ವಯೋಸಂಬಂಧಿ ದೃಷ್ಟಿಕ್ಷಯ: ಪತ್ತೆ, ಚಿಕಿತ್ಸೆ, ಪರಿಹಾರ ಹೇಗೆ?

Upayuktha
0


"ಕಣ್ಣುನೋವು, ಉರಿ, ನೀರು ಬರುವುದು ಯಾವುದೂ ಇಲ್ಲ. ಆದರೆ ಇತ್ತೀಚೆಗೆ ಕೆಲವು ತಿಂಗಳುಗಳಿಂದ ನೋಡುವಾಗ ಒಂದು ಭಾಗದಲ್ಲಿ ಕಪ್ಪಾಗಿ ಕಾಣುತ್ತದೆ." ಎಂದು ಕೆಲವು ಜನ ಹೇಳುವುದನ್ನು ನೀವು ಕೇಳಿರಬಹುದು. ಇದು 'ಏಜ್ ರಿಲೇಟಡ್ ಮ್ಯಾಕ್ಯುಲಾರ್ ಡಿಜನರೇಷನ್' ಎಂಬ, ಕಣ್ಣಿನ ನರಮಂಡಲ ರೆಟಿನಾದ ಸಮಸ್ಯೆ ಇರಬಹುದೆಂಬ ಗುಮಾನಿಯನ್ನು ಹುಟ್ಟಿಸುತ್ತದೆ. ನೋವು ಇಲ್ಲದ ನಿಧಾನವಾಗಿ ಆಗುವ ದೃಷ್ಟಿಕ್ಷಯ ಇದರ ಲಕ್ಷಣ. ಸಾಮಾನ್ಯವಾಗಿ ಎರಡೂ ಕಣ್ಣುಗಳಲ್ಲಿ, ಐವತ್ತು ವರ್ಷ ವಯಸ್ಸಿನ ನಂತರ ಕಾಣಿಸಿಕೊಳ್ಳುವುದರಿಂದ ಇದನ್ನು ವಯೋ ಸಂಬಂಧಿತ ಎಂದು ಉಲ್ಲೇಖಿಸಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಕೂಡಾ ಇದು ಕುರುಡುತನದ ಪ್ರಮುಖ ಕಾರಣ.

 

ಅನುವಂಶೀಯತೆ, ಅಹಿತ ಆಹಾರ, ಪೌಷ್ಟಿಕತೆಯ ಕೊರತೆ, ಧೂಮಪಾನ, ಅಧಿಕ ರಕ್ತದೊತ್ತಡ, ಸೂರ‍್ಯನ ಬಿಸಿಲಿಗೆ ಹೆಚ್ಚು ಒಡ್ಡಿಕೊಳ್ಳುವುದು, ಹತ್ತಿರದ ವಸ್ತುಗಳನ್ನು ಸರಿಯಾಗಿ ಕಾಣಲು ಆಗದಿರುವ ದೃಷ್ಟಿದೋಷ, ಕಣ್ಣಿನ ಪೊರೆ, ಮಾನಸಿಕ ಒತ್ತಡ, ಕಣ್ಣಿಗೆ ತ್ರಾಸ ನೀಡುವ ಕಂಪ್ಯೂಟರ್ ಕೆಲಸ ಇರುವವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. 

 

ಇದರಲ್ಲಿ ಎರಡು ವಿಧ. ನಾನ್ ಎಕ್ಸುಡೇಟಿವ್ (ಸ್ರಾವ ರಹಿತ) ಮತ್ತು ಎಕ್ಸುಡೇಟಿವ್ (ಸ್ರಾವಯುಕ್ತ). ಸ್ರಾವರಹಿತದಲ್ಲಿ ಸಾಧಾರಣದಿಂದ ಮಧ್ಯಮ ಮಟ್ಟದ ದೃಷ್ಟಿನಾಶ, ನಿಧಾನವಾಗಿ ಆಗುವಂತದ್ದು. ತೊಂಬತ್ತು ಶೇಕಡಾದಷ್ಟು ಈ ವಿಧದ್ದು. ಆರಂಭದಲ್ಲಿ ಇದು ದೃಷ್ಟಿನಾಶ ಉಂಟುಮಾಡುವುದಿಲ್ಲ. ರೋಗಿಗಳು ದೃಷ್ಟಿಗೆ ಕಾಣುವ ವಸ್ತುಗಳನ್ನು ವಿಕಾರವಾಗಿ, ವಿರೂಪವಾಗಿ ಕಾಣಬಹುದು. ಅಥವಾ ದೃಷ್ಟಿಯ ಒಂದು ಭಾಗ ಕಪ್ಪಾಗಿ ನೆರಳಿನಂತೆ ಕಾಣಬಹುದು. ಮೊದಲ ಹಂತದಲ್ಲಿ, ರೆಟಿನಾದ ಮ್ಯಾಕ್ಯುಲಾ ಪ್ರದೇಶದಲ್ಲಿ ಹಳದಿ ಮಿಶ್ರಿತ ಬಿಳಿಯ ಉಬ್ಬಿದಂತಹ ಬಿಂದುವಿನಂತಹ ಜಾಗಗಳು ಕಾಣಿಸಿಕೊಳ್ಳುತ್ತವೆ. ಮಧ್ಯಮ ಹಂತದಲ್ಲಿ, ವರ್ತುಲಾಕಾರದ ಕಳಾಹೀನ ಪ್ರದೇಶಗಳು ಕಾಣಿಸಿಕೊಂಡು, ಸಣ್ಣ ರಕ್ತನಾಳಗಳು ನಾಶವಾಗುತ್ತವೆ. ಮುಂದುವರಿದ ಹಂತದಲ್ಲಿ, ಈ ರೀತಿ ಸವಕಳಿ ಹಂದಿದ ಪ್ರದೇಶಗಳು ದೊಡ್ಡದಾಗಿ, ಅದಕ್ಕೆ ತಾಗಿಕೊಂಡಿರುವ ಪದರದ ರಕ್ತನಾಳಗಳು ನಾಶವಾಗಿರುತ್ತವೆ. 


