ಶ್ರೀರಾಮ ಕಥಾ ಲೇಖನ ಅಭಿಯಾನ-17: ಪ್ರಾಣಿಗಳಿಗೂ ಉಂಟು ರಾಮಾಯಣದ ನಂಟು

Upayuktha
0


- ದೀಪಶ್ರೀ ಎಸ್ ಕೂಡ್ಲಿಗಿ 


ರಾಮಾಯಣದಲ್ಲಿ ರಾಮ, ಸೀತೆ, ಲಕ್ಷ್ಮಣ, ಮನುಷ್ಯ ಪಾತ್ರಗಳು ಹೇಗೆ ಪ್ರಧಾನವಾಗಿದೆಯೋ ಹಾಗೂ ಜನರ ಮೇಲೆ ಹೇಗೆ ಪ್ರಭಾವ ಬೀರುದೆಯೋ ಹಾಗೆ ರಾಮಾಯಣದಲ್ಲಿ ಬರುವ ಪ್ರಾಣಿಗಳ ಪಾತ್ರವು ಅಷ್ಟೇ ಮುಖ್ಯ ಎನಿಸುತ್ತದೆ.


ಜಟಾಯುವಿನ  ಪ್ರಾಣತ್ಯಾಗ:-

ಜಟಾಯುವಿನ ತಂದೆ ಅರುಣ, ತಾಯಿ ಶೈನಿ. ಜಟಾಯು ರಾಮಾಯಣದ ಒಬ್ಬ ದೇವಮಾನವ. ದಶರಥನ ಸ್ನೇಹಿತ. ಪಂಚವಟಿ ಅರಣ್ಯದಲ್ಲಿ ಇವನ ವಾಸ.ಅರಣ್ಯ ಕಾಂಡದ ಪ್ರಕಾರ ಜಟಾಯು ರಣಹದ್ದುಗಳ ರಾಜ (ಗೃಧ್ರ ರಾಜ). ಅಪಹರಣದ ವೇಳೆ ಸೀತೆಯ ಕೂಗನ್ನು ಕೇಳಿದ ಜಟಾಯು, ರಾವಣನ ಕರ್ತವ್ಯದ ಕುರಿತು ವಿವರಿಸುತ್ತಾನೆ. ಒಪ್ಪದಿದ್ದಾಗ, ತನ್ನ ಉಗುರುಗಳು, ರೆಕ್ಕೆಗಳು, ಕೊಕ್ಕಿನಿಂದ ರಾವಣನ ದೇಹದ ಮೇಲೆ ಆಕ್ರಮಣ ಮಾಡುತ್ತಾನೆ. ಗಂಭೀರ ಗಾಯಗಳನ್ನು ಉಂಟುಮಾಡುತ್ತಾನೆ.


ರಾವಣನ ಬಿಲ್ಲು, ಬಾಣ, ರಥವನ್ನು ಮುರಿದು, ಕೊಕ್ಕಿನಿಂದ ಸಾರಥಿಯ ತಲೆಯನ್ನು ಕುಕ್ಕಿ ಹಾಕುತ್ತಾನೆ. ಕೋಪಗೊಂಡ ರಾವಣನು ಜಟಾಯುವಿನ ರೆಕ್ಕೆಗಳು, ಪಾದಗಳು, ಪಾರ್ಶ್ವಗಳನ್ನು ಚಂದ್ರಹಾಸ ಖಡ್ಗದಿಂದ  ಕತ್ತರಿಸುತ್ತಾನೆ. ವಯಸ್ಸಾದ ಜಟಾಯು ಭೂಮಿಗೆ ಕುಸಿಯುತ್ತಾನೆ. ರಾಮನು ಸೀತೆಯನ್ನು ಹುಡುಕುತ್ತಿದ್ದಾಗ ಜಟಾಯು, ಯುದ್ಧದ ಕುರಿತು ವಿವರಿಸುತ್ತಾನೆ. ಮರಣದ ಶಯ್ಯೆಯಲ್ಲಿದ್ದಾಗಲೂ" ಸೀತಾಪರಣ ದಕ್ಷಿಣ ದಿಕ್ಕಿಗೆ ಸಾಗುತ್ತಿದೆ" ಎಂದು ರಾಮನಿಗೆ ಅರುಹಿ ಜಟಾಯು ಪ್ರಾಣ ಬಿಡುತ್ತಾನೆ. ಜಟಾಯುವಿನ ಅಂತ್ಯಕ್ರಿಯೆಯನ್ನು ಸ್ವತಃ ರಾಮನೆ ನೆರವೇರಿಸುತ್ತಾನೆ. ಯುದ್ಧದಲ್ಲಿ ಜಟಾಯು ಸೋತಿದ್ದರು, ರಾಮನ ಹೃದಯವನ್ನು ಗೆದ್ದು ಮೋಕ್ಷವನ್ನು ಸಾಧಿಸುತ್ತಾನೆ.


