‘ಡಾ. ಅಬ್ದುಲ್ ಕಲಾಂ ಲೈಫ್: ಮಿಶನ್ ಆ್ಯಂಡ್ ವಿಶನ್ ಇಂಡಿಯಾ 2020 ಬಿಯಾಂಡ್’ ವಿಶೇಷ ಉಪನ್ಯಾಸ
ಉಜಿರೆ : ಭಾರತದ ಜನಸಾಮಾನ್ಯರ ರಾಷ್ಟ್ರಪತಿ, ವಿಜ್ಞಾನ ಕ್ಷೇತ್ರದ ಸಾಧಕ ಡಾ. ಎಪಿಜೆ ಅಬ್ದುಲ್ ಕಲಾಂ ಚಾಲನೆ ನೀಡಿದ್ದ ದೇಶ ಕಟ್ಟುವ ಆಂದೋಲನವನ್ನು ವಿದ್ಯಾರ್ಥಿಗಳು ಮುಂದುವರಿಸಿಕೊಂಡು ಹೋಗಬೇಕು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ ಆರ್ ಡಿ ಒ)ಯ ಮಾಜಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಜಯಪ್ರಕಾಶ್ ರಾವ್ ಕರೆ ನೀಡಿದರು.
ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಅ.9ರಂದು ಎಸ್.ಡಿ.ಎಂ. ರೋಟರಿ ಕರಿಯರ್ ಗೈಡೆನ್ಸ್ & ಪ್ಲೇಸ್ಮೆಂಟ್ ಸೆಂಟರ್ ಹಾಗೂ ರಾಷ್ಟ್ರಿಯ ಸೇವಾ ಯೋಜನೆ (ಎನ್ನೆಸ್ಸೆಸ್) ಜಂಟಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಡಾ. ಅಬ್ದುಲ್ ಕಲಾಂ ಲೈಫ್: ಮಿಶನ್ ಅ್ಯಂಡ್ ವಿಶನ್ ಇಂಡಿಯಾ 2020 ಬಿಯಾಂಡ್’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.
ವಿಜ್ಞಾನ, ತಾಂತ್ರಿಕತೆಯ ಗುಲಾಮಗಿರಿಯಿಂದ ಹೊರಬರದೆ ಭಾರತಕ್ಕೆ ಸ್ವಾತಂತ್ರ್ಯ ಇಲ್ಲವೆಂದು ಕಲಾಂ ಮೂವತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ರಕ್ಷಣಾ ಸಲಕರಣೆಗಳ ಆಮದು ಕಡಿತಗೊಳಿಸಿ ದೇಶೀಯವಾಗಿ ಉತ್ಪಾದಿಸುವ ಚಳವಳಿಗೆ ಉತ್ತೇಜನ ನೀಡಿದ್ದರು. ಆ ನಿಟ್ಟಿನಲ್ಲಿ ಸ್ವಾತಂತ್ರ್ಯ ಹೋರಾಟ ಮುಂದುವರಿದಿದೆ. ಕಲಾಂರ ಚಳವಳಿಗೆ ವಿದ್ಯಾರ್ಥಿಗಳು ಜತೆಯಾಗಬೇಕು ಎಂದು ಅವರು ಹೇಳಿದರು.
“ವಿದ್ಯಾರ್ಥಿಗಳು ಹೊಸ ಉದ್ಯೋಗದ ಬಗ್ಗೆ ಆಲೋಚನೆ ಮಾಡಬೇಕು. ಐಎಎಸ್, ಐಪಿಎಸ್ ಹುದ್ದೆಗಳಲ್ಲಿ ಕರ್ನಾಟಕದವರು ಕಾಣುತ್ತಿಲ್ಲ. ಇದು ಬೇಸರದ ಸಂಗತಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬಹುದು, ಸೈನ್ಯ ಸೇರಬಹುದು, ವಿಜ್ಞಾನಿಗಳಾಗಿ ಸಂಶೋಧನೆಯಲ್ಲಿ ತೊಡಗಿಕೊಳ್ಳಬಹುದು, ದೇಶವನ್ನು ಪ್ರೀತಿಸಬೇಕು. ದೇಶಕ್ಕಾಗಿ ಕೆಲಸ ಮಾಡಬೇಕು. ಅದಕ್ಕೆ ಸಾಕಷ್ಟು ಅವಕಾಶಗಳಿವೆ. ಕಲಾಂ ಅವರ ಆಶಯ ಇದೇ ಆಗಿತ್ತು” ಎಂದು ಅವರು ತಿಳಿಸಿದರು.
