ಆಳ್ವಾಸ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ

Upayuktha
0



ಮೂಡುಬಿದಿರೆ: ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಸಾಧನೆಯ ಮೂಲಕ ಅನನ್ಯವಾಗಿ ಗುರುತಿಸಿಕೊಂಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕಾಲೇಜು 2023-24ನೇ ಶೈಕ್ಷಣಿಕ ವರ್ಷದಿಂದ ಸ್ವಾಯತ್ತ ಸ್ಥಾನಮಾನ ಪಡೆದಿದೆ. 




ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ,  ಕಾಲೇಜಿಗೆ 2023-24ರಿಂದ ಮುಂದಿನ ಹತ್ತು ವರ್ಷಗಳಿಗೆ ಅನ್ವಯವಾಗುವಂತೆ ಸ್ವಾಯತ್ತ ಸ್ಥಾನಮಾನ ನೀಡುವ ಕುರಿತು ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು (ಯುಜಿಸಿ) 2023ರ ಮೇ 31ರಂದು ಮಂಗಳೂರು ವಿಶ್ವವಿದ್ಯಾಲಯಕ್ಕೆ ಶಿಫಾರಸ್ಸು ಮಾಡಿತ್ತು. ಈ ಶಿಫಾರಸ್ಸಿನ ಅನ್ವಯ ಮಂಗಳೂರು ವಿಶ್ವವಿದ್ಯಾಲಯವು ವಿದ್ಯಾವಿಷಯಕ ಪರಿಷತ್ ಸಮಾಲೋಚನೆಯೊಂದಿಗೆ ಸಿಂಡಿಕೇಟ್ ಮಾಡಿರುವ ಶಿಫಾರಸ್ಸು ಅನುಸರಿಸಿ ಸ್ವಾಯತ್ತ ಸ್ಥಾನಮಾನವನ್ನು ನೀಡಲು ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಸಹಮತ ಸೂಚಿಸಿ ಆದೇಶಿಸಿದೆ ಎಂದು ತಿಳಿಸಿದರು. 




ಮೌಲ್ಯಾಧಾರಿತ ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕøತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಆಳ್ವಾಸ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ದೊರೆಯುವ ಕಾರಣ ಪದವಿ, ಸ್ನಾತಕೋತ್ತರ ಹಾಗೂ ವೃತ್ತಿಪರ ಪದವಿಗಳನ್ನು ಇನ್ನಷ್ಟು ಕಾಲಬದ್ಧ ಹಾಗೂ ಸುಸಂಘಟಿತವಾಗಿ ನಡೆಸಲು ಅವಕಾಶವಾಗಲಿದೆ. ದಾಖಲಾತಿ, ಪರೀಕ್ಷೆ ಹಾಗೂ ಫಲಿತಾಂಶವನ್ನು ಸುಸಜ್ಜಿತವಾಗಿ ನಡೆಸಲು ಸಹಕಾರಿಯಾಗುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಇನ್ನಷ್ಟು ವೇಗ ಸಿಗಲಿದೆ.  ಕ್ರೀಡೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಸುಸಂಘಟಿತವಾಗಿ ಆಯೋಜಿಸಲು ಅನುವು ಮಾಡಿಕೊಡಲಿದೆ.  




ವೃತ್ತಿಪರತೆ ಹಾಗೂ ಆಧುನಿಕ ಕೈಗಾರಿಕೆ ಮತ್ತು ಉದ್ಯಮ ವಲಯಕ್ಕೆ ಬೇಕಾದ ಕೌಶಲಭರಿತ ತರಬೇತಿಗೆ ಅವಕಾಶ ಹೆಚ್ಚಲಿದೆ.  ಮೂಡುಬಿದಿರೆಯಲ್ಲಿ 1998ರಲ್ಲಿ ಡಾ.ಎಂ. ಮೋಹನ ಆಳ್ವ ಅವರ ಅಧ್ಯಕ್ಷತೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್ ಕಾಲೇಜನ್ನು ಆರಂಭಿಸಿದ್ದು, ರಜತ ಮಹೋತ್ಸವದ ಹೊಸ್ತಿಲಲ್ಲಿದ್ದು, ಸ್ವಾಯತ್ತತೆ ದೊರೆತಿರುವುದು ಇನ್ನಷ್ಟು ಬಲ ನೀಡಿದೆ.  ಈಗಾಗಲೇ ಮಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ (ರ್‍ಯಾಂಕ್), ಕ್ರೀಡಾ ಮತ್ತು ಸಾಂಸ್ಕೃತಿಕ ವಲಯದಲ್ಲಿ ಗಣನೀಯ ಸಾಧನೆ ಹಾಗೂ ಅತಿಹೆಚ್ಚಿನ ಉದ್ಯೋಗ ಗಳಿಕೆ ಮೂಲಕ ವಿಶಿಷ್ಟ ಸಾಧನೆಯನ್ನು ಮಾಡಿದೆ. ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್ ಉಪಸ್ಥಿತರಿದ್ದರು. 




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

  


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top