ಸೀತೆ ಬಯಸಿದ ಬಂಗಾರದ ಜಿಂಕೆ:-

ಶೂರ್ಪನಕಿ ಆಸೆಯನ್ನು ತಳ್ಳಿ ಹಾಕಿದ ರಾಮ ಲಕ್ಷ್ಮಣರ ಮೇಲೆ ಸೇಡು ತೀರಿಸಿಕೊಳ್ಳಲು ರಾವಣನು ರಾಕ್ಷಸ ತಪಸ್ವಿ ಮಾರೀಚನನ್ನು ಕಳುಹಿಸುತ್ತಾನೆ.ಮಾರೀಚ ರಾವಣನ ಮಿತ್ರ. ಆತ ಬೆಳ್ಳಿಯ ಚುಕ್ಕೆಗಳಿರುವ ಚಿನ್ನದ ಚಿಂಕೆಯಾಗಿ ಪರಿವರ್ತನೆಯಾಗುತ್ತಾನೆ. ರಾಮ ಲಕ್ಷ್ಮಣರಿಂದ ಸೀತೆಯನ್ನು ದೂರ ಮಾಡಲು ಚಿನ್ನದ ಜಿಂಕೆಯಾದ ಮಾರೀಚ, ಹೂ ಸಂಗ್ರಹಿಸುತ್ತಿರುವ ಸೀತೆಯಿಂದ ಆಕರ್ಷಿತನಾಗುತ್ತಾನೆ. ಸೀತೆ ಬಂಗಾರದ ಜಿಂಕೆ ತನಗೆ ಬೇಕೆಂದು ರಾಮನಲ್ಲಿ ಕೇಳುತ್ತಾಳೆ. ದೀರ್ಘಕಾಲದ ಬೇಟೆಯ ನಂತರ ರಾಮನು ಜಿಂಕೆಯ ರೂಪದಲ್ಲಿರುವ ರಾಕ್ಷಸನನ್ನು ಚಿನ್ನದ ಬಾಣದಿಂದ ಸಂಹಾರಿಸುತ್ತಾನೆ. ಮಾರೀಚ ಸಾಯುವಾಗ ಓ ಲಕ್ಷ್ಮಣ, ಓ ಸೀತಾ ಎಂದು ಕೂಗಿ ಜೀವ ಬಿಡುತ್ತಾನೆ.


ಅಳಿಲು ಸೇವೆ:-

ರಾಮ, ಸೀತೆಯನ್ನು ರಕ್ಷಿಸಲು, ಸಮುದ್ರ ಮಾರ್ಗದಿ ಲಂಕೆಗೆ ತೆರಳಲು ಕಪಿಗಳ ಸಹಾಯದಿಂದ ಸೇತುವೆಯನ್ನು ನಿರ್ಮಿಸುತ್ತಿದ್ದನು. ವಾನರ ಸೇನೆಯು ದೊಡ್ಡ ಬಂಡೆಗಳು, ಮರದಿಂದ ಸೇತುವೆಯನ್ನು ನಿರ್ಮಿಸುತ್ತಿದ್ದವು. ಪುಟ್ಟ ಅಳಿಲೊಂದು ಸಣ್ಣ ಕಲ್ಲುಗಳನ್ನು ಹೊತ್ತೊಯುತ್ತಿದ್ದುದ್ದನ್ನು ಕಂಡ ಕಪಿಯು ಪ್ರಶ್ನಿಸಲಾಗಿ, ರಾಮ ಸೇತುವೆ ನಿರ್ಮಾಣಕ್ಕೆ ಕಲ್ಲು ಒಯ್ಯುತ್ತಿದ್ದೇನೆ ಎಂದುತ್ತರಿಸಿತು. 

