ಸತಿಪತಿಗಳೊಂದಾದ ಭಕ್ತಿಯು ಹಿತವಪ್ಪುದು ಶಿವಂಗೆ... ಎಂಬ ಶಿವಶರಣರ ಹೇಳಿಕೆಯಂತೆ ಬದುಕು ನಡೆಸಿದವರು ಕಾಯಕನಿಷ್ಠ ಶರಣ ದಂಪತಿಗಳಾದ ಕುಂಬಾರ ಗುಂಡಯ್ಯ ಮತ್ತು ಕೇತಲಾದೇವಿ.
ಸ್ವಚ್ಛ ಮಾಡಿದ ಜೇಡಿಮಣ್ಣನ್ನು ತುಳಿದು ಹದ ಮಾಡುವಾಗ ವಿಠಲನನ್ನು ನೆನೆದು ಭಜಿಸುತ್ತಾ ಭಕ್ತಿಯ ಪರಾಕಾಷ್ಟೆಯಲ್ಲಿ ತೇಲಿದ ಮಹಾರಾಷ್ಟ್ರದ ಪಂಡರಿನಾಥನ ಭಕ್ತನಾದ ಗೋರ ಎಂಬ ಕುಂಬಾರನ ಕತೆಯನ್ನು ನಾವೆಲ್ಲ ಕೇಳಿದ್ದೇವೆ. ಆ ಗೋರ ಕುಂಬಾರನು ವಿಠಲನ ಧ್ಯಾನದಲ್ಲಿ ಮೈ ಮರೆತು ಕುಣಿಯುವಾಗ ಮಣ್ಣಿನ ಜೊತೆಯಲ್ಲಿ ತನ್ನ ಮಗನನ್ನು ತುಳಿದ ಕಥೆ ಆತನ ಭಕ್ತಿಯ ಪರಾಕಾಷ್ಟೆಯನ್ನು ತಿಳಿಸುತ್ತದೆ. ಆದರೆ ಶಿವಶರಣನಾದ ಕುಂಬಾರ ಗುಂಡಯ್ಯ ತಾನೇ ತಯಾರಿಸಿದ ಮಡಕೆಯನ್ನು ಘಟದಂತೆ ಬಳಸಿ ತನ್ನ ಕೈಬೆರಳುಗಳಿಂದ ಅದರ ಮೇಲೆ ತಾಳ ಹಾಕುತ್ತಾ ಹಾಡತೊಡಗಿದರೆ ಸಾಕ್ಷಾತ ಆ ಪರಶಿವನೇ ಬಂದು ಕುಣಿದನೆಂದು ಹೇಳುತ್ತಾರೆ. ಅಂತಹ ಭಕ್ತಿ ಕುಂಬಾರ ಗುಂಡಯ್ಯನದು.
ಭಾರತ ದೇಶದ ಮೂಲ ವೃತ್ತಿ ಒಕ್ಕಲುತನ. ಆಯಗಳು ಎಂದು ಕರೆಯುವ ಕುಂಬಾರಿಕೆ, ಕಮ್ಮಾರಿಕೆ, ಚಮ್ಮಾರಿಕೆ, ಬಡಿಗತನ, ಹೀಗೆ ಹತ್ತು ಹಲವು ಉದ್ಯೋಗಗಳು ಒಕ್ಕಲುತನದ ಜೊತೆಗೆ ಕಾರ್ಯನಿರ್ವಹಿಸುತ್ತವೆ. ಇವುಗಳಲ್ಲಿ ಒಂದಾದ ಕುಂಬಾರಿಕೆಯಲ್ಲಿ ಪ್ರಮುಖವಾಗಿ ಚಿಕ್ಕಪುಟ್ಟ ಕುಡಿಕೆಗಳಿಂದ ಹಿಡಿದು ಅಡುಗೆಗೆ ಬಳಸುವ ಗಡಿಗೆಗಳು, ನೀರನ್ನು ತುಂಬಿಡಲು ಬಳಸುವ ತತ್ರಾಣಿಗಳು, ಮದುವೆಯಲ್ಲಿ ತರುವ ಐರಾಣಿ ಗಡಿಗೆಗಳು, ಒಕ್ಕಲುತನಕ್ಕೆ ಬಳಸುವ ದೊಡ್ಡ ದೊಡ್ಡ ನೀರಿನ ಬಾನಿಗಳು ಹೀಗೆ ಹತ್ತು ಹಲವು ಬಗೆಯ ವಿವಿಧ ಗಾತ್ರದ ಮಡಕೆಗಳನ್ನು ತಯಾರಿಸುತ್ತಾರೆ. ಯಾವುದೇ ಉಪಕರಣಗಳನ್ನು ಬಳಸದೆ ಕೈಯಿಂದಲೇ ಗಡಿಗೆಗಳನ್ನು ತಯಾರಿಸುವ ಕುಂಬಾರರನ್ನು ಕೈಗುಂಬಾರರೆಂದು, ಚಕ್ರವನ್ನು ಬಳಸಿ ಗಡಿಗೆಗಳನ್ನು ತಯಾರಿಸುವ ಕುಂಬಾರರನ್ನು ಚಕ್ರ ಕುಂಬಾರರೆಂದು ಕರೆಯುತ್ತಾರೆ. ಈ ಚಕ್ರದಲ್ಲೂ ಸಣ್ಣ ಚಕ್ರ, ದೊಡ್ಡ ಚಕ್ರ, ಮರದ ಚಕ್ರ ಮತ್ತು ಕಲ್ಲು ಚಕ್ರ ಎಂಬ ಪ್ರಭೇದಗಳಿವೆ. ಇಂದಿಗೂ ನಮ್ಮ ಉತ್ತರ ಕರ್ನಾಟಕದಲ್ಲಿ ಚಕ್ರಸಾಲಿ ಎಂದು ಅಡ್ಡ ಹೆಸರನ್ನು ಹೊಂದಿರುವ ಕುಂಬಾರರು ಇದ್ದಾರೆ. ಈ ಕುಂಬಾರರು ಹೆಚ್ಚಾಗಿ ಲಿಂಗಾಯತ ಧರ್ಮವನ್ನು ಪಾಲಿಸುತ್ತಿದ್ದು ಕೆಲವೇ ಕೆಲವು ಜನರು ವೈಷ್ಣವ ಧರ್ಮವನ್ನು ಕೂಡ ಪಾಲಿಸುತ್ತಾರೆ.
ಹಿಮರಾಜನು ತನ್ನ ಮಗಳು ಗಿರಿಜಾ ದೇವಿಯನ್ನು ಶಿವನಿಗೆ ವಿವಾಹ ಮಾಡಿ ಕೊಡುವಾಗ, ಧಾರೆಯೆರೆಯುವ ಹೂಜಿಯನ್ನು ಮಾಡಲು ತನ್ನ ದಿವ್ಯ ಶಕ್ತಿಯಿಂದ ವಿಷ್ಣುವಿನ ಸುದರ್ಶನ ಚಕ್ರವನ್ನು ತಿಗರಿಯನ್ನಾಗಿಸಿ, ಬ್ರಹ್ಮನ ಕೈಯಲ್ಲಿನ ಪುಸ್ತಕದ ಮೊಳೆಯನ್ನು ತಿಗರಿಯ ಮೊಳೆಯನ್ನಾಗಿಸಿ, ಶಿವನ ಕೈಯಲ್ಲಿನ ದಂಡವನ್ನು ತಿಗರಿಯನ್ನು ತಿರುಗಿಸುವ ಕೋಲನ್ನಾಗಿ ಮತ್ತು ತನ್ನ ಜನಿವಾರವನ್ನು ತಿಗರಿಯಿಂದ ಪೂಜೆಯನ್ನು ಬೇರ್ಪಡಿಸುವ ಕೊರೆದಾರವಾಗಿ ಬಳಸಿದನು. ಗಡಿಗೆಯನ್ನು ತಯಾರಿಸಲು ಬೇಕಾಗುವ ಎಲ್ಲ ವಸ್ತುಗಳನ್ನು ಒದಗಿಸಿದ ನಂತರ ಯಮನು ತನ್ನ ಕೋಣದ ಮೇಲೆ ಜೇಡಿ ಮಣ್ಣನ್ನು ಹೊತ್ತು ತಂದನು. ಆಗ ಕುಂಬಾರನನ್ನು ಸೃಷ್ಟಿಸಿ ಆತನಿಂದಲೇ ವಿವಾಹಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ತಯಾರಿಸಿ ಅವುಗಳನ್ನು ಪೂಜಿಸಿ ವಿವಾಹ ಮಂಟಪಕ್ಕೆ ತಂದರು. ಇವುಗಳನ್ನು ಐರಾಣಿಗಳೆಂದು ಕರೆದರು. ಆದ್ದರಿಂದ ಕುಂಬಾರನು ತಯಾರಿಸಿದ ಐರಾಣಿಗಳನ್ನು ಸಾಕ್ಷಾತ್ ದೇವರ ಸ್ವರೂಪ ಎಂದು ಹೇಳುತ್ತಾರೆ. ಆದ್ದರಿಂದಲೇ ಕುಂಬಾರರನ್ನು ಗಿರಿರಾಜನ ವಂಶಸ್ಥರು ಎಂದು ಹೇಳಲಾದ ಶಾಸನವೊಂದು ಸೊಲ್ಲಾಪುರದಲ್ಲಿ ದೊರೆತಿದೆ. ವಿವಾಹ ಪುರಾಣ ಎಂಬ ಶಾಸನದಲ್ಲಿಯೂ ಇದು ಉಲ್ಲೇಖಿತವಾಗಿದ್ದು ಹಂಪಿಯಲ್ಲಿಯೂ ಕೂಡ ಕೆಲವು ತಾಮ್ರದ ಶಾಸನಗಳಲ್ಲಿ ಈ ಕುರಿತ ಉಲ್ಲೇಖಗಳು ಇವೆ.
ಇಂದಿನ ಬೀದರ ಜಿಲ್ಲೆಯ ಭಾಲ್ಕಿ (ಅಂದಿನ ಭಲ್ಲೂಕಿ) ಯಲ್ಲಿ ನೆಲೆಸಿದ್ದವನು ಕುಂಬಾರ ಗುಂಡಯ್ಯ. ಈತನ ಮಡಿಕೆ ಕುಡಿಕೆಗಳು ಗುಣಮಟ್ಟದಲ್ಲಿ ಅತ್ಯುನ್ನತವಾಗಿದ್ದು ಸುತ್ತಲಿನ ಹತ್ತು ಹಳ್ಳಿಯವರು ಈತನಿಂದಲೇ ಮಡಿಕೆ ಕುಡಿಕೆಗಳನ್ನು ಖರೀದಿಸುತ್ತಿದ್ದರು. ಅಂತೆಯೇ ಊರಿನಲ್ಲಿಯೂ ಕೂಡ ಆತನಿಗೆ ಒಳ್ಳೆಯ ಹೆಸರಿತ್ತು. ಸಮಾಜದ ಗಣ್ಯ ವ್ಯಕ್ತಿಗಳಲ್ಲಿ ಕುಂಬಾರ ಗುಂಡಯ್ಯನು ಒಬ್ಬನಾಗಿದ್ದ. ಅಡುಗೆಗೆ ಬಳಸುವ ಮಡಕೆ ಕುಡಿಕೆಗಳಲ್ಲದೆ, ಸತ್ತಾಗ ಬಳಸುವ ಪ್ರೇತ ಗಡಿಗೆಗಳು, ಮದುವೆಗಳಲ್ಲಿ ಬಳಸುವ ಐರಾಣಿ ಗಡಿಗೆಗಳು, ದೊಡ್ಡ ದೊಡ್ಡ ಹರವಿಗಳು, ದನ ಕರುಗಳು ನೀರು ಕುಡಿಯಲು ಉಪಯೋಗವಾಗುವ ಬಾನಿಗಳು, ಹೆಂಡ ಇಳಿಸುವ ತತ್ರಾಣಿಗಳು, ಹೀಗೆ ಹತ್ತು ಹಲವು ವಿಧದ ಗಡಿಗೆಗಳನ್ನು ಆತ ತಯಾರಿಸುತ್ತಿದ್ದನು.ಹಗಲೆಲ್ಲ ತನ್ನ ಕಾಯಕದಲ್ಲಿ ನಿರತನಾಗಿರುತ್ತಿದ್ದ ಕುಂಬಾರ ಗುಂಡಯ್ಯನು ಸಂಜೆಯಾಗುತ್ತಿದ್ದಂತೆ ತಾನೇ ತಯಾರಿಸಿದ ಘಟವನ್ನು ತಾಳಬದ್ಧವಾಗಿ ಬಾರಿಸುತ್ತಾ ಹಾಡತೊಡಗಿದರೆ ಪುರ ಜನರು ಆತನ ಸುತ್ತಲೂ ನೆರೆಯುತ್ತಿದ್ದರು.
