ಶ್ರೀರಾಮ ಕಥಾ ಲೇಖನ ಅಭಿಯಾನ-23: ರಾಮಾಯಣದ ಸ್ತ್ರೀ ಪಾತ್ರಗಳು

Upayuktha
0

 



-ಪಾರಿಜಾತ.ಬಿ.ಎಸ್.

“ದುಷ್ಟ ಶಿಕ್ಷಣ ಶಿಷ್ಟ ರಕ್ಷಣ” ಕಾರ್ಯಕ್ಕಾಗಿ ಅನಾದಿ ಕಾಲದಿಂದಲೂ ಒಂದಿಲ್ಲೊಂದು ಮಹತ್ತರವಾದ ಘಟನೆಗಳು ನಡೆಯುತ್ತಲೇ ಬಂದಿವೆ. ಈ ಘಟನೆಯ ಕೇಂದ್ರ ಬಿಂದುವಾಗಿ ವಿಶೇಷವಾದ ವ್ಯಕ್ತಿಗಳ ಪಾತ್ರವೂ ಪರಿಣಾಮಕಾರಿಯಾದ ಪ್ರಭಾವ ಬೀರುತ್ತಲೇ ಬಂದಿವೆ. ಇಂತಹ ಕಾರ್ಯಗಳಿಗಾಗಿಯೇ ಅವತಾರವೆತ್ತಿದ ಮಹಾ ವಿಷ್ಣುವಿನ ದಶವತಾರಗಳಲ್ಲಿ 7 ನೇ ಅವತಾರವಾದ ಶ್ರೀ ರಾಮನ ಅವತಾರವು ತನ್ನದೇ ಆದ ಮಹತ್ವವನ್ನು ಪಡೆದಿದೆ. 


ಶ್ರೀ ರಾಮನ ಜೀವನದ ಪ್ರತೀ ಘಟನೆಯನ್ನು ಎಳೆಎಳೆಯಾಗಿ ಬಿಡಿಸಿ, ಅಲ್ಲಿನ ಒಂದೊಂದು ಪಾತ್ರವನ್ನು ಪರಿಚಯಿಸಿದ ರಾಮಾಯಣ ಮಹಾಕಾವ್ಯವು ಮುಂದಿನ ಜನಾಂಗದ ಜನರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಾಮಾಜಿಕ ಬದುಕಿಗೆ ಅಗತ್ಯವಾದ ಬೆಳಕನ್ನು ನೀಡುವ ದಾರಿ ದೀಪವಾಗಿದೆ. ರಾಮಾಯಣದಲ್ಲಿನ ಎಲ್ಲರ ಪಾತ್ರವೂ ತನ್ನದೇ ಆದ ಮಹತ್ವದ ಸ್ಥಾನವನ್ನು ಹೊಂದಿದೆ. ಗಂಡಿನ ಪಾತ್ರವು ಹೊಂದಿರುವಷ್ಟೇ ಹೆಣ್ಣಿನ ಪಾತ್ರವೂ ಮಹತ್ವದಾಗಿದೆ.


ಇಲ್ಲಿ ಕೆಲವು ಪಾತ್ರಗಳು ಅತ್ಯಂತ ಪ್ರಮುಖವಾಗಿ ಕೊನೆಯವರೆಗೂ ನಿಂತರೇ, ಹಲವು ಇಡೀ ಘಟನೆಗಳ ನಡುವೆ ಮಹತ್ತರವಾದ ತಿರುವನ್ನು ನೀಡುವಲ್ಲಿ ತಮ್ಮ ಪ್ರಭಾವ ಬೀರಿವೆ, ಅನೇಕ ಪಾತ್ರಗಳು ಆಗಾಗ ಬಂದು ಹೋಗಿವೆ. ಮತ್ತೆ ಕೆಲವು ಆಗಾಗ ಬಂದರೂ ವಿಶೇಷವಾದ ಪ್ರಭಾವನ್ನು ಬೀರಿವೆ ಹಾಗು ವಿಶೇಷ ಸಂದೇಶವನ್ನು ಹೊತ್ತಿವೆ.


