-ಓಂಪ್ರಕಾಶ ಭಟ್ಟ
ಸನಾತನ ಭಾರತೀಯ ಪರಂಪರೆಯಲ್ಲಿ ಬಂದಿರುವ ಎಲ್ಲ ಋಷಿಗಳು, ಸಾಧು ಸಂತರುಗಳು ಮತ್ತು ಯತಿಗಳು ಶ್ರೀರಾಮನನ್ನು ಮನಸಾರೆ ಸ್ತುತಿಸಿದ್ದಾರೆ. ಆಚಾರ್ಯತ್ರಯರೂ ಶ್ರೀರಾಮನ ಕುರಿತಾಗಿ ಸ್ತುತಿ ಸ್ತೋತ್ರಗಳನ್ನು ಮಾಡಿ ಮುಂದಿನ ಜನಾಂಗವನ್ನು ಧನ್ಯಗೊಳಿಸಿದ್ದಾರೆ. ಅಂತೆಯೇ ಶ್ರೀಮಧ್ವಾಚಾರ್ಯರೂ ಶ್ರೀರಾಮನ ಕುರಿತಾಗಿ ಕೃತಿ - ಸ್ತೋತ್ರಗಳನ್ನು ಮಾಡಿದ್ದಾರೆ. ಪರಂಪರಾ ನಂಬಿಕೆಯಂತೆ ಹನುಮಂತನ ಅವತಾರರಾದ ಶ್ರೀಮಧ್ವರು ಶ್ರೀರಾಮನನ್ನು ತನ್ನ ಪೂರ್ವ ಅವತಾರದಲ್ಲಿ ಕಣ್ಣಾರೆ ಕಂಡವರು. ಹಾಗಾಗಿ ಶ್ರೀರಾಮನ ಕುರಿತಾದ ಅವರ ವಿವರಣೆ - ವಿಶ್ಲೇಷಣೆ ತುಂಬಾ ರೋಚಕವಾದದ್ದು ಮತ್ತು ಮಹತ್ವವಾದದ್ದು. ಅದನ್ನು ಸ್ವಲ್ಪ ಈಗ ನೋಡೋಣ.
ರಾಮನ ಕುರಿತಾದ ಕಥೆಯಾದ್ದರಿಂದ ಇದು ರಾಮಾಯಣ, ಕಂಡವರು ಶ್ರೀಮಧ್ವಾಚಾರ್ಯರು, ಆದ್ದರಿಂದ ಇದು ಶ್ರೀಮಧ್ವರು ಕಂಡಂತೆ ರಾಮಾಯಣ.
1. ಮೂಲ ಆಕರ ಗ್ರಂಥಗಳು.
ವಾಲ್ಮೀಕಿ ರಾಮಾಯಣವು ಅಧಿಕೃತವಾಗಿ ಶ್ರೀರಾಮನ ಸಮಗ್ರ ಗುಣಗಾನ ಮಾಡುವುದಾದರೂ ಅಲ್ಲಿಯೂ ಇರದ ಹಲವಾರು ಕಥೆ ವಿವರಣೆಗಳು ನಮಗೆ ಭಾಗವತ - ಪದ್ಮ -ಸ್ಕಂದ ಪುರಾಣದಿಗಳಲ್ಲಿ, ಮಹಾಭಾರತ - ಪಂಚರಾತ್ರಾದಿ ಗ್ರಂಥಗಳಲ್ಲಿ, ಮೂಲ ರಾಮಾಯಣ ಎಂಬ ಪ್ರತ್ಯೇಕ ಗ್ರಂಥದಲ್ಲಿ (ಈಗ ಇದು ಲಭ್ಯವಿಲ್ಲ ), ಮತ್ತು ವೇದಗಳಲ್ಲಿ ಕಾಣಸಿಗುತ್ತದೆ. ಇದನ್ನೆಲ್ಲಾ ಜಗತ್ತಿಗೆ ಮೊದಲಬಾರಿಗೆ ತಿಳಿಸಿದವರು ಶ್ರೀಮಧ್ವಾಚಾರ್ಯರು. ಅವರು ತಮ್ಮ ಕೃತಿಯಾದ "ಮಹಾಭಾರತ ತಾತ್ಪರ್ಯನಿರ್ಣಯ"ದಲ್ಲಿ ಮತ್ತು "ಭಾಗವತ ತಾತ್ಪರ್ಯ ನಿರ್ಣಯ"ದಲ್ಲಿ ಶ್ರೀರಾಮನ ಕುರಿತಾದ ವಿಶ್ಲೇಷಣೆಯನ್ನು ಚೆನ್ನಾಗಿ ಮಾಡಿದ್ದಾರೆ.
