ಮಂಗಳೂರು: ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೀತಿ ಬೆಳೆಸಲು ಮೂಲ್ಕಿ ಸಮೀಪದ ಪಕ್ಷಿಕೆರೆಯ ಪೇಪರ್ ಸೀಡ್ ಸಂಘಟನೆ ನಾಲ್ಕು ದಿನಗಳ 'ಹೆಜ್ಜೆ' ಕಾಲ್ನಡಿಗೆ ಜಾಥಾವನ್ನು ಆಯೋಜಿಸಿದೆ.
ನಾಡಿದ್ದು ಅಕ್ಟೋಬರ್ 12ರಂದು ಪಚ್ಚನಾಡಿಯಿಂದ ಪ್ರಾರಂಭವಾಗುವ ನಡಿಗೆ ಅ.15ರಂದು ಪೇಪರ್ ಸೀಡ್ ವಿಲೇಜ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಪರಿಸರ ಜಾಗೃತಿ, ಪರಿಸರ ರಕ್ಷಣೆ, ಕಸದಿಂದ ರಸ- ಎಂಬ ಪರಿಕಲ್ಪನೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಹುಟ್ಟಿಕೊಂಡಿರುವ ಪೇಪರ್ ಸೀಡ್ ಸಂಸ್ಥೆ ಈಗಾಗಲೇ ಇಂತಹ ಹಲವು ಉಪಕ್ರಮಗಳನ್ನು ಕೈಗೊಂಡಿದೆ.
'ಪರಿಸರ ಜಾಗೃತಿಗಾಗಿ ನಡೆಯಿರಿ' ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಕಾಲ್ನಡಿಗೆ ಜಾಥಾದಲ್ಲಿ ಪೇಪರ್ ಸೀಡ್ ಸಂಸ್ಥೆಯ 10ಕ್ಕೂ ಹೆಚ್ಚು ಕಾರ್ಯಕರ್ತರು ನಡೆಸುವ 'ಹೆಜ್ಜೆ'ಯಲ್ಲಿ ಪರಿಸರ ಕಾರ್ಯಕರ್ತರು, ಪ್ರಾಧ್ಯಾಪಕರು, ಮಹಿಳೆಯರು, ವಿದ್ಯಾರ್ಥಿಗಳು ತಮ್ಮ ಹೆಜ್ಜೆಗಳನ್ನೂ ಸೇರಿಸಲಿದ್ದಾರೆ.
ಭವಿಷ್ಯದಲ್ಲಿ ಮಂಗಳೂರು ನಗರದಲ್ಲಿ ಕೈಗಾರಿಕೆಗಳು ಮಾತ್ರ ಉಳಿದು, ಜನವಸತಿ ಪ್ರದೇಶಗಳಿಗೆ ಆಪತ್ತು ಒದಗುವ ಸಂಭವವಿರುತ್ತದೆ. ಅಭಿವೃದ್ಧಿಯೆಂಬ ನಾಗಾಲೋಟದ ಕಲ್ಪನೆಯಲ್ಲಿ ಪರಿಸರ ಪ್ರಜ್ಞೆ ಮಾಯವಾಗುತ್ತಿದೆ. ಈ ಬಗ್ಗೆ ಈಗಲೇ ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದೇವೆ ಎಂದು ಪೇಪರ್ ಸೀಡ್ ಮುಖ್ಯಸ್ಥರಾದ ನಿತಿನ್ ವಾಸ್ ಉಪಯುಕ್ತ ನ್ಯೂಸ್‌ಗೆ ತಿಳಿಸಿದರು.
ಒಟ್ಟಾರೆ 4 ದಿನಗಳ ಅವಧಿಯಲ್ಲಿ 50 ಕಿ.ಮೀಗಳನ್ನು ನಡಿಗೆಯ ಮೂಲಕ ಕ್ರಮಿಸಲಾಗುವುದು. 40ಕ್ಕೂ ಹೆಚ್ಚು ಪ್ರೌಢಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲು ಯೋಚಿಸಲಾಗಿದೆ. ಕಾರ್ಯಕ್ರಮದ ಮೂಲ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಸರಳವಾಗಿ 'ಹೆಜ್ಜೆ' ಹಾಕಲಾಗುವುದು ಎಂದು ಅವರು ತಿಳಿಸಿದರು.
ಕಾಲ್ನಡಿಗೆ ಜಾಥಾ ಸಾಗುವ ದಾರಿ:
ಪಚ್ಚನಾಡಿ ಡಂಪ್ ಯಾರ್ಡ್‌ನಿಂದ ಆರಂಭಿಸಿ ನಗರದಾದ್ಯಂತ ಸಂಚಾರ.
ಮೊದಲ ದಿನ- ಪಚ್ಚನಾಡಿಯಿಂದ ರೋಶನಿ ನಿಲಯಕ್ಕೆ
ಎರಡನೇ ದಿನ- ಪಾಂಡೇಶ್ವರದಿಂದ ಕೊಟ್ಟಾರ ಚೌಕಿಗೆ
ಮೂರನೇ ದಿನ- ಕೊಟ್ಟಾರ ಚೌಕಿಯಿಂದ ಸುರತ್ಕಲ್‌ಗೆ
ನಾಲ್ಕನೇ ದಿನ- ಸುರತ್ಕಲ್ ಮೂಲಕ ಹಳೆಯಂಗಡಿಯಿಂದ ಪೇಪರ್ ಸೀಡ್ ಗ್ರಾಮಕ್ಕೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