ಗಣೇಶ್ ಕಾಸರಗೋಡು
***********
ಆ ಹದಿನೆಂಟರ ಹದಿ ಹರೆಯದ ಬಾಲಕ ಹೊಟ್ಟೆಪಾಡಿನ ಅನಿವಾರ್ಯತೆಗಾಗಿ ಮಂಗಳೂರಿನ ಬಾರೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಆಲ್ಕೋಹಾಲ್ ಅಂದರೆ ಏನೆಂದೇ ತಿಳಿಯದ ಈ ಅಮಾಯಕ ಬಾಲಕನಿಗೆ ಗುಂಡು ಸಪ್ಲೈ ಮಾಡುವ ಕೆಲಸಕ್ಕೆ ಹಚ್ಚಲಾಯಿತು. ಮೊದಲ ದಿನ ಬಾರ್ ಮ್ಯಾನೇಜರನೂ ಆಗಿರುವ ಓನರ್ ಕಸ್ಟಮರ್ ಆರ್ಡರ್ ಪಡೆದು ಚೀಟಿಯನ್ನು ಈ ಬಾಲಕನ ಕೈಗೆ ಕೊಟ್ಟ. ಆ ಚೀಟಿಯಲ್ಲಿ ಹೀಗೆ ಬರೆದಿತ್ತು : '60 ಸಿಗ್ನೇಚರ್'. ಬಾಲಕ ಕೌಂಟರ್ ಬಳಿ ಹೋದವನೇ ಒಂದು ಖಾಲಿ ಹಾಳೆ ಪಡೆದು ಅದರ ಮೇಲೆ 1,2,3,4,5...ಅಂತ 60 ಸಿಗ್ನೇಚರ್ ಹಾಕಲು ಹೊರಟ! ಅಚ್ಚರಿಯಿಂದ ಮ್ಯಾನೇಜರ್ ಏನಿದು ಅಂತ ಕೇಳಿದ. 'ಸಿಗ್ನೇಚರ್ ಸರ್' ಅಂದ. ಅದೇ ಕೊನೆ, ಬಾಲಕ ಆ ಬಾರ್'ನಿಂದ ಔಟ್!
ನಿರುದ್ಯೋಗಿಯಾದ ಆತ ನಿರಾಶನಾಗಿ ಪಬ್'ವೊಂದಕ್ಕೆ ಸೇರಿಕೊಂಡ. ಅಲ್ಲಿನ ಕೌಂಟರ್ ಮ್ಯಾನೇಜರ್ ಬಿಯರ್ ಬಾಟಲೊಂದನ್ನು ಚೆನ್ನಾಗಿ ಕುಲುಕಿಸಿ ಹತ್ತಿರದ ಟೇಬಲ್ಲಿನ ಕಸ್ಟಮರ್'ಗೆ ಕೊಡುವಂತೆ ಸೂಚಿಸಿದ. ಈ ಸಾರಿ ಕೆಲಸ ಕೆಡಬಾರದೆಂದುಕೊಂಡ ಆ ಬಾಲಕ ಕುಲುಕಿಸಿದ ಬಿಯರ್ ಬಾಟಲನ್ನು ಕಸ್ಟಮರ್ ಬಳಿ ತೆಗೆದುಕೊಂಡು ಹೋಗಿ ಆತನ ಮುಖದ ಬಳಿಯೇ ಓಪನರ್'ನಿಂದ ಓಪನ್ ಮಾಡಿದ್ದೇ ತಡ ಒಳಗೆ ತುಂಬಿದ್ದ ಬಿಯರ್ ನೊರೆ ನೊರೆಯಾಗಿ ಕಸ್ಟಮರ್ ಮುಖಕ್ಕೆ ರಾಚಿತು! ಆತ ಎದ್ದು ನಿಂತು ಕೋಪದಿಂದ ಆ ಬಾಲಕನ ಕೆನ್ನೆಗೆ ನಾಲ್ಕು ಬಾರಿಸಿದ. ಅವತ್ತಿಗೆ ಅದೇ ಕೊನೆ, ಬಾಲಕ ಮತ್ತೆ ನಿರುದ್ಯೋಗಿಯಾದ...!