2. ಶ್ರೀರಾಮ ಚರಿತ್ರೆಯಲ್ಲಿ ಸ್ಪಷ್ಟತೆ
ಶ್ರೀರಾಮಚಂದ್ರನ ಕೆಲವು ವರ್ತನೆಗಳು, ನಡತೆಗಳು, ಘಟಿಸಿದ ಘಟನೆಗಳು ರಾಮನಲ್ಲಿ ದೌರ್ಬಲ್ಯಗಳು ಇವೆಯೇನೋ, ದೋಷಗಳು ನಮ್ಮಂತಯೇ ಇವೆಯೇನೋ ಎಂದು ಸಂಶಯ ಬರುವಂತೆ ಇದೆ. ಆದರೆ ಶ್ರೀಮಧ್ವರು ಇವನ್ನೆಲ್ಲ ಗುರುತಿಸಿ ಅದಕ್ಕೆಲ್ಲ ಸಮಾಧಾನದ ಉತ್ತರ ನೀಡಿ ಅವೆಲ್ಲವೂ ಸಜ್ಜನರಿಗೆ ಶಿಕ್ಷಣ, ಲೋಕ ಶಿಕ್ಷಣ ನೀಡುವುದಕ್ಕಾಗಿ ಎಂದಿದ್ದಾರೆ. ಜೊತೆಗೆ ಸೀತಾ ಪರಿತ್ಯಾಗ, ವಾಲಿ ಸಂಹಾರ ಮುಂತಾದ ಘಟನೆಗಳ ನೈಜ ಆಂತರ್ಯವನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಇವೆಲ್ಲ ಶ್ರೀರಾಮನ ಗುಣವಂತಿಕೆಯನ್ನು ಹೇಗೆ ತಿಳಿಸುತ್ತದೆ ಎಂದು ಕೂಡ ವಿವರಿಸಿದ್ದಾರೆ.
3. ಶ್ರೀಮಧ್ವರು ನೀಡಿದ ಪಾತ್ರಗಳ ವಿವರಣೆ
ಶ್ರೀಮನ್ನಾರಾಯಣ ಶ್ರೀರಾಮನಾಗಿ ಭುವಿಗಿಳಿದು ಬಂದಾಗ ದೇವತಾ ಗಡಣವೂ ಭುವಿಗಿಳಿದು ಬಂದಿತ್ತು. ಇದಕ್ಕೆ ಪೂರಕವಾಗಿ ದೇವತೆಗಳಿಗೆ ವರ ಶಾಪಗಳ ಹಿನ್ನೆಲೆ ಕೂಡ ಇತ್ತು. ಇದನ್ನು ಸಮಗ್ರವಾಗಿ ಪರಿಚಯಿಸಿದ ಕೀರ್ತಿ ಶ್ರೀಮಧ್ವರಿಗೆ ಸಲ್ಲಬೇಕು. ಇದರ ಪರಿಚಯವಿಲ್ಲದಿದ್ದರೆ ರಾಮಾಯಣದಲ್ಲಿ ಬರುವಂತಹ ಹಲವು ಪಾತ್ರಗಳನ್ನು, ಘಟನೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಕರ. ವಾಲಿ ಸುಗ್ರೀವರ ಹಿನ್ನೆಲೆ, ವಿಭೀಶಣ- ರಾವಣ- ಶೂರ್ಪನಖಿ ಹಿನ್ನೆಲೆ, ಕಪಿವೀರರ ಹಿನ್ನೆಲೆ ಇವನ್ನೆಲ್ಲ ತಿಳಿದುಕೊಳ್ಳುವುದರಿಂದ ರಾಮಾಯಣವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು.
4. ರಾಮ ಪರಶುರಾಮರ ಸಮಾಗಮ.
