ಶ್ರೀರಾಮ ಕಥಾ ಲೇಖನ ಅಭಿಯಾನ-2: ಶ್ರೀರಾಮಾವತಾರದ ಹಿನ್ನೆಲೆ- ಲೀಲೆ, ಮಹಿಮೆ

Upayuktha
0


ಮಗೆಲ್ಲ ತಿಳಿದಿರುವಂತೆ, ರಾಮಾವತಾರ ನಡೆದದ್ದು, ತ್ರೇತಾಯುಗದಲ್ಲಿ. ಶ್ರೀರಾಮಚಂದ್ರನು, ಶ್ರೀ ಮಹಾ ವಿಷ್ಣುವಿನ ಏಳನೆಯ ಅವತಾರ. ಸನತ್ ಕುಮಾರರ ಶಾಪದ ಫಲಸ್ವರೂಪ, ವೈಕುಂಠದ ದ್ವಾರಪಾಲಕರಾದ ಜಯ ವಿಜಯರು ಭೂಮಿಯಲ್ಲಿ ನರರಾಗಿ ಮೂರು ಜನ್ಮಗಳನ್ನು ತಾಳಬೇಕಾಗಿ ಬಂದಿತು. ಅವರ ಅಪೇಕ್ಷೆಯಂತೆಯೇ, ಮೂರು ಜನ್ಮಗಳಲ್ಲಿಯೂ, ಶ್ರೀ ನಾರಾಯಣನ ಬದ್ಧ ದ್ವೇಷಿಗಳಾಗಿ, ಕೊನೆಗೆ ಅವನಿಂದಲೇ ಹತವಾಗುವ ವರ ಅವರಿಗೆ ದಕ್ಕಿತ್ತು. ಮಾನವರಾಗಿ, ಜಯ ವಿಜಯರ  ಎರಡನೆಯ ಜನ್ಮವೇ ರಾವಣ ಕುಂಭಕರ್ಣ. ರಾವಣನು ಬ್ರಾಹ್ಮಣ, ಪರಶಿವನ ಪರಮ ಭಕ್ತ. ವೇದ ಶಾಸ್ತ್ರಗಳಲ್ಲಿ ಪರಿಣತಿ ಹೊಂದಿದ್ದನು. ಶಿವ ತಾಂಡವ ಸ್ತೋತ್ರ ರಚಿಸಿದ ಉದ್ದಾಮ ಪಂಡಿತನು. ಇಷ್ಟೆಲ್ಲಾ ಸುಗುಣಗಳ ಆಕರನಾಗಿದ್ದರೂ, ದೇವತೆಗಳನ್ನು ಮತ್ತು ಸಕಲ ದೇವತಾ ಸಮೂಹಕ್ಕೆ ಒಡೆಯನಾದ ಶ್ರೀ ಹರಿಯನ್ನು ಮಿತಿ ಮೀರಿ ದ್ವೇಷಿಸುತ್ತಿದ್ದನು. ಪದೇಪದೆ ನಾಕದ ಮೇಲೆ ದಂಡೆತ್ತಿ, ಸುರೇಂದ್ರನ ಜೊತೆ ಕಾಳಗಮಾಡಿ, ಆಸುರೀ ಶಕ್ತಿ ಮೆರೆದು, ಅವನನ್ನು ಪರಾಭವಗೊಳಿಸುತ್ತಿದ್ದನು. ನವಗ್ರಹಗಳನ್ನು ಬೆದರಿಸಿ, ಅವರನ್ನು ತನ್ನ ಸಿಂಹಾಸನದ ನವ ಮೆಟ್ಟಿಲುಗಳನ್ನಾಗಿ ಉಪಯೋಗಿಸುತ್ತಿದ್ದನು. ಇತ್ತ ಇಳೆಯಲ್ಲಿ ಋಷಿ ಮುನಿಗಳು ಯಾಗವನ್ನು ಜರುಗಿಸುತ್ತಿರುವಾಗ, ಅವರಿಗೆ ಅನೇಕ ಅಡಚಣೆಗಳನ್ನುಂಟುಮಾಡಲು ತನ್ನ ಅನುಚರರಾದ ಅಸುರರನ್ನು ಕಳುಹಿಸುತ್ತಿದ್ದನು. ಯಜ್ಞದ ಪೂರ್ಣಾಹುತಿ ಸಮಯಕ್ಕೆ ವಿಘ್ನ ತರುತ್ತಿದ್ದನು. ಅವನು ಗೈದ ದುರಾಚಾರಗಳಿಗೆ ಕೊನೆಯೇ ಇಲ್ಲದಂತಾಗಿ, ಭೂಲೋಕ ಮತ್ತು ಸ್ವರ್ಗದಲ್ಲಿ ಭಯದ ವಾತಾವರಣ ಮೂಡಿತ್ತು. ಈ ಹಿನ್ನೆಲೆಯಲ್ಲಿ ಇಂದ್ರಾದಿ ದೇವತೆಗಳು, ಚತುರ್ಮುಖ ಬ್ರಹ್ಮನನ್ನು ಮುಂದಿಟ್ಟುಕೊಂಡು, ಜಗನ್ನಾಯಕ ವೈಕುಂಠವಾಸಿ ಶ್ರೀ ಮನ್ಮಹಾವಿಷ್ಣುವನ್ನು ಆರ್ದ್ರತೆಯಿಂದ ಮೊರೆಹೋಗಿ ರಕ್ಷಣೆ ಬೇಡುತ್ತಾರೆ. ಕರುಣಾಸಾಗರನಾದ ಶ್ರೀಹರಿಯು ಅವರಿಗೆ ಅಭಯವಿತ್ತು ಆಶ್ವಾಸನೆ ನೀಡುತ್ತಾನೆ, ಸ್ವತಃ ಅವನೇ ಭೂಲೋಕದಲ್ಲಿ ದಶರಥ ಮಹಾರಾಜನ ಸುತನಾಗಿ ಅವತರಿಸಿ ರಾವಣ ಕುಂಭಕರ್ಣರ ದುರಾಡಳಿಕ್ಕೆ ತೆರೆ ಎಳೆಯುವೆನೆಂದು. 