ಬೃಹತ್ಪ್ರಮಾಣದ ಕಲ್ಲುಗಳ ನಡುವಿನ ಅಂತರವನ್ನು ತುಂಬಲು ಪುಟ್ಟ ಕಲ್ಲುಗಳು ನೆರವಾದವು.ಅಳಿಲಿನ ಸೇವೆ ಸೇತುವೆಯನ್ನು ಗಟ್ಟಿಗೊಳಿಸಿದವು. ಅಳಿಲಿನ ಸೇವೆಯನ್ನು ಮೆಚ್ಚಿ ರಾಮನು ಅದನ್ನು ಮೇಲಕೆತ್ತಿ ಧನ್ಯವಾದಗಳ ರೂಪದಲ್ಲಿ ಅದರ ಬೆನ್ನ ಮೇಲೆ ಬೆರಳುಗಳನ್ನು ಸವರಿದನು. ಇಂದಿಗೂ ಅಳಿಲುಗಳ ಮೈ ಮೇಲೆ ಗೆರೆಗಳಿರುವುದು ರಾಮನ ಆಶೀರ್ವಾದದ ಕಾರಣವೇ.


ಸೀತಾ ಹತ್ಯೆ ತಡೆದ ಮಂಡೂಕ (ಮಂಡೋದರಿ):-

ಮಂಡೋದರಿ ತಂದೆ ಮಾಯಾಸುರ, ತಾಯಿ ಹೇಮ. ದಂಪತಿಗಳಿಬ್ಬರು ಹೆಣ್ಣು ಮಗುವಿಗಾಗಿ ಶಿವನ ಕುರಿತು ತಪಸ್ಸು ಮಾಡುತ್ತಾರೆ. ಈ ವೇಳೆಗೆ ಮಧುರಾ ಅಪ್ಸರೆಯು ಶಿವನ ಮೇಲಿನ ವ್ಯಾಮೋಹದಿಂದ ಪಾರ್ವತಿಯ ಕೋಪಕ್ಕೆ ಗುರಿಯಾಗಿ ಹನ್ನೆರಡು ವರ್ಷಗಳ ಕಾಲ ಶಾಪದಿಂದ ಕಪ್ಪೆಯಾಗುತ್ತಾಳೆ. ಶಿವನು ಆಕೆಯ ಶಾಪ ವಿಮೋಚಿಸಲು, ನೀನು ಸುಂದರ ತರುಣಿಯಾಗಿ ಪರಾಕ್ರಮಿ ಪುರುಷನನ್ನು ಮದುವೆಯಾಗುತ್ತಿಯ ಎಂದು ಆಶೀರ್ವದಿಸುತ್ತಾನೆ.


ದಂಪತಿಗಳು ಅದೇ ಸುಂದರ ಯುವತಿಯನ್ನು ದತ್ತು ಪಡೆದು ಮಂಡೋದರಿ ಎಂಬ ಹೆಸರು ಇಡುತ್ತಾರೆ. ಹೀಗೆ ಮಂಡೂಕಕ್ಕೆ, ಮಂಡೋದರಿ ಎಂಬ ಹೆಸರು ಬರುತ್ತದೆ. ಮಂಡೋರಿಯಾದ ರಾವಣನ ಪತ್ನಿಯ ಪಾತ್ರವು ರಾಮಾಯಣದಲ್ಲಿ ಉಲ್ಲೇಖನಾರ್ಹವಾದದ್ದು. ರಾವಣ ತನ್ನನ್ನು ಮದುವೆಯಾಗದ ಸೀತೆಯ ಶಿರಚ್ಛೇದ ಮಾಡಲು ಮುಂದಾದಾಗ ಮಂಡೊದರಿ ತಡೆಯುತ್ತಾಳೆ. ಸೀತೆಯಲ್ಲಿರುವ ರಾಮಭಕ್ತಿಯನ್ನು ಗೌರವಿಸುತ್ತಾಳೆ. ಆಕೆಯನ್ನು ದೇವತೆಗಳಿಗೆ ಹೋಲಿಸುತ್ತಾಳೆ. ರಾಮನನ್ನು ಬ್ರಹ್ಮಾಂಡದ ಪ್ರಭು ಎಂದು ಹಾಡಿ ಹೋಗಳುತ್ತಾಳೆ.