ವಾಲ್ಮೀಕಿ ರಾಮಾಯಣಾದಿಗಳಲ್ಲಿ ನಿರೂಪಿತವಾಗಿರುವಂತೆ ದಾಶರಥಿರಾಮ ಪರಶುರಾಮನ ಜೊತೆಗೆ ನಡೆಸಿರುವ ವ್ಯವಹಾರ ಅವರಿಬ್ಬರು ಪರಸ್ಪರ ದ್ವೇಷಿಗಳು, ಅತ್ಯಂತ ಭಿನ್ನರು ಎಂದು ತೋರಿಸಿಕೊಡುವುದು. ಆದರೆ ದಾಶರಥಿರಾಮ ಸಾಕ್ಷಾನ್ನಾರಾಯಣ ಎಂದು ತೋರಿಸಿಕೊಡುವುದು, ಅತುಲ ಎಂಬ ಅಸುರನನ್ನು ಸಂಹರಿಸುವುದು -ಮುಂತಾದ ಉದ್ದೇಶಗಳಿಗಾಗಿ ಪರಶುರಾಮ ದಾಶರಥಿರಾಮನ ವಿರುದ್ಧವಾಗಿ ಹಾಗೆ ನಡೆದುಕೊಂಡನೆಂಬುದನ್ನು ಸ್ಪಷ್ಟಪಡಿಸಿ, ದಾಶರಥಿರಾಮ ಹಾಗೂ ಪರಶುರಾಮ ಇವೆರಡೂ ಭಗವಂತನ ಸಾಕ್ಷಾದ್ರೂಪಗಳಾಗಿದ್ದು ಇವುಗಳಲ್ಲಿ "ನೇಹ ನಾನಾಸ್ತಿ ಕಿಂಚನ" -ಪರಸ್ಪರ ಭೇದ ಇಲ್ಲ- ಎಂದು ಸಮರ್ಥಿಸಿರುವರು.
5. ಸೀತಾಯಣ- ರಾಮಾಯಣ
ಪ್ರಭೆಯನ್ನು ಸೂರ್ಯಮಂಡಲದಿಂದ ಹೇಗೆ ಬೇರ್ಪಡಿಸಲಾಗುವುದಿಲ್ಲವೋ ಹಾಗೆಯೇ ಸಾಕ್ಷಾಲ್ಲಕ್ಷ್ಮೀಸ್ವರೂಪಳಾದ ಸೀತಾದೇವಿಯನ್ನು ಶ್ರೀರಾಮಚಂದ್ರನಿಂದ ಬೇರ್ಪಡಿಸಲಾಗುವುದಿಲ್ಲ. ಹೀಗೆ ನಿತ್ಯಾವಿಯೋಗಿಯಾದ ಸೀತಾದೇವಿಯ ಪ್ರತಿಕೃತಿಯನ್ನಷ್ಟೇ ರಾವಣ ಅಪಹರಿಸಿದ್ದು. ಸೀತಾದೇವಿ ಅದೃಶ್ಯಳಾಗಿ ಶ್ರೀರಾಮನ ಜೊತೆಗೇ ಇದ್ದಳು. ದೃಶ್ಯಳಾಗಿ ಕೈಲಾಸಕ್ಕೆ ರುದ್ರಪಾರ್ವತಿಯರ ಸಮೀಪಕ್ಕೆ ತೆರಳಿದ್ದಳು (ಮುಂದೆ ಅಗ್ನಿಪರೀಕ್ಷೆಯ ಸಂದರ್ಭದಲ್ಲಿ ಸೀತೆ ಅಲ್ಲಿಂದ ಪುನಃ ಇಲ್ಲಿಗೆ ಬಂದಳು. ಇದನ್ನು ಇತ್ತೀಚೆಗೆ ಮರುಪ್ರಸಾರಗೊಂಡ ರಮಾನಂದ ಸಾಗರ್ ಅವರ ರಾಮಾಯಣ ಧಾರವಾಹಿಯಲ್ಲಿ ತುಳಸಿ ರಾಮಾಯಣದ ಕೃತಿಯಾಧಾರಿತವಾಗಿ ಮೂಡಿಬಂದಿರುವುದನ್ನು ಗಮನಿಸಿರಬಹುದು. ಹಾಗಾಗಿ ಈ ಚಿಂತನೆ ಕೇವಲ ಮಧ್ವರ ಕಲ್ಪನೆಯಲ್ಲ). ಮುಂದೆ ಸುರಾಣಕ ಅಸುರರ ಅಪವಾದಕ್ಕೆ ಸ್ಪಂದಿಸಿ ಸೀತಾದೇವಿಯನ್ನು ತ್ಯಜಿಸಿದಂತೆ ನಟಿಸಿದಾಗಲೂ ಅದೃಶ್ಯಳಾಗಿ ಸೀತಾದೇವಿ ಶ್ರೀರಾಮನ ಜೊತೆಗೇ ಇದ್ದಳು.
ಸೀತಾದೇವಿ ಮುಂದೆ ಭೂಮಿಯಲ್ಲಿ ಪ್ರವೇಶಿಸಿದ್ದೂ ಲೋಕದೃಷ್ಟಿಯಲ್ಲಿ ಮಾತ್ರ. ಏಳ್ನೂರು ವರ್ಷ ಶ್ರೀರಾಮ ಸೀತೆಯಿಂದ ರಹಿತನಾಗಿ ಭೂಮಿಯ ಮೇಲೆ ಇದ್ದಂತೆ ಕಂಡರೂ ಅದೃಶ್ಯಳಾಗಿ ಸೀತಾದೇವಿ ಶ್ರೀರಾಮನ ಜೊತೆಗೇ ಇದ್ದೇ ಇದ್ದಳು. ಇದನ್ನು ತಿಳಿಸುವುದಕ್ಕಾಗಿಯೇ ಶ್ರೀರಾಮನ ಮಹಾಪ್ರಸ್ಥಾನದ ಅವಧಿಯಲ್ಲಿ ಶ್ರೀರಾಮನ ಜೊತೆಗೆ ಸೀತಾದೇವಿ ಎಲ್ಲರಿಗೆ ಕಾಣಿಸುವಂತೆಯೇ ಇದ್ದಳೆಂದು ಸ್ಪಷ್ಟಪಡಿಸಲಾಗಿದೆ. ಈ ರೀತಿಯಾಗಿ ಸೀತಾರಾಮರ ನಂಟನ್ನು ಗಾಢವಾಗಿ ಸಮರ್ಥಿಸಲಾಗಿದೆ.
6. ರಾಮಚಂದ್ರನ ರೂಪಗಳ ಮಾಹಿತಿ
ಮಹಾಪ್ರಸ್ಥಾನ ಕೈಗೊಂಡ ಶ್ರೀರಾಮಚಂದ್ರನ ರೂಪಗಳು ಎಲ್ಲೆಲ್ಲಿವೆ? ಎಂಬ ಮಾಹಿತಿಯನ್ನೂ ನೀಡಲಾಗಿದೆ.ಶ್ರೀರಾಮ ಒಂದು ರೂಪದಿಂದ ಸ್ವರ್ಗಲೋಕದಲ್ಲಿ ಸುರಪೂಜಿತನಾಗಿ ನೆಲೆಸಿರುವನು.ಎರಡನೇ ರೂಪದಿಂದ ಸತ್ಯಲೋಕದಲ್ಲಿ ಬ್ರಹ್ಮಪೂಜಿತನಾಗಿ ನೆಲೆಸಿರುವನು.ಮೂರನೆಯ ರೂಪದಿಂದ ಶ್ವೇತದ್ವೀಪದಲ್ಲಿ ನೆಲೆಸಿರುವನು. ಕ್ಷೀರಸಾಗರದಲ್ಲಿ ಹನುಮಂತ, ಸೀತಾ ಮುಂತಾದವರೊಂದಿಗೆ ಶ್ರೀರಾಮಚಂದ್ರ ನೆಲೆಸಿರುವನು ಎಂಬ ಅಪೂರ್ವ ಮಾಹಿತಿಯನ್ನು ತಿಳಿಸಿರುತ್ತಾರೆ.
