ನ. 19-25: ಯಕ್ಷಾಂಗಣದಿಂದ ಯಕ್ಷಗಾನ ತಾಳಮದ್ದಳೆ ಸಪ್ತಾಹ – 2023

Upayuktha
0

‘ಶ್ರೀ ಹರಿ ಚರಿತ್ರೆ’ ಏಕಾದಶ ಸರಣಿ - ಪ್ರಶಸ್ತಿ ಪ್ರದಾನ




ಮಂಗಳೂರು: ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ– ಮಂಥನ ಮತ್ತು ಪ್ರದರ್ಶನ ವೇದಿಕೆಯು ಡಾ. ದಯಾನಂದ ಪೈ, ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿಶ್ವ ವಿದ್ಯಾನಿಲಯ ಮತ್ತು ಕರ್ನಾಟಕ ಯಕ್ಷಭಾರತಿ (ರಿ) ಪುತ್ತೂರು ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮವಾಗಿ ನಡೆಸುವ ಹನ್ನೊಂದನೇ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2023’ ಇದೇ ನವೆಂಬರ 19 ರಿಂದ 25 ರವರೆಗೆ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಜರಗಲಿದೆ.


ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. 


ದಿನಾಂಕ 19 ರಂದು ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಲಯ ಮುಖ್ಯಸ್ಥೆ ಗಾಯತ್ರಿ ಆರ್. ಸಮಾರಂಭವನ್ನು ಉದ್ಘಾಟಿಸುವರು. ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಪುಣೆ ತಾಳಮದ್ದಳೆ ಸಪ್ತಾಹಕ್ಕೆ ಚಾಲನೆ ನೀಡುವರು. ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮತ್ತು ಯಕ್ಷಾಂಗಣದ ಗೌರವಾಧ್ಯಕ್ಷ ಡಾ. ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸುವರು.


ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ: 

ಸಮಾರಂಭದಲ್ಲಿ ಯಕ್ಷಗಾನ ಕಲಾಪೋಷಕ ಮತ್ತು ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ ಅವರಿಗೆ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ನೀಡಲಾಗುವುದು. ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಜಯರಾಜ್ ಅಮೀನ್ ಪ್ರಶಸ್ತಿ ಪ್ರದಾನ ಮಾಡುವರು. ಇದೇ ಸಂದರ್ಭದಲ್ಲಿ ಉಪ್ಪಳದ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳ್ತೆ ಮೊಕ್ತೆಸರ ಮತ್ತು ಅಹ್ಮದ್ ನಗರದ ಉದ್ಯಮಿ ಕೆ.ಕೆ. ಶೆಟ್ಟಿ ಅವರು ಯಕ್ಷಾಂಗಣದ ಗೌರವ ಉಪಾಧ್ಯಕ್ಷರಾಗಿ ಪದಗ್ರಹಣ ಮಾಡುವರು. ಶಾಸಕ ಬಿ. ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಎಂ. ಸರ್ವೋತ್ತಮ ಶೆಟ್ಟಿ, ಥಾಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು.


ಸಮಾರೋಪ - ಯಕ್ಷಾಂಗಣ ಗೌರವ ಪ್ರಶಸ್ತಿ ಪ್ರದಾನ: 

ನ.25 ರಂದು ಸಪ್ತಾಹದ ಸಮಾರೋಪ ನಡೆಯಲಿದ್ದು ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್‌ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ ದೀಪ ಪ್ರಜ್ವಲನೆ ಮಾಡುವರು. ಈ ಸಂದರ್ಭದಲ್ಲಿ ಯಕ್ಷಗಾನ ಅರ್ಥಧಾರಿ ಮತ್ತು ಹರಿದಾಸರಾದ ಮಹಾಬಲ ಶೆಟ್ಟಿ ಕೂಡ್ಲು ಅವರಿಗೆ 2023ನೇ ಸಾಲಿನ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ಯನ್ನು ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಪ್ರದಾನ ಮಾಡುವರು. ದ.ಕ. ಜಿಲ್ಲಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಕ.ಸಾ.ಪ ಮಾಜಿ ರಾಜಾಧ್ಯಕ್ಷ ಡಾ| ಹರಿಕೃಷ್ಣ ಪುನರೂರು, ಮಂಗಳೂರು ಮ.ನ.ಪಾ ಪ್ರತಿಪಕ್ಷ ನಾಯಕ ಪ್ರವೀಣ್‍ಚಂದ್ರ ಆಳ್ವ, ಹಿರಿಯ ನಾಟಕಕಾರ ಡಾ| ಸಂಜೀವ ದಂಡಕೇರಿ, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಮಂಗಳೂರು ವಿಶ್ವ ವಿದ್ಯಾನಿಲಯದ ರಿಜಿಸ್ಟ್ರಾರ್ ರಾಜು ಕೆ., ಕರುಣಾ ಇನ್‍ಫ್ರಾ ಪ್ರಾಪರ್ಟಿಸ್‍ನ ವಿ. ಕರುಣಾಕರ, ಮುಂಬಯಿ ಉದ್ಯಮಿ ಜಗದೀಶ ಪೂಜಾರಿ ಇರಾ ಆಚೆಬೈಲು ಅತಿಥಿಗಳಾಗಿರುವರು. 