ರಾಮಾಯಣದುದ್ದಕ್ಕೂ ಬರೀ ರಾಮನ ಕಥೆಯಲ್ಲ, ಇಲ್ಲಿ ವಿವಿಧ ಪ್ರಭಾವಶಾಲಿ ಪುರುಷರ, ಪ್ರಭಾವಶಾಲಿ ಸ್ತ್ರೀಯರ ಪಾತ್ರವು ವಿವಿಧ ಘಟನೆಗಳು ವಿಶೇಷ ಸ್ಥಾನವನ್ನು ಪಡೆಯಲು ಕಾರಣವಾಗಿವೆ. ರಾಮಾಯಣದ ಅತ್ಯಂತ ಪ್ರಭಾವೀ ಸ್ತ್ರೀಯರು ಸೀತೆ, ಕೌಶಲ್ಯ, ಕೈಕೆಯಿ, ಸುಮಿತ್ರೆ,  ಮಂಥರಾ, ಶೂರ್ಪಣಕಿ, ಮಂಡೋದರಿ, ಧಾನ್ಯಮಾಲಿನಿ, ತಾರಾ, ಊರ್ಮಿಳಾ, ಶಬರಿ, ಅಹಲ್ಯ, ಸುಲೋಚನ, ಮಾಂಡವಿ, ಗಂಗಾ, ಉಮಾ, ತ್ರಿಜಟಾ ಮುಂತಾದವರು. ರಾಮಾಯಣದಲ್ಲಿನ ಪಾತ್ರಗಳು “ಆದರ್ಶ ಸಂಬಂಧಗಳ”ಕೇಂದ್ರ ಬಿಂದುವಾಗಿ ಪ್ರಭಾವ ಬೀರಿವೆ. ಅದರಲ್ಲಿ ಸ್ತ್ರೀ ಪಾತ್ರಗಳು ಕೂಡ ಮಹತ್ವದ ಸ್ಥಾನ ಪಡೆದಿವೆ.


ಸೀತಾ, ಮಂಡೋದರಿ, ಕೈಕೇಯಿ ಇವರು ಎಂತಹುದೇ ಸಂಧರ್ಭದಲ್ಲಿ ಮನಸೋಲದೆ ತಮ್ಮ ಪತಿಯ ಜೊತೆ ನಿಂತವರು. ಊರ್ಮಿಳಾ, ತಾರಾ, ಮಾಂಡವಿಯರು ತಮ್ಮ ಜೀವನದ ಸುಂದರ ಕ್ಷಣಗಳನ್ನು ಕಳೆದು ಕೊಂಡರೂ, ತ್ಯಾಗ ಹಾಗು ಧೈರ್ಯವನ್ನು ಪ್ರತಿಬಿಂಬಿಸಿದವರು. ರಾಕ್ಷಸೀ ಗುಣಗಳನ್ನು ಜನ್ಮ ಸಿದ್ಧವಾಗಿ ಪಡೆದವರಾದ ತ್ರಿಜಟ, ಉಮಾ ತಮ್ಮ ಗುಣ ನಡವಳಿಕೆಗೆ ವ್ಯತಿರಿಕ್ತವಾದ ನಡವಳಿಕೆಯನ್ನು ಹೊಂದಿ, ರಾಮಾಯಣದ ಉತ್ತಮ ಘಟನೆಗಳಿಗೆ ಕಾರಣರಾದವರು. ರಾಮಾಯಣದ ಪ್ರಮುಖ ಪಾತ್ರವಲ್ಲ ಎಂದೆನಿಸಿದರೂ, ತನ್ನ ಪತಿ ತಪ್ಪಾದ ಕಾರ್ಯದಲ್ಲಿ ತೊಡಗಿರುವರೆಂದು ತಿಳಿದೂ ಅವರ ಪರವಾಗೇ ನಿಂತು  ಪತಿ ಭಕ್ತಿಯಿಂದ ತಮ್ಮದೇ ಆದ ಸ್ಥಾನವನ್ನು ಪಡೆದವರು ಸುಲೋಚನ, ಧಾನ್ಯ ಮಾಲಿನಿ. ಇಲ್ಲಿ ಇವರು ಸ್ವಾರ್ಥಿಗಳಲ್ಲ ತಮ್ಮ ಸತಿ ಧರ್ಮವನ್ನು ಎತ್ತಿಹಿಡಿದವರಾಗಿ ಬಿಂಬಿತರಾಗಿದ್ದಾರೆ. ತಾವು ಕೈಗೊಳ್ಳುವ ಕಾರ್ಯದಿಂದ ತಮಗೇನು ಲಾಭವಿಲ್ಲವಾದರೂ ಬೇರೆಯವರಲ್ಲಿ ತಮ್ಮ ದುಷ್ಟಬುದ್ದಿ ಬಿಂಬಿತವಾಗಲು ಕಾರಣರಾಗಿ ರಾಮಾಯಣದ ರಾಮನ ಜೀವನದ ಆ ಘಟನೆಗಳ ದಿಕ್ಕೇ ಬದಲಾಗಲು ಕಾರಣರಾದವರೆನಿಸಿದವರು ಮಂಥರಾ, ಶೂರ್ಪನಕಿ. 