ದಶಾನನನು ದೌರ್ಜನ್ಯ, ಆಸುರೀ ಶಕ್ತಿ, ಭಗವದ್ಭಕ್ತರ ಬದ್ಧ ಹಗೆತನ, ಕಾಮ ಕ್ರೋಧಾದಿ ಅರಿಷಡ್ವರ್ಗಗಳ ದಾಸ್ಯ, ಸ್ತ್ರೀ ಎಂದರೆ ಅನಾದರ ಪ್ರವೃತ್ತಿ ಮುಂತಾದ ನಕಾರಾತ್ಮಕ ವಿಷಯಗಳಿಗೆ ಅರ್ಥಾತ್ ದುಷ್ಟತನದ ಪ್ರತೀಕನಾಗಿದ್ದ. ಯಜ್ಞ ಯಾಗಾದಿಗಳನ್ನು ಮಾಡುತ್ತ, ಗುರು ಹಿರಿಯರಲ್ಲಿ ಭಕ್ತಿಯನ್ನು ತೋರುತ್ತ, ಸದಾಚಾರ ಸಂಪನ್ನರಾದ ಜನರು ಶಿಷ್ಟತನದ ಪ್ರತಿನಿಧಿಗಳು. ದುಷ್ಟರಿಗೆ ಶಿಕ್ಷೆ ನೀಡುವುದು ಎಷ್ಟು ಮುಖ್ಯವೋ, ಶಿಷ್ಟರನ್ನು ರಕ್ಷಿಸುವುದೂ ಅಷ್ಟೇ ಮುಖ್ಯ. ಈ ಕರ್ತವ್ಯವನ್ನು ನಿಭಾಯಿಸಬೇಕು ಎಂದು ತಿಳಿಹೇಳಲು ಶ್ರೀಹರಿ ಸ್ವತಃ ತಾನೇ ಬುವಿಯಲ್ಲಿ ಮಾನವನಾಗಿ ಅವತರಿಸಿದನು. ಈ ಹೊಣೆಗಾರಿಕೆ ಎಲ್ಲರದ್ದೂ ಆಗಿದ್ದರು, ನಾಯಕರು ಮತ್ತು ನೃಪತಿಗಳು ಕಡ್ಡಾಯವಾಗಿ ಇದನ್ನು ಪಾಲಿಸಬೇಕು, ಏಕೆಂದರೆ ಅವರಿಗೆ ಅಧಿಕಾರ ಇರುತ್ತದೆ, ಎಂದು ತಿಳಿಹೇಳಲು, ಭಗವಂತನು ಶ್ರೇಷ್ಠವಾದ ರಾಜ ವಂಶದಲ್ಲಿ ಅವತರಿಸಿದನು. ಒಂದೊಳ್ಳೆ ಕಾರ್ಯ ಮಾಡಲು ಉದ್ಯುಕ್ತರಾದವರಿಗೆ ಬೆಂಬಲ, ಸಹಕಾರ, ಸಹಾಯ ಮಾಡಬೇಕಾದುದು ಎಲ್ಲರ ಕರ್ತವ್ಯ ಆಗಿರುವುದು. ಇದನ್ನು ಲೋಕಕ್ಕೆ ಅರುಹಲು ದೇವಲೋಕದ ಅನೇಕ ದೇವತೆಗಳು, ನರರಾಗಿ, ವಾನರರಾಗಿ ತಾವೂ ಅವತರಿಸಿದರು. ಸರ್ವಶಕ್ತನಾದ ಪರಮಾತ್ಮನಿಗೆ ಯಾರ ಸಹಾಯದ ಅವಶ್ಯಕತೆ ಇರುವುದಿಲ್ಲ. ಅವನು ಇಚ್ಛಾಮಾತ್ರದಿಂದ ಎಲ್ಲವನ್ನೂ ಸಾಧಿಸಬಲ್ಲನು. ಆದರೂ, ಪರಮಾತ್ಮನಿಗೆ ಅತಿ ಪ್ರಿಯವಾದ ' ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ ' ಮಹಾಕಾರ್ಯದಲ್ಲಿ, ಪವಿತ್ರಾತ್ಮರೆಲ್ಲರೂ ಕೈ ಜೋಡಿಸಿದರು. ಸಾಕ್ಷಾತ್ ಶ್ರೀ ಮಹಾ ಲಕ್ಷ್ಮಿಯೇ ಸೀತೆಯಾಗಿ ಅಯೋನಿಜೆಯಾಗಿ ಅವತರಿಸಿದಳು. ಚತುರ್ಮುಖ ಬ್ರಹ್ಮನು ಜಾಂಬವಂತನಾಗಿ, ಮುಖ್ಯ ಪ್ರಾಣನು ಹನುಮಂತನಾಗಿ, ಇನ್ನುಳಿದ ದೇವತೆಗಳು ಅದೇ ಕಾಲಘಟ್ಟದಲ್ಲಿ ಬುವಿಯಲ್ಲಿ ಅವತಾರ ತಾಳಿದರು. ಆದಿಶೇಷನು ಲಕ್ಷ್ಮಣನಾಗಿ, ಶಂಖ ಚಕ್ರಗಳು ಭರತ ಶತ್ರುಘ್ನರಾಗಿ, ತಮ್ಮ ಒಡೆಯನಾದ ಶ್ರೀಹರಿಯ ಸಮೀಪವರ್ತಿಗಳಾಗಿ ಸೇವೆ ಗೈಯ್ಯುವ ಸೌಭಾಗ್ಯ ಪಡೆದರು.



