ಪ್ರೋಪಿಕೊನಾಸೋಲ್ ಉಚಿತ ಹಂಚಿಕೆ ಹಿಂದೆ ಏನೋ 'ಅನುಮಾನ' ಮತ್ತು 'ಅಪಾಯ' ಎರಡೂ ಇದೆ ಅಂತ ಅನ್ನಿಸುತ್ತಿದೆ!!? ಶಿಫಾರಸ್ಸು ಮಾಡಿದ ಕೃಷಿ ವೈದ್ಯರು ಮತ್ತು ಹಂಚುವ ಸರಕಾರ ಮತ್ತು ಇಲಾಖೆಗಳು ಸ್ಪಷ್ಟನೆ ಕೊಡಬಹುದಾ?
ಅಡಿಕೆ ಎಲೆ ಚುಕ್ಕಿ ರೋಗಕ್ಕೆ ಉಚಿತವಾಗಿ ಕೊಡುತ್ತಿರುವ ಪ್ರೊಪಿಕೊನಾಸೋಲ್ 500ml ಬೆಲೆ MRP ₹ 1,070 ಇದೆ.
ಅಮೆಜಾನ್‌ನಲ್ಲಿ ₹.1,200 ಕ್ಕೆ ಎರಡು ಬಾಟಲಿ (500ml each) ಸಿಗುತ್ತೆ.
ಅಂದರೆ, ನಿಜ MRP ₹.600 ಅಂತಾಯ್ತು!! ಸರಕಾರವೆ ನೇರವಾಗಿ ಕೊಂಡು, ರೈತರಿಗೆ ಉಚಿತವಾಗಿ ಕೊಡುವಾಗ ಎಕ್ಸೈಜ್ ಡ್ಯುಟಿ, GST ಇರೋದಿಲ್ಲ. So, ಸುಮಾರಿಗೆ ₹400 ರ ಆಸುಪಾಸಿನಲ್ಲಿ ಇದರ ಬೆಲೆ ಇರಬಹುದು.
ಅಷ್ಟು ಬೆಲೆಯ ಪ್ರಾಪಿಕೋನಸೋಲ್‌ನ್ನು ಪಹಣಿ, ಪಾಸ್‌ಬುಕ್ಕು, ಆಧಾರ್, ಅರ್ಜಿ, ಫೋಟೋ.... ಎಲ್ಲ ಪಡೆದು ಉಚಿತವಾಗಿ ಕೊಡುವ ಲೆಕ್ಕದ ಡ್ರಾಮಾದಲ್ಲಿ ಯಾರ್ಯಾರಿಗೆ, ಏನೇನು, ಎಷ್ಟೆಷ್ಟು ಸಂದಾಯವಾಗಿರಬಹುದು? ಸಾಧ್ಯತೆ ಇಲ್ಲವಾ?
ಈ ಅನುಮಾನ ಯಾಕೇಂದರೆ, ಕಳೆದ ವರ್ಷಹೆಕ್ಸಾಕೊನಾಸೋಲ್ ಉಚಿತವಾಗಿ ಕೊಡುವಾಗಲೇ ಕೇಂದ್ರ ತಜ್ಞರ ಸಮಿತಿ ಶೃಂಗೇರಿಗೆ ಬಂದಿತ್ತು. ಆಗಲೂ ವಿಜ್ಞಾನಿಗಳು "ಅಡಿಕೆ ಎಲೆ ಚುಕ್ಕಿ ರೋಗದ ತೀವ್ರತೆಯ ಆಧಾರದ ಮೇಲೆ ಹೆಕ್ಸಾಕೊನಾಸೋಲ್, ಪ್ರಾಪಿಕೊನಸೋಲ್, ಟ್ಯುಬಿಕೊನಾಸೋಲ್ ನಂತಹ ಔಷಧಿಗಳನ್ನು ಸ್ಪ್ರೇ ಮಾಡಬೇಕು. ರೋಗ ಸಾಮಾನ್ಯ ಮಟ್ಟದಲ್ಲಿದ್ದರೆ ಇದನ್ನು ಸಧ್ಯಕ್ಕೆ ಸ್ಪ್ರೇ ಬೇಡ, ಸಧ್ಯಕ್ಕೆ ಬೋರ್ಡೋ ದ್ರಾವಣ ಸಾಕು" ಅಂದಿದ್ದರು. ಆಗ ರೈತರೂ "ನಮಗೆ ಉಚಿತವಾಗಿ ಇಂತಹ ಮುನ್ನೂರು-ನಾನೂರು ರೂಪಾಯಿಗಳ ಔಷಧಿ ಕೊಡುವುದು ಬೇಡವೇ ಬೇಡ. ಬದಲಿಗೆ ಸ್ಪ್ರೇ ಮಾಡುವ ಖರ್ಚನ್ನು ಕೊಡಲಿ" ಎಂದು ಒತ್ತಾಯಿಸಿದ್ದರು. ಆಗಿನ ಜನ ಪ್ರತಿನಿಧಿಗಳು ಇದನ್ನು ಒಪ್ಪಿದ್ದರು ಕೂಡ.