ಸೀತೆ

ರಾಮಾಯಣದ ಸ್ತ್ರೀ ಪಾತ್ರಗಳಲ್ಲಿ ಕೇಂದ್ರ ಬಿಂದುವಾದವಳು ಸೀತೆ. ಮಿಥಿಲೆಯ ಜನಕ ಮಹಾರಾಜನ ಮಗಳಾಗಿ ಆದರ್ಶ ಪುರುಷ ಶ್ರೀರಾಮನ ಪತ್ನಿಯಾಗಿ ರಾಮಾಯಣದ ಮಹತ್ವದ ಘಟನೆಗಳ ಕೇಂದ್ರ ಬಿಂದುವಾದವಳು. ಜನಕ ಮಹಾರಾಜನಿಗೆ ಭೂಮಿಯಲ್ಲಿ ದೊರೆತ ಸೀತೆ, ಮುದ್ದಿನ ಮಗಳಾಗಿ ಬೆಳೆದಳು. ಸಹನೆ, ಪ್ರೀತಿ, ತ್ಯಾಗ ಇತ್ಯಾದಿ ಗುಣಗಳನ್ನು ಹೊಂದಿದ ಸುಂದರ ಹೆಣ್ಣಾಗಿದ್ದಳು. ಸ್ವಯಂವರದ ಮೂಲಕ ರಾಮನ ಕೈಹಿಡಿದು ಅಯೋಧ್ಯೆಯ ಸೊಸೆಯಾಗಿ, ದಶರಥ ಮಹಾರಾಜನ ಕುಟುಂಬವನ್ನು ಸೇರಿದಳು. ನಂತರದ ದಿನಗಳಲ್ಲಿ ತನ್ನ ಪತಿಯ ನಿರ್ಧಾರಕ್ಕೆ ಜೊತೆಯಾಗಿ ಯಾರೆ ಬೇಡವೆಂದರೂ ತನ್ನ ನಿರ್ಧಾರವನ್ನು  ಬಿಡದೆ ಪತಿಯೊಡನೆ 14 ವರ್ಷ ವನವಾಸಕ್ಕಾಗಿ ಕಾಡಿಗೆ ಹೋದಳು. ಅಲ್ಲಿ ಯಾರೂ ಊಹಿಸಿರದ ಘಟನೆಗೆ ಕಾರಣಳಾದ ಶೂರ್ಪಣಕಿಯಿಂದ “ಮಾಯಾವೀ ಬಂಗಾರದ ಜಿಂಕೆ” ಘಟನೆ ನಡೆದು, ಶ್ರೀಲಂಕಾದಿ ಪತಿಯಾದ ರಾವಣನಿಂದ ಸೀತೆಯು ಅಪಹರಿಸಲ್ಪಟ್ಟು ಅಶೋಕವನದಲ್ಲಿ ಪಡಬಾರದ ಕಷ್ಟವನ್ನು ಅನುಭವಿಸಿದಳು. ರಾಮರಾವಣರ ಯುದ್ಧದ ನಂತರ ಅಲ್ಲಿಂದ ಹೊರ ಬಂದಮೇಲೂ ಸಾಮಾಜಿಕ ವ್ಯವಸ್ಥೆಯ ಅನುಮಾನದ ಕಳಂಕಕ್ಕೆ ಸಿಲುಕಿ ಅಗ್ನಿಪ್ರವೇಶ ಮಾಡಿದಳು, ಪತಿಯಿಂದ ದೂರಾಗಿ ಜೀವನದ ಮತ್ತೊಂದು ನೋವನ್ನು ಅನುಭವಿಸಿದಳು. ಇಷ್ಟಾದರೂ ಆಕೆಯ ಪತಿ ಭಕ್ತಿ, ನಂಬಿಕೆ, ತಾಳ್ಮೆಯನ್ನು ಕಳೆದುಕೊಳ್ಳದೆ ಆದರ್ಶ ಸಂಬಂಧದ ಕೇಂದ್ರ ಬಿಂದುವಾದವಳು.