ಶ್ರೀಹರಿಯ ಮೂಲ ರೂಪದಲ್ಲಿ ಮತ್ತು ಅವತಾರ ರೂಪಗಳಾದ ರಾಮ, ಕೃಷ್ಣ ದಶಾವತಾರ ಮತ್ತು ಇತರ ಅವತಾರಗಳಲ್ಲಿ ಲವಲೇಶವೂ ವ್ಯತ್ಯಾಸ ಇರದು ಎಂದು ನಾವು ತಿಳಿಯಬೇಕು. ಅಂದರೆ ಭಗವಂತನು ಅವನ ಮೂಲರೂಪದಲ್ಲಿ ತೋರುವ ಲೀಲೆಗಳು, ಶಕ್ತಿ, ಯುಕ್ತಿ, ಮುಂತಾದ ಸದ್ಗುಣಗಳು ಅಷ್ಟೇ ಸಾಮರ್ಥ್ಯದಿಂದ ಅವತಾರ ರೂಪಗಳಲ್ಲಿ ತೋರುವನು ಎಂದು ನಾವು ಮನಗಾಣಬೇಕು. ಬಾಲಕನಾದ ಶ್ರೀ ರಾಮಚಂದ್ರನು ಮತ್ತು ಅವನ ಅನುಜರು, ವಿಶ್ವಾಮಿತ್ರ ಋಷಿಗಳ ಆಶ್ರಮದಲ್ಲಿ ಸಕಲ ವಿದ್ಯೆಗಳನ್ನು ಕಲಿತರಷ್ಟೇ. ಮುನಿವರ್ಯರು ಯಜ್ಞ ಗೈಯುವ ಸಂದರ್ಭದಲ್ಲಿ, ಅದಕ್ಕೆ ಭಂಗ ತರಲು ಪ್ರಯತ್ನಿಸಿದವರು ತಾಟಕಿ, ಮಾರೀಚ, ಸುಬಾಹು ಮುಂತಾದ ರಕ್ಕಸರು. ಇವರುಗಳು ರಾವಣನ ಕೃಪಾ ಪೋಷಿತರು. ವಿಶ್ವಾಮಿತ್ರರ ಆದೇಶಾನುಸಾರ ಇವರಿಗೆ ತಕ್ಕ ಶಿಕ್ಷೆಯನ್ನು ವಿಧಿಸಿದನು ಶ್ರೀರಾಮನು. ಬಾಲ್ಯಾವಸ್ಥೆಯಲ್ಲಿ ತೋರಿದ ಅದ್ಭುತ ಪ್ರತಿಭೆಗೆ ನಿದರ್ಶನಗಳು ಹಲವು. ಶಾಸ್ತ್ರ ಮತ್ತು ಶಸ್ತ್ರ  ವಿದ್ಯೆಗಳಲ್ಲಿ ಅಸಮ ನೈಪುಣ್ಯ ಗಳಿಸಿ, ನಾಲ್ವರು ರಾಜಕುಮಾರರು ಪುನಃ ಅಯೋಧ್ಯೆಗೆ ಬರುತ್ತಾರೆ. ದಶರಥ ಮಹಾರಾಜನ ಅರಮನೆಯಲ್ಲಿ ಎಲ್ಲರೂ ಆನಂದಸಾಗರದಲ್ಲಿ ಇರುತ್ತಾರೆ. ಆದರೆ ಭಗವತ್ ಸಂಕಲ್ಪ, ಈ ಆನಂದವು ಹೆಚ್ಚು ಕಾಲ ಇರುವುದಿಲ್ಲ. ತನಗಿರುವ ಎರಡು ವರಗಳ ದುರುಪಯೋಗ ಪಡೆದುಕೊಂಡು, ಕೈಕೇಯಿಯು, ಅರಮನೆಯಲ್ಲಿ ದುಃಖದ ವಾತಾವರಣ ನೆಲೆಸಲು ಕಾರಣೀಭೂತಳಾಗುತ್ತಾಳೆ. ಪಿತೃವಾಕ್ಯ ಪರಪಾಲನೆಯಲ್ಲಿ ಧುರೀಣನಾದ ಶ್ರೀ ರಾಮಚಂದ್ರ ಪ್ರಭು, ಸೀತಾ, ಲಕ್ಷ್ಮಣ ಸಮೇತನಾಗಿ ಕಾನನಕ್ಕೆ ತೆರಳುವ ಪ್ರಸಂಗ ಒದಗಿ ಬರುತ್ತದೆ. ತನ್ನ ಅರಮನೆಯಲ್ಲಿ, ಶ್ರೀರಾಮಚಂದ್ರನು ಎಷ್ಟು ಸಂತೋಷದಿಂದ ಇದ್ದನೋ ಅಷ್ಟೇ ಸಂತೋಷ ಅವನ ವನವಾಸದ ವರ್ಷಗಳಲ್ಲಿ ಇದ್ದನು. ಇದು ಸಾಮಾನ್ಯ ನರರಿಗೆ ಅಸಂಭವ. ಎಲ್ಲಿದ್ದರೂ ಖುಷಿಯಿಂದ ಇರಬೇಕು ಎಂಬ ಮಹತ್ವದ ಸಂದೇಶ ನೀಡಿರುವನು. ಕರುಣಾಸಾಗರನಾದ ಶ್ರೀ ರಾಮನು, ಶಾಪಗ್ರಸ್ತಳಾಗಿ ಶಿಲೆಯಾದ ಅಹಲ್ಯೆಯನ್ನು ಮತ್ತು ವೃದ್ಧಾಪ್ಯದಲ್ಲಿಯೂ ತನ್ನ ದರ್ಶನಕ್ಕೆ, ಚಾತಕ ಪಕ್ಷಿಯಂತೆ ಮಳೆಗಾಗಿ ಕಾಯುವ ತರದಂತೆ, ತನ್ನ ಬರುವಿಕೆಗಾಗಿ ಕಾಯುತ್ತಿದ್ದ ಶಬರಿಯನ್ನು ಉದ್ಧರಿಸಿದನು. ಹದಿನಾಲ್ಕು ವರ್ಷಗಳ ವನವಾಸಕ್ಕೆ ಹೇತುವಾದ ಕೈಕೇಯಿ ಮತ್ತು ಅವಳ ಅನುಚರಳಾದ ಮಂಥರೆ ಪ್ರತಿ ಎಳ್ಳಷ್ಟೂ ಕೋಪವಾಗಲಿ, ಹಗೆತನವಾಗಲೀ ಇಟ್ಟುಕೊಳ್ಳಲಿಲ್ಲ ಶ್ರೀರಾಮನು. ಇದು ಅವನ ಹೃದಯ ವೈಶಾಲ್ಯದ ಪ್ರತೀಕವೆಂದು ತಿಳಿಯಬೇಕು.