ಸರಣಿ ಸಂಸ್ಮರಣ :

ತುಳು ನಾಟಕ ಬ್ರಹ್ಮ ದಿ| ಬಿ. ರಾಮ ಕಿರೋಡಿಯನ್ ಅವರ ಶತಮಾನೋತ್ಸವ ಸಂದರ್ಭದಲ್ಲಿ ಅವರ ಶತಮಾನ ಸಂಸ್ಮರಣೆಯು ಯಕ್ಷಾಂಗಣದ ವೇದಿಕೆಯಲ್ಲಿ ನಡೆಯಲಿದ್ದು ಹಿರಿಯ ರಂಗ ನಿರ್ದೇಶಕ ತಮ್ಮಲಕ್ಷ್ಮಣ ಅವರಿಗೆ ‘ರಾಮ ಕಿರೋಡಿಯನ್-100’ ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಅಲ್ಲದೆ ಸಪ್ತಾಹದ ಉಳಿದ ದಿನಗಳಲ್ಲಿ ಯಕ್ಷಗಾನ ಕಲೆಗಾಗಿ ಮಹತ್ವದ ಕೊಡುಗೆ ನೀಡಿದ ದಿ| ಕೆ.ಎಸ್. ಉಪಾಧ್ಯಾಯ, ದಿ| ಬಿ.ಪಿ. ಕರ್ಕೇರ, ದಿ| ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ, ದಿ| ಎ.ಕೆ. ನಾರಾಯಣ ಶೆಟ್ಟಿ ಮತ್ತು ದಿ| ಎ.ಕೆ. ಮಹಾಬಲ ಶೆಟ್ಟಿ ಹಾಗೂ ದಿ| ಕೆ. ಕಾಂತ ರೈ ಮೂಡಬಿದ್ರಿ ಅವರ ಸರಣಿ ಸಂಸ್ಮರಣೆ ನಡೆಸಲಾಗುವುದು. ಪ್ರತಿದಿನವೂ ಸಂಸ್ಮರಣಾ ಜ್ಯೋತಿ ಬೆಳಗಿ ಗಣ್ಯರಿಂದ ನುಡಿನಮನ ಸಲ್ಲಿಸಲಾಗುವುದು. 


‘ಶ್ರೀ ಹರಿ ಚರಿತ್ರೆ’ ತಾಳಮದ್ದಳೆ ಸರಣಿ: 

ಯಕ್ಷಾಂಗಣದ ಹನ್ನೊಂದನೇ ವರ್ಷದ ನುಡಿಹಬ್ಬದ ಸಲುವಾಗಿ ‘ಶ್ರೀ ಹರಿ ಚರಿತ್ರೆ’ ಎಂಬ ಪರಿಕಲ್ಪನೆಯಲ್ಲಿ ಏಳು ವಿಭಿನ್ನ ಯಕ್ಷಗಾನ ಪ್ರಸಂಗಗಳ ತಾಳಮದ್ದಳೆಯನ್ನು ಆಯೋಜಿಸಲಾಗಿದೆ. ನ. 19 ರಿಂದ ಪ್ರತಿ ದಿನ ಸಂಜೆ ಧ್ರುವ ಚರಿತ್ರೆ, ರುಕ್ಮಾಂಗದ ಚರಿತ್ರೆ, ಪ್ರಹ್ಲಾದ ಚರಿತ್ರೆ, ಅಂಬರೀಷ ಚರಿತ್ರೆ, ಅಜಾಮಿಳ ಚರಿತ್ರೆ, ಚಂದ್ರಹಾಸ ಚರಿತ್ರೆ ಹಾಗೂ ನ. 25 ರಂದು ಕರ್ಣ ಚರಿತ್ರೊ (ತುಳು) ಪ್ರಸಂಗಗಳನ್ನು ಪ್ರಸ್ತುತಪಡಿಸಲಾಗುವುದು. ಈ ಎಲ್ಲಾ ಕಾರ್ಯಕ್ರಮಗಳಿಗೆ ಕಲಾಭಿಮಾನಿಗಳಿಗೆ ಮುಕ್ತ ಪ್ರವೇಶವಿದೆ. 


ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಕೆ. ರವೀಂದ್ರ ರೈ ಕಲ್ಲಿಮಾರು (ಉಪಾಧ್ಯಕ್ಷರು), ಕೆ. ಲಕ್ಷ್ಮೀನಾರಾಯಣ ರೈ ಹರೇಕಳ (ಕಾರ್ಯದರ್ಶಿ), ನಿವೇದಿತಾ ಎನ್. ಶೆಟ್ಟಿ, ಸುಮಾ ಪ್ರಸಾದ್ (ಮಹಿಳಾ ಪ್ರತಿನಿಧಿಗಳು) ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top