-ಡಾ. ಲೀಲಾ ಬಸವರಾಜು
"ರಾಮಾಯಣ" ಪದವನ್ನು ವಿಭಾಗಮಾಡಿ ನೋಡಿದಾಗ, ಕಾಣಸಿಗುವ ಅರ್ಥ ರಾಮಾ+ಅಯನ ಮರ್ಯಾದಾ ಪುರುಷೋತ್ತಮ ಸ್ವಾಮಿ ಶ್ರೀರಾಮಚಂದ್ರನ ಜೀವನದ ಅಯನ, ಸಂಚಾರ, ಪಯಣ ಅದುವೆ ರಾಮಾಯಣ.
ಶ್ರೀಮದ್ರಾಮಾಯಣದಲ್ಲಿ ಹಲವಾರು ರಾಣಿಯರು, ಸಖಿಯರು, ದಾಸಿಯರು, ಋಷಿಪತ್ನಿಯರು, ಗಂಧರ್ವ ಕನ್ಯೆಯರು, ರಾಕ್ಷಸಿ ಮುಂತಾದ ಸ್ತ್ರೀಪಾತ್ರಗಳು ಬರುತ್ತದೆ. ಅವರ ಬಗ್ಗೆ ಸಾಕಷ್ಟು ವಿವರಗಳು, ಮಾಹಿತಿಗಳು ದೊರೆಯುತ್ತದೆ.
ಹಲವಾರು ರಾಮಾಯಣವನ್ನು ಓದಿದಾಗಲೂ, ಇದರ ಬಗ್ಗೆ ಪ್ರವಚನಗಳನ್ನು ಕೇಳಿದಾಗಲು, ನಾಟಕಗಳನ್ನು ನೋಡಿದಾಗ ಲೇಖಕಿಯಾದ ನನಗೆ ಕಂಡದ್ದು ಎಲ್ಲಾ ಕವಿಗಳು, ಪಂಡಿತರು, ವಿದ್ವಾಂಸರು, ನಾಟಕಕಾರರು ಕೈಕೇಯಿ, ಕೌಸಲ್ಯೆ, ಮಂಥರೆ, ಸೀತಾ, ಊರ್ಮಿಳಾ, ಮಂಡೋದರಿ, ಶೂರ್ಪನಖಿ ಅವರ ಬಗ್ಗೆ ರಸವತ್ತಾಗಿ ವರ್ಣಿಸಿದ್ದಾರೆಯೇ ಹೊರತು ಸುಮಿತ್ರೆಯ ಬಗ್ಗೆ ಯಾರೂ, ಎಲ್ಲಿಯೂ ಹೆಚ್ಚಿನ ವಿವರಗಳನ್ನು ದಾಖಲಿಸಿಲ್ಲ. ದಶರಥನ ಪ್ರಮುಖರಾದ ಪತ್ನಿಯರಾಗಿ ಭಾರತೀಯರ ಜನಮಾನಸದಲ್ಲಿ ಮೂಡಿಬರುವುದು ದಶರಥನ ಪಟ್ಟದರಸಿ ಕೌಸಲ್ಯೆ, ಮೋಹದ ಮಡದಿ ಕೈಕೇಯಿ, ಇನ್ನು ಪಾಂಡವರ ಮಧ್ಯಮನಂತೆ ಉಳಿದಿರುವುದು ಸುಮಿತ್ರಾ ದಶರಥನ ಎರಡನೆಯ ಪತ್ನಿ. ಕೌಸಲ್ಯೆಗೆ ಪಟ್ಟದರಸಿಯ ಸ್ಥಾನ, ಗೌರವ. ಕೈಕೇಯಿ,ಲಾವಣ್ಯ ವತಿ ಎಂಬ ಹಮ್ಮಿನ ಮೋಹದ ಮಡದಿ, ದಶರಥನ ಹೃದಯೇಶ್ವರಿ. ಸುಮಿತ್ರೆ ಅವಳೂ ಸಹ ರಾಜಕುಲ ಪ್ರಸೂತಳೇ, ಆದರೂ ಮಹರ್ಷಿ ವಾಲ್ಮೀಕಿ ಬೇರೆ ರಾಣಿಯರ ಬಗ್ಗೆ ಗುಣಗಾನ ಮಾಡಿರುವಂತೆ "ಸುಮಿತ್ರೆ"ಯ ಬಗ್ಗೆ ವಿಸ್ತಾರವಾದ ಮಾಹಿತಿ "ಕೊಟ್ಟಿಲ್ಲ" ಎಂಬುದು ಆಶ್ಚರ್ಯದ ವಿಷಯವಾದರು, ಮನಸ್ಸಿಗೆ ನೋವನ್ನು ಉಂಟುಮಾಡುವ ಸಂಗತಿ.