- ಹಾಗೆ ನಿರುದ್ಯೋಗಿಯಾಗಿ ಮತ್ತೆ ಕಾಸರಗೋಡು ಸೇರಿಕೊಂಡ ಆ ಬಾಲಕನ ಹೆಸರೇ ಕಿರಣ್ ರಾಜ್! ನನ್ನ ಮುಂದೆ ಕೂತು ಬದುಕಿನ ಫ್ಲಾಶ್ ಬ್ಯಾಕ್'ಗೆ ಇಳಿದಿದ್ದ ಕಿರಣ್ ರಾಜ್ ಕಣ್ಣಲ್ಲಿ ನೀರ ಹನಿಯ ಪೊರೆ...ಹತ್ತಿರ ಹತ್ತಿರ 100 ಕೋಟಿಯಷ್ಟು ಬಿಜಿನೆಸ್ ಮಾಡಿರುವ 'ಚಾರ್ಲಿ 777' ಎಂಬ ಅತ್ಯಂತ ಯಶಸ್ವೀ ಚಿತ್ರದ ನಿರ್ದೇಶಕನಾಗಿ ಈ 28ರ ಯುವಕ ನನ್ನ ಕಣ್ಣಿಗೆ ಕಾಣಿಸಲಿಲ್ಲ, ಬದಲಿಗೆ ಆ ದಿನ ಕಸ್ಟಮರ್ ಕೈಲಿ ಕಪಾಳಮೋಕ್ಷ ಮಾಡಿಸಿಕೊಂಡ ವಿನೀತ ಬಾಲಕನೇ ನನ್ನ ಮುಂದಿದ್ದ! ಕಣ್ಣೊರೆಸಿಕೊಂಡ ಕಿರಣ್ ರಾಜ್ ಮಾತು ಮುಂದುವರಿಸಿದ್ದು ಹೀಗೆ : 'ಅದೊಂದು ಪಾಠ ಸರ್. ಬದುಕಿಗೆ ಸೆಡ್ಡು ಹೊಡೆದು ಎದ್ದು ನಿಂತ ಅಮೃತಘಳಿಗೆಯದು. ಆ ವರೆಗೆ ಅಪ್ಪ - ಅಮ್ಮ ಕೂಡಾ ನನ್ನ ಮೇಲೆ ಕೈ ಮಾಡಿದವರಲ್ಲ. ಅದು ನನ್ನ ಕೆನ್ನೆಗೆ ನಾನು ಪಡೆದ ಮೊದಲ ಏಟು. ಅದುವೇ ಕೊನೆಯದ್ದು ಆಗ ಬೇಕೆಂದುಕೊಂಡು ಮತ್ತೆ ಊರಿಗೆ ಹೊರಟೆ. ನನ್ನ ಕನಸು ಚಿಗುರೊಡೆದದ್ದೇ ಆವಾಗ. ನಾನು ಸಿನಿಮಾ ಮಾಡಬೇಕು, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಬೇಕೆನ್ನುವ ಕನಸದು. ಮನೆಯವರು ಬೈದರು, ಆತ್ಮೀಯರೆನಿಸಿಕೊಂಡವರೇ ಉಗಿದರು, ಲೆಕ್ಚರರ್ ಮಾವ ಬುದ್ದಿ ಹೇಳಿದರು. ನಾನು ಇದಾವುದಕ್ಕೂ ಸೊಪ್ಪು ಹಾಕಲಿಲ್ಲ. ನನ್ನ ಮುಂದೆ ದೊಡ್ಡದಾಗಿ ಬಿಳಿಯ ಪರದೆಯಿತ್ತು. ಅದರ ಮೇಲೆ ನನ್ನದೊಂದು ಸಿನಿಮಾ ಮೆರೆಯಬೇಕು...