ಮೂಡುಬಿದಿರೆ : ಕೃಷಿಯಿಂದ ಆರ್ಥಿಕ ಲಾಭ ನಿರೀಕ್ಷಿತ ಮಟ್ಟದಲ್ಲಿ ಆಗದಿದ್ದರೂ ಅದಕ್ಕೂ ಮಿಗಿಲಾದ ಸಂತೋಷ, ನೆಮ್ಮದಿ ಮತ್ತು ಆರೋಗ್ಯ ಭಾಗ್ಯ ಲಭಿಸುವುದಂತೂ ನಿಶ್ಚಿತ ಎಂಬುದಾಗಿ ಮೂಡುಬಿದಿರೆ ಎಂ.ಸಿ.ಎಸ್.ಬ್ಯಾಂಕಿನ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.
ಕೆಲ್ಲಪುತ್ತಿಗೆಗುತ್ತು ದರೆಗುಡ್ಡೆ ಇಲ್ಲಿನ ಪ್ರಗತಿಪರ ಕೃಷಿಕರಾದ ಸುಭಾಸ್‍ಚಂದ್ರ ಚೌಟ ಅವರ ಮನೆಯಲ್ಲಿ ನ. 28ರಂದು ನಡೆದ ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ ಇದರ ನವೆಂಬರ ತಿಂಗಳ ಮಾಸಿಕ ಸಭೆ ಹಾಗೂ ಕೃಷಿತೋಟ ಪರಿವೀಕ್ಷಣೆ ಮತ್ತು ಸಂವಾದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿಕರೆಲ್ಲರೂ ಹೀಗೆ ಆಗಾಗ ಒಟ್ಟು ಸೇರುವುದರಿಂದ ರೈತರ ಸಂಕಷ್ಟದ ಅರಿವಾಗುವುದರ ಜೊತೆಗೆ ಸಹೋದರತೆಯ ಭಾವ, ಪರಸ್ಪರ ಅನ್ಯೋನ್ಯತೆ ಬೆಳೆಯುತ್ತದೆ ಎಂದರು.
ಮಂಗಳೂರಿನ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ(ರಿ). ಇದರ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಸಚಿನ್ ಅವರು ಮಾತನಾಡುತ್ತಾ ಪ್ರತಿಷ್ಠಾನ ಹಮ್ಮಿಕೊಂಡಿರುವ ಐದು ಪ್ರಮುಖ ಅಂಶಗಳಾದ ಕೃಷಿ, ಸ್ವ ಉದ್ಯೋಗ, ಪರಿಸರ ಸಂರಕ್ಷಣೆ, ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ವಿವರವಾದ ಮಾಹಿತಿಗಳನ್ನು ನೀಡಿ ರೈತರು ಇದರ ಗರಿಷ್ಠ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಿದರು.
ಬ್ಯಾಂಕ್ ಆಫ್ ಬರೋಡಾ ಮೂಡುಬಿದಿರೆ ಶಾಖೆಯ ಹಿರಿಯ ಪ್ರಬಂಧಕರಾದ ಸಂತೋಷ್ ಕುಮಾರ್ ಅವರು ಕೂಡಾ ಕೃಷಿಯನ್ನು ಪರಿಸರ ಪೂರಕವಾಗಿ ಮತ್ತು ಲಾಭದಾಯಕವಾಗಿ ಮಾಡುವ ಬಗ್ಗೆ ಮಾರ್ಗದರ್ಶನ ನೀಡಿದರು.
ಮಂಗಳೂರಿನ ತೋಟಗಾರಿಕಾ ಅಧಿಕಾರಿಗಳಾದ ಯುಗೇಂದ್ರ ಅವರು ಇಲಾಖೆಯಿಂದ ರೈತರಿಗೆ ಸಿಗುವ ವಿವಿಧ ರೀತಿಯ ಸವಲತ್ತು, ಸಹಾಯ ಧನಗಳ ವಿವರಗಳನ್ನು ನೀಡಿದರು. ಅಕ್ಷಯ ಸಾವಯವ ಕಾಪೋಷ್ಟ್ ಗೊಬ್ಬರದ ಬಗ್ಗೆ ಸುಧಾಕರ ಹೆಗ್ಡೆ ನಾರಾವಿಯವರು ಮಾಹಿತಿ ನೀಡಿದರು. ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮವೂ ನಡೆಯಿತು.
ಇದೇ ಸಂದರ್ಭದಲ್ಲಿ ಎಂ.ಸಿ.ಎಸ್ ಬ್ಯಾಂಕಿನ ವತಿಯಿಂದ ಶ್ರೀ ಸುಭಾಶ್ಚಂದ್ರ ಚೌಟ ಹಾಗೂ ಕೃ.ವಿ.ವಿ.ಕೇಂದ್ರದ ಅಧ್ಯಕ್ಷರಾದ ಗುಣಪಾಲ ಮುದ್ಯ ಇವರನ್ನು ಸನ್ಮಾನಿಸಲಾಯಿತು. ಕೃ.ವಿ.ವಿ.ಕೇಂದ್ರದ ವತಿಯಿಂದ ಕೆಲ್ಲಪುತ್ತಿಗೆಗುತ್ತು ನವೀನ್ ಚೌಟ ಅವರನ್ನು ಸನ್ಮಾನಿಸಲಾಯಿತು. ಈ ಮಧ್ಯೆ ಚೌಟರ ವೈವಿಧ್ಯಮಯ ಕೃಷಿ ತೋಟವನ್ನು ವೀಕ್ಷಿಸಲಾಯಿತು. ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿದರು. ಸುಭಾಶ್ಚಂದ್ರ ಚೌಟ ಸ್ವಾಗತಿಸಿ ಬಿ.ಅಭಯ ಕುಮಾರ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