ಮೌನ ಬಂಗಾರ ಧರಿಸಿ, ಪ್ರಶ್ನೆಗಳಿಗೆ ಕಾರ್ಯದಲ್ಲಿ ಮರುತ್ತರ ನೀಡುತ್ತಿರುವ ಕಾಯಕ ಯೋಗಿ ರಾಜರ್ಷಿ

Upayuktha
0

ಪುನರ್ಜನ್ಮದಲ್ಲಿ ನಂಬಿಕೆ ಇರುವ ನಾವು ಹಿಂದೆ ಯಾವ ಯಾವ ಜೀವಿಗಳಾಗಿ ಯಾವ ಕಾಲಘಟ್ಟದಲ್ಲಿ, ಯಾವ ಯುಗದಲ್ಲಿ ಏನಾಗಿದ್ದೇವೋ ಗೊತ್ತಿಲ್ಲ. ಆದರೆ ನಮ್ಮ ಸನಾತನ ಭಾರತದ ಮೌಲ್ಯಗಳು ಮತ್ತು ಅದರ ಸಂಸ್ಕೃತಿ ಸಂಪೂರ್ಣ ಕುಸಿದು ಹೋಗುತ್ತಿರುವ ಆತಂಕದ ಕ್ಷಣದಲ್ಲಿ ಬದುಕಿ ಬಾಳುತ್ತಿದ್ದ ನಮಗೆ ಅದೆಲ್ಲೂ ದಿಗಂತದಲ್ಲಿ ಆಶಾವಾದದ ಬೆಳ್ಳಿ ಕಿರಣವೊಂದು ಹೊಳೆಯುತ್ತಿರುವುದನ್ನು ನೋಡಿದಾಗ ಅದೆಷ್ಟು ಖುಷಿ ಆಗಬಹುದು? ಇದು ಕೇವಲ ಪ್ರಾರಂಭ ಮಾತ್ರ, ಆದರೆ ನಿರಾಶಾವಾದದ ಸಾಗರದ ನಡುವೆ ಮುಳುಗಿ ಏಳುತಿದ್ದ ನಮಗೆ ದೂರದಲ್ಲೆಲ್ಲೋ ಹಡಗಿನ ಮಿಣುಕು ದೀಪ ಕಂಡರೆ ಮನಸ್ಸಿಗೆ ದೈತ್ಯ ಬಲ ಬರುವುದಿಲ್ಲವೇ? ಅದೇ ಈಗ ಆಗುತ್ತಿರುವುದು!!!


ಆ ವ್ಯಕ್ತಿಯ ಬಗ್ಗೆ ಅದೆಷ್ಟೋ ದಂತ ಕಥೆಗಳು ಹೊಸೆದಿವೆ. ಅದ್ಯಾವುದೋ ಅಣಬೆಯನ್ನು ತಿನ್ನುತ್ತಾರಂತೆ, ಹಿಮಾಲಯದಲ್ಲಿ ಹೋಗಿ ತಪಸ್ಸು ಮಾಡಿದ್ದಾರಂತೆ, ದಿನದಲ್ಲಿ ಕೇವಲ ಮೂರು ಗಂಟೆಗಳ ಕಾಲ  ಮಾತ್ರ ನಿದ್ರಿಸುತ್ತಾರಂತೆ. ಪ್ರಧಾನಿಯಾಗಿದ್ದ 10 ವರ್ಷಗಳಲ್ಲಿ  ಒಂದು ದಿನವೂ ರಜೆ ಪಡೆದು ವಿಶ್ರಾಂತಿ ಪಡೆದದ್ದು ಇಲ್ಲವಂತೆ. ಹೀಗೆ ಏನೇನೋ....


ಆದರೆ ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಕಣ್ಣೆದುರಿಗೆ ಕಾಣುವ  ಅನೇಕ ಧನಾತ್ಮಕ ಪರಿವರ್ತನೆಗಳು, ಪರಿಹರಿಸಲು ಸಾಧ್ಯವೇ ಇಲ್ಲ ಅನ್ನುವಂತಹ ಸಮಸ್ಯೆಗಳು ಪರಿಹಾರದ ಹಾದಿಯಲ್ಲಿ ಇರುವುದು, ಹಾವಾಡಿಗರ ದೇಶ ಅಂತ ಹೀಗಳೆದ ದೇಶಕ್ಕೆ ವಿಶ್ವಮಟ್ಟದಲ್ಲಿ ಒಂದು ಘನತೆ ಸಿಕ್ಕಿರುವುದು, ದೇಶದ ಜನಕ್ಕೆ ಸ್ವಾಭಿಮಾನದ ಭಾವ ಹುಟ್ಟಿಸಿರುವುದು, ಓಟಿಗಾಗಿ ಯಾರನ್ನೋ ಓಲೈಸಲು ಹೋಗದೆ ಇರುವುದು.... ಇವುಗಳನ್ನೆಲ್ಲ ನೋಡಿದರೆ ದೇಶವಾಸಿಗಳ ಮನಸ್ಸಿನಲ್ಲಿ ಕವಿದಿದ್ದ ಕಾರ್ಮೋಡವನ್ನು ಸ್ವಲ್ಪ ಮಟ್ಟಿಗಾದರೂ ಸರಿಸುವ ಕೆಲಸಗಳು ನಡೆಯುತ್ತಿವೆ ಎಂಬುದು ವೇದ್ಯವಾಗುತ್ತದೆ. 


ಮಾತು ಬೆಳ್ಳಿ ಮೌನ ಬಂಗಾರ... ಮುಂತಾದ ಅನೇಕ  ಉಕ್ತಿಗಳನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ನಮಗೆ ಯಾರಿಗೂ ಬಾಯಿ ಮುಚ್ಚಲು ಆಗುತ್ತಿಲ್ಲ!!!


ಅಸಾಧ್ಯವನ್ನು ಸಾಧ್ಯವಾಗಿಸುತ್ತಿರುವ ರಾಜರ್ಷಿ ಮೋದಿ ಅವರ ದೈತ್ಯ ಶಕ್ತಿಯ ಒಂದು ಭಾಗ ಅವರ ಮೌನವೇ ಎಂದರೆ ನಂಬಲೇಬೇಕು. ಮಾತನಾಡಬೇಕಾದಾಗ ಯಾವ ವಿಷಯವನ್ನು ಮಾತನಾಡಬೇಕೋ, ಎಷ್ಟು ಮಾತನಾಡಬೇಕೋ, ಹೇಗೆ ಮಾತನಾಡಬೇಕೋ ಅಷ್ಟು ಮಾತ್ರ ಮಾತನಾಡುತ್ತಾರೆ. ಮೊನ್ನೆಯಷ್ಟೇ ಲಕ್ಷ ದ್ವೀಪದಲ್ಲಿ ಅವರು ಸುಳಿದಾಡಿದ ಒಂದೆರಡು ಫೋಟೋಗಳು ಅದೆಷ್ಟು ತಲ್ಲಣವನ್ನು ಉಂಟು ಮಾಡಿತು, ಮಾಲ್ಡೀವ್‌ಗೆ ಅದೆಂತಾ ಮರ್ಮಾಘಾತವಾಯಿತು ಇದೆಲ್ಲಾ ನಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಇದೊಂದು ಕೇವಲ ಸಣ್ಣ ಉದಾಹರಣೆ ಅಷ್ಟೇ. ಅವರ ವಿರೋಧಿಗಳು ಅದೆಷ್ಟೇ ಕಿರುಚಾಡಲಿ, ಇಲ್ಲಸಲ್ಲದ ಆಪಾದನೆ ಮಾಡಲಿ ಅದ್ಯಾವುದಕ್ಕೂ ಪ್ರತಿಕ್ರಿಯಿಸದೆ ಮೋದಿಯವರದ್ದು ನಡೆದದ್ದೇ ದಾರಿ. ಅವರ ದಾರಿ ಸುಷ್ಪಷ್ಟ ಮತ್ತು ಅದರ ಗುರಿ ರಾಷ್ಟ್ರದ ಅಭ್ಯುದಯ.


ಇದೀಗ ಜನವರಿ 22 ರಂದು ಅಯೋಧ್ಯೆಯ ನೂತನ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ. ಸುಮಾರು ಐನೂರು ವರ್ಷಗಳ ಸಂಘರ್ಷದ ನಂತರ ದೇಶದ ಬಹು ಸಂಖ್ಯಾತ ಹಿಂದುಗಳಿಗೆ ನ್ಯಾಯ ಒದಗಿಸುವ, ಅವರ ಧಾರ್ಮಿಕ ಭಾವನೆಗೆ  ಮನ್ನಣೆ ನೀಡುವ ಕೆಲಸ ಆಗುತ್ತಿದೆ. ಲಾಲಕೃಷ್ಣ ಅದ್ವಾನಿ, ಮುರಳಿ ಮನೋಹರ ಜೋಶಿ, ಮಿಲಿಯಂತರ ಕರಸೇವಕರು, ಶ್ರೇಷ್ಠ ನ್ಯಾಯವಾದಿಗಳು ಇವರೆಲ್ಲರ ಅದ್ಭುತ ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿಯಿಂದ ಇದು ಒಂದು ಹಂತದವರೆಗೆ ಸಾಧ್ಯವಾಯಿತು. ಮೋದಿಯವರು ಪ್ರಧಾನಿಯಾಗಿ  ಆಯ್ಕೆಯಾದ ನಂತರ ನ್ಯಾಯಾಲಯದಲ್ಲಿ ರಾಮಮಂದಿರಕ್ಕೆ ಪೂರಕವಾದ ತೀರ್ಪು ದೊರಕಿದ್ದು, ನಂತರ ಎಲ್ಲರನ್ನೂ ಸಮನ್ವಯಗೊಳಿಸಿ ರಾಮ ಮಂದಿರವನ್ನು ಪ್ರತಿಷ್ಠಾಪನೆಯ ಹಂತಕ್ಕೆ  ತಂದು ನಿಲ್ಲಿಸಿರುವುದು ಮೋದಿ ಅವರ ಸಾಧನೆ.


ಅಸಾಧ್ಯವಾದುದನ್ನು ಸಾಧಿಸುವ, ಕಾರ್ಮೋಡವನ್ನು ಸರಿಸಿ ಇಣಕುತ್ತಿರುವ ಬೆಳ್ಳಿ ಕಿರಣ ವಿಸ್ತಾರವಾದ ಬೆಳಕಾಗಲೆಂದು ಪ್ರಯತ್ನಿಸುತ್ತಿರುವ ಮೋದಿಯವರು ಸುಧೀರ್ಘಕಾಲ ನಮ್ಮ ದೇಶವನ್ನು ಆಳಲಿ ಎಂಬುದು ನಮ್ಮ ಬಹು ಸಂಖ್ಯಾತ ದೇಶವಾಸಿಗಳ ಹಾರೈಕೆ.


***


ಮೊನ್ನೆ ಅಯೋಧ್ಯೆಯಲ್ಲಿ ನಡೆದ ಐತಿಹಾಸಿಕ ಬಾಲ ಶ್ರೀ ರಾಮಚಂದ್ರನ  ಪ್ರಾಣ ಪ್ರತಿಷ್ಠಾಪನೆಯ ಕಾರ್ಯದಲ್ಲಿ ಸನಾತನ ಧರ್ಮದ ವಿಚಾರವಾಗಿ ಇಡೀ ವಿಶ್ವಕ್ಕೆ ದೊಡ್ಡ ಸಂದೇಶ ಹೋಗಿರುವುದು ಮತ್ತು ಆ ಅದ್ಭುತ ಕಾರ್ಯಕ್ರಮ ಹಿಂದೂ ಧರ್ಮೀಯರೆಲ್ಲರನ್ನೂ ಅವರ ಅಂತರಾತ್ಮದಿಂದ ಜಾಗೃತಿಗೊಳಿಸಿರುವ ವಿಚಾರ ನಮ್ಮೆಲ್ಲರಿಗೂ ಗೊತ್ತಿರುವುದು.


ಆದರೆ ಇನ್ನೊಂದು ಅತಿ ದೊಡ್ಡ ಸಂದೇಶ, ದೇಶವಾಸಿಗಳ ಮನಸ್ಸಿನಲ್ಲಿ ಛಾಪೊತ್ತುವಂತೆ ಮಾಡಿರುವ ಸಂಗತಿ ಇದೆ: 


ವಿರೋಧಿಗಳಿಗೆ ಮೋದಿಯ ಮೇಲೆ ಬಿಡಲು ಅಸ್ತ್ರಗಳಲ್ಲಿ ಮುಗಿದ ನಂತರ ಕೆಲವು ಸಮಯದಿಂದ ದಲಿತರ ಮತ್ತು ಹಿಂದುಳಿದವರ ಅಸ್ತ್ರವನ್ನು ಪ್ರಯೋಗಿಸಲು ಪ್ರಾರಂಭಿಸಿದ್ದರು. ನೂತನ ಲೋಕಸಭಾ ಭವನದ  ಉದ್ಘಾಟನಾ ಕಾರ್ಯಕ್ರಮವನ್ನು ರಾಷ್ಟ್ರಪತಿ ಶ್ರೀಮತಿ ದ್ರೌಪತಿ ಮುರ್ಮು ಅವರಿಂದ ಮಾಡಿಸಬಹುದಿತ್ತು, ಅವರು ದಲಿತರು ಎಂದೇ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಹೀಗೆ ಸಿಕ್ಕ ಸಿಕ್ಕ ಅವಕಾಶಗಳಲ್ಲಿ  ಮೋದಿ ಅವರ ಸರಕಾರ ದಲಿತರನ್ನು ಕಡೆಗಣಿಸುತ್ತಿದೆ ಎಂಬುದಾಗಿ ಬಿಂಬಿಸುತ್ತಿತ್ತು.


ಬಾಲ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆಯನ್ನು ಸ್ವತಹ ಹಿಂದುಳಿದ ಸಮಾಜದಿಂದ ಬಂದಿರುವ ಪ್ರಧಾನಿ ಮೋದಿ ಅವರೇ ಮಾಡಿದರು. ಅವರ ಜೊತೆಯಲ್ಲಿ ಯಜಮಾನರಾಗಿ ಸುಮಾರು ಹತ್ತು ಜನ ದೇಶದ ವಿವಿಧ ಭಾಗದಿಂದ ಬಂದ ಬಹುತೇಕ ಹಿಂದುಳಿದ ವರ್ಗದ ದಂಪತಿಗಳು ಉಪಸ್ಥಿತರಿದ್ದರು.


ದೇಶದ ಪ್ರಕಾಂಡ ಪಂಡಿತರು, ಶಾಸ್ತ್ರಜ್ಞರು, ವಿವಿಧ ಪಂಥದ ದೊಡ್ಡ ದೊಡ್ಡ ಮಠಾಧಿಪತಿಗಳು ಇವರೆಲ್ಲರ ಸಮಕ್ಷಮದಲ್ಲಿ  ಇವರೆಲ್ಲರ ಹೃದಯಪೂರ್ವಕ ಸಮ್ಮತಿಯೊಂದಿಗೆ, ಶಾಸ್ತ್ರ ಬದ್ಧವಾಗಿ  ಪ್ರಧಾನಿ ಮೋದಿಯವರು ಈ ಮಹತ್ಕಾರ್ಯವನ್ನು ಕೈಗೊಂಡರು.


ಮೋದಿಯವರು ಪ್ರಾಣ ಪ್ರತಿಷ್ಠಾಪನೆಯ ನಂತರ ತಾವು ಕೈಗೊಂಡ ಉಪವಾಸವನ್ನು  ಕೊನೆಗೊಳಿಸುವ ಸಮಯದಲ್ಲಿ ಅವರಿಗೆ ತೀರ್ಥವನ್ನು ನೀಡಿದ ಸ್ವಾಮಿ ಗೋವಿಂದ ದೇವ್‌ಗಿರಿ ಅವರು ನಂತರ ವೇದಿಕೆಯಲ್ಲಿ ಮಾತನಾಡುತ್ತಾ ಮೋದಿಯವರ ನಿಷ್ಠೆಯನ್ನು ದೈವ ಭಕ್ತಿಯನ್ನು ಕೊಂಡಾಡಿದರು. ಮಾತನಾಡುತ್ತಾ ತೀರ ಭಾವುಕರಾಗಿ  ಗದ್ಗದಿತರಾದರು. ಪ್ರಧಾನಿ ಮೋದಿಯವರು ಭಾರತದಂತಹ ದೇಶದ ಅತ್ಯುನ್ನತ ಜವಾಬ್ದಾರಿಯನ್ನು ಹೊತ್ತಿದ್ದರೂ ಆ 11 ದಿನ ಅತ್ಯಂತ ನಿಷ್ಠೆಯಿಂದ ತಮಗೆ ವಹಿಸಿದ್ದ ಅನುಷ್ಠಾನಗಳನ್ನು  ಚಾಚು ತಪ್ಪದೆ ಮಾಡಿದರು. ಅಷ್ಟೇ ಭಕ್ತಿ ಭಾವದಿಂದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನಿರ್ವಹಿಸಿದ್ದರು. ನಂತರದಲ್ಲಿ ಅವರು ಮಾಡಿದ ಭಾಷಣ ದೇಶವಾಸಿಗಳೆಲ್ಲರ ಹೃದಯದಲ್ಲಿ ಮಾರ್ದನಿಸಿತು. ಅವರು ಆಗಮಿಸಿದ ಎಲ್ಲಾ ಭಕ್ತಾದಿಗಳನ್ನು, ಸಾಧುಸಂತರನ್ನು, ಗಣ್ಯರಿಗೆ ಶುಭಾಶಯ ಕೋರಿದ ಪರಿ ನಮ್ಮೆಲ್ಲರಿಗೂ ಅತ್ಯಂತ ಸಂತೋಷವನ್ನು ನೀಡಿತು.


ಇಷ್ಟೆಲ್ಲ ನಡೆಯಲು ಕಾರಣ ಮೋದಿಯವರು ಬರಿ ಪ್ರಧಾನಿ ಅಲ್ಲ ಅವರು ಒಬ್ಬ ರಾಜರ್ಷಿ. ಮೌನ ರಾಜರ್ಷಿ.  ಮಿತ ಭಾಷಿ. ಬಾಯಿಗೆ ಬಂದಂತೆ ಮಾತನಾಡುತ್ತಿರುವ ಎಲ್ಲ ವಿರೋಧಿಗಳು ಈ ಸತ್ಯವನ್ನು ಅರಿಯಬೇಕಿದೆ. ಅಲ್ಪಸಂಖ್ಯಾತರ ಓಲೈಕೆಯನ್ನು ಬಿಟ್ಟು ದೇಶವಾಸಿಗಳೆಲ್ಲರನ್ನು ಸಮಾನರಂತೆ ಕಾಣುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಅಧಿಕಾರಕ್ಕೋಸ್ಕರ ದೇಶದ ಹಿತವನ್ನು ಬಲಿಕೊಡುವ ಪ್ರವೃತ್ತಿಯನ್ನು ಬಿಡಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಭಾರತ ಬದಲಾಗಿರುವ ಸತ್ಯವನ್ನು ಅರಿಯಬೇಕು.


ನಮ್ಮ ಭಾರತೀಯ ಸನಾತನ ಧರ್ಮದಲ್ಲಿ ಅದೆಷ್ಟೋ ದಲಿತರು, ಹಿಂದುಳಿದ ವರ್ಗದವರು ಸಂತರಾಗಿದ್ದಾರೆ ದೈವ ಸ್ವರೂಪಿಗಳಾಗಿದ್ದಾರೆ. ಇದನ್ನು ನಮ್ಮ ಪುರಾಣ ಚರಿತ್ರೆಗಳಲ್ಲಿ ನೋಡಬಹುದು. ನಮ್ಮ ಧರ್ಮ ಅವರ ಜಾತಿ ಮತಗಳನ್ನು ನೋಡದೆ  ಸತ್ಪಾತ್ರರೆಲ್ಲರನ್ನು ಪೂಜಿಸುವ ಧರ್ಮ. ರಾಜಕೀಯ ಉದ್ದೇಶಕ್ಕಾಗಿ ಜಾತಿ ಧರ್ಮವನ್ನು ಒಡೆಯುವ ಉದ್ದೇಶವನ್ನು ಹೊಂದಿರುವ ಕೆಟ್ಟ ಮನಸ್ಸಿನ ನಾಯಕರು  ಇನ್ನಾದರೂ ತಮ್ಮ ಈ ಕೃತ್ಯವನ್ನು ಬಿಡುವುದು ಒಳ್ಳೆಯದು.


- ವಿಜಯರಂಗ ಕೋಟೆತೋಟ

   9448964366


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top