ಕುಂಟಿಕಾನ ಮಠದಲ್ಲಿ ಗುರುಭಿಕ್ಷಾಸೇವೆ, ರುದ್ರಾಭಿಷೇಕ

Upayuktha
0

ದೇವಸ್ಥಾನ ಐಕ್ಯದ ಕೇಂದ್ರವಾಗಿದೆ: ರಾಘವೇಶ್ವರ ಭಾರತೀ ಮಹಾಸ್ವಾಮೀಜಿ



ಬದಿಯಡ್ಕ: ಪರಿಪಾಲಕನೂ ಸಂಹಾರಕನೂ ಜೊತೆಯಾಗಿ ಅನುಗ್ರಹಿಸುವ ಕುಂಟಿಕಾನ ಮಠದಲ್ಲಿ ಶುಭದ ಅವತರಣ ಆಗಿದೆ. ಕ್ಷೇತ್ರದ ಗ್ರಹಣ ಬಿಟ್ಟಿದೆ, ಶುಭಗಳ ಸಾಲು ಸಾಲು ಕಾದಿದೆ ಎಂಬ ಸಂತೋಷ ಮನದಲ್ಲಿದೆ. ದೇವಸ್ಥಾನವು ಐಕ್ಯದ ಕೇಂದ್ರವಾಗಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು. 


ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಸೋಮವಾರ ಗುರುಭಿಕ್ಷಾ ಸೇವೆಯನ್ನು ಸ್ವೀಕರಿಸಿ ಅವರು ಭಕ್ತರನ್ನುದ್ದೇಶಿಸಿ ಆಶೀರ್ವಚನವನ್ನು ನೀಡಿ ಅನುಗ್ರಹಿಸಿದರು. ಈ ಸನ್ನಿಧಿಯಲ್ಲಿ ಗುರುವನ್ನು ಕಾಣಲು 21 ವರ್ಷಗಳ ಕಾಲ ಕಾದ ಭಕ್ತರ ಸಂಭ್ರಮದ ಸ್ವಾಗತವು ಗುರುವಿನ ಬಗ್ಗೆ ಇರುವ ನಿಮ್ಮ ಹಸಿವನ್ನು ತೋರಿಸುತ್ತದೆ. ಮನಸ್ಸುಗಳು ಸೇರಲಿ ಮಹತ್ಕಾರ್ಯಗಳು ನಡೆಯಲಿ. ಪರ್ವಕಾಲ ಈಗ ಬಂದೊದಗಿದೆ. ಕಾರಣಾಂತರದಿಂದ ಬಾರದವರೆಲ್ಲಾ ಬಂದು ಸೇರಿಯೂ ಆಗಿದೆ. 



ಶಂಕರನಾರಾಯಣ ಎಂದರೆ ಐಕ್ಯದ ಪ್ರತೀಕ. ಎರಡು ಸನ್ನಿಧಿಗಳು ಒಂದಾಗಿ ಸೇರುವಂತಾದ್ದು. ಶಂಕರ ಮತ್ತು ನಾರಾಯಣ ಎರಡೂ ಸ್ವತಂತ್ರ್ಯ ಸಾನ್ನಿಧ್ಯಗಳಾಗಿದೆ. ಪರಿಪಾಲಕನೂ ಸಂಹಾರಕನೂ ಜೊತೆಯಾಗಿ ಅನುಗ್ರಹಿಸುವ ಸ್ಥಳವಿದಾಗಿದೆ. ದೇವಸ್ಥಾನಗಳು ಇರುವುದು ಶಾಂತಿಗಾಗಿ. ದೇವಸ್ಥಾನಕ್ಕೆ ಬಂದು ಶಾಂತಿಯನ್ನು ಕಳೆದುಕೊಳ್ಳುವಂತಾಗಬಾರದು. ನಮ್ಮ ಅಶಾಂತತೆಗೆ ದೇವಸ್ಥಾನವನ್ನು ನಿಮಿತ್ತ ಮಾಡಿಕೊಳ್ಳಬಾರದು. ಕುಂಟಿಕಾನ ಮಠವು ಪುಷ್ಪಕ ವಿಮಾನವಿದ್ದಂತೆ. ಇಲ್ಲಿ ಎಷ್ಟು ಜನ ಸೇರಿದರೂ ಎಲ್ಲಾ ವ್ಯವಸ್ಥೆಯಿದೆ. ಕ್ಷೇತ್ರದ ಗ್ರಹಣ ಬಿಟ್ಟಿದೆ, ಶುಭಗಳ ಸಾಲು ಸಾಲು ಕಾದಿದೆ ಎಂಬ ಸಂತೋಷ ಮನದಲ್ಲಿದೆ. ಮನಸ್ಸುಗಳೆಲ್ಲಾ ಒಂದಾಗಲಿ. ಗುರುಚರಣದಲ್ಲಿ ಯಾವಾಗಲೂ ಮರಳಿ ಬರಲು ಅವಕಾಶವಿದೆ. ವಿಶಾಲ ಹೃದಯ ಇರುವಂತಹ ಸ್ಥಾನವಿದಾಗಿದೆ. ಸಂಕೋಚವನ್ನು ಬಿಟ್ಟು ಎಲ್ಲರೂ ಒಂದಾಗಿ, ಇನ್ನೊಂದು ಮಳೆಗಾಲ ದೇವರು ಬಾಲಾಲಯದಲ್ಲಿ ಕಳೆಯುವಂತಾಗದೆ ಬ್ರಹ್ಮಕಲಶವನ್ನು ನೆರವೇರಿಸಲು ಕೈ ಜೋಡಿಸಬೇಕು. ದೇವರ ಸನ್ನಿಧಾನಕ್ಕೆ ಬಂದಾಗ ಭಕ್ತ ಎನ್ನುವ ಹೆಜ್ಜೆಯಡಿ ಒಂದಾಗುತ್ತೇವೆ. ಕೊಳೆಗಳೆಲ್ಲಾ ತೊಳೆದು ಹೋಗಿ ದೇವರ ಕಾರ್ಯಕ್ಕಾಗಿ ಎಲ್ಲರೂ ಒಂದಾಗಬೇಕು. ಮೋಡ ಕರಗಿದೆ, ಕತ್ತಲು ದೂರವಾಗಿದೆ. ದೇವರು ಮತ್ತೆ ಗರ್ಭಗುಡಿಯಲ್ಲಿ ಕೂರಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ವಿಶೇಷವಾದ ಸೇವೆಯನ್ನು ಮಾಡಬೇಕು. ಎಲ್ಲವೂ ಮೊದಲಿನಂತೆ ಆಗಲಿ. ತ್ಯಾಗಶೀಲರಾಗಿ, ದೇವಕಾರ್ಯ, ಧರ್ಮಕಾರ್ಯದೊಂದಿಗೆ ಸಂಘಟನಾಪರರಾಗಿ, ಅಧರ್ಮದ ಹಾದಿಯನ್ನು ತುಳಿಯದೇ, ದೇವರಕಾರ್ಯವನ್ನು ಪ್ರಧಾನವಾಗಿಟ್ಟುಕೊಂಡು ಮುಂದುವರಿಯುವ ಮನಸ್ಸು ಸೇರಲಿ ಎಂದರು. 





ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್, ಜೀರ್ಣೋದ್ಧಾರ ಸಮಿತಿ, ಆಡಳಿತ ಮೊಕ್ತೇಸರರ ಸಹಯೋಗದಲ್ಲಿ ಜರಗಿ ಗುರುಭಿಕ್ಷಾ ಸೇವೆಯಲ್ಲಿ ಊರಪರವೂರ ಅನೇಕ ಭಕ್ತ ಜನರು ಪಾಲ್ಗೊಂಡಿದ್ದರು. ಆಡಳಿತ ಮೊಕ್ತೇಸರ ಶಂಕರನಾರಾಯಣ ಭಟ್ ದಂಪತಿಗಳು ಪಾದುಕಾ ಪೂಜೆ, ಗುರುಭಿಕ್ಷೆ ನಡೆಸಿದರು. ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ವಿ.ಬಿ.ಕುಳಮರ್ವ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭಾನುವಾರ ರಾತ್ರಿ ಶ್ರೀಗಳು ಆಗಮಿಸಿದ್ದರು. ಸೋಮವಾರ ಬೆಳಗ್ಗೆ ಶ್ರೀಪೂಜೆ, ಶ್ರೀಪಾದುಕಾಪೂಜೆ, ಶ್ರೀ ಶಂಕರನಾರಾಯಣ ದೇವರಿಗೆ ರುದ್ರಾಭಿಷೇಕ ನಡೆಯಿತು. ಮಧ್ಯಾಹ್ನ ಶ್ರೀಗಳೊಂದಿಗೆ ಸಮಾಲೋಚನಾ ಸಭೆ, ಸಂಜೆ ಶ್ರೀಗಳು ಆಶೀರ್ವಚನವನ್ನು ನೀಡಿ, ಸೇರಿದ ಭಕ್ತ ಜನರಿಗೆ ಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿದರು.


....

ಶ್ರೀಮಠದ ಕಾರ್ಯಕರ್ತರ ಸಂಘಟನೆ ಪ್ರಾರಂಭವಾಗಿರುವುದೇ ಕುಂಟಿಕಾನ ಮಠದಲ್ಲಿ. ಬಿಂದುವಾಗಿ ಪ್ರಾರಂಭವಾಗಿದ್ದು ಇಂದು ಸಿಂಧುವಾಗಿದೆ. ಸಹಸ್ರ ಸಹಸ್ರ ಕಾರ್ಯಕರ್ತರ ಶಕ್ತಿಯ ಫಲವಾಗಿ ಅದೆಷ್ಟೋ ಕಾರ್ಯಗಳು ನಡೆದಿವೆ. ಅನೇಕ ಸಮಾಜಸ್ಥರದ ಮಹತ್ಕಾರ್ಯಗಳು ಇಲ್ಲಿಂದಲೇ ಆರಂಭವಾಗಿದೆ. ಮಾತೆಯರ ಸಂಘಟನೆಗೂ ಆರಂಭ ಸಿಕ್ಕಿರುವುದು ಕುಂಟಿಕಾನಮಠದಿಂದಲೇ. ಸಮುದ್ರ ಆಕಾಶಗಳಿಗೆ ಹೋಲಿಸಬಹುದಾದಂತಹ ಸೇವೆಯನ್ನು ಮಾತೆಯರು ಮಾಡಿದ್ದಾರೆ. ಮಠದ ಅನೇಕಾನೇಕ ಮಹತ್ಕಾರ್ಯಗಳಿಗೆ ಇಲ್ಲಿಂದಲೇ ಪೀಠಿಕೆಯಾಗಿದೆ.

- ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರ ಮಠ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top