- ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರ ಮಠ, ಹೊಸನಗರ
ಸುಖ!
ಈ ಎರಡಕ್ಷರದ ಅದ್ಭುತ ಯಾರಿಗೆ ತಾನೇ ಬೇಡ? ಜಗದ ಪ್ರತಿಯಿಂದು ಜೀವವೂ ಬಯಸುವುದು ಅದನ್ನೇ. ಆದುದರಿಂದಲೇ ಅದು ಪುರುಷಾರ್ಥಗಳಲ್ಲಿ ಒಂದಾಗಿ 'ಕಾಮ' ಎನ್ನಿಸಿಕೊಂಡಿತು. ಆದರೆ ಬಯಸುವುದು ಮಾತ್ರ ನಮ್ಮ ಕೈಯ್ಯಲ್ಲಿದೆ; ಬಯಸಿದುದನ್ನು ಪಡೆಯುವುದು ಕೈಮೀರಿದೆ. ರಾಮಾಯಣವು ಇರುವ ಸುಖವನ್ನಲ್ಲದೇ, ಇಲ್ಲದ, ಕೈಮೀರಿದ ಸುಖವನ್ನೂ ಕೊಡಿಸಿ ಕೊಡುತ್ತದೆ.
ರಾಮಾಯಣವನ್ನು ಓದುವಾಗಲೇ ಶಬ್ದಗಳಲ್ಲಿ ಹೇಳಲಾರದ ಸುಖದ ಅನುಭವವಾಗುತ್ತದೆ; ಅದು ಬೇರೆ. ರಾಮಾಯಣವು ತೋರಿದ ಹಾದಿಯಲ್ಲಿ ನಡೆದಾಗ ಜೀವನದಲ್ಲಿ ಅನ್ಯಾನ್ಯ ಸುಖಗಳು ಒದಗಿ ಬರುತ್ತವೆ; ಅದು ಬೇರೆ. ರಾಮಾಯಣದ ಅವಲೋಕನವು ತಂದು ಕೊಡುವ ಪುಣ್ಯವು ಕೊಡುವ ಸುಖವೇ ಬೇರೆ. ಹೀಗೆ ರಾಮಾಯಣದ ಅನುಸಂಧಾನದಿಂದ ಮುಬ್ಬಗೆಯ ಸುಖಗಳ ಸಂಪ್ರಾಪ್ತಿ.
ಸುಖವನ್ನು ಕೊಡಿಸಿಕೊಡುವುದೆಂದು ಲೋಕದಲ್ಲಿ ಪ್ರಸಿದ್ಧವಾದ ಇನ್ನೊಂದು ಸಂಗತಿಯಿದೆ. ಈ ಜಗವೆಲ್ಲ ಹುಚ್ಚು ಹಿಡಿದಂತೆ ಅದರ ಹಿಂದೆಯೇ ಓಡುತ್ತಿದೆ. ಅದು ಹಣ. ಅದೂ ಕೂಡಾ ಪುರುಷಾರ್ಥಗಳಲ್ಲಿ ಒಂದು. ಅದಕ್ಕೆ ಅರ್ಥವೆಂದು ಹೆಸರು. ರಾಮಾಯಣವು ಅದನ್ನೂ ಕೊಡಮಾಡುತ್ತದೆ.
ಧರ್ಮವು ಸುಖ-ಸಂಪತ್ತುಗಳ ಮೂಲ. ಅದು ಪುರುಷಾರ್ಥಗಳಲ್ಲಿ ಮೊದಲನೆಯದು. ಅದಿದ್ದರೆ ಎಲ್ಲವೂ ಇದೆ. ಅದಿಲ್ಲದಿದ್ದರೆ ಯಾವುದೂ ಇಲ್ಲ! ಹೇಳಿ ಕೇಳಿ ರಾಮಾಯಣವು ಧರ್ಮಮೂರ್ತಿಯ ಚರಿತ. ಧರ್ಮಾಧರ್ಮಗಳ ಸಮರವೇ ರಾಮಾಯಣದ ವಸ್ತು. ಪ್ರತ್ಯಕ್ಷರದಲ್ಲಿಯೂ ಧರ್ಮವನ್ನೇ ಹೊತ್ತ ರಾಮಾಯಣವು ನಮ್ಮಲ್ಲಿ ಧರ್ಮವನ್ನು ಪ್ರಬೋಧಗೊಳಿಸದಿದ್ದರೆ ಇನ್ನಾವುದು ತಾನೇ ಆ ಕಾರ್ಯವನ್ನು ಮಾಡೀತು?