7. ರಾಮವತಾರದ ಅವಧಿಯ ನಿರ್ಣಯ
ರಾಮಾಯಣ ಹಾಗೂ ವಿಷ್ಣುಪುರಾಣಗಳಲ್ಲಿ ಶ್ರೀರಾಮಚಂದ್ರ ಹನ್ನೊಂದು ಸಾವಿರ ವರ್ಷ ಭೂಮಿಯಲ್ಲಿ ದೃಶ್ಯನಾಗಿದ್ದು ರಾಜ್ಯಭಾರ ನಡೆಸಿದನೆಂದು ಹೇಳಲಾಗಿದೆ. ಆದರೆ ಭಾಗವತದಲ್ಲಿ ಹದಿಮೂರುಸಾವಿರ ವರ್ಷ ರಾಜ್ಯಭಾರ ನಡೆಸಿದನೆಂದಿದೆ. ಇವೆರಡರ ಸಮನ್ವಯವನ್ನು ಪದ್ಮಪುರಾಣದಲ್ಲಿ ಮಾಡಲಾಗಿದೆ. ಅದನ್ನು ಶ್ರೀ ಮಧ್ವರು ಉಲ್ಲೇಖಿಸಿರುವರು.
ಪದ್ಮ ಪುರಾಣದ ಸಮನ್ವಯ ಹೀಗಿದೆ: ನಾಕ್ಷತ್ರ ಮಾಸ 27 ದಿನಗಳನ್ನೊಳಗೊಂಡಿರುತ್ತದೆ. ಈ ಮಾಸಕ್ಕನುಗುಣವಾಗಿ ಶ್ರೀರಾಮ ರಾಜ್ಯಭಾರ ನಡೆಸಿದ್ದು ಹದಿಮೂರುಸಾವಿರ ವರ್ಷವಾದರೆ ಮೂವತ್ತು ದಿನಗಳನ್ನೊಳಗೊಳ್ಳುವ ಚಾಂದ್ರಮಾಸಕ್ಕನುಗುಣವಾಗಿ ರಾಜ್ಯಭಾರ ನಡೆಸಿದ್ದು ಹನ್ನೊಂದು ಸಾವಿರ ವರ್ಷ.
ಹೀಗಿದ್ದರೂ 700 ವರ್ಷಗಳ ವ್ಯತ್ಯಾಸ ಕಾಣಿಸುವುದು. ನಾಕ್ಷತ್ರ ಮಾಸದ ಪ್ರಕಾರ ಒಂದು ವರ್ಷ ೩೨೪ ದಿನಗಳನ್ನೊಳಗೊಂಡಿದ್ದು ಅಂತಹ 12 ಸಾವಿರ ವರ್ಷಗಳೆಂದರೆ 42, 12,000 ದಿನಗಳಾಗುವವು. ಚಾಂದ್ರಮಾಸದ ಪ್ರಕಾರ ಒಂದು ವರ್ಷ 360 ದಿನಗಳನ್ನೊಳಗೊಂಡಿದ್ದು, ಅದಕ್ಕನುಗುಣವಾಗಿ 42, 12,000 ದಿನಗಳೆಂದರೆ 11,700 ವರ್ಷಗಳಾಗುವವು. ಹೀಗೆ ಏಳ್ನೂರುವರ್ಷಗಳು ಅಧಿಕಗಳಾದವು. ಹೌದು,
ಶ್ರೀರಾಮ ಚಾಂದ್ರಮಾಸ ಪ್ರಕಾರ 11,700 ವರ್ಷಗಳ ಕಾಲವೇ ರಾಜ್ಯಭಾರ ನಡೆಸಿದ್ದ. ಸೀತಾದೇವಿಯಿಂದ ಕೂಡಿ ಕೊಂಡು 11,000 ವರ್ಷ ರಾಜ್ಯಭಾರ ನಡೆಸಿದ್ದ. ಸೀತೆ ಭೂಮಿ ಪ್ರವೇಶ ಮಾಡಿ ಉಳಿದವರಿಗೆ ಅದೃಶ್ಯಳಾಗಿದ್ದಾಗ ಮತ್ತೆ 700 ವರ್ಷ ರಾಜ್ಯಭಾರ ಮಾಡಿದ್ದ. ಆದ್ದರಿಂದ ನಕ್ಷತ್ರಮಾಸ ಪರಿಗಣನೆಯ ಪ್ರಕಾರ ರಾಮಚಂದ್ರ ಒಟ್ಟು ಭೂಮಿಯಲ್ಲಿ ದೃಶ್ಯನಾಗಿ ರಾಜ್ಯಭಾರ ನಡೆಸಿದ ಅವಧಿಯನ್ನು ತಿಳಿಸಲಾಗಿದ್ದರೆ, ಚಾಂದ್ರಮಾಸದ ಪ್ರಕಾರ ಸೀತಾಸಹಿತನಾಗಿ ರಾಜ್ಯಭಾರ ನಡೆಸಿದ ಅವಧಿಯನ್ನಷ್ಟೇ ತಿಳಿಸಲಾಗಿದೆ.