ದೀರ್ಘಾಯುಷ್ಯ ಪಡೆದ ಜಾಂಬವಂತ:-

ಜಾಂಬವಂತ ಕರಡಿಗಳ ರಾಜ. ಸುಗ್ರೀವನ ಸಲಹೆಗಾರನಾಗಿದ್ದನು.ಜಂಬೂ ಕಾಡಿನ ಗುಹೆಯಲ್ಲಿ ವಾಸಿಸುತ್ತಿದ್ದನು. ಶ್ರೀರಾಮನನ್ನು ಧ್ಯಾನಿಸುತ್ತಿದ್ದನು. ಬ್ರಹ್ಮನ ಆಕಳಿಕೆಯಿಂದ ಹುಟ್ಟಿದ ಕಾರಣ ಹಾಗೂ ಜಂಬೂದ್ವೀಪದಲ್ಲಿ ಜನಿಸಿದ ಕಾರಣ ಇವನಿಗೆ ಜಾಂಬವಂತ ಎಂಬ ಹೆಸರು ಬಂದಿತು. ಜಾಂಬವಂತ ಜನಿಸಿದ್ದು ರಾಮನು ಸೀತೆಯನ್ನು ಹುಡುಕಲು ಹಾಗೂ ರಾವಣನ ವಿರುದ್ಧ ಹೋರಾಡಲು ಸಹಕರಿಸುವ ಕಾರಣಕ್ಕಾಗಿ. ಹನುಮಂತನಿಗೆ ತನ್ನ ಶಕ್ತಿ, ಸಾಮರ್ಥ್ಯ ತಿಳಿಯಲು ಮಾರ್ಗ ತೋರಿದವ ಜಾಂಬವಂತ. ರಾಮ- ರಾವಣ ಯುದ್ಧದಲ್ಲಿ ರಾವಣ ಪ್ರಜ್ಞೆ ತಪ್ಪುವಂತೆ ಮಾಡಿದನು. ಒಂದೇ ಜೀವಿತಾವಧಿಯಲ್ಲಿ ದೇವರನ್ನು ಎರಡು ಬಾರಿ ಭೇಟಿಯಾದ ಕೀರ್ತಿ ಈತನಿಗೆ ಸಲ್ಲುತ್ತದೆ. ರಾಮನಿಂದ 10,000ಕ್ಕೂ ಹೆಚ್ಚು ಸಿಂಹದಂತೆ ಶಕ್ತಿಶಾಲಿ ವರವನ್ನು ಹಾಗೂ ದೀರ್ಘಾಯುಷ್ಯ ಪಡೆದ ವಾನರ ಸೇನೆಯ ಮುಖ್ಯಸ್ಥ ಇವನೇ.