ಕೌಸಲ್ಯೆಗೆ ಸಿಕ್ಕ ಗೌರವವಾಗಲಿ, ಕೈಕೇಯಿಗೆ ದೊರೆತಂತಹ ಪ್ರೀತಿ, ಪ್ರೇಮವಾಗಲಿ ದಶರಥನಿಂದಾಗಲೀ, ಇತರರಿಂದಾಗಲೀ ಸುಮಿತ್ರೆಗೆ ಸಿಗಲಿಲ್ಲ. ಅವಳಿಗೆ ಏನಿದ್ದರೂ ದಶರಥನ ಪಟ್ಟದರಸಿ, ಮೋಹದರಾಣಿ ಈ ಇಬ್ಬರ ಸೇವೆ ಮಾಡುವ ಭಾಗ್ಯಮಾತ್ರ. ಆದರೆ ಸುಮಿತ್ರೆ ಎಂದು ಏನನ್ನು ಬಯಸಿದವಳಲ್ಲ, ಇವಳು ಗೀತಾಮೃತಸಾರದಂತೆ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಬಾಳಿದವಳು ಸುಮಿತ್ರ. ಜೀವನದಲ್ಲಿ ನಿರೀಕ್ಷೆಗಳು ಹೆಚ್ಚಾದಾಗ, ಅದು ನೆರವೇರದಿದ್ದಾಗ ವ್ಯಥೆ. ಬಂದದ್ದನ್ನು ಬಂದಂತೆ ಸ್ವೀಕರಿಸಿದಾಗ ನೆಮ್ಮದಿ ಸಂತಸ, ಸಂತೋಷ ಎಂದು ತೋರಿಸಿ ಕೊಟ್ಟವಳು ಸುಮಿತ್ರೆ. ಸುಮಿತ್ರ - "ಸು" ಎಂದರೆ ಒಳ್ಳೆಯ "ಮಿತ್ರೆ" ಎಂದರೆ ಸ್ನೇಹಿತೆ, ಹೆಸರೇ ಹೇಳುವಂತೆ ಸ್ನೇಹಮಯಿ, ಸೃಜನಶೀಲೆ, ತಾಳ್ಮೆಯ ಸಾಕಾರ ಮೂರ್ತಿ.
ಶ್ರೀಮದ್ ಭಗವತ್ ಗೀತೆಯಲ್ಲಿ ಗೀತಾಚಾರ್ಯನು ಹೇಳಿರುವಂತೆ 'ದುಖೇಷ್ಟನುದ್ವಿಗ್ನ ಮನಾಹ ಸುಖೇಷು ವಿಗತಸ್ಪೃಹ, ವೀತರಾಗ ಭಯಕ್ರೋಧಹ ಸ್ಥಿತಧೀರ್ಮುನಿರುಚ್ಯತೇ' ದುಖವಾದಾಗ ಮನಸ್ಸಿನಲ್ಲಿ ಉದ್ವೇಗಗಳಿಲ್ಲದೆ, ಸುಖ ಬಂದಾಗ ಆಸೆ ಯಿಲ್ಲದೆ, ಆಸಕ್ತಿ -ಭಯ-ಕ್ರೋಧಗಳಿಲ್ಲದೆ ಇರುವುದೇ ಸ್ಥಿತಪ್ರಜ್ಞನ ಲಕ್ಷಣ. ಅದನ್ನರಿತು ನಡೆದವಳು. ಕೌಸಲ್ಯೆ ರಾಜಸಗುಣದವಳಾದರೆ, ಕೈಕೇಯಿ ತಮೋ ಗುಣದವಳು, ಸುಮಿತ್ರಾ ಸಾತ್ವಿಕ ಸ್ವರೂಪಿಣಿ. ತನ್ನ ಪರಿಸ್ಥಿತಿಗಾಗಿ ಯಾರನ್ನೂ ದೂಷಿಸಲು ಇಲ್ಲ. ಸಾಮಾನ್ಯ ಸ್ರೀಯರಂತೆ ವಿಧಿಯನ್ನು ನಿಂದಸಲಿಲ್ಲ.
