ಓರೆಕೋರೆ ರೇಖೆಗಳ ಜಾದುಗಾರ ನೀರ್ನಳ್ಳಿ ಗಣಪತಿ

Upayuktha
0



ಹಾಸ್ಯದ ಲೇಪವನ್ನು ಹಚ್ಚಿ ರಾಜಕೀಯ ಅಥವಾ ಸಾಮಾಜಿಕ ಅವಗುಣಗಳನ್ನು ಟೀಕಿಸಿ ರಚಿಸುವ ವ್ಯಂಗ್ಯ ಚಿತ್ರಗಳು ಪತ್ರಿಕೆಗಳ ಪ್ರಮುಖ ಆಕರ್ಷಣೆ. ಒಬ್ಬ ವ್ಯಕ್ತಿಯ ಅಂಗಾಂಗಗಳ ವಿಶೇಷತೆಗಳನ್ನು ಗುರುತಿಸಿ ಅವನ್ನು ಅತಿಶಯಿಸಿ ರೇಖಿಸುವ ವಿಡಂಬನಾ ವ್ಯಂಗ್ಯ ಚಿತ್ರಗಳು ಪ್ರೇಕ್ಷಕನಿಗೆ ಸಂತೋಷ ವನ್ನುಂಟು ಮಾಡುತ್ತವೆ. ವ್ಯಂಗ್ಯ ಚಿತ್ರಕಾರನು ರೇಖೆಗಳ ಚಾದೂಗಾರ, ಹಲವು ವಾಕ್ಯಗಳಲ್ಲಿ ಹೇಳುವಷ್ಟನ್ನು ಒಂದು ವ್ಯಂಗ್ಯಚಿತ್ರವು ಕಣ್ಮನಗಳನ್ನು ಸೆಳೆದು ಹೇಳಬಲ್ಲದು. 



ವಾರಪತ್ರಿಕೆಗಳು, ಮಾಸಿಕಗಳ ಪುಟಗಳಲ್ಲಿ ಕೊಂಚ ಉಳಿದುಬಿಡುವ ಜಾಗವನ್ನು ಭರ್ತಿ ಮಾಡಲು ಬಳಸಿಕೊಳ್ಳುವ ವ್ಯಂಗ ಚಿತ್ರಗಳು ಓದುಗರ ಗಮನವನ್ನು ಕೂಡಲೇ ಸೆಳೆದು ಬಿಡುತ್ತವೆ. ಇವುಗಳ ಜನಪ್ರಿಯತೆಯನ್ನು ಗಮನಿಸಿಯೇ ಪತ್ರಿಕೆಯ ಪುಟಗಳಲ್ಲಿ ವ್ಯಂಗ್ಯ ಚಿತ್ರಗಳಿಗಾಗಿಯೇ ಜಾಗವನ್ನು ಕಾದಿರಿಸಲಾಗುತ್ತಿದೆ. ವ್ಯಂಗ್ಯ ಚಿತ್ರಗಳು ಪತ್ರಿಕೆಗಳ ಆಕರ್ಷಣೆ ಅಷ್ಟು ಬೆಳೆಯುತ್ತಿದೆ. 



ವ್ಯಂಗ್ಯ ಚಿತ್ರಕಾರರಿಗೆ ಪ್ರತಿನಿತ್ಯದ ಸುದ್ದಿಗಳೇ ಗ್ರಾಸ, ರಾಜಕೀಯ ಘಟನೆಗಳು. ರಾಜಕಾರಣಿಗಳು ವ್ಯಂಗ್ಯ ಚಿತ್ರಕಾರರಿಗೆ ಸ್ಫೂರ್ತಿ. ಇಂದಿನ ಒಂದು ರಾಜಕೀಯ ನಿರ್ಣಯ, ಘಟನೆ, ಹೇಳಿಕೆ ನಾಳಿನ ದಿನಪತ್ರಿಕೆಗಳಲ್ಲಿ ವ್ಯಂಗ್ಯ ವಿಡಂಬನೆ. ವ್ಯಂಗ್ಯ ಚಿತ್ರಕಾರರು ಅವ್ಯಕ್ತವಾಗಿ ಟೀಕಾಕಾರರೂ ಹೌದು. ವ್ಯಂಗ್ಯ, ಹಾಸ್ಯ, ವಿಡಂಬನೆ ಕಟ್ಟಿಕಿ ಮುಖಾಂತರ ಓದುಗರಿಗೆ ರಂಜನೆ ಒದಗಿಸುವ ಕಲಾಕಾರರು ಹೌದು. ಗಂಟು ಮುಖದಲ್ಲೂ ನಗೆ ತರಿಸುವ ವ್ಯಂಗ್ಯ ಚಿತ್ರಗಳಲ್ಲಿ ಬರೆ ಚಿತ್ರ ನೋಡಿ ಅರ್ಥೈಸಿಕೊಳ್ಳುವ ವ್ಯಂಗ್ಯ ಚಿತ್ರಗಳು, ಸಂಭಾಷಣೆ ಅಥವಾ ವಿವರಣೆ ಯನ್ನೊಳಗೊಂಡ ವ್ಯಂಗ್ಯ ಚಿತ್ರಗಳು ಮತ್ತು ಪ್ರಚಲಿತ ರಾಜಕಾರಣಿಗಳು, ಸಿನಿಮಾ ನಟನಟಿಯರ ಕ್ಯಾರಿಕೇಚರ್‍ಗಳು ಪ್ರಮುಖವಾದವು. ಹವ್ಯಾಸಿ ವ್ಯಂಗ್ಯ ಚಿತ್ರಕಾರರ ಪೈಕಿ ಬರೇ ವ್ಯಂಗ್ಯ ಚಿತ್ರ ನೋಡಿ ಇದು ನೀರ್ನಳ್ಳಿ ಕೆಲಸ ಎಂದು ತಟ್ಟನೆ ಗುರುತಿಸಲ್ಪಡುವ ತಮ್ಮದೇ ಆದ ವಿಶಿಷ್ಟ ಶೈಲಿ ರೂಢಿಸಿಕೊಂಡಿರುವ ನೀರ್ನಳ್ಳಿ ಗಣಪತಿಯವರು ಜನಪ್ರಿಯ ವ್ಯಂಗ್ಯ ಚಿತ್ರಕಾರರು. ಸ್ವಂತಿಕೆಯ ಶೈಲಿಯಲ್ಲಿ ಪ್ರಚಲಿತ ಸಂಗತಿಗಳನ್ನು ಆಧರಿಸಿ ಓರೆಕೋರೆ ನೋಟದೊಂದಿಗೆ ಹಾಸ್ಯ ವ್ಯಂಗ್ಯ ಬರಹಗಳನ್ನು ಸಮ್ಮಿಳಿತಗೊಳಿಸಿ ವಿಡಂಬನಾತ್ಮಕವಾಗಿ ಚಿತ್ರಿಸುವುದು ಅವರ ಅಭ್ಯಾಸ ಮತ್ತು ಹವ್ಯಾಸ. 