ಹೀಗೆ ವನವಾಸ ಅವಧಿಯಲ್ಲಿ, ಶ್ರೀ ಸೀತಾ ರಾಮಚಂದ್ರರು ಮತ್ತು ವಿಧೇಯನಾದ ಸೌಮಿತ್ರ, ಪ್ರಕೃತಿ ಮಡಿಲಲ್ಲಿ ಕಾನನದಲ್ಲಿ ಸಂಚರಿಸುತ್ತಾ ಸಂತಸದಿಂದಿರುತ್ತಿರಲು, ಶೂರ್ಪನಖಿಯ ಪ್ರವೇಶ ಆಗುತ್ತದೆ. ಅನುಚಿತ ಕೋರಿಕೆಯನ್ನು ತಾಳಿ ಅವಳು ಅಸಭ್ಯವಾಗಿ ವರ್ತಿಸುತ್ತಾಳೆ. ಅದಕ್ಕೆ ತಕ್ಕ ಶಿಕ್ಷೆಯೂ ಪಡೆಯುತ್ತಾಳೆ. ಯಾರೇ ಆಗಲಿ, ಹೆಣ್ಣಾಗಲಿ ಅಥವಾ ಗಂಡಾಗಲಿ, ತಪ್ಪು ಮಾಡಿದ್ದೇ ಆದರೆ ಶಾಸ್ತಿ ಪಡೆಯಲೇ ಬೇಕು ಎಂಬ ಪಾಠವನ್ನು ಇಲ್ಲಿ ನಾವು ಕಲಿಯಬಹುದು. ತನಗಾದ ಮುಖಭಂಗ ಕುರಿತು ಶೂರ್ಪನಖಿ ಸೋದರ ರಾವಣನಿಗೆ ದೂರನ್ನು ಇತ್ತ ಕಾರಣ, ವಿವೇಚನಾ ರಹಿತನಾದ ಅವನು, ಬಲವಂತವಾಗಿ ಮಾರೀಚನನ್ನು ಸಾಯಿಸುವ ಬೆದರಿಕೆಯಿತ್ತು, ಸ್ವರ್ಣ ಜಿಂಕೆ ಆಗಿ ಸೀತಾಮಾತೆಯನ್ನು ಆಕರ್ಷಿಸುವ ಸಾಹಸಕ್ಕೆ ಕೈ ಹಾಕುತ್ತಾನೆ. ಸೀತಾಪಹರಣದಿಂದ ಶ್ರೀರಾಮನು ದುಃಖತಪ್ತನಾಗಿ ಕಾಡು ಮೇಡುಗಳನ್ನು ಅಲೆಯುತ್ತಾನೆ. ನಿಜವಾಗಿ ವಿರಹ ವೇದನೆ ಇವುಗಳೆಲ್ಲದರಿಂದ ಅತೀತನು ಅವನು. ಆದರೆ, 'ನರಾಣಾಂ ಜಾಯತೇ ನರವತ್ ಪ್ರವೃತ್ತಿ:' ಎಂಬ ನಾಣ್ಣುಡಿಯಂತೆ ಮನುಷ್ಯನಾಗಿ ಹುಟ್ಟಿದ ನಂತರ ಮನುಷ್ಯನಂತೆ ಇರಬೇಕು ಎಂಬುದನ್ನು ಪ್ರಪಂಚಕ್ಕೆ ತೋರಿಸಿಕೊಟ್ಟವನು ಶ್ರೀ ರಾಮಚಂದ್ರನು. ಹಾಗೆ ನೋಡಿದರೆ, ರಾವಣಾಸುರನು ಅಪಹರಿಸಿದ್ದು ಸೀತೆಯನ್ನಲ್ಲ, ಅಪಿತು ಮಾತೆಯ ಪ್ರತಿಕೃತಿಯನ್ನು. ಇದನ್ನು ಸುಸ್ಪಷ್ಟವಾಗಿ ಶ್ರೀಮದಾನಂದ ತೀರ್ಥರು ತಮ್ಮ, 'ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ'ದಲ್ಲಿ ತಿಳಿಸಿಕೊಟ್ಟು ಮಹದುಪಕಾರ ಮಾಡಿದ್ದಾರೆ.


