ಯಕ್ಷಶಿಕ್ಷಣದಲ್ಲೊಂದು ಸುವರ್ಣರೇಖೆ- ಪುತ್ತೂರಿನ 'ಯಕ್ಷರಂಜಿನಿ'

Upayuktha
0

ಕಲೆ ಎಂಬುದು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಪ್ರಕಾರಗಳಲ್ಲಿದ್ದು ವಿಭಿನ್ನತೆಗಳಿಂದ ಕೂಡಿ ಎಷ್ಟೋ ತಲೆಮಾರುಗಳನ್ನು ದಾಟುತ್ತಾ ಬಂದು ನಮ್ಮ ನಾಡಿನ ಮಣ್ಣಿನ ಘಮಲನ್ನು ಹೆಚ್ಚಿಸಿದೆ. ತುಳುನಾಡಿನ ಈ ಮಣ್ಣಿನಲ್ಲಿ ಯಕ್ಷಗಾನ ಎಂಬುದು ದೈವೀಕ ಕಲೆಯೇ ಹೌದು. ಶತಮಾನಗಳ ಹಿಂದೆಯೇ ಈ ಯಕ್ಷಗಾನವನ್ನು ಕಲಿಸಲು ಸಾಂಸ್ಥಿಕ ರೂಪು ಬಂದು ಮತ್ತೆ ಕ್ರಮೇಣ ವಿದ್ಯಾಸಂಸ್ಥೆಗಳಲ್ಲೂ ಯಕ್ಷಶಿಕ್ಷಣ ಪ್ರಾರಂಭವಾಯಿತು. ಅಂತೆಯೇ ಯಕ್ಷಗಾನ ಸಂಘಟನೆಗಳು ಅನೇಕ ಹುಟ್ಟಿಕೊಂಡಿತು. ಅದರಲ್ಲಿ ವಿವೇಕಾನಂದ ಕಾಲೇಜಿನ ಯಕ್ಷರಂಜಿನಿಯೂ ಒಂದು.



 

ವಿವೇಕಾನಂದ ಕಾಲೇಜಿನ ಸಾಂಸ್ಕೃತಿಕ ಗತವೈಭವದ ಸಿಂಹಾವಲೋಕನವನ್ನು ಮಾಡುವಾಗ ಇಲ್ಲಿ ತಮ್ಮ ಸೇವೆಗೈದ ಹಾಗೂ ಹಿರಿಯ ವಿದ್ಯಾರ್ಥಿಗಳ ನೆನಪು ನಲುವತ್ತು ಐವತ್ತು ವರ್ಷಗಳ ಹಿಂದಕ್ಕೆ ಜಾರುತ್ತದೆ.


"ನೂರ ಒಂಭತ್ತು ಇತಿಹಾಸ‌ವಿರುವ ವಿವೇಕಾನಂದ ವಿದ್ಯಾವರ್ಧಕ ಸಂಘವು ಅಂದು ಪುತ್ತೂರು ಎಜ್ಯುಕೇಷನಲ್ ಸೊಸೈಟಿ ಅಂತ ಹೆಸರಿರುವಾಗ, ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಕಾಲೇಜು ಒಟ್ಟಾಗಿರುವಾಗ" ಎಂದು ಕಥನ ಆರಂಭವಾಗುತ್ತದೆ. ಹೌದು, ಅದೆಷ್ಟೋ ಮಹನೀಯರ ಪರಿಶ್ರಮದಿಂದ ಜೀವತಳೆದು ಅನೇಕ ವಿದ್ಯಾಸಂಸ್ಥೆಗಳನ್ನಾರಂಭಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘ ಅಂದರೆ ಅಂದಿನ ಪುತ್ತೂರು ಎಜ್ಯುಕೇಷನಲ್ ಸೊಸೈಟಿಯಿಂದ ಮೂರ್ತಿವೆತ್ತಿದ ವಿವೇಕಾನಂದ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜು ಇಂದು ಧ್ರುವತಾರೆಯಂತೆ ಮಿನುಗುತ್ತಿದೆ. ಕೆಲವು ತಿಂಗಳುಗಳ ಹಿಂದೆ ಸ್ವಾಯತ್ತತೆಯ ಹಂತವನ್ನೂ ತಲುಪಿತು.


