ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಪ್ರಶಾಂತ್ ಶೆಟ್ಟಿ ಮತ್ತು ಡಾ. ದೀಪಿಕಾ ಅವರನ್ನು ಶನಿವಾರ ಧರ್ಮಸ್ಥಳದಲ್ಲಿ ಅಭಿನಂದಿಸಲಾಯಿತು.
ಉಜಿರೆ: ಡಿ. ವೀರೇಂದ್ರ ಹೆಗ್ಗಡೆಯವರ ಆಶಯ, ಕಲ್ಪನೆಯಂತೆ ಪ್ರಕೃತಿಚಿಕಿತ್ಸಾ ಪದ್ಧತಿಯನ್ನು ಜನಪ್ರಿಯಗೊಳಿಸುವಲ್ಲಿ ಡಾ. ಪ್ರಶಾಂತ್ ಶೆಟ್ಟಿ ಅವರ ಪರಿಶ್ರಮ, ಪ್ರಯತ್ನ, ಸಾಧನೆಯ ಫಲ ಇದೆ. ನಮ್ಮೊಳಗಿನ ದೈವಿಕ ಶಕ್ತಿಯ ಸಾಕ್ಷಾತ್ಕಾರವೇ ಶಿಕ್ಷಣದ ಗುರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಪ್ರಶಾಂತ್ ಶೆಟ್ಟಿ ಅವರ ಅಭಿನಂದನ ಸಮಾರಂಭದಲ್ಲಿ ಮಾತನಾಡಿದರು.
ಪ್ರಕೃತಿ ಚಿಕಿತ್ಸಾ ಪದ್ಧತಿ ಬಗ್ಯೆ ನಮಗೆ ನಂಬಿಕೆ, ವಿಶ್ವಾಸ ಹೆಚ್ಚಾಗಬೇಕು. ಸಾವಿರಾರು ವರ್ಷಗಳಿಂದ ಋಷಿ- ಮುನಿಗಳು ಪ್ರಕೃತಿ ಚಿಕಿತ್ಸಾ ಮತ್ತು ಯೋಗಾಭ್ಯಾಸದಿಂದ ಆರೋಗ್ಯ ಭಾಗ್ಯ ರಕ್ಷಣೆ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ.
ಋಷಿ ಸಂಸ್ಕೃತಿ ಮತ್ತು ಕೃಷಿ ಸಂಸ್ಕೃತಿಯನ್ನು ಕಡೆಗಣಿಸಬಾರದು ಎಂದು ಅವರು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಕಾಲೇಜು ಬೆಳೆಸುವಲ್ಲಿ ಸ್ಥಾಪಕ ವೈದ್ಯಾಧಿಕಾರಿ ಡಾ. ರುದ್ರಪ್ಪ ಮತ್ತು ಡಾ. ಪ್ರಶಾಂತ್ ಶೆಟ್ಟಿ ಅವರ ತ್ಯಾಗ, ಸೇವೆ, ಸಾಧನೆಯನ್ನು ಕೃತಜ್ಞತೆಯಿಂದ ಸ್ಮರಿಸಿದರು.
ಡಾ. ಪ್ರಶಾಂತ್ ಶೆಟ್ಟಿ ಅವರ ನಿಷ್ಠೆಯ ಸೇವೆ, ಸಾಧನೆಗೆ ಅಭಿನಂದಿಸಿದರು. ರಾಜ್ಯೋತ್ಸವ ಪ್ರಶಸ್ತಿ ಅವರ ಸೇವೆ, ಸಾಧನೆಗೆ ಸಂದ ಗೌರವವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಯೋಗ ನಿರ್ದೇಶಕ ಡಾ. ಶಶಿಕಾಂತ್ ಜೈನ್, ಸವಣೂರು ಸೀತಾರಾಮ ರೈ ಮತ್ತು ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ದನ್ ಉಪಸ್ಥಿತರಿದ್ದರು.
ಅಭಿನಂದನೆಗೆ ಕೃತಜ್ಞತೆ ವ್ಯಕ್ತಪಡಿಸಿದ ಡಾ. ಪ್ರಶಾಂತ್ ಶೆಟ್ಟಿ ಪ್ರಕೃತಿ ಚಿಕಿತ್ಸಾ ಪದ್ಧತಿ ಜನಪ್ರಿಯಗೊಳಿಸುವಲ್ಲಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕಾರ್ಯದರ್ಶಿ ಡಿ. ಹರ್ಷೇಂದ್ರಕುಮಾರ್ ಅವರ ಪ್ರೋತ್ಸಾಹ ಮತ್ತು ಸಹಕಾರವನ್ನು ಧನ್ಯತೆಯಿಂದ ಸ್ಮರಿಸಿದರು.
ಪ್ರಕೃತಿ ಚಿಕಿತ್ಸಾ ಪದ್ಧತಿ ಮತ್ತು ಯೋಗಾಭ್ಯಾಸದಿಂದ ಆರೋಗ್ಯಭಾಗ್ಯ ರಕ್ಷಣೆ ಸಾಧ್ಯ ಎಂದರು.
ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಸ್ವಾಗತಿಸಿದರು. ಶಾಂತಿವನದಲ್ಲಿರುವ ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಆಶ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಧನ್ಯವಾದವಿತ್ತರು. ಕುಮಾರಿ ಅನನ್ಯ ಮತ್ತು ಕುಮಾರಿ ಪ್ರತೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