ದಶರಥನು ಸಂತಾನ ಪ್ರಾಪ್ತಿಗಾಗಿ ಮಾಡಿದ "ಪುತ್ರಕಾಮೇಷ್ಟಿ" ಯಾಗದ ಫಲದಿಂದ ಕೌಸಲ್ಯಗೆ ರಾಮ, ಕೈಕೇಯಿಗೆ ಭರತ, ಸುಮಿತ್ರೆಗೆ ಲಕ್ಷ್ಮಣ-ಶತ್ರುಘ್ನ ಪುತ್ರರತ್ನರಾಗಿ ಜನಿಸಿದರು. ಮಕ್ಕಳು ಬೆಳೆದಂತೆ ಅವರ ನಿಲುವಿನಲ್ಲಿ ಬದಲಾವಣೆ, ಇಲ್ಲಿಯೂ ಸುಮಿತ್ರೆ ಮಕ್ಕಳ ಪ್ರೀತಿಯಿಂದ ವಂಚಿತೆ. ಭರತ ಶತ್ರುಘ್ನರು ಎರಡು ದೇಹ, ಒಂದು ಪ್ರಾಣವಾದರೆ, ಲಕ್ಷ್ಮಣ, ರಾಮನ ನೆರಳು. ನೆರಳಿನಂತೆಯೇ ಕಡೆಯವರೆವಿಗೂ ಹಿಂಬಾಲಿಸಿದ. ಅವರಲ್ಲಿ ಭ್ರಾತೃತ್ವ, ಭ್ರಾತ್ರೃಪ್ರೇಮ ಚಿಗುರೊಡೆದು ಸಾಧಾರಣ ಮರವಾಗದೆ, ಹೆಮ್ಮರವಾಗಿ ಅವರ ಅಂತರಂಗದಲ್ಲಿ ಬೇರೂರಿತ್ತು.ಇದನರಿತ ಸುಮಿತ್ರಾ ಎಂದೂ ಬೇಸರಿಸಿದೆ,ಒತ್ತಾಸರೆಯಾಗಿ ನಿಂತು ಪೋಷಿಸಿದಳು. ಅದರಲ್ಲಿಯೇ ತೃಪ್ತಿ, ಸಂತೋಷಪಟ್ಟ ಸ್ಥಿತಪ್ರಜ್ಞೆ ನಮ್ಮ ಸುಮಿತ್ರೆ.
ರಾಮ, ಕೌಸಲ್ಯೆನಂದನಾದರೂ ಕೌಸಲ್ಯೆಗೇ ಅವನ ಮನಸ್ಸನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ.ಒಬ್ಬ ಶ್ರೇಷ್ಟವ್ಯಕ್ತಿಗೆ ತಾಯಿ ಆಗುವುದು ಬೇರೆ, ಅವನನ್ನು ತಿಳಿದುಕೊಳ್ಳುವುದು ಬೇರೆ. ಅವನ ಜನನಕ್ಕೆ ಕಾರಣರಾದ ಕೌಸಲ್ಯೆ ದಶರಥನಿಗೆ ಅವನನ್ನು ಅರ್ಥ ಮಾಡಿಕೊಳ್ಳಲು ಆಗಲಿಲ್ಲ.ಅದು ಅಷ್ಟು ಸುಲಭ ಅಲ್ಲ.
ಶ್ರೀರಾಮನನ್ನು ಅವನ ವ್ಯಕ್ತಿತವನ್ನು ಸರಿಯಾಗಿ ತಿಳಿದುಕೊಳ್ಳಬೇಕಾದರೆ, ಅವನಿಗೆ ಸರಿಸಮಾನ ಆಗಿರುವುದರಿಂದ ಮಾತ್ರ ಸಾಧ್ಯ.ತಾಯಿ ಸುಮಿತ್ರೆಯಲ್ಲಿ ಅಂತಹ ಅಸಾಧಾರಣ, ಅದ್ಭುತ ಶಕ್ತಿಯಿತ್ತು.ಆದ್ದರಿಂದಲೇ ಸುಮಿತ್ರೆ ಮಾತ್ರ ಅವನನ್ನು ಸರಿಯಾಗಿ ಅರಿತಿದ್ದಳು. ಇದು ಅವಳ ಮೇರು ವ್ಯಕ್ತಿತ್ವಕ್ಕೆ ಕನ್ನಡಿಯಾಗಿದೆ. ಆ ಎತ್ತರಕ್ಕೆ ಕೌಸಲ್ಯೆಯ ಮನಸ್ಸು ಪಕ್ವವಾಗಿ ಇರಲಿಲ್ಲ. ಆದರೆ ದಶರಥನ ಪತ್ನಿಯರಲೆಲ್ಲ ಸುಮಿತ್ರೆ ಒಬ್ಬಳೇ ಚೆನ್ನಾಗಿ ಅರ್ಥಮಾಡಿಕೊಂಡು. ಆ ಕಾರಣಕ್ಕಾಗಿ ರಾಮ-ಲಕ್ಷ್ಮಣರ ಸೋದರ ವಾತ್ಸಲ್ಯವನ್ನು ಪೋಷಿಸಿದಳು.