ಇಂದು ಕಾಲೇಜು ತನ್ನ ಉತ್ಕೃಷ್ಟತೆಯನ್ನು ಕಾಪಿಟ್ಟುಗೊಂಡು ಬಂದಿದ್ದರೆ ಅದು ಅಂದು ಹಾಕಿದ ಸುಭದ್ರ ತಳಪಾಯವೇ ಸರಿ. ಹಿರಿಯರಾದ ವಿದ್ವಾಂಸರಾದ ತಾಳ್ತಜೆ ವಸಂತಕುಮಾರ ಅವರು, ಪ್ರಾಧ್ಯಾಪಕರಾಗಿದ್ದ ಡಾ. ಕೆ. ಚಿನ್ನಪ್ಪ ಗೌಡ ಅವರು ಮತ್ತೆ ಅನೇಕ ವಿದ್ಯಾರ್ಥಿಗಳಿಂದ ಅನೇಕ ಸದಭಿರುಚಿಯ ಚಟುವಟಿಕೆಗಳು, ವಿವಿಧ ವಿನೋದಾವಳಿಗಳು, ಸಂಘ-ಸಂಸ್ಥೆಗಳು, ವಾರ್ಷಿಕೋತ್ಸವ, ಇನ್ನಿತರ ರಸಮಯ ಸನ್ನಿವೇಶಗಳ ನೆನಪು ನಾವು ಕೇಳಿದಾಗ ಮೈಜುಂ ಎನಿಸುತ್ತದೆ.


ನಾವು ಮನಬಿಚ್ಚಿ ನಗುವ ಅನೇಕ ಹಾಸ್ಯಮಯ ಘಟನೆಗಳ ತುಣುಕುಗಳು ಬೇರೆಯೇ ಇವೆ, ಅದೊಂದು ವಿಷಯವೇ. ಇದೆಲ್ಲಾ ಆಗುವ ಕಾಲಮಾನದಲ್ಲಿ ಕನ್ನಡ ಭಾಷಾ ಪ್ರಾಧ್ಯಾಪಕರಾಗಿದ್ದ ಜಾನಪದ ಅಧ್ಯಯನಕಾರರು, ಸಾಹಿತಿಗಳೂ ಆದ ಪ್ರೊ. ಅಮೃತ ಸೋಮೇಶ್ವರರು ಯಕ್ಷಗಾನಕ್ಕೆ ಪ್ರೋತ್ಸಾಹ ಕೊಡುವ ಸಲುವಾಗಿ ಹುಟ್ಟುಹಾಕಿದ ಸಂಘವೇ "ಯಕ್ಷರಂಜಿನಿ".



ಕಾಲೇಜಿನ ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಅರಿವು ಮೂಡಿಸಿ ಯಕ್ಷಗಾನ ಕಲಾವಿದ ವಿದ್ಯಾರ್ಥಿಗಳನ್ನು ಒಳ್ಳೆಯ ರೀತಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ ಯಕ್ಷರಂಜಿನಿ ತಂಡ ಮೊದಲಿನಿಂದಲೇ ಬಲಿಷ್ಠ. ಪದ್ಯಾಣ ಮನೆತನದ ಖ್ಯಾತ ಹಿಮ್ಮೇಳವಾದಕರಾದ ಪದ್ಯಾಣ ಶಂಕರನಾರಾಯಣ ಭಟ್, ಪದ್ಯಾಣ ಜಯರಾಮ ಭಟ್, ಕೊಂಕಣಾಜೆ ಚಂದ್ರಶೇಖರ್ ಭಟ್, ಶ್ರೀಪತಿ ಕಲ್ಲೂರಾಯರು, ಮಿತ್ತೂರು ಈಶ್ವರ ಭಟ್, ತಾಳಮದ್ದಳೆ ಅರ್ಥಧಾರಿಗಳಾದ ಸೇರಾಜೆ ಸೀತಾರಾಮ ಭಟ್, ವೇಷಭೂಷಣ ತಯಾರಿಕೆಯಲ್ಲಿ ಪಳಗಿದ ಅನುಭವೀ ಸಂಗಮ ಕಲಾ ಸಂಘ ಕಲ್ಮಡ್ಕದ ಮಹಾಬಲ ಭಟ್ ಕೆರೆಕ್ಕೋಡಿ ಮುಂತಾದವರು ಆ ಕಾಲಕ್ಕೆ ಯಕ್ಷರಂಜಿನಿಗೆ ರಂಗು ತುಂಬಿದ ಸದಸ್ಯರು.


