‘ಕನ್ನಡ ಸಾಂಸ್ಕೃತಿಕ ಸಂವರ್ಧನೆ ಮತ್ತು ಭಾಷಾಂತರಕಾರರು’ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ
ಉಜಿರೆ: ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯನ್ನು ಮೀರಿ ಗ್ರಾಮೀಣ ಪ್ರದೇಶಗಳಲ್ಲಿ ಭಾಷಾಂತರ ವಿಚಾರ ಸಂಕಿರಣದಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಯುವಜನರ ಬೌದ್ಧಿಕ ಬೆಳವಣಿಗೆಯಾಗಲು ಸಾಧ್ಯ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ. ವಿ. ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ನ. 22, 23ರಂದು ನಡೆದ ‘ಕನ್ನಡ ಸಾಂಸ್ಕೃತಿಕ ಸಂವರ್ಧನೆ ಮತ್ತು ಭಾಷಾಂತರಕಾರರು’ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗ ಮತ್ತು ಭಾಷಾಂತರ ಕೇಂದ್ರ ಹಾಗೂ ಶ್ರೀ ಕೆ.ಎಸ್. ವೀರಭದ್ರಪ್ಪ ದತ್ತಿನಿಧಿ ಮತ್ತು ಉಜಿರೆ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಡಾ. ಹಾ.ಮಾ.ನಾ. ಸಂಶೋಧನಾ ಕೇಂದ್ರ ಮತ್ತು ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಕರ್ನಾಟಕ ಭಾಷಾಂತರಕಾರರ ಒಕ್ಕೂಟದ ಸಹಯೋಗದಲ್ಲಿ ಭಾಷಾಂತರಕಾರರ ಮೂರನೆಯ ಸಮಾವೇಶದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭಾಷಾಂತರ ಎಂಬುದು ಒಂದು ಚಿನ್ನದ ನಾಣ್ಯದಿಂದ ಮತ್ತೊಂದು ಚಿನ್ನದ ನಾಣ್ಯವನ್ನು ಸೃಷ್ಟಿಸುವ ಮಹಾ ಪ್ರಕ್ರಿಯೆ. ಒಂದು ವಸ್ತು ಅಥವಾ ಸಂಸ್ಕೃತಿಯ ಆಳವನ್ನು ಅರಿತಾಗ ಮಾತ್ರ ಉತ್ತಮ ಅನುವಾದಕನಾಗಲು ಸಾಧ್ಯ. ಸಂಸ್ಕೃತಿಜನ್ಯ ಶಬ್ದಗಳನ್ನು ಭಾವಪೂರ್ವಕವಾಗಿ ಅನುವಾದ ಮಾಡುವುದು ಕಷ್ಟಸಾಧ್ಯ ಎಂದು ಅವರು ಹೇಳಿದರು. “ಕನ್ನಡ ವಿಶ್ವವಿದ್ಯಾಲಯ ಇಂತಹ ಕಾರ್ಯಕ್ರಮ, ಚಟುವಟಿಕೆಗಳಿಗೆ ಸದಾ ಸಿದ್ಧ” ಎಂದರು.
ಸಮಾರೋಪ ನುಡಿಗಳನ್ನಾಡಿದ ಕನ್ನಡದ ಖ್ಯಾತ ಬರಹಗಾರ ಅಗ್ರಹಾರ ಕೃಷ್ಣಮೂರ್ತಿ, ಬೇರೆ ಭಾಷೆ, ಸಂಸ್ಕೃತಿಯಿಂದ ನಮ್ಮತನಕ್ಕೆ ತರ್ಜುಮೆ ಮಾಡುವಾಗ ತಪ್ಪುಗಳು ಸಹಜ. ಹಾಗೆಯೇ ತಪ್ಪುಗಳನ್ನು ತಿದ್ದಿಕೊಂಡು ಮುಂದುವರಿದಂತೆ ಅನುವಾದಗಳು ಬೇರೆ ಬೇರೆ ಸ್ವರೂಪವನ್ನು ಪಡೆದುಕೊಳ್ಳಲು ದಾರಿಯಾಗುತ್ತದೆ; ಉತ್ತಮ ಕೃತಿಯ ಮರುಸೃಷ್ಟಿಗೆ ಬುನಾದಿಯಾಗುತ್ತದೆ ಎಂದರು.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗ ಮತ್ತು ಭಾಷಾಂತರ ಕೇಂದ್ರದ ಮುಖ್ಯಸ್ಥ ಡಾ. ಎ. ಮೋಹನ್ ಕುಂಟಾರ್, ಉಜಿರೆ ಶ್ರೀ ಧ. ಮಂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ ಕೆ.ಎನ್. ಉಪಸ್ಥಿತರಿದ್ದರು.
ಉಜಿರೆ ಶ್ರೀ ಧ. ಮಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಸ್ವಾಗತಿಸಿ, ಡಾ. ಹಾ.ಮಾ.ನಾ. ಸಂಶೋಧನಾ ಕೇಂದ್ರದ ಸಂಯೋನಾಧಿಕಾರಿ ಡಾ. ದಿವಾಕರ್ ಕೊಕ್ಕಡ ವಂದಿಸಿದರು. ಕನ್ನಡ ಪ್ರಾಧ್ಯಾಪಕ ಡಾ. ನಾಗಣ್ಣ ಡಿ.ಎ. ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