ರಘುವಂಶ ಸುಧಾಂಬುಧಿ ಚಂದ್ರ ರಾಮಚಂದ್ರ ಸೀತಾ ಸಮೇತನಾಗಿ ಪಿತೃವಾಕ್ಯ ಪರಿಪಾಲನೆಗಾಗಿ, ತನ್ನ ತಂದೆ ಕೈಕೇಯಿಗೆ ಕೊಟ್ಟ ವಚನವನ್ನು ನೆರವೇರಿಸಲು ಹದಿನಾಲ್ಕು ವರ್ಷ ವನವಾಸಕ್ಕೆ ಹೊರಟ ಆ ಘಟನೆ ಅದೆಂತಹ ಹೃದಯಸ್ಪರ್ಶಿ. ಲಕ್ಷ್ಮಣಾ...ರಾಮನ ಪಾದಗಳಿಗೆ ನಮಸ್ಕರಿಸಿ, ಮಗುವಿನಂತೆ ಅಳುತ್ತಾ "ಅಣ್ಣಾ....ನಾನೂ ನಿನ್ನ ಜೊತೆ ಬರುತ್ತೇನೆ. ನನ್ನನ್ನು ಕರೆದುಕೊಂಡು ಹೋಗು, ಬಿಟ್ಟು ಹೋಗಬೇಡ. ನೀನಿಲ್ಲದೆ, ನಾನಿಲ್ಲ. ಹದಿನಾಲ್ಕು ವರ್ಷಗಳ ಕಾಲ ನಾನು ನಿಮ್ಮ ಸೇವೆ ಮಾಡುತ್ತಾ ನನ್ನ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುತ್ತೇನೆ, ನಿಮ್ಮನ್ನು ಬಿಟ್ಟಿರಲಾರೆ.." ಎಂದು ಅಂಗಲಾಚಿದ. ತಾಯಿಗೆ ನಮಸ್ಕರಿಸಿ ಹೋಗಿ ಬರುತ್ತೇನೆ ಎಂದನೇ ವಿನಹ ಅವಳ ಅನುಮತಿ ಬೇಡಲಿಲ್ಲ. ಅದನ್ನರಿತ ಆ ತಾಯಿ ನಡೆದುಕೊಂಡು ರೀತಿ, ವ್ಯಕ್ತಿತ್ವ ಮೇರುಸದೃಶ, ಅವಳೇ ಉತ್ತುಂಗ ಗೌರಿಶಂಕರ.
"ಕೈಕೇಯಿ, ರಾಮನಿಗೆ ಮಾತ್ರ ವನವಾಸ ಹೇಳಿರುವುದು, ನೀನು ಯಾಕೆ ಹೋಗಬೇಕು? ಹೋಗಬೇಡ" ಎಂದು ತಡೆಯಲಿಲ್ಲ. ಬದಲಿಗೆ, "ಹೋಗಿ ಬಾ ಮಗನೆ" ಆ "ಅಡವಿಯೇ ನಿನಗೆ ಅಯೋಧ್ಯೆ ಆಗಲಿ, ನಿನ್ನ ಅತ್ತಿಗೆಯನ್ನೇ ನಾನೆಂದು ತಿಳಿ, ನಿನ್ನ ಅಣ್ಣ ಶ್ರೀರಾಮಚಂದ್ರ ನನ್ನು ನಿನ್ನ ತಂದೆ ದಶರಥ ಮಹಾರಾಜ ಎಂದು ಭಾವಿಸುತ್ತ ಅವರು ಸೇವೆ ಮಾಡಿ ಕೃತಾರ್ಥನಾಗು. ನೀನು ನಂಬಿರುವ ದೇವರ ಶ್ರೀರಕ್ಷೆ ಸದಾ ನನಗಿರಲಿ" ಎಂದು ಆಶೀರ್ವದಿಸಿ ಕಳಿಸಿದ ಆ ಮಾತೆಗೆ ಯಾರು ಸರಿಸಾಟಿಯಾಗಿ ನಿಲ್ಲಲ್ಲು ಸಾಧ್ಯ...? ಮಕ್ಕಳ ಸುಖವೇ ತನ್ನ ಸುಖ ಸಂತೋಷ ಎಂದು ಬಾಳಿದ ತಾಯಿ ಅವಳು.
