ಮನುಷ್ಯನಲ್ಲಿರುವ ದಿವ್ಯತೆಯನ್ನು ಹೊರತರುವುದೇ ಸನಾತನ ಧರ್ಮದ ಗುರಿ: ಸ್ವಾಮಿ ನಿರ್ಭಯಾನಂದ ಸರಸ್ವತಿ

Upayuktha
0

"ಜಿಜ್ಞಾಸಾ" : ಸನಾತನ ಚಿಂತನ ಗಂಗಾ: ದ್ವೈಮಾಸಿಕ ಸರಣಿ ಉಪನ್ಯಾಸ ಮಾಲಿಕೆಯ ಎರಡನೇ ಉಪನ್ಯಾಸ ಸಂಪನ್ನ



ಮಂಗಳೂರು:  "ಯಾರು ಸನಾತನ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೋ ಅವರಿಗೆ ನಿಜವಾಗಿಯೂ ವಿಜ್ಞಾನದ ಮೇಲೆ ನಂಬಿಕೆ ಇಲ್ಲ. ಸನಾತನ ಧರ್ಮ ಶಾಶ್ವತವಾದುದು ಮತ್ತು ಅದು ವೇದ ಮತ್ತು ಉಪನಿಷತ್ತುಗಳನ್ನು ಆಧರಿಸಿದ ಜೀವನ ಕ್ರಮ. ಮನುಷ್ಯನಲ್ಲಿರುವ ದಿವ್ಯತೆಯನ್ನು ಹೊರತರುವುದೇ ಅದರ ಗುರಿ. ವೇದ, ಉಪನಿಷತ್ತು ಹಾಗೂ ಭಗವದ್ಗೀತೆ ಇದರ ಮಹತ್ವವನ್ನು ಸಾರಿ ಹೇಳುತ್ತವೆ. ನಿಮ್ಮ ಸ್ವರೂಪವನ್ನು ನೀವು ಅರಿತುಕೊಂಡಾಗ ನೀವು ಬಲಾಢ್ಯರಾಗುತ್ತೀರಿ.  ಅದೇ ರೀತಿ ಸನಾತನ ಧರ್ಮ ಬಲಿಷ್ಠಗೊಳ್ಳುತ್ತದೆ." ಎಂದು ಗದಗ ಹಾಗೂ ವಿಜಯಪುರದ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.


ಇವರು ರಾಮಕೃಷ್ಣ ಮಿಷನ್ ಮಾರ್ಗದರ್ಶನ ದಲ್ಲಿ ಸ್ವಚ್ಛ ಮಂಗಳೂರು ಫೌಂಡೇಷನ್ ಮತ್ತು  ಎಸ್. ಸಿ. ಎಸ್. ಆಸ್ಪತ್ರೆ, ಮಂಗಳೂರು ಸಹಯೋಗದೊಂದಿಗೆ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ನಡೆದ "ಜಿಜ್ಞಾಸಾ" : ಸನಾತನ ಚಿಂತನ ಗಂಗಾ : ದ್ವೈಮಾಸಿಕ ಸರಣಿ ಉಪನ್ಯಾಸ ಮಾಲಿಕೆಯ ಎರಡನೇ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ "ಸನಾತನ ಧರ್ಮ - ಎಂದರೇನು" ಇದರ ಕುರಿತು ಮಾತನಾಡಿದರು.


ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ  ನೀಡುತ್ತಾ "ಭಾರತ ಪುರಾತನ ಕಾಲದಿಂದಲೂ ಜಗತ್ತಿಗೆ ಬಹಳಷ್ಟು ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಜಗತ್ತಿನ ಬೆಳವಣಿಗೆಯಲ್ಲಿ ಇಂದಿಗೂ ಭಾರತದ್ದು ಸಿಂಹಪಾಲು. ಭಾರತದ ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯಗಳು, ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಜನರಿಗೆ ತಿಳಿಯಪಡಿಸಲು ಹಾಗೂ ಇವುಗಳನ್ನು ಪಸರಿಸಲು ನಮ್ಮ ಸ್ವಯಂಸೇವಕರ ತಂಡ ಈ ಕಾರ್ಯಕ್ರಮ ಹಮ್ಮಿಕೊಂಡಿದೆ " ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್. ಸಿ. ಎಸ್. ಆಸ್ಪತ್ರೆ, ಮಂಗಳೂರು  ಇದರ ಚೇರ್ಮನ್ ಡಾ. ಜೀವರಾಜ ಸೊರಕೆ ಮಾತನಾಡಿ, "ಸನಾತನ ಪರಂಪರೆಯ ಬಗ್ಗೆ ತಿಳಿಸಲು ಸ್ವಾಮಿ ನಿರ್ಭಯಾನಂದ ಸರಸ್ವತಿಯವರು ಅತ್ಯತ್ತಮ ವ್ಯಕ್ತಿ. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಯುವಕರ ತಂಡ ಅತ್ಯುತ್ತಮವಾಗಿ ಕೆಲಸಗಳನ್ನು ಮಾಡುತ್ತಿದೆ. ನಮ್ಮ ಸಹಕಾರ ಇಂದಿಗೂ ರಾಮಕೃಷ್ಣ ಮಠಕ್ಕೆ ಇದೆ" ಎಂದು ಹೇಳಿದರು.

