪಾಲರಾಗಿ, ಬೆಂಗಳೂರಿನ ವಾಗ್ದೇವಿ ವಿಲಾಸ ಶಾಲಾ ಸಮೂಹದಲ್ಲಿ `ಶೈಕ್ಷಣಿಕ ಸಲಹೆಗಾರ'ರಾಗಿ, ಡಾ. ಗುರುರಾಜ ಕರಜಗಿಯವರ `ಸೃಜನಶೀಲ ಅಧ್ಯಾಪನ ಸಂಸ್ಥ್ಥೆ’ಯಲ್ಲಿ  ಹಿರಿಯ ಸಹೋದ್ಯೋಗಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಸುಬ್ಬಣ್ಣ, ಬೆಂಗಳೂರಿನ ನಾಗರಬಾವಿಯಲ್ಲಿರುವ `ಹಿಲ್ ರಾಕ್ ನ್ಯಾಶನಲ್ ಪಬ್ಲಿಕ್ ಶಾಲೆ’ಯಲ್ಲಿ ನಿರ್ದೇಶಕರಾಗಿ  ಸೇವೆ ಸಲ್ಲಿಸುತ್ತಿದ್ದಾರೆ. ಎರಡು ಬಾರಿ ರಾಷ್ಟ್ರಮಟ್ಟದಲ್ಲಿ ಉತ್ತಮ ಶಿಕ್ಷಕರೆನಿಸಿಕೊಂಡು ಪ್ರಶಸ್ತಿ ಪಡೆದಿದ್ದಾರೆ. ಮೂರು ಸಂಪಾದಿತ ಕೃತಿಗಳೂ ಸೇರಿದಂತೆ ಇದುವರೆಗೆ ಮತ್ತೂರು ಸುಬ್ಬಣ್ಣನವರ 26 ಕೃತಿಗಳು ಬೆಳಕು ಕಂಡಿವೆ. `ಅಂಶು, ಅನು ಮತ್ತು ರೋಬೋ’ ಇಂಗ್ಲಿಷಿಗೆ ಭಾಷಾಂತರವಾಗಿದೆ. 2022ರ ಜಿ.ಬಿ. ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ ಹಾಗೂ, 2022 ರ ಬಾಲವಿಕಾಸ ಅಕ್ಯಾಡೆಮಿಯ ಗೌರವ ಪ್ರಶಸ್ತಿಗೂ ಶ್ರೀಯುತ ಸುಬ್ಬಣ್ಣ ಭಾಜನರಾಗಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top