ಧರ್ಮ-ಅರ್ಥ-ಕಾಮಗಳು ಈ ಲೋಕದಲ್ಲಿ ಸಿಗುವಂತಹವು; ಇಹಜೀವನದಲ್ಲಿಯೇ ಅನುಭವಿಸಲು ಬರುವಂತಹವು. ಆದುದರಿಂದಲೇ ಈ ಮೂರನ್ನೂ ಒಂದು ಗುಂಪಾಗಿ ವಿಂಗಡಿಸಿ ಅದನ್ನು ತ್ರಿವರ್ಗವೆಂದು ಕರೆದರು. ಈ ಮೂರನ್ನೂ ಮೀರಿದ ಮೋಕ್ಷವು ಅಪವರ್ಗವೆನಿಸಿತು. ಅದು ಪರಮಪುರುಷಾರ್ಥ. ಮೋಕ್ಷವೆಂದರೂ ಸುಖವೇ. ಆದರೆ ಅದು ಕೇವಲ ಸಣ್ಣ ಸುಖವಲ್ಲ. ಸುಖದ ಮೊತ್ತವದು. ಸುಖದ ಪರಿಪೂರ್ಣ ರೂಪವದು. ಮೋಕ್ಷವು ಸಿಂಧುವಾದರೆ ಕಾಮವು ಅದರದೇ ಒಂದು ಬಿಂದು. ನಮಗರಿವಿಲ್ಲದಿದ್ದರೂ ನಾವೆಲ್ಲ ಬಯಸುತ್ತಿರುವುದು ಅದನ್ನೇ. ಜೀವಿಸುತ್ತಿರುವುದೂ ಅದಕ್ಕಾಗಿಯೇ. ಒಂದು ದಿನ ಸುಖದ ಸಿಂಧುವಿನಲ್ಲಿ ಮುಳುಗಲೆಂದೇ ಜೀವಬಿಂದುವು ಜೀವನವೆಂಬ ಪ್ರಯಾಣವನ್ನು ಕೈಗೊಂಡಿರುವುದು. ರಾಮಾಯಣವು ಧರ್ಮವನ್ನು ಕೊಟ್ಟರೆ ಧರ್ಮವು ಮೋಕ್ಷವನ್ನು ಕೊಡುತ್ತದೆ. ಇವುಗಳ ಹೊರತು ಜೀವವು ಬಯಸುವಂತಹದು ಇನ್ನು ಏನೂ ಇಲ್ಲ! ಅಲ್ಲಿಗೆ ರಾಮಾಯಣವು ಎಲ್ಲವನ್ನೂ ಕೊಟ್ಟಂತಾಯಿತು.
ರಾಮಾಯಣದ ಓದು ಯಾರಿಗೆ?
ಯೋಗವು ಯೋಗ್ಯತೆಯನ್ನು ಅಪೇಕ್ಷಿಸುತ್ತದೆ. ರಾಮಾಯಣವನ್ನು ಅವಲೋಕಿಸುವ, ಆಸ್ವಾದಿಸುವ ಯೋಗವೂ ಕೂಡಾ ಯೋಗ್ಯತೆಯೊಂದನ್ನು ಅಪೇಕ್ಷಿಸುತ್ತದೆ. ಅಸೂಯೆ ಇಲ್ಲದಿರುವುದೇ ಆ ಯೋಗ್ಯತೆ. ಅಸೂಯಾ ಎಂದರೆ ಗುಣದಲ್ಲಿಯೂ ದೋಷವನ್ನೇ ಹುಡುಕುವ, ಒಳಿತಿನಲ್ಲಿಯೂ ಕೆಡುಕನ್ನೇ ಕಾಣುವ ಗುಣ. ಅದು ಇಲ್ಲದವನು ಅನಸೂಯು. ಅವನು ಮಾತ್ರವೇ ರಾಮಾಯಣವನ್ನು ಅವಲೋಕಿಸಲು ಅರ್ಹತೆಯುಳ್ಳವನು. ದೋಷದಲ್ಲಿಯೂ ಗುಣವನ್ನು ಕಾಣುವಷ್ಟಲ್ಲದಿದ್ದರೂ ಗುಣದಲ್ಲಿ ಗುಣವನ್ನು ಕಾಣುವಷ್ಟಾದರೂ ಅರ್ಹತೆ ಇರಬೇಕು; ಅಂತಹವರು