ಜಾನಕಿಯನ್ನು ಅರಸುತ್ತಾ, ಲಕ್ಷ್ಮಣ ಸಮೇತನಾಗಿ ಪ್ರಭು ಕಿಷ್ಕಿಂಧೆಗೆ ಆಗಮಿಸುತ್ತಾನೆ. ಮಾರ್ಗ ಮಧ್ಯೆ ಜಟಾಯುವಿಗೆ ಮೋಕ್ಷ ಕರುಣಿಸುತ್ತಾನೆ. ಪ್ರಕೃತಿ, ಪ್ರಾಣಿ, ಪಕ್ಷಿ ಮುಂತಾದವು ಎಂದರೆ ಅಸಮ ಪ್ರೀತಿ ನಮ್ಮ ಪ್ರಭುವಿಗೆ. ಮುಂದೆ ಸುಗ್ರೀವ ಸಖ್ಯ ಪ್ರಾಪ್ತವಾಗಿ, ಕಾರಣಾಂತರದಿಂದ ವಾಲಿಯನ್ನು ವಧೆ ಮಾಡಬೇಕಾಗುತ್ತದೆ. ಸುಗ್ರೀವನ ಆದೇಶದಂತೆ, ಹನುಮಂತನು ಶ್ರೀರಾಮ ಮತ್ತು ಲಕ್ಷ್ಮಣರ ಬಳಿ ಬಂದು ಅವರು ಯಾರು, ಅಲ್ಲಿ ಆಗಮಿಸಿರುವ ಕಾರಣವೇನು ಮುಂತಾದ ವಿವರಗಳನ್ನು ಪಡೆದಿರುತ್ತಾನೆ. ಆ ಸಂದರ್ಭದಲ್ಲಿ ಆಂಜನೇಯನ ಮಧ್ಯಸ್ಥಿಕೆಯನ್ನು, ದಾಶರಥಿ ಬಹಳ ಮೆಚ್ಚುತ್ತಾನೆ. ತನ್ನ ಅನುಜನಿಗೆ ಹೇಳುತ್ತಾನೆ, "ಕಪಿವರನ ನಯ, ವಿನಯ, ವಾರ್ತಾಲಾಪದ ರೀತಿ, ನೀತಿ ಇವೆಲ್ಲವೂ ಅವನು ಪಂಡಿತೋತ್ತಮ ಎಂದು ದೃಢೀಕರಿಸುತ್ತವೆ ನೋಡು ಲಕ್ಷ್ಮಣಾ" ಎಂದು. ಇದು ಶ್ರೀರಾಮನ ಗುಣಗ್ರಹಿಕೆಯನ್ನು ನಮಗೆ ತಿಳಿಸಿ ಕೊಡುತ್ತದೆ. ಅಂದಿನಿಂದ ಆಂಜನೇಯನೆಂದರೆ ಅಪರಿಮಿತ ಪ್ರೇಮ ನಮ್ಮ ಸ್ವಾಮಿಗೆ, ಅಂತೆಯೇ ಶ್ರೀ ರಾಮಚಂದ್ರನೆಂದರೆ, ಅಸಮ ಭಕ್ತಿ ಮತ್ತು ದಾಸ್ಯಭಾವ  ಹನುಮಂತನಿಗೆ. ಆದ್ದರಿಂದಲೇ, ನೂರಾರು ಕಪಿಗಳು ಇದ್ದರೂ,'ಸೀತಾನ್ವೇಷಣೆಯ' ಗುರುತರ ಕಾರ್ಯವನ್ನು ವಹಿಸಿದ್ದು ಅಂಜನಾಸೂನುವಿಗೆ ಮಾತ್ರ. ಅದಕ್ಕೆ ಸಮರ್ಪಕವಾಗಿ ಸ್ಪಂದನೆ ನೀಡಿದ್ದನು ಮಾರುತಿ. ಸಭೆಯಲ್ಲಿ, ನೀನಾರು ಎಂದು ದಶಕಂಠನು ಪ್ರಶ್ನಿಸಿದಾಗ, 'ನಾನು ಶ್ರೀ ರಾಮಚಂದ್ರನ ದಾಸ' ಎಂದು ಹೆಮ್ಮೆಯಿಂದ ಹೇಳುತ್ತಾನೆ ಹನುಮಂತನು. ಸ್ವಾಮಿ ದಾಸನ ಇಂತಹ ಅಪೂರ್ವ ಹಾಗೂ ಅನನ್ಯ ಸಂಬಂಧಕ್ಕೆ ಬೇರೆಲ್ಲಿಯೂ ನಮಗೆ ಉದಾಹರಣೆ ಸಿಗದು !


