ಯುವ ಸಾಮ್ರಾಜ್ಯದ ವತಿಯಿಂದ ನಿರ್ಮಾಣ | ಎಂಟು ಅಡಿ ಎತ್ತರದ ಕಂಚಿನ ಪುತ್ಥಳಿ | ಲೋಕಾರ್ಪಣೆ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್
ಕೆ.ಆರ್.ಪೇಟೆ: ಪಟ್ಟಣದ ಎಂ.ಕೆ. ಬೊಮ್ಮೇಗೌಡ ವೃತ್ತದಲ್ಲಿ ತಾಲ್ಲೂಕು ಡಾ.ಪುನೀತ್ ಯುವ ಬ್ರಿಗೇಡ್ ಯುವ ಬಳಗ ಇವರ ವತಿಯಿಂದ ದಾನಿಗಳ ನೆರವಿನಿಂದ ನೂತನವಾಗಿ ಪ್ರತಿಷ್ಠಾಪಿಸಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ಪುನೀತ್ ಧರ್ಮ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಲೋಕಾರ್ಪಣೆ ಮಾಡಿದರು.
ಪುನೀತ್ ಯುವ ಸಾಮ್ರಾಜ್ಯದ ಬಳಗದ ವತಿಯಿಂದ ನಿರ್ಮಾಣ ಮಾಡಿರುವ ಪುನೀತ್ ರಾಜಕುಮಾರ್ ಅವರ ಪುತ್ಥಳಿ ಲೋಕಾರ್ಪಣೆ ಸಮಾರಂಭದಲ್ಲಿ ಸ್ವತಃ ಪುನೀತ್ ಧರ್ಮಪತ್ನಿ ಅಶ್ವಿನಿ ಅವರು ಭಾಗವಹಿಸಿದ್ದು ವಿಶೇಷವಾಗಿತ್ತು.
ಬಳಿಕ ಮಾತನಾಡಿದ ಅಶ್ವಿನಿ ಪುನೀತ್ ಅವರು ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ಪ್ರತಿನಿತ್ಯ ಒಂದಲ್ಲ ಒಂದು ಅಪ್ಪು ಅವರ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಅಪ್ಪು ಅಗಲಿಕೆಯ ದುಃಖವನ್ನು ಮರೆಯುವ ಶಕ್ತಿ ತುಂಬುತ್ತಿರುವ ಅಭಿಮಾನಿ ದೇವರುಗಳಿಗೆ ದೊಡ್ಮನೆ ಕುಟುಂಬವು ಆಭಾರಿಯಾಗಿದೆ ಎಂದರು.
ಶಾಸಕ ಎಚ್. ಟಿ.ಮಂಜು, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಸಮಾಜ ಸೇವಕರಾದ ವಿಜಯ್ ರಾಮೇಗೌಡ, ಆರ್.ಟಿ.ಓ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷರಾದ ಆಲಂಬಾಡಿ ಕಾವಲು ಆರ್.ಟಿ.ಓ ಮಲ್ಲಿಕಾರ್ಜುನ್, ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಜಗದೀಶ್, ಮಂಡ್ಯ ಜಿಲ್ಲಾಧ್ಯಕ್ಷ ಯೋಗಣ್ಣ, ಹಾಗೂ ಪುನೀತ್ ಯುವ ಸಾಮ್ರಾಜ್ಯದ ತಾಲೂಕು ಘಟಕದ ಅಧ್ಯಕ್ಷ ಮಹೇಶ್ ಪುನೀತ್ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮವನ್ನು ಸಾಕ್ಷೀಕರಿಸಿದರು.
ಕೆ.ಆರ್.ಪೇಟೆ ಪಟ್ಟಣಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಆಗಮಿಸುತ್ತಿದ್ದಂತೆಯೇ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಪುನೀತ್ ಸಾಮ್ರಾಜ್ಯದ ಯುವ ಬಳಗದ ಪದಾಧಿಕಾರಿಗಳು ಪಟಾಕಿಗಳನ್ನು ಸಿಡಿಸಿ ಪುಷ್ಪವೃಷ್ಟಿ ಮಾಡಿ ಹೃದಯಸ್ಪರ್ಶಿ ಸ್ವಾಗತ ನೀಡಿದರು. ಕನ್ನಡ ಬಾವುಟಗಳು ಹಾರಾಡಿದವು. ಪುನೀತ್ ಅವರ ಪರವಾಗಿ ಜಯಘೋಷಗಳು ಮೊಳಗಿದವು.