ಉತ್ತರಕನ್ನಡ ಜಿಲ್ಲೆ ಯಲ್ಲಾಪುರದ ಪ್ರೌಢಶಾಲೆಯಲ್ಲಿ ಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸಿರುವ ಇವರು ಶಿರಸಿ ತಾಲ್ಲೂಕಿನ ನೀರ್ನಳ್ಳಿ ಗ್ರಾಮದವರು. ಇವರ ಸಾವಿರಗಟ್ಟಲೆ ವ್ಯಂಗ್ಯ ಚಿತ್ರಗಳು ನಾಡಿನ ಎಲ್ಲಾ ಜನಪ್ರಿಯ ಕನ್ನಡ ಪತ್ರಿಕೆಗಳಲ್ಲೂ ಪ್ರಕಟಗೊಂಡಿವೆ. 1983 ರಲ್ಲಿ ಯಲ್ಲಾಪುರದಲ್ಲಿ 1990 ಡಿಸೆಂಬರ್‍ನಲ್ಲಿ ಶಿವಮೊಗ್ಗದಲ್ಲಿ ನೀರ್ನಳ್ಳಿಯವರ ವ್ಯಂಗ್ಯ ಚಿತ್ರ ಪ್ರದರ್ಶನ ನಡೆದಿದೆ. 1989 ರ ಜನವರಿಯಲ್ಲಿ ಕಾಸರಗೋಡಿನ ಎಡನೀರಿನಲ್ಲಿ ನಡೆದ ಎರಡು ದಿನದ ತರಬೇತಿ ಶಿಬಿರದಲ್ಲಿ ಉಪನ್ಯಾಸಕರಾಗಿ, 1991 ರ ಡಿಸೆಂಬರ್‍ನಲ್ಲಿ ಕಾಸರಗೋಡಿನಲ್ಲಿ ನಡೆದ ವ್ಯಂಗ್ಯ ಚಿತ್ರ ತರಬೇತಿ ಶಿಬಿರದ ಉಪನ್ಯಾಸಕರಾಗಿ ದ್ದರು. 



ಯಲ್ಲಾಪುರ ಜೀಸಿಸ್ ಸಂಸ್ಥೆ 1986 ರ ಸ್ವಾತಂತ್ರ್ಯ ದಿನಾಚರಣೆಯಂದು ಅವರ ಕಲೆಯನ್ನು ಗುರುತಿಸಿ ಪುರಸ್ಕರಿಸಿದೆ. 1988 ರಲ್ಲಿ ಯಲ್ಲಾ ಪುರದ ಪ್ರಥಮದರ್ಜೆ ಕಾಲೇಜಿನ ಸಮಿತಿಯಿಂದ 1990 ರಲ್ಲಿ ವಜ್ರಳ್ಳಿಯ ಗಣೇಶೋತ್ಸವ ಸಮಿತಿವತಿಯಿಂದ ಸನ್ಮಾನಿಸಲಾಗಿದೆ. ಶಿವಮೊಗ್ಗದ ಅರಣ್ಯ ಇಲಾಖೆ ನಡೆಸಿದ ವನ್ಯಜೀವಿ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳಿಸಿದ್ದಾರೆ. ನೀರ್ನಳ್ಳಿ ಗಣಪತಿಯವರು ವಚನಗಳ ಮಾದರಿಯಲ್ಲಿ ರಚಿಸಿರುವ 'ಮರ್ಮಜ್ಞ ವಚನ ಎಂಬ ವ್ಯಂಗ್ಯ ಚಿತ್ರ ಸಂಕಲನ ಪ್ರಕಟಿಸಿದ್ದಾರೆ. 





- ಗೊರೂರು ಅನಂತರಾಜು, ಹಾಸನ. 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top