ಇಷ್ಟೇ ನನ್ನ ಕನಸು. ಹೇಗೋ ಮಾಡಿ ಶಾರ್ಟ್ ಫಿಲಂ ಮಾಡಿದೆ. ಅದರ ಹೆಸರು : 'ಕಾವಳ'. ಅದರ ಸಿಡಿ ಹಿಡಿದುಕೊಂಡು ಶಾಲೆಯಿಂದ ಶಾಲೆಗೆ ಅಲೆದೆ. ಕಂಡ ಕಂಡಲ್ಲಿ ಪ್ರದರ್ಶಿಸಿದೆ. ಜನ ನೋಡಿದರು, ಮೆಚ್ಚಿಕೊಂಡರು. ಇದರಿಂದ ಉತ್ಸಾಹಿತನಾಗಿ ಸೂತ್ರದ ಬೊಂಬೆಯ ಬಗ್ಗೆ ಶಾರ್ಟ್ ಫಿಲಂ ಮಾಡಿದೆ. ಇದಕ್ಕೂ ಮೆಚ್ಚುಗೆಯ ಮಹಾಪೂರವೇ ಹರಿದು ಬಂತು. ಹೊಸ ಉತ್ಸಾಹದೊಂದಿಗೆ ಬೆಂಗಳೂರಿಗೆ ಹೊರಟೆ. ನಿರ್ದೇಶಕ ಜಯತೀರ್ಥ ತಮ್ಮ ಜತೆ ಸೇರಿಸಿಕೊಂಡರು. ಕೆಲಸ ಕಲಿಯಲು ಅನುಕೂಲವಾಯಿತು. ಈ ನಡುವೆ ಉಪವಾಸ, ಅಜ್ಞಾತವಾಸ ನಡೆದೇ ಇತ್ತು. ಆದರೆ ಹಿಡಿದ ಹಠವನ್ನು ಬಿಟ್ಟು ಕೊಡಲಿಲ್ಲ. ನಂತರ ಪರಿಚಯ ವಾದವರೇ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ. ರಿಕ್ಕಿ, ಪ್ರಾಥಮಿಕ ಶಾಲೆ ಕಾಸರಗೋಡು, ಕಿರಿಕ್ ಪಾರ್ಟಿ...ನನ್ನ ಕನಸು ನನಸಾಗುವ ದಿನ ದೂರವಿಲ್ಲ ಅಂತಂದುಕೊಂಡೆ. ಪ್ರಾಪ್ತಿಯಿತ್ತು. ಒಂದು ಡಿಫರೆಂಟಾದ ಕಥೆ ರೆಡಿ ಮಾಡಿಟ್ಟುಕೊಂಡೆ. ಸಮಯ ಸಂದರ್ಭ ನೋಡಿಕೊಂಡು ರಕ್ಷಿತ್ ಶೆಟ್ಟಿಯವರ ಕಿವಿಗೆ ಮುಟ್ಟಿಸಿದೆ...ಮುಂದಿನದ್ದು ಇತಿಹಾಸ. 'ಚಾರ್ಲಿ 777' ಸಿನಿಮಾದ ಅದ್ಭುತ ಯಶಸ್ಸು ನನಗೆ ದಕ್ಕಿದ್ದು ಹೀಗೆ...' - ಇಷ್ಟು ಹೇಳಿ ಕಿರಣ್ ರಾಜ್ ಮೌನವಾದ. ಅದು ಮಾತು ಮೌನವಾಗುವ ಹೊತ್ತು...