ಮಕರದೊಂದಿಗೆ ಹನುಮಂತನ ಹೋರಾಟ:-

ರಾವಣನ ಮಗನಾದ ಇಂದ್ರಜಿತುವಿನೊಡನೆ ಯುದ್ಧದಲ್ಲಿ ಲಕ್ಷ್ಮಣನು ಗಾಯಗೊಂಡು, ಪ್ರಜ್ಞಹೀನ ಸ್ಥಿತಿಯನ್ನು ತಲುಪಿದನು. ರಾಜವೈದ್ಯ ಸುಷೇಣನ ಮಾತಿನಂತೆ ಹನುಮಂತನು ಸೂರ್ಯಸ್ತದೊಳಗೆ ಸಂಜೀವಿನಿ ಪರ್ವತಕ್ಕೆ ತೆರಳಿ ಗಿಡಮೂಲಿಕೆ ತರಬೇಕಿತ್ತು. ರಾವಣನ ಆಜ್ಞೆಯಂತೆ ಮಾರೀಚನ ಮಗ ಕಾಲನೇಮೆ ರಾಕ್ಷಸನು ಋಷಿಯಂತೆ ವೇಷ ಧರಿಸಿ ಆಶ್ರಮ ನಿರ್ಮಿಸಿ, ಮಾರ್ಗದಲ್ಲಿ ಹನುಮಂತನನ್ನು ತಡೆದು ವಿಶ್ರಾಂತಿ ಪಡೆಯಲು ಸೂಚಿಸಿದನು. ಸಮುದ್ರಕ್ಕೆ ತೆರಳಿ ಸ್ನಾನ ಮಾಡಿ ಬರಲು ಹೇಳಿದನು. ನೀರನ್ನು ವಿಷಮಯಗೊಳಿಸಿದನು.


ಸಮುದ್ರಕ್ಕೆ ತೆರಳಿದ ಹನುಮಂತನ ಕಾಲನ್ನು ಮೊಸಳೆ ಹಿಡಿದು, ನುಂಗುತ್ತದೆ. ಹನುಮಂತ ಅಗಾಧವಾದ ಶಕ್ತಿಯನ್ನು ಹೊಂದಿ ದೈತ್ಯಕಾರವಾಗಿ ಬೆಳೆದು ಮೊಸಳೆಯ ಹೊಟ್ಟೆ ಸೀಳಿ ಹೊರಬರುತ್ತಾನೆ. ಕಾಲನೇಮಿ ಹಾಗೂ ಮೊಸಳೆಯನ್ನು ಜೈ ಶ್ರೀ ರಾಮ್ ಎಂದು ವಧೆ ಮಾಡುತ್ತಾನೆ. ಕಾಲನೇಮಿ ತಾವು ದುರ್ವಾಸ ಋಷಿಯಿಂದ ಶಾಪಗ್ರಸ್ತರಾಗಿ ರಾಕ್ಷಸ ಜನ್ಮ ತಾಳಿದ್ದು ಇಂದು ಶಾಪವಿಮೋಚನೆ ಯಾಯಿತು ಎಂದು ತಿಳಿಸುತ್ತಾನೆ. ಮೊಸಳೆಯು ಹತವಾಗಿ ಧ್ಯಾನಮಾಲಿನಿ ಎಂಬ ಅಪ್ಸರೆಯ ರೂಪ ತಾಳುತ್ತದೆ. ಈಕೆ ಹನುಮಂತನ ಪಾದವನ್ನು ಹಿಡಿದಾಗ ಶಾಪವಿಮೋಚನೆಯಾಯಿತು ಎಂದು ತಿಳಿಸುತ್ತಾಳೆ.


ರಾಮಸೇತು ನಿರ್ಮಿಸಿದ ಕಪಿಸೈನ್ಯ:-

ವಾನರ ಎಂದರೆ ಕಾಡಿನಲ್ಲಿ ವಾಸಿಸುವ ಜನರ ಜನಾಂಗವಾಗಿದೆ. ವಾನರರು ಅರೆ ದೈವಿಕ ಜೀವಿಗಳು. ರಾವಣನ ವಿರುದ್ಧ ಹೋರಾಡಲು ರಾಮನಿಗೆ ಸಹಾಯ ಮಾಡಲು ಬ್ರಹ್ಮನಿಂದ ಜನಿಸಿದವು ಎಂದು ಹೇಳಲಾಗಿದೆ. ರಾಮನು ಸೀತೆಯನ್ನು ಹುಡುಕುತ್ತಿರುವಾಗ ದಂಡಕಾರಣ್ಯದಲ್ಲಿ ಮೊದಲು ವಾನರ ಸೇನೆ ಭೇಟಿಯಾದವು. ಸೀತಾದೇವಿಯನ್ನು ಕರೆತರಲು ವಾನರ ಸೈನ್ಯವು ನಿರ್ಮಿಸಿದ ಸೇತುವೆಯನ್ನು ರಾಮಸೇತು ಎನ್ನಲಾಗಿದೆ. ರಾಮನಿಗೆ ಜಯವಾಗಲಿ ಎಂದು ರಾಮಸೇತು ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದು ನಲ ಹಾಗೂ ನೀಲಾ ಎಂಬ ಕೋತಿಗಳು.

