ನವರಾತ್ರಿಯ ಪರ್ವಕಾಲದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸುತ್ತಿರುವ "ಲಲಿತೋಪಾಖ್ಯಾನ" ಪ್ರವಚನದ ಅಕ್ಷರರೂಪ.
ಅತಿಮಧುರ ಚಾಪ ಹಸ್ತಾಂ ಅಪರಿಮಿತಾಮೋದಬಾಣಸೌಭಾಗ್ಯಾಮ್|
ಅರುಣಾಂ ಅತಿಶಯ ಕರುಣಾಂ ಅಭಿನವ ಕುಲಸುಂದರೀಂ ವಂದೇ||
ದೇವಿಯ ಚರಿತೆಯು ಸುಪ್ರಸಿದ್ಧವಾಗಿ ಪ್ರಚಲಿತದಲ್ಲಿ ಇರುವಂತಹದ್ದು "ಸಪ್ತಶತಿಯ" ರೂಪದಲ್ಲಿ. ಮಾರ್ಕಂಡೇಯ ಪುರಾಣದಲ್ಲಿ ಅಂತರ್ಗತವಾಗಿರುವಂತಹ ದೇವಿಚರಿತ್ರೆ ಅದು. ಅಲ್ಲಿಯೂ ಪ್ರಥಮ ಚರಿತ್ರಾ, ಮಧ್ಯಮ ಚರಿತ್ರಾ ಮತ್ತು ಉತ್ತಮ ಚರಿತ್ರಾ ಎಂಬ ಮೂರು ಭಾಗಗಳು. ಪ್ರಥಮಚರಿತ್ರಕ್ಕೆ ಮಹಾಕಾಳಿ, ಮಧ್ಯಮಚರಿತ್ರಕ್ಕೆ ಮಹಾಲಕ್ಷ್ಮಿ ಮತ್ತು ಉತ್ತಮಚರಿತ್ರಕ್ಕೆ ಮಹಾಸರಸ್ವತಿ ಎಂಬ ಮೂರು ದೇವತೆಗಳು. ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಮೂರು ರೂಪದಿಂದ ದೇವಿಯು ಲೋಕವನ್ನು ಕಾದ ಕಥೆಯನ್ನು ಸಪ್ತಶತಿಯಲ್ಲಿ ನಾವು ಅವಲೋಕನ ಮಾಡುವಂಥಹದ್ದು.
ಇಲ್ಲಿಯೂ ಹಾಗೆ. ಬ್ರಹ್ಮಾಂಡ ಪುರಾಣದ ಉತ್ತರಕಾಂಡದ ಲಲಿತೋಪಾಖ್ಯಾನದಲ್ಲಿಯೂ ಹಾಗೆ. ಲಲಿತೆಗೆ ಮೂರು ರೂಪಗಳೇ, ಒಂದು ಸೃಷ್ಟಿ ದೇವಿಯ ರೂಪ ಅದು. ಎರಡನೇಯದು ಮೋಹಿನಿ, ಮೋಹವೂ ಕೂಡ ವರವಾಗಬಹುದು, ವಿಶ್ವಕ್ಷೇಮಕ್ಕೆ, ವಿಶ್ವರಕ್ಷಣೆಗೆ ಕಾರಣವಾಗಬಹುದು ಎಂಬುದನ್ನು ನಿರೂಪಿಸಿದ ಮೋಹಿನಿ ರೂಪ. ಮೂರನೇಯದು ಲಲಿತಾ ರೂಪ, ತ್ರಿಪುರಸುಂದರಿ ರೂಪ, ರಾಜರಾಜೇಶ್ವರಿ ರೂಪ, ಅದು ಪ್ರಧಾನವಾಗಿರುವಂತದ್ದು. ಇಂದು ಆ ಚರಿತೆಯನ್ನು ನಿರೂಪಣೆ ಮಾಡಲಿರುವಂತಹದ್ದು.
ಬಹಳ ಕೆಟ್ಟದ್ದಾಗುವುದು ಬಹಳ ಒಳ್ಳೆಯದಾಗುವುದರ ಲಕ್ಷಣ. ಮಳೆಬರುವ ಮುನ್ನ ಧಗೆ ಉಂಟುಮಾಡುತ್ತದೆ. ಹಾಗೆಯೇ ಪ್ರಪಂಚಕ್ಕೆಲ್ಲಾ ಧಗೆಯಾಯಿತು, ಭಂಡಾಸುರನ ಧಗೆ. ಅದು ಯಾವ ಲಕ್ಷಣ ಎಂದರೆ ರಾಜರಾಜೇಶ್ವರಿಯ, ಲಲಿತಾಪರಮೇಶ್ವರಿಯ, ತ್ರಿಪುರಸುಂದರಿಯ ಅವತಾರವಾಗಲಿಕ್ಕಿದೆ ಎನ್ನುವ ಕುರುಹು. ಹಾಗಾಗಿ ರಾಜರಾಜೇಶ್ವರಿಯ ಪ್ರಾದುರ್ಭಾವ ಹೇಳುವ ಮೊದಲು ಭಂಡಾಸುರನ ಪ್ರಾದುರ್ಭಾವ ಹೇಳಬೇಕಾಗುತ್ತದೆ. ಹಾಗಾಗಿ ಭಂಡಾಸುರೋತ್ಪತ್ತಿ ಅಲ್ಲಿಂದ ಲಲಿತಾಪರಮೇಶ್ವರಿಯ ಚರಿತ್ರೆ ಪ್ರಾರಂಭವಾಗುತ್ತದೆ. ಲಲಿತಾ ಚರಿತ್ರಾ ಸರಿಯಾಗಿ ಲಲಿತಾ ಪಂಚಮಿಗೆ ಪ್ರಾರಂಭ ಆಗುತ್ತಿದೆ.
ಕಾಮದಹನವಾಗಿದೆ, ತನ್ನ ಮೂರನೇಯ ಕಣ್ಣು ಅದಕ್ಕೆ 'ವಹ್ನಿನೇತ್ರಾ' ಎಂದು ಹೆಸರು. ಸೂರ್ಯ, ಚಂದ್ರ, ಅಗ್ನಿ ಶಿವನ ನೇತ್ರಗಳು. ಸೂರ್ಯಚಂದ್ರ ನೇತ್ರಗಳು ಪ್ರಪಂಚಕ್ಕೆ ಬೆಳಕು ನೀಡಲು ಇರುವಂತಹದ್ದು. ಮೂರನೇಯದು ಸಂಹಾರ ನೇತ್ರ ಅದು. ಆ ಕಣ್ಣನ್ನು ಅಪರೂಪವಾಗಿ ತೆರೆಯುವಂತದ್ದು.
ಕ್ರೋಧವನ್ನು ನಿಗ್ರಹಿಸು, ಶಾಂತನಾಗು ಎಂಬುದಾಗಿ ದೇವತೆಗಳು ಕೂಗಿಕೊಳ್ಳುತ್ತಿರುವಂತೆಯೇ, ಆ ಸ್ವರ ಶಿವನನ್ನು ತಲುಪುವ ಮೊದಲೇ ಕೆಲಸ ಮುಗಿದು ಹೋಗಿದೆ. ಕಣ್ಮುಂದೆ ಬೂದಿಯ ರಾಶಿ ಇದೆ. ಎಲ್ಲಿ ಕಾಮನಿದ್ದನೋ, ಮನ್ಮಥನಿದ್ದನೋ ಆ ಸ್ಥಳದಲ್ಲಿ ಬೂದಿಯ ರಾಶಿ ಬಿಟ್ಟು ಬೇರೆ ಏನಿಲ್ಲ. "ತಂದೃಷ್ಟ್ವಾ ಕುಪಿತಷೂಲೀ ತ್ರೈಲೋಕ್ಯದಹನ ಕ್ಷಮಮ್", ಮೂರು ಲೋಕವನ್ನು ಸುಡಲು ಸಾಕಂತೆ ಆ ಕಣ್ಣು. ಅಂತಹ ತನ್ನ ಮೂರನೇಯ ಕಣ್ಣನ್ನು ತೆರೆದು ಮನ್ಮಥನನ್ನು ಸುಟ್ಟುರುಹಿದ.
ಒಮ್ಮೆ ಎಲ್ಲವೂ ಶಾಂತ. ಮೆಲ್ಲನೆ ಎಲ್ಲಾ ದೇವತೆಗಳು ಹಿಂದಿರುಗುವಂತಹ ಸಂದರ್ಭ. ಪಾರ್ವತಿಯು ದುಃಖಗೊಂಡು, ತನ್ನ ರೂಪದಿಂದ ಶಿವನನ್ನು ಗೆಲ್ಲಲು ಸಾಧ್ಯವಾಗಲಿಲ್ಲ, ತಪಸ್ಸಿನಿಂದ ಗೆಲ್ಲುತ್ತೇನೆ ಎಂಬ ಭಾವದಲ್ಲಿ ಇದ್ದಾಳೆ, ಹೀಗೆ ಸ್ತಬ್ಧ ವಾತಾವರಣ. ಆಗ ಶಿವನ ಗಣಗಳಲ್ಲಿ ಓರ್ವ, ಅವನ ಹೆಸರು 'ಚಿತ್ರಕರ್ಮ'. ಆತನು ಮಾಡುವ ಕೆಲಸಗಳೆಲ್ಲ ನಿರೀಕ್ಷೆಗೆ, ಊಹೆಗೆ ನಿಲುಕದಂತಹದ್ದು. ಅವನದು ಸಾಮಾನ್ಯ ಕೆಲಸಗಳಲ್ಲ. ಅವನದ್ದು ಭಿನ್ನ ಹಾಗೂ ವಿಚಿತ್ರವಾದ ಕೆಲಸಗಳು. ಶಿವಗಣಗಳಲ್ಲಿಯೇ ಪ್ರಮುಖನಾದ ಚಿತ್ರಕರ್ಮನಿಗೆ ಮನ್ಮಥನ ಬೂದಿಯನ್ನು ಕಂಡಾಗ ಬೂದಿಯಿಂದ ಒಂದು ಬೊಂಬೆಯನ್ನು ಮಾಡುವ ಮನಸ್ಸಾಯಿತು. ಇಂತಹ ಸಂದರ್ಭವು ಕೈಲಾಸದಲ್ಲಿ ಕಾಣಸಿಗದಂತಹದ್ದಲ್ಲ.