ತಾಯಿಗೆ ತಕ್ಕ ಮಗ ಲಕ್ಷ್ಮಣ. ಯಾವ ಸ್ವಾರ್ಥವಿಲ್ಲದೆ ರಾಮನ ಸುಖ-ದು:ಖ, ನೋವು, ಸಂಕಟಗಳಲ್ಲಿ ಜೊತೆ ಜೊತೆಯಾಗಿ ನಿಂತವನು ಲಕ್ಷ್ಮಣ.ಅವನ ಈ ಸೋದರ ವಾತ್ಸಲ್ಯ ಇಂದಿಗೂ ವಿಶ್ವಮಾನ್ಯ ಆಗಿದೆ. ಸ್ನೇಹ ಸಂಬಂಧಗಳ ಕೊಂಡಿ ಕಳಚುತ್ತಿರುವ ಇಂದಿನ ಪರಿಸ್ಥತಿಗೆ ಪಾಠವಾಗಬೇಕು ಎಂದರೆ ತಪ್ಪಾಗಲಾರದು. ತನ್ನ ಮಗ ವನವಾಸಕ್ಕೆ ಹೊರಟು ನಿಂತಾಗ ತುಂಬು ಹೃದಯದಿಂದ ಹರಿಸಿ ಕಳಿಸಿದ ಮಹಾಮಾತೆ. ತಾನೇ ನೋವಿನಲ್ಲಿ ಇದ್ದರೂ ಅದನ್ನು ಬದಿಗೊತ್ತಿ ಕೌಸಲ್ಯಗೆ ಸಮಾಧಾನ ಮಾಡಿದ ಅಪರೂಪದ ಚೇತನ.ದಶರಥ ತನ್ನ ಪ್ರೀತಿಯ ಮಗ ವನವಾಸಕ್ಕೆ ಹೊರಟಾಗ ಅವನನ್ನು ಸಂತೈಸಲು ಬಂದ ಕೌಸಲ್ಯೆ, ಸುಮಿತ್ರೆಯನ್ನು ಕಂಡು "ಹೇ ಮಹಾತಪಸ್ವಿನಿಯೇ" ಎಂದು ಉದ್ಗರಿಸಿ ಕಾಪಾಡು ಎನ್ನುವಂತೆ ಕೈಚಾಚಿದ. ಅದೇ ಸಮಯದಲ್ಲಿ ಅಲ್ಲಿಯೇ ಇದ್ದ ಕೈಕೇಯಿಯನ್ನು ಕಂಡು "ಕುಲಪಾಂಸಿನಿ" ಎಂದು ನೋವಿನಿಂದ ಚೀರಾಡಿದ. ಸುಮಿತ್ರೆಯ ಧೀಮಂತ ವ್ಯಕ್ತಿತ್ವಕ್ಕೆ, ಸಾಗರಸದೃಶವಾದ ಗುಣಕ್ಕೆ ಯಾರು ಸರಿಸಮನಾಗಿ ನಿಲ್ಲಲ್ಲು ಸಾಧ್ಯ. ನಿಜಕ್ಕೂ ಸುಮಿತ್ರೆ "ಮಹಾತಪಸ್ವಿನಿಯೇ" ಇದರಲ್ಲಿ ಯಾವ ಸಂದೇಹವೂ ಇಲ್ಲ.