ಮಾತೃಭೂಮಿ ಎಂದರೆ ಅಸದೃಶ ಪ್ರೇಮ ಶ್ರೀ ರಾಮನಿಗೆ. ಒಂದು ಸಂದರ್ಭದಲ್ಲಿ, ಲಕ್ಷ್ಮಣನಿಗೆ ಹೇಳುತ್ತಾನೆ, "ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ " ಅಂತ. ಇದು ಪ್ರತಿಯೊಬ್ಬ ಭಾರತೀಯನು ಕಾಯಾ, ವಾಚಾ, ಮನಸಾ ಅನುಸರಿಸಬೇಕು. ದೇಶದಲ್ಲಿ ಪ್ರಜೆಗಳೇ ಮುಖ್ಯ ಅಂತ ಪ್ರಜಾಪ್ರಭುತ್ವವನ್ನು ತಿಳಿಸಿಕೊಟ್ಟವನು ಕೌಸಲ್ಯಾತನಯನು. ಒಬ್ಬ ಸಾಮಾನ್ಯ ಪ್ರಜೆಯ ಮಾತನ್ನು ಕಡೆಗಣಿಸಿದೆ, ಅದನ್ನು ಆಲಿಸಿ, ಕೆಲಕಾಲ, ಜಾನಕಿಯನ್ನು ಪರಿತ್ಯಜಿಸುತ್ತಾನೆ ರಾಜಾರಾಮ. ಚಕ್ರವರ್ತಿ ಉದಾರಿಯಾಗಿರಬೇಕು ಎಂಬುದನ್ನು ತಿಳಿಸಿ ಕೊಡಲು, ತನ್ನ ಅವತಾರ ಪರಿಸಮಾಪ್ತಿ ಸಮಯ ಆಸನ್ನವಾದಾಗ, ಶ್ರೀರಾಮಚಂದ್ರನು ಸತ್ಪ್ರಜೆಗಳನ್ನು ಉದ್ದೇಶಿಸಿ ಹೇಳುತ್ತಾನೆ, "ಸಮಾಯಾತ ಸಮಾಯಾತ ಯೇ ಯೇ ಮೋಕ್ಷ ಪದಏಚ್ಛವ:", ಅಂದರೆ ಯಾರು ಯಾರಿಗೆ ಮೋಕ್ಷದ ಅಪೇಕ್ಷೆಯಿದೆಯೋ ಅವರೆಲ್ಲರೂ ನನ್ನ ಜೊತೆಗೆ ಬನ್ನಿ ಅಂತ. ಇಂತಹ ಕರುಣಾಳು ಪ್ರಭುವನ್ನು ನಾವು ಇನ್ನೆಲ್ಲಿ ಕಾಣುವೆವು?