ಪಾರ್ವತಿಯು ತನ್ನ ಮೈಗಂಟಿದ ಮಣ್ಣಿನಿಂದ ಗಣೇಶ್ವರನನ್ನು ಮಾಡಿದಳು. ಇಂತಹದ್ದೇ ಇನ್ನೊಂದು ಪ್ರಸಂಗವಿದು. ಚಿತ್ರಕರ್ಮನಿಂದ ಬೂದಿಗೊಂದು ಆಕಾರ ಬಂತಷ್ಟೇ. ಈ ಮೂರ್ತಿಯನ್ನು ಶಿವನು ಒಮ್ಮೆ ವೀಕ್ಷಿಸಿದನಂತೆ. ಶಿವನ ದೃಷ್ಟಿಯು ಬೀಳುತ್ತಲೇ ಬೂದಿಯಿಂದ ಮಾಡಿದ ಬೊಂಬೆಗೆ ಜೀವವು ತುಂಬಿತು. ಸ್ವಲ್ಪ ಸಮಯದ ಮೊದಲು ಇದೇ ದೃಷ್ಟಿಯು ಮನ್ಮಥನನ್ನು ಸುಟ್ಟುಹಾಕಿತು. ಈಗ ಜೀವ ತುಂಬಿತು. ಮಹಾತ್ಮರ ದೃಷ್ಟಿಯು ಸುಟ್ಟುರುಹಬಲ್ಲದು, ಸೃಷ್ಟಿಯನ್ನೂ ಮಾಡಬಲ್ಲದು. ಆಯ್ಕೆಯು ನಮ್ಮದಾಗಿರುತ್ತದೆ.
ಯಾರ ಮೇಲೆ ಯಾವ ದೃಷ್ಟಿ ಬೀಳಬೇಕೆನ್ನುವ ಆಯ್ಕೆಯು ನಾವು ಮಾಡಬೇಕು. ನೀವು ಹೇಗೆ ನಡೆದುಕೊಳ್ಳುತ್ತೀರಿ, ಅದಕ್ಕೆ ಅನುಗುಣವಾಗಿ ದೃಷ್ಟಿಯು ಬೀಳುತ್ತದೆ. ನೀವು ಆ ದೃಷ್ಟಿಯನ್ನು ಆವಾಹನೆ ಮಾಡುವಂತಹದ್ದು. ಮೂರನೇ ಕಣ್ಣು ಬೇಕೋ ಅಥವಾ ಬೆಳಕೀವ ಕಣ್ಣು ಬೇಕೋ ಎಂದು ಆರಿಸುವಂತಹದ್ದು. ಮನ್ಮಥನ ಮೂರನೇ ಕಣ್ಣನ್ನು ಆರಿಸಿದ ಚಿತ್ರಕರ್ಮನು ಬೆಳದಿಂಗಳಿನ ತಂಪನ್ನು ನೀಡುವ ದೃಷ್ಟಿಯನ್ನು ಆವಾಹಿಸಿದನು. ಶಿವನಿಗೆ ತನ್ನ ಗಣಗಳ ಮೇಲೆ ಅತ್ಯಂತ ವಾತ್ಸಲ್ಯ.
ಹಿಂದೆ ರಾವಣನು ನಂದಿಯನ್ನು ಕೋತಿಮುಖದವನೆಂದು ಗೇಲಿ ಮಾಡಿದ್ದಕ್ಕಾಗಿ ನಂದಿಯು, ಸಹಸ್ರ ಕೋತಿ ಮುಖದವರಿಂದಲೇ ಲಂಕೆಯು ನಾಶವಾಗಲಿ ಎಂಬ ಶಾಪವನ್ನು ನೀಡಿದ. ನಂದಿಯ ಮಾತನ್ನು ಸತ್ಯಗೊಳಿಸಲಾಗಿ ಶಿವನು ತಾನೇ ಹನುಮಂತನಾಗಿ ಬಂದನಂತೆ. ಹಾಗೆಯೇ ಶಿವನ ಬೆಳದಿಂಗಳ ದೃಷ್ಟಿಯು ಭಸ್ಮದ ಮೇಲೆ ಬಿತ್ತು. ಈ ವಿಷಯವನ್ನು ಯಾರೂ ಹೇಳುವುದೇ ಇಲ್ಲ. ಶಿವನ ದೃಷ್ಟಿಯಿಂದ ಮನ್ಮಥನು ಭಸ್ಮವಾದುದನ್ನು ಎಲ್ಲರೂ ಹೇಳುತ್ತಾರೆಯೇ ಹೊರತು, ಅದೇ ದೃಷ್ಟಿಯು ಬೂದಿಗೆ ಜೀವ ತುಂಬಿದ್ದನ್ನು ಹೇಳುವುದಿಲ್ಲ. ಇದು ಜಗತ್ತಿನ ನಿಯಮ.
ಟಿ.ವಿ ನೋಡುವಾಗ ಬರುವುದು ಏನೆಂದರೆ ಅದು ಸುಟ್ಟು ಹೋಯಿತು, ಇದಕ್ಕೆ ಬೆಂಕಿ ಬಿತ್ತು ಎಂದು ನೀವು ನೋಡುತ್ತೀರಿ. ಅದರ ಹೊರತು ಒಳ್ಳೆಯದನ್ನು ನೀವು ಎಷ್ಟು ಕಾಣುತ್ತೀರಿ? ಏಕೆಂದರೆ ಲೋಕಸ್ವಭಾವ ಅದು. ಆಧುನಿಕ ಸಮೀಕ್ಷೆಯ ಪ್ರಕಾರ ಸಕಾರಾತ್ಮಕ ವಾರ್ತೆಗಳಿಗಿಂತ ನಕಾರಾತ್ಮಕ ವಾರ್ತೆಗಳು ಎಂಟು ಪಾಲು ಹೆಚ್ಚು ಜನರನ್ನು ತಲುಪುತ್ತದೆ. ಇಂಗ್ಲಿಷ್ ನಲ್ಲಿ ಒಂದು ಗಾದೆ ಇದೆ, 'ಒಳಿತು ಎಂಬುದು ಚಪ್ಪಲಿ ಹಾಕಿಕೊಳ್ಳುವ ಮೊದಲು, ಕೆಡುಕಿಗೆ ಮೂರು ಲೋಕ ಸುತ್ತಿ ಬಂದಾಗಿರುತ್ತದೆ'. ಅಷ್ಟು ವೇಗ ಇರುತ್ತದೆ ಅದಕ್ಕೆ.
ಈ ಕಥೆ ಹೆಚ್ಚು ಪ್ರಕಟ ಹಾಗೂ ಪ್ರಚಲಿತವಾಗದಿದ್ದರೂ, ಪ್ರಾಮಾಣಿಕವಾಗಿ ಇರುವಂತದ್ದು. ಬ್ರಹ್ಮಾಂಡ ಪುರಾಣದ ಲಲಿತೋಪಾಖ್ಯಾನದಲ್ಲಿ ಒಳಪಟ್ಟದ್ದು. ಹೀಗೇ ಬೂದಿಯ ರಾಶಿಗೆ ಆಕಾರ ಬಂತು ಮತ್ತು ಆಕಾರಕ್ಕೊಂದು ಜೀವ ಬಂತು. "ತುಮ್ ವಿಚಿತ್ರತನುಮ್", ಆ ವಿಚಿತ್ರಾಕೃತಿಯನ್ನು ಶಿವ ತನ್ನ ವಿಶೇಷ ದೃಷ್ಟಿಯಿಂದ ನೋಡಿದಾಗ, "ತತ್ ಕ್ಷಣಾ ಜಾತಜೀವೋsಸು", ಮತ್ತೆ ಜೀವ ಬಂತು ಆ ಭಸ್ಮಕ್ಕೆ. ನೋಡಿದರೆ ಮನ್ಮಥನೇ ರೂಪದಲ್ಲಿ. 'ಮೂರ್ತಿಮಾನಿವ ಮನ್ಮಥಃ' . ಸುಟ್ಟು ಹೋದ ಮನ್ಮಥನೇ ಮತ್ತೆ ಹುಟ್ಟಿ ಬಂದ ಎಂಬ ರೀತಿಯಲ್ಲಿ ಇತ್ತು. ಆದರೆ ಈ ವ್ಯಕ್ತಿ ಬೇರೆ ಮನ್ಮಥ ಅಲ್ಲ. ಈತ ಮಹಾಬಲಿಷ್ಠ. ಅಸ್ತಿತ್ವಕ್ಕೆ ಬಂದ ವ್ಯಕ್ತಿ ಅದ್ಭುತವಾದ ಬಲ ಇರುವಂಥವ ಎಂದು ಹೊರನೋಟಕ್ಕೆ ಕಾಣುವಂತಿತ್ತು. ತುಂಬಾ ತೇಜಸ್ಸು, ತುಂಬಾ ಸಾಮರ್ಥ್ಯ ಹಾಗೂ ಮನಮೋಹಕವಾದ ರೂಪ. ತೇಜಸ್ಸು ಎಂದರೆ ಮಧ್ಯಾಹ್ನದ ಸೂರ್ಯನ ಹಾಗೆ. ಮನ್ಮಥನ ಹಾಗೆ ರೂಪವಾದರೂ ಅವನ ಪ್ರಭಾವ ಮನ್ಮಥನ ಹಾಗೆ ಸೌಮ್ಯವಲ್ಲ, ತೀಕ್ಷ್ಣ. ಮನ್ಮಥನ ಜನ್ಮ ಹೇಗಾಯಿತು ಎಂದರೆ ವಿಷ್ಣು ಲಕ್ಷ್ಮಿಯನ್ನು ನೋಡಿದಾಗ ಹುಟ್ಟಿದ್ದು. ಸೃಷ್ಟಿ ಕಾರ್ಯದ ಭಾಗವಾಗಿ ಮನ್ಮಥ ಹುಟ್ಟಿದ್ದು, ಅದರ ಸಂಕಲ್ಪವೇ ಬೇರೆ. ಇದು ಹಾಗಲ್ಲ, ಭಸ್ಮದಿಂದ ಹುಟ್ಟಿದ್ದು "ಕ್ರೋಧಸಂಭೂತಾತ್" ಹಾಗಾಗಿ ಕ್ರೋಧ, ಬಲ, ತೇಜಸ್ಸು ಎಲ್ಲಾ ಉಂಟು. ನಡು ಹಗಲಿನ ರವಿಯ ಕಾಂತಿ.
