ಒಂದು ನೆನಪು
ನಮ್ಮ 'ಗೆಳೆತನ'ಕ್ಕೆ 40 ವರ್ಷಗಳಾದುವೋ ನೆನಪಿಲ್ಲ! ಆದರೂ ಮೊನ್ನೆ ಮೊನ್ನೆ ಭೇಟಿಯಾದೆವೇನೋ ಎನ್ನುವ ಭಾವ! ನನಗೂ ಆ ಚಿಂತೆ ಇಲ್ಲ, ಅವರಿಗೂ ಆ ಚಿಂತೆ ಇಲ್ಲ. ಆದರೆ ಭೇಟಿಯಾದಾಗ ಮಾತ್ರ ಬಾಯ್ತುಂಬಾ ಮಾತು-ಕತೆ. ಇಂಥಾ ಅಂಬರೀಶ್ ಅವರನ್ನು ಮೀಟ್ ಮಾಡದೇ ವರ್ಷಗಳೇ ಕಳೆದಿದ್ದುವು. 'ಸುದ್ದಿಟಿವಿ'ಯ ಉದ್ಘಾಟನಾ ಸಮಾರಂಭಕ್ಕೆ ಕರೆದದ್ದೆಷ್ಟೋ ಅಷ್ಟೇ! ಆ ದಿನ ಸ್ಯಾಂಕಿ ರಸ್ತೆಯ ಪ್ರೆಸ್ಟೀಜ್ ಅಪಾರ್ಟ್ಮೆಂಟ್'ನಲ್ಲಿ ಭೇಟಿಯಾದಾಗ ಸಚಿವರೊಬ್ಬರು ಜತೆಗಿದ್ದರು. ಹೀಗಾಗಿ ದೀರ್ಘ ಮಾತು-ಕತೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಸಿಕ್ಕ ಆಯಾಚಿತವಾದ ಅವಕಾಶವೊಂದನ್ನು ವ್ಯರ್ಥವಾಗಿ ಬಿಟ್ಟು ಕೊಡಲು ಮನಸ್ಸಾಗಲಿಲ್ಲ. ಅದು 'ಅಂಬಿ ನಿಂಗೆ ವಯಸ್ಸಾಯಿತಲ್ಲೋ' ಚಿತ್ರದ ಪತ್ರಿಕಾಗೋಷ್ಠಿ. ಪ್ರೀತಿಯ ನಟ ಸುದೀಪ್ ಅರೇಂಜ್ ಮಾಡಿದ ಪತ್ರಿಕಾಗೋಷ್ಠಿ. ಇಬ್ಬರೂ ಜೊತೆಗೆ ಸಿಗುವ ಸಂಭ್ರಮ! ಹೋದೆ. ಜೊತೆಗೆ ಸಿಂಗಾಪುರದಿಂದ ಬಂದಿದ್ದ ಕಿರಿಯ ಗೆಳೆಯ ಸಿದ್ದು ಬಸವಯ್ಯ ಇದ್ದರು. ಮಧ್ಯಾಹ್ನ ಸಿಟಿ ಇನ್ಸ್ಟಿಟ್ಯೂಟ್'ನಲ್ಲಿ ಊಟ ; ನಾನು, ನನ್ನ ಪತ್ನಿ ಗಾಯತ್ರಿ ಮತ್ತು ಸಿದ್ದು.
ಒಂದು ಸಸ್ಪೆನ್ಸ್ ಇರಲಿ ಅಂತ ಸಿದ್ದುವಿಗೆ ವಿಷಯ ತಿಳಿಸದೇ Atria ಹೋಟೆಲು ಕಡೆ ಡ್ರೈವ್ ಮಾಡಿದೆ! ಅಲ್ಲಿಗೆ ಹೋದ ಮೇಲೆ ಪತ್ರಿಕಾಗೋಷ್ಠಿಯ ವಿವರ ತಿಳಿದು ಸಿದ್ದು ಮುಖ ಇಷ್ಟಗಲವಾಯಿತು! ಯಥಾ ಪ್ರಕಾರ ನಿಗದಿತ ಸಮಯಕ್ಕಿಂತಲೂ ಒಂದೂವರೆ ಗಂಟೆ ತಡವಾಗಿ ಅಂಬರೀಶ್ ಆಗಮನವಾಯಿತು. ಬರುತ್ತಲೇ ಆ ಹಾಲ್'ನ ಮೂಲೆಯೊಂದರಲ್ಲಿ ಆಸೀನರಾಗಿ ಸಿಗರೇಟು ಸೇದಲು ಶುರುವಿಟ್ಟುಕೊಂಡರು ಅಂಬಿ! ನಾನು ವಿಶ್ ಮಾಡಿ ಅಂಬಿಯಿಂದ ಸ್ವಲ್ಪ ದೂರದಲ್ಲಿ ಕುಳಿತೆ. 