ಸ್ರಾವಯುಕ್ತದಲ್ಲಿ ಹೆಚ್ಚು ಪ್ರಮಾಣದ, ತೀವ್ರ ಹಾಗೂ ವೇಗವಾದ ದೃಷ್ಟಿನಾಶ ಉಂಟಾಗುವುದು. ಹತ್ತು ಶೇಕಡಾದಷ್ಟು ಈ ವಿಧದ್ದು. ಗೋರಿಗಳ ರೀತಿಯಲ್ಲಿ ಸ್ಪಷ್ಟವಾಗಿ ಕಾಣುವ ವರ್ತುಲಾಕಾರದ ಉಬ್ಬುಗಳು ಕಾಣಿಸಿಕೊಳ್ಳುವುದು. ರೆಟಿನಾದ ಹೊರಪದರ ಇತರ ಪದರಗಳಿಂದ ಬೇರ್ಪಡುವುದು. ಅತಿಯಾದ ಅನಗತ್ಯ ರಕ್ತನಾಳಗಳ ಹರಡುವಿಕೆ ಇರುವುದು. ರಕ್ತನಾಳಗಳು ಒಡೆಯಬಹುದು, ತನ್ನ ದ್ರವವನ್ನು ಹೊರಗೆ ಸ್ರವಿಸಬಹುದು. ರಕ್ತಸ್ರಾವದಿಂದ ಉಂಟಾದ ಉಬ್ಬುಗಳು ಇರುವವು. ಇವು ತಿಳಿಗೆಂಪು, ರ‍್ರಾಬರ‍್ರಿಯಾಗಿ ಕಾಣುವ ಕಲೆಗಳಾಗಿ ಕಾಣುತ್ತವೆ. 


ಆರಂಭಿಕ ರೋಗಿಪರೀಕ್ಷೆಯ ನಂತರ, ರೆಟಿನಾದ ಈ ಲಕ್ಷಣಗಳ ನಿಖರ ಪತ್ತೆಗೆ ಒ.ಸಿ.ಟಿ. ಎನ್ನುವ ಕಣ್ಣಿನ ನರಪದರಗಳ ಸ್ಕ್ಯಾನಿಂಗ್ ಬಳಸುತ್ತೇವೆ. ಆಮ್ಸ್ಲ್‌ರ್ ಗ್ರಿಡ್ ಟೆಸ್ಟ್ ಮೂಲಕ ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯ. ಈ ಚಿತ್ರವನ್ನು ಗಮನಿಸಿ.

⦁ ನಿಮಗೆ ಈಗಾಗಲೇ ಕನ್ನಡಕ ಇದ್ದಲ್ಲಿ ಅದನ್ನು ಹಾಕಿಕೊಂಡೇ ಇದನ್ನು ಮಾಡಿ.

⦁ ಈ ಚಿತ್ರ(ಚಾರ್ಟ)ವನ್ನು ಮುಖದಿಂದ ಹದಿನಾಲ್ಕು ಇಂಚು ದೂರ ಹಿಡಿದುಕೊಳ್ಳಿ.

⦁ ಒಂದು ಕಣ್ಣನ್ನು ಕೈಯಿಂದ ಮುಚ್ಚಿಕೊಳ್ಳಿ.

⦁ ಕೇಂದ್ರದಲ್ಲಿನ ಬಿಂದುವನ್ನು ಗಮನಿಸಿ. ಆ ಬಿಂದುವಿನಿಂದ ಕಣ್ಣನ್ನು ಚಲಿಸಬೇಡಿ.