ಆ ಕಾಲಕ್ಕೆ ವಾರ್ಷಿಕೋತ್ಸವದ ಪ್ರದರ್ಶನಗಳು ಹಾಗೂ ಕೆಲವು ವಿನೂತನ ಪ್ರಯೋಗಗಳು ರಸವತ್ತಾದ ಮತ್ತು ವಿನೋದಗಳನ್ನು ಸೃಷ್ಠಿಸುವ ಅನುಭವ ನೀಡುತ್ತಿದ್ದವಂತೆ. ಹಾಗೆಯೇ ನಾಟಕ ಕಲೆಯನ್ನು ಪ್ರೋತ್ಸಾಹಿಸಲು "ವಿವೇಕ ರಂಜಿನಿ" ಎಂಬ ತಂಡವೊಂದಿತ್ತು.  ಹೀಗೆ ಅನೇಕ ಘಟನಾವಳಿಗಳ ಸಾಲು ನಮ್ಮ ಕಣ್ತೆರೆಸುತ್ತದೆ.


2014-15ನೇ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ತನ್ನ ಐವತ್ತು ವರ್ಷಗಳನ್ನು ಪೂರೈಸಿದ ಹಬ್ಬವನ್ನಾಚರಿಸಿತು. ಸಂಘ ಬಲಿಷ್ಟವಾಗುತ್ತಾ ಕಾಲ ಸಾಗುತ್ತಾ ಹೋಯಿತು. ವಿವೇಕಾನಂದ ಪದವಿ ಕಾಲೇಜು ಹಾಗೂ ಪದವಿಪೂರ್ವ ಕಾಲೇಜು ಎರಡೂ ಅಕ್ಕಪಕ್ಕವೇ ಪಲ್ಲಟಗೊಂಡು ಈಗ ಇಡೀ ಆವರಣವೇ ವಿವಿಧ ಬಗೆಯ ಅಧ್ಯಯನಕ್ಕೆ ಸಂಬಂಧಿಸಿದ ಕಾಲೇಜುಗಳನ್ನು ಹೊಂದಿದೆ. ಅರುವತ್ತಕ್ಕೂ ಮಿಕ್ಕಿ ವಿದ್ಯಾಸಂಸ್ಥೆಗಳನ್ನೂ ವಿದ್ಯಾವರ್ಧಕ ಸಂಘ ಪಾಲಿಸಿಕೊಂಡು ಬರುತ್ತಿದೆ.


ಹೀಗಿರುವಾಗ ಅಮೃತ ಸೋಮೇಶ್ವರರು ಹಚ್ಚಿದ ಜ್ಯೋತಿಯಂತಹ ಯಕ್ಷರಂಜಿನಿ ಇನ್ನೂ ಬೆಳಗುತ್ತಿದೆ. ಪ್ರತೀ ವರ್ಷವೂ ವಿದ್ಯಾರ್ಥಿಗಳ ಪ್ರಕ್ರಿಯೆಯನ್ನು ಗುರುತಿಸಿ ಆಯ್ಕೆ ಪ್ರಕ್ರಿಯೆಯ ಮೂಲಕ ಯಕ್ಷರಂಜಿನಿಯ ಸದಸ್ಯವನ್ನು ವಿದ್ಯಾರ್ಥಿಗಳಿಗೆ ನೀಡಿ ತಂಡವು ಹಾಗೆ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿ ಮುನ್ನಡೆಯುತ್ತದೆ.


