ಮಂಗಳೂರು: ಸಾಮಾನ್ಯ ಜನರ ಬದುಕಿನ ಕುರಿತು ವಚನಗಳು ವಿವರಿಸುತ್ತದೆ. ವಚನಗಳು ವ್ಯಕ್ತಿಯ ಘನತೆಯನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲ ಎಂದು ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪಗೌಡ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಮತ್ತು ಕನ್ನಡ ಸಂಘ ಸಹಯೋಗದಲ್ಲಿ ಏರ್ಪಡಿಸಿದ್ದ ಅಂಬಿಗರ ಚೌಡಯ್ಯನವರ ವಚನಗಳ ಅಂತರ್ ಕಾಲೇಜು ವಿದ್ಯಾರ್ಥಿ ಉಪನ್ಯಾಸ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾವ್ಯ ಪರಂಪರೆ ಜನರನ್ನು ಸ್ವರ್ಗದ ಕಡೆ ಕೊಂಡೊಯ್ಯುತ್ತಿತ್ತು. ಆದರೆ ಮೌಖಿಕ ಪರಂಪರೆಯಾದ ವಚನ ಸಾಹಿತ್ಯವು ಜನರನ್ನು ನೆಲದ ಕಡೆ ಮುಖ ಮಾಡಿಸುತ್ತವೆ. ಸಾಮಾನ್ಯ ಜನರಿಗೆ ನೆಲವನ್ನು ಬಿಟ್ಟು ಬದುಕಿಲ್ಲ. ವಚನಗಳು ಕೇವಲ ಓದಿ ಸಂತೋಷ ಪಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಅವು ಮನುಷ್ಯನನ್ನು ಚಿಂತನೆಗೆ ಹಚ್ಚುತ್ತವೆ. ವಚನಗಳ ಮೂಲಕ ಕೇಳಿದ್ದನ್ನು ಮೌಖಿಕ ನೆಲೆಗೆ ತಂದಾಗ ಮಾತ್ರವೇ ಅರಿವು ಸಾಧ್ಯ ಎಂದು ವಚನಗಳ ಮಹತ್ವ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಯರಾಜ್ ಅಮಿನ್, ಅಂಬಿಗರ ಚೌಡಯ್ಯನವರು ತಮ್ಮ ವೃತ್ತಿ ಬಗೆಗೆ ನಿಷ್ಠೆ ಹಾಗೂ ಶ್ರದ್ಧೆ ಹೊಂದಿದ್ದರಲ್ಲದೇ, ವಚನಗಳಲ್ಲಿ ಸಮಾಜದ ಅಂಕು-ಡೊಂಕುಗಳನ್ನು ಹಾಗೂ ಸಾಮಾನ್ಯ ಜನರ ಬದುಕಿನ ಕುರಿತಾಗಿ ಉಲ್ಲೇಖಿಸಿದ್ದಾರೆ. ಅಲ್ಲದೇ, ವಚನಗಳ ಮೂಲಕ ಢಂಬಾಚಾರವನ್ನು ವಿರೋಧಿಸುತ್ತಿದ್ದರು ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಪ್ರೊ. ಲತಾ ಎ. ಪಂಡಿತ್, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಮಹತ್ವಪೂರ್ಣ ವಿಷಯಗಳನ್ನು ತಿಳಿಯಲು ಈ ಕಾರ್ಯಕ್ರಮ ಉಪಯುಕ್ತ ಎಂದು ಶ್ಲಾಘಿಸಿದರು. ಅಂಬಿಗರ ಚೌಡಯ್ಯ ಪೀಠದ ಸಲಹಾ ಸಮಿತಿ ಸದಸ್ಯ ಯತೀಶ್ ಬೈಕಂಪಾಡಿ, ಕನ್ನಡ ಸಂಘದ ಮುಖ್ಯಸ್ಥ ಡಾ. ಮಾಧವ ಎಂ. ಕೆ., ಅಂಬಿಗರ ಚೌಡಯ್ಯನ ಪೀಠದ ಸಂಯೋಜಕ ಪ್ರೊ. ಸೋಮಣ್ಣ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