ಪುಸ್ತಕ ಪರಿಚಯ: ಗಾಯಗೊಂಡಿವೆ ಬಣ್ಣ- ಕವನ ಸಂಕಲನ

Upayuktha
0



ಗಾಯಗೊಂಡಿವೆ ಬಣ್ಣ- ಒಬ್ಬ ಕವಿಗೆ ಬಹಳ ಮುಖ್ಯವಾಗಿ ಬೇಕಾಗೋದು ಭಾವತೀವ್ರತೆ. ಅದು ಎಂ.ಡಿ. ಚಿತ್ತರಗಿಯವರಲ್ಲಿದೆ. ಹೀಗಾಗಿ ಇವರ ಕಾವ್ಯವನ್ನು ನಾನು ಪ್ರೀತಿಯಿಂದಲೇ ಸ್ವಾಗತಿಸುವೆ. ಮಾನವೀಯ ಅಂತಃಕರಣ, ಪ್ರಜ್ಞಾವಂತಿಕೆ ಈ ಕೃತಿಯಲ್ಲಿನ ಕಾವ್ಯದ ಮುಖ್ಯ ಗುಣ. ಇದು ಕನ್ನಡ ಕಾವ್ಯದ (ಜಗತ್ತಿನದೂ ಕೂಡಾ)ಪರಂಪರೆಯಲ್ಲಿಯೆ ಇದೆ. ಹೀಗಾಗಿ ಕವಿಯ ಮಾನವೀಯ ಮಿಡಿತಕ್ಕೆ ಕಾವ್ಯ ಮಾಧ್ಯಮ ಸೂಕ್ತವಾಗಿದೆ.



ಮೊದಲ ಕವನದ ʼಅಕ್ಷರದ ಗದ್ದೆ-ಗದ್ದೆಗೂ…ʼ ಮೂರನೆಯ ಕವಿತೆಯ 'ಪಟಾಕಿಯ ಹೆಣದ ರಾಶಿ..' 'ಹಳಸಿದ ಪೌಡರ್‌ ವಾಸನೆ' ಮುಂತಾದ ಸಾಲುಗಳು ಕಾವ್ಯದ ಹೊಸ ಪರಿಭಾಷೆಯನ್ನೇ ಪರಿಚಯಿಸಿವೆ. 'ನಾರುವ ಮನಗಳು..' 'ಭಾಸ್ಕರನ ಬೆದರುಗೊಂಬೆ..' ವಿಭಿನ್ನ ಅರ್ಥಗಳನ್ನು ಧ್ವನಿಸಿವೆ. 'ಮುಳ್ಳು', 'ಹೊಗೆ', 'ಅವಳು', 'ಅವ್ವನೊಲವಿನ ತಂಗಳೂಟ', 'ಗಾಂಧಿ', 'ರಂಜಾನ್‌ ಚಂದಿರ', 'ನಗಬೇಕು ಆತ', 'ಸುಂದರಿ', ಮುಂತಾದ ಕವನಗಳು ಓದುಗರನ್ನು ಹಿಡಿದು ನಿಲ್ಲಿಸುತ್ತವೆ. 'ಬೆಳಗು' ಕವಿತೆಯ ʼದಣಿವರಿಯದ ಚೂಪಾದ ಕೊಡಲಿʼ ನಮ್ಮ ಕಾಲದ ಬರ್ಬರತೆಯನ್ನು ಶಕ್ತವಾಗಿಯೇ ಕಟ್ಟಿಕೊಟ್ಟಿದೆ.


ಸಂಕಲನದ ಎಲ್ಲ ಕವನಗಳೂ ಚೆನ್ನಾಗಿವೆ. ಆದರೆ! ಭಾವಸೂಚಕ ಚಿಹ್ನೆಯ ಬಳಕೆ ಸ್ವಲ್ಪ ಹೆಚ್ಚಾಗಿಯೇ ಬಳಕೆಯಾಗಿದೆ ಎನಿಸಿತು. ಭಾವತೀವ್ರತೆಗೆ ಇದು ಬೇಕು  ನಿಜ; ಆದರೆ ಕಾವ್ಯ ಸಂವಹನಕ್ಕೆ ಅದೇ ಅಡ್ಡಿಯಾಗಬಾರದು. 'ಯುಗಾದಿ ಮತ್ತು ನಾವು' ಎಂಬ ಕವನವು ಈ ಚಿಹ್ನೆ ಇಲ್ಲದೆಯೆ ಸರಾಗವಾಗಿ ಸಂವಹನಗೊಂಡಿರುವುದನ್ನು ಕಾಣಬಹುದು ಅಲ್ಲವೇ?


ʼಜಾವದ ಬೇವುʼ ರೊಕ್ಕʼ ಈ ಕವಿತೆಗಳು ಕಾವ್ಯವಾಗುತ್ತಲೇ ಬುದ್ಧಿವಾದ ಹೇಳುವ ಚಾಕಚಕ್ಯತೆಯನ್ನು ತೋರಿವೆ. ಹೀಗೆ ʼಗಾಯಗೊಂಡಿವೆ ಬಣ್ಣ!ʼ ಸಂಕಲನ ನನಗೆ ಇಷ್ಟವಾಯಿತು. ನಮ್ಮ ಉತ್ತರ ಕರ್ನಾಟಕದ ಪ್ರತಿಭೆ ಹೀಗೆ ಅಖಿಲ ಕರ್ನಾಟಕವನ್ನು ತಲುಪಲೆಂದು ಹಾರೈಸುವೆ.


ಡಾ. ವಸಂತಕುಮಾರ್‌ ಎಸ್‌ ಕಡ್ಲಿಮಟ್ಟಿಯವರ ಮುನ್ನುಡಿಯೂ ಅರ್ಥಪೂರ್ಣವಾಗಿದೆ. ಹಾಗೆಯೇ ಜಗದೀಶ ಹಾದಿಮನಿಯವರ ಬೆನ್ನುಡಿಯೂ ಧ್ವನಿಪೂರ್ಣವಾಗಿದೆ.


'ಮಥನ' ಎಂಬ ವಿಮರ್ಶಾ ಕೃತಿಯನ್ನೂ ಹೊರತಂದಿರುವ ಚಿತ್ತರಗಿಯವರಿಗೆ ವಿಮರ್ಶಾ ಕ್ಷೇತ್ರದ ಕಡೆಗೂ ಒಲವಿರುವುದು ಮೆಚ್ಚತಕ್ಕ ಸಂಗತಿ. ಉತ್ತರ ಕರ್ನಾಟಕದಲ್ಲಿ ಈ ಕ್ಷೇತ್ರವೂ ಬೆಳೆಯಬೇಕಿದೆ. ಹೀಗಾಗಿ ಕವಿಯನ್ನು ಅಭಿನಂದಿಸುವೆ. ಇವರ ಸಾಹಿತ್ಯ, ಸಂಸ್ಕೃತಿಯ ಬಗೆಗಿನ ಪ್ರೀತಿಯ  ಹಿಂದಿರುವ ಮಾನವೀಯ ಕಾಳಜಿಗೆ ಧನ್ಯವಾದಗಳು.



ಪುಸ್ತಕಕ್ಕಾಗಿ ಸಂಪರ್ಕಿಸುವ ವಿಳಾಸ ಶ್ರೀ ಎಂ ಡಿ ಚಿತ್ತರಗಿ ಲೇಖಕರು ಹುನಗುಂದ ಮೊಬೈಲ್ ಸಂಖ್ಯೆ9686019177


-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top