ಕಳೆದ ವರ್ಷ ತಂಡದ ಕಾರ್ಯವೈಖರಿಯನ್ನು ನೋಡಿದ ನಾನು ಜೂನ್ 9ನೆಯ ತಾರೀಕಿಗೆ ನಡೆದ ಯಕ್ಷ-ಗಾನ-ರಂಜಿನಿ ಎಂಬ ಶೀರ್ಷಿಕೆಯಲ್ಲಿ ನಡೆದ ಗಾನವೈಭವ ಕಾರ್ಯಕ್ರಮವನ್ನು ನೋಡಿಯೇ ಖುಷಿಗೊಂಡಿದ್ದೆ. ನನ್ನ ಗುರು ಹಾಗೂ ಆತ್ಮೀಯನಾದ ನವೀನಕೃಷ್ಣ ಭಟ್ ಇವನ ಆಮಂತ್ರಣ ಯಾವಾಗಲೂ ಇರುತ್ತಿತ್ತು. ಹಾಗೆ ಪದವಿ ಕಾಲೇಜನ್ನೂ  ಯಕ್ಷರಂಜಿನಿಯ ಕಾರ್ಯಕ್ರಮಗಳನ್ನೂ ನಾನು ನೆಚ್ಚಿಕೊಂಡೆ. ಹಾಗೆ ವಿಭಿನ್ನ ಪ್ರಯೋಗಗಳನ್ನೂ ಶಿಕ್ಷಕರು ನೀಡುವ ಪ್ರೋತ್ಸಾಹವನ್ನೂ ಕಂಡೆ. ಶಿಕ್ಷಕರಾದ ಸದಭಿರುಚಿಯ ವರ್ಷಿತ್ ಕಿಜೆಕ್ಕಾರು ಅವರು ಹುರುಪು ತುಂಬಿ ಮಾರ್ಗದರ್ಶನ ನೀಡುವುದೇ ಉದ್ದೀಪನ ಎಂಬ ಪದಕ್ಕೆ ಅರ್ಥದಂತೆ.


ವಿದ್ಯಾರ್ಥಿಗಳೂ ಅಷ್ಟೇ ಪರಿಣತರು, ಭಾಗವತರಾಗಿದ್ದ ಪದ್ಯಾಣ ಗಣಪತಿ ಭಟ್ಟರಲ್ಲಿ ಕಲಿತು ಎಲ್ಲಾ ಕಲಿಕಾ ಕ್ಷೇತ್ರದಲ್ಲಿ ಪಳಗಿದ ಹೇಮಸ್ವಾತಿ ಕುರಿಯಾಜೆ, ನವೀನಕೃಷ್ಣ ಭಟ್, ಯತೀನ್ ಕಂಟ್ರಮಜಲು, ಭವಿಷ್ ಭಂಡಾರಿ, ಪ್ರಜ್ಞಾ ಜೆ, ಶ್ರೇಯಾ ಆಚಾರ್ಯ ಆಲಂಗಾರು, ದೇವಿಕಾ ಕುರಿಯಾಜೆ, ಸುಧಾಂಶು.ಕೆ, ಯಕ್ಷಗಾನದ ಪರಂಪರೆಯಲ್ಲಿ ಹಿಮ್ಮೇಳದ ಕಂಪನ್ನು ಪಸರಿಸಿದ ಮಾಂಬಾಡಿ ಮನೆತನದ ಹಿಮ್ಮೇಳದ ಗುರುಗಳಾಗಿರುವ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರಲ್ಲಿ ಕಲಿತಿರುವ ವಿಷ್ಣುಕಿರಣ.ಬಿ, ಮುಂತಾದವರು ಒಳ್ಳೆಯ ಪ್ರಸ್ತುತಿಯನ್ನು ನೀಡುವರೆನ್ನುವುದು ಸುಸ್ಪಷ್ಟ.