ಆದರೆ, ಯಾರ ಹಿತಾಸಕ್ತಿಯೋ? ಯಾರಿಗೆ ಪರ್ಸಂಟೇಜ್ ಲಾಭವೋ? ದೇವರೇ ಬಲ್ಲ!!
ಎಲ್ಲರ ತೋಟಕ್ಕೆ ಈ ಔಷಧಿಗಳು ಬೇಡ ಅಂತ ವಿಜ್ಞಾನಿಗಳು ಹೇಳಿದರೂ, ತಜ್ಞ ರೈತರುಗಳೇ ಬೇಡ ಅಂತ ಹೇಳಿದರೂ ಈ ವಿಷದ ಬಾಟಲಿಗಳನ್ನು ಉಚಿತವಾಗಿ, ತೋಟಗಾರಿಕೆ ಮೂಲಕ ಎಲ್ಲ ರೈತರಿಗೆ ಹಂಚುವ ಹಿಂದಿನ ಹಕೀಕತ್ ಏನು? ಅನುಮಾನ ಸಹಜ ಅಲ್ವಾ?
ಅಷ್ಟು ಮಾಡಿ ಹಂಚಿದಾಗ, ಪಡೆದ ರೈತರು, ಅಗತ್ಯ ಇಲ್ಲದಿರುವ ಪರಿಸ್ಥಿತಿಯಲ್ಲಿ (ಕಡಿಮೆ ರೋಗ ಇರುವ ಅಥವಾ ಈಗಾಗಲೆ ಬೋರ್ಡೋ ದ್ರಾವಣದಿಂದ ನಿಯಂತ್ರಣದಲ್ಲಿರುವ ತೋಟಗಳಿಗೆ ಅನಗತ್ಯವಾಗಿ ರೈತರು ಉಚಿತವಾಗಿ ಹ್ಯಾಗೂ ಕೊಟ್ಟಿದಾರಲ್ಲ ಎಂಬ ಕಾರಣದಿಂದ ಈ ವಿಷದ '...ಜೋಲ್'ಗಳನ್ನು ಸ್ಪ್ರೇ ಮಾಡಿದರೆ, ಅನಗತ್ಯವಾಗಿ ನಿರ್ಧಿಷ್ಟ ಫಂಗಸ್‌ಗಳಿಗೆ ರೆಸಿಸ್ಟೆಂಟ್ ಪವರ್ ವೃದ್ಧಿ ಮಾಡಿದ ಹಾಗಾಗುವುದಿಲ್ಲವಾ?
ಅನಗತ್ಯವಾದ ತೋಟಗಳಲ್ಲಿ ಹೊಡೆಯುವುದರಿಂದ ನೀರು, ಗಾಳಿ, ಮಣ್ಣು, ಸ್ಪ್ರೇ ಮಾಡುವವರಿಗೆ, ಪ್ರಾಣಿ ಪಕ್ಷಿ, ಪರಿಸರ ಸ್ನೇಹಿ ಕೀಟಗಳಿಗೆ ವಿಷ ಆಗುವುದಿಲ್ಲವಾ? ಅಪಾಯ ಅಲ್ವಾ?