ಹೀಗೆ ಶ್ರೀರಾಮನ ಚರಿತ್ರೆಯಲ್ಲಿ ಅವನು ಆಳಿದ ಅವಧಿಯ ವಿಷಯದಲ್ಲಿ ಸಾಧಕರಿಗೆ ಆಪಾತತಃ ಪರಸ್ಪರ ವಿರೋಧ ಕಾಣುವ ಪ್ರಯುಕ್ತ ಉಂಟಾಗಬಹುದಾದ ಅವಿಶ್ವಾಸವನ್ನು ಶ್ರೀಮಧ್ವರು ಸಮರ್ಥವಾಗಿ ಪರಿಹರಿಸಿರುವರು.
ಹೀಗೆ ಏಳು ಅಂಶಗಳಿಂದ, ನಾರಾಯಣನ ಏಳನೇ ಅವತಾರ ಶ್ರೀರಾಮನನ್ನು ಮಧ್ವರು ಹೇಗೆ ನೋಡಿದರೆಂದು ಇಲ್ಲಿ ತಿಳಿಸಲಾಗಿದೆ. ಇದು ಕೇವಲ ಪ್ರವೇಶ. ಇನ್ನೂ ಹೆಚ್ಚಿನ ವಿವರಣೆಗಳಿಗೆ ಆಚಾರ್ಯರ ಕೃತಿಗಳನ್ನು ಅವಲೋಕಿಸಬೇಕು ಎಂದು ತಿಳಿಸುತ್ತ ಶ್ರೀಮಧ್ವರ ಪರಂಪರೆಯಲ್ಲಿ ಬಂದ ಕೀರ್ತಿಶೇಷ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರ ಕೊಡುಗೆಯನ್ನು ರಾಮ ಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಸ್ಮರಿಸುತ್ತ, ರಾಮ ಮಂದಿರ ಉದ್ಘಾಟನೆಯ ಕಾರ್ಯವು ನಿರ್ವಿಘ್ನವಾಗಿ ನಡೆಯಲೆಂದು ಪ್ರಾರ್ಥಿಸುತ್ತೇನೆ.
-ಓಂಪ್ರಕಾಶ ಭಟ್ಟ, ಶ್ರೀಅದಮಾರು ಮಠ,
ಉಡುಪಿ, 9964025922
ಲೇಖಕರ ಸಂಕ್ಷಿಪ್ತ ಪರಿಚಯ: ಶ್ರೀಯುತರು ವೃತ್ತಿಯಲ್ಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು ಉಡುಪಿಯ ಯುವ ಅಧ್ಯಾತ್ಮ ಚಿಂತಕರಾಗಿದ್ದಾರೆ. ಈಗಾಗಲೆ ಸುಮಾರು 30 ಕ್ಕೂ ಅಧಿಕ ಕೃತಿಗಳ ಸಂಪಾದಕರಾಗಿದ್ದಾರೆ. ಸುಗುಣ ಮಾಲಾ ಎಂಬ ಮಾಸ ಪತ್ರಿಕೆಯಲ್ಲಿ ಬರೆಹಗರರೂ ಆಗಿದ್ದಾರೆ. ಸಗ್ರಿ ರಾಘವೇಂದ್ರ ಉಪಾಧ್ಯಾಯರಲ್ಲಿ ಅಧ್ಯಯನ ಮಾಡುತ್ತ ಅದಮಾರು ಮಠದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಮಾಧ್ವ ಸಿದ್ಧಾಂತದ ಗ್ರಂಥಗಳ, ಪತ್ರಿಕೆಗಳಲ್ಲಿ ಸಮಗ್ರ ಸಂಗ್ರಹಣೆ ಮಾಡುತ್ತಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