ಅಂತೆಯೇ ತಂಡದಿಂದ ಗುರುವೇ ಶಿಷ್ಯನಾಗಿ ಶಿಷ್ಯನೇ ಗುರುವಾಗಿ ರಂಗದಲ್ಲಿ ಕಾಣಿಸಿಕೊಳ್ಳುವ ವಿಭಿನ್ನ ಪ್ರಯೋಗದ ತಾಳಮದ್ದಳೆ ನಡೆದಿದ್ದು ಏಕಲವ್ಯನ ಚರಿತ್ರೆಯಿರುವ ವಿದ್ಯಾರ್ಥಿರತ್ನ ಶೀರ್ಷಿಕೆಯ ತಾಳಮದ್ದಳೆಯಲ್ಲಿ ಶಿಕ್ಷಕರಾದ ಕಿಶನ್ ಹೊಳ್ಳ ಅವರು ಏಕಲವ್ಯನಾಗಿ ಪಾತ್ರವಹಿಸಿದ್ದರೆ ಗುರುವಾದ ದ್ರೋಣನಾಗಿ ನವೀನಕೃಷ್ಣ ಇವನಿದ್ದನು.


ಕಳೆದ ಶೈಕ್ಷಣಿಕ ವರ್ಷದಲ್ಲಿ 23ನೇ ಜುಲೈ 2022ರಂದು ವಾರ್ಷಿಕೋತ್ಸವದ ಸಮಯದಲ್ಲಿ ಅನೇಕ ವಿಶೇಷತೆಗಳನ್ನೊಳಗೊಂಡು ಶ್ಯಮಂತಕ ಮಣಿ ಎಂಬ ಶೀರ್ಷಿಕೆಯಲ್ಲಿ ಜಾಂಬವತಿ ಕಲ್ಯಾಣದ ಯಕ್ಷಗಾನ ಪ್ರದರ್ಶನವನ್ನು ಯಶಸ್ವಿಯಾಗಿ ಮಾಡಿದ್ದರು. ಅಧ್ಯಾಪಕರನ್ನೂ ಈ ಕಲೆಯಲ್ಲಿ ತೊಡಗಿಸಿಕೊಂಡು ಕದಂಬಕೌಶಿಕೆ ಎಂಬ ತಾಳಮದ್ದಳೆಯನ್ನೂ ಎಲ್ಲಾ ಅಧ್ಯಾಪಕರೂ ಸೇರಿ ಮಾಡಿದವರಿದ್ದೇವೆ.


ಯಕ್ಷರಂಗದಲ್ಲಿ ತನ್ನ ಇರುವಿಕೆಯನ್ನು ಮಾಸುತ್ತಿರುವ ಪೂರ್ವರಂಗ ಪ್ರಯೋಗವನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರ್ಪಡಿಸಲು 2022 ಡಿಸೆಂಬರ್ 21ರಂದು ಪೂರ್ವರಂಗವನ್ನೂ ಪ್ರಸ್ತುತಪಡಿಸಿದ್ದಾರೆ. ಸಾರ್ಥಕತೆಯನ್ನು ಪಡೆಯುವ ಹೆಜ್ಜೆಯನ್ನಿಟ್ಟು ಅಮೃತ ಸೋಮೇಶ್ವರರ ಗೃಹಕ್ಕೇ ತೆರಳಿ "ಒಲುಮೆ" ನಿವಾಸದಲ್ಲಿ ಒಲುಮೆಯಿಂದ ಯಕ್ಷಾಮೃತ ಗೌರವವನ್ನರ್ಪಿಸಿ ಹಳೇ ನೆನಪುಗಳನ್ನು ಮೆಲುಕುಹಾಕಿ ಬಂದವರಿದ್ದಾರೆ ಕಳೆದ ನವೆಂಬರ್ 23ನೇ ತಾರೀಕಿನಂದು.