ಮಾತ್ರವೇ ರಾಮಾಯಣಕ್ಕೆ ಅರ್ಹರು. ಯೋಗ್ಯತೆಯಿಲ್ಲದೆಯೇ ಬರುವ ಯೋಗವು ಒಳ್ಳೆಯದನ್ನಂತೂ ಮಾಡುವುದಿಲ್ಲ. ಹಾಗೆಯೇ, ಶುಭದಲ್ಲಿಯೂ ಅಶುಭವನ್ನು ಕಾಣುವವರು ರಾಮಾಯಣವನ್ನು ಓದಿದರೂ, ಕೇಳಿದರೂ ಆಗಬೇಕಾದ ಶುಭ ಪರಿಣಾಮ ಆಗುವುದೇ ಇಲ್ಲ! ಆದುದರಿಂದ ಶುಭದೃಷ್ಟಿ ಇಲ್ಲದಿದ್ದರೆ ಅದನ್ನು ಸಂಪಾದಿಸಿಕೊಂಡೇ ರಾಮಾಯಣದ ಲೋಕಕ್ಕೆ ಬರಬೇಕು.
ಬೆಳಕೇ ಕುಲವಾಗಿ ಇಳೆಗಿಳಿದಾಗ
ದೊಡ್ಡ ವಂಶದಲ್ಲಿ ನಡೆದ ಬಹು ದೊಡ್ಡ ಘಟನಾವಳಿ ರಾಮಾಯಣ. ಸೂರ್ಯವಂಶವೆಂದರೆ ಅದು ಜಗತ್ತಿಗೇ ದೊಡ್ಡ ವಂಶ. ಲೋಕರಕ್ಷಣೆಗಾಗಿ ಸಾಕ್ಷಾತ್ ಸೃಷ್ಟಿಕರ್ತನೇ ಆ ವಂಶವನ್ನು ಸೃಷ್ಟಿಸಿದನಂತೆ. ಯುದ್ಧಗಳಲ್ಲಿಯಾಗಲಿ, ಕೈಗೊಂಡ ಕಾರ್ಯಗಳಲ್ಲಿಯಾಗಲಿ, ಸೂರ್ಯವಂಶದ ದೊರೆಗಳಿಗೆ ಸೋಲೆಂದರೇನೆಂಬುದೇ ತಿಳಿಯದಂತೆ. ಅದು ಸೋಲು ಮುಟ್ಟದ ದೊರೆಗಳ ಸಾಲು! ಗಿರಿ-ನದಿ-ಕಾನನ-ಗ್ರಾಮ- ನಗರಗಳಿಂದ ಕೂಡಿದ ಅಖಂಡ ಭೂಮಂಡಲವೇ ಅಂದಿನ ಕಾಲದಲ್ಲಿ ಆ ವಂಶದ ಆಳ್ವಿಕೆಗೆ ಒಳಪಟ್ಟಿತ್ತಂತೆ.
ಸೂರ್ಯವಂಶದ ವ್ಯಾಪ್ತಿಯು ಭೂಮಂಡಲಕ್ಕಷ್ಟೇ ಸೀಮಿತವಾಗಿರಲಿಲ್ಲ. ಅದು ದೇವಲೋಕವನ್ನೂ ವ್ಯಾಪಿಸಿತ್ತು. ದಾನವಲೋಕವನ್ನೂ ನಡುಗಿಸಿತ್ತು. ಸಾಮಾನ್ಯರಿಗೆ ಸಂಕಟ ಬಂದಾಗ ದೇವತೆಗಳ ಮೊರೆ ಹೋಗುವುದು ಸಾಮಾನ್ಯ ಸಂಗತಿ. ದೇವತೆಗಳಿಗೇ ಸಂಕಟ ಬಂದಾಗ ಅವರು ಸೂರ್ಯವಂಶದ ದೊರೆಗಳ ನೆರವನ್ನು ಕೋರುತ್ತಿದ್ದರು, ಸೂರ್ಯವಂಶೀಯರು ದಾನವರನ್ನು ಸದೆಬಡಿದು ದೇವತೆಗಳಿಗೆ ಬಂದೊದಗಿದ ಆಪತ್ತನ್ನು ಪರಿಹರಿಸುತ್ತಿದ್ದರು ಎಂದರೆ ಮಾನವ ಕುಲಕ್ಕೆ ಇದಕ್ಕಿಂತ ಹೆಮ್ಮೆಯ ಸಂಗತಿ ಇನ್ನೊಂದಿರಲು ಸಾಧ್ಯವೇ?
