ಬಿಕ್ಕಟ್ಟು ನಿರ್ವಹಣೆಗೆ ಸಂಖ್ಯಾಶಾಸ್ತ್ರ ಸಹಕಾರಿ: ಡಾ. ಬಿ.ಎ. ಕುಮಾರ ಹೆಗ್ಡೆ

Upayuktha
0

ಉಜಿರೆ: ಸಂಖ್ಯಾಶಾಸ್ತ್ರವು ದೇಶ ಎದುರಿಸುವ ಬಿಕ್ಕಟ್ಟುಗಳ ನಿರ್ವಹಣೆಯ ವೇಳೆ ತನ್ನ ನಿಖರ ವೈಜ್ಞಾನಿಕ ವಿಶ್ಲೇಷಣೆಯ ಗುಣಲಕ್ಷಣದೊಂದಿಗೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅಭಿಪ್ರಾಯಪಟ್ಟರು.


ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಸಂಖ್ಯಾಶಾಸ್ತ್ರ ವಿಭಾಗವು ಶನಿವಾರ ಆಯೋಜಿಸಿದ್ದ ‘ಸಂಖ್ಯಾ ಸಂಗಮ’ ಕಾರ್ಯಕ್ರಮ ಉದ್ಘಾಟಸಿ ಅವರು ಮಾತನಾಡಿದರು.


ಈ ಹಿಂದೆ ಕೋವಿಡ್ ಬಿಕ್ಕಟ್ಟು ಎದುರಾಗಿದ್ದಾಗ ಸಂಖ್ಯಾಶಾಸ್ತ್ರದ ಮಾಹಿತಿ ಸಂಗ್ರಹ ವಿಧಾನ ಮತ್ತು ಸಂಗ್ರಹಿತ ಮಾಹಿತಿಯ ವ್ಯವಸ್ಥಿತ ವಿಶ್ಲೇಷಣೆಯ ಮಾದರಿಗಳು ಪರಿಹಾರದ ಮಾರ್ಗಗಳನ್ನು ಹೊಳೆಸುವುದಕ್ಕೆ ನೆರವಾಗಿದ್ದವು. ಅಲ್ಲದೇ, ತ್ವರಿತ ನೆರವಿನ ಸೌಲಭ್ಯಗಳನ್ನು ರೂಪಿಸುವುದಕ್ಕೂ ಸಹಾಯಕವಾಗಿದ್ದವು. ಈ ದೃಷ್ಟಿಯಿಂದ ದೇಶದ ಭವಿಷ್ಯದ ಬೆಳವಣಿಗೆಯ ಹಾದಿಯಲ್ಲಿ ಸಂಖ್ಯಾಶಾಸ್ತ್ರದ ಪಾತ್ರ ಮಹತ್ವಪೂರ್ಣವಾದದ್ದು ಎಂದು ಹೇಳಿದರು.


ಸಾಂಖ್ಯಿಕ ಮಾಹಿತಿಯು ದೈನಂದಿನ ಬದುಕಿನ ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರಗಳನ್ನು ಕಂಡುಕೊಳ್ಳಲು ಪೂರಕವಾಗುತ್ತದೆ. ಅಲ್ಲದೇ ಆ ಮಾಹಿತಿಯ ಅನ್ವಯದಿಂದ ಸಾಂದರ್ಭಿಕ ಬಿಕ್ಕಟ್ಟುಗಳ ತ್ವರಿತ ಪರಿಹಾರ ಸಾಧ್ಯವಾಗುತ್ತದೆ ಎಂದು ನುಡಿದರು.


ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ, ಬೆಂಗಳೂರಿನ ಮೈಕ್ರೋಸಾಫ್ಟ್ ಕಂಪೆನಿಯ ಡೇಟಾ ಮತ್ತು ಅನ್ವಯಿಕ ವಿಜ್ಞಾನಿ ದಯಾನಂದ ಉಬ್ರಂಗಳ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

     

ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಉತ್ತಮ. ಅದರ ಜೊತೆಗೆ ಸಮಯವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ತಿಳಿದಿರಬೇಕು. ಸಂಖ್ಯಾಶಾಸ್ತ್ರವನ್ನು ಕಲಿತು ಹೊರಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನಾವು ಮೊದಲು ನಮ್ಮ ಗುರಿಯನ್ನು ಅರಿತುಕೊಳ್ಳಬೇಕು. ಸಂಖ್ಯಾಶಾಸ್ತ್ರ ಎನ್ನುವುದು ಎಲ್ಲಾ ಕ್ಷೇತ್ರಗಳಲ್ಲೂ ಅಗತ್ಯವಾಗಿರುತ್ತದೆ. ಉತ್ತಮ ವೇತನ ಪಡೆಯಲು ಅದಕ್ಕೆ ಪೂರಕವಾಗಿ ನಾವು ಕೌಶಲ ಹೊಂದಿರಬೇಕು. ಕೇವಲ ಒಂದೇ ಪ್ರಾಥಮಿಕ ಗುರಿಯನ್ನು ಹೊಂದಿರಬಾರದು ಎಂದರು.


ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ. ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯವಾಗಿರುತ್ತವೆ. ಸಂಖ್ಯಾಶಾಸ್ತ್ರದಿಂದ ಹಲವಾರು ಪಾಠಗಳನ್ನು ಕಲಿತುಕೊಳ್ಳಲು ಸಾಧ್ಯವಾಗುತ್ತದೆ. ನಾಯಕತ್ವವನ್ನು ಬೆಳೆಸಿಕೊಳ್ಳಬಹುದು. ತರಗತಿ ಕೊಠಡಿಯಲ್ಲಿ ಹಲವಾರು ಚಟುವಟಿಕೆಗಳು ನಡೆಯುತ್ತವೆ. ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ನಡೆಸುವುದರಿಂದ ಜ್ಞಾನ, ಸಾಮಾನ್ಯ ಜ್ಞಾನ, ಧೈರ್ಯಗಳನ್ನು ಕಲಿತುಕೊಳ್ಳಬಹುದು ಎಂದರು.


ಕಾರ್ಯಕ್ರಮದಲ್ಲಿ ಸಂಖ್ಯಾಶಾಸ್ತ್ರ ವಿಭಾಗದ ಭಿತ್ತಿಪತ್ರಿಕೆ ಬಿಡುಗಡೆಗೊಂಡಿತು. ಇದೇ ಸಂದರ್ಭದಲ್ಲಿ ಸಂಖ್ಯಾ ಸಂಗಮ ಸಂಘದ ಸದಸ್ಯರಿಗೆ ಪ್ರಮಾಣ ವಚನವನ್ನು ಸಂಖ್ಯಾಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಸವಿತಾ ಕುಮಾರಿ ಬೋಧಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.


ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸವಿತಾ ಕುಮಾರಿ ಸ್ವಾಗತಿಸಿದರು. ನಿತ್ಯಪೂರ್ಣ ಆರ್. ಹೆಗ್ಗಡೆ ವಂದಿಸಿದರು. ಶೆಟ್ಟಿ ನಿಖಿತ ಕರುಣಾಕರ್ ಕಾರ್ಯಕ್ರಮ ನಿರೂಪಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top