ಚಿತ್ರಕರ್ಮನಿಗೊಂದು ಮಮತೆ. ಏಕೆಂದರೆ ಹೊಟ್ಟೆಯಲ್ಲಿ ಹುಟ್ಟಿದ ಮೇಲೆ ಮಕ್ಕಳ ಹಾಗೆ ಆಗುತ್ತದೆ ಅಲ್ಲವಾ? ಒಂದು ಗಾದೆ ಇದೆ 'ಓತಿಕ್ಯಾತವನ್ನು ಹೆತ್ತವಳು ಬೇಲಿ ಸಾಲಿನಲ್ಲೇ ಜೀವನ ಮಾಡಬೇಕು' ಎಂದು. ಏಕೆಂದರೆ ಅದು ಅಲ್ಲಿಯೇ ಇರುತ್ತದೆ, ಮಗುವಿನ ಮೇಲಿನ ಮಮತೆಯಿಂದ ಅಲ್ಲೇ ಹೋಗಬೇಕಾಗುತ್ತದೆ. ಹಾಗೇ ಚಿತ್ರಕರ್ಮನು ಮಮತೆಯಿಂದ ಆ ಬಾಲಕನನ್ನು ಹೊಸ ಸೃಷ್ಟಿಯನ್ನು ವೀಕ್ಷಿಸಿದ. ತಬ್ಬಿಕೊಂಡ ಮತ್ತು ಶ್ರೇಯಸ್ಸಿನ ಮಾರ್ಗವನ್ನು ಉಪದೇಶಿಸಿದ. ಮಕಳನ್ನು ಮುದ್ದುಮಾಡಿದರೆ ಸಾಲದು ಮುಂದೆ ಭವಿಷ್ಯತ್ ಏನು?! ಈ ಕ್ಷಣಕ್ಕೆ ಸಂತೋಷವಾಗುವುದನ್ನು ಕೊಟ್ಟರೆ ಸಾಲದು. ಮಗುವಿಗೆ ಮುಂದೆ ಒಳ್ಳೆಯದಾಗುವುದಿಲ್ಲ ಮತ್ತು ಅದು ನಿಮಗೆ ಒಳ್ಳೆಯದನ್ನು ಮಾಡುವುದಿಲ್ಲ. ಹಾಗಾಗಿ ಮಕ್ಕಳ ದೀರ್ಘ ಭವಿಷ್ಯತ್ತನ್ನು ಚಿಂತಿಸಿ ನಾವು ಮಕ್ಕಳನ್ನು ಪ್ರೀತಿಸಬೇಕು. ನಾಳೆ ದೊಡ್ಡವನಾದ ಮೇಲೆ ಏನು ಮಾಡಬೇಕೆಂದು ಈಗಿನಿಂದಲೇ ತಯಾರಿ ಮಾಡಬೇಕು. ಹಾಗೇ ಚಿತ್ರಕರ್ಮ ಮಗುವನ್ನು ಮುದ್ದಿಸಿದ್ದಲ್ಲದೆ ಉದ್ಧಾರದ ಮಾರ್ಗವನ್ನು ಹೇಳುತ್ತಾನೆ.
ಉದ್ಧಾರದ ಮಾರ್ಗ ಏನೆಂದರೆ, ಶಿವಭಕ್ತಿ ಮಾಡು, ಶಿವ ಸೇವೆ ಮಾಡು. ಶಿವನ ಧ್ಯಾನವನ್ನು ಮಾಡು, ಶಿವನ ಮಂತ್ರಗಳನ್ನು ಜಪಿಸು, ರುದ್ರಮಂತ್ರಗಳನ್ನು ಜಪಿಸು. ಗಣಮುಖ್ಯನೇ ಅಂದರೆ ಚಿತ್ರಕರ್ಮನು ಹುಟ್ಟಿದ ಬಾಲಕನಿಗೆ ರುದ್ರಮಂತ್ರವನ್ನು ಉಪದೇಶಿಸುತ್ತಾನೆ. ಚಿತ್ರಕರ್ಮ ಮಹಾಪ್ರಾಜ್ಞ, ಮಹಾತಪಸ್ವಿ.
ಶಿವನ ಗಣಗಳನ್ನು ಮಾನವರು ದೂರುತ್ತಾರೆ, ಅವರನ್ನು ಅಪಹಾಸ್ಯ ಮಾಡುತ್ತಾರೆ. ಹೇಗೆಂದರೆ 'ಹರಗಣ' ಎಂಬ ಶಬ್ದವನ್ನು ನಾವು ದಿನನಿತ್ಯ ಬಳಸುತ್ತೇವೆ. ಒಂದು ಕೋಣೆ ಅಥವಾ ಮನೆಯ ಪರಿಸರ ಶಿಸ್ತಿನಲ್ಲಿ ಇಲ್ಲದಿದ್ದರೆ ನಾವು 'ಹರಗಣ' ಎಂಬ ಶಬ್ದವನ್ನು ಬಳಸುತ್ತೇವೆ. ಆ ಹರಗಣಗಳ ಯೋಗ್ಯತೆ ಏನು? ನಮ್ಮ ಹಣೆಬರಹವೇನು? ಹರಗಣಗಳು ನಮ್ಮ ನಿಮ್ಮ ಹಾಗೆ ಅಲ್ಲ, ಅವು ಹೇಗೆ ಹೇಗೋ ಇರುತ್ತವೆ. ಕೂದಲು ಕೆದರಿಕೊಂಡು, ಏನನ್ನೋ ಸುತ್ತಿಕೊಂಡು ಆದರೆ ಅವುಗಳ ಯೋಗ್ಯತೆ ದೊಡ್ಡದು. ನಿತ್ಯ ಶಿವಸಾನ್ನಿಧ್ಯ ಸಿಗಬೇಕಿದ್ದರೆ ಸಣ್ಣ ತಪಸ್ಸಿನಿಂದ ಆಗದು. ಶಿವನೊಡನೆ ನಿತ್ಯ ನರ್ತನ ಮಾಡಬೇಕಿದ್ದರೆ ಅವರ ಯೋಗ್ಯತೆ ಎಷ್ಟು? ಬರಿಗಣ್ಣಿಗೆ ಅವು ಭೂತ, ಪ್ರೇತ, ಪಿಶಾಚಿಗಳು ಆದರೆ ಅವರು ಪುಣ್ಯವಂತರು. ಹಾಗಾಗಿ ನಾವು ಹರಗಣ ಎಂಬ ಶಬ್ದವನ್ನೆಲ್ಲಾ ಬಳಕೆ ಮಾಡುವುದನ್ನು ನಿಲ್ಲಿಸಬೇಕು. ಚಿತ್ರಕರ್ಮನ ಪ್ರಜ್ಞೆ ಊಹಾತೀತವಾದುದು, ಅಪಾರವಂತೆ. ಅಂತವನು ಮಗುವಿಗೆ ಶತರುದ್ರವನ್ನು ಉಪದೇಶಿಸಿದಾಗ, ಆ ಮಗು ಶತರುದ್ರದ ಜಪ ಮಾಡಿತು. ಮರಳಿ ಮರಳಿ ರುದ್ರನಿಗೆ ನಮನ ಮಾಡಿತು, ಶಿವನ ಸೇವೆಯನ್ನು ಮಾಡಿತು. ಶಿವ ಎಂದರೆ 'ಆಶುತೋಷ' ಸಣ್ಣ ವಿಷಯದಿಂದ ಸಂತೋಷ ಗೊಳ್ಳುವವ. ಶಿವನಿಗೆ ನೀರುಹಾಕಿದರೆ ಸಾಕು, ಅಭಿಷೇಕ ಮಾಡಿದರೆ ಶಿವನಿಗೆ ಬೇಗ ಸಂತೋಷವಾಗುತ್ತದೆ. ಅಷ್ಟಕ್ಕೇ ಶಿವನಿಗೆ ಪ್ರಸನ್ನತೆ ಉಂಟಾಯಿತು. ಆ ಮಹಾದೇವ ಬಾಲಕನನ್ನು ಕುರಿತು ಕೇಳುತ್ತಾನೆ, ಮಗೂ ನಿನಗೆ ಏನು ವರಬೇಕು? ಬೇಕಾದ ವರ ಕೇಳು ಅಂತ. ಮಗು ಕೇಳಿದ ವರವೇನೆಂದರೆ, ಅದು ಮಗುವಿನ ಹಾಗೆ ಇರಲಿಲ್ಲ.
"ಪ್ರತಿರ್ದ್ವಂದ್ವಿಬಲಾರ್ದಂತು ಮದ್ಬಲಯ ನೋsಪಯೋಕ್ಷತಾ" ನನ್ನ ಎದುರು ನಿಂತು ಯುದ್ಧ ಮಾಡುವವನ ಅರ್ಧ ಸಾಮರ್ಥ್ಯ ನನಗೆ ಸೇರಬೇಕು. ಇಲ್ಲಿ ಏನಾಗುತ್ತೆ ಎಂದರೆ ಅವನ ಎದುರಾಳಿಯ ಅರ್ಧ ಬಲ ಮತ್ತು ಅವನ ಬಲ ಇದು ಎರಡೂ ಸೇರಿದಾಗ ಅವನು ಅಧಿಕ ಬಲಶಾಲಿ ಆಗುತ್ತಾನೆ. ಅಷ್ಟಕ್ಕೇ ನಿಲ್ಲಲಿಲ್ಲ ಆ ಬಾಲಕ ಮುಂದುವರೆದು ಕೇಳಿದ್ದು ಏನೆಂದರೆ, ಯಾವುದೇ ನನ್ನ ಪ್ರತಿಭಟನಾ ಅಸ್ತ್ರ, ಶಸ್ತ್ರಗಳು ನನ್ನ ಮೇಲೆ ಯಾವ ಪ್ರಭಾವವನ್ನೂ ಬೀರಬಾರದು. "ತದಸ್ತ್ರಶಸ್ತ್ರಮುಖ್ಯಾನಿ ವ್ಯಥಾಂ ಕುರ್ವಂತು ನೋ ಮಮಾ". ಎದುರಾಳಿಯ ಯಾವುದೇ ಅಸ್ತ್ರ, ಶಸ್ತ್ರಗಳಿಂದ ನನಗೆ ಯಾವುದೇ ಪ್ರಭಾವ ಬೀರಬಾರದು. ಇನ್ನೇನು ಉಳಿಯಿತು? ಯುದ್ಧವೆಂದರೆ ಬರೀ ಆಟ ಮಾತ್ರ. ಇನ್ನು ಅವನ ಮುಂದೆ ಯಾರು ಬಂದರೂ ಗೆಲ್ಲಲು ಸಾಧ್ಯವಿಲ್ಲ. ಹುಟ್ಟಿದ ಮಗುವಿನ ಯೋಚನೆಯೇ ಬೇರೆ ಅದಕ್ಕೆ ಯುದ್ಧದ ಆಲೋಚನೆ ಏಕೆ? ಬ್ರಹ್ಮದೇವ ವಿಷ್ಣುವಿನ ನಾಭಿಕಮಲದಲ್ಲಿ ಹುಟ್ಟಿ ಬರುವಾಗ ತಾನಾಗಿಯೇ ಸೃಷ್ಟಿಯ ಬಗ್ಗೆ ಚಿಂತನೆ ಬಂತು. ಸಹಜವಾಗಿ ಸೃಷ್ಟಿಯ ಪ್ರವೃತ್ತಿ ಬ್ರಹ್ಮದೇವನಲ್ಲಿ ಹುಟ್ಟಿಕೊಂಡಿತು. ಅವನಿಗೆ ಹುಟ್ಟಿದಾಗಲೇ ಯುದ್ಧದ ಚಿಂತೆ. ರಾವಣ ತಪಸ್ಸು ಮಾಡಿ ಇಂತಹದ್ದೇ ವರ ಕೇಳಿದ್ದು. ಯಾರೂ ನನ್ನನ್ನು ಗೆಲ್ಲಬಾರದು. ದೇವತೆಗಳು, ಗಂಧರ್ವರು, ಯಕ್ಷರು ಯಾರಿಂದಲೂ ಸೋಲಿಲ್ಲ, ಸಾವಿಲ್ಲ. ಇಂತಹ ವರವನ್ನು ರಾವಣ ಕೇಳಿ ಪಡೆದುಕೊಂಡಿದ್ದು. ಅಂತದ್ದೇ ವರವನ್ನು ಈ ಬಾಲಕ ಕೇಳುತ್ತಿದ್ದಾನೆ.