◆
'777 ಚಾರ್ಲಿ' ಸಿನಿಮಾದ ಐಡಿಯಾ ತಲೆಗೆ ಹೊಕ್ಕಾಗಲೇ ಈ ಕಿರಣ್ ರಾಜ್ ಇದರ ಕಥೆಯನ್ನು ತೀರಾ RAW ಆಗಿ ನನಗೆ ಹೇಳಿದ್ದ. ಆಗಲೇ ನನಗೆ ಅನಿಸಿತ್ತು: ಮೊದಲ ಸಿನಿಮಾವೇ ಈ ಹುಡುಗನನ್ನು ಯಾವುದೋ ಎತ್ತರಕ್ಕೆ ಕೊಂಡೊಯ್ಯುವುದರಲ್ಲಿ ಅನುಮಾನವಿಲ್ಲ ಅಂತ. ಆದರೆ ಇದನ್ನು ನೇರವಾಗಿ ಈತನ ಕಿವಿಗೆ ಹಾಕಿದರೆ ಅಪಾಯ ತಪ್ಪಿದ್ದಲ್ಲ ಎನ್ನುವ ಕಾರಣಕ್ಕೆ ವರ್ಷಗಳ ಹಿಂದೆಯೇ ಒಂದು ಕಿವಿಮಾತು ಹೇಳಿದ್ದೆ: 'ಕಿರಣ್, ಇದೊಂದು ಅಸಾಮಾನ್ಯ ಸಿನಿಮಾವಾಗಲಿದೆ. ಶ್ವಾನವೊಂದು ಮುಖ್ಯ ಪಾತ್ರದಲ್ಲಿರುವುದಾದರೂ ಜತೆಗೊಬ್ಬ ಹೃದಯವಂತ ನಟನನ್ನು ಆಯ್ಕೆ ಮಾಡಿಕೋ. ನಿನ್ನ ಅಭಿಮಾನದ ನಟ ರಕ್ಷಿತ್ ಶೆಟ್ಟಿಯವರನ್ನು ಕೇಳಿ ನೋಡು. ಕಥೆ ಕೇಳಿದರೆ ಅವರು ಒಪ್ಪಿಕೊಳ್ಳುವುದರಲ್ಲಿ ಯಾವ ಅನುಮಾನವೂ ಇಲ್ಲ. ಒಪ್ಪಿದರೆ ನೀನು ಪೂರ್ತಿ ಗೆದ್ದಂತೆಯೇ. ಆದರೆ ನೆನಪಿಡು ಹುಡುಗಾ: ಯಾವುದೇ ಹಂತದಲ್ಲಾದರೂ ನೀನು ಸೌಂಡ್ ಮಾಡಬೇಡ. ನಿನ್ನ ಸಿನಿಮಾ ಸೌಂಡ್ ಮಾಡುತ್ತಾ ಹೋಗಲಿ...'
ನಾನು ಮೂರು ವರ್ಷಗಳ ಹಿಂದೆ ಕಿರಣ್ ಕಿವಿಯಲ್ಲಿ ಹೇಳಿದ ಮಾತು ಇದೀಗ ನಿಜವಾಗಿದೆ! 'ಚಾರ್ಲಿ 777' ಸೌಂಡ್ ಮಾಡುತ್ತಿದೆ. ಕಾಸರಗೋಡಿನ ಈ ಹುಡುಗನ ಎದೆಯಲ್ಲಿ 'ಡಬ್ ಡಬ್' ಶುರುವಾಗಿದೆ!
ಹೀಗೆ ಕಿರಣ್ ಎದೆಯಲ್ಲಿ 'ಡಬ್ ಡಬ್' ಶುರುವಾಗುವ ಮೊದಲೇ ಅಂದರೆ ಸಿನಿಮಾ ಗೀಳಿನಿಂದ ಬೆಂಗಳೂರು ಸೇರಿಕೊಂಡಾಗಲೇ ಈತನ ಕುಟುಂಬಸ್ಥರ ಎದೆಯಲ್ಲಿ 'ಡಬ್ ಡಬ್' ಶುರುವಾಗಿತ್ತು! ಅನಿಶ್ಚಿತತೆಯ ಚಿತ್ರರಂಗವನ್ನು ನಂಬಿಕೊಂಡು ಹೋದ ಈ ಹುಡುಗನ ಭವಿಷ್ಯ ಏನಾಗುವುದೋ ಎನ್ನುವ ಆತಂಕ ಅವರಿಗೆ. ಕಾಸರಗೋಡಿನಲ್ಲಿ ಕಿರಣನದ್ದು ದೊಡ್ಡ ಕುಟುಂಬ. ಈ ದೊಡ್ಡ ಕುಟುಂಬದ ಆತಂಕ ಕೂಡಾ ದೊಡ್ಡದೇ...
