ನಾನೊಬ್ಬ ಪ್ರಕೃತಿ ಪ್ರೇಮಿ, ಪ್ರಕೃತಿ ಸೌಂದರ್ಯ ನನ್ನನ್ನು ಅಪಾರವಾಗಿ ಆಕರ್ಷಿಸಿದೆ. ನಿಸರ್ಗದ ಬೆಟ್ಟ ಗುಡ್ಡ ಕಾಡು ಕಣಿವೆ ಹಕ್ಕಿ ಪಕ್ಷಿಗಳು ಇವೆಲ್ಲವು ನನಗಿಷ್ಟ. ಈ ದೃಶ್ಯಾವಳಿಗಳು ನನಗೆ ಚಿತ್ರ ಬಿಡಿಸುವಂತೆ ಕಾಡಿಸಿವೆ. ಚಿಕ್ಕಮಗಳೂರು ಮಡಿಕೇರಿ ಕಾಡು ತೋಟಗಳಲ್ಲಿ ತಿರುಗಾಡಿದ್ದೇನೆ. ಹಾಸನ ಹುಣಸಿನಕೆರೆ ಪರಿಸರದಲ್ಲಿ ನಮ್ಮ ತಂದೆ ಅನೇಕ ಕಾರ್ಯಕ್ರಮ ರೂಪಿಸಿ ನಾನು ಈ ಕೆರೆ ದೃಶ್ಯವನ್ನು ಕೇಂದ್ರೀಕರಿಸಿ ಕಾಡಿನ ರಮ್ಯ ತಾಣಗಳು ನನ್ನ ಪ್ರಕೃತಿ ಚಿತ್ರಣದಲ್ಲಿ ಮರುರೂಪ ಪಡೆದಿವೆ ಎನ್ನುವ ಹಾಸನದ ಪ್ರತಿಭಾನ್ವಿತ ಚಿತ್ರಕಲಾವಿದರು ಬಿ.ಶಶಿಕಿರಣ್ ದೇಸಾಯಿ.
ಹಾಸನದಲ್ಲಿ ಚಿತ್ಕಲಾ ಫೌಂಡೇಷನ್ ಕಾರ್ಯದರ್ಶಿಯಾಗಿ ಕೆಲವು ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮ ನಡೆಸಿದ್ದಾರೆ. ಇವರ ತಂದೆ ಬಿ.ಎಸ್.ದೇಸಾಯಿ ಚಿತ್ರಕಲಾ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಒಂದು ಕಡೆ ಅಪ್ಪಾಜಿಗೌಡರು ಬರೆದಂತೆ ಅಪ್ಪನಂತೆ ಮಗ ಮರದಂತೆ ನೊಗ ಎಂಬ ಮಾತಿನಂತೆ ತಂದೆಯ ಮಾರ್ಗದರ್ಶನದಲ್ಲಿ ಚಿತ್ರಕಲೆಯಲ್ಲಿ ಭರವಸೆಯ ಆಶಾಕಿರಣವಾಗಿ ಹೊರಹೊಮ್ಮಿರುವ ಶಶಿಕಿರಣ್ ದೇಸಾಯಿ ಅವರ ಜನ್ಮದಿನಾಂಕ 21-8-1987. ಹಾಸನದ ನಿರ್ಮಲ ಚಿತ್ರಕಲಾ ಶಾಲೆಯಲ್ಲಿ ಎರಡು ವರ್ಷ, ಮೈಸೂರಿನಲ್ಲಿ ಮೂರು ವರ್ಷ ಚಿತ್ರಕಲೆಯ ವ್ಯಾಸಂಗ ಮಾಡಿದ್ದು ಪ್ರಾಂಶುಪಾಲರು ಮತ್ತು ಕಲಾವಿದರು ಆದ ಶ್ರೀ ಮಹದೇವಶೆಟ್ಟಿ ಕೆ.