ಶಿವ ವರವನ್ನು ಕೊಡುತ್ತಾನೆ. ಕೆಲವೊಮ್ಮೆ ಶಿವನಿಗೆ 'ಬೋಳೇ ಶಂಕರ' ಎಂದು ಕರೆಯುತ್ತಾರೆ. ಹಿಂದೆ ಮುಂದೆ ಯೋಚಿಸದೇ ವರವನ್ನು ಕೊಟ್ಟು ಬಿಡುತ್ತಾನೆ. ವರ ಕೊಟ್ಟ ಮೇಲೆ ಶಿವ ಕ್ಷಣ ಕಾಲ ಚಿಂತನೆಯಲ್ಲಿ ಮುಳುಗುತ್ತಾನೆ. 'ವಿಚಾರಕೇಮ್ಯಪಿ ಪ್ರಭೋ'. ಏನು ಚಿಂತನೆ ಮಾಡಿದನೆಂದು ಯಾರಿಗೂ ತಿಳಿಯಲಿಲ್ಲ. ಆ ಬಾಲಕನಿಗೂ ಕೂಡ ಶಿವನ ಮಸ್ತಿಷ್ಕದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲಿಲ್ಲ. ಊಹಾತೀತವಾದ ವಿಚಾರವನ್ನು ಶಿವ ಚಿಂತಿಸುತ್ತಿದ್ದ. ಶಿವ ಹೇಳುತ್ತಾನೆ ಅರುವತ್ತುಸಾವಿರ ವರ್ಷಗಳ ಕಾಲ ನೀನು ರಾಜ್ಯವಾಳುತ್ತೀಯೆ, ಅರುವತ್ತು ಸಾವಿರ ವರ್ಷಗಳ ಕಾಲ ನಿನಗೆ ಅಧಿಪತ್ಯ, ಸಿಂಹಾಸನ.
ಈಗ ಪ್ರಶ್ನೆ, ಕೊಟ್ಟದ್ದು ವರವೋ ಅಥವಾ ಇನ್ನೇನೋ? ಮೇಲ್ನೋಟಕ್ಕೆ ಅದು ವರವೇ ಆದರೆ ಸ್ವಲ್ಪ ಆಳಕ್ಕೆ ಹೋಗಿ ನೋಡಬೇಕು. ಅರುವತ್ತುಸಾವಿರ ವರ್ಷಗಳ ಕಾಲ ಎಂಬ ಪ್ರಸ್ತಾಪ ಯಾಕೆ? ಶಿವ ಒಂದು ಮಿತಿಯನ್ನು ಹಾಕುತ್ತಾನೆ. ಇಷ್ಟು ಮತ್ತು ಇಲ್ಲಿಗೆ ಮುಗಿಯಿತು. ಇಲ್ಲಿಂದ ಮುಂದೆ ಇಲ್ಲ. ರಾವಣನಿಗೆ ಬ್ರಹ್ಮ ವರ ಕೊಟ್ಟಾಗ ಅವನು ಕೇಳಿದ್ದು, ಮಂಗ ಮತ್ತು ಮನುಷ್ಯರನ್ನು ಬಿಟ್ಟು ಬೇರೆ ಯಾವುದರಿಂದಲೂ ನನಗೆ ಸೋಲು, ಸಾವು ಬರಬಾರದು. ಅದನ್ನು ನೋಡಿದರೆ ಮನುಷ್ಯನಿಂದ ಸಾವು, ಮಂಗನಿಂದ ಆಪತ್ತು ಬರಬೇಕು ಎಂದು ಕೇಳಿದ ಹಾಗೇ ಆಯಿತು. ವರ ಕೇಳುವಾಗಲೂ ಜಾಗ್ರತೆ ಬೇಕು. ಮುಂದಿನ ಬಾಗಿಲಿನಿಂದ ಬರಬಾರದು, ಹಿಂದಿನ ಬಾಗಿಲಿನಿಂದ ಬರಬಾರದು, ದಕ್ಷಿಣ ಬಾಗಿಲಿನಿಂದ ಬರಬಾರದು, ಉತ್ತರ ಬಾಗಿಲನ್ನು ಬಿಟ್ಟು, ಅದರ ಅರ್ಥವೇನು? ಆ ಬಾಗಿಲಿನಿಂದ ಬರಬಹುದು ಎಂದು. ಹಾಗಾಗಿ ವರಗಳಲ್ಲಿ ಎಷ್ಟೋ ಬಾರಿ ನಾಶದ ಮಾರ್ಗಗಳು ಸೃಷ್ಟಿಯಾಗುತ್ತವೆ. ಹಿರಣ್ಯಕಶಿಪುವಿನ ವರ ನೋಡಿ ಅವನಿಗೆ ಸಾವೇ ಇಲ್ಲ ಎಂದು ಅನಿಸುತ್ತದೆ. ಹಾಗಾಗಿ ಇಲ್ಲಿಯೂ ಕೂಡ ಮಿತಿ ಇದೆ ಅರವತ್ತುಸಾವಿರ ವರ್ಷ. ಇದು ಆಳ್ವಿಕೆಯ ಮಿತಿ ಅಥವಾ ಬುದ್ಧಿಕೆಟ್ಟರೆ ಆಯುಸ್ಸಿನ ಮಿತಿ ಅದು.
ಇಷ್ಟಾಗುತ್ತಿದ್ದ ಹಾಗೆಯೇ ಬ್ರಹ್ಮದೇವ ಅಲ್ಲೇ ಇದ್ದವನು, ಅವನ ಬಾಯಿಯಿಂದ ಒಂದು ಶಬ್ದ ಮತ್ತೆ ಮತ್ತೆ ಉಚ್ಚಾರ ಆಯಿತಂತೆ. ಏನು ಶಬ್ದ ಅದು? "ಭಂಡ್, ಭಂಡ್, ಭಂಡ್” ಎನ್ನುವ ಶಬ್ದ ಉಚ್ಚಾರವಾಯಿತಂತೆ ಬ್ರಹ್ಮನಿಂದ. ಅದೇ ಹೆಸರಿಟ್ಟರಂತೆ ಅವನಿಗೆ. ’ಭಂಡ’ ಎನ್ನುವ ಹೆಸರಿಟ್ಟರಂತೆ. ನಿಮಗೆ ಅನ್ನಿಸಬಹುದು ಅಷ್ಟೆಲ್ಲ ಚಂದ ಇದ್ದ ಎನ್ನುತ್ತಿದ್ದೀರಿ, ತೇಜಸ್ವಿ, ಮಹಾಬಲಶಾಲಿ, ಮತ್ತೇಕೆ ಇಂಥ ಹೆಸರಿಟ್ಟಿದ್ದು?
