ಸೇವಾ ಮನೋಭಾವ ಕಟ್ಟಿಕೊಟ್ಟ ವಿವೇಕಾನಂದರು: ಚಕ್ರವರ್ತಿ ಸೂಲಿಬೆಲೆ

Upayuktha
0

 ಆಳ್ವಾಸ್ ಕಾಲೇಜಿನಲ್ಲಿ ಸ್ವಯಂ ಸೇವಕರ ದಿನ ಕುರಿತ ವಿಶೇಷ ಉಪನ್ಯಾಸ




ವಿದ್ಯಾಗಿರಿ: ‘ನಮ್ಮ ದೇಶದಲ್ಲಿ  ಸೇವೆ ಎಂಬುದನ್ನು ವಿಭಿನ್ನವಾಗಿ ಕಟ್ಟಿಕೊಟ್ಟವರು ಸ್ವಾಮಿ ವಿವೇಕಾನಂದರು’ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. 



ಅವರು ಸ್ವಯಂ ಸೇವಕರ ದಿನ-2023ರ ಅಂಗವಾಗಿ ಆಳ್ವಾಸ್ ಕಾಲೇಜಿನ  ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ಆಳ್ವಾಸ್ ಕಾಲೇಜಿನ ಚಿಗುರು ವಿದ್ಯಾರ್ಥಿ ವೇದಿಕೆ ಆಯೋಜಿಸಿದ ವಿಶೇಷ ಉಪನ್ಯಾಸ- ಕಾರ್ಯಕ್ರಮದಲ್ಲಿ   ಮಾತನಾಡಿದರು. 



ಭಾರತದಲ್ಲಿ ಇನ್ನೊಬ್ಬರಿಗೆ ನಿಸ್ವಾರ್ಥದಿಂದ ಮಾಡುವ ಸಹಾಯಕ್ಕೆ ಸೇವೆ ಎಂದು ಕರೆದರೆ, ವಿದೇಶಗಳಲ್ಲಿ ಇದನ್ನು ಸಾಮಾಜಿಕ ಚಟುವಟಿಕೆ ಎಂದು ಗುರುತಿಸುತ್ತಾರೆ. ಯಾವಾಗ ನಿರೀಕ್ಷೆಗಳು ಶೂನ್ಯವಾಗುತ್ತೋ, ಆಗ ಮಾಡುವ ಸಾಮಾಜಿಕ ಚಟುವಟಿಕೆ ಸೇವೆಯಾಗಿ ಗುರುತಿಸಿಕೊಳ್ಳುತ್ತದೆ ಎಂದರು.  



ಭಗವಂತ ಗರ್ಭಗುಡಿಯಲ್ಲಿ ಇರೋದಿಲ್ಲ, ವ್ಯಕ್ತಿಗಳ ಹೃದಯದಲ್ಲಿರುತ್ತಾನೆ. ಪರಬ್ರಹ್ಮ  ಸ್ವರೂಪಿ ಆನಂದ ನೀಡುವ ಏಕೈಕ ಕ್ರಿಯೆ ಸೇವೆ. ಇತರರ ದುಃಖಕ್ಕೆ ಸ್ಪಂದಿಸಿದಾಗ ಸಿಗುವ ಸಂತೋಷ ನಮ್ಮ ಕಷ್ಟಕ್ಕೆ ಸ್ಪಂದಿಸಿದಾಗಲೂ ಸಿಗುವುದಿಲ್ಲ. ಜೀವ ಸೇವೆಯನ್ನು ಯಾರು ಮಾಡುತ್ತಾರೋ ಅವರು ಶಿವ ಸೇವೆಯನ್ನು ಮಾಡಿದ ಹಾಗೆ.  ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದರೆ ಹೃದಯಕ್ಕೆ ಅದ್ಭುತ ಆನಂದ ಸಿಗುತ್ತೆ.  ಆತ್ಮಕ್ಕೆ ಆನಂದ ಸಿಗುವುದು ಸೇವೆಯಿಂದ ಮಾತ್ರ. ಸೇವಾ ಮನೋಭಾವ ಯುವಕರಲ್ಲಿ ಹೆಚ್ಚು ಮೂಡಬೇಕು.  ಇದ್ದುದ್ದನ್ನೆಲ್ಲವನ್ನು ಸಮಾಜಕ್ಕೆ ಕೊಟ್ಟು ಗಾಂಧೀಜಿ ಜಗತ್‍ಮಾನ್ಯರಾದರು’ ಎಂದರು.  



