ವಿಟ್ಲ: ಕೈರಂಗಳ ಪುಣ್ಯಕೋಟಿ ನಗರದ ಶಾರದಾ ವಿದ್ಯಾಕೇಂದ್ರದಲ್ಲಿ ಶುಕ್ರವಾರ (ಡಿ.1) ನಡೆದ ಸುರಾಜ್ಯ ಭಾರತ ಸಾಹಿತ್ಯ ಸಮಾವೇಶ ಮತ್ತು ಆರು ಕಾರ್ಯಾಗಾರಗಳು ನಡೆದವು. ಶಾರದಾ ಗಣಪತಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಹಾಗೂ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷ ರಾಜಾರಾಮ ಭಟ್ ರವರು ಸಂಪೂರ್ಣ ವ್ಯವಸ್ಥೆಗಳನ್ನು ಮಾಡಿ ಈ ಸಮಾರಂಭದ ಮೆರುಗಿಗೆ ಕಾರಣರಾದರು.
ಉದ್ಘಾಟನಾ ಸಮಾರಂಭವು ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯಾದ ಬಳಿಕ ಮಂಗಳೂರಿನ ಖ್ಯಾತ ಲೆಕ್ಕ ಪತ್ರ ಪರಿಶೋಧಕ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಎಸ್ ಎಸ್ ನಾಯಕರಿಂದ ದೀಪ ಬೆಳಗುವುದರ ಮೂಲಕ ಚಾಲನೆಗೊಂಡಿತು.
ಸ್ವಾಗತ ಭಾಷಣದ ತರುವಾಯ ಬಂಟ್ವಾಳ ಅ ಭಾ ಸಾ ಪ ಸಮಿತಿ ಅಧ್ಯಕ್ಷ ಡಾ ಸುರೇಶ ನೆಗಳಗುಳಿಯವರು ಪರಿಷತ್ತಿನ ಧ್ಯೇಯ ಹಾಗೂ ಉದ್ದೇಶಗಳ ಸಹಿತ ಪ್ರಸ್ತಾವಿಕವಾಗಿ ಮಾತನಾಡುತ್ತಾ ಯುವಶಕ್ತಿಗೆ ಸಂಸ್ಕಾರದ ಪೂರಣ ಮಾಡುವ ಸಲುವಾಗಿ ವಿದ್ಯಾಸಂಸ್ಥೆಗಳಲ್ಲಿ ವಿವಿಧ ಸಾಹಿತ್ಯ ಚಟುವಟಿಕೆಗಳನ್ನು ನಡೆಸುವ ಉದ್ದೇಶ ಹೊಂದಿದ್ದು ಇತರೇತರ ಸಂಸ್ಥೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಇರಾದೆಯಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್ ಎಸ್ ನಾಯಕರು ಅರಿವೇ ಗುರು, ಉತ್ತಮ ಶಿಕ್ಷಣ ಉತ್ತಮ ನಾಗರಿಕತೆಯ ಬುನಾದಿ, ವಿದ್ಯೆ ಇಲ್ಲದವನು ಮನುಷ್ಯನಾಗಿದ್ದರೂ ಪ್ರಾಣಿಗೆ ಸಮಾನ ಎನ್ನುತ್ತಾ ಕಲಿಕೆಗೆ ಮುಕ್ತಾಯವಿಲ್ಲ, ಸಾಹಿತ್ಯ ಸೇವೆ ಸದಾ ನಡೆಯಲಿ ಎಂದರು.
ಮುಖ್ಯ ಅತಿಥಿಗಳಲ್ಲೊಬ್ಬರಾಗಿ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಬಿ. ಹರೀಶ ರೈ ಅವರು ಉತ್ತಮ ನಡವಳಿಕೆ ಹಾಗೂ ಶಿಸ್ತು ಬದ್ಧ ಜೀವನಕ್ರಮಗಳಿಗೆ ಉತ್ತಮ ಶಾಲೆಗಳೂ ಗುರುಗಳೂ ಕಾರಣ.ಇಂಥ ಸಂಸ್ಥೆಗಳಲ್ಲಿ ಕಂಡು ಬರುವ ಶಿಸ್ತು ಬದ್ಧತೆ ಎಲ್ಲರಿಗೂ ಮಾದತಿಯಾಗುತ್ತದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಚುಟುಕು ಪರಿಷತ್ತಿನ ಜಿಲ್ಲಾ ಗೌರವಾಧ್ಯಕ್ಷ ಇರಾ ನೇಮು ಪೂಜಾರಿಯವರು ಸಾಹಿತ್ಯದಿಂದಲೇ ಸವಿ ಬಾಳು ಲಭ್ಯ. ಸಾಕ್ಷರತೆಯೇ ಜೀವನಕ್ರಮದ ಉನ್ನತಿಗೆ ಪೂರಕ ಎಂದು ಕಾವ್ಯ ಸಹಿತವಾಗಿ ಮಾತನಾಡಿದರು.