ಸಿ. ಅವರು ‘ ಶಶಿ ನಮ್ಮ ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಮೈಸೂರು ಇಲ್ಲಿ ವ್ಯಾಸಂಗ ಮುಗಿಸಿ ಪ್ರಸ್ತುತ ಪ್ರಜಾವಾಣಿ ಪತ್ರಿಕೆಯಲ್ಲಿ ಕಲಾವಿದರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಲಾವಿದರ ಮನೆಯಲ್ಲಿ ಜನಿಸಿದ ಶಶಿ ಇಂದು ನಾಡಿನ ಹೆಸರಾಂತ ಯುವ ಕಲಾವಿದರ ಸಾಲಿನಲ್ಲಿ ನಿಲ್ಲುವವರು. ಧಾರವಾಡದ ಸೃಜನ ಮಹಾವಿದ್ಯಾಲಯದಲ್ಲಿ ಒಂದು ವರ್ಷ ಬ್ರಿಡ್ಜ್ ಕೋರ್ಸ್ ಮಾಡಿದ್ದಾರೆ. 2009ರಲ್ಲಿ ಹಾಸನದ ಪೋದರ್ ಇಂಟರ್ ನ್ಯಾಷನಲ್ ಸ್ಕೂಲ್‍ನಲ್ಲಿ ಕಲಾಶಿಕ್ಷಕ ವೃತ್ತಿ ಮಾಡಿ 2010ರಲ್ಲಿ ಇದೇ ಶಾಲೆಯಲ್ಲಿ ತಮ್ಮ ಕಲಾಕೃತಿ ಪ್ರದರ್ಶಿಸಿದ್ದರು. ಕರ್ನಾಟಕ ಲಲಿತ ಕಲಾ ಅಕಾಡೆಮಿ ಧನ ಸಹಾಯದಲ್ಲಿ 2011ರಲ್ಲಿ ದಾವಣಗೆರೆ ಲಲಿತಾ ಕಲಾ ಮಹಾ ವಿದ್ಯಾಲಯದಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಮಾಡಿದ್ದಾರೆ. ಇಲ್ಲಿಯ ಪ್ರದರ್ಶನ ಚಿತ್ರಗಳ ಕುರಿತ್ತಾಗಿ ನಾನು ಆಗಲೇ ಬರೆದಿದ್ದೆನು.
ಜಲವರ್ಣದಲ್ಲಿ ರಚಿಸಿದ ಹಂಪಿಯ ಕೃಷ್ಣ ದೇವಾಲಯದ ಬಲ ಭಾಗದ ದೃಶ್ಯದ ಲ್ಯಾಂಡ್‍ಸ್ಕಪ್ ಅಕ್ಕತಂಗಿ ಬಂಡೆ ಕಲ್ಲಿನ ರಥ ಇರುವ ಬಲಭಾಗದ ಭೂ ದೃಶ್ಯ, ಕೆಮ್ಮಣ್ಣು ಗುಂಡಿಯ ಪ್ರಕೃತಿ ದೃಶ್ಯ ಸಹಜವಾಗಿ ಮೂಡಿ ಬಂದಿವೆ. ಪೋಟೋಗ್ರಫಿಯಿಂದ ಸೆರೆ ಹಿಡಿಯಲಾಗದ ದೃಶ್ಯಾವಳಿಗಳನ್ನು ಕುಂಚದಲ್ಲಿ ಕಲಾತ್ಮಕವಾಗಿ ಸೆರೆ ಹಿಡಿದಿದ್ದಾರೆ. ಹಂಪಿಯ ಗೋಪುರದ ಚಿತ್ರಣವು ಚಿನ್ನದ ಹೊಳಪಿನಲ್ಲಿ ಆಕರ್ಷಣೀಯವಾಗಿ ಮೂಡಿ ಬಂದಿದೆ. ಅಕ್ರೆಲಿಕ್ ಮಾಧ್ಯಮದಲ್ಲಿ ರೂಪಿಸಿರುವ ಎರಡು ಅಡಿ ಉದ್ದ ಅಗಲದ ವಾಟರ್ ಲಿಲ್ಲಿ ಸಿರೀಸ್‍ನ ಕ್ಯಾನ್‍ವಾಸ್‍ಗಳಲ್ಲಿ ಕೆರೆಯ ನೀರಿನಲ್ಲಿ ಹೂವುಗಳು ಅರಳಿ ನಿಂತಿವೆ. ಕ್ರಿಯೇಟಿವ್ ಆರ್ಟ್ ಸ್ಟಿಲ್ ಲೈಫ್ ಯಾಂತ್ರಿಕ ಬದುಕಿನ ಅಂತಿಮ ಯಾತ್ರೆಯನ್ನು ಸಾಂಕೇತಿಸಿದೆ.