ಹಗಲಿನಲ್ಲಿಯೂ ಕೂಡ ಆತ ಯಾವಾಗಲೂ ಶಿವ ಸ್ಮರಣೆಯನ್ನು ಮಾಡುತ್ತಲೇ ತನ್ನ ಕಾಯಕದಲ್ಲಿ ನಿರತನಾಗಿರುತ್ತಿದ್ದನು. ಒಳ್ಳೆಯ ಜೇಡಿಮಣ್ಣನ್ನು ಶೇಖರಿಸಿ ಕಸ-ಕಡ್ಡಿಗಳಿಲ್ಲದಂತೆ ಮಣ್ಣನ್ನು ಸ್ವಚ್ಛಗೊಳಿಸುವಾಗ, ಮಣ್ಣಿಗೆ ಸರಿಯಾದ ಪ್ರಮಾಣದ ನೀರನ್ನು ಹಾಕಿ ತುಳಿದು ಹದಗೊಳಿಸುವಾಗ, ತಿಗರಿಯನ್ನು ಜೋರಾಗಿ ತಿರುಗಿಸುತ್ತಾ ಅದರ ಮೇಲೆ ಮಣ್ಣಿನ ಮುದ್ದೆಯನ್ನು ಇಟ್ಟು ಬೇಕಾದ ಆಕಾರಕ್ಕೆ ಮಡಿಕೆ ಕುಡಿಕೆಗಳನ್ನು ತಯಾರಿಸುತ್ತಾ ಹೀಗೆ ಪ್ರತಿಯೊಂದು ಕಾರ್ಯ ಮಾಡುವಾಗಲು ಶಿವ ನಾಮ ಸ್ಮರಣೆ ಮಾಡುತ್ತಲೇ ಇರುತ್ತಿದ್ದನು.
ಇನ್ನು ಆತನ ಪತ್ನಿ ಕೇತಲಾದೇವಿಯು ತಮ್ಮ ಕುಲ ಕಸುಬಾದ ಕುಂಬಾರಿಕೆಯಲ್ಲಿ ಗಂಡನಿಗೆ ಸಹಾಯ ಮಾಡುವುದರ ಜೊತೆ ಜೊತೆಗೆ ಲಿಂಗ ಪೂಜೆಯ ನಂತರ ಶಿವಲಿಂಗವನ್ನು ಕರಡಿಗೆಯಲ್ಲಿ ಇಟ್ಟುಕೊಳ್ಳುವಾಗ ಬಳಸುವ ಚೌಕನೆಯ ವಸ್ತ್ರ ಪಾವಡವನ್ನು ಜನರಿಗೆ ಒದಗಿಸುವ ಕೆಲಸವನ್ನು ಮಾಡುತ್ತಿದ್ದಳು. ಇದು ಆಕೆಯ ನೆಚ್ಚಿನ ಕೆಲಸವಾಗಿತ್ತು ಆಕೆಯು ಹಲವಾರು ವಚನಗಳನ್ನು ರಚಿಸಿದ್ದಾಳೆ. ಉನ್ನತ ವರ್ಗದ ಸೊತ್ತಾಗಿದ್ದ ಸಂಸ್ಕೃತ ಭಾಷೆಯಲ್ಲೂ ಕೂಡ ಆಕೆ ಪರಿಣತಿ ಸಾಧಿಸಿದ್ದಳು ಎಂಬುದನ್ನು ಆಕೆಯ ಒಂದು ವಚನದಲ್ಲಿ ನಾವು ಕಾಣಬಹುದು.