ಇದೇ ವೇಳೆ ಸಮಾವೇಶದ ಸರ್ವಾಧ್ಯಕ್ಷ ಸೇರಾಜೆ ಸೀತಾರಾಮ ಭಟ್ಟರನ್ನು ಪೇಟ ಶಾಲು ಹಾರ ಸಹಿತವಾಗಿ ಸನ್ಮಾನಿಸಲಾಯಿತು. ತದ ನಂತರ ಅವರು ಮಾತನಾಡುತ್ತಾ ಚರ್ಚೆಯು ಚರ್ಚೆಗಾಗಿ ಮಾಡುವ ಚರ್ಚೆಯಾಗಬಾರದು. ಹೊಸ ಫಲ ಪ್ರಾಪ್ತಿಗಾಗಿ ಸಂವಾದಗಳು ಮಥಿಸಲ್ಪಡ ಬೇಕು. ಸಾಹಿತ್ಯವು ಅನ್ವರ್ಥವಾಗ ಬೇಕಾದರೆ ಸರಿಯಾದ ರೀತಿಯ ಕಲಿಕೆ ಹಾಗೂ ಸುನೀತಿಯೇ ಪ್ರಧಾನವಾಗಿರುವ ಮಂತ್ರವಾಗ ಬೇಕು ಹಾಗೂ ನಮ್ಮ ಭಾಷಾ ಪ್ರೀತಿಗೆ ಮಿಗಿಲಾದುದು ಯಾವುದೂ ಇಲ್ಲ ಎನ್ನುತ್ತಾ ತಾನು ಎಂದೂ ಪರ ಭಾಷೆಯನ್ನು ಬಳಸಿ ಮಾತನಾಡಿದ್ದೇ ಇಲ್ಲ ಎಂದರು.
ಸಭಾಧ್ಯಕ್ಷ ರಾಜಾರಾಮ ಭಟ್ಟರವರು ಸದುಪಯೋಗ ವಾಗುವ ಕಾರ್ಯಕ್ರಮಗಳಿಗೆ ತಾನು ನೀಡುವ ಪ್ರೋತ್ಸಾಹ ಹಾಗೂ ಮುಂದೆಯೂ ಭವ್ಯ ಸಭಾ ಭವನದಲ್ಲಿ ಈ ರೀತಿಯ ಸಮಾವೇಶ, ಕಾರ್ಯಾಗಾರ, ಗೋಷ್ಠಿಗಳನ್ನು ಮಾಡುವರೆ ಸರ್ವ ಪ್ರೋತ್ಸಾಹವಿದೆ ಎಂದರು.
ಧನ್ಯವಾದ ಭಾಷಣ ಮಾಡುತ್ತಾ ಜಯಾನಂದ ಪೆರಾಜೆಯವರು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಲ್ಲಿ ಸಂಸ್ಥೆಯ ಮುಖ್ಯಸ್ಥ, ಪ್ರಾಚಾರ್ಯ, ಶಿಕ್ಷಕ ಶಿಕ್ಷಕಿ ಸಹಿತವಾಗಿ ಸಹ ಕರಿಸಿದ ಸರ್ವರನ್ನೂ ಅಭಿನಂದಿಸಿದರು.