ಅದಕ್ಕೆ ಉತ್ತರ ಏನೆಂದರೆ, “ಕಾಮಾತುರಾಣಾಂ ನ ಭಯಂ ನ ಲಜ್ಜಾಮ್”. ಕಾಮನ ಬೂದಿಯಿಂದ ಹುಟ್ಟಿದವನು ಆತ. ನಿರ್ಲಜ್ಜತೆ ಎನ್ನುವುದು ಕಾಮನ ಪ್ರಭಾವ ಉಂಟಾಯಿತು ಎಂದ ಕೂಡಲೆ ಆಗುವಂಥಹದು. ತಡೆಗಳಿಲ್ಲದೇ ಆಗುವಂಥದ್ದು ಭಂಡತನ. ನಾಚಿಕೆಯನ್ನು ತೊರೆಯುವಂಥದ್ದು. ಕಾಮವೆಂದರೆ ಸಾಮಾನ್ಯ ಆಸೆ-ಅಪೇಕ್ಷೆಗಳಿಗೂ ಕೂಡ ಅನ್ವಯವಾಗುತ್ತದೆ. ಯಾವುದೇ ಆಸೆ ಪ್ರಬಲವಾದರೆ ಆತ ನಾಚಿಕೆಯನ್ನು ಬಿಡುತ್ತಾನೆ. ಸಂಕೋಚವನ್ನು ತೊರೆಯುತ್ತಾನೆ. ಮರ್ಯಾದೆ ಒಂದು ಭೂಷಣ. ಲಜ್ಜೆ ಒಂದು ದೋಷವಲ್ಲ, ಗುಣವದು. ಈ ಕಾಲದ ಒಂದು ದೊಡ್ಡ ದೋಷವೆಂದರೆ ಯಾರಲ್ಲಿಯೂ ಲಜ್ಜೆಯಿಲ್ಲ. ಭಂಡ ಎಂದರೆ ಈ ಅಂಶವಿಲ್ಲ, ನಾಚಿಕೆಯಿಲ್ಲ, ಮರ್ಯಾದೆಯಿಲ್ಲ. ರಾಮನನ್ನು ಮರ್ಯಾದಾ ಪುರುಷೋತ್ತಮ ಎನ್ನುತ್ತಾರೆ. ಎಲ್ಲಿಯೂ ಗೆರೆಯನ್ನು ದಾಟದವನು. ಅವನು ನಕ್ಕರೂ ಕೂಡ ಮಿತಿಯೊಳಗೆ, ಅಟ್ಟಹಾಸವಲ್ಲವದು. ಮಂದಸ್ಮಿತ. ಎಲ್ಲವೂ ಹಿತ ಮಿತ. ಕಾಮನ ಭಸ್ಮದಿಂದ ಹುಟ್ಟಿದ್ದರಿಂದ ಮಾಡಬೇಕು-ಮಾಡಬಾರದವುಗಳ ವ್ಯತ್ಯಾಸದರಿವು ಅವನಿಗೆ ಇರದಿದ್ದುದರಿಂದ, ಭಂಡ ಎಂಬ ಹೆಸರಾಯಿತು. ಅವನ ಸ್ವಭಾವವೂ ಹಾಗೆಯೇ ಇತ್ತಂತೆ. ಏಕೆಂದರೆ, ಹುಟ್ಟಿದ್ದು ಬೂದಿಯಿಂದ, ಆ ಬೂದಿ ಬಂದಿದ್ದು ಹೇಗೆ? “ರುದ್ರ ಕೋಪಾನಲಾತ್ ಜಾತಃ”. ವಹ್ನಿ ನೇತ್ರವನ್ನು ಶಿವ ತೆರೆದಾಗ ಏನು ಬೂದಿ ಉಂಟಾಯಿತೋ ಆ ಬೂದಿಯಿಂದ ಬಂದಿರತಕ್ಕಂಥವನು. ಆದ್ದರಿಂದ ಬೆಂಕಿಯ ಗುಣವಿತ್ತು ಅವನಲ್ಲಿ. ಹೇಳಿ ಕೇಳಿ ಕಾಮ-ಕ್ರೋಧಗಳಿಂದ ಜನನ. ಶಿವನ ಕ್ರೋಧ ಸುಟ್ಟಿದ್ದು ಕಾಮನನ್ನು. ರುದ್ರಕೋಪದ ಬೆಂಕಿಯಿಂದ ಹುಟ್ಟಿದವನಾದ್ದರಿಂದ ರೌದ್ರನಾದ, ದಾನವನಾದ. ದೈತ್ಯನಾದ. ಲೋಕ ಅವನನ್ನು 'ಭಂಡಾಸುರ’ ಎಂದು ಕರೆಯುವಂತಾಯಿತು. ಪ್ರಪಂಚದಲ್ಲಿ ಆ ಪ್ರಥೆ ಅವನೂ ಬೇಡ ಎಂದು ಹೇಳಲಿಲ್ಲ. ರಾವಣ ಕೂಡ ಹೀಗೆಯೇ. ರಾವಣ ಶಬ್ದದರ್ಥ ಆರ್ತನಾದ ಎಂದು. ಅದನ್ನು ಅವಗುಣ ಎಂದು ಸ್ವೀಕರಿಸಲಿಲ್ಲ, ಬದಲಿಗೆ ಹೆಮ್ಮೆಯಿಂದ ನಾನು ರಾವಣ ಎಂದು ಹೇಳಿಕೊಳ್ಳುತ್ತಿದ್ದ.
ಶಿವ ವರವನ್ನು ಕೊಟ್ಟು, ಒಂದಿಷ್ಟು ಅಸ್ತ್ರ-ಶಸ್ತ್ರಗಳನ್ನು ಕೊಟ್ಟು ಅಂತರ್ಧಾನನಾಗುತ್ತಾನೆ. ಗಣಗಳೂ ಅಂತರ್ಧಾನವಾದವು. ಬ್ರಹ್ಮಾದಿ ದೇವತೆಗಳು ಕೂಡ ಸ್ವಸ್ಥಾನಕ್ಕೆ ತೆರಳಿದರು. ಕೂಡಲೆ ಜಗತ್ತಿನ ರಾಕ್ಷಸರೆಲ್ಲ, ಶುಕ್ರಾಚಾರ್ಯರನ್ನು ಮುಂದಿಟ್ಟುಕೊಂಡು ಆ ಕಡೆಗೆ ಬಂದರು. ಅಸುರ ಗುರುವನ್ನು ಮುಂದಿಟ್ಟುಕೊಂಡು ಜಗತ್ತಿನ ದಾನವ ಕುಲವೆಲ್ಲವೂ ಕೂಡ ಅನಾಹೂತವಾಗಿ ಅಂದರೆ ಕರೆಯಿಲ್ಲದೇ, ಯಾರೂ ಹೇಳಿಕಳುಹಿಸದೇ ಅಲ್ಲಿಗೆ ಬಂದರು. ಕೆಡುಕು ಕೆಡುಕನ್ನು ಆಕರ್ಷಣೆ ಮಾಡುತ್ತದೆ ಮತ್ತು ಒಳಿತು ಒಳಿತನ್ನು. ಈ ಮಾತು ತುಂಬಾ ಪ್ರಸಿದ್ಧವಾದದ್ದು, ನಾವು ಒಂದು ತಪ್ಪು ಮಾಡಿದರೆ ಮತ್ತೆ ನಾಲ್ಕು ತಪ್ಪು ಮಾಡಲು ನಮಗೆ ಬುದ್ಧಿ ಬರುತ್ತದಂತೆ. ಒಂದು ಒಳ್ಳೆಯ ಕೆಲಸ ಮಾಡಿದರೆ ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಪ್ರೇರಣೆ ಬರುತ್ತದೆ. “ಪಾಪಂ ಪ್ರಜ್ಞಾಂ ನಾಶಯತಿ ಕ್ರಿಯಮಾಣಂ ಪುನಃ ಪುನಃ”. ಮತ್ತೆ ಮತ್ತೆ ಪಾಪ ಮಾಡಿದರೆ ಆಗುವುದು ಪ್ರಜ್ಞಾನಾಶ. ಅಂದರೆ ಸರಿ ತಪ್ಪುಗಳ ವಿವೇಕದ ನಾಶ. ಪ್ರಜ್ಞಾನಾಶವಾದ ಮೇಲೆ ಮತ್ತೆ ಮಾಡುವುದು ಪಾಪವನ್ನು, ಇನ್ನೂ ಕೆಟ್ಟದ್ದನ್ನು. ಪರಿಣಾಮ? ಮತ್ತಷ್ಟು ಪ್ರಜ್ಞಾನಾಶ. ಇನ್ನಷ್ಟು ಪಾಪ. ಪತನ. ಪಾಪವು ಪಾಪವನ್ನು ಹುಟ್ಟುಹಾಕುತ್ತದೆ. ಪುಣ್ಯವು ಪುಣ್ಯವನ್ನು ಹುಟ್ಟುಹಾಕುತ್ತದೆ. ರಾವಣ ತಪಸ್ಸು ಮಾಡಿ ವರವನ್ನು ಪಡೆದಿದ್ದೇ ಪಡೆದಿದ್ದು, ಎಲ್ಲಾ ರಾಕ್ಷಸರು ಬಂದು ಕೂಡಿಕೊಂಡರಂತೆ ರಾವಣನನ್ನು. ಹಾಗೆಯೇ ಭಂಡಾಸುರನ ಸೃಷ್ಟಿಯ ವಾರ್ತೆ ತಾನೇತಾನಾಗಿ ಅಸುರ ಕುಲಕ್ಕೆಲ್ಲ ವೇದ್ಯವಾಗಿ ಅವರೆಲ್ಲ ಬಂದು ಕೂಡಿಕೊಳ್ಳುತ್ತಿದ್ದಾರೆ ಅವನನ್ನು. ಸಂದರ್ಭಗಳೂ ಹಾಗೆಯೇ ಬರುತ್ತವೆ. ದೇವಾಂಶ ಸಂಭೂತರಾದ ಇಡೀ ವಾನರ ಕೋಟಿ ಬಂದು ಶ್ರೀರಾಮನನ್ನು ಸೇರುವಂತಾಗುತ್ತದೆ. ಕೆಡುಕು ಕೆಡುಕನ್ನು ಒಳಿತು ಒಳಿತನ್ನು ಸೆಳೆಯುವಂಥದ್ದು. ಮಿಥಿಲೆಯಲ್ಲಿ ಸೀತೆಯಿದ್ದಾಳೆ, ಅವಳು ಅಲ್ಲಿ ಕುಳಿತೇ ರಾಮನನ್ನು ಸೆಳೆದಿದ್ದಾಳೆ. ಹಾಗಾಗಿ ಯಜ್ಞರಕ್ಷಣೆಯ ನೆಪ, ಧನುರ್ದರ್ಶನದ ನೆಪ. ಅಯೋಧ್ಯೆಯಲ್ಲಿದ್ದ ರಾಮ ಮಿಥಿಲೆಗೆ ಬರುವಂತಾಯಿತು. ಹಾಗೆಯೇ ದಂಡಕಾರಣ್ಯದ ಋಷಿಮುನಿಗಳು, ಶಬರಿ ಇವರೆಲ್ಲ ಕುಳಿತಲ್ಲಿಯೇ ರಾಮನನ್ನು ತಮ್ಮೆಡೆಗೆ ಸೆಳೆದಿದ್ದಾರೆ. ಒಳಿತಿನ ಕಡೆಗೆ ಒಳಿತು ಆಕರ್ಷಿತವಾಗುತ್ತದೆ.