ಒಂದು ಬಾರಿ ಬಸವಣ್ಣನವರು ಲಿಂಗ ಪೂಜೆಯಲ್ಲಿ ನಿರತರಾಗಿದ್ದಾಗ, ಅವರಿಗೆ ಪಾವಡದ ಅವಶ್ಯಕತೆ ಇತ್ತು. ಪಾವಡವನ್ನು ಒದಗಿಸುವಲ್ಲಿ ತಡೆಯಾಗಬಾರದೆಂದು ಕೂಡಲೇ ತನ್ನ ಎದೆಯ ಚರ್ಮದಿಂದ ಕೇತಲಾ ದೇವಿಯು ಪಾವಡವನ್ನು ತಯಾರಿಸಿ ಒದಗಿಸಿದಳು ಎಂದು ಆಕೆಯ ಕುರಿತ ಪವಾಡಗಳು ಇವೆ. ಈಕೆಯು ವಚನಗಳನ್ನು ಕೂಡ ರಚಿಸಿದ್ದಾಳೆ. ಈಕೆಯ ವಚನಗಳ ಅಂಕಿತ ಕುಂಭೇಶ್ವರ
ಹದ ಮಣ್ಣಲ್ಲದೆ ಮಡಿಕೆಯಾಗದು
ವ್ರತಹೀನನ ಬೆರೆಯಲಾಗದು
ಬೆರೆದೆಡೆ ನರಕ ತಪ್ಪದು
ನಾನೊಲ್ಲೆ ಬಲ್ಲೆನಾಗಿ ಕುಂಭೇಶ್ವರ
ಎಂದು ವಚನವನ್ನು ರಚಿಸಿರುವ ಕೇತಲೆಯ ಪ್ರಕಾರ ಮಣ್ಣು ಹದವಾಗಿ ಇಲ್ಲದಿದ್ದರೆ ಮಡಿಕೆಯಾಗದು, ವ್ರತದಂತೆ ಕಾಯಕವನ್ನು ಮಾಡದಿರುವ ನೇಮ ನಿಷ್ಠೆಯಿಲ್ಲದ ವ್ಯಕ್ತಿಯೊಂದಿಗೆ ಜೀವನ ನಡೆಸಲಾಗದು, ಹಾಗೆ ನಡೆಸಿದ್ದಾದರೆ ನರಕದಂತಹ ಜೀವನ ಅದಾಗುತ್ತದೆ ಆದ್ದರಿಂದ ಅಂತಹ ಜೀವನ ನನಗೆ ಬೇಡ ಎಂದು ಆಕೆ ಸ್ಥೂಲ ಅರ್ಥದಲ್ಲಿ ಹೇಳಿದ್ದಾಳೆ. ಆದರೆ ಇದನ್ನು ಆಳವಾಗಿ ವಿವೇಚನೆ ಮಾಡಿದರೆ ಈ ದೇಹವೆಂಬ ಮಡಿಕೆಯನ್ನು ಕಾಯಕವೆಂಬ ಹದ ಮಣ್ಣಿನಿಂದ ತಯಾರಿಸಿ ಲಿಂಗ ಪೂಜೆಯೆಂಬ ಬೆಂಕಿಯಲ್ಲಿ ಹದವಾಗಿ ಬೇಯಿಸಿ ಶುದ್ಧವಾಗಿಟ್ಟುಕೊಳ್ಳಬೇಕು ಎಂಬುದು ಆಕೆಯ ವಚನದ ತಾತ್ಪರ್ಯ.
ಒಟ್ಟಿನಲ್ಲಿ ಸತಿಪತಿಗಳು ಶರಣ ಧರ್ಮಕ್ಕೆ ಅನುಗುಣವಾಗಿ ಜೀವನ ನಡೆಸುತ್ತಿದ್ದು ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದರು.