ಬೆಳಕಿನ ಮೂಲವಾದ ಸೂರ್ಯದೇವನು ಆ ವಂಶದ ಮೂಲಪುರುಷ. ಮಾನವಸಮೂಹದ ಮೂಲಪುರುಷನಾದ ಮನು ಆ ಕುಲದ ಮೊದಲ ದೊರೆ. ಆ ಕುಲಕ್ಕೆ ಮಾತ್ರವಲ್ಲ, ಜಗತ್ತಿಗೇ ಮೊದಲ ದೊರೆಯಾದವನು ಮನು. ಮಾನವರ ಬದುಕು ಹೇಗಿರಬೇಕು ಮತ್ತು ಹೇಗಿರಬಾರದು ಎಂದು ನಿರೂಪಿಸಿದವನು ಅವನು. ದೇವಾಲಯದ ದೀಪೋತ್ಸವದಲ್ಲಿ ನಂದಾದೀಪವು ನೂರಾರು ದೀಪಗಳನ್ನು ಹೊತ್ತಿಸುವಂತೆ ಮನುವು ತನ್ನ ಜ್ಯೇಷ್ಠ ಮತ್ತು ಶ್ರೇಷ್ಠ ಪುತ್ರನಾದ ಇಕ್ಷ್ವಾಕುವನ್ನು ಮುಂದಿನ ದೊರೆಯಾಗಿಸಿ, ತನ್ಮೂಲಕ ಅತಿಭವ್ಯವಾದ ರಾಜವಂಶವೊಂದರ ಆವಿರ್ಭಾವಕ್ಕೆ ನಾಂದಿ ಹಾಡಿದ. ಇಕ್ಷ್ವಾಕುವಾದರೂ ಕಠಿಣ ತಪಸ್ಸಿನಿಂದ ನಾರಾಯಣ ದೇವರನ್ನು ಒಲಿಸಿ, ತನ್ನ ವಂಶದಲ್ಲಿ ಅವತರಿಸಬೇಕೆಂದು ವರ ಪಡೆದವನು; ಆ ವರದ ಫಲಿತವೇ ರಾಮಾಯಣ.
ಇಷ್ಟಕ್ಕೇ ಮುಗಿಯುವುದಿಲ್ಲ ಸೂರ್ಯವಂಶದ ಮಹತಿ
ಸಣ್ಣ-ಪುಟ್ಟ ಕೆರೆ-ಕಟ್ಟೆಗಳನ್ನು ಕಟ್ಟಿಸಿದವರು ಲೋಕದಲ್ಲಿ ದೊಡ್ಡವರೆನಿಸಿಬಿಡುತ್ತಾರೆ. ತುದಿಮೊದಲಿಲ್ಲದ ತನ್ನ ಮಕ್ಕಳ ಸಾಲನ್ನೇ ಕಾರ್ಮಿಕ-ಸೈನ್ಯವಾಗಿಸಿಕೊಂಡು ಸಾಗರವನ್ನೇ ತೋಡಿಸಿದ ಸೂರ್ಯವಂಶಭೂಷಣ ಸಗರ ಚಕ್ರವರ್ತಿಯ ಮುಂದೆ ಅಂಥವರೆಲ್ಲರೂ ಸೂರ್ಯೋದಯದ ಬಳಿಕದ ತಾರೆಗಳು! ಸಾಗರಕ್ಕೆ ಆ ಹೆಸರು ಬಂದುದೇ ಸಗರ ಚಕ್ರವರ್ತಿಯು ಅದನ್ನು ನಿರ್ಮಿಸಿದ ಕಾರಣದಿಂದ.
