ಸಮಗ್ರ ತನಿಖೆ ಮಾಡುವಾಗ, ಹುಬ್ಬಳ್ಳಿ ದೇವಸ್ಥಾನ ಒಂದರಲ್ಲಿ ಅಕ್ಕಿಗೆ ಅರಿಷಿಣ ಹಚ್ಚಿ ಮಂತ್ರಾಕ್ಷತೆ ತಯಾರು ಮಾಡುತ್ತಿದ್ದ 'ಹದಿನಾರು' ಜನರನ್ನು 'ಎಲ್ಲೋ ಹ್ಯಾಂಡ್' ಆಗಿ ವಶಕ್ಕೆ ಪಡೆಯಲಾಗಿದೆ!
ನಂತರ ನಡೆದ ಪ್ರಾಥಮಿಕ ತನಿಖೆಯ ವೇಳೆ, ಮಂತ್ರಾಕ್ಷತೆಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಬಳಸಿಲ್ಲ ಎಂದು ಸಾಬೀತಾಗಿ, ಹದಿನೈದು ಜನರನ್ನೂ, ಮಂತ್ರಾಕ್ಷತೆಗೆ ಬಳಸಿದ 650 ಗ್ರಾಮ್ ಅಕ್ಕಿಯನ್ನೂ ಬಿ ಫಾರಂ ಹಾಕಿ ಬಿಡುಗಡೆ ಮಾಡಿ, ಕ್ಲೀನ್ ಚಿಟ್ ಕೊಡಲಾಗಿದೆ!!!
ಬಾಕಿ ಇರುವ ಓರ್ವನ ತನಿಖೆಗೆ ವ್ಯಕ್ತಿಯನ್ನು ಮತ್ತು 150 ಗ್ರಾಮ್ ಅಕ್ಕಿ ಹಾಗೂ 30 ಗ್ರಾಮ್ ಅರಿಷಿಣವನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು ಸಮಗ್ರ ತನಿಖೆ ಮುಂದುವರೆಯುತ್ತಿದೆ.
ಬಂಧಿತನಾಗಿರುವ ವ್ಯಕ್ತಿ ಕಳೆದ 31 ವರ್ಷಗಳಿಂದ ಹಿಂದೂ ಧರ್ಮದ ದೇವಸ್ಥಾನದಲ್ಲಿ ಕುಳಿತು, ತನ್ನ ಕೈಯಾರೆ ಮಂತ್ರಾಕ್ಷತೆಗಳನ್ನು ತಯಾರಿಸುತ್ತಿದ್ದು, ಮಂತ್ರಾಕ್ಷತೆಯ ಕರ ಸೇವೆಯಿಂದ ಆತನ ಎರಡೂ ಕರಗಳು ಶಾಶ್ವತ ಹಳದಿ ಬಣ್ಣಕ್ಕೆ ತಿರುಗಿರುವುದು ಆಶ್ಚರ್ಯ ಉಂಟುಮಾಡಿದೆ.
ನಾಳೆ ವಿಚಾರಣೆಯಿದ್ದು, ಸದರಿ ಹಳದಿ ಕರಗಳಾಗಿರುವ ಆಪಾದಿತ ವ್ಯಕ್ತಿಗೆ ಜಾಮೀನು ಸಿಗುವ ಸಾಧ್ಯತೆ ಬಗ್ಗೆ ಆಶಾ ಭಾವನೆ ವ್ಯಕ್ತವಾಗಿದೆ!!
ಕಸ್ಟಡಿಗೆ ಪಡೆದ ಅನುಮಾನಾಸ್ಪದ 150 ಗ್ರಾಮ್ ಅಕ್ಕಿ ಹಾಗೂ 30 ಗ್ರಾಮ್ ಅರಿಷಿಣವನ್ನು ವಿಧಿ ವಿಜ್ಞಾನ ಸಂಸ್ಥೆಗೆ ಕಳಿಸಿದ್ದು ಅದು BPL ಪಡಿತರದಲ್ಲಿ ಕೊಟ್ಟ ಅನ್ನ ಭಾಗ್ಯ ಯೋಜನೆಯ ಅಕ್ಕಿಯೋ ಎಂದು ತನಿಖೆ ಮಾಡಲು ಕೋರಲಾಗಿದ್ದು, ಒಂದೆರಡು ದಿನಗಳಲ್ಲಿ ವರದಿ ಬರುವ ಸಾಧ್ಯತೆ ಇದೆ.
ರಾಜ್ಯ ವ್ಯಾಪಿ ಎಲ್ಲ ಮುಜರಾಯಿ ಹಾಗೂ ಖಾಸಗಿ ದೇವಸ್ಥಾನಗಳಿಗೆ, ಮಠ ಮಂದಿರಗಳಿಗೆ ಸರಕಾರ ಮಡಿಚಿದ ಸುತ್ತೋಲೆ ಕಳಿಸಿದ್ದು, ಯಾವುದೇ ಕಾರಣಕ್ಕೂ ಮಂತ್ರಾಕ್ಷತೆ ಹೆಚ್ಚಿಸುವುದಕ್ಕೆ ಅನ್ನ ಭಾಗ್ಯ ಯೋಜನೆಯ ರಾಜ್ಯದ ಪಾಲಿನ ಅಕ್ಕಿ ಬಳಸದಂತೆ ಸೂಚಿಸಲಾಗಿದೆ. ಆದಾಗ್ಯೂ, ಪೂರ್ವಾನುಮತಿಯಿಲ್ಲದೆ, ಕೇಂದ್ರ ಸರಕಾರದ ಭಾಗದ ಉಚಿತ ಅಕ್ಕಿಯನ್ನು ಬಳಸಲು ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಅದರಲ್ಲಿ ಸೂಚಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ, ಮಂತ್ರಾಕ್ಷತೆಗೆ ರಾಜ್ಯದ ಪಾಲಿನ ಪಡಿತರ ಅಕ್ಕಿಯನ್ನು ಬಳಸದಂತೆ ಇರುವ ನಿರ್ಬಂಧ ಈ ತಿಂಗಳ 22 ರವರೆಗೆ ಜಾರಿಯಲ್ಲಿರುತ್ತದೆ ಎಂದು ವರದಿಯಾಗಿದೆ.
ಆದಾಗ್ಯೂ, ಪಡಿತರ ಅಕ್ಕಿಗೆ ಅರಿಷಿಣ ಬೆರಸಿ, ಚಿತ್ರಾನ್ನ ಮಾಡುವುದಕ್ಕೆ ಯಾವುದೇ ಕಟ್ಟಳೆಗಳಿರುವುದಿಲ್ಲ, ಆದರೆ, ಪಡಿತರ ಅಕ್ಕಿ ಬೆಂದ ಮೇಲೆಯೇ ಅರಿಶಿನ ಬೆರೆಸಬಹುದೇ ಹೊರೆತು, ಅಕ್ಕಿಯ ರೂಪದಲ್ಲಿ ಇದ್ದಾಗ ಅದಕ್ಕೆ ಅರಿಶಿಣ ಬೆರೆಸುವುದಕ್ಕೆ ತಿಂಗಳ 22 ರ ವರೆಗೆ ಅನುಮತಿ ಇರುವುದಿಲ್ಲ ಎಂದು ತಿಳಿದು ಬಂದಿದೆ.
ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