ಒಂದು ದಿನ ಇಳಿ ಹೊತ್ತಿನ ಸಮಯದಲ್ಲಿ ತನ್ನ ಘಟವನ್ನು ಬಾರಿಸುತ್ತಾ ಶಿವನನ್ನು ಕುರಿತು ಸುಶ್ರಾವ್ಯವಾಗಿ ಹಾಡುತ್ತಿದ್ದಾಗ ಕೈಲಾಸದಲ್ಲಿ ಧ್ಯಾನ ನಿರತನಾಗಿದ್ದ ಶಿವ ಎಚ್ಚರಗೊಂಡನು. ಹಾಡಿನ ಮಧುರ ದನಿಯ ಹಿಂದಿನ ಭಕ್ತಿ ಭಾವಕ್ಕೆ ಉಮೆಯ ಸಹಿತ ಶಂಕರನು ಭೂಲೋಕಕ್ಕೆ ಬಂದನು. ಕಣ್ಣು ಮುಚ್ಚಿ ಹಾಡುತ್ತಿದ್ದ ಕುಂಬಾರ ಗುಂಡಯ್ಯನ ತಾಳವಾದ್ಯಕ್ಕೆ ಸಾಕ್ಷಾತ್ ಶಿವನು ಕುಣಿಯಲಾರಂಭಿಸಿದನು. ಎಷ್ಟೋ ಹೊತ್ತಿನ ಬಳಿಕ ಬಾರಿಸುವುದನ್ನು ಮುಗಿಸಿದ ಕುಂಬಾರ ಗುಂಡಯ್ಯ ಕಣ್ತೆರೆದು ನೋಡಿದಾಗ ಎದುರಿಗೆ ಸಾಕ್ಷಾತ್ ಶಿವ!!. ಶಿವನನ್ನು ಕಂಡು ಮೂಕ ವಿಸ್ಮಿತನಾದ ಕುಂಬಾರ ಗುಂಡಯ್ಯ ಭಕ್ತಿಯಿಂದ ತನ್ನೆರಡು ಕೈಗಳನ್ನು ಮುಗಿದು ಶಿವನ ಪಾದಕ್ಕೆರಗಿದನು.
ಈ ಘಟನೆಯನ್ನು ನಮ್ಮ ಜನಪದರು ಹೀಗೆ ಹಾಡಿದ್ದಾರೆ
ಕುಂಬಾರ ಗುಂಡಯ್ಯ ತುಂಬಿ ತಿಗರಿಗೆ ಕೆಸರ
ಶಂಭು ಹರನೆಂದು ತಿರುಗಿಸಲು / ಶಿವ ಕುಣಿದ
ಹಂಬಲಿಸಿ ಜಂಗ ಕಟ್ಟಗೊಂಡು
ಭಕ್ತ ವತ್ಸಲನಾದ ಶಿವನು ಕುಂಬಾರ ಗುಂಡಯ್ಯನನ್ನು ಕುರಿತು "ಸಾಕು ನಡೆ ನನ್ನೊಂದಿಗೆ ಕೈಲಾಸಕ್ಕೆ ಅಲ್ಲಿಯೇ ಹಾಡುತ್ತಾ ನನ್ನೊಂದಿಗೆ ಇದ್ದುಬಿಡು ಎಂದು ಹೇಳಿದನು. ಅಲ್ಲಿ ಬಂದು ನಾನೇನು ಮಾಡಬೇಕು ಎಂದು ಗುಂಡಯ್ಯನು ವಿನಮ್ರನಾಗಿ ಕೇಳಿದನು. ಅದಕ್ಕುತ್ತರವಾಗಿ ಶಿವನು ಅಲ್ಲಿ ನೀನು ಏನನ್ನು ಮಾಡಬೇಕಾಗಿಲ್ಲ.ಆರಾಮಾಗಿ ದಿನಗಳನ್ನು ಕಳೆಯಬಹುದು ಎಂದನು. ಅದಕ್ಕೆ ಜನಪದ ಭಾಷೆಯಲ್ಲಿ ಉತ್ತರ ಹೀಗಿದೆ
ಬೇಡೆನಗೆ ಕೈಲಾಸ ಬಾಡುವುದು ಕಾಯಕವು
ನೀಡನಗೆ ಶಿವನೇ ಕಾಯಕವ / ಕುಣಿದಾಡಿ
ನಾಡ ಹಂದರಕ್ಕೆ ಹಬ್ಬಿಸುವೆ.