ಇನ್ನು, ದೇವಗಂಗೆಯನ್ನು ಧರೆಗಿಳಿಸಿದ ರಾಜಾ ಭಗೀರಥನು ಇದೇ ವಂಶದವನು. ಗಂಗೆಯಿಲ್ಲದ, ಸಾಗರವಿಲ್ಲದ ಭೂಮಿಯನ್ನು ಕಲ್ಪಿಸಿಕೊಳ್ಳಲಾದರೂ ಸಾಧ್ಯವೇ? ಈ ಲೋಕಕ್ಕೆ ಗಂಗೆ-ಸಾಗರಗಳನ್ನು ನೀಡಿದ ವಂಶದ ಋಣವನ್ನು ಜೀವಲೋಕವು ಎಂದಾದರೂ ತೀರಿಸಲು ಸಾಧ್ಯವೇ?
ಇಷ್ಟೆಲ್ಲ ಹಿರಿಮೆ-ಗರಿಮೆಗಳನ್ನಾಂತ ಮಹಾವಂಶದಲ್ಲಿ ಘಟಿಸಿದ ಮಹತ್ತರ ಘಟನಾವಳಿಯೇ ರಾಮಾಯಣ. ದೊಡ್ಡ ವಂಶವೊಂದರಲ್ಲಿ ನಡೆದ ಘಟನಾವಳಿಯು ಎದ್ದು ಕಾಣಿಸಬೇಕಾದರೆ ಅದು ಬಹು ದೊಡ್ಡದೇ ಆಗಿರಬೇಕಲ್ಲವೇ? ದೊಡ್ಡದರಲ್ಲಿ ದೊಡ್ಡದಾದ ಈ ಮಹಾಚರಿತವನ್ನು ಸಣ್ಣದರಲ್ಲಿ ಸಣ್ಣದಾದ ಬಾಯಿಯಿಂದ ಹೇಳುವೆವು. ದೊಡ್ಡ ಮನಸ್ಸಿನಿಂದ ಅವಧರಿಸಬೇಕು.
ನಾಕದ ನಾಡಿನೊಳಗೆ ನದಿ ಹರಿದಿದೆ ನಗುವಾಗಿ ಸೃಷ್ಟಿಕರ್ತನ ಮಾನಸವೇ ಕರಗಿ ನೀರಾಗಿ ಸರೋವರವಾಗಿ ಅದು 'ಮಾನಸಸರೋವರ'ವೆನ್ನಿಸಿಕೊಂಡಿತು. ಆ ಸರದಲ್ಲಿ ಉಗಮಿಸಿ, ಸರಯೂ ಎನಿಸಿ, ಆರ್ಯಾವರ್ತದಲ್ಲಿ ಹರಿದು, ಕೊನೆಯಲ್ಲಿ ಗಂಗೆಯನ್ನು ಸೇರುವ ಪುಣ್ಯ ನದಿಯ ಇಕ್ಕೆಲಗಳಲ್ಲಿ ಹಬ್ಬ ಹರಡಿತ್ತು ಕೋಸಲವೆಂಬ ಶ್ರೇಷ್ಠವಾದ ನಾಡು. ಆನಂದದ ನಾಡು ಎಂದೇ ಕೋಸಲವನ್ನು ಕರೆಯಬಹುದಿತ್ತು; ಏಕೆಂದರೆ ಅಲ್ಲಿ ಎತ್ತೆತ್ತಲೂ ಆನಂದವೇ ತುಂಬಿ ನಾಡಿಗೆ ನಾಡೇ ನಗುವಾಗಿ ನಲಿಯುತ್ತಿತ್ತು. ಸಮೃದ್ಧಿಯ ನಾಡಾದ ಕೋಸಲದಲ್ಲಿ ಸಂಪತ್ತಿಗೂ ಕೊರತೆ ಇರಲಿಲ್ಲ; ದವನ-ಧಾನ್ಯಗಳೂ ತೀರದಷ್ಟಿದ್ದವು.