⦁ ಯಾವುದೇ ನೇರಗೆರೆಗಳು ಓರೆಕೋರೆಯಾಗಿ ಕಂಡುಬಂದಲ್ಲಿ, ಚಿತ್ರದ ಒಳಗಿನ ಯಾವುದೇ ಚೌಕದ ಆಕಾರ ಅಥವಾ ಗಾತ್ರದಲ್ಲಿ ವ್ಯತ್ಯಾಸ ಕಂಡಲ್ಲಿ, ಯಾವುದೇ ಗೆರೆಗಳು ಕಾಣದೇ ಇದ್ದಲ್ಲಿ ಅಥವಾ ಮಬ್ಬಾಗಿ ಕಂಡಲ್ಲಿ ಅಥವಾ ಬಣ್ಣ ಬೇರೆಯಾಗಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು. 


ಆಧುನಿಕ ವೈದ್ಯಕೀಯದಲ್ಲಿ ಧೂಮಪಾನ ವರ್ಜಿಸುವುದು, ಜಾಡಮಾಲಿ ಅಂಶಗಳನ್ನು (ಆಂಟಿ ಓಕ್ಸಿಡೆಂಟ್), ವಿಟಾಮಿನ್, ಪೌಷ್ಟಿಕಾಂಶಗಳನ್ನು ನೀಡುವುದನ್ನು ಸ್ರಾವರಹಿತ ವಿಧಕ್ಕೆ ಸೂಚಿಲಾಗುತ್ತದೆ. ಸ್ರಾವಯುಕ್ತ ವಿಧಕ್ಕೆ ಆಂಟಿ-ವೆಜ್-ಎಫ್ ನಂತಹ ದುಬಾರಿ ಚುಚ್ಚುಮದ್ದುಗಳು ಇವೆಯೆಂದು ಹೇಳಲಾಗಿದೆಯಾದರೂ, ಸಮರ್ಪಕ ಗುಣಮುಖತೆ ಈ ವರೆಗೆ ಸಾಬೀತಾಗಿಲ್ಲ. ಆದರೆ ನಮ್ಮಲ್ಲಿ ಆಯುರ್ವೇದ ಪದ್ಧತಿಯಲ್ಲಿ ಘೃತಪಾನ, ನಸ್ಯ, ವಿರೇಚನ, ಬಸ್ತಿಕರ್ಮ, ಅಂಜನ, ತರ್ಪಣ, ಸೇಕ, ಸಿರಾವ್ಯಧ ವಿಧಾನಗಳ ಮೂಲಕ ಯಶಸ್ವಿಯಾಗಿ ದೃಷ್ಟಿಕ್ಷಯವನ್ನು ತಡೆಗಟ್ಟಬಹುದು. ತುಪ್ಪ, ಶತಾವರೀ, ಪಡುವಲ, ಹೆಸರು, ಜವೆಗೋಧಿ,ಮೂಲಂಗಿ, ಹಾಗಲಕಾಯಿ, ನೆಲ್ಲಿಕಾಯಿ, ಬದನೆ, ನುಗ್ಗೆ ಸೇವನೆ ಪ್ರಶಸ್ತ. ತಲೆ ಮತ್ತು ಪಾದಗಳಿಗೆ ಎಣ್ಣೆ ಹಚ್ಚಿ ಮಸ್ಸಾಜ್ ಮಾಡುವುದು ಕಣ್ಣಿಗೆ ಹಿತಕರ. 


ಮನೆಮದ್ದು:

⦁ ತ್ರಿಫಲಾ ಚೂರ್ಣ ಅರ್ಧ ಚಮಚ, ಜ್ಯೇಷ್ಠಮಧು ಅರ್ಧ ಚಮಚ, ಜೇನು ಒಂದೂವರೆ ಚಮಚ- ಮಿಶ್ರ ಮಾಡಿ ರಾತ್ರೆ ಮಲಗುವ ಮುನ್ನ ಒಂದು ತಿಂಗಳು ಸೇವಿಸಬೆಕು.

⦁ ತ್ರಿಫಲಾ, ಕಪ್ಪುದ್ರಾಕ್ಷೆ, ಜೇನು ಮತ್ತು ಕಂದು ಸಕ್ಕರೆ (ಬ್ಲೀಚ್ ಮಾಡದ ಸಕ್ಕರೆ) ಸೇರಿಸಿ ನಿತ್ಯ ಸೇವಿಸಬೇಕು. (ಸಕ್ಕರೆ ಕಾಯಿಲೆ ಇದ್ದವರು ಜೇನು, ಸಕ್ಕರೆ ಬಳಸಬಾರದು)


⦁ ಕಣ್ಣಿನ ರಕ್ಷಣೆಗೆ ಇರುವ ವ್ಯಾಯಾಮಗಳನ್ನು ನಿತ್ಯ ಮಾಡಬೇಕು.





-ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ. ಬಿ.ಎ.ಎಂ.ಎಸ್.,ಎಂ.ಎಸ್.(ಆಯು)

 ಆಯುರ್ವೇದ ತಜ್ಞರು ಹಾಗೂ ಆಡಳಿತ ನಿರ್ದೇಶಕರು,

 ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ, ನರಿಮೊಗರು, ಪುತ್ತೂರು.

 ಮೊಬೈಲ್: 9740545979



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter    

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top