ಶುಕ್ರಾಚಾರ್ಯರು, ದೈತ್ಯಪುರೋಹಿತರು ನೂರಾರು ಸಾವಿರಾರು ಅಸಂಖ್ಯ ರಾಕ್ಷಸರನ್ನು ಒಡಗೂಡಿ ಭಂಡನ ಬಳಿ ಬರುತ್ತಾರೆ. ಆಮೇಲೆ ಮುಂದಿನದ್ದೆಲ್ಲ ಶುಕ್ರಾಚಾರ್ಯರ ಮಾರ್ಗದರ್ಶನ. ಶುಕ್ರಾಚಾರ್ಯರೆಂದರೆ ಒಕ್ಕಣ್ಣು. ಪೂರ್ಣ ನೋಟವಲ್ಲವದು. ಗ್ರಹಗಳಲ್ಲಿ ಗುರು-ಶುಕ್ರರಲ್ಲಿ ವ್ಯತ್ಯಾಸವಿದೆ. ಸುರಗುರುವಿಗಿರುವ ಪರಿಣಾಮವೇ ಬೇರೆ, ಅಸುರಗುರುವಿಗಿರುವ ಪರಿಣಾಮವೇ ಬೇರೆ. ಜಾತಕದಲ್ಲಿ ಶುಕ್ರ ಪ್ರಾಪಂಚಿಕ ಸುಖವನ್ನು ಕೊಡುವಂಥದ್ದು, ಗುರು ಪಾರಲೌಕಿಕ ಜ್ಞಾನವನ್ನು ಕೊಡುವಂಥದ್ದು. ಶುಕ್ರನ ಮಾರ್ಗದರ್ಶನದಲ್ಲಿ ನಗರದ ನಿರ್ಮಾಣವಾಯಿತಂತೆ. ಭಂಡಾಸುರ ಶುಕ್ರನ ಸೂಚನೆಯ ಪ್ರಕಾರ ದೈತ್ಯಶಿಲ್ಪಿ ಮಯನನ್ನು ಕರೆದು, “ನನ್ನ ಆಡಳಿತಕ್ಕೋಸ್ಕರ ನಗರವನ್ನು ಕಟ್ಟು” ಎಂಬುದಾಗಿ ಆಜ್ಞೆ ಮಾಡುತ್ತಾನೆ. ಎಲ್ಲಿ? ಎಂದರೆ “ಎಲ್ಲಿ ನನ್ನ ಪೂರ್ವಜರು ಆಳ್ವಿಕೆ ಮಾಡುತ್ತಿದ್ದರೋ ಅಲ್ಲಿಯ ಸ್ಥಳವೇ ಆಗಬೇಕು” ಎಂದು. ಆ ನಗರದ ಹೆಸರು ಶೋಣಿತಪುರ ಎಂದು. ಅರ್ಥಾತ್ ರಕ್ತದ ಊರು ಎಂದು. ನಾವು ನೀವೆಲ್ಲ ಮನೆ ಕಟ್ಟಿಕೊಳ್ಳುವುದಾದರೆ ಹೀಗೆಲ್ಲ ಹೆಸರಿಡುವುದಿಲ್ಲ, ನಾವೆಲ್ಲಿಯಾದರೂ ನಮ್ಮ ಮನೆಗೆ ಮಾಂಸಭವನ, ರಕ್ತಭವನ ಎಂದು ಹೆಸರಿಡುತ್ತೇವೆಯಾ? ಏಕೆಂದರೆ ನಮ್ಮ ಹಿರಿಯರು ಕೊಟ್ಟ ಸಂಸ್ಕಾರ ಹಾಗಿದೆ. ಆದರೆ ಭಂಡನೊಳಗಿನ ಸಂಸ್ಕಾರ ಹೇಗಿದೆ ಎಂದರೆ ಶೋಣಿತ ನಗರಿ ಎಂದು ನಗರಕ್ಕೆ ಹೆಸರಿಡುವ ಹಾಗೆ, ಮುಂದಕ್ಕೆ ರಕ್ತದ ಪ್ರವಾಹವೇ ಹರಿಯಲಿಕ್ಕಿದೆ ಎನ್ನುವ ಸೂಚನೆ. ಮಯನು ಅತ್ಯಂತ ತ್ವರಿತವಾಗಿ, ಕ್ಷಣ ಮಾತ್ರದಲ್ಲಿ, ಮನಸ್ಸಿನಿಂದಲೇ ನಿರ್ಮಾಣ ಮಾಡಿದನೇನೋ ಎನ್ನುವಂತೆ ನಗರವನ್ನು ನಿರ್ಮಾಣ ಮಾಡಿದ.
ಮುಂದೇನು? ಭಂಡಾಸುರನ ಪಟ್ಟಾಭಿಷೇಕ. ಶುಕ್ರಾಚಾರ್ಯರು ಭಂಡಾಸುರನನ್ನು ಸಿಂಹಾಸನದ ಮೇಲೆ ಕೂರಿಸಿ ಪಟ್ಟಾಭಿಷೇಕವನ್ನು ಮಾಡುತ್ತಾರೆ. ಎಲ್ಲಾ ದೈತ್ಯರು ಕೂಡ ಸೇರಿದ್ದಾರೆ. ಏನು ಕಾಂತಿ! ಏನು ತೇಜಸ್ಸು! ಭಂಡಾಸುರನದ್ದು. ಏಕೆಂದರೆ ಉತ್ತಮೋತ್ತಮವಾಗಿರುವಂತಹ ಸ್ವರ್ಣ, ರಜತ, ಸ್ಫಟಿಕ, ದಂತ, ರತ್ನ ಮುಂತಾದವುಗಳನ್ನು ಬಳಸಿ ಆತನ ನಗರ, ಆಸ್ಥಾನಗಳು ನಿರ್ಮಾಣಗೊಂಡಿದೆ. ಅದರಲ್ಲಿ ಅತ್ಯಂತ ಶೋಭೆಯಿಂದ ಭಂಡಾಸುರ ಮೆರೆಯುತ್ತಾ ಇದ್ದಾನೆ. ಅಸುರ ಪರಂಪರೆಗೆ ಕಾದಿಟ್ಟಂತಹ ಏನೆಲ್ಲಾ ವಸ್ತುಗಳನ್ನು ಶುಕ್ರಾಚಾರ್ಯರು ಭಂಡಾಸುರನಿಗೆ ನೀಡುತ್ತಾರೆ ಎಂದರೆ, ಒಂದು ಕಿರೀಟವಂತೆ. ಮೊಟ್ಟಮೊದಲು ಬ್ರಹ್ಮನೇ ನಿರ್ಮಾಣ ಮಾಡಿದಂತಹ ಕಿರೀಟ. ಯಾವುದೋ ಕಾಲದಲ್ಲಿ ಹಿರಣ್ಯಕಶಿಪುವಿಗೆ ಬ್ರಹ್ಮನೇ ಕೊಟ್ಟ ಕಿರೀಟ ಅದು. ಆ ಕಿರೀಟ ಜಡವಲ್ಲ, ಆ ಕಿರೀಟಕ್ಕೆ ಚೈತನ್ಯವಿದೆ. ಹಿರಣ್ಯಕಶಿಪುವಿನ ನಂತರ ಬಂದ ದೈತ್ಯೇಂದ್ರರೆಲ್ಲಾ ಧಾರಣೆ ಮಾಡಿರುವಂತಹ ಕಿರೀಟ. ಅಷ್ಟು ಅದ್ಭುತವಾದಂತಹ ಕಿರೀಟವದು! 'ಅವಿನಾಶ್ಯಂ' ನಾಶವೇ ಇಲ್ಲದೆ ಇರುವಂತಹ, ಅದನ್ನು ಧ್ವಂಸ ಮಾಡಲಿಕ್ಕೇ ಸಾಧ್ಯವಿಲ್ಲ ಅಂತಹ ರತ್ನ ಕಿರೀಟ. ಉದಯಿಸುವ ಸೂರ್ಯನ ಕಾಂತಿ ಹೊಂದಿರುವಂತಹ ಕಿರೀಟವನ್ನು ಶುಕ್ರರು ಭಂಡಾಸುರನಿಗೆ ತೊಡಿಸುತ್ತಾರೆ. ಮತ್ತೊಂದು ಚಾಮರ, ಅದು ಕೂಡ ಬ್ರಹ್ಮ ನಿರ್ಮಿತ. ಅದು ಜಡ ವಸ್ತುವಿನಂತೆ ಕಂಡರೂ ಸಹ ಚೈತನ್ಯ ಇರುವಂತಹದ್ದು. ಅದರ ವಿಶೇಷತೆ ಏನೆಂದರೆ, ಆ ಚಾಮರದ ಗಾಳಿಯನ್ನು ಯಾರು ಸೇವಿಸುತ್ತಾನೋ, ಯಾರ ಮೇಲೆ ಆ ಚಾಮರದ ಗಾಳಿ ಬೀಸುತ್ತಾ ಇರುತ್ತದೋ ಆತನಿಗೆ ರೋಗ ಇಲ್ಲ, ದುಃಖ ಇಲ್ಲ. ಅದು ರೋಗ ಹಾಗೂ ದುಃಖ ಪರಿಹಾರಕಾರಕ. ಇನ್ನೊಂದು ಬ್ರಹ್ಮ ನಿರ್ಮಿತ ಛತ್ರ. 