ಅಯೋಧ್ಯೆಯು ಕೋಸಲದ ರಾಜಧಾನಿ. ವಿಶ್ವವೆಲ್ಲವನ್ನೂ ಆಳುವ ವಿಶ್ವಾಧೀಶ ಚಕ್ರವರ್ತಿಗಳ ಶಾಸನಕೇಂದ್ರವಾದುದರಿಂದ ಅದು ವಿಶ್ವದ ರಾಜಧಾನಿಯೂ ಆಗಿತ್ತು. ಆ ಕಾಲವು ಹೇಗಿತ್ತೆಂದರೆ- ಯಾರು ಸೂರ್ಯನನ್ನು ಬಲ್ಲರೋ ಅವರೆಲ್ಲರೂ ಸೂರ್ಯವಂಶವನ್ನು ಬಲ್ಲರು, ಅಷ್ಟೇ ಅಲ್ಲ, ಸೂರ್ಯವಂಶೀಯರ ರಾಜಧಾನಿಯಾದ ಅಯೋಧ್ಯೆನ್ನೂ ಬಲ್ಲರು! ಸೂರ್ಯನ ಬೆಳಕನ್ನು ಕಾಣದವರಿಲ್ಲ; ಅಯೋಧ್ಯೆಯ ಹೆಸರನ್ನು ಕೇಳದವರಿಲ್ಲ.
ಅಯೋಧ್ಯೆಯು ಅದೆಷ್ಟು ಪ್ರಾಚೀನವಾದ ನಗರಿಯಾಗಿತ್ತೆಂದರೆ ಮನುಷ್ಯಕುಲದ ಮೂಲಪುರುಷನೂ, ಈ ಜಗದ ಮೊಟ್ಟ ಮೊದಲದೊರೆಯೂ ಆಗಿದ್ದ ಮನು ಚಕ್ರವರ್ತಿಯು ತಾನೇ ಸ್ವಯಂ ನಿರ್ಮಿಸಿದ ನಗರಿ ಅದು. ಎಂದರೆ, ಮಾನವತೆಯು ಇನ್ನೂ ಸರಿಯಾಗಿ ಕಣ್ಬಿಡುವ ಮೊದಲೇ ಅಯೋಧ್ಯೆಯ ಅಸ್ತಿತ್ವಕ್ಕೆ ಬಂದಿತ್ತು!
ಈ ಪರಿಯ ಪುರಿಯನೆಲ್ಲಿ ನೋಡುವಿರಿ?
ಅಯೋಧ್ಯೆಯು ಅಪರೂಪದಲ್ಲಿ ಅಪರೂಪದ ವಿನ್ಯಾಸವನ್ನು ಹೊಂದಿತ್ತು. ಅದು ಬೇರೆಲ್ಲ ನಗರಗಳಂತೆ ವೃತ್ತಾಕಾರವಾಗಿಯೋ, ಚೌಕಾಕಾರವಾಗಿಯೋ, ಆಯತಾಕಾರವಾಗಿಯೋ ಇರಲಿಲ್ಲ. ಒಂದರೊಳಗೊಂದು ಹಾದು ಹೋಗುವ ಎರಡು ಆಯತಗಳಂತೆ ಅದರ ವಿನ್ಯಾಸವಿತ್ತು. ಪಗಡೆಯ ಆಟದ ಪಟಕ್ಕೆ ಅಥವಾ ಗಣಿತದ ಕೂಡು ಚಿಹ್ನೆ(+)ಗೆ ಅಯೋಧ್ಯೆಯ ಆಕೃತಿಯನ್ನು ಹೋಲಿಸಬಹುದಿತ್ತು. ಪಗಡೆಯ ಪಟದಲ್ಲಿ ಒಂದು ಆಯತವು ಉದ್ದವಗಾಇದ್ದರೆ ಮತ್ತೊಂದು ಆಯತವು ಕೊಂಚ ಗಿಡ್ಡವಾಗಿರುತ್ತದೆ. ಹಾಗೆಯೇ ಇತ್ತು ಅಯೋಧ್ಯೆ. ಹನ್ನೆರಡು ಯೋಜನ ಉದ್ದದ ಒಂದು ಆಯತ. ಮೂರು ಯೋಜನ ಅಗಲದ ಮತ್ತೊಂದು ಆಯತ. ಹನ್ನೆರಡು ಯೋಜನ ಉದ್ದದ ಆಯತದ ಸರಿಯಾದ ಮಧ್ಯದಲ್ಲಿ ಮೂರು ಯೋಜನದ ಇನ್ನೊಂದು ಆಯತವು ಅಡ್ಡಲಾಗಿ ಹಾದು ಹೋಗಿತ್ತು.