ಕುಂಬಾರ ಗುಂಡಯ್ಯ ನಸುನಕ್ಕು ವಿನೀತನಾಗಿ ಮತ್ತೊಮ್ಮೆ ಕೈ ಮುಗಿದು 'ನಾನು ನಿನ್ನೊಡನೆ ಕೈಲಾಸಕ್ಕೆ ಬಂದರೆ ನನ್ನ ಕಾಯಕ ನಿಂತು ಹೋಗುತ್ತದೆ' ಎಂದು ಹೇಳಿದನು. ಆತನ ಕಾಯಕ ನಿಷ್ಠೆಯನ್ನು ಮೆಚ್ಚಿದ ಶಿವನು ಆತನಿಗೆ ಹರಸಿ ಅಂತರ್ಧಾನನಾದನು.
ಹರಿಹರ ಕವಿಯು ತನ್ನ ಗುಂಡಯ್ಯನ ರಗಳೆಯಲ್ಲಿ ಜಗವೆಲ್ಲ ಆಡಿಸುವ ಶಿವನನ್ನು ಕುಂಬಾರ ಗುಂಡಯ್ಯ ಆಡಿಸಿದ ಎಂದು ಬರೆದಿದ್ದಾನೆ.
ಕುಣಿದಾಡುತ್ತ ಮಡಿಕೆಗಳ0 ಬಾರಿಸಿ
ಕುಣಿದಾಡುತ್ತ ಕುಡಿಕೆಗಳಂ ಬಾರಿಸಿ
ಶಿವನು ಶಿವನ ಸುತ್ತಿ ಬರುತ್ತುಂಬಾರಿಸಿ
ಕುಣಿಯುತ ಕೊರಲೆತ್ತುತ ನೆರೆ ಕೂಗುತ
ತೊನೆಯುತ ತೂಗಾಡುತ ಸುಖಿಯಾಗುತ
ಆಡುವ ಗುಂಡಯ್ಯನ ಹೊಸ ನೃತ್ಯವ
ನೋಡುವ ಶಿವನಂ ಮುಟ್ಟಿತು ಸತ್ಯಂ
ತಾನೇ ತಯಾರಿಸಿದ ಮಡಕೆಗಳನ್ನು ಹದವಾಗಿ ಸುಟ್ಟು ಅವುಗಳು ಸರಿಯಾಗಿವೆಯೇ ಎಂದು ಬಾರಿಸುತ್ತ ಭಕ್ತಿ ಪರವಶತೆಯಲ್ಲಿ ಮಗ್ನನಾಗಿದ್ದ ಕುಂಬಾರ ಗುಂಡಯ್ಯನ ತಾಳಕ್ಕೆ ಸಾಕ್ಷಾತ್ ಪರ ಶಿವನೇ ಕೈಲಾಸದಲ್ಲಿ ನೃತ್ಯ ಮಾಡುವುದನ್ನು ಕಂಡು ಪಾರ್ವತಿ ದೇವಿಯು ಶಿವನನ್ನೇ ಕುಣಿಸುವಂತಹ ಭಕ್ತನದಾರು ತೋರಿಸು ಎಂದು ಕೇಳಿದಾಗ ಶಿವನು ಪಾರ್ವತಿಯನ್ನು ಭೂಲೋಕಕ್ಕೆ ಕುಂಬಾರ ಗುಂಡಯ್ಯನನ್ನು ತೋರಿಸಲು ಕರೆತಂದನೆಂದು ಹರಿಹರನು ತನ್ನ ರಗಳೆಯಲ್ಲಿ ವರ್ಣಿಸಿದ್ದಾನೆ.
ಹೀಗೆ ತಾವು ಶಿವನಲ್ಲಿಟ್ಟಿರುವ ಭಕ್ತಿ ಮತ್ತು ಕಾಯಕದಲ್ಲಿರುವ ನಿಷ್ಠೆಯನ್ನು ಅನೂಚಾನವಾಗಿ ನಡೆಸಿಕೊಂಡು ಬಂದ ಕುಂಬಾರ ಗುಂಡಯ್ಯ ಮತ್ತು ಕೇತಲಾದೇವಿಯವರ ಪಾದಕ್ಕೆ ನಮೋ ನಮಃ
-ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ,. ಗದಗ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