ಪಂಡಿತ್ತೋತ್ತಮರು ರಾಮಾಯಣದಲ್ಲಿ ಬರುವಂತಹ ಎಲ್ಲ ಸ್ತ್ರೀಪಾತ್ರದ ಬಗ್ಗೆ ಸಾಕಷ್ಟು ಗುಣಗಾನ ಮಾಡಿ, ಸುಮಿತ್ರೆಯನ್ನು, ಅವಳ ವ್ಯಕ್ತಿತ್ವವನ್ನು ಗೌಣ ಮಾಡಿದ್ದರೂ ಅವಳು ಮೇರುಸದೃಶ. ರಾಮಾಯಣದಲ್ಲಿ ಬರುವ ಎಲ್ಲಾ ಸ್ತ್ರೀಪಾತ್ರಗಳಿಗಿಂತಲೂ ಸುಮಿತ್ರೆಯ ಪಾತ್ರ ಅತ್ಯಂತ ಎತ್ತರಕ್ಕೆ ನಿಲ್ಲುವದ್ದಾಗಿದೆ. ಬಹುಷಃ ಇವಳಿಗೆ ಸರಿಸಮನಾಗಿ ನಿಲ್ಲಬಲ್ಲವಳು ಸೀತೆ ಒಬ್ಬಳೇ.ಇವಳು ರಾಮಾಯಣದಲ್ಲಿ ಬರುವ ಎಲ್ಲ ಸ್ತ್ರೀಪಾತ್ರಗಳಿಗಿಂತಲು ಎತ್ತರಕ್ಕೆ, ದೇವಿಯಂತೆ ರಾರಾಜಿಸುವ ವ್ಯಕ್ತಿತ್ವವನ್ನು ಹೊಂದಿದ್ದಾಳೆ.ಇಂತಹ ಸುಮಿತ್ರೆಗೆ ನಮ್ಮ ಭಕ್ತಿಯ ನಮನಗಳು.
-ಡಾ.ಲೀಲಾ ಬಸವರಾಜು, 98454 52104
ಲೇಖಕರ ಸಂಕ್ಷಿಪ್ತ ಪರಿಚಯ:75 ವಯೋಮಾನದ ಡಾ ಲೀಲಾ ಬಸವರಾಜು, ಚಲನಚಿತ್ರ ಕಿರುತೆರೆ ಯಲ್ಲೂ ಅಭಿನಯಿಸುತ್ತಿರುವ ಹಿರಿಯ ರಂಗಭೂಮಿ ಕಲಾವಿದೆ. ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ಮೂಲಕ ಇಡೀ ಕುಟುಂಬ ಕಲಾಪ್ರಪಂಚದಲ್ಲಿ ಅಮೋಘ ಸೇವೆ ಸಲ್ಲಿಸುತ್ತಿದೆ, ಇತ್ತೀಚೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳಾ ಸಬಲೀಕರಣಕ್ಕೆ ಹೋರಾಡಿದ ಕರಿಮೆಣಸಿನ ರಾಣಿ ಚಿನ್ನಭೈರಾದೇವಿಯ ಕಥಾನಕವನ್ನು ರಂಗರೂಪಾಂತರದಲ್ಲಿ ಏಕವ್ಯಕ್ತಿ ಪ್ರದರ್ಶನ ನೀಡಿದ್ದು ಇವರ ಹೆಗ್ಗಳಿಕೆ, ಅಯಂ ಮೇ ಹಸ್ತೋ ಭಗವಾನ್, ಶ್ರೀ ಚಕ್ರೇಶ್ವರಿ ಲಲಿತಾಂಬಿಕೆ, ಕೃಷ್ಣನ ಅಮೂಲ್ಯ ರತುನಗಳು, 20 ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. "ರಂಗ ನೇಪಥ್ಯ ಕಲಾವಿದ ಪದ್ದಣ್ಣ ಪ್ರಶಸ್ತಿ" ಕಲಾಗಂಗೋತ್ರಿ ರಂಗ ತಂಡ. ಪರಿಸರದ ಪೋಷಣೆಗಾಗಿ ಗಿಡ ನೆಡುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
ಟಿ:8, ಮೂರನೇ ಮಹಡಿ, ಬಿ-ಬ್ಲಾಕ್ ಗುರುಪ್ರಿಯ ಆಕಾಶಗಂಗಾ ಅಪಾರ್ಟಮಂಟ್ 1ನೇ ಮುಖ್ಯ ರಸ್ತೆ, 6ನೇ ಅಡ್ಡ ರಸ್ತೆ ಇಸ್ರೋ ಬಡಾವಣೆ , ಬೆಂ -78
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