ಶಾಸಕ ಹೆಚ್.ಟಿ.ಮಂಜು ಅವರು ವೇದಿಕೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಶಾಸಕರು ಪುನೀತ್ ಅವರು ನಟಿಸಿದ ಪ್ರತಿಯೊಂದು ಚಿತ್ರದಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳಲ್ಲಿ ನಟಿಸುವ ಮೂಲಕ ರಾಜ್ಯದ ಮನೆ ಮನೆಯ ಯುವರಾಜರಾಗಿದ್ದರು. ಇಂತಹ ಅಪರೂಪದ ನಟ ಡಾ.ಪುನೀತ್ ರಾಜ್ ಕುಮಾರ್ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆದರ್ಶ ಗುಣಗಳು ನಮ್ಮೆಲ್ಲರಿಗೂ ಆದರ್ಶವಾಗಿವೆ ಎಂದು ಹೇಳಿದರು.
ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಜಗದೀಶ್ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಒಳಗೊಂಡಿರುವ ಅಪರೂಪದ ಸದ್ಗುಣಗಳನ್ನು ಹೊಂದಿದ್ದ ಪುನೀತ್ ರಾಜಕುಮಾರ್ ತಾವು ಇಹಲೋಕವನ್ನು ತ್ಯಜಿಸಿದ ನಂತರವೂ ಕೋಟ್ಯಾಂತರ ಅಭಿಮಾನಿಗಳನ್ನು ಇಂದಿಗೂ ಹೊಂದುವ ಮೂಲಕ ಜನಮಾನಸದಲ್ಲಿ ಜೀವಂತವಾಗಿದ್ದಾರೆ ಎಂದು ಹೇಳಿದರು.
ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಮಾತನಾಡಿ, ಯುವ ಜನರು ಪುನೀತ್ ಅವರಂತೆಯೇ ಸೇವಾ ಮನೋಭಾವನೆ ಹಾಗೂ ಪರೋಪಕಾರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿಯಾಗಿ ಮುನ್ನಡೆದು ಗುರಿ ಸಾಧನೆ ಮಾಡಬೇಕು. ಗುರು ಹಿರಿಯರು ಹಾಗೂ ತಂದೆ ತಾಯಿಗಳನ್ನು ಗೌರವಿಸಬೇಕು ಎಂದು ಮನವಿ ಮಾಡಿದರು.
ಮಿತ್ರ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ವಿಜಯ್ ರಾಮೇಗೌಡರು ಮಾತನಾಡಿ ಪುನೀತ್ ರಾಜ್ ಕುಮಾರ್ ಅವರಲ್ಲಿದ್ದ ಸಮಯಪ್ರಜ್ಞೆ, ಶಿಸ್ತು, ಸಂಯಮ ಗುಣಗಳನ್ನು ಎಲ್ಲರೂ ರೂಢಿಸಿಕೊಂಡರೆ ಉತ್ತಮ ವ್ಯಕ್ತಿಗಳಾಗಬಹುದು ಎಂದು ಹೇಳಿದರು.
ಕೆ.ಆರ್.ಪೇಟೆ ಪಟ್ಟಣದ ಸೈ ಸ್ಕೂಲ್ ಆಫ್ ಡ್ಯಾನ್ಸ್, ಪ್ರಿನ್ಸೆಸ್ ಸ್ಕೂಲ್ ಆಫ್ ಡ್ಯಾನ್ಸ್, ನಾಟ್ಯ ನೃತ್ಯ ಶಾಲೆ, ನೃತ್ಯ ಪಯಣ ನಾಟ್ಯ ಶಾಲೆಯ ವಿದ್ಯಾರ್ಥಿಗಳು ಆದರ್ಶಕ ನೃತ್ಯ ಪ್ರದರ್ಶನ ಹಾಗೂ ಶಾಸ್ತ್ರೀಯ ಭರತನಾಟ್ಯ ಪ್ರದರ್ಶನ ನೀಡಿ ರಂಜಿಸಿದರು.
ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಜಗದೀಶ್, ಜಿಲ್ಲಾಧ್ಯಕ್ಷ ಯೋಗಣ್ಣ, ತಾಲೂಕು ಘಟಕದ ಅಧ್ಯಕ್ಷ ಹೆಚ್.ಆರ್. ಸೋಮಶೇಖರ್, ಕಾರ್ಯಾಧ್ಯಕ್ಷ ಎಸ್.ರವಿ, ಉಪಾಧ್ಯಕ್ಷ ಕೆರೆಕೋಡಿ ಆನಂದ್, ಯುವ ಘಟಕದ ಅಧ್ಯಕ್ಷ ಕೆ.ಎಲ್.ಮಹೇಶ್, ಪುರಸಭೆ ಅಧ್ಯಕ್ಷ ನಟರಾಜು, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಶಿವರಾಜ್ ಕೆ.ಆರ್ ಪೇಟೆ, ಭರ್ಜರಿ ಬ್ಯಾಚುಲರ್ಸ್ ಖ್ಯಾತಿಯ ಹಾಸ್ಯನಟ ಮಡುವಿನಕೋಡಿ ಮನೋಹರ್ ಗೌಡ, ಮಂಡ್ಯ ರವಿ, ಕಾಮಿಡಿ ಗ್ಯಾಂಗ್ಸ್ ಖ್ಯಾತಿಯ ಹಾಸ್ಯನಟ ಶೀಳನೆರೆ ಕೇಶವ್, ಕೆ.ಆರ್.ಪೇಟೆ ಮಂಜುನಾಥ್, ಸಕಲೇಶಪುರದ ಜೂನಿಯರ್ ಪುನೀತ್ ಸೇರಿದಂತೆ ಸಾವಿರಾರು ಪುನೀತ್, ತಾಲ್ಲೂಕು ಕುವೆಂಪು ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಬಿ.ಸಿ.ಮಂಜುನಾಥ್, ಎ.ಸಿ.ಕಾಂತರಾಜು, ಮಾತೃಭೂಮಿ ಅನಾಥಾಶ್ರಮದ ಮುಖ್ಯಸ್ಥ ಜೈಹಿಂದ್ ನಾಗಣ್ಣ, ಪುರಸಭೆಯ ಮಾಜಿ ಸದಸ್ಯ ನಂದೀಶ್, ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ, ತಾಲ್ಲೂಕು ಅಪ್ಪು ಯುವ ಸಾಮ್ರಾಜ್ಯ ಯುವ ವೇದಿಕೆಯ ಅಧ್ಯಕ್ಷ ಕಾಮನಹಳ್ಳಿ ಮಹೇಶ್, ಗೋವಿಂದರಾಜು, ಹರೀಶ್, ಯೋಗೇಶ್, ಲೋಹಿತ್, ದಿಲೀಪ್, ಅಶೋಕ್, ಅರ್ಜುನ್, ಗೋವರ್ಧನ್, ಜಯಕರ್ನಾಟಕ ಮಹಿಳಾ ಘಟಕದ ಜಯಲಕ್ಷ್ಮೀ, ಬ್ಯಾಂಕ್ ಸರಸ್ವತಿ ಸೇರಿದಂತೆ ಸಾವಿರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜೂನಿಯರ್ ಪುನೀತ್ ರಾಜ್ ಕುಮಾರ್ ಮತ್ತು ಗಾಯಕ ಕೇಶವ್ ತಂಡದವರು ಅಪ್ಪು ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಅಭಿಮಾನಿಗಳಿಗೆ ಅನ್ನದಾನ:
ಕೆ.ಆರ್.ಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಶ್ರೀ ಭೂವರಹನಾಥ ಶ್ರೀ ಕ್ಷೇತ್ರದ ವತಿಯಿಂದ ಸುಮಾರು 5000ಕ್ಕೂ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನ್ನದಾನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