ಕಿರಣನ ತಾಯಿಯ ತಮ್ಮನೊಬ್ಬರು ಕಾಸರಗೋಡಿನ ಸರ್ಕಾರೀ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಯಲ್ಲಿದ್ದಾರೆ. ಅವರ ಹೆಸರು : ರತ್ನಾಕರ ಮಲ್ಲಮೂಲೆ. ಒಳ್ಳೆಯ ಯಕ್ಷಗಾನ ಪಟು. ಮನೆ ತುಂಬಾ ಕಲಾವಿದರಿದ್ದರೂ ಸಿನಿಮಾ ಕ್ಷೇತ್ರ ಮಾತ್ರ ಅಪರಿಚಿತ. ಇಂಥಾ ಅಪರಿಚಿತ ಕ್ಷೇತ್ರವನ್ನು ನಂಬಿ ಬದುಕು ರೂಪಿಸ ಹೊರಟಿರುವ ಕಿರಣ್ ಬಗ್ಗೆ ಈ ಸೋದರ ಮಾವನಿಗೂ ಆತಂಕವಿದ್ದೇ ಇತ್ತು. ನನ್ನ ಆತ್ಮೀಯರೂ ಆಗಿರುವ ರತ್ನಾಕರ್ ಅವರ ಆತಂಕದ ಮಾತುಗಳು ಹೀಗಿವೆ :
'ಅವ ನನ್ನ ಅಕ್ಕನ ಮಗ ಸರ್.
ಸೋದರಳಿಯ. ನನಗೆ ಒಬ್ಬಳು ಅಕ್ಕ, ಮೂವರು ಅಣ್ಣಂದಿರು. ಅಕ್ಕನಿಗೆ ಮೂವರು ಮಕ್ಕಳು.
ದೊಡ್ಡವ ಕಿರಣ. ಅವನಿಗೊಬ್ಬ ತಮ್ಮ ಮತ್ತು ತಂಗಿ. ಅವನ ಅಮ್ಮ ಅಂದರೆ ನನ್ನ ಅಕ್ಕ ಮಲ್ಲಮೂಲೆಯಲ್ಲೇ ಇರುವುದು, ನಮ್ಮ ಮುಖ್ಯ ಮನೆಯಲ್ಲಿ. ಕಿರಣ್ ಆಯ್ಕೆ ಮಾಡಿಕೊಂಡ ಕ್ಷೇತ್ರ ನಮಗೆಲ್ಲರಿಗೂ ಅಪರಿಚಿತ. ಅವನ ಈ ಸಿನೆಮಾ ಎಲ್ಲಾ ರೀತಿಯಿಂದಲೂ ಗೆದ್ದರೆ ಸಾಕಿತ್ತು. ಅವನ ಅವಿಶ್ರಾಂತ ಪರಿಶ್ರಮ ಸಾರ್ಥಕ ಆಗಬೇಕು. ಜತೆಗೆ ಈ ಸವಾಲಿನ ಕ್ಷೇತ್ರದಲ್ಲಿ ಮುನ್ನುಗ್ಗಲು ಅವಕಾಶವೂ ಆಗಬೇಕು. ನಿಮ್ಮಂತಹ ಅನುಭವಿ ಹಿರಿಯಣ್ಣನ ಪ್ರೋತ್ಸಾಹ, ಪ್ರೀತಿ ಆತನ ಮೇಲೆ ಸದಾ ಇರಲಿ. ಸಿನೆಮಾ ಕ್ಷೇತ್ರ ನಮ್ಮ ಇಡೀ ಕುಟುಂಬಕ್ಕೆ ಹೊಸತು. ಸಿನೆಮಾದ ಏಳುಬೀಳುಗಳ ಕತೆ ಕೇಳಿ ನೋಡಿ ನನಗೆ ಗೊತ್ತಷ್ಟೆ. ಮನೆ ಹುಡುಗನೊಬ್ಬ ದಿಢೀರ್ ಆ ಕ್ಷೇತ್ರಕ್ಕೆ ಮುನ್ನುಗ್ಗುವಾಗ ಆತಂಕ ಸಹಜ ತಾನೇ? ಅವನ ಛಲ, ಕಠಿಣ ಪರಿಶ್ರಮ ಮತ್ತು ಯೋಚನೆ ಮಾತ್ರ ಶಾರ್ಪ್ ಇತ್ತು. ಅದನ್ನು ನಾನು ಗುರುತಿಸಿದ್ದೆ. ಇನ್ನು ಅದು ನಿಮ್ಮಂತಹ ಅನುಭವಿ ಹಿರಿಯರ ಪ್ರೋತ್ಸಾಹ ಮತ್ತು ಆಶೀರ್ವಾದದಿಂದ ಗಟ್ಟಿಯಾಗಬೇಕು. ನಿಮ್ಮಂಥವರ ಮಾತು ಅವನ ಭವಿಷ್ಯಕ್ಕೆ ಶ್ರೀರಕ್ಷೆಯಾಗಲಿ. ನೀವೆಲ್ಲ ಹೀಗೆ ಭರವಸೆಯಿಂದ ಮಾತನಾಡುವಾಗ ಖುಷಿಯಾಗುತ್ತದೆ...' - ಹೀಗೆಂದು ಹೇಳಿ ಶೂನ್ಯವನ್ನು ದಿಟ್ಟಿಸಿದ್ದರು! ನಾನು ಕಿರಣ್ ಬಗ್ಗೆ ಭರವಸೆಯ ಮಾತಾಡಿದಾಗ ಸ್ವಲ್ಪವೇ ಸ್ವಲ್ಪ ಸುಧಾರಿಸಿಕೊಂಡಿದ್ದರು ರತ್ನಾಕರ ಮಲ್ಲಮೂಲೆ!
ಗಟ್ಟಿಯಾದ ಕಥೆ, ಹಠಮಾರಿ ಹುಡುಗನ ಕೆಲಸದ ಮೇಲಿನ ತನ್ಮಯತೆ, ಶ್ವಾನವೊಂದರ ಅದ್ಭುತ ಪರ್ಫಾರ್ಮೇನ್ಸ್, ನಿರ್ಮಾಪಕರ ಸಪೋರ್ಟ್ ಮತ್ತು ರಕ್ಷಿತ್ ಶೆಟ್ಟಿ ಎಂಬ ಹೃದಯವಂತನ ಅಮೋಘ ನಟನೆ 'ಚಾರ್ಲಿ 777' ಸಿನಿಮಾವನ್ನು ಒಂದು ಅದ್ಭುತ ಅನುಭವವನ್ನಾಗಿ ರೂಪಿಸಿದೆ. ಮೂರು ವರ್ಷಗಳ ಹಿಂದೆ ನಾನು ನುಡಿದ ಈ ಭವಿಷ್ಯ ಈಗ ನಿಜವಾಗಿದೆ, ಮತ್ತೊಮ್ಮೆ ಕಂಗ್ರಾಟ್ಸ್ ಹುಡುಗಾ...
ಯಾವ ಮಂಗಳೂರಿನಲ್ಲಿ ಬಾರ್ ಸಪ್ಲಯರ್ ಆಗಿ, ಪಬ್ ಸ್ಟುವರ್ಟ್ ಆಗಿ, ಕಂಪೆನಿ ಗೇಟಿನ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿರುವ ಅದೇ ಕಿರಣ್ ರಾಜ್ ಈಗ ಬೆಂಗಳೂರಿನ ಪ್ರತಿಷ್ಠಿತ ಯಶಸ್ವೀ ಸಿನಿಮಾ ನಿರ್ದೇಶಕ! ಮೊತ್ತ ಮೊದಲ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿಯ ಗೌರವ. ಯಾರಿಗುಂಟು ಯಾರಿಗಿಲ್ಲ ಈ ಸೌಭಾಗ್ಯ? ಯೋಗ - ಯೋಗ್ಯತೆ ಕೂಡಿ ಬರುವುದೆಂದರೆ ಇದುವೇ ಇರಬೇಕು ಅಲ್ವೇ?
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