ಸಮಸ್ಯೆ ತೀವ್ರವಾಗಿದ್ದಾಗ ಹೈ ಡೋಸ್ ಆ್ಯಂಟಿಬಯೋಟಿಕ್ ಕೊಡುವುದು ಅಗತ್ಯ. ಆದರೆ, ರೋಗದ ತೀವ್ರತೆಯನ್ನು ಪರಾಮರ್ಶಿಸದೆ, "ನೆಗಡಿ ಬಂದ ಎಲ್ಲರೂ ಹೈ ಡೋಸ್ ಆ್ಯಂಟಿಬಯೋಟಿಕ್ ತಗೊಳಿ" ಅಂತ ಹೇಳುವ ರೀತಿಯಲ್ಲಿ, ಎಲೆ ಚುಕ್ಕಿ ಕಾಣಿಸಿಕೊಂಡ ಎಲ್ಲ ತೋಟಗಳಿಗೂ ಪ್ರೊಪಿಕೊನಾಸೋಲ್ ಸ್ಪ್ರೇ ಮಾಡಿ ಅಂತ ಹೇಳಿ ಉಚಿತವಾಗಿ ಕೊಟ್ಟರೆ ಆಗುವ ಪರಿಣಾಮದ ಬಗ್ಗೆ ಪ್ರಜ್ಞಾವಂತ ಸರಕಾರಕ್ಕೆ ಅರಿವು ಬೇಡವಾ? ಇದೇನು ಔಷಧಿಯಾ? ವ್ಯಾಕ್ಸಿನ್ನಾ!?
ಎಲ್ಲಾ ಎಲೆ ಚುಕ್ಕಿ ಬಂದ ಅಡಿಕೆ ತೋಟಗಳಿಗೂ ಇದೇ ಪರಮ ಔಷಧ, ಇದನ್ನೇ ಹೊಡೆಯಿರಿ ಅಂತ ಹೇಳಿ ಉಚಿತವಾಗಿ ಹಂಚಲು ಶಿಫಾರಸ್ಸು ಮಾಡಿದವರ್ಯಾರು? ವಿಜ್ಞಾನಿಗಳು? ಸಂಶೋಧನಾ ಕೇಂದ್ರಗಳು? ಕೃಷಿ ತಜ್ಞರು?
ಕಳೆದ ವರ್ಷ ಹೆಕ್ಸಾಕೊನಾಸೋಲ್ ಕೊಟ್ಟಾಗಲೂ ಈ ಆಕ್ಷೇಪಣೆ ಬಂದಿದ್ದರೂ, ಈ ವರ್ಷ ಮತ್ತೆ ಅದೇ ರೀತಿ ಪ್ರೋಪಿಕೊನಾಸೋಲ್ ಪ್ರಿಸ್ಕ್ರಿಪ್ಷನ್ ಬರೆದು ಸರಕಾರಕ್ಕೆ ಕೊಟ್ಟ ಕೃಷಿ ವೈದ್ಯರು ಯಾರು?
ಎಲೆ ಚುಕ್ಕಿ ರೋಗದ ಬಗ್ಗೆ ಸಂಶೋಧನೆಗೆ ಬೇಕಾದ ₹ 10 ಕೋಟಿ ಕೊಡುವುದಕ್ಕೆ ಎರಡು ವರ್ಷಗಳಿಂದ ಸಾಧ್ಯವಾಗದ ಸರಕಾರಕ್ಕೆ, ಕೋಟಿ ಕೋಟಿ ಲೆಕ್ಕದ ಈ ಎಲೆ ಚುಕ್ಕಿ ರೋಗದ ವಿಷವನ್ನು ಉಚಿತವಾಗಿ ಹಂಚುವಲ್ಲಿ ವಿಶೇಷ ಮುತುವರ್ಜಿ ಏಕೆ?