'ಆತಪತ್ರ ಕಿರೀಟ' ಅದರ ವಿಶೇಷತೆ ಏನೆಂದರೆ, ಯಾರು ಆ ಬೆಳ್ಗೊಡೆಯ ನೆರಳಿನಲ್ಲಿ ಇರುತ್ತಾನೋ ಅವನನ್ನು ಯಾವ ಅಸ್ತ್ರ-ಶಸ್ತ್ರಗಳು ಕೂಡ ಮುಟ್ಟುವುದಿಲ್ಲ. "ಯಸ್ಯ ಛಾಯಾನಿಷಣ್ಣಸ್ತು ಬಾಧ್ಯತೇ ನಾಸ್ತ್ರಕೋಟಿಭಿಃ" ಶಸ್ತ್ರಕೋಟಿಗಳಿಂದಲೂ ಬಾಧಿತನಾಗದಂತಹ ಅದ್ಭುತ ಪ್ರಭಾವ ಆ ಛತ್ರ ಹೊಂದಿದೆ. ಛತ್ರವೋ ದಿವ್ಯ ಕವಚವೋ ಎನ್ನುವಂತೆ! ಇನ್ನು 'ವಿಜಯ' ಎನ್ನುವ ಹೆಸರಿನ ಧನಸ್ಸು ಮತ್ತೆ 'ಶತ್ರುಘಾತಿ' ಎನ್ನುವ ಹೆಸರಿನ ಖಡ್ಗ. ಈ ಹೆಸರೇ ಸಾಕಲ್ಲವೇ ಪ್ರಭಾವವನ್ನು ಸೂಚನೆ ಮಾಡಲಿಕ್ಕೆ?! ಮತ್ತು ಇಂತಹದ್ದೇ ಅನೇಕಾನೇಕ ಆಭೂಷಣಗಳನ್ನು ಶುಕ್ರಾಚಾರ್ಯರು ಮುಂದೆ ಒಬ್ಬ ಹುಟ್ಟಿ ಬರುತ್ತಾನೆ ಎಂದು ಕಾಯ್ದಿರಿಸಿದ್ದರು. ಅದೆಲ್ಲಾ ಈಗ ಭಂಡಾಸುರನಿಗೆ ಸಿಕ್ಕಿತು. ಸೂರ್ಯನನ್ನು ಹೋಲುವಂತಹ ಅದ್ಭುತವಾದ ಅಕ್ಷಯ ಸಿಂಹಾಸನ ಮತ್ತು ಇವೆಲ್ಲದರ ಜೊತೆಗೆ ಶುಕ್ರರ ಆಶೀರ್ವಾದ ಭಂಡನಿಗೆ ಪ್ರಾಪ್ತವಾಯಿತು. ಹೀಗೆ ಪಟ್ಟಾಭಿಷಿಕ್ತನಾದ ಭಂಡ ಮಧ್ಯಾಹ್ನದ ಸೂರ್ಯನಂತೆ ಕಂಗೊಳಿಸ್ತಾನೆ. ಭಂಡಾಸುರನಿಗೆ ಎಂಟು ಮಂತ್ರಿಗಳು, ಅರವತ್ತು ಸಾವಿರ ವರ್ಷಗಳ ಆಳ್ವಿಕೆ. ಇಂದ್ರಶತ್ರು, ಅಮಿತ್ರಘ್ನ, ವಿದ್ಯುನ್ಮಾಲಿ, ವಿಭೀಷಣ, ಉಗ್ರಕರ್ಮ, ಉಗ್ರಧನ್ವ, ವಿಜಯ, ಶೃತಿಪಾರದ ಇವರು ಭಂಡಾಸುರನ ಎಂಟು ಮಂತ್ರಿಗಳು. ಇನ್ನು ರಾಣಿಯರು ದಶರಥನಿಗೆ ಮೂರಾದರೆ, ಭಂಡನಿಗೆ ನಾಲ್ವರಂತೆ. ಸಂಮ್ಮೋಹಿನಿ, ಕುಮುದಿನಿ, ಚಿತ್ರಾಂಗಿ, ಸುಂದರೀ ಎಂಬ ನಾಲ್ವರು ರೂಪವತಿಯಾಗಿರುವಂತಹ ರಾಣಿಯರು. ಇನ್ನು ಇಂದ್ರಾದಿ ದೇವತೆಗಳು ಭಂಡಾಸುರನ ಊಳಿಗದವರಾದರು. ಏಕೆಂದರೆ ಭಂಡಾಸುರನನ್ನು ಎದುರಿಸಲು ಸಾಧ್ಯವಿಲ್ಲ, ಆತನ ಬಲವೂ ಮತ್ತು ವರದ ಪ್ರಭಾವವೂ ಅಂತಹದ್ದು. ಹಾಗಾಗಿ ಅನಿವಾರ್ಯವಾಗಿ ಅವನ ವಶವತ್ತೆಗಳಾದರು. ಶಿವನ ಸೂಚನೆಯು ಕೂಡ ಹಾಗೇ ಇತ್ತು. ಮುಂದೆ ಒಂದು ಕಾಲ ಬರುತ್ತದೆ ಅಲ್ಲಿಯವರೆಗೆ ಹೀಗೆ ಇರಬೇಕು. ಮತ್ತೆ ಪರಮ ಶಾಂತನಾಗಿ, ಏಕಾಗ್ರನಾಗಿ ತಪಸ್ಸು ಮಾಡುತ್ತಿದ್ದ ಶಿವನ ಮೇಲೆ ಕಾಮನನ್ನು ಛೂ ಬಿಟ್ಟಿದ್ದಕ್ಕೆ ಇದು ಪ್ರಾಯಶ್ಚಿತ್ತವೂ ಹೌದು, ಶಿಕ್ಷೆಯೂ ಹೌದು. ಅರವತ್ತುಸಾವಿರ ವರ್ಷಗಳ ಕಾಲ ಭಂಡಾಸುರನ ಊಳಿಗದವರಾಗಿರುವುದು. ಹಾಗಾಗಿ "ತಮ್ ಅಸೇವಂತ ಕಾಲಜ್ಞಾ ದೇವಾಃಸರ್ವೇ ಸವಾಸವಾಃ"
ಕಾಲಜ್ಞ ಎಂದರೆ ಈ ಕಾಲ ಇಂತಹದ್ದು, ಆದರೆ ಮುಂದೊಂದು ಕಾಲ ಬರುತ್ತದೆ ಎಂದು ಶಿವ ಹೇಳಿದ್ದರ ಮೇಲೆ ಭರವಸೆ ಇಡುತ್ತಾರೆ. ನಾವೂ ಕೂಡ ಕಾಲಜ್ಞರಾಗಬೇಕು, ಕಾಲಕ್ಕೆ ಹೊಂದಿಕೊಂಡು ಇರಬೇಕು. ಎಲ್ಲಾ ಕಾಲವೂ ನಮ್ಮ ಪ್ರಭಾವದ ಕಾಲ, ಮೆರೆಯುವಂತಹ ಕಾಲ ಆಗಿರುವುದಿಲ್ಲ. ಹಾಗಾಗಿ ಸಮಯ ನೋಡಬೇಕು. ಬೆಂಕಿ ಕಿಡಿಯಾಗಿದ್ದಾಗ ಅದರ ಮೇಲೆ ಕೊರಡು ಬಿದ್ದರೆ ಆರಿ ಹೋಗುತ್ತದೆ. ಆದರೆ ಅದೇ ಕಿಡಿ ಬೆಳೆದರೆ ಅದು ನೂರು ಕೊರಡುಗಳನ್ನು ಸುಡುತ್ತದೆ. ಹಾಗಾಗಿ ಸದ್ಯಕ್ಕೆ ದೇವತೆಗಳಿಗೆ ಭಂಡಾಸುರನ ಊಳಿಗವೇ ಗತಿ. ಅಂತರಂಗದಲ್ಲಿಯೇ ಶಿವನ ಭಕ್ತಿಯನ್ನು ಮಾಡುತ್ತಾ, ಶಿವನಲ್ಲಿ ಪ್ರಾರ್ಥನೆಯನ್ನು ಮಾಡುತ್ತಾ, ಶಿವನ ಶಾಸನದ ಪ್ರಕಾರ ಭಂಡಾಸುರನ ಭೃತ್ಯರಾಗಿ ಇಂದ್ರಾದಿ ದೇವತೆಗಳು ಇದ್ದರು.
ಭಂಡಾಸುರನದ್ದು ದೊಡ್ಡ ಸೈನ್ಯವಂತೆ. ರಥಗಳೋ, ಅಶ್ವಗಳೋ, ಗಜಗಳೋ, ಪದಾತಿಗಳೋ ಲೆಕ್ಕವೇ ಇಲ್ಲ. ಆದಿ-ಅಂತ್ಯವೇ ಇಲ್ಲದಿರುವ ಅಪಾರವಾದ, ಅದ್ಭುತವಾದ ಸೇನೆ. ಸಂಖ್ಯೆಯೂ ಬಹಳ ದೊಡ್ಡದು, ಹಾಗೆ ಒಬ್ಬೊಬ್ಬ ದಾನವ ಸೈನಿಕನೂ ಕೂಡ ಅದ್ಭುತ ಬಲಶಾಲಿಯೇ. ಜಿತಕಾಶಿ, ಮಹಾಕಾಯ, ಮಹಾಂತರಂತಹ ಮಹಾನ್ ರಾಕ್ಷಸರೇ ಸೈನಿಕರು. ಅಂತಹ ಬಹುದೊಡ್ಡ ಸೈನ್ಯ ಭಂಡಾಸುರನದ್ದು. ಬಹಳ ಕಾಲ, ಬಹಳ ಸುಖವಾಗಿ ರಾಜ್ಯ ನಡೆಯುತ್ತದೆ. ಅರವತ್ತುಸಾವಿರ ವರ್ಷಗಳ ಕಾಲ ಒಂದು ಸಣ್ಣ ಅಡ್ಡಿ, ಆತಂಕವೂ ಇಲ್ಲದೆ ಭಂಡಾಸುರನ ಆಳ್ವಿಕೆ ನಡೆಯುತ್ತದೆ. ಇದರ ರಹಸ್ಯ ಏನು ಗೊತ್ತೇ?! ಭಂಡಾಸುರನೂ ಸೇರಿದಂತೆ ಎಲ್ಲಾ ದಾನವರೂ ಗುರುನಿಷ್ಠೆಯಲ್ಲಿದ್ದರು. ಶುಕ್ರಾಚಾರ್ಯರಿಗೆ ಗೌರವವನ್ನು ಕಡಿಮೆ ಮಾಡುತ್ತಾ ಇರಲಿಲ್ಲ. ಅವರನ್ನು ವಿಶೇಷವಾಗಿ ಉಪಾಸನೆ ಮಾಡುತ್ತಾ ಇದ್ದರು. ಶುಕ್ರಾಚಾರ್ಯರು ದಾನವರಲ್ಲ, ಅವರು ಭೃಗು ವಂಶೀಯರು. ಉತ್ತಮೋತ್ತಮವಾದ ವಂಶದ ಪರಮಶ್ರೇಷ್ಠ ಬ್ರಾಹ್ಮಣೋತ್ತಮರು ಆಚಾರ್ಯ ಶುಕ್ರರು. ಆದರೆ ಶಿಷ್ಯವತ್ಸಲರು. ಅವರಿಗೆ ದಾನವರ ಪೌರೋಹಿತ್ಯ ಉಂಟು. ಹಾಗಾಗಿ ಅವರ ಹಿತವನ್ನು ಕಾಯಲಿಕ್ಕೆ ಏನೆಲ್ಲಾ ಬೇಕೋ ಅದನ್ನೆಲ್ಲಾ ಆಚಾರ್ಯ ಶುಕ್ರರು ಮಾಡುತ್ತಾ ಇದ್ದರು.