ಹಾಗೆ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಸಮರ್ಥವಾಗಿ ನೀಡಿದವರಿದ್ದಾರೆ. ಕಾಲೇಜು ಅಲ್ಲದೇ ಕಾಲೇಜಿನ ಹೊರವಲಯದಲ್ಲೂ ಹೆಸರನ್ನು ಗಳಿಸಿದೆ. ದೇಂತಡ್ಕ ವನದುರ್ಗಾ ದೇವಸ್ಥಾನದಲ್ಲಿ ಅಧ್ಯಾಪಕರ ತಾಳಮದ್ದಳೆ ಹಾಗೂ ಪುತ್ತೂರಿನ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧನುಪೂಜೆಯ ಸಮಯದಲ್ಲೂ ತನ್ನ ಕಾರ್ಯಕ್ರಮವನ್ನು ನೀಡಿದೆ. ಹಿರಿಯ ವಿದ್ಯಾರ್ಥಿಗಳಾಗಿದ್ದ ಶ್ರೀರಾಮ ಶಾಸ್ತ್ರೀ ಕುರಿಯ, ಶ್ರೀಕುಮಾರ ಎನ್, ಲಕ್ಷ್ಮೀಶ ಶಗ್ರಿತ್ತಾಯ, ಚಿನ್ಮಯ ಕೃಷ್ಣ ಕೆ, ಕೆಲವು ವರ್ಷಗಳ ಮೊದಲೇ ವಿದ್ಯಾಭ್ಯಾಸವನ್ನು ಪೂರೈಸಿದ ಅನ್ವಯಕೃಷ್ಣ ಪೆಲತ್ತಡ್ಕ ಮುಂತಾದವರ ಕಾರ್ಯವೈಖರಿಯೂ ಮಹತ್ವದ್ದು, ಎಲ್ಲರದ್ದೂ ಬೆಂಕಿ ಕಿಡಿಯಂತಹ ಶಕ್ತಿ.


ಸದಾ ಹೊಸತನದಿಂದ ಕೂಡಿದ ತಂಡದ ಉತ್ಸಾಹವನ್ನೂ ಮೆಚ್ಚಬೇಕು. ಪ್ರಾಂಶುಪಾಲರಾದ ಸದಭಿರುಚಿಯ ವ್ಯಕ್ತಿತ್ವದ ವಿಷ್ಣು ಗಣಪತಿ ಭಟ್, ಸಂಚಾಲಕರಾದ ಯೋಜನೆಗಳನ್ನು ಬೇಗ ಕೈಗೆತ್ತಿಕೊಂಡು ಪ್ರೋತ್ಸಾಹಿಸುವ ಮುರಳಿಕೃಷ್ಣ ಚಳ್ಳಂಗಾರು, ಅಧ್ಯಕ್ಷರಾದ ಹಾಗೂ ಹವ್ಯಾಸೀ ತಾಳಮದ್ದಳೆ ಅರ್ಥಧಾರಿಗಳೂ ಆಗಿರುವ ಶ್ರೀಪತಿ ಕಲ್ಲೂರಾಯರು, ಪ್ರತಿಯೊಂದು ಅಧ್ಯಯನ ವಿಭಾಗದ ಶಿಕ್ಷಕರು ಎಲ್ಲರ ಪ್ರೋತ್ಸಾಹ ಹಾಗೂ ಒಗ್ಗೂಡುವಿಕೆಯೂ ಮಾನನೀಯ ಹಾಗೂ ಸದಾ ಸ್ಮರಣೀಯ, ರೇಡಿಯೋ ತರಂಗಗಳಲ್ಲಿ ಧನಾತ್ಮತೆಯನ್ನು ಎಳೆದು ತರುವ ರೇಡಿಯೋ ಪಾಂಚಜನ್ಯ 90.8 ಹೀಗೆ ಪಟ್ಟಿ ಮುಂದುವರಿದು ವಿವೇಕಾನಂದ ವಿದ್ಯಾವರ್ಧಕ ಸಂಘವೇ ಒಂದು ವಿಭಿನ್ನತೆಯ ಪ್ರೋತ್ಸಾಹವನ್ನಿತ್ತು ಕೌಶಲಮಯವನ್ನಾಗಿಸುವ ಕಾರ್ಖಾನೆ. ಯಕ್ಷರಂಜಿನಿ ಒಳ್ಳೆಯ ರಂಜನೆಯನ್ನೀಯಲಿ.



- ಶೌರಿಕೃಷ್ಣ ಭಟ್. ಕೆ

ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿ

ವಿವೇಕಾನಂದ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು (ಸ್ವಾಯತ್ತ) ಪುತ್ತೂರು



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top