ಅಷ್ಟಕ್ಕೂ, ಉಚಿತವಾಗಿ ಕೊಡುತ್ತಿರುವ ಎಲ್ಲ ರೀತಿಯ ಔಷಧಿಗಳು ಅಡಿಕೆ ಎಲೆ ಚುಕ್ಕಿ ರೋಗಕ್ಕೆ ರಾಮಬಾಣ ಅಂತ ತೀರ್ಮಾನಿಸುವ ಪೂರ್ಣ ಅಧ್ಯಯನ ಆಗಿಲ್ಲ. ಯಾವುದೋ ತರಕಾರಿ ಬೆಳೆಗಳಲ್ಲಿ ಕಂಡು ಬಂದ ಸಿಮಿಲಾರಿಟಿ ಫಂಗಸ್‌ಗೆ ಬಳಸಿದ ಔಷಧವನ್ನೇ ಅಡಿಕೆಗೆ ಕ್ಲಿನಿಕಲ್ ಟ್ರಯಲ್ ರೀತಿ ಬಳಸುತ್ತಿರುವುದು!!! ಟ್ರಯಲ್‌ನಲ್ಲೇ ಎಲ್ಲರಿಗೂ ಉಚಿತವಾಗಿ ಕೊಟ್ಟು, ಎಲ್ಲ ರೈತರನ್ನೂ, ರೈತರ ತೋಟಗಳನ್ನೂ ಪ್ರಯೋಗ ಪಶುಗಳನ್ನಾಗಿ ಮಾಡಲಾಗುತ್ತಿದೆ ಅಂತ ಅನಿಸುವುದಿಲ್ಲವಾ?
ಅಷ್ಟು ಮಾಡಿ ಈ ವಿಷಗಳನ್ನು ತಂದು ಹೊಡೆದರೂ... ,40-45 ದಿನಗಳ ನಂತರ ಸ್ಪ್ರೇ ಮಾಡಿದ ತೋಟಕ್ಕೂ, ಸ್ಪ್ರೇ ಮಾಡದಿರುವ ತೋಟಕ್ಕೂ ವ್ಯತ್ಯಾಸ ಇಲ್ಲಾಂದ್ರೆ .... ಈ ಉಚಿತ ಪ್ರೊಪಿಕೊನಾಸೋಲ್ ಒಂದು ದಂಧೆ ಅಂತ ಅನಿಸುವುದಿಲ್ವಾ?
ಫೈನಲಿ, ಈ ವಿಷಗಳನ್ನು ಬಳಸಿಕೊಂಡು ಯಾರೋ ಎಲ್ಲೋ ಚನ್ನಾಗಿ ಕೊಬ್ಬಿ ಬೆಳೆಯುತ್ತಿದ್ದಾರೆ... ಸೇಮ್ ಅಡಿಕೆ ಎಲೆ ಚುಕ್ಕಿ ಫಂಗಸ್ ರೀತಿಯಲ್ಲಿ!!!
ಕಳೆದ ವರ್ಷ ಉಚಿತ ಹೆಕ್ಸಾಕೊನಾಸೋಲ್ ದಂಧೆ.
ಈ ವರ್ಷ ಉಚಿತ ಪ್ರೋಪಿಕೊನಾಸೋಲ್ ದಂಧೆ,
ಮುಂದಿನ ವರ್ಷ ಬಹುಶಃ ಟ್ಯುಬಿಕೊನಾಸೋಲ್ ದಂಧೆಯ ಜಾತ್ರೆ!!!
ಎಲ್ಲೂ ಸಂಪೂರ್ಣ ಎಲೆ ಚುಕ್ಕಿ ಹೋಗಿಲ್ಲ. ಮಳೆ ಕಮ್ಮಿ ಆದಾಗ ಎಲ್ಲ ತೋಟಗಳು ಸಹಜ ನಿಯಂತ್ರಣದಲ್ಲಿ ಇವೆ.
ಅವ್ಯಾಹತವಾಗಿ ವಿಸ್ತರಿಸುತ್ತಿರುವುದು ಮಳೆ ಬಂದಾಗ LSD ಮತ್ತು ಉಚಿತಗಳ ದಂಧೆ ಮಾತ್ರ!!!.
-ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