ಎರಡೂ ಆಯತಗಳೂ ಸಂಧಿಸುವ ಬಿಂದುವಿನಲ್ಲಿ, ನಗರದ ಹೃದಯಭಾಗದಲ್ಲಿ ರಾಜಭವನವಿತ್ತು. ಅದು ನಗರಿಯ ನಾರಿಗೆ ತಿಲಕವಿಟ್ಟಂತೆ ಶೋಭಿಸುತ್ತಿತ್ತು. ಅಲ್ಲಿಂದ ಆರಂಭಗೊಂಡು ನಾಲ್ಕೂ ದಿಕ್ಕಿಗೆ ನಾಲ್ಕು ರಾಜಮಾರ್ಗಗಳು ತೆರಳಿದ್ದವು. ರಾಜಮಾರ್ಗಗಳು ಸುವಿಶಾಲವಾಗಿದ್ದವು ಮತ್ತು ಸುವ್ಯವಸ್ಥಿತವಾಗಿ ವಿಭಾಗಿಸಲ್ಪಟ್ಟಿದ್ದವು. ರಾಜಮಾರ್ಗದ ಎರಡೂ ಪಾರ್ಶ್ವಗಳಲ್ಲಿ ಏಳು ಮಹಡಿಯ ಸೌಧಗಳು ಸಾಲು ಸಾಲಾಗಿ ನಿರ್ಮಿಸಲ್ಪಟ್ಟಿದ್ದವು. ಅವುಗಳೂ ಅತ್ಯಂತ ವ್ಯವಸ್ಥಿತವಾಗಿ ವಿಭಾಗಿಸಲ್ಪಟ್ಟಿದ್ದವು. ಭವನಗಳ ನಡುವೆ, ಒಳಗೆ, ಹೊರಗೆ ಸಾಕಷ್ಟು ಅವಕಾಶವನ್ನು ಕಲ್ಪಿಸಲಾಗಿತ್ತು. ಮನೋಹರವಾದ ಮತ್ತು ಚಿತ್ರವಿಚಿತ್ರವಾದ ಆ ಭವನಗಳನ್ನು ಅತ್ಯಂತ ಸುಂದರವಾಗಿ ಸಂಯೋಜಿಸಲಾಗಿತ್ತು. ಅಂಗಡಿ-ಮುಂಗಟ್ಟುಗಳೂ ಅಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿಯೇ ಇದ್ದವು. ಅವು ಅದಕ್ಕೆಂದೇ ಮೀಸಲಾದ ಸ್ಥಳದಲ್ಲಿ, ಸುವ್ಯವಸ್ಥಿತವಾದ ಮತ್ತು ಯೋಜಿತವಾದ ರೀತಿಯಲ್ಲಿಯೇ ಇದ್ದು, ನಗರದ ಶೋಭೆಯನ್ನು ಬಹುತರವಾಗಿ ಹೆಚ್ಚಿಸಿದ್ದವು.
*******
ದಶರಥ ರಾಜ್ಯ- ಶ್ರೀಮದ್ವಾಲ್ಮೀಕಿ ರಾಮಾಯಣದ ಬಾಲಕಾಂಡ 5ನೇ ಸರ್ಗ
ಉಪಯುಕ್ತ ನ್ಯೂಸ್ ಬಳಗ ಆರಂಭಿಸುತ್ತಿರುವ ರಾಮಾಯಣ ಕಥಾಲೇಖನ ಅಭಿಯಾನವನ್ನು ಶ್ರೀ ಗೋಕರ್ಣಮಂಡಲಾಧೀಶ್ವರ ಶ್ರೀರಾಮಚಂದ್ರಾಪುರ ಮಠದ ಯತಿವರೇಣ್ಯರಾದ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸಿದ ಭಾವರಾಮಾಯಣದ ಪ್ರಾರಂಭಿಕ ಭಾಗದಿಂದ ಆಯ್ದುಕೊಳ್ಳಲಾಗಿದೆ. ಇದು ಲೇಖನ ಅಭಿಯಾನಕ್ಕೆ ಪ್ರವೇಶಿಕೆಯಾಗಲಿದೆ. ಸಹೃದಯಿ ಓದುಗರು ಭಾವರಾಮಾಯಣದ ಪೂರ್ಣ ಓದನ್ನು ಶ್ರೀಗಳು ಅನುಗ್ರಹಿಸಿದ ಕೃತಿಗಳಲ್ಲಿ ಓದಬಹುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