“2020ರೊಳಗೆ ಭಾರತ ಸೂಪರ್ ಪವರ್ ಆಗಲಿದೆ ಎಂದು ಕಲಾಂ ಹೇಳಿದ್ದರು. ಅದು ಸಾಕಾರಗೊಳ್ಳುತ್ತಿದೆ. ಭಾರತವನ್ನು ಈಗ ಯಾರೂ ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ವಿಶ್ವದ ಪ್ರಮುಖ ಹುದ್ದೆಗಳಲ್ಲಿ ಭಾರತೀಯರು ಅಥವಾ ಭಾರತೀಯ ಸಂಜಾತರಿದ್ದಾರೆ. ಭಾರತವು ಬಾಹ್ಯಾಕಾಶ, ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡುತ್ತಿದೆ. ಅದು ನಿಲ್ಲದಿರಲಿ. ಈ ಸಾಧನೆಗೆ ಸ್ವಾಭಿಮಾನದ ಕೆಚ್ಚು, ಸ್ವಾತಂತ್ರ್ಯದ ರೆಕ್ಕೆ ಕೊಟ್ಟವರು ಕಲಾಂ” ಎಂದು ಅವರು ಬಣ್ಣಿಸಿದರು.
“ಕಲಾಂ ಅವರ ಸಾಧನೆ, ಉತ್ತೇಜನದ ಫಲವಾಗಿ ದೇಶದ ರಕ್ಷಣಾ ಕ್ಷೇತ್ರದಲ್ಲಿ ಶೇ.60ರಷ್ಟು ಉತ್ಪಾದನೆ ದೇಶೀಯವಾಗಿಯೇ ಆಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಕಲಾಂ ಡಿ ಆರ್ ಡಿ ಒ ಮುಖ್ಯಸ್ಥರಾಗಿದ್ದಾಗ ಅವರೊಂದಿಗಿನ ತಮ್ಮ ಒಡನಾಟವನ್ನು, ಕಲಾಂ ಸಾಧನೆಗಳನ್ನು, ಕಿರಿಯ ಸಹೋದ್ಯೋಗಿ/ ಅಧಿಕಾರಿಗಳೊಂದಿಗೆ ಅವರ ನಡೆಯನ್ನು, ರಾಷ್ಟ್ರಪತಿಯಾಗಿ ಅವರು ತಂದ ಆಂತರಿಕ ಸುಧಾರಣೆಗಳನ್ನು, ಅವರ ಜೀವನದ ಕುರಿತ ಸಂಗತಿಗಳನ್ನು ಹಂಚಿಕೊಂಡರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅವರು, “ಅಜಾತಶತ್ರು, ದೇಶವೇ ಕೊಂಡಾಡುವ, ಜಾತಿ-ಧರ್ಮಾತೀತವಾಗಿ ಗೌರವ ಪಡೆಯುವ ಕಲಾಂ ಅವರ ನಿಕಟವರ್ತಿ, ಒಡನಾಡಿಯಾಗಿ ಜಯಪ್ರಕಾಶ್ ಕೆಲಸ ಮಾಡಿದ್ದಾರೆ. ದೇಶದ ಭದ್ರತೆಗೆ ಬುನಾದಿ ಹಾಕಿದ ಮಿಸೈಲ್ ಮ್ಯಾನ್ ಡಾ. ಕಲಾಂ ಅವರ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳುವುದು ಅಗತ್ಯ” ಎಂದರು.
ಎಸ್.ಡಿ.ಎಂ. ರೋಟರಿ ಕರಿಯರ್ ಗೈಡೆನ್ಸ್ & ಪ್ಲೇಸ್ಮೆಂಟ್ ಕೇಂದ್ರದ ತರಬೇತಿ ಮತ್ತು ನೇಮಕಾತಿ ಅಧಿಕಾರಿ- ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ನಾಗರಾಜ್ ಪೂಜಾರಿ, ಕನ್ನಡ ಪ್ರಾಧ್ಯಾಪಕ- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ, ನಿವೃತ್ತ ಉಪ ಪ್ರಾಂಶುಪಾಲ- ವ್ಯಕ್ತಿತ್ವ ವಿಕಸನ ತರಬೇತುದಾರ ಡಾ. ಟಿ. ಕೃಷ್ಣಮೂರ್ತಿ, ವಿದ್ಯಾರ್ಥಿಗಳು, ಎನ್ನೆಸ್ಸೆಸ್ ಸ್ವಯಂಸೇವಕರು ಉಪಸ್ಥಿತರಿದ್ದರು.
ಮಧುರಾ ಮತ್ತು ತಂಡದವರು ಪ್ರಾರ್ಥಿಸಿದರು. ಪೂಜಾ ಸ್ವಾಗತಿಸಿದರು. ಹರ್ಷಿತಾ ಅತಿಥಿ ಪರಿಚಯ ಮಾಡಿದರು. ಜೆನಿಫರ್ ನಿರೂಪಿಸಿದರು. ಎನ್ನೆಸ್ಸೆಸ್ ಅಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್. ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