ಬಳಿಕ ಆರು ಪ್ರತ್ಯೇಕ ಕೊಠಡಿಗಳಲ್ಲಿ ವಿವಿಧ ಕಾರ್ಯಾಗಾರಗಳು ನಡೆದುವು. ಗುಣಾಜೆ ರಾಮಚಂದ್ರ ಭಟ್ಟರ ಅಧ್ಯಕ್ಷತೆಯಲ್ಲಿ ದೇಶ ಭಕ್ತಿ ಗೀತೆ ಗಾಯನ, ರೇಮಂಡ್ ಡಿಕುನ್ಹ ಅಧ್ಯಕ್ಷತೆಯಲ್ಲಿ ಸಾಹಿತ್ಯ ರಸಪ್ರಶ್ನೆ, ಮಧುರಾ ಕಡ್ಯ ಅಧ್ಯಕ್ಷತೆಯಲ್ಲಿ ಕವನ ಕಾವ್ಯ, ವಾಚನ, ರಮೇಶ್ ಬಾಯಾರ್ ಅಧ್ಯಕ್ಷತೆಯಲ್ಲಿ ಪಾತ್ರ ನಿರೂಪಣೆ, ಪೆರಾಜೆ ಸೀತಾರಾಮ ಭಟ್ಟರ ಅಧ್ಯಕ್ಷತೆಯಲ್ಲಿ ಭಾರತ ದರ್ಶನ ಹಾಗೂ ಸಮಿತಿ ಉಪಾಧ್ಯಕ್ಷೆ ಸೀತಾಲಕ್ಷ್ಮಿ ವರ್ಮಾ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿ ಕವಿಗೋಷ್ಠಿಗಳು ನಡೆದುವು. ಕಲ್ಲಡ್ಕ, ಮಂಚಿ, ಕೈರಂಗಳ ಮತ್ತು ಅತಿಥೇಯ ಸಂಸ್ಥೆಗಳ ಹಲವಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದರ ಪಲಾನುಭವಿಗಳಾಗಿದ್ದರು.
ಭೋಜನ ವಿರಾಮದ ನಂತರ ಉಪನ್ಯಾಸಕ ರಘು ಇಡ್ಕಿದು ಅವರ ಅಧ್ಯಕ್ಷತೆಯಲ್ಲಿ ಹಿರಿಯ ಅನುಭವಿ ಸಾಹಿತಿಗಳಿಂದ ಸಾಹಿತ್ಯ ಪ್ರಸ್ತುತಿ ಮತ್ತು ಹೊಸ ತಲೆ ಮಾರಿಗೆ ಸಾಹಿತ್ಯದ ಪ್ರಸ್ತುತತೆ ಎಂಬ ವಿಷಯದಲ್ಲಿ ಡಾ ಮೀನಾಕ್ಷಿ ರಾಮ ಚಂದ್ರ ಇವರಿಂದ ಉಪನ್ಯಾಸವೂ ಸಹ ನಡೆಯಿತು.
ಕೊನೆಗೆ ಸಮಾರೋಪ ಸಮಾರಂಭದಲ್ಲಿ ಚೇತನ್ ಮುಂಡಾಜೆಯವರಿಂದ ಉಪನ್ಯಾಸ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿ ಹಾಗೂ ಕವಿಗಳಿಗೆ ಪುರಸ್ಕಾರ ಹಾಗೂ ಸರ್ವಾಧ್ಯಕ್ಷರ ನುಡಿಗಳು ನಡೆದುವು. ಅಭಿವಂದನಾತ್ಮಕವಾಗಿ ಡಾ ಸುರೇಶ ನೆಗಳಗುಳಿ ಈ ಸಮಾವೇಶದ ಯಶಸ್ವಿಗೆ ಕಾರಣರಾದ ಶಾಲಾ ಸಂಚಾಲಕರಿಗೆ ಅಭಿವಂದಿಸಿದರು. ಮುಖ್ಯ ಅತಿಥಿಗಳಾಗಿ ಡಾ ಮಾಧವ ಹಾಗೂ ಶೈಲೇಶರವರು ವೇದಿಕೆಯಲ್ಲಿದ್ದು ಶುಭ ಹಾರೈಸಿದರು.
ಪ್ರಾಚಾರ್ಯ ಶ್ರೀಹರಿ, ಮುಖ್ಯೋಪಾಧ್ಯಾಯನಿ ಶ್ರೀಮತಿ ರಮಣಿ, ಅಭಾಸಾಪ ಪ್ರಾಂತ ನಿರ್ವಾಹಕ ಸುಂದರ ಶೆಟ್ಟಿ, ಕನ್ಯಾನ ಸರಸ್ವತೀ ವಿದ್ಯಾ ಮಂದಿರದ ಸಂಸ್ಥಾಪಕ ಈಶ್ವರ ಪ್ರಸಾದ್ ಸಹಿತ ಹಲವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