ಶ್ರೀ ರಘುನಂದನನ ಅವತಾರ ಇಡೀ ಮನುಕುಲಕ್ಕೆ ಸರ್ವಕಾಲಕ್ಕೂ ಆದರ್ಶಪ್ರಾಯ ಆಗಿರುವುದು. ಅಂತಹ ಶ್ರೀರಾಮಚಂದ್ರನ ಕೃಪೆಯು ಸದಾ ಸರ್ವದಾ ನಮ್ಮೆಲ್ಲರಿಗೂ ದೊರೆಯಲಿ ಎಂದು ಪ್ರಾರ್ಥಿಸೋಣ. ಜೈ ಶ್ರೀರಾಮ್ 




-ಡಿ.ಬಿ. ರಾಘವೇಂದ್ರ ರಾವ್,

ನಿವೃತ್ತ ಡಿಜಿಎಂ (ಹಣಕಾಸು)

ಬಿಇ.ಎಸ್.ಎನ್.ಎಲ್, ಹೈದರಾಬಾದ್

94900 00994


************

ಲೇಖಕರ ಕಿರುಪರಿಚಯ : 

ಶ್ರೀ ಡಿ.ಬಿ. ರಾಘವೇಂದ್ರ ರಾವ್ ಅವರು 21-06-1953, ಹೈದರಾಬಾದ್ ನಲ್ಲಿ ಜನನ, ತಂದೆ ಪ್ರೊ. ಡಿ.ಕೆ. ಭೀಮಸೇನ ರಾವ್, ತಾಯಿ ಲಕ್ಷ್ಮೀ ಬಾಯಿ. ಹೈದರಾಬಾದಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾದ ಲಿಟಲ್ ಫ್ಲವರ್ ಹೈ ಸ್ಕೂಲ್ ಮತ್ತು ತದನಂತರ ನಿಜಾಂ ಕಾಲೇಜು ನಲ್ಲಿ ವಿದ್ಯಾಭ್ಯಾಸ ಮಾಡಿ,  ಟೆಲಿಕಾಂ/ಬಿ ಎಸ್ ಎನ್ ಎಲ್ ಸಂಸ್ಥೆಯಲ್ಲಿ ಸುಮಾರು 38 ವರ್ಷಗಳ ಸೇವೆ ಸಲ್ಲಿಸಿ, ನಿವೃತ್ತರಾಗಿಪ್ರಸ್ತುತ ಹೈದ್ರಾಬಾದ್ ನಲ್ಲೇ ವಾಸವಾಗಿ  ಈಗ ತಮ್ಮನ್ನು ಸಂಪೂರ್ಣವಾಗಿ ಕನ್ನಡ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡು, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಕ್ರಿಯವಾಗಿರುವರು. 

ವಿಳಾಸ: - ಡಿ.ಬಿ.ರಾಘವೇಂದ್ರ ರಾವ್

Rtd Dy. G M (Finance), BSNL

3-4-152Lingampally

Barkatpura Hyderabad - 500027. (TS)

Mobile No -- 9490000994

Email -- raghavendraraodb@gmail.com



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top