‘ಭಾರತ ಸೇವಾ ಮಾರ್ಗದಲ್ಲಿ ಅಗ್ರಣಿಯಾಗಿದೆ. ಇಂದು ಭಾರತಕ್ಕೆ  ಹೆಚ್ಚು ಶ್ರೇಷ್ಠತೆ ಸಿಕ್ಕಿರುವುದು ಸೇವಾ ಮನೋಭಾವದಿಂದ.  ಭಾರತವನ್ನು  ಕರಿ ನೇಷನ್ (ಸಾಂಬಾರು ಪದಾರ್ಥಗಳ), ಮೂಢÀನಂಬಿಕೆಗಳ ದೇಶ, ಬಡವರ ದೇಶ, ಎಂದು ಹೇಳುವ ಪರಿಸ್ಥಿತಿಯಿಂದ ಕೊರೋನಾ  ಕಾಲದಲ್ಲಿ  ವಿದೇಶಗಳಿಗೆ ಕೊರೋನಾ ಲಸಿಕೆಯನ್ನು ನೀಡುವ ಹಂತಕ್ಕೆ ಬೆಳೆಯಿತು.  ಕೊರೋನಾ ಲಸಿಕೆ ಹೊಂದಿದ್ದ ದೇಶಗಳು ಹೆಚ್ಚಿನ ಹಣಕ್ಕೆ ಲಸಿಕೆಯನ್ನು ಮಾರಿದರೆ, ಭಾರತ ಮಾತ್ರ ಔಷಧಿಯನ್ನು  ನಿರ್ಮಾಣ ವೆಚ್ಚದಲ್ಲೆ ನೀಡಿದ ಜಗತ್ತಿನ ಏಕೈಕ ದೇಶ’ ಎಂದು ಶ್ಲಾಘಿಸಿದರು. 



ಭಾರತ ಹಾವಾಡಿಗರ ದೇಶದಿಂದ  ಮೌಸ್  ಹಿಡಿಯುವ ದೇಶವಾಗಿ ಮುಂದುವರಿದಿದೆ.  ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಧರ್ಮ ಜಾಸ್ತಿ ಹಸ್ತಕ್ಷೇಪ ಮಾಡುತ್ತಿದೆಯೇ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ, ಹಾಗಾದರೆ ರಾಜಕೀಯದಲ್ಲಿ ಅಧರ್ಮ ಇರಬೇಕೇ? ಎಂದು ಮರು ಪ್ರಶ್ನೆ ಹಾಕಿದರು. ನಾವು ರಿಲೀಜನ್‍ನ್ನು ಧರ್ಮ ಎಂದು ಭಾಷಾಂತರಿಸಿಕೊಂಡಿದ್ದೆವೆ, ಆದರೆ ನಿಜವಾದ ಧರ್ಮದ ಅರ್ಥ ನಮ್ಮ ನಡೆ, ನುಡಿ, ಆಚಾರ, ವಿಚಾರವಾಗಿದೆ ಎಂದು ಎಂದು ಸಮರ್ಥನೆ ನೀಡಿದರು. 



ಕಾಲೇಜಿನ ಚಿಗುರು ವಿದ್ಯಾರ್ಥಿ ವೇದಿಕೆಯ ಸಂಯೋಜಕ ಶಶಾಂಕ ಪ್ರಸ್ತಾವಿಕವಾಗಿ ಮಾತಾನಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪ್ರಾಂಶುಪಾಲ ಡಾ.ಕುರಿಯನ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಗಗನಾ ಲೋಕೇಶ್ ಸ್ವಾಗತಿಸಿ, ಕಿರಣ್ ವಂದಿಸಿ, ಅಂಕಿತಾ ಪರಾಡ್ಕರ್ ನಿರೂಪಿಸಿದರು.  



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top