ಇವರ 2ನೇ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ 2012ರಲ್ಲಿ ಹಾಸನದಲ್ಲಿ ನಡೆದಿತ್ತು. ಇದಾದ 10 ವರ್ಷಗಳ ನಂತರ 2022ರಲ್ಲಿ 3ನೇ ಸೋಲೋ ಶೋ ‘ಪ್ರಕೃತಿಯ ಭಾವ-ಬಣ್ಣ ಬೆಡಗು’ ಶೀರ್ಷಿಕೆಯಡಿ ಹಾಸನ ಕಲಾಭವನz ಮೊಗಸಾಲೆಯಲ್ಲಿ ನಡೆದಿತ್ತು. ಇವರು ಉತ್ತರ ಕರ್ನಾಟಕ ಜನಪದೋತ್ಸವ ಆರ್ಟ್ ಕ್ಯಾಂಪ್, ರವೀಂದ್ರ ಕಲಾಕ್ಷೇತ್ರ ಬೆಂಗಳೂರು, ಆಳ್ವಾಸ್ ವರ್ಣಜಾಗೃತಿ, ಆರ್ಟ್ ಕ್ಯಾಂಪ್, ಮೂಡಬಿದಿರೆ, ಕೆಮ್ಮಣ್ಣುಗುಂಡಿ, ಹಂಪಿ ಲ್ಯಾಂಡ್‍ಸ್ಕೇಪ್ ಕ್ಯಾಂಪ್, ಮೈಸೂರಿನ ಕಲಾಮಂದಿರದಲ್ಲಿ ನಡೆದ ಗ್ಲಾಸ್ ಎಚ್ಚಿಂಗ್ ಕ್ಯಾಂಪ್, ಸ್ವದೇಶಿ ಮೇಳ ಆರ್ಟ್ ಕ್ಯಾಂಪ್ ಬೆಂಗಳೂರು ಇಲ್ಲಿ ನಡೆದ ಕರ್ನಾಟಕ ಕಲಾಮೇಳದಲ್ಲಿ ಭಾಗವಹಿಸಿದ್ದಾರೆ.
2006 ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಕಲಾವಿದರ ಕ್ಯಾಂಪಿನಲ್ಲಿ ಭಾಗವಹಿಸಿದ್ದಾರೆ. ಸಮೂಹ ಚಿತ್ರಕಲಾ ಪ್ರದರ್ಶನಗಳಲ್ಲಿ ಕರ್ನಾಟಕ ಲಲಿತಾ ಅಕಾಡೆಮಿಯ ಗೋವಾ ಪ್ರದರ್ಶನದಲ್ಲಿ, ಬೆಂಗಳೂರಿನ ಆರ್ಟ್ ಫ್ಲಟ್ ಗ್ಯಾಲರಿಯಲ್ಲಿ 3 ವರ್ಷ, ಬೆಂಗಳೂರಿನ ಚಿತ್ರಸಂತೆಯಲ್ಲಿ ಮೂರು ವರ್ಷ, ಮೈಸೂರು ದಸರಾ ಪ್ರದರ್ಶನದಲ್ಲಿ ಮೈಸೂರು ಕಲಾನಿಕೇತನ ಶಾಲೆಯಲ್ಲಿ, ಚನ್ನರಾಯಪಟ್ಟಣ ಕಲಾ ಪ್ರದರ್ಶನದಲ್ಲಿ ತಮ್ಮ ಕಲಾಕೃತಿಗಳೊಂದಿಗೆ ಭಾಗವಹಿಸಿದ್ದಾರೆ. ಹಾಸನದಲ್ಲಿ ಮೂರು ಮಕ್ಕಳ ಚಿತ್ರಕಲಾ ಪ್ರದರ್ಶನ ಸಂಘಟಿಸಿದ್ದಾರೆ. ಇವರ ಕಲಾಸಾಧನೆಗೆ ಚಿತ್ರದುರ್ಗದಲ್ಲಿ ಮೆಡಲ್ ಮಂಡ್ಯದಲ್ಲಿ ಕಲಾರತ್ನ ಚನ್ನರಾಯಪಟ್ಟಣ ಕಲಾ ತಪಸ್ವಿ ಪ್ರಶಸ್ತಿ ಸಂದಿದೆ. 2022ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಆಯೋಜಿಸಿದ್ದ 50ನೇ ವಾರ್ಷಿಕ ಕಲಾಪ್ರದರ್ಶನದಲ್ಲಿ ಇವರ ಕಲಾಕೃತಿ ಪ್ರದರ್ಶನಗೊಂಡಿದೆ.
ಇವರ ಅಜ್ಜಿ ಗಂಗೂಬಾಯಿ ಕೌದಿ ಕಲೆ ನಿಪುಣೆ. ಕಲೆಯ ಕುಟುಂಬದ ವಾತಾವರಣದ ಮೂಸೆಯಲ್ಲಿಯೇ ಚಿಗುರೊಡೆದರೂ ತಾವೂ ತಂದೆಯಂತೆಯೇ ಕಲಾವಿದರಾಗಬೇಕೆಂದೇ ಚಿಕ್ಕಂದಿನಿಂದಲೇ ಚಿತ್ರಕಲೆಯತ್ತ ತೀವ್ರಾಸಕ್ತಿ ಈ ದಿಶೆಯಲ್ಲಿ ಹಿಡಿತ ಸಾಧಿಸಿ ನವ್ಯ ರಚನೆಯಲ್ಲಿ ಕ್ರಿಯಾಶೀಲರು.
- ಗೊರೂರು ಅನಂತರಾಜು, ಹಾಸನ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