 

ಕಲ್ಲುಗಳ ಮುಳುಗದಿರಲೆಂದು ಶ್ರೀರಾಮ ಎಂದು ಬರೆಯಲು ಹನುಮಂತ ರಾಮನಿಗೆ ತಿಳಿಸುತ್ತಾನೆ. ಹುನುಮಂತನ ಮಾತಿನಂತೆ ಶ್ರೀರಾಮ ಎಂದು ಬರೆಯಲಾಗಿ ಬಂಡೆಗಲ್ಲುಗಳು ತೇಲಿ ಸೇತುವೆ ನಿರ್ಮಾಣವಾಗುತ್ತದೆ. ಐದು ದಿನದಲ್ಲಿ 13 ರಿಂದ 14 ಕಿಲೋಮೀಟರ್ ಉದ್ದವಾದ ಸೇತುವೆಯನ್ನು ನಿರ್ಮಾಣ ಮಾಡಲಾಯಿತು. ಇಂದಿಗೂ ರಾಮಸೇತುವನ್ನು ಕಾಣಬಹುದು.


ಶ್ವಾನಕ್ಕೂ ನ್ಯಾಯ ಒದಗಿಸಿದ ಶ್ರೀರಾಮಚಂದ್ರ:-

ರಾಮ ಸಾಮಾಜಿಕ ಕಳಕಳಿ ಹೊಂದಿರುವ ಮನುಷ್ಯ. ಪ್ರತಿದಿನ ಜನರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದನು. ಅಂದು ಕೂಡ ಎಲ್ಲರ ಸಮಸ್ಯೆಯನ್ನು ಪರಿಹರಿಸಿ, ಲಕ್ಷ್ಮಣ," ಹೊರಗೆ ಯಾರಾದರೂ ಇದ್ದರೆ ನೋಡಿಕೊಂಡು ಬಾ" ಎಂದನು. ಲಕ್ಷ್ಮಣ ಯಾರು ಇಲ್ಲವೆಂದು ಬರುತ್ತಿರುವಾಗ ನಾಯಿಯೊಂದನ್ನು ಕಂಡನು. ತಲೆಗೆ ತೀವ್ರ ಗಾಯವಾಗಿತ್ತು.


ಲಕ್ಷ್ಮಣನು ವಿಚಾರಿಸಿದಾಗ "ನನಗೆ ರಾಮನಿಂದ ನ್ಯಾಯ ಬೇಕು" ಎಂದಿತು. ರಾಮನಲ್ಲಿಗೆ ಬಂದ ನಾಯಿ" ಸರ್ವಾರ್ಥಸಿದ್ಧ ಎಂಬ ವ್ಯಕ್ತಿ ತಲೆಗೆ ಹೊಡೆದಿದ್ದಾನೆ. ಸರ್ವಾರ್ಥಸಿದ್ಧನನ್ನು ವಿಚಾರಿಸಿದಾಗ "ಹೌದು" ಎಂಬ ಉತ್ತರ ಬಂದಿತ್ತು. "ನಾನು ಹತಾಶೆಯಿಂದ ಹೊಡೆದೆ "ಯೆಂದ. ಶಿಕ್ಷೆಯ ಕುರಿತು ಯೋಚಿಸಿದ ರಾಮನಿಗೆ ಮಾರ್ಗ ತೋಚಲಿಲ್ಲ. ನಾಯಿಯನ್ನು ಕೇಳಿದಾಗ, "ಇವನನ್ನು ಕಲಿಂಜರ ಮಠದ ಸನ್ಯಾಸಿಯಾಗಿ ಮಾಡಿ" ಎಂದಿತು.