'ಅಯ್ಯೋ ಬರ್ರೀ...' ಎಂದು ಹೇಳುತ್ತಾ ತಮ್ಮ ಪಕ್ಕ ತಾವೇ ಒಂದು ಚೇರ್ ಎಳೆದು ನನ್ನನ್ನು ಅಕ್ಷರಶಃ ಕೂರಿಸಿದರು! ನನ್ನ ಜೊತೆಗಿದ್ದ ಸಿದ್ದು ಮತ್ತು ನನ್ನಾಕೆಗೂ ಎರಡು ಚೇರ್ ಎಳೆದು ಕೂರಲು ಸೂಚಿಸಿದರು. ಮಾತು-ಕತೆ ಇಂದಿನ ಚಿತ್ರರಂಗ, ಪತ್ರಿಕಾರಂಗದ ಕಡೆ ಹೊರಳಿದ್ದೇ ತಡ ಅಂಬಿ ರಾಂಗ್ ಆಗಿ ಬಿಟ್ರು. ಚಾನಲ್'ವೊಂದರ ನಿರೂಪಕರಿಗೆ ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆಯಲು ಶುರುವಿಟ್ಟುಕೊಂಡರು. ಅದು 'ಸಂಸ್ಕೃತ' ಕ್ಲಾಸ್! ಗೊತ್ತಲ್ಲ? ಅಂಬಿ ಕಣ್ಣಲ್ಲಿ ಕೆಂಡ, ಬಾಯಲ್ಲಿ ಹೊಗೆ! ನಿರೂಪಕರ ಜನ್ಮ ಜಾಲಾಡಿದ್ದು ಏಕೆ ಎಂದು ಮಾತ್ರ ಗೊತ್ತಾಗಲಿಲ್ಲ. ಅವರು ಯಾರೆಂದೂ ಗೊತ್ತಾಗಲಿಲ್ಲ ಮತ್ತು ಈ 'ಸಂಸ್ಕೃತ'ದ ಕೆಟ್ಟ ಬೈಗುಳ ಯಾಕೆಂದೂ ಗೊತ್ತಾಗಲಿಲ್ಲ! ಅಂಬಿಯದ್ದು ಯಾವತ್ತಿದ್ದರೂ ನೇರ ದಿಟ್ಟ ನಿರಂತರ ಬೈಗುಳ!
ಈ ಎಲ್ಲದರ ನಡುವೆ ನನಗೆ ವಯಕ್ತಿಕವಾಗಿ ತುಂಬಾ ಖುಷಿಕೊಟ್ಟ ವಿಚಾರವೆಂದರೆ ಅಂಬರೀಶ್ ಹಿರಿಯ ಪತ್ರಕರ್ತರೊಬ್ಬರ ಜೊತೆಗಿನ ತಮ್ಮ ಸ್ನೇಹ ಸಂಬಂಧವನ್ನು ನೆನಪಿಸಿಕೊಂಡದ್ದು! ಹೌದು, ಅಂದಿನ ಪತ್ರಿಕಾಗೋಷ್ಠಿಗೆ ಮೈಸೂರಿನಿಂದ ಕೆ.ಜೆ.ಕುಮಾರ್ ಬಂದಿದ್ದರು. ಪತ್ರಿಕಾ ಗ್ಯಾಲರಿಯಲ್ಲಿ ಅವರನ್ನು ಕಂಡ ಅಂಬಿ, ಈಗಿನ ಪೀಳಿಗೆಯ ಯುವ ಪತ್ರಕರ್ತರಿಗೆ ತಮ್ಮ ಮತ್ತು ಅವರ ನಡುವಿನ ಸ್ನೇಹದ ವಿವರವನ್ನು ತಿಳಿಸಿದರು. 40 ವರ್ಷಗಳ ಹಿಂದೆ ಮೈಸೂರಿನ ಬೀದಿಗಳಲ್ಲಿ ಸ್ಕೂಟರ್'ನಲ್ಲಿ ಕೂರಿಸಿಕೊಂಡು ಓಡಾಡಿದ್ದು, ಸಂಜೆಯ ಹೊತ್ತು ಯಾವುದೋ ಹೋಟೆಲಿನಲ್ಲಿ ಉಂಡದ್ದು, ತಮ್ಮ ಬಗ್ಗೆ ಪತ್ರಿಕೆಗಳಲ್ಲಿ ಬರೆದು ವೃತ್ತಿಬದುಕಿಗೆ ಅಡಿಪಾಯ ಹಾಕಿದ್ದು... ಹೀಗೆ ಸಾಗಿತ್ತು ಗೆಳೆಯನ ಗುಣಗಾನ. ಆ ಕಡೆ ಗೆಳೆಯ ಕುಮಾರ್ ದಿಲ್'ಖುಷ್, ಈ ಕಡೆ ಸಿದ್ದು ದಿಲ್'ಖುಷ್! ಅಂದಿನ ಸಾರ್ಥಕ ಸಂಜೆಯನ್ನು ಕಳೆದು ಮನೆ ಕಡೆ ಹೊರಟಾಗ ಜಿಟಿ ಜಿಟಿ ಮಳೆ. ಈಗ ನನ್ನ ದಿಲ್'ಖುಷ್!
ಈ ದಿಲ್'ಖುಷ್ ಹೆಚ್ಚು ಸಮಯ ಉಳಿಯಲಿಲ್ಲ. ಅಂಬಿ ಈಗಿಲ್ಲ ಎನ್ನುವುದನ್ನು ನಂಬಲಿಕ್ಕಾಗುವುದಿಲ್ಲ. ನೇರ ದಿಟ್ಟ ನಿರಂತರದ ಸರದಾರ ಇನ್ನು ನೆನಪು ಮಾತ್ರ...
- ಗಣೇಶ್ ಕಾಸರಗೋಡು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