ಉಜಿರೆ: ಬಸ್ತಿ ದಿನೇಶ್ ಶೆಣೈ ಅವರ ‘ಮಧ್ಯಂತರ’ ಕಿರುಚಿತ್ರ ವೀಕ್ಷಣೆ ಹಾಗೂ ಸಂವಾದ ಕಾರ್ಯಕ್ರಮವು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ನ. 5 ರಂದು ನಡೆಯಿತು. ಪತ್ರಿಕೋದ್ಯಮ ವಿಭಾಗದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಿನೆಮಾ ವೀಕ್ಷಣೆ ಬಳಿಕ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ನಿರ್ದೇಶಕ ಬಸ್ತಿ ದಿನೇಶ್ ಶೆಣೈ ಉತ್ತರಿಸಿದರು. ತಮ್ಮ ಚೊಚ್ಚಲ ನಿರ್ದೇಶನದ ಚಿತ್ರದ ಬಗ್ಗೆ ಹಲವು ಸಂಗತಿಗಳನ್ನು ಹಂಚಿಕೊಂಡರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರಾದ ಶೆಣೈ, ಚಿತ್ರರಂಗದಲ್ಲಿ ಸುಮಾರು 25 ವರ್ಷಗಳ ಅನುಭವ ಹೊಂದಿದ್ದಾರೆ.
ಛಾಯಾಚಿತ್ರಗ್ರಾಹಕರಾಗಿ ವೃತ್ತಿ ಆರಂಭಿಸಿದ್ದ ಅವರು, ಬಳಿಕ ನಿರ್ಮಾಪಕರಾಗಿ, ಪ್ರಸ್ತುತ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷದ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಾನ್-ಫೀಚರ್ ವಿಭಾಗದಲ್ಲಿ ಪ್ರದರ್ಶನಗೊಂಡಿದ್ದ 20 ಸಿನೆಮಾಗಳ ಪೈಕಿ ‘ಮಧ್ಯಂತರ’ ಕೂಡ ಒಂದು.
ಪರಿಶ್ರಮ, ತಾಳ್ಮೆಯಿದ್ದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಎಲ್ಲವೂ ಅದೃಷ್ಟದಿಂದಲೇ ಆಗುವುದಿಲ್ಲ. ಕಲಿಕೆ, ಕೌಶಲ ಕೂಡ ಮುಖ್ಯವಾಗುತ್ತದೆ. ಸಿನೆಮಾ ಕ್ಷೇತ್ರದಲ್ಲಿ ಪ್ರತಿ ಹಂತದಲ್ಲಿಯೂ ಸವಾಲುಗಳಿರುತ್ತವೆ. ಕೆಲಸಗಳನ್ನು ನೋಡಿ, ಮಾಡಿ, ಕಲಿತು, ಅನುಭವ ಹೊಂದಿ ದೊಡ್ಡ ಮಟ್ಟಕ್ಕೆ ಬೆಳೆಯಬಹುದು ಎಂದು ಅವರು ತಿಳಿಸಿದರು.
ಆರ್ಟ್ ಮೂವೀಗೆ ನಿರ್ಮಾಪಕರು ಸಿಗುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು, ತಾಳ್ಮೆ ಹೊಂದಬೇಕು. ಆ ಸಿನೆಮಾವನ್ನು ಇನ್ನಷ್ಟು ಚೆನ್ನಾಗಿ ಹೇಗೆ ಪ್ರಸ್ತುತಪಡಿಸಬಹುದು ಎಂಬುದನ್ನು ಆಲೋಚಿಸಬೇಕು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. “ಜಾತಿ ಮತ ಭೇದವಿಲ್ಲದೆ ಕಲೆಗೆ ಮನ್ನಣೆ ನೀಡುವ ಕ್ಷೇತ್ರ ಸಿನೆಮಾ ಕ್ಷೇತ್ರ” ಎಂದರು.
“ಎಂಡ್ ಕ್ರೆಡಿಟ್ ಬಂದ ಕೂಡಲೇ ಥಿಯೇಟರ್ ಲೈಟ್ ಆಫ್ ಮಾಡುವುದು ಚಿತ್ರ ತಂಡಕ್ಕೆ ಮಾಡುವ ಅವಮಾನ. ದೊಡ್ಡ ದೊಡ್ಡ ಫಿಲ್ಮ್ ಸೊಸೈಟಿಗಳಲ್ಲಿ ಕೂಡ ಈ ಪರಿಪಾಟ ಕಂಡುಬರುವುದಿದೆ. ಆದರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಇಂದು ಚಿತ್ರ ಪ್ರದರ್ಶನದಲ್ಲಿ ಇದಕ್ಕೆ ವ್ಯತಿರಿಕ್ತ ಸನ್ನಿವೇಶ ಇತ್ತು. ಇದು ಅಭಿನಂದನೀಯ ನಡೆ” ಎಂದು ಅವರು ಶ್ಲಾಘಿಸಿದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಬಸ್ತಿ ದಿನೇಶ್ ಶೆಣೈ ಅವರನ್ನು ಸಮ್ಮಾನಿಸಿದರು. ನಾರಾಯಣ ಭಿಡೆ, ವಿಭಾದ ಪ್ರಾಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಸಂಪತ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