ನಾವು ಬಲಿ ಚಕ್ರವರ್ತಿಯ ಕಥೆಯನ್ನು ಕೇಳುತ್ತೇವೆ; ಎಲ್ಲಿಯವರೆಗೆ ಶುಕ್ರಾಚಾರ್ಯರ ರಕ್ಷೆ ಇತ್ತೋ, ಅಲ್ಲಿಯವರೆಗೆ ಬಲಿಯನ್ನು ಯಾರೂ ಏನೂ ಮಾಡಲಿಕ್ಕೆ ಸಾಧ್ಯ ಆಗಲಿಲ್ಲ. ಆದರೆ ಯಾವಾಗ ಶುಕ್ರಾಚಾರ್ಯರು ಬೇಸರಗೊಂಡು ಬಲಿಯನ್ನು ತ್ಯಜಿಸಿದರೋ, ಏಕೆಂದರೆ ವಾಮನನಿಗೆ ಬಲಿ ದಾನವನ್ನು ಕೊಡಲು ಮುಂದಾದಾಗ, ಶುಕ್ರಾಚಾರ್ಯರು ಒಬ್ಬರೇ ಇದ್ದರಿಂದ ತೊಂದರೆ ಆಗುತ್ತದೆ, ಕೊಡಬೇಡ ನೀನು ಎಂದು ಹೇಳುತ್ತಾರೆ. ಆದರೆ ಬಲಿ ಒಪ್ಪುವುದಿಲ್ಲ. ಶುಕ್ರಾಚಾರ್ಯರಿಗೆ ಬೇಸರವಾಗಿ, ಬಲಿಗೆ ನೀನು ಏನಾದರೂ ಮಾಡು ನಾನಿಲ್ಲ ಇನ್ನು ಹೇಳುತ್ತಾರೆ. ಯಾವಾಗ ಗುರುವಿನ ಬಾಯಿಯಲ್ಲಿ ಇಂತಹದೊಂದು ಮಾತು ಕೇಳಿ ಬಂದಿತೋ, ಶಿಷ್ಯನ ಪತನ ನಿಶ್ಚಿತ. ಮತ್ತೇನು ಗುರು ಶಾಪ ಕೊಡಬೇಕು ಎಂದಿಲ್ಲ. ನಾನಿಲ್ಲ ಎಂದರೆ ಸಾಕು. ಹಾಗಾಗಿ "ಬಭೂರ್ದಾನವಾಃ ಸರ್ವೇ ಭೃಗುಪುತ್ರಮತಾನುಗಾಃ". ಒಂದು ಗುರುಭಕ್ತಿ, ಗುರುನಿಷ್ಠೆ. ಮತ್ತೊಂದು ಶಿವಭಕ್ತಿ, ಶಿವನಿಷ್ಠೆ ಇದರಲ್ಲಿ ವ್ಯತ್ಯಾಸ ಇಲ್ಲ. ಹಾಗಾಗಿ ಈ ಶಿವಕೃಪೆ, ಗುರುಕೃಪೆಗಳು ದಾನವರನ್ನು ಬಹುಕಾಲ ಕಾದವು.
ಹಾಗೆಯೇ ದಾನವರ ವಂಶ ಕೂಡ ಬೆಳೆಯಿತು. ಸಮೃದ್ಧಿಯೂ ಹೆಚ್ಚಾಯಿತು. ಸಂಪತ್ತಿಗೇನು ಕೊರತೆ ಇಲ್ಲ. ಸಾಮಾನ್ಯವಾಗಿ ಅಸುರರು 'ಯಜ್ಞಘ್ನರು'. ಆದರೆ ಭಂಡಾಸುರನ ಆಳ್ವಿಕೆಯ ಕಾಲದಲ್ಲಿ ಮನೆ ಮನೆಯಲ್ಲಿ ಅಸುರರು ಯಜ್ಞ, ದಾನ, ಅಧ್ಯಯನಗಳನ್ನು ಮಾಡುತ್ತಾ ಇದ್ದರು. ಋಗ್ವೇದ, ಯಜುರ್ವೇದ, ಸಾಮವೇದ ಮುಂತಾದ ವೇದಗಳನ್ನು, ಮೀಮಾಂಸಾ, ನ್ಯಾಯ ಮುಂತಾದ ಶಾಸ್ತ್ರಗಳನ್ನು ಅಧ್ಯಯನ ಮತ್ತು ಅಧ್ಯಾಪನ ಮಾಡುತ್ತಾ ಇದ್ದರು. ಹೇಗೆಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು, ಮುನಿಗಳು ಏನೆಲ್ಲಾ ಯಜ್ಞಕರ್ಮಗಳನ್ನ ತಮ್ಮ ಮನೆಯಲ್ಲಿ ಮಾಡುತ್ತಾ ಇದ್ದರೋ, ಅದೆಲ್ಲಾ ದಾನವರು ತಮ್ಮ ಮನೆಗಳಲ್ಲಿ ಮಾಡುತ್ತಾ ಇದ್ದರು. ಇದರ ಪರಿಣಾಮವಾಗಿ ಭಂಡಾಸುರನನ್ನು, ಅವನ ಪ್ರಶಾಸನವನ್ನು, ಅವನ ವ್ಯವಸ್ಥೆಯ ಕೂದಲನ್ನೂ ಕೊಂಕಿಸಲಿಕ್ಕೂ ಯಾರಿಂದಲೂ ಸಾಧ್ಯವಾಗಲಿಲ್ಲ. ಪುಣ್ಯ ರಕ್ಷಣೆ ಮಾಡುತ್ತಾ ಇತ್ತು. ಹೀಗೆ ಅರವತ್ತುಸಾವಿರ ವರ್ಷಗಳು ಕಳೆದು ಹೋಯಿತು. ದಿನೇ ದಿನೇ ಭಂಡಾಸುರ ವರ್ಧಮಾನ, ಬಲಿಷ್ಠನಾಗುತ್ತ ಇದ್ದಾನೆ. ದಿನೇ ದಿನೇ ದೇವತೆಗಳು, ಇಂದ್ರಾದಿಗಳು ಕ್ಷೀಣವಾಗುತ್ತಾ ಇದ್ದಾರೆ. ಭಂಡಾಸುರನಿಗೆ ಶುಕ್ಲ ಪಕ್ಷ, ಇಂದ್ರಾದಿಗಳಿಗೆ ಕೃಷ್ಣ ಪಕ್ಷ. ಅಮಾವಾಸ್ಯೆ ಬರುವುದರ ಒಳಗೆ ಏನಾದರೂ ವ್ಯವಸ್ಥೆ ಆಗಲೇಬೇಕಾಗಿದೆ.
ಶ್ರೀಮನ್ನಾರಾಯಣ ಇದನ್ನು ಅವಲೋಕನ ಮಾಡಿ, ಇದು ಹೀಗೆಯೆ ಮುಂದುವರಿದರೆ ದೇವತೆಗಳ ನಾಶವಾಗಿಬಿಡುತ್ತದೆ, ಭಂಡಾಸುರ ಶಾಶ್ವತವಾಗಿ ಬಿಡುತ್ತಾನೆ. ಹಾಗಾಗಿ ವಿಷ್ಣು, ಅಮೃತವು ದಾನವರ ಪಾಲಾದಾಗ ಏನು ಮಾಡಿದ್ದನೋ ಅದನ್ನೇ ಮಾಡುತ್ತಾನೆ. ಅದೇ ಆದಿಶಕ್ತಿಯನ್ನು, ಲಲಿತೆಯನ್ನು, ರಾಜರಾಜೇಶ್ವರಿಯನ್ನು, ತ್ರಿಪುರಸುಂದರಿಯನ್ನು ಧ್ಯಾನಿಸಿ ಮೋಹಿನಿಯ ರೂಪವನ್ನು ಮತ್ತೆ ಆವಿರ್ಭಾವಗೊಳಿಸುತ್ತಾನೆ. ಎಲ್ಲಿವರೆಗೆ ಭಂಡಾಸುರನ ವ್ಯವಸ್ಥೆಯಲ್ಲಿ ಯಜ್ಞ-ಯಾಗ, ಶಿವಭಕ್ತಿ, ಗುರುಭಕ್ತಿ ಇರುತ್ತದೋ ಅಲ್ಲಿವರೆಗೆ ಅವನು ಅಭೇದ್ಯ ಕವಚದಲ್ಲಿ ಇದ್ದ ಹಾಗೆ. ಮೊಟ್ಟ ಮೊದಲು ಅದನ್ನು ಹದಗೆಡಿಸಬೇಕು. ಕೆಡುಕನ್ನು ಕೆಡಿಸಬೇಕು ಅಂದರೆ ಅವರ ಶಕ್ತಿಯ ಮೂಲ ಯಾವುದೋ ಅದಕ್ಕೇ ಪೆಟ್ಟು ಕೊಡಬೇಕು. ಹಾಗಾಗಿ ಮೊದಲು ರಾಜರಾಜೇಶ್ವರಿಯ ಮೋಹಿನಿ ರೂಪದ ಪ್ರಾದುರ್ಭಾವ, ಅದರ ಬಳಿಕ ರಾಜರಾಜೇಶ್ವರಿಯ ನಿಜ ರೂಪದ ಪ್ರಾದುರ್ಭಾವ. ಆಕೆಯ ಆವಿರ್ಭಾವ ಆಗಿದ್ದು ಯಜ್ಞಕುಂಡದಿಂದ. ಒಂದು ಯೋಜನ ವಿಸ್ತಾರದ ಅಗ್ನಿಕುಂಡದ ಮಹಾಗ್ನಿಜ್ವಾಲೆಯಿಂದ ಉದಿಸಿ ಬಂದದ್ದು. ಮೊದಲು ಭಂಡಾಸುರನ ಪ್ರಾದುರ್ಭಾವ, ನಂತರ ಭಂಡಾಸುರನ ಸಂಹಾರಕ್ಕಾಗಿ ಚಿದಗ್ನಿಕುಂಡದಿಂದ ರಾಜರಾಜೇಶ್ವರಿಯ ಪ್ರಾದುರ್ಭಾವ.
ರಾಮ ಹುಟ್ಟಿದ್ದೂ ಹೀಗೆ. ಪುತ್ರಕಾಮೇಷ್ಟಿಯಾಗದ ಯಜ್ಞಕುಂಡದ, ಯಜ್ಞಾಗ್ನಿಯ ಜ್ವಾಲೆಗಳ ಮಧ್ಯದಿಂದ ಬ್ರಹ್ಮಪುರುಷ ಕೈಯಲ್ಲಿ ಪಾಯಸವನ್ನು ಹಿಡಿದು ಮೂಡಿ ಬರುತ್ತಾನೆ. ಅಲ್ಲಿಂದ ಆ ನಾರಾಯಣ ಚೈತನ್ಯ ದಶರಥನ ಕೈಯನ್ನು ಸೇರಿ, ಕೌಸಲ್ಯೆಯ ಉದರವನ್ನು ಸೇರಿದ್ದು. ಅಲ್ಲಿಂದ ರಾಮನ ಆವಿರ್ಭಾವ ಆಗಿರುವಂತಹದ್ದು. ಇದು ಕೂಡ ಹಾಗೇ, ಚಿದಗ್ನಿಕುಂಡಸಂಭೂತೆ ದೇವಿ ಆಗುವಂತದ್ದು ಮುಂದಿನ ಕಥೆ.
ನಾಳೆ ಆ ಕಥೆಯನ್ನು ವಿಸ್ತರಿಸೋಣ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