"ಇದ್ಯಾವ ಶಿಕ್ಷೆ?!! ರಾಮ ನಾಯಿಯನ್ನು ಕೇಳಿದಾಗ, ತಾನು" ಹಿಂದಿನ ಜನ್ಮದಲ್ಲಿ ಅದೇ ಮಠದ ಸನ್ಯಾಸಿಯಾಗಿದ್ದೆ. ಧರ್ಮ ಪ್ರಧಾನ ಕಾರ್ಯಗಳನ್ನು ನಿರ್ವಹಿಸಿದರೂ, ಈ ಜನ್ಮದಲ್ಲಿ ನಾಯಿಯಾಗಿ ಜನಿಸಿದ್ದೇನೆ. ಇನ್ನು ಈ ಸಂನ್ಯಾಸಿ ಕೋಪದಿಂದ ವರ್ತಿಸುತ್ತಾನೆ. ಖಂಡಿತವಾಗಿ ನರಕಕ್ಕೆ ಹೋಗುತ್ತಾನೆ. ಆ ಕಾರಣಕ್ಕೆ ಶಿಕ್ಷೆ ನೀಡಿದೆ" ಎಂದಿತು. ನಾಯಿಯ ಶಿಕ್ಷೆಗೆ ರಾಮನೆ ತಲೆ ಬಾಗುತ್ತಾನೆ. 

ಹನುಮಂತ, ಜಟಾಯು, ಜಿಂಕೆ, ಅಳಿಲು ಹೀಗೆ ಹಲವಾರು ಪ್ರಾಣಿಗಳು ರಾಮಾಯಣದಲ್ಲಿ ಬಂದು ಹೋಗುತ್ತವೆ. ಹೀಗಾಗಿಯೆ ಎಲ್ಲಾ ಪ್ರಾಣಿಗಳನ್ನು ಇಂದಿಗೂ ದೇವರೆಂದು ಪೂಜಿಸುವುದು.


- ದೀಪಶ್ರೀ ಎಸ್ ಕೂಡ್ಲಿಗಿ 

ಕಥೆಗಾರ್ತಿ ಹಾಗೂ ಹವ್ಯಾಸಿ ಬರಹಗಾರ್ತಿ 

ಮೊ 8296322664 \ 8904506835 

373deepashri@gmail.com 


ವಿಳಾಸ:

1 ವಾರ್ಡ್ ಮನೆ ನಂ 89 ಬಾಪೂಜಿ ನಗರ ಡಿಗ್ರಿ ಕಾಲೇಜ್ ಹತ್ತಿರ 

ಕೂಡ್ಲಿಗಿ ತಾಲ್ಲೂಕು ವಿಜಯನಗರ ಜಿಲ್ಲೆ.


ಲೇಖಕಿಯ ಕಿರು ಪರಿಚಯ :-

ವೃತ್ತಿಯಲ್ಲಿ ಶಿಕ್ಷಕಿ. ಪ್ರವೃತ್ತಿಯಲ್ಲಿ ಕಥೆಗಾರ್ತಿ ಹಾಗೂ ಹವ್ಯಾಸಿ ಬರಹಗಾರ್ತಿ. ಹುಟ್ಟಿದ ಊರು ವಿಜಯನಗರ ಜಿಲ್ಲೆ ಕೂಡ್ಲಿಗಿ. ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಹಾಗೂ 158 ವರ್ಷಗಳ ಇತಿಹಾಸ ಹೊಂದಿರುವ ಜೀವನ ಶಿಕ್ಷಣ ಮಾಸ ಪತ್ರಿಕೆಯಲ್ಲಿ ಲೇಖನಗಳು ಪ್ರಕಟವಾಗಿದೆ. ಭಾರತೀಯ ಯುವ ಜನ ಸೇವಾ ಸಂಸ್ಥೆಯ ವತಿಯಿಂದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ ಪುರಸ್ಕೃತರು. ಮೊದಲ ಕೃತಿ ಶಿಶುನಾಳ ಶರೀಫ ಬಿಡುಗಡೆಗೆ ಸಿದ್ಧವಾಗಿದೆ.



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top