ಕೌಸಲ್ಯ

ಅಯೋಧ್ಯಯ ಮಹಾರಾಜ ದಶರಥನ ಪಟ್ಟದ ರಾಣಿ ಕೌಶಲ್ಯ. ತಾಳ್ಮೆ, ನಂಬಿಕೆ, ಸತಿಧರ್ಮವನ್ನು ಎತ್ತಿ ಹಿಡಿದ ಹೆಣ್ಣು. ರಾಮನ ತಾಯಿಯಾಗಿ, ತನ್ನ ಮಗನಿಗೆ ಅನ್ಯಾಯವಾದ ಸಂಧರ್ಭದಲ್ಲೂ ತನ್ನ ಕುಟುಂಬದ ಒಳಿತೇ ಮುಖ್ಯವೆಂದು ಬಗೆದವಳು. ಕೈಕೇಯಿಯ ಬೇಡಿಕೆಯನ್ನು ದಶರಥ ಈಡೇರಿಸುವ ಸಂಧರ್ಭ ಒದಗಿದಾಗ ಆತನ ನಿರ್ಧಾರಕ್ಕೆ ಮರುಮಾತಾಡದೆ ಸತಿ ಧರ್ಮವನ್ನು ಪಾಲಿಸಿ, ಕೈಕೇಯಿಯ ನಿರ್ಧಾರವನ್ನೂ ವಿರೋದಿಸದ ಹೆಣ್ಣು.


ಕೈಕೇಯಿ

ಕೈಕೇಯಿ ದಶರಥ ಮಹಾರಾಜನ ಕಿರಿಯ ಪತ್ನಿ. ಈಕೆ ವೀರ ಯೋಧೆ, ಸದ್ಗುಣ ಶೀಲೆ, ಸುಂದರಿ. ಯುದ್ಧವೊಂದರಲ್ಲಿ ದಶರಥನ ಸಾರಥಿಯಾಗಿ ಯುದ್ಧದಲ್ಲಿ ಜಯ ಸಾಧಿಸಲು ಕಾರಣಳಾಗಿದ್ದಳು. ರಾಮನನ್ನು ತನ್ನ ಮಗನಂತೆಯೇ ಅತಿಯಾಗಿ ಪ್ರೀತಿಸಿದವಳು. ತನ್ನ ದಾಸಿ ಮಂಥರೆಯ ಚಾಡಿ ಮಾತಿಗೆ ತಿಳಿದೋ ತಿಳಿಯದೆಯೋ ತನ್ನ ನಿರ್ಧಾರವನ್ನು ತೆಗೆದು ಕೊಂಡಳು. ಕುಟುಂಬದ ಅಹಿತಕರ ಘಟನೆಗೆ ಕಾರಣಳಾದವಳು. ಇದರಿಂದ ದಶರಥನ ಕುಟುಂಬ ಅನೇಕ ತೊಂದರೆಗಳನ್ನು ಅನುಭವಿಸ ಬೇಕಾಯಿತು. ಇಡೀ ಅಯೋಧ್ಯೆಯ ಜನರ ಕೋಪಕ್ಕೆ ತುತ್ತಾಗಿ, ರಾಮನನ್ನು ಕಾಡಿಗೆ ಅಟ್ಟಿದಳೆಂಬ ದೂಷಣೆಗೆ ಒಳಗಾಗಿ ನೊಂದವಳು. ತನ್ನ ತಪ್ಪಿನ ಅರಿವಿನಿಂದ ತನ್ನ ಬಗ್ಗೆಯೇ ಬೇಸರಗೊಂಡು ಪಶ್ಛಾತ್ತಾಪಪಟ್ಟಳು.


ಮಂಡೋದರಿ

ಮಯಾಸುರ ಹಾಗು ಹೇಮಳ ಮಗಳಾಗಿ, ಲಂಕಾಧಿಪತಿ ರಾವಣನ ಪತ್ನಿಯಾದ ಮಂಡೋದರಿ ಬುದ್ದಿವಂತೆ, ಧೈರ್ಯ, ನಂಬಿಕೆ, ತಾಳ್ಮೆಗೆ ಹೆಸರಾದಳು. ಸತಿಧರ್ಮ ಪರಿಪಾಲಕಳಾಗಿ ತನ್ನ ಪತಿಯು ನಡೆಯುತ್ತಿರುವ ಮಾರ್ಗ ಸರಿಯಾದುದಲ್ಲವೆಂದು ತಿಳಿದರೂ, ಆತನಿಗೆ ಸಲಹೆ ನೀಡಿ, ಎಚ್ಚರಿಸಿದಳೇ ವಿನಹ ಸತಿ ಧರ್ಮವನ್ನು ಮುರಿಯಲಿಲ್ಲ. ಕೊನೆಯವರೆಗೂ ಪತಿಯೊಡನೆ ನಿಂತಳು. ಸೀತೆಯನ್ನು ಅಶೋಕವನದಲ್ಲಿಸಿದಾಗ ರಾವಣನು ಸಮಾಧಾನದಿಂದಿರಲು ಮಂಡೋದರಿಯ ಪಾತ್ರ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ.


ಊರ್ಮಿಳೆ 

ಜನಕ ಮಹಾರಾಜನ ಮಗಳಾಗಿ, ಸೀತಾ ಸ್ವಯಂವರದ ಬೆನ್ನಲ್ಲೇ ಲಕ್ಷ್ಮಣನ ಪತ್ನಿಯಾಗಿ ಅಯೋಧ್ಯೆಯನ್ನು ಸೇರಿದಳು. ರಾಮಾಯಣದ ಸ್ತ್ರೀ ಪಾತ್ರಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯದಿದ್ದರೂ, ರಾಮನೊಡನೆ ವನವಾಸಕ್ಕೆ ತೆರಳಲು ನಿರ್ಧರಿಸಿದ ತನ್ನ ಪತಿ ಲಕ್ಷ್ಮಣನ ನಿರ್ಧಾರಕ್ಕೆ ಗೌರವ ನೀಡಿದಳು. ಲಕ್ಷ್ಮಣ ಕಾಡಿನಿಂದ ಹಿಂದಿರುಗುವವರೆಗೂ ನಿದ್ರೆಯಲ್ಲಿದ್ದು ಕಾಡಿನಲ್ಲಿ ಲಕ್ಷ್ಮಣನ ನಿದ್ರಾ ನಷ್ಟವನ್ನು ತುಂಬಿಸಿದಳು. ಪತಿಯಿಂದ ದೂರವಿದ್ದು ಒಂದು ಹೆಣ್ಣಾಗಿ ತನ್ನ ಮನದ ಬಯಕೆಗಳನ್ನು, ಆಸೆ ಆಕಾಂಕ್ಷೆಗಳನ್ನು ಹಿಡಿದಿಟ್ಟ ದಿಟ್ಟೆ. ತ್ಯಾಗಮಯಿಯಾಗಿ, ಸದ್ಗುಣ ಸಂಪನ್ನೆಯಾಗಿ ಆದರ್ಶ ಸಂಬಂಧದ ಕೇಂದ್ರ ಬಿಂದುವಾದಳು.


ಮಾಂಡವಿ

ಮಾಂಡವಿಯೂ ಜನಕರಾಜನ ಮಗಳು. ದಶರಥನ ಮಗ ಭರತನ ಪತ್ನಿ. ರಾಮ ವನವಾಸಕ್ಕೆ ಹೋದಾಗ ಬೇಸರಗೊಂಡು ಭರತನು ರಾಮನ ಹೆಸರಲ್ಲೇ ರಾಜ್ಯಭಾರ ನಡೆಯಲು ನಿರ್ಧರಿಸಿ ತಪಸ್ಸಿಗೆ ಕಾಡಿಗೆ ಹೋದನು. ಇದರಿಂದ ಮಾಂಡವಿಯೂ ತನ್ನ ಪತಿಯಿಂದ ದೂರವಿದ್ದು ಅಯೋಧ್ಯೆಯಲ್ಲಿ ವನವಾಸ ಅನುಭವಿಸಿದಳು. ರಾಮಾಯಣದಲ್ಲಿ ಹೆಚ್ಚಾಗಿ ಉಲ್ಲೇಖಿತರಾಗಿಲ್ಲದಿದ್ದರೂ ಸೀತೆಯಂತೆ ವನವಾಸವನ್ನು ಅಯೋಧ್ಯೆಯಲ್ಲೇ ಅನುಭವಿಸಿದವಳು.


ತ್ರಿಜಟ ಮತ್ತು ಉಮಾ

ರಾಮಾಯಣದ ಸ್ತ್ರೀ ಪಾತ್ರಗಳಲ್ಲಿ ಇವರು ತಮ್ಮ ಜನ್ಮತಹ ಬಂದ ಗುಣನಡವಳಿಕೆಗಳಿಗೆ ವಿರುದ್ಧವಾದ ನಡವಳಿಕೆ ಹೊಂದಿ, ಉತ್ತಮ ಹೆಣ್ಣುಗಳಾಗಿ ಬಿಂಬಿತರಾದವರು. ರಾವಣನು ಸೀತೆಯನ್ನು ಅಪಹರಿಸಿ ತಂದು ಅಶೋಕವನದಲ್ಲಿರಿಸುತ್ತಾನೆ. ಇವಳನ್ನು ನೋಡಿಒಳ್ಳಲು ತ್ರಿಜಟೆ, ಉಮಾ ಹಾಗು ಗಂಗಾ ಎಂಬ ರಾಕ್ಷಸಿಯರನ್ನು ನೇಮಿಸಿರುತ್ತಾನೆ. ಈ ಮೂವರು ಈ ಸೀತಾಪಹರಣದಿಂದ ರಾವಣನಿಗಾಗುವ ತೊಂದರೆಯನ್ನು ಆಗಾಗ ಮನದಲ್ಲಿ ನೆನೆಯುತ್ತಾ ಸೀತೆಗೆ ಒಳ್ಳೆವರಾಗಿ, ಆಕೆಯೊಂದಿಗೆ ಉತ್ತಮವಾಗಿ ವರ್ತಿಸುತ್ತಾರೆ. ರಾಕ್ಷಸಿಯರಾಗಿ ಕ್ರೂರತನವಾಗಿ ವರ್ತಿಸಬೇಕಾಗಿದ್ದ ಇವರು ಅದಕ್ಕೆ ವಿರುದ್ಧವಾಗಿ ನಡವಳಿಕೆ ಹೊಂದಿ, ರಾಮಾಯಣದ ಸ್ತ್ರೀ ಪಾತ್ರಗಳಲ್ಲಿ ತಮ್ಮದೇ ಸ್ಥಾನ ಹೊಂದಿದ್ದಾರೆ.


ಶಬರಿ

ರಾಮಭಕ್ತಿಗೆ ಹೆಸರಾದವಳು ಶಬರಿ, ಕಾಲದ ನಿಯಮದಂತೆ ಯಾವ ಕಾಲಕ್ಕೆ ಏನು ನಡೆಯಬೇಕೋ ಅದು ನಡೆದೇ ತೀರುತ್ತದೆಯೆಂಬಂತೆ, ಸೀತೆಯನ್ನು ಹುಡುಕಿ ಹೊರಟ ರಾಮನು ಮಾರ್ಗ ಮಧ್ಯೆ ಶಬರಿಯನ್ನು ಕಾಣುತ್ತಾನೆ. ವಯಸ್ಸಾದ ತನ್ನ ದೇಹದ ದಣಿವನ್ನು ಲೆಕ್ಕಿಸದೇ ದೃಡ ಮನಸ್ಸಿನಿಂದ ರಾಮ ಬಂದೇ ಬರುವನೆಂದು ಕಾದು ಸಫಲತೆಯನ್ನು ಹೊಂದಿದಳು. ಮುಗ್ಧ ಮನಸ್ಸಿನಿಂದ ರಾಮನ ಧಣಿವಾರಿಸಲು  ಹಣ್ಣುಗಳನ್ನು ನೀಡಿ, ರಾಮಭಕ್ತೆಯಾಗಿ ಬಿಂಬಿತಳಾಗಿದ್ದಾಳೆ.


ಹೆಣ್ಣು ಮಗಳಾಗಿ ತಂಗಿಯಾಗಿ, ಹೆಂಡತಿಯಾಗಿ, ಸೊಸೆಯಾಗಿ, ತಾಯಿಯಾಗಿ ಪಾತ್ರವಹಿಸಿದರೂ ಸಬಲೆಯಾಗಿ, ತ್ಯಾಗಿಯಾಗಿ, ಸಹದರ್ಮಿಣಿಯಾಗಿ, ಧೈರ್ಯದ ಪ್ರತೀಕವಾಗಿ, ಸೌಂದರ್ಯದ ಗಣಿಯಾಗಿ, ಕರುಣಾಮಯಿಯಾಗಿ, ಸಹನೆ, ಪ್ರೀತಿ, ದಯೆ, ಕರುಣೆಗಳ ಖಜಾನೆಯಾಗಿ ರಾಮಾಯಣದಲ್ಲಿ ತನ್ನದೇ ಆದ ಮಹತ್ವದ ಸ್ಥಾನ ಉಳಿಸಿಕೊಂಡಿದ್ದಾಳೆ ಮುಂದಿನ ಪೀಳಿಗೆಗೆ ಪ್ರೇರಣೆ, ಸ್ಪೂರ್ತಿಯಾಗಿದ್ದಾಳೆ. 



-ಪಾರಿಜಾತ.ಬಿ.ಎಸ್. ಲೇಖಕರು. 

ಬೆಂಗಳೂರು. 90083 35689

ಶ್ರೀಮತಿ. ಬಿ. ಎಸ್. ಪಾರಿಜಾತಮೋಹನ್ ಬೆಂಗಳೂರು ನಿವಾಸಿ, ಕನ್ನಡ, ಇಂಗ್ಲೀಷ್, ಹಿಂದಿ, ಸಾಹಿತ್ಯ. ಇತಿಹಾಸ, ಅರ್ಥಶಾಸ್ತ್ರ ಮತ್ತು ರಾಜ್ಯ ಶಾಸ್ತ್ರ ವಿಷಯಗಳಲ್ಲಿ ಪಧವೀಧರೆ. ತತ್ವ ಶಾಸ್ತ್ರ ಮತ್ತು ಜಾನಪದ ಸಾಹಿತ್ಯಗಳ ವಿಶೇಷ ಅಧ್ಯಯನ. ಪ್ರಸ್ತುತ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ. 


ಬರಹಗಾರರಾಗಿ ಅನೇಕ ಲೇಖನಗಳು ಪ್ರಕಟ. ಸುಮಾರು ಹತ್ತು ವರ್ಷಗಳಿಂದ ವಿಶ್ವ ಹಿಂದೂ ಪರಿಷದ್ ಮಾಸಪತ್ರಿಕೆ  ‘ಹಿಂದುವಾಣಿ’ ಯಲ್ಲಿ ಕ್ಷೇತ್ರ ದರ್ಶನ ವಿಭಾಗದ ನಿರ್ವಹಣೆ. ಕನ್ನಡ ಭಾಷಾ ಉಳಿವು ಹಾಗು ಶಿಕ್ಷಣ ಮಾಧ್ಯಮ ಕುರಿತಂತೆ ಸಂವಾದ ಕಾರ್ಯಕ್ರಮ, ಕವಿ ನಮನ ಹಾಗು ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳ ಗೋಷ್ಠಿಗಳಲ್ಲಿ ಅತಿಥಿಯಾಗಿ, ಉಪನ್ಯಾಸಕರಾಗಿ ಭಾಗವಹಿಸಿದ್ದಾರೆ. ಈಗ “ನಾಡಗುಡಿಗಳು” ಎಂಬ ಕರ್ನಾಟಕದ ಧಾರ್ಮಿಕ ಕ್ಷೇತ್ರಗಳ ಪರಿಚಯ, ಪೌರಾಣಿಕ ಹಿನ್ನೆಲೆ ಹಾಗು ಐತಿಹಾಸಿಕ ಮಾಹಿತಿಯನ್ನೊಳಗೊಂಡ ಇವರ ಕನ್ನಡದ ಕೃತಿ ಲೋಕಾರ್ಪಣೆಯಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top