     

ಕಾರ್ಯಕ್ರಮದ ಪ್ರಾರಂಭದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್ ಬಾಲಕಾಶ್ರಮ ವಿದ್ಯಾರ್ಥಿಗಳಿಂದ ವೇದಮಂತ್ರ ಘೋಷ ನಡೆಯಿತು ಮತ್ತು ವಿದ್ಯಾರ್ಥಿಗಳೇ ಆ ಮಂತ್ರಗಳ ವಿವರಣೆ ನೀಡಿದ್ದು ವಿಶೇಷವಾಗಿತ್ತು. ಸಭಾ ಕಾರ್ಯಕ್ರಮದ ನಂತರ ಕುಮಾರಿ ಸುಮೇಧಾ "ಮೈತ್ರಿಮ್ ಭಜತ" ಎಂಬ ಹಾಡನ್ನು ಹಾಡಿದರು.


ಮುಖ್ಯ ಭಾಷಣಕಾರರಾದ ಸ್ವಾಮಿ ನಿರ್ಭಯಾನಂದ ಸರಸ್ವತಿಯವರ ಭಾಷಣದ ನಂತರ, ಸಂವಾದ ಕಾರ್ಯಕ್ರಮ ನಡೆಯಿತು. ಸಂವಾದವನ್ನು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ರವಿಶಂಕರ್ ನಡೆಸಿದರು. ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ ಸೊರಕೆ, ಶಿಕಾರಿಪುರ ಕೃಷ್ಣಮೂರ್ತಿ, ಜಗದೀಶ್ ಶೇಣವ, ರವೀಂದ್ರನಾಥ ಶ್ಯಾನುಭೋಗ್, ವಿರೂಪಾಕ್ಷ ದೇವರಮನೆ, ಅಜಯ್ ಶೆಟ್ಟಿ, ಉಮಾನಾಥ್ ಕೋಟೆಕಾರ್, ಮುಂತಾದವರು ಉಪಸ್ಥಿತರಿದ್ದರು. ಜಿಜ್ಞಾಸಾದ ಸಂಯೋಜಕ ಮತ್ತು ಭಾರತೀಯ ಸೇನೆಯ ನಿವೃತ್ತ ಯೋಧ ಕ್ಯಾಪ್ಟನ್ ಗಣೇಶ್ ಕಾರ್ಣಿಕ ಸ್ವಾಗತಿಸಿದರು, ಜಿಜ್ಞಾಸಾದ ಸಹ ಸಂಯೋಜಕ ಮತ್ತು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಜಿಯೋಥೆರಫಿ ಇದರ ಪ್ರಾಂಶುಪಾಲ ಪ್ರೊ. ಧನೇಶ್ ಕುಮಾರ್ ವಂದಿಸಿದರು, ಪ್ರಾಧ್ಯಾಪಕ ಸಂತೋಷ್ ಆಳ್ವ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು.


ವೀರಮರಣ ಹೊಂದಿದ ಭಾರತೀಯ ಯೋಧರಿಗೆ ಗೌರವಾರ್ಪಣೆ


ಇತ್ತೀಚಿಗೆ ಕಾಶ್ಮೀರದ ರಜೌರಿ ಸೆಕ್ಟರ್ ನಲ್ಲಿ ಉಗ್ರಗಾಮಿಗಳನ್ನು ಹತ್ತಿಕ್ಕುವ ಸಂದರ್ಭದಲ್ಲಿ ಮಡಿದ ಭಾರತೀಯ ಸೇನೆಯ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಮಂಗಳೂರಿನ ಯೋಧ ಕ್ಯಾಪ್ಟನ್ ಎಮ್. ವಿ. ಪ್ರಾಂಜಲ್ ಸೇರಿದಂತೆ ಕ್ಯಾಪ್ಟನ್ ಶುಭಮ್ ಗುಪ್ತಾ, ಲ್ಯಾನ್ಸ್ ನಾಯಕ್ ಸಂಜಯ್ ಬಿಶ್ಟ್, ಹವಿಲ್ದಾರ್ ಅಬ್ದುಲ್ ಮಜೀದ್, ಪ್ಯಾರಾಟ್ರೂಪರ್ ಸಚಿನ್ ಲುರ್ ಉಗ್ರರೊಡನೆ ಹೋರಾಡುತ್ತಾ ಇತ್ತೀಚೆಗೆ ಬಲಿದಾನಗೈದಿದ್ದರು. ಶ್ರದ್ಧಾಂಜಲಿಯ ಸಂದರ್ಭದಲ್ಲಿ ಎಂ.ಆರ್.ಪಿ.ಎಲ್. ನ ಜನರಲ್ ಮ್ಯಾನೇಜರ್ ಮನೋಜ್ ಕುಮಾರ್, ಭಾರತೀಯ ಸೇನೆಯ ನಿವೃತ್ತ ಯೋಧರಾದ ಕ್ಯಾಪ್ಟನ್ ಬೃಜೇಶ್ ಚೌಟ, ಬೆಳ್ಳಾಲ ಗೋಪಿನಾಥ್ ರಾವ್, ಗೋಪಾಲ್ ಬೋಳಿಯಾರ್ ಉಪಸ್ಥಿತರಿದ್ದರು.


ಜಿಜ್ಞಾಸಾ : ಮೂರನೇ ಉಪನ್ಯಾಸ ಫೆಬ್ರವರಿ 4 ರಂದು  


"ಜಿಜ್ಞಾಸಾ" : ಸನಾತನ ಚಿಂತನ ಗಂಗಾ : ದ್ವೈಮಾಸಿಕ ಸರಣಿ ಉಪನ್ಯಾಸ ಮಾಲಿಕೆಯ ಮೂರನೇ ಉಪನ್ಯಾಸ ಫೆಬ್ರವರಿ 4 ರಂದು ನಡೆಯಲಿದ್ದು